ಸಸ್ಪೆಂಡ್ ಮಾಡ್ತೀರಿ ಅನ್ಕೊಂಡೆ: ಇ-ಖಾತಾ ದಂಧೆ ವಿಚಾರಕ್ಕೆ ಡಿಕೆಶಿ-ಸುನೀಲ್ ಕುಮಾರ್ ನಡುವೆ ವಾಕ್ಸಮರ!
ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ಇಷ್ಟೆಲ್ಲಾ ಹೇಳಿದರೂ, ಡಿ.ಕೆ. ಶಿವಕುಮಾರ್ ಮೌನವಾಗಿದ್ದಾರೆ ಎಂದರೆ ಸಮ್ಮತಿ ಎಂದು ಹೇಳಬೇಕೋ ಅಥವಾ ಎಲ್ಲದಕ್ಕೂ ತಮ್ಮ ಒಪ್ಪಿಗೆ ಎನ್ನಬೇಕೋ ಎಂದು ವಿ. ಸುನೀಲ್ ಕುಮಾರ್ ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಿಮಗೆ ಉತ್ತರ ಕೊಡುತ್ತೇನೆ. ಒಂದೊಂದು ವಿಷಯಕ್ಕೂ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.
Siddalinga Swamy
Mar 24, 2026 6:28 PM
ಬೆಂಗಳೂರು: ಇ-ಖಾತಾ (E khata) ಮಾಡಿಕೊಡಲು ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವ ಬಗ್ಗೆ ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮಂಗಳವಾರ ಆಕ್ರೋಶ ಹೊರಹಾಕಿದರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೌನವಾಗಿರುವುದನ್ನು ಕಂಡ ಶಾಸಕ ವಿ. ಸುನೀಲ್ ಕುಮಾರ್, ಕೆಲವು ಬಾರಿ ಮೌನವು ಸಮ್ಮತಿ ಸೂಚಿಸುತ್ತದೆ ಎಂದು ಟೀಕಿಸಿದರು. ನಿಮ್ಮ ಆಡಳಿತ ಉತ್ತಮವಾಗಿದ್ದಲ್ಲಿ ಅಧಿಕಾರಿಗಳ ಭಷ್ಟಾಚಾರದ ಬಗ್ಗೆ ದಾಖಲೆ ಸಮೇತ ಸಾಕ್ಷ್ಯ ನೀಡಿದಾಗ ನೀವು ಕೂಡಲೇ ಸಸ್ಪೆಂಡ್ ಮಾಡ್ತೀರಿ ಅನ್ಕೊಂಡೆ. ಆದರೆ ನೀವು ಏನು ಮಾಡುತ್ತಿಲ್ಲ ಎಂದರೆ ಇದಕ್ಕೆ ನಿಮ್ಮ ಸಮ್ಮತಿ ಇದೆಯಾ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಇದಕ್ಕೆ ನಿಮ್ಮ ಸಮ್ಮತಿ ಇರಬೇಕು ಅಷ್ಟೇ ನಮ್ಮ ಸಮ್ಮತಿ ಇಲ್ಲ ಎಂದು ಹೇಳಿದರು.