ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೂವರು ಪುತ್ರಿಯರಿದ್ದರೂ ಕೊನೆಗಾಲದಲ್ಲಿ ಅನಾಥನಾದ ಶ್ರೀಮಂತ ವ್ಯಾಪಾರಿ: ಅಂತ್ಯಕ್ರಿಯೆಯ ವಿಡಿಯೊ ಕಳುಹಿಸಿ ಸಾಕು ಎಂದ ಮಕ್ಕಳು

ಜೀವವನ್ನೇ ತೇಯ್ದು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೂ ಕೊನೆಗಾಲದಲ್ಲಿ ಅವರು ಜೊತೆ ನಿಲ್ಲುತ್ತಾರೆ ಎನ್ನುವ ಭರವಸೆ ಇರುವುದಿಲ್ಲ ಎಂಬುದನ್ನು ಕೆಲವೊಂದು ಘಟನೆಗಳು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇರುತ್ತದೆ. ಇಂತಹ ಒಂದು ಘಟನೆ ಈಗ ಹರಿಯಾಣದಲ್ಲಿ ನಡೆದಿದೆ. ಶ್ರೀಮಂತ ವ್ಯಾಪಾರಿಯೊಬ್ಬರಿಗೆ ಮೂವರು ಹೆಣ್ಣು ಮಕ್ಕಳಿದ್ದರೂ ಕೂಡ ತಂದೆಯ ಕೊನೆ ಘಳಿಗೆಯಲ್ಲಿ ಅವರು ಜೊತೆ ಇರಲಿಲ್ಲ. ವೃದ್ದಾಶ್ರಮದಲ್ಲೇ ಸಾವನ್ನಪ್ಪಿದ ತಂದೆಯ ಅಂತಿಮ ದರ್ಶನವನ್ನು ಮಾತ್ರವಲ್ಲ ಅಂತ್ಯಕ್ರಿಯೆ ನಡೆಸಲು ಕೂಡ ಬರಲಿಲ್ಲ.

ತಂದೆಯ ಅಂತ್ಯಕ್ರಿಯೆ ಮಾಡಿ ವಿಡಿಯೊ ಕಳುಹಿಸಿ ಎಂದ ಮಕ್ಕಳು

ಸಂಗ್ರಹ ಚಿತ್ರ -

ಹರಿಯಾಣ: ಮೂವರು ಮಕ್ಕಳಿದ್ದರೂ ತಂದೆಯು ಅನಾಥವಾಗಿ ವೃದ್ಧಾಶ್ರಮದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೊನೆಗಾಲದಲ್ಲಿ ತಂದೆ ತುಂಬಾ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ವೃದ್ದಾಶ್ರಮ ಸಿಬ್ಬಂದಿ ತಿಳಿಸಿದರೂ ತಮಗೆ ಬರಲು ಸಮಯವಿಲ್ಲ ಎಂದು ಮಕ್ಕಳು ಹೇಳಿದ್ದಾರೆ. ತಂದೆ ಸತ್ತ ಮೇಲೆ ವಿಷಯ ತಿಳಿಸಿದರೂ ಅಂತ್ಯಕ್ರಿಯೆಯನ್ನು (Fathers Funeral) ನೀವೇ ಮಾಡಿ ಮುಗಿಸಿ. ಹಣ ಕೊಡುತ್ತೇವೆ. ನಮಗೆ ಅದರ ವಿಡಿಯೊ ಕಳುಹಿಸಿ ಎಂದು ತಿಳಿಸಿದ್ದಾರೆ. ಈ ಘಟನೆ ಹರಿಯಾಣದ (Haryana) ಸೋನಿಪತ್‌ನಲ್ಲಿ ನಡೆದಿದೆ. ಒಂದು ಕಾಲದಲ್ಲಿ ಶ್ರೀಮಂತ ವ್ಯಾಪಾರಿಯಾಗಿದ್ದ (businessman) ಶಿವಚರಣ್ ರತನ್ ಗುಪ್ತಾ (Shivcharan Ratan Gupta) ಅವರು ಕೊನೆಗಾಲದಲ್ಲಿ ಅನಾಥರಾಗಿದ್ದಾರೆ.

ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮದಲ್ಲಿದ್ಧ ಶಿವಚರಣ್ ರತನ್ ಗುಪ್ತಾ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದರೂ ಕೊನೆಗಾಲದಲ್ಲಿ ಯಾರೂ ಜೊತೆಯಲ್ಲಿ ಇರಲಿಲ್ಲ. ಶಿವಚರಣ್ ರತನ್ ಗುಪ್ತಾ ಅವರು ಕೊನೆಯ ದಿನಗಳಲ್ಲಿ ತಮ್ಮ ಮಕ್ಕಳನ್ನು ನೋಡಲು ಹಂಬಲಿಸಿದ್ದರು. ಆದರೆ ಅವರು ಯಾರೂ ಬರಲಿಲ್ಲ. ಅಂತಿಮ ವಿಧಿಗಳಲ್ಲಿ ಭಾಗವಹಿಸಲಿಲ್ಲ. ಬದಲಿಗೆ ವಿಡಿಯೊ ಕರೆಯ ಮೂಲಕ ಅವರ ಅಂತ್ಯಕ್ರಿಯೆಯನ್ನು ವೀಕ್ಷಿಸಿದರು.

ಚಲಿಸುವ ಬೈಕ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ: ಕಂದಮ್ಮನನ್ನು ರಕ್ಷಣೆ ಮಾಡಿದ ರೋಚಕ ವಿಡಿಯೊ ನೋಡಿ!

ಮಹಾರಾಷ್ಟ್ರದ ಶ್ರೀಮಂತ ಜವಳಿ ವ್ಯಾಪಾರಿಯಾಗಿದ್ದ ಶಿವಚರಣ್ ಅವರು ಸುಮಾರು ಹದಿನೆಂಟು ತಿಂಗಳ ಹಿಂದೆ ಅವರ ಪತ್ನಿ ಮೀನಾ ಗುಪ್ತಾ ಅವರೊಂದಿಗೆ ಸೋನಿಪತ್ ನ ವೃದ್ಧಾಶ್ರಮಕ್ಕೆ ತೆರಳಿದ್ದರು. ಕೆಲವು ತಿಂಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದರು. ಬಳಿಕ ಶಿವಚರಣ್ ಅವರು ಆಶ್ರಮದಲ್ಲಿ ಒಬ್ಬಂಟಿಯಾಗಿದ್ದರು.

ಮಕ್ಕಳ ಶಿಕ್ಷಣ, ಉತ್ತಮ ಭವಿಷ್ಯಕ್ಕಾಗಿ ತಮ್ಮ ಗಳಿಕೆಯನ್ನು ಸಂಪೂರ್ಣವಾಗಿ ಮೀಸಲಿಟ್ಟಿದ್ದ ಅವರ ಇಬ್ಬರು ಹೆಣ್ಣುಮಕ್ಕಳು ಸರ್ಕಾರಿ ಶಾಲಾ ಶಿಕ್ಷಕಿಯರಾಗಿದ್ದಾರೆ.. ಹಿರಿಯ ಮಗಳು ಅನಿತಾ ನೇಪಾಳದಲ್ಲಿ ವಾಸಿಸುತ್ತಿದ್ದು, ಎರಡನೇ ಮಗಳು ನಿಶಾ ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಮತ್ತು ಕಿರಿಯ ಮಗಳು ಪ್ರಿಯಾ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

ಶಿವಚರಣ್ ಅವರು ಮಕ್ಕಳಿಗೆ ಫೋನ್ ಮಾಡುತ್ತಿದ್ದರು. ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿದಾಗ ಅವರ ಮಕ್ಕಳಿಂದ ಫೋನ್ ಕರೆಗಳು ಬರುವುದು ಕಡಿಮೆಯಾಯಿತು. ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಾಗ ವೃದ್ದಾಶ್ರಮದ ಸಿಬ್ಬಂದಿ ಅವರ ಮೂವರ ಮಕ್ಕಳನ್ನು ಸಂಪರ್ಕಿಸಿ ತಂದೆಯನ್ನು ಭೇಟಿ ಮಾಡುವಂತೆ ಒತ್ತಾಯಿಸಿದರು. ಆದರೆ ಅವರ ಮಕ್ಕಳು ಒಂದೊಂದು ನೆಪ ಹೇಳಿ ಅವರನ್ನು ಭೇಟಿ ಮಾಡಲು ನಿರಾಕರಿಸಿದರು. ಶಿವಚರಣ್ ಅವರು ನಿಧನರಾದಾಗ ಅವರ ಕುಟುಂಬ ಬರುವವರೆಗೆ ಅವರ ದೇಹವನ್ನು ಸಂರಕ್ಷಿಸಲು ವೃದ್ದಾಶ್ರಮ ಸಿಬ್ಬಂದಿ ಮುಂದಾದರು. ಆದರೆ ಮಕ್ಕಳು ಬರಲು ನಿರಾಕರಿಸಿದರು.

ಮಾಲ್‌ನಲ್ಲಿ ಜನರೆದುರೇ ಚಾಕು ಹಿಡಿದು ಯುವತಿಯ ಮೇಲೆ ಹಲ್ಲೆ ನಡೆಸಿದ ಯುವಕ! ವಿಡಿಯೊ ವೈರಲ್

ಬಳಿಕ ಹಿರಿಯ ಮಗಳು ಕರೆ ಮಾಡಿ ಅಂತ್ಯಕ್ರಿಯೆಯ ವೆಚ್ಚವನ್ನು ಭರಿಸಲು ಆನ್‌ಲೈನ್‌ನಲ್ಲಿ 5,100 ರೂ.ಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸಿಕೊಟ್ಟು ಚಿತಾಭಸ್ಮವನ್ನು ತೆಗೆದುಕೊಂಡು ಹೋಗಲು ಬರುವುದಾಗಿ ಹೇಳಿದರು. ಬಳಿಕ ಮತ್ತೆ ಕರೆ ಮಾಡಿ ತಮ್ಮ ಪರವಾಗಿ ಗಂಗಾ ನದಿಯಲ್ಲಿ ಅವರ ಚಿತಾಭಸ್ಮವನ್ನು ವಿಸರ್ಜಿಸುವಂತೆ ವೃದ್ದಾಶ್ರಮದ ಸಿಬ್ಬಂದಿಗೆ ತಿಳಿಸಿದ್ದಾರೆ.

ಮೂವರು ಮಕ್ಕಳು ವಿಡಿಯೊ ಮೂಲಕ ಸಂಪೂರ್ಣ ಅಂತ್ಯಕ್ರಿಯೆಯ ಪ್ರಕ್ರಿಯೆಯನ್ನು ದೂರದಿಂದಲೇ ನೋಡಿದರು. ಈ ಘಟನೆ ವೃದ್ದಾಶ್ರಮದ ಸಿಬ್ಬಂದಿ ಮಾತ್ರವಲ್ಲ ಸ್ಥಳೀಯರಿಗೂ ದುಃಖವನ್ನು ಉಂಟು ಮಾಡಿದೆ ಮಾಡಿತ್ತು ಎಂದಿದ್ದಾರೆ ವೃದ್ದಾಶ್ರಮ ವ್ಯವಸ್ಥಾಪಕ ಆನಂದ್.