ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ವೃದ್ಧನಿಗೆ ಕಾರಿನಿಂದ ಡಿಕ್ಕಿ ಹೊಡೆದ ಕಾರು ಚಾಲಕ; ಇಲ್ಲಿದೆ ಆಘಾತಕಾರಿ ವಿಡಿಯೊ

Car driver deliberately hits: ಕಾರಿಗೆ ಸ್ಕೂಟಿ ಡಿಕ್ಕಿ ಹೊಡೆದಿದ್ದರಿಂದ ಕೋಪಗೊಂಡ ಯುವಕನೊಬ್ಬ ವೃದ್ಧನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿದ್ದಾನೆ. ಜಮ್ಮುವಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹೀಂದ್ರಾ ಥಾರ್ ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃದ್ಧನಿಗೆ ಕಾರಿನಿಂದ ಡಿಕ್ಕಿ ಹೊಡೆದ ಕಾರು ಚಾಲಕ- ವಿಡಿಯೊ ಇಲ್ಲಿದೆ

Priyanka P Priyanka P Jul 29, 2025 4:01 PM

ಜಮ್ಮು: ಕಾರಿಗೆ ಸ್ಕೂಟಿ ಡಿಕ್ಕಿ ಹೊಡೆದಿದ್ದರಿಂದ ಕೋಪಗೊಂಡ ಯುವಕನೊಬ್ಬ ವೃದ್ಧನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿದ್ದಾನೆ. ಜಮ್ಮುವಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹೀಂದ್ರಾ ಥಾರ್ ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಯು ಗಾಂಧಿ ನಗರದಿಂದ ಗ್ರೀನ್‌ಬೆಲ್ಟ್ ಪಾರ್ಕ್ ಕಡೆಗೆ ತನ್ನ ಕಾರನ್ನು ಅತಿವೇಗದಲ್ಲಿ ಚಲಾಯಿಸಿದ್ದಾನೆ.

ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಅಲ್ಲೋರಾ ಟೆಕ್ಸ್‌ಟೈಲ್ಸ್ ಬಳಿ ಸ್ಕೂಟಿ ಚಲಾಯಿಸುತ್ತಿದ್ದ ವೃದ್ಧ ವ್ಯಕ್ತಿ ವೇಗವಾಗಿ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲೇ ಬಿದ್ದಿದ್ದಾರೆ. ಈ ವೇಳೆ ಥಾರ್ ಚಾಲಕ ತನ್ನ ಕಾರನ್ನು ಹಿಂದಕ್ಕೆ ತಿರುಗಿಸಿ ಬಲಿಪಶುವಿಗೆ ಉದ್ದೇಶಪೂರ್ವಕವಾಗಿ ಮತ್ತೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ವೃದ್ಧ ಗಂಭೀರ ಗಾಯಗೊಂಡಿದ್ದಾರೆ.

ಮೊದಲ ಬಾರಿಗೆ ಡಿಕ್ಕಿ ಹೊಡೆದಾಗ ರಸ್ತೆಯಲ್ಲಿ ಬಿದ್ದ ವೃದ್ಧ ವ್ಯಕ್ತಿ ನಿಧಾನವಾಗಿ ಎದ್ದು ತನ್ನ ಸ್ಕೂಟರ್ ಅನ್ನು ಎತ್ತಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾರು ಚಾಲಕ ವೇಗವಾಗಿ ಹಿಂದಕ್ಕೆ ಚಲಾಯಿಸಿ ಮತ್ತೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ವೃದ್ಧ ವ್ಯಕ್ತಿ ರಸ್ತೆಯಲ್ಲೇ ಅಂಗಾತ ಬಿದ್ದಿದ್ದಾರೆ.

ವಿಡಿಯೊ ವೀಕ್ಷಿಸಿ:



ಕಾರು ಚಾಲಕನನ್ನು ಮನನ್ ಆನಂದ್ ಎಂದು ಗುರುತಿಸಲಾಗಿದ್ದು, ಕಾರಿನಿಂದ ಇಳಿದು ಬಂದು ವೃದ್ಧ ವ್ಯಕ್ತಿಯನ್ನು ಮನಬಂದಂತೆ ಬೈಯುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ನಂತರ ಆತ ವೃದ್ಧ ವ್ಯಕ್ತಿಯನ್ನು ಅಲ್ಲೇ ಬಿಟ್ಟು ತನ್ನ ಕಾರನ್ನು ಮುಂದೆ ಚಲಾಯಿಸಿಕೊಂಡು ಹೋಗಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ದಾರಿಹೋಕರು ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಥಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್‌ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ

ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಅತಿವೇಗದ ಚಾಲನೆ (ಸೆಕ್ಷನ್ 281), ಕೊಲೆ ಯತ್ನ (ಸೆಕ್ಷನ್ 109) ಮತ್ತು ಜನರ ಜೀವಕ್ಕೆ ಅಪಾಯವನ್ನುಂಟುಮಾಡುವ (ಸೆಕ್ಷನ್ 125 ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ವಾಹನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಯನ್ನು ನಾನಕ್ ನಗರದ ರಾಜಿಂದರ್ ಆನಂದ್ ಅವರ ಪುತ್ರ ಎಂದು ಗುರುತಿಸಲಾಗಿದ್ದು, ಆತ ಪರಾರಿಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಜಯ್ ಶರ್ಮಾ ತಿಳಿಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಾಲಕ ಪ್ರಸ್ತುತ ತಲೆಮರೆಸಿಕೊಂಡಿದ್ದು, ಜಮ್ಮು ಬಿಟ್ಟು ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.