ಬೆಂಗಳೂರಿನ ರಸ್ತೆಬದಿಯ ಅಂಗಡಿಯಿಂದ ಮಧ್ಯರಾತ್ರಿ ಗಣೇಶ ವಿಗ್ರಹ ಕಳವು: ಸಿಸಿಟಿವಿ ದೃಶ್ಯ ವೈರಲ್
Viral News: ರಸ್ತೆಬದಿಯ ಮಳಿಗೆಯಿಂದಲೇ ಗಣೇಶ ಮೂರ್ತಿಯನ್ನು ತಡರಾತ್ರಿ ಕಳ್ಳತನ ಮಾಡಿರುವ ಘಟನೆಯೊಂದು ವರದಿಯಾಗಿದೆ. ಬೆಂಗಳೂರಿನ ದಾಸರಹಳ್ಳಿ ಪ್ರದೇಶದ ರಸ್ತೆ ಬದಿಯ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಗಣೇಶ ವಿಗ್ರಹವನ್ನು ಕಳ್ಳತನ ಮಾಡಲಾಗಿದ್ದು ಈ ಸಂಪೂರ್ಣ ಕೃತ್ಯ ಹತ್ತಿರದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರಿನ ರಸ್ತೆಬದಿಯ ಅಂಗಡಿಯಿಂದ ಗಣೇಶ ವಿಗ್ರಹ ಕಳವು -
ಬೆಂಗಳೂರು, ಸೆ. 9: ಇನ್ನೇನು ಸ್ವಲ್ಪ ದಿನದಲ್ಲೇ ಗಣೇಶ ಹಬ್ಬ ಹತ್ತಿರ ಬರುತ್ತಿದೆ (Ganesh Chaturthi 2026). ಈ ನಡುವೆ ರಸ್ತೆ ಬದಿಯ ಅಂಗಡಿಯಿಂದ ಗಣೇಶ ಮೂರ್ತಿಯನ್ನು ತಡರಾತ್ರಿ ಕಳವು ಮಾಡಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ ದಾಸರಹಳ್ಳಿ ಪ್ರದೇಶದ ರಸ್ತೆ ಬದಿಯ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಗಣೇಶ ವಿಗ್ರಹವನ್ನು ಖದೀಮರು ದೋಚಿದ್ದು, ಈ ಸಂಪೂರ್ಣ ಕೃತ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ಟಾಟಾ ಏಸ್ ವಾಹನದಲ್ಲಿ ಬೆಳಗಿನ ಜಾವ 3:51ರ ಸುಮಾರಿಗೆ ನಾಲ್ವರು ವ್ಯಕ್ತಿಗಳು ಬಂದು ವಿಗ್ರಹವನ್ನು ಎತ್ತಿಕೊಂಡು ಪರಾರಿಯಾಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತಿದ್ದು, ಪೊಲೀಸರು ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಹೇಳಿದ್ದಾರೆ.
ವಿಡಿಯೊ ನೋಡಿ:
Even the Gods are not spared in this world we live in !
— Deepak Bopanna (@dpkBopanna) September 9, 2026
CCTV captures Ganesha idols being allegedly stolen by a group of men in the wee hours in Bengaluru near Magadi. A bunch of Ganesha idols for sale during Ganesh chaturthi were kept by the road side. pic.twitter.com/FYXGlHiKRV
ಬೆಳಗ್ಗಿನ ಜಾವ ವಾಹನದಿಂದ ಕೆಳಗಿಳಿದ ವ್ಯಕ್ತಿಗಳು, ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ಶೀಟ್‌ನಲ್ಲಿ ಮುಚ್ಚಿಡಲಾಗಿದ್ದ ಗಣೇಶ ಮೂರ್ತಿಯನ್ನು ಎತ್ತಿಕೊಂಡು ಹೋಗಿ ತಮ್ಮ ವಾಹನಕ್ಕೆ ಏರಿಸಿದ್ದಾರೆ. ಬಳಿಕ ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ವ್ಯಾಪಾರಿ ಬಂದು ನೋಡಿದಾಗ ಮೂರ್ತಿ ಇಲ್ಲದೆ ಇರುವುದನ್ನು ಗಮನಿಸಿದ್ದಾರೆ. ಬಳಿಕ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳವಿನ ರಹಸ್ಯ ಬಯಲಾಗಿದೆ.
ದಕ್ಷಿಣ ಕೊರಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಕಿರುಕುಳ: ವಿಗ್ ಧರಿಸಿ ಬೆನ್ನಟ್ಟಿದ ಅಪರಿಚಿತ ವ್ಯಕ್ತಿ
ಕೃತ್ಯಕ್ಕೆ ಬಳಸಲಾದ ಟಾಟಾ ಏಸ್ ವಾಹನದ ನೋಂದಣಿ ಸಂಖ್ಯೆ ಆಧಾರದಲ್ಲಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ರಸ್ತೆಬದಿಯಲ್ಲಿ ತಾತ್ಕಾಲಿಕವಾಗಿ ಮೂರ್ತಿಗಳನ್ನು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳಲ್ಲಿ ಈ ಘಟನೆ ಆತಂಕ ಮೂಡಿಸಿದೆ.