ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಬೆಳೆ ಉಳಿಸಲು ಹೆಣಗಾಡಿದ ರೈತ, ಹೃದಯಸ್ಪರ್ಶಿ ವಿಡಿಯೊ ವೈರಲ್

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಚ್ಚಿ ಹೋಗುತ್ತಿದ್ದ ತನ್ನ ಕಡಲೆಕಾಯಿ ಬೆಳೆಯನ್ನು ಉಳಿಸಲು ರೈತ ಗೌರವ್ ಪನ್ವಾರ್ ಹತಾಶೆಯಿಂದ ಪ್ರಯತ್ನಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೋಡಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮನ ಕರಗಿದ್ದು, ರೈತನಿಗೆ ಕರೆ ಮಾಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಮಳೆಯಿಂದ ಕೊಚ್ಚಿ ಹೋಗುತ್ತಿದ್ದ ಬೆಳೆ ಉಳಿಸಲು ರೈತನ ಹರಸಾಹಸ

Profile pavithra May 19, 2025 5:05 PM

ಮುಂಬೈ: ಸಾಲಸೂಲ ಮಾಡಿ, ಬಿಸಿಲಿನಲ್ಲಿ ಕಷ್ಟಪಟ್ಟು ಬೆಳೆಸಿದ ಫಸಲಿನ ಲಾಭ ಕೈಗೆ ಸಿಗದೆ ಪ್ರಕೃತಿಯ ವಿಕೋಪದಿಂದಾಗಿ ಕೊಚ್ಚಿಕೊಂಡು ಹೋದರೆ ಅದರಿಂದ ರೈತರಿಗಾಗುವ ದುಃಖ ಅಷ್ಟಿಷ್ಟಲ್ಲ. ಇದರಿಂದ ಅದೆಷ್ಟೋ ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತನ್ನ ಬೆಳೆಯನ್ನು ರಕ್ಷಿಸಲು ರೈತನೊಬ್ಬ ಹತಾಶೆಯಿಂದ ಪ್ರಯತ್ನಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದು ನೋಡುಗರ ಮನಸನ್ನು ಕಲಕುವಂತಿದೆ. ಈ ವಿಡಿಯೊ ವೈರಲ್ (Viral Video) ಆದ ಬೆನ್ನಲ್ಲೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಂಕಷ್ಟದಲ್ಲಿರುವ ರೈತನೊಂದಿಗೆ ಕರೆ ಮಾಡಿ ಮಾತುಕತೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಮಳೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ರೈತರು ಎದುರಿಸುತ್ತಿರುವ ಭಾರಿ ನಷ್ಟವನ್ನು ಈ ವೈರಲ್ ವಿಡಿಯೊ ಸ್ಪಷ್ಟವಾಗಿ ತೋರಿಸಿದೆ. ವಿಡಿಯೊದಲ್ಲಿರುವ ರೈತ ಗೌರವ್ ಪನ್ವಾರ್ ಭಾರಿ ಮಳೆ ಶುರುವಾದಾಗ ತನ್ನ ಕಡಲೆಕಾಯಿ ಬೆಳೆಯನ್ನು ವಾಶಿಮ್‌ನ ಮಾರುಕಟ್ಟೆಗೆ ತಂದಿದ್ದ. ಮಳೆಯಿಂದಾಗಿ ಅವನು ಕಷ್ಟಪಟ್ಟು ಬೆಳೆಸಿದ ಬೆಳೆ ಕೊಚ್ಚಿಹೋಗುವ ಪರಿಸ್ಥಿತಿ ಎದುರಾದಾಗ ಅಸಹಾಯಕ ಪನ್ವಾರ್ ತನ್ನ ಬರಿ ಕೈಗಳಿಂದ ಅದನ್ನು ರಕ್ಷಿಸಲು ಪ್ರಯತ್ನಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ ನೋಡಿ...



ಈ ಹೃದಯಸ್ಪರ್ಶಿ ದೃಶ್ಯವು ಕೃಷಿ ಸಚಿವರ ಮನಸ್ಸನ್ನು ಕರಗಿಸಿದೆ. ಹೀಗಾಗಿ ಅವರು ಪನ್ವಾರ್ ಅವನನ್ನು ಸಂಪರ್ಕಿಸಿ ನಷ್ಟಕ್ಕೆ ಪರಿಹಾರವನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಸಚಿವ ಚೌಹಾಣ್ ತಮ್ಮ ಸಂಭಾಷಣೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ರೈತ ತನಗೆ ಆಗಿರುವ ನಷ್ಟವನ್ನು ವಿವರಿಸುತ್ತಾ ದುಃಖಿಸಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಡಿಯೊ ನೋಡಿ ತಮಗೂ ಬೇಸರವಾಗಿರುವುದಾಗಿ ಹೇಳಿದ್ದಾರೆ. ಹಾಗೇ ರೈತನಿಗೆ ಚಿಂತಿಸದಂತೆ ಸಮಾಧಾನಪಡಿಸಿ ಮಹಾರಾಷ್ಟ್ರ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯದ ಕೃಷಿ ಸಚಿವರು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿದ್ದು, ಯಾವುದೇ ನಷ್ಟ ಸಂಭವಿಸಿದ್ದರೂ ಅದನ್ನು ಸರಿದೂಗಿಸಲಾಗುವುದು. ಇದರಿಂದ ನೀವು ಮತ್ತು ನಿಮ್ಮ ಕುಟುಂಬಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.

ಇದಕ್ಕೂ ಮೊದಲು, ಮಹಾರಾಷ್ಟ್ರ ಎನ್‌ಸಿಪಿ (ಶರದ್ ಪವಾರ್) ಅಧ್ಯಕ್ಷ ಜಯಂತ್ ಪಾಟೀಲ್ ಕೂಡ ಸಂತ್ರಸ್ತ ರೈತರಿಗೆ ತಕ್ಷಣದ ಪರಿಹಾರ ಮತ್ತು ಬೆಂಬಲಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.

ಈ ಸುದ್ದಿಯನ್ನೂ ಓದಿ:Viral Video: ಈ ಐಸ್‍ಕ್ರೀಂ ಕೋನ್‍ನಲ್ಲಿ ಹಲ್ಲಿಯ ಬಾಲ ಪತ್ತೆ; ವಿಡಿಯೊ ವೈರಲ್

ರಾಜ್ಯದಲ್ಲಿ ಭಾರಿ ಅಕಾಲಿಕ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಇದರಿಂದಾಗಿ ಗಮನಾರ್ಹ ಬೆಳೆ ಹಾನಿಯಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ ಎನ್ನಲಾಗಿದೆ.