ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

52 ವರ್ಷಗಳ ನಂತರ ಹೆಣ್ಣು ಮಗು ಜನನ; ಆಸ್ಪತ್ರೆಯಲ್ಲೇ ಸಂಭ್ರಮಿಸಿದ ಇಂದೋರ್ ಕುಟುಂಬ: ಭಾವುಕ ಕ್ಷಣದ ವಿಡಿಯೊ ನೋಡಿ

Viral Video: ಮಧ್ಯ ಪ್ರದೇಶದ ಇಂದೋರ್‌ನ ಕುಟುಂಬವೊಂದು 52 ವರ್ಷದ ಬಳಿಕ ಹೆಣ್ಣು ಮಗುವೊಂದನ್ನು ಬರಮಾಡಿಕೊಂಡಿದೆ. ಐದು ದಶಕಗಳ ಕಾಲ ಕೇವಲ ಗಂಡು ಮಕ್ಕಳನ್ನೇ ಕಂಡಿದ್ದ ಈ ಕುಟುಂಬಕ್ಕೆ ಕೊನೆಗೂ ಲಕ್ಷ್ಮೀಯ ರೂಪದಲ್ಲಿ ಹೆಣ್ಣು ಮಗುವಿನ ಆಗಮನವಾಗಿದೆ. ಆಸ್ಪತ್ರೆಯಲ್ಲೇ ಕುಟುಂಬ ಸಂಭ್ರಮಾಚರಿಸಿದ್ದು, ಈ ಖುಷಿಯ ಕ್ಷಣದ ವಿಡಿಯೊ ಭಾರಿ ವೈರಲ್ ಆಗುತ್ತಿದೆ.

52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗುವನ್ನು ಸ್ವಾಗತಿಸಿದ ಇಂದೋರ್ ಕುಟುಂಬ

52 ವರ್ಷಗಳ ನಂತರ ಮೊದಲ ಹೆಣ್ಣು ಮಗುವನ್ನು ಸ್ವಾಗತಿಸಿದ ಇಂದೋರ್‌ನ ಕುಟುಂಬ -

Profile
Pushpa Kumari Aug 2, 2026 4:10 PM

ಭೋಪಾಲ್‌, ಆ. 2: ದಾಂಪತ್ಯ ಜೀವನದಲ್ಲಿ ಮಗುವನ್ನು ಬರಮಾಡಿಕೊಳ್ಳುವುದು ದಂಪತಿಯ ಅತಿ ದೊಡ್ಡ ಸಂಭ್ರಮದಲ್ಲಿ ಒಂದು. ಇದೀಗ ಮಧ್ಯ ಪ್ರದೇಶದ ಇಂದೋರ್‌ನ ಕುಟುಂಬವೊಂದು 52 ವರ್ಷದ ಬಳಿಕ ಹೆಣ್ಣು ಮಗುವೊಂದನ್ನು ಬರಮಾಡಿಕೊಂಡಿದೆ. ಐದು ದಶಕಗಳ ಕಾಲ ಕೇವಲ ಗಂಡು ಮಕ್ಕಳನ್ನೇ ಕಂಡಿದ್ದ ಈ ಕುಟುಂಬಕ್ಕೆ ಕೊನೆಗೂ ಹೆಣ್ಣು ಮಗುವಿನ ಆಗಮನವಾಗಿದ್ದು, ಕುಟುಂಬ ಹಬ್ಬದ ರೀತಿಯಲ್ಲಿ ಈ ಅಪರೂಪದ ಕ್ಷಣವನ್ನು ಆನಂದಿಸಿದೆ. ಈ ಖುಷಿಯ ಕ್ಷಣದ ವಿಡಿಯೊ ಭಾರೀ ವೈರಲ್ (Viral News) ಆಗುತ್ತಿದೆ.

ಸ್ತ್ರೀರೋಗ ತಜ್ಞೆ ಡಾ. ಬೇಲಾ ಶಾ ಜೈನ್ ಈ ಭಾವನಾತ್ಮಕ ವಿಡಿಯೊ ಶೇರ್ ಮಾಡಿದ್ದು ನೆಟ್ಟಿಗರ ಮನ ಗೆದ್ದಿದೆ. ಕುಟುಂಬದ ಉತ್ಸಾಹ ಮತ್ತು ಹೆಣ್ಣು ಮಗುವಿಗೆ ನೀಡಿದ ಆತ್ಮೀಯ ಸ್ವಾಗತವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಕುಟುಂಬದ ಪ್ರಕಾರ, ಕಳೆದ 52 ವರ್ಷ ಬರೀ ಗಂಡು ಮಕ್ಕಳು ಜನಿಸಿದ್ದರು. ಹೀಗಾಗಿ ಹೆಣ್ಣು ಮಗುವಿನ ಆಗಮನ ಅವರಿಗೆ ಮರೆಯಲಾಗದ ಸಡಗರವನ್ನು ನೀಡಿದೆ.

ವಿಡಿಯೊ ನೋಡಿ:

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ವಿಡಿಯೊದಲ್ಲಿ ವೈದ್ಯೆ ನವಜಾತ ಶಿಶುವನ್ನು ಆಪರೇಷನ್ ಥಿಯೇಟರ್‌ನಿಂದ ಹೊರಗೆ ಕರೆತರುವ ಸಂತೋಷದ ಕ್ಷಣ ಕಂಡು ಬಂದಿದೆ. ಅಲ್ಲಿಯೇ ಕಾಯುತ್ತಿದ್ದ ಕುಟುಂಬಸ್ಥರ ಮುಖದಲ್ಲಿ ಅಪಾರ ಖುಷಿ, ಆನಂದ ಎದ್ದು ಕಾಣುತ್ತಿತ್ತು. ಹೆಣ್ಣು ಮಗುವನ್ನು ದೂಷಿಸುವ ಜನರ ಮಧ್ಯೆ ಹೆಣ್ಣು ಮಗುವನ್ನು ಈ ರೀತಿ ಬರಮಾಡಿಕೊಂಡ ಅವಿಸ್ಮರಣೀಯ ಕ್ಷಣದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಮಗುವಿನ ತಾಯಿ ಮುಸ್ಕಾನ್ ಅಗರ್ವಾಲ್ ಕೂಡ ಭಾವನಾತ್ಮಕವಾಗಿ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಈ ಸುಂದರ ಪ್ರಯಾಣದಲ್ಲಿ ನೀವು ಕೂಡ ಸಹಕಾರ ನೀಡಿದ್ದೀರಿ. ಹೆರಿಗೆಯ ಪ್ರತಿಯೊಂದು ಸಂದರ್ಭದಲ್ಲಿಯು ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದ ಎಂದು ವೈದ್ಯರ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಹೆಣ್ಣು ಮಗುವಿನ ಜನನವನ್ನು ಇಷ್ಟು ಅದ್ಧೂರಿಯಾಗಿ ಆಚರಿಸಿದ ಕುಟುಂಬದ ಬಗ್ಗೆ ಎಲ್ಲರೂ ಖುಷಿ ವ್ಯಕ್ತ ಪಡಿಸಿದ್ದಾರೆ.

ಒಬ್ಬರು, "ಒಂದು ಕುಟುಂಬವು ಮಗನ ಜನನದಂತೆಯೇ ಅದೇ ಉತ್ಸಾಹದಿಂದ ಹೆಣ್ಣು ಮಗಳ ಜನನವನ್ನು ಸ್ವಾಗತಿಸಿದಾಗ ನನ್ನ ಹೃದಯಕ್ಕೆ ಖುಷಿಯಾಗಿದೆʼʼ ಎಂದಿದ್ದಾರೆ. ಮತ್ತೊಬ್ಬರು, ʼʼಮನೆಗೆ ಲಕ್ಷ್ಮೀಯ ಆಗಮನ. ಈ ಹೆಣ್ಣು ಮಗು ತುಂಬ ಪುಣ್ಯ ಮಾಡಿರಬಹುದುʼʼ ಎಂದು ಬರೆದುಕೊಂಡಿದ್ದಾರೆ.