ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಜೆಪಿ ಸಚಿವರ ರ‍್ಯಾಲಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಮುಂಬೈ ಮಹಿಳೆ ಯು ಟರ್ನ್; ಈಗ ಹೇಳಿದ್ದೇನು?

ಮಹಾರಾಷ್ಟ್ರದ ಮುಂಬೈಯಲ್ಲಿ ರಾಜಕೀಯ ರ‍್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಟೀನಾ ಚೌಧರಿ ಇದೀಗ ತಮ್ಮ ನಿಲುವು ಬದಲಿಸಿ, ಸಚಿವ ಗಿರೀಶ್ ಮಹಾಜನ್ ಸಮಸ್ಯೆ ಪರಿಹರಿಸಲು ಸಹಕರಿಸಿದರು ಎಂದು ಹೇಳಿದ್ದಾರೆ. ಸಚಿವರು ಮಧ್ಯ ಪ್ರವೇಶಿಸಿ ಸಮಸ್ಯೆಬಗೆಹರಿಸಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ರ‍್ಯಾಲಿ ವಿವಾದ: ಮಹಿಳೆ ಯು ಟರ್ನ್

ವೈರಲ್ ಆಗಿದ್ದ ಟೀನಾ ಚೌಧರಿ -

Profile
Sushmitha Jain May 3, 2026 9:24 PM

ಮುಂಬೈ, ಮೇ 3: ಮಹಾರಾಷ್ಟ್ರದ ಮುಂಬೈಯ ವರ್ಲಿಯಲ್ಲಿ ರಾಜಕೀಯ ರ‍್ಯಾಲಿಯಿಂದಾಗಿ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಿಂದ ಕೆರಳಿ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ (Girish Mahajan) ಅವರನ್ನೇ ಪ್ರಶ್ನಿಸಿ ವೈರಲ್ ಆಗಿದ್ದ ಟೀನಾ ಚೌಧರಿ ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ಸಚಿವರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ವಿವರವಾದ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಚೌಧರಿ, "ನನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಅನೇಕರು ಸಂದೇಶ ಕಳುಹಿಸುತ್ತಿದ್ದಾರೆ. ನಿಮ್ಮ ಕಾಳಜಿಗೆ ಧನ್ಯವಾದಗಳು, ನಾನು ಆರಾಮವಾಗಿದ್ದೇನೆ" ಎಂದು ತಿಳಿಸಿದ್ದಾರೆ. ಏಪ್ರಿಲ್ 21ರಂದು ಮಗಳನ್ನು ಸಂಗೀತ ತರಗತಿಗೆ ಬಿಟ್ಟು ಹಿಂತಿರುಗುವಾಗ ಮಹೀಂದ್ರಾ ತಾಜ್ ಬಳಿ ತೀವ್ರ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದಾಗಿ ಅವರು ಘಟನೆಯನ್ನು ವಿವರಿಸಿದ್ದಾರೆ. ಸುಮಾರು 25 ನಿಮಿಷಗಳ ಕಾಲ ಕಾರಿನಲ್ಲೇ ಕುಳಿತಿದ್ದ ಅವರು, ನಂತರ ಕೆಳಗಿಳಿದು ಸಮಸ್ಯೆಯ ಬಗ್ಗೆ ವಿಚಾರಿಸಿದ್ದಾರೆ. ರಸ್ತೆಯನ್ನು ತಡೆದಿದ್ದ ಎರಡು ಬಸ್‌ಗಳನ್ನು ತೆರವುಗೊಳಿಸಿ ವಾಹನಗಳು ಯು ಟರ್ನ್ ತೆಗೆದುಕೊಳ್ಳಲು ಅನುವು ಮಾಡಿಕೊಡುವಂತೆ ಅಲ್ಲಿನ ಪೊಲೀಸ್ ಅಧಿಕಾರಿಗಳಲ್ಲಿ ಒಂದುವರೆ ಗಂಟೆಗಳ ಕಾಲ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಟೀನಾ ಚೌಧರಿ ಹೇಳಿಕೆ:



ವೈರಲ್ ವಿಡಿಯೊದಲ್ಲಿ ಬಾಟಲಿಯನ್ನು ಎಸೆದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಅದು ಯಾರ ಮೇಲೂ ಎಸೆದಿದ್ದಲ್ಲ, ಬದಲಾಗಿ ಅಧಿಕಾರಿಗಳ ಗಮನ ಸೆಳೆಯಲು ಮಾತ್ರ ಹಾಗೆ ಮಾಡಿದ್ದಾಗಿ ತಿಳಿಸಿದ್ದಾರೆ. ಅಂತಿಮವಾಗಿ ಸಚಿವ ಗಿರೀಶ್ ಮಹಾಜನ್ ಮಾತ್ರವೇ ತಮ್ಮ ದೂರನ್ನು ಶಾಂತವಾಗಿ ಆಲಿಸಿದರು ಎಂದು ಅವರು ಪ್ರಶಂಸಿಸಿದ್ದಾರೆ. "ಆ ರ‍್ಯಾಲಿಯಲ್ಲಿ ನನ್ನ ಮಾತನ್ನು ಕೇಳಿಸಿಕೊಂಡ ಏಕೈಕ ವ್ಯಕ್ತಿ ಎಂದರೆ ಮಹಾಜನ್. ಅವರ ಸೂಚನೆಯ ಮೇರೆಗೆ ಆ ಬಸ್‌ಗಳನ್ನು ಅಲ್ಲಿಂದ ತೆರವುಗೊಳಿಸಲಾಯಿತು, ಇದರಿಂದಾಗಿ ನಮಗೆ ಯು ಟರ್ನ್ ಪಡೆದು ಮುಖ್ಯ ರಸ್ತೆ ಸೇರಲು ಸಾಧ್ಯವಾಯಿತು" ಎಂದು ಚೌಧರಿ ಹೇಳಿದ್ದಾರೆ.

ಪಂಚ ರಾಜ್ಯಗಳ ಆಡಳಿತ ಯಾರ ಕೈಗೆ? ನಾಳೆ ಭವಿಷ್ಯ ನಿರ್ಧಾರ

ಕಳೆದ ವಾರ ವೈರಲ್ ಆಗಿದ್ದ ವಿಡಿಯೊದಲ್ಲಿ, ಸಾಮಾನ್ಯ ನಾಗರಿಕರು ಪರದಾಡುತ್ತಿರುವಾಗ ರಸ್ತೆಯಲ್ಲಿ ರಾಜಕೀಯ ರ‍್ಯಾಲಿ ನಡೆಸಿರುವುದನ್ನು ಟೀನಾ ಪ್ರಶ್ನಿಸುತ್ತಾ ಅಧಿಕಾರಿಗಳ ವಿರುದ್ಧ ಕಿರುಚಾಡುತ್ತಿರುವುದು ಕಂಡುಬಂದಿತ್ತು. ಈ ವಿವಾದದ ನಂತರ ಪ್ರತಿಕ್ರಿಯಿಸಿದ್ದ ಸಚಿವ ಮಹಾಜನ್, ಸಾರ್ವಜನಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ಕ್ಷಮೆಯಾಚಿಸಿದ್ದರು. ಅತೀ ದೊಡ್ಡ ಸಾರ್ವಜನಿಕ ಸಭೆಗಳು ನಡೆದಾಗ ಇಂತಹ ಅಡಚಣೆಗಳು ಅನಿವಾರ್ಯವಾಗಿ ಸಂಭವಿಸುತ್ತವೆ ಎಂದು ಅವರು ಸಮರ್ಥಿಸಿಕೊಂಡಿದ್ದರು. ಇದೀಗ ಸಂತ್ರಸ್ತ ಮಹಿಳೆಯೇ ಸಚಿವರ ಪರವಾಗಿ ಮಾತನಾಡುತ್ತಿರುವುದು ಈ ವಿವಾದಕ್ಕೆ ಸುಖಾಂತ್ಯ ನೀಡಿದಂತಾಗಿದೆ. ಪ್ರಸ್ತುತ ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ರ‍್ಯಾಲಿಗಳು ಮತ್ತು ನಾಗರಿಕರ ಹಕ್ಕುಗಳ ನಡುವಿನ ಸಂಘರ್ಷದ ಬಗ್ಗೆ ಹೊಸ ಆಲೋಚನೆಗೆ ನಾಂದಿ ಹಾಡಿದೆ.