Viral Video: ಬೀದಿ ನಾಯಿಯನ್ನು ಎತ್ತಿಕೊಂಡು ಉಗ್ರ ಪ್ರತಿಭಟನೆ- ಇಲ್ಲಿದೆ ನೋಡಿ ವಿಡಿಯೊ
Protesters Dance with Stray Dog: ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪ್ರಾಣಿ ಹಕ್ಕುಗಳ ಹೋರಾಟಗಾರರು ಮತ್ತು ಪ್ರಾಣಿ ಪ್ರಿಯರು ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ರ್ಯಾಲಿ ನಡೆಸುತ್ತಿದ್ದಾರೆ. ಈ ನಡುವೆ ಪ್ರತಿಭಟನೆ ವೇಳೆ ಶ್ವಾನವೊಂದನ್ನು ಹಿಡಿದು ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ನವದೆಹಲಿ: ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ (Supreme Court) ನೀಡಿರುವ ಆದೇಶದ ವಿರುದ್ಧ ಪ್ರಾಣಿ ಹಕ್ಕುಗಳ ಹೋರಾಟಗಾರರು ರಾಷ್ಟ್ರ ರಾಜಧಾನಿಯಲ್ಲಿ ರ್ಯಾಲಿಗಳನ್ನು ನಡೆಸುತ್ತಲೇ ಇದ್ದಾರೆ. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ನೇತೃತ್ವದ ವಿಭಾಗೀಯ ಪೀಠವು, ದೆಹಲಿ-ಎನ್‌ಸಿಆರ್ ಅಧಿಕಾರಿಗಳಿಗೆ ಆರರಿಂದ ಎಂಟು ವಾರಗಳೊಳಗೆ ಬೀದಿ ನಾಯಿಗಳನ್ನು (stray dogs) ಹಿಡಿಯಬೇಕು ಮತ್ತು ಅವುಗಳಿಗೆ ಆಶ್ರಯ ತಾಣ ಒದಗಿಸಬೇಕು. ಅವುಗಳನ್ನು ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬಿಡದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನ ಈ ಆದೇಶವು ಪ್ರಾಣಿ ಹಕ್ಕುಗಳ ಹೋರಾಟಗಾರರು ಹಾಗೂ ಪ್ರಾಣಿ ಪ್ರಿಯರಲ್ಲಿ ಅಸಮಾಧಾನ ತರಿಸಿದೆ. ಹೀಗಾಗಿ ದೇಶದ ರಾಜಧಾನಿಯಲ್ಲಿ ಬೀದಿನಾಯಿಗಳನ್ನು ಸ್ಥಳಾಂತರಿಸುವ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಪ್ರತಿಭಟನಾಕಾರರು ರ್ಯಾಲಿಯ ಸಮಯದಲ್ಲಿ ಪ್ರೀತಿಯಿಂದ ಬೀದಿ ನಾಯಿಯನ್ನು ತೋಳುಗಳಲ್ಲಿ ಹೊತ್ತುಕೊಂಡು ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವಿಡಿಯೊ ವೀಕ್ಷಿಸಿ:
❤️ #SaveDelhiNCRDogs #SaveDelhiDogs2025 pic.twitter.com/jAWD7gAllG
— Ishita Yadav (@IshitaYadav) August 16, 2025
ಬೀದಿ ನಾಯಿಗಳೊಂದಿಗೆ ನೃತ್ಯ ಮಾಡಿದ ಪ್ರತಿಭಟನಾಕಾರರು
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಪ್ರಾಣಿ ಪ್ರಿಯರು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಫಲಕಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ಒಂದು ಫಲಕದಲ್ಲಿ ‘ಶ್ವಾನಗಳಿಗೆ ಲಸಿಕೆ ಹಾಕಿಸಿ, ಸ್ಥಳಾಂತರ ಮಾಡಬೇಡಿ’ ಎಂದು ಬರೆಯಲಾಗಿದೆ. ಇನ್ನೊಂದು ಫಲಕದಲ್ಲಿ ‘ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಬರೆಯಲಾಗಿದೆ. ಈ ವೇಳೆ ಕೆಲವರು ಬೀದಿನಾಯಿಯೊಂದನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡು ನೃತ್ಯ ಮಾಡಿದ್ದಾರೆ. ಶ್ವಾನ ಕೂಡ ಭಯಪಡದೆ ಅವರ ತೋಳುಗಳಲ್ಲಿ ಸುಮ್ಮನೆ ಕೂತಿದೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಅದು ನೆಟ್ಟಿಗರ ಗಮನ ಸೆಳೆದಿದೆ. ಕೆಲವರು ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದರೆ, ಇನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಮೀಮ್‍ಗಳ ಸುರಿಮಳೆ ಹರಿಸಿದ್ದಾರೆ. ತಮ್ಮ ಮೂರ್ಖತನದಿಂದಾಗಿ ನಾಯಿಯನ್ನು ಹಿಂಸಿಸುತ್ತಿದ್ದಾರೆ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾಯಿ ಪ್ರಿಯರಿಂದ ನಾಯಿಗಳನ್ನು ರಕ್ಷಿಸಿ ಎಂದು ಹಂಚಿಕೊಂಡಿದ್ದಾರೆ.
ಇನ್ನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಬೀದಿ ನಾಯಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದಂತೆ ಎಲ್ಲಾ ಸಂಬಂಧಿತ ಸಚಿವಾಲಯಗಳನ್ನು ಮನವಿ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Viral Video: ವ್ಲಾಗರ್ಸ್ ರೆಸ್ಟೋರೆಂಟ್ ಒಳಗೆ ಕೂತು ಆಹಾರ ತಿನ್ನುತ್ತಿರುವಾಗ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು; ಭಯಾನಕ ದೃಶ್ಯ ವೈರಲ್