ನಾಗಪುರ-ಮುಂಬೈ ರೈಲಿನ ಮೇಲೆ ಕಲ್ಲು ತೂರಾಟ: ಕಿಟಕಿ ಗಾಜು ಒಡೆದು ಚೆಲ್ಲಾಪಿಲ್ಲಿ; ಭಯಾನಕ ಅನುಭವ ಬಿಚ್ಚಿಟ್ಟ ಪ್ರಯಾಣಿಕರು
Viral Video: ನಾಗಪುರದಿಂದ ಮುಂಬೈಗೆ ಸಂಚರಿಸುತ್ತಿದ್ದ ರೈಲಿನ ಕಿಟಕಿಗೆ ಏಕಾಏಕಿ ಕಲ್ಲು ಬಡಿದು ಗಾಜು ಪುಡಿಪುಡಿಯಾಗಿ ಬಿದ್ದಿದೆ. ಗಾಜಿನ ಚೂರುಗಳು ಸೀಟುಗಳು ಮತ್ತು ಬರ್ತ್‌ಗಳ ಮೇಲೆ ಬಿದ್ದಿದ್ದು, ಇದರಿಂದಾಗಿ ಪ್ರಯಾಣವು ಭಯಾನಕ ಕ್ಷಣವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ಈ ದೃಶ್ಯವನ್ನು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
ನಾಗಪುರ-ಮುಂಬೈ ಟ್ರೈನ್ ಮೇಲೆ ಕಲ್ಲು ತೂರಾಟ -
ಮುಂಬೈ, ಸೆ. 26: ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರಿಗೆ ಅಘಾತಕಾರಿ ಘಟನೆಯೊಂದು ಎದುರಾಗಿದೆ. ಮಹಾರಾಷ್ಟ್ರದ ನಾಗಪುರದಿಂದ ಮುಂಬೈಗೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಕಿಟಕಿಗೆ ಏಕಾಏಕಿ ಕಲ್ಲು ಬಡಿದು ಗಾಜು ಪುಡಿಪುಡಿಯಾಗಿ ಬಿದ್ದಿದೆ. ಗಾಜಿನ ಚೂರುಗಳು ಸೀಟುಗಳು ಮತ್ತು ಬರ್ತ್‌ಗಳ ಮೇಲೆ ಬಿದ್ದಿದ್ದು ಇದರಿಂದಾಗಿ ಸಾಮಾನ್ಯ ಪ್ರಯಾಣವು ಭಯಾನಕ ಕ್ಷಣವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ಈ ದೃಶ್ಯವನ್ನು ವಿಡಿಯೊ ಮಾಡಿ (Viral News) ಹಂಚಿಕೊಂಡಿದ್ದಾರೆ.
ನಾಗಪುರ-ಮುಂಬೈ ಮಾರ್ಗದ ದುರಂತೋ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಪ್ರಯಾಣದ ಕ್ಷಣವನ್ನು ಸೆರೆಹಿಡಿಯುತ್ತಿದ್ದಾಗ ಚಲಿಸುತ್ತಿದ್ದ ರೈಲಿಗೆ ಇದ್ದಕ್ಕಿದ್ದಂತೆ ಕಲ್ಲಿನ ಹೊಡೆತ ಬಿದ್ದಿದ್ದು ಕಿಟಕಿ ಬಿರುಕು ಬಿಟ್ಟು ಒಡೆದುಹೋಗಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಬೋಗಿಯಲ್ಲಿದ್ದ ಜನರು ಏನಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಗೊಂದಲಕ್ಕೊಳಗಾಗಿದ್ದು ಸ್ಪಷ್ಟವಾಗಿ ಗೋಚರಿಸಿದೆ.
ವಿಡಿಯೊ ನೋಡಿ:
Stone Pelting on the Mumbai-bound Duronto Express
— Ghar Ke Kalesh (@gharkekalesh) September 26, 2026
Footage captured the exact moment the stone pierced the glass. pic.twitter.com/z97YJFx6Q7
ಕಲ್ಲು ಬಡಿದ ರಭಸಕ್ಕೆ ಕಿಟಕಿಯ ಗಾಜುಗಳು ಒಡೆದು ಬಿದ್ದಿವೆ. ಘಟನೆಯ ಸದ್ದು 'ಮೆಷಿನ್ ಗನ್ ಫೈರಿಂಗ್'ನಂತೆ ಇತ್ತು ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ಒಟ್ಟು 3 ಕೋಚ್‌ಗಳ ಕಿಟಕಿಗಳಿಗೆ ಹಾನಿಯಾಗಿದೆ. ಗಾಜಿನ ಚೂರು ಚೆಲ್ಲಾಪಿಲ್ಲಿಯಾಗಿ ಬಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಕಾಪಾಡಿದ ಅರಣ್ಯಾಧಿಕಾರಿಗಳು
ಪ್ರಯಾಣಿಕರೊಬ್ಬರ ಪ್ರಕಾರ, ಆ ಗುಂಪು ಊಟ ಮಾಡುತ್ತ ಪ್ರಯಾಣವನ್ನು ಆನಂದಿಸುತ್ತಿದ್ದಾಗ ಏನೋ ಬಡಿದ ಶಬ್ದ ಕೇಳಿಸಿತು. ಈ ಘಟನೆಯಿಂದ ಗಂಭೀರ ಹಾನಿಯಾಗಬಹುದಾಗಿತ್ತು. ಅದೃಷ್ಟವಶಾತ್ ದುರಂತ ತಪ್ಪಿದೆ ಎಂದು ಹೇಳಿದ್ದಾರೆ. ಈ ಘಟನೆಯು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಯಾರಾದರೂ ಉದ್ದೇಶಪೂರ್ವಕವಾಗಿ ರೈಲಿನ ಮೇಲೆ ಕಲ್ಲು ಎಸೆದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.