ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

21ನೇ ಶತಮಾನದಲ್ಲೂ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ಬಳಲುತ್ತಿದೆ ವಾಣಿಜ್ಯ ನಗರಿ ಮುಂಬೈ ಸಮೀಪದ ಈ ಗ್ರಾಮ; ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು

Viral Video: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹಳ್ಳಿಯೊಂದು ಮೂಲ ಸೌಕರ್ಯದಿಂದ ವಂಚಿತವಾಗಿದೆ. ವಾಹನಗಳು ಚಲಿಸಲು ಅಗತ್ಯವಾದ ರಸ್ತೆ ಇಲ್ಲದ ಕಾರಣ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗದೆ, ಗರ್ಭಿಣಿಯನ್ನು ತಾತ್ಕಾಲಿಕ ಬಟ್ಟೆಯ ಜೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಮನಕಲಕುವ ಘಟನೆ ನಡೆದಿದೆ.

ತಾತ್ಕಾಲಿಕ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು

ಚಾಟ್‌ಜಿಪಿಟಿ ರಚಿತ ಚಿತ್ರ -

Priyanka P
Priyanka P Jul 14, 2026 4:53 PM

ಮುಂಬೈ, ಜು. 14: ದೇಶದ ವಾಣಿಜ್ಯ ನಗರಿಯಾಗಿ ಮುಂಬೈ (Mumbai) ಬೆಳೆಯುತ್ತಿದ್ದರೆ, ಅಲ್ಲಿಂದ ಕೇವಲ 80 ಕಿಲೋ ಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹಳ್ಳಿಯೊಂದು ಈಗಲೂ ಕನಿಷ್ಠ ಮೂಲಸೌಕರ್ಯದಿಂದ ವಂಚಿತವಾಗಿದೆ. ವಾಹನಗಳು ಚಲಿಸಲು ಅನುಕೂಲವಾದ ರಸ್ತೆ ಇಲ್ಲದ ಕಾರಣ ಆಂಬ್ಯುಲೆನ್ಸ್ ತಲುಪಲು ಸಾಧ್ಯವಾಗದೆ, ಗರ್ಭಿಣಿಯನ್ನು ತಾತ್ಕಾಲಿಕ ಬಟ್ಟೆಯ ಜೋಲಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಮನಕಲಕುವ ಘಟನೆ ನಡೆದಿದೆ. ಈ ಘಟನೆ ರಾಯಗಢ ಜಿಲ್ಲೆಯ ಖಲಾಪುರ ತಾಲೂಕಿನ ಉಂಬರಾನೆ ವಾಡಿಯಲ್ಲಿ ನಡೆದಿದೆ. ಈ ಗ್ರಾಮ ಮುಂಬೈಯಿಂದ ಕೇವಲ 80 ಕಿಲೋ ಮೀಟರ್ ದೂರದಲ್ಲಿದೆ. ಇದು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿರುವ ಖಲಾಪುರ ಟೋಲ್ ಪ್ಲಾಜಾದಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿದೆ ಎನ್ನುವುದೇ ಅಚ್ಚರಿಯ ಸಂಗತಿ.

ಇದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಗರ್ಭಿಣಿಯನ್ನು ಸುರಕ್ಷಿತವಾಗಿ ಕರೆದೊಯ್ಯುವಾಗ ಗ್ರಾಮಸ್ಥರು ಜಾರು ಬಂಡೆಗಳು, ಗುಡ್ಡ-ಬೆಟ್ಟಗಳಿಂದ ಆವೃತವಾದ ಭೂ ಪ್ರದೇಶ ಮತ್ತು ಉಕ್ಕಿ ಹರಿಯುವ ಹೊಳೆಗಳಲ್ಲಿ ಕಷ್ಟಪಡುತ್ತಿರುವುದನ್ನು ಈ ವಿಡಿಯೊ ಸೆರೆ ಹಿಡಿದಿದೆ. ಹೀಗೆ ಕಷ್ಟಪಟ್ಟು ಗರ್ಭಿಣಿಯನ್ನು ಸುರಕ್ಷಿತವಾಗಿ ಚೌಕ್ ಆಸ್ಪತ್ರೆಗೆ ದಾಖಲಿಸಲಾಯಿತು.

ಇಲ್ಲಿದೆ ವಿಡಿಯೊ:



ಅನಂತ ಪಾರ್ಧಿ ಎಂಬವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಗ್ರಾಮಸ್ಥರು ಅವರನ್ನು ಚೌಕ್ ಆಸ್ಪತ್ರೆಗೆ ಕಠಿಣ ಕಾಡಿನ ಹಾದಿಯ ಮೂಲಕ ಕರೆದೊಯ್ದರು. ಬುಡಕಟ್ಟು ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದ ಕಾರಣ, ನಿವಾಸಿಗಳು ಬೆಡ್‌ಶೀಟ್ ಅನ್ನು ಜೋಲಿಯಂತೆ ಮಾಡಿ ಆ ಮೂಲಕ ಗರ್ಭಿಣಿಯನ್ನು ಕರೆದೊಯ್ದರು. ಆಸ್ಪತ್ರೆಗೆ ತಲುಪಲು ಬಂಡೆಗಳಿಂದ ಕೂಡಿದ ಪ್ರದೇಶ ಮತ್ತು ಹೊಳೆಗಳ ಮೂಲಕ ಹಲವು ಕಿಲೋ ಮೀಟರ್ ಕ್ರಮಿಸಬೇಕಾಯ್ತು.

ರಸ್ತೆ ಇಲ್ಲದೆ ಮಂಚದ ಮೇಲೆ ಮಲಗಿಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು!

ಉಂಬರಣೆ ವಾಡಿ ನಾಲ್ಕು ಬುಡಕಟ್ಟು ವಸಾಹತುಗಳಲ್ಲಿ ಒಂದಾಗಿದ್ದು, ಅವುಗಳಲ್ಲಿ ಪಿರ್ಕಡ್ವಾಡಿ ಮತ್ತು ಅರ್ಕಸ್ವಾಡಿ ಸೇರಿವೆ. ಇವು ರಸ್ತೆಗಳು ಮತ್ತು ವಿದ್ಯುತ್‌ನಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಈಗಲೂ ಎದುರಿಸುತ್ತಿವೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಚೌಕ್‌ಗೆ ಗ್ರಾಮವನ್ನು ಸಂಪರ್ಕಿಸುವ ಕಿರಿದಾದ ಪಾದಚಾರಿ ಮಾರ್ಗವು ಕೊಚ್ಚಿಹೋಗಿದ್ದು, ಇದು ಇಲ್ಲಿನವರ ಬದಕನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ವಿಪರ್ಯಾಸವೆಂದರೆ, ಈ ದೂರದ ಹಳ್ಳಿಗಳು ನವಿ ಮುಂಬೈಗೆ ಕುಡಿಯುವ ನೀರನ್ನು ಪೂರೈಸುವ ಮೋರ್ಬೆ ಅಣೆಕಟ್ಟಿನ ಬಳಿಯಲ್ಲೇ ಇವೆ. ಭಾರತದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಗೆ ತಾಗಿಕೊಂಡಿವೆ.

ಈ ಘಟನೆಯು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದೆ. ದೇಶದ ಅತ್ಯಂತ ಆಧುನಿಕ ಎಕ್ಸ್‌ಪ್ರೆಸ್‌ ವೇಯ ಒಂದರಿಂದ ಸ್ವಲ್ಪ ದೂರದಲ್ಲಿರುವ ಹಳ್ಳಿಯಲ್ಲಿ ಮೂಲಭೂತ ಸಂಪರ್ಕವೇ ಇಲ್ಲದಿರುವುದನ್ನು ಮನಗಂಡು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಯ ಕೆಲವೇ ಕಿಲೋ ಮೀಟರ್ ದೂರದಲ್ಲಿ ವಾಸಿಸುವ ನಿವಾಸಿಗಳು ಸರಿಯಾದ ರಸ್ತೆ ಇಲ್ಲದ ಕಾರಣ ರೋಗಿಗಳನ್ನು ಕಾಲ್ನಡಿಗೆಯಲ್ಲಿ ಸಾಗಿಸುವ ಪರಿಸ್ಥಿತಿ ಬಂದೊದಗಿರುವುದು ನಿಜಕ್ಕೂ ವಿಪರ್ಯಾಸ ಎಂದು ನೆಟ್ಟಿಗರು ಬೇಸರ ವ್ಯಕ್ರಪಡಿಸಿದ್ದಾರೆ.

ಮಳೆಗಾಲದಲ್ಲಿ ಕಾಡುಗಳು ಮತ್ತು ಹೊಳೆಗಳ ಮೂಲಕ ರೋಗಿಗಳನ್ನು ಸಾಗಿಸುವ ಗ್ರಾಮಸ್ಥರು ತಮ್ಮ ಜೀವವನ್ನೇ ಪಣಕ್ಕೀಡಬೇಕಾದ ಸ್ಥಿತಿ ಇದೆ. ರಸ್ತೆ, ವಿದ್ಯುತ್ ಮತ್ತು ಇತರ ಮೂಲಭೂತ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.