Viral Video: ಆಟೋ ಚಾಲಕನ ಮಾನವೀಯತೆಗೆ ಮನಸೋತ ವಿದೇಶಿ ಮಹಿಳೆ; ವಿಡಿಯೊ ವೈರಲ್
ದಿಲ್ಲಿಯಲ್ಲಿ ಆಟೋದಲ್ಲಿ ಪ್ರಯಾಣಿಸಿದ ವಿದೇಶಿ ಮಹಿಳೆಯೊಬ್ಬಳು ಆತನ ಸಹಾಯಕ್ಕೆ ಮನಸೋತು ದೊಡ್ಡ ಮೊತ್ತದ ಬಹುಮಾನ ನೀಡಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನಿದು ಕತೆ ಎಂದು ನಿಮಗೆ ಆಶ್ಚರ್ಯವಾಗ್ತಿದೆಯಾ? ಇದಕ್ಕೆ ಸಂಬಂಧಕ್ಕೆ ಪಟ್ಟ ಮಾಹಿತಿ ಇಲ್ಲಿದೆ.


ನವದೆಹಲಿ: ಸಾಮಾನ್ಯವಾಗಿ ಆಟೋ ಚಾಲಕರು ಪ್ರಯಾಣ ಮಾಡಿ ಹಣ ನೀಡದಿದ್ದರೆ ಬಾಯಿಗೆ ಬಂದಂತೆ ಬೈದು ಬಿಡುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಇದಕ್ಕೆ ತದ್ವಿರುದ್ದನಾಗಿದ್ದಾನೆ. ಆಟೋ ಚಾಲಕನೊಬ್ಬ ತನ್ನ ಔದಾರ್ಯದಿಂದ ವಿದೇಶಿ ಪ್ರವಾಸಿಯ ಹೃದಯವನ್ನು ಗೆದ್ದಿದ್ದಾನೆ. ಆಟೋದಲ್ಲಿ ಪ್ರಯಾಣಿಸಿದ ವಿದೇಶಿ ಮಹಿಳೆ ತನ್ನ ಬಳಿ ಹಣವಿಲ್ಲ ಎಂದಾಗ ಆತ ಸ್ವಲ್ಪವು ಬೇಸರಪಟ್ಟುಕೊಳ್ಳದೆ ಹಣ ಬೇಡ ಎಂದು ಹೇಳಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ವಿಡಿಯೊ ನೋಡಿದವರು ಆಟೋ ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ವಿದೇಶಿ ಮಹಿಳೆಯೊಬ್ಬಳು ದೆಹಲಿಗೆ ಭೇಟಿ ನೀಡಲು ಆಟೋದಲ್ಲಿ ಪ್ರಯಾಣಿಸಿದ್ದಾಳೆ. ನಂತರ ಆಟೋ ಚಾಲಕ ಚಾರ್ಜ್ ಕೇಳಿದಾಗ, ಆಕೆ ತನ್ನ ಬಳಿ ಈಗ ಹಣ ಇಲ್ಲ. ಕರೆನ್ಸಿಯನ್ನು ಬದಲಾಯಿಸಲು ಯಾವುದಾದರೂ ಸ್ಥಳದಲ್ಲಿ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾಳೆ. ಆಟೋ ಚಾಲಕ ಯಾವುದೇ ತರಕಾರು ಮಾಡದೇ "ಪರವಾಗಿಲ್ಲ, ನೀವು ಹೋಗಿ, ಹಣ ಬೇಡ” ಎಂದು ಹೇಳಿದ್ದಾನೆ.
ಚಾಲಕನ ಈ ನಡವಳಿಕೆಯನ್ನು ನೋಡಿದ ಮಹಿಳೆ ಶಾಕ್ ಆಗಿದ್ದಾಳೆ. ವಿಡಿಯೊದಲ್ಲಿ ಅವನು ತುಂಬಾ ಒಳ್ಳೆಯವನು. ತಾನು ಅವನಿಗೆ ಏನಾದರೂ ಒಳ್ಳೆಯದನ್ನು ಮಾಡಲು ಬಯಸುತ್ತೇನೆ ಎಂದು ಆಕೆ ಹೇಳಿದ್ದಾಳೆ. ಚಾಲಕನಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗಲೆಂದು ಹಾರೈಸಿದ್ದಾಳೆ. ಅವನ ಔದಾರ್ಯ ಕಂಡು ಮಹಿಳೆ ಅವನಿಗೆ ಬಳಿಕ 2,000 ರೂ. ನೀಡಿದ್ದಾಳೆ.
ಈ ಸುದ್ದಿಯನ್ನೂ ಓದಿ:Viral Video: ʼಇದು ತೇಲುವ ಹೋಟೆಲ್ʼ- ಇಲ್ಲಿ ಒಂದು ರಾತ್ರಿ ಕಳೆಯಲು ಪಾವತಿಸಬೇಕು ಬರೋಬ್ಬರಿ 59 ಲಕ್ಷ ರೂ.!
ಈ ವಿಡಿಯೊವನ್ನು ಮಹಿಳೆ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದು, ಇದು 2.5 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 2 ಲಕ್ಷ 12 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಈ ವಿಡಿಯೊವನ್ನು ನೋಡಿದವರು ವಿಭಿನ್ನ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ನೀವು ಬಹುಶಃ ಅವರ ಇಡೀ ದಿನದ ಗಳಿಕೆಯನ್ನು ನೀಡಿದ್ದೀರಿ. ಅವರಿಗಿದು ದೊಡ್ಡ ಆಶೀರ್ವಾದ" ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ. “ಆಟೋ ಚಾಲಕ ಬಹಳ ದಯಾಳು. ಅವನಿಗೆ ಒಳ್ಳೆಯ ಮನಸ್ಸಿದೆ. ನೀವು ಅವನ ದಯಾಳುತನಕ್ಕೆ ಬಹುಮಾನ ನೀಡಿರುವುದಕ್ಕೆ ಸಂತೋಷಗೊಂಡಿದ್ದೇನೆ, ಇದು ಅವನಿಗೆ ಭವಿಷ್ಯದಲ್ಲಿ ಮತ್ತಷ್ಟು ಉಪಕಾರ ಮಾಡುವ ಗುಣವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತದೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.