ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ʻಆರ್‌ಸಿಬಿಗೆ ಎರಡನೇ ಟ್ರೋಫಿʼ-ವಿರಾಟ್‌ ಕೊಹ್ಲಿ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ಆಧುನಿಕ ಕ್ರಿಕೆಟ್‌ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯ ಬಗ್ಗೆ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ವಿರಾಟ್‌ ಕೊಹ್ಲಿ ಆರ್‌ಸಿಬಿಗೆ ಸತತ ಎರಡನೇ ಟ್ರೋಫಿ ಗೆದ್ದುಕೊಡುವ ಇಂಗಿತವನ್ನು ಹೊಂದಿದ್ದಾರೆಂದು ಪಠಾಣ್‌ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ವಿರಾಟ್‌ ಕೊಹ್ಲಿ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ. -

Profile
Ramesh Kote Mar 12, 2026 8:42 PM

ನವದೆಹಲಿ: ಆಧುನಿಕ ಕ್ರಿಕೆಟ್‌ ದಿಗ್ಗಜ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸತತ ಎರಡು ಟ್ರೋಫಿಯನ್ನು ಗೆದ್ದುಕೊಡುವ ಉತ್ಸಾಹದೊಂದಿಗೆ ಕಣಕ್ಕೆ ಇಳಿಯಲಿದ್ದಾರೆಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಅಭಿಪ್ರಾಯ ಪಟ್ಟಿದ್ದಾರೆ. 2025ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಲಿಸಿ ಚೊಚ್ಚಲ ಕಿರೀಟವನ್ನು ಕಿರೀಟ ಜಯಿಸಿದಾಗ, ಕೊಹ್ಲಿ ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದ್ದರು.

ಆರ್‌ಸಿಬಿ ತಂಡದೊಂದಿಗೆ ಉದ್ಘಾಟನಾ ಆವೃತ್ತಿಯಿಂದಲೇ ಇದ್ದ ವಿರಾಟ್‌ ಕೊಹ್ಲಿಗೆ ಚೊಚ್ಚಲ ಕಪ್‌ 18 ವರ್ಷಗಳು ಬೇಕಾಯಿತು. ಅಂತಿಮವಾಗಿ 2025ರಲ್ಲಿ ಆ ಕನಸು ನನಸಾಯಿತು. ಈ ಜಯದ ನಂತರ, ಕೊಹ್ಲಿ ಇದೇ ಉತ್ಸಾಹ ಮತ್ತು ತವಕದೊಂದಿಗೆ ಹೊಸ ಸೀಸನ್‌ಗೆ ಪ್ರವೇಶಿಸಿ, ಹಿಂದಿನ ವರ್ಷದ ಯಶಸ್ಸನ್ನು ಪುನರಾವರ್ತಿಸಲು ಪ್ರಯತ್ನಿಸಲಿದ್ದಾರೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

RCB IPL 2026 Schedule: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಳಾಪಟ್ಟಿ!

“ವಿರಾಟ್ ಕೊಹ್ಲಿಯೊಳಗಿನ ಹಸಿವು ಸದಾ ಇರುತ್ತದೆ. ಕಳೆದ ಸೀಸನ್‌ನಲ್ಲಿ ಐಪಿಎಲ್ ಟ್ರೋಫಿ ಗೆದ್ದ ನಂತರ ಅದು ಇನ್ನಷ್ಟು ಹೆಚ್ಚಾಗಿರುತ್ತದೆ. ಅವರು ಸತತವಾಗಿ ಎರಡು ಐಪಿಎಲ್ ಕಿರೀಟಗಳನ್ನು ಗೆಲ್ಲಲು ಬಯಸುತ್ತಾರೆ. ಗೆಲ್ಲಬೇಕೆಂಬ ಮತ್ತು ಪ್ರಭಾವ ಬೀರುವ ಅವರ ಮನೋಭಾವ ಯಾವಾಗಲೂ ಇದ್ದೇ ಇರುತ್ತದೆ. ಭಾರತ ಪರ ಆಡಿದಾಗಲೂ ನಾವು ಅದನ್ನು ಕಂಡಿದ್ದೇವೆ, ವಿಶೇಷವಾಗಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗಳಲ್ಲಿ ನಾವು ಇದನ್ನು ನೋಡಿದ್ದೇವೆ. ಪ್ರತಿಯೊಂದು ಪಂದ್ಯದಲ್ಲೂ ಪ್ರಭಾವ ಬೀರುವ ಒಲವು ಅವರಲ್ಲಿ ಕಾಣಿಸುತ್ತದೆ. ಈ ಸೀಸನ್‌ನಲ್ಲಿ ಕೂಡ ಅವರು ಅದೇ ಉತ್ಸಾಹದೊಂದಿಗೆ ಮರಳುತ್ತಾರೆ ಮತ್ತು ಮತ್ತೊಮ್ಮೆ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತಾರೆ,” ಎಂದು ಪಠಾಣ್ ಜಿಯೋಹಾಟ್‌ಸ್ಟಾರ್‌ಗೆ ತಿಳಿಸಿದ್ದಾರೆ.

ಇನ್ನೊಂದೆಡೆ, 2026ರ ಐಪಿಎಲ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಟೂರ್ನಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಮುಂಚಿತವಾಗಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಕೊಹ್ಲಿ ವಿವಿಧ ರೀತಿಯ ಶಾಟ್‌ಗಳನ್ನು ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ — ಆಕ್ರಮಣಕಾರಿ ಲಾಫ್ಟೆಡ್ ಶಾಟ್‌ಗಳಿಂದ ಹಿಡಿದು ಸಾಂಪ್ರದಾಯಿಕ ಡ್ರೈವ್‌ಗಳವರೆಗೆ ಹಲವು ಶಾಟ್‌ಗಳನ್ನು ಅವರು ಅಭ್ಯಾಸ ಮಾಡಿದ್ದಾರೆ.

IPL 2026 Schedule: ಐಪಿಎಲ್‌ 19ನೇ ಆವೃತ್ತಿಯ ಮೊದಲ ಅವಧಿಗೆ ವೇಳಾಪಟ್ಟಿ ಪ್ರಕಟ, ಮೊದಲ ಪಂದ್ಯ RCB vs SRH!

2026ರ ಐಪಿಎಲ್ ಆರಂಭ ಯಾವಾಗ?

2026ರ ಐಪಿಎಲ್ ಆರಂಭಿಕ ಪಂದ್ಯ ಮಾರ್ಚ್ 28ರಂದು ನಡೆಯಲಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ.

ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡ, ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಲೀಗ್ ಪಂದ್ಯಗಳನ್ನು ಆಡಲಿದೆ. ಇನ್ನುಳಿದ ಎರಡು ತವರು ಪಂದ್ಯಗಳು ರಾಯ್ಪುರದಲ್ಲಿರುವ ಶಾಹೀದ್ ವೀರ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಅಂಗಣವನ್ನು ಎರಡನೇ ತವರು ಮೈದಾನವಾಗಿ ಬಳಸಲಿದ್ದು, ಅಲ್ಲಿ ಎರಡು ಲೀಗ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.