ಪ್ರಿಯಕರನೊಂದಿಗೆ ಓಡಿಹೋದ ಮಹಿಳೆಯನ್ನು ಹುಡುಕಿ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ ಪತಿರಾಯ! ಸಿನಿಮಾ ಕಥೆಯನ್ನೂ ಮೀರಿಸುವ ಘಟನೆ ಇದು
Viral News: ಸುಮಾರು ಒಂದು ವರ್ಷದ ಹಿಂದೆ ಪಿಆರ್‌ಡಿ ಜವಾನನೊಂದಿಗೆ ಮದುವೆಯಾಗಿದ್ದ ಮಹಿಳೆ, ನಾಲ್ಕು ದಿನಗಳ ಹಿಂದೆ ತನ್ನ ಮನೆಯನ್ನು ತೊರೆದು ಮಾಜಿ ಪ್ರೇಮಿಯೊಂದಿಗೆ ಓಡಿ ಹೋಗಿದ್ದಳು. ನಂತರ ಆಕೆಯನ್ನು ಪೊಲೀಸರ ಸಹಾಯದಿಂದ ಪತ್ತೆಹಚ್ಚಿದ ಗಂಡ, ಪ್ರೇಮಿಯೊಂದಿಗೆ ವಿವಾಹ ಮಾಡಿದ್ದಾನೆ.
ಉತ್ತರ ಪ್ರದೇಶದಲ್ಲಿ ಪ್ರಿಯಕರನಿಗೆ ಪತ್ನಿಯನ್ನು ಧಾರೆ ಎರೆದ ಪತಿ -
ಲಖನೌ, ಸೆ. 12: ಯುವಕ-ಯುವತಿಗೆ ಮನೆಯವರು ಸೇರಿ ಮದುವೆ ಮಾಡುತ್ತಾರೆ. ಆದರೆ ವಧು ಬೇರೊಬ್ಬನನ್ನು ಪ್ರೀತಿಸುತ್ತಿರುತ್ತಾಳೆ. ಮದುವೆಯಾದ ಬಳಿಕ ಈ ವಿಚಾರವನ್ನು ತನ್ನ ಗಂಡನಿಗೆ ತಿಳಿಸುತ್ತಾಳೆ. ಪ್ರಿಯಕರನೊಂದಿಗೇ ಬಾಳುವುದಾಗಿ ಹೇಳುತ್ತಾಳೆ. ಇದಕ್ಕೆ ಗಂಡ ಸಮ್ಮತಿಸುತ್ತಾನೆ. ಇಂತಹ ಕಥೆಯನ್ನು ನೀವು ಸಿನಿಮಾದಲ್ಲಿ ಕೇಳಿರುತ್ತೀರಿ. ಆದರೆ ಇಲ್ಲೊಂದೆಡೆ ನಿಜ ಜೀವನದಲ್ಲೂ ಇಂತಹದ್ದೇ ಅಚ್ಚರಿಯ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ (Uttar Pradesh) ಲಖನೌನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಆಕೆಯ ಪ್ರಿಯಕರನಿಗೆ ಧಾರೆ ಎರೆದು ಕೊಟ್ಟಿದ್ದಾನೆ (viral news). ಆಕೆ ಪ್ರಿಯಕರನನ್ನು ತೊರೆದು ಮರಳಿ ಬರಲು ನಿರಾಕರಿಸಿದಾಗ, ಪತಿಯೇ ಮುಂದೆ ನಿಂತು ಸಹಾಯ ಮಾಡಿದ್ದಾನೆ.
ಸುಮಾರು ಒಂದು ವರ್ಷದ ಹಿಂದೆ ಪಿಆರ್‌ಡಿ ಜವಾನನೊಂದಿಗೆ ಮದುವೆಯಾಗಿದ್ದ ಆ ಮಹಿಳೆಯು ನಾಲ್ಕು ದಿನಗಳ ಹಿಂದೆ ತನ್ನ ಪತಿ ಮನೆಯನ್ನು ತೊರೆದು ಪ್ರೇಮಿಯೊಂದಿಗೆ ಹರ್ದೋಯ್‌ಗೆ ತೆರಳಿದ್ದಳು ಎನ್ನಲಾಗಿದೆ. ಕುಟುಂಬದವರು ನಾಪತ್ತೆ ದೂರು ದಾಖಲಿಸಿದ ನಂತರ ಪೊಲೀಸರು ಆಕೆ ಪ್ರಿಯಕರನೊಂದಿಗೆ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಜೋಡಿಯನ್ನು ಪೊಲೀಸರು ಮರಳಿ ಕರೆತಂದರು. ಅವರ ಕುಟುಂಬಗಳ ಸಮ್ಮುಖದಲ್ಲಿ ಚರ್ಚೆ ನಡೆಸಿದರು. ಈ ವೇಳೆ ಮಹಿಳೆಯು, ತನ್ನ ಪತಿಯೊಂದಿಗೆ ವಾಸಿಸಲು ಬಯಸುವುದಿಲ್ಲ ಪ್ರೇಮಿಯೊಂದಿಗೆ ಇರಲು ಬಯಸುವುದಾಗಿ ತಿಳಿಸಿದ್ದಾಳೆ. ಮಹಿಳೆ ಮತ್ತು ಆಕೆಯ ಪ್ರೇಮಿ ಒಂದೇ ಶಾಲೆಯಲ್ಲಿ ಓದಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದ ಒತ್ತಡದಿಂದಾಗಿ ಆಕೆ ಪಿಆರ್‌ಡಿ ಜವಾನನನ್ನು ಮದುವೆಯಾಗಿದ್ದಳು. ವಿವಾಹದ ಬಳಿಕವೂ ಪ್ರಿಯಕರನೊಂದಿಗೆ ಸಂಪರ್ಕವಿತ್ತು ಎನ್ನುವುದು ಮಾತುಕತೆ ವೇಳೆ ಗೊತ್ತಾಯ್ತು.
ಸರ್ಕಾರಿ ಬಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರಿಬ್ಬರ ಮಾರಾಮಾರಿ
ಕೊನೆಗೆ ಆಕೆಯ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ ಪತಿಯು ಪ್ರಿಯಕರನೊಂದಿಗೆ ತೆರಳಲು ಸಮ್ಮತಿ ಸೂಚಿಸಿದ್ದಾನೆ. ಎರಡೂ ಕಡೆಯವರ ಒಪ್ಪಿಗೆಯೊಂದಿಗೆ, ಮಹಿಳೆ ಮತ್ತು ಆಕೆಯ ಪ್ರೇಮಿ ಸ್ಥಳೀಯ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ಮಹಿಳೆ ಮತ್ತು ಆಕೆಯ ಪ್ರಿಯಕರ ಇಬ್ಬರೂ ಮಲಿಹಾಬಾದ್ ಪ್ರದೇಶದ ನಿವಾಸಿಗಳು. ಸದ್ಯ, ಆ ಪ್ರದೇಶದಲ್ಲಿ ಇವರಿಬ್ಬರ ಸುದ್ದಿಯೇ ಹರಿದಾಡುತ್ತಿದೆ. ಪತ್ನಿಯ ಆಯ್ಕೆಯನ್ನು ಗೌರವಿಸಿ, ಪತಿ ತೆಗೆದುಕೊಂಡ ನಿರ್ಧಾರವು ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.