Dr T N Vasudevamurthy Column: ಕೃತಕ ಬುದ್ಧಿಮತ್ತೆ: ದ್ವಿತೀಯ ದರ್ಜೆಯ ಸ್ವೋಪಜ್ಞತೆ
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ಮೂಲಕ, ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸ ಲಾದ ಒಂದು ಕೃತಿಯನ್ನು ಬಿಡುಗಡೆ ಮಾಡಲಾಯಿತು; ಈ ಕೃತಿಯು ಎಐನಿಂದ ಅನುವಾದಗೊಂಡ ಪ್ರಪ್ರಥಮ ಭಾರತೀಯ ಪುಸ್ತಕವೆಂದು ಪ್ರಚಾರ ಪಡೆಯಿತು. ದೆಹಲಿಯಲ್ಲಿ ನಡೆದ ಎಐ ಸಮಾವೇಶದಲ್ಲೂ ಸಹ ಈ ಎಐ ಅನುವಾದಿತ ಕೃತಿ ಸದ್ದು ಮಾಡಿತು.
-
ಡಾ.ಟಿ.ಎನ್.ವಾಸುದೇವ ಮೂರ್ತಿ
ಕುವೆಂಪು ‘ನೀನೇರಬಲ್ಲೆಯಾ ನಾನೇರುವೆ ತ್ತರಕೆ? / ನೀ ಹಾರಬಲ್ಲೆಯಾ ನಾ ಹಾರು ವಗಲಕ್ಕೆ? / ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ? / ಇಲ್ಲ? ನಡೆ, ದೂರ ಸರಿ! ಹೌದು? ಬಾ, ಹತ್ತಿರಕೆ!’ ಎಂಬ ಸಾಲುಗಳನ್ನು ಬರೆದಿದ್ದರು. ನಮ್ಮಲ್ಲಿ ಬಹುತೇಕರು ಭಾವಿಸುವಂತೆ ಇದು ಕುವೆಂಪು ಗರ್ವದಿಂದ ನುಡಿದ ಮಾತುಗಳಲ್ಲ. ಕೃತ್ತಿಕೆ ಕವನ ಸಂಕಲನದಲ್ಲಿ ಬರುವ “ನನ್ನ ಕವಿತೆ ತನ್ನ ವಿಮರ್ಶಕನಿಗೆ" ಎಂಬ ಪದ್ಯದ ಸಾಲುಗಳಿವು. ಒಂದು ಕವಿತೆ ತನ್ನ ವಿಮರ್ಶಕನೊಂದಿಗೆ ನಡೆಸುವ ಸಂವಾದ ವನ್ನು ಕಲ್ಪಿಸಿಕೊಂಡು ಕುವೆಂಪು ಈ ಪದ್ಯವನ್ನು ರಚಿಸಿದ್ದರು. ಅಂದು ತೀಕ್ಷ್ಣವಾದ ವಿಮರ್ಶೆ ಕೋಮಲವಾದ ಕವಿತ್ವದ ಪಾಲಿಗೆ ಕುಠಾರಪ್ರಾಯವಾಗಿತ್ತು. ಸದ್ಯದ ಸನ್ನಿವೇಶದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕವಿತ್ವಕ್ಕೆ ಮತ್ತು ಒಟ್ಟಾರೆ ಸಾಹಿತ್ಯ ರಚನೆ ಹಾಗು ವಿಕಾಸಕ್ಕೆ ಅಂತಹುದೊಂದು ಗಂಡಾಂತರವಾಗಿ ಪರಿಣಮಿಸಿದೆ. ಆದ್ದರಿಂದ ಕುವೆಂಪುರ ಅಂದಿನ ಆ ಪದ್ಯ ಇಂದಿನ ಕೃತಕ ಬುದ್ಧಿಮತ್ತೆಯೊಂದಿಗೆ ನಡೆಸುತ್ತಿರುವ ಸಂವಾದ ಎಂಬಂತೆಯೂ ನೋಡಬಹುದಾಗಿದೆ.
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ಮೂಲಕ, ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸ ಲಾದ ಒಂದು ಕೃತಿಯನ್ನು ಬಿಡುಗಡೆ ಮಾಡಲಾಯಿತು; ಈ ಕೃತಿಯು ಎಐನಿಂದ ಅನುವಾದಗೊಂಡ ಪ್ರಪ್ರಥಮ ಭಾರತೀಯ ಪುಸ್ತಕವೆಂದು ಪ್ರಚಾರ ಪಡೆಯಿತು. ದೆಹಲಿಯಲ್ಲಿ ನಡೆದ ಎಐ ಸಮಾವೇಶದಲ್ಲೂ ಸಹ ಈ ಎಐ ಅನುವಾದಿತ ಕೃತಿ ಸದ್ದು ಮಾಡಿತು.
ಗೌಹರ್ ಜಾನ್ ಭಾರತೀಯ ಸಂಗೀತ ಕ್ಷೇತ್ರದ ಅಪೂರ್ವ ಗಾಯಕಿಯರಲ್ಲಿ ಒಬ್ಬಳು. ಈಕೆ ಗ್ರಾಮಾ ಫೋನ್‌ನಲ್ಲಿ ಹಾಡಿದ ಮೊತ್ತ ಮೊದಲ ಭಾರತೀಯ ಸಂಗೀತಗಾರ್ತಿ. ಸಾಂಪ್ರ ದಾಯಿಕ ಹಾಡುಗಾರಿಕೆಯನ್ನು ಪ್ರಪ್ರಥಮ ಬಾರಿಗೆ ತಂತ್ರಜ್ಞಾನದ ಅಳವಡಿಸಲು ನೆರವಾದ ಈಕೆಯ ಜೀವನ ಚರಿತ್ರೆಯೂ ಸಹ ಪ್ರಪ್ರಥಮವಾಗಿ ‘ಎಐ ತಂತ್ರಜ್ಞಾನ’ದ ಮೂಲಕ ಅನುವಾದಗೊಂಡಿರುವುದು ಕಾಕತಾಳೀಯವೇ ಇರಬಹುದು.
ಒಂದಂತೂ ನಿಜ: ಸಾಹಿತ್ಯ ವಲಯದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಅನುವಾದ ಕ್ಷೇತ್ರದಲ್ಲಿ, ಕೃತಕ ಬುದ್ಧಿಮತ್ತೆ ಸಂಚಲನ ಮೂಡಿಸಿದೆ. ಜೊತೆಗೆ ಭವಿಷ್ಯದ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳು, ಅನುವಾದಕರು ಗೌಣವಾಗಿ ಬಿಡುವರೇ ಎಂಬ ಸಣ್ಣ ಆತಂಕವನ್ನೂ ಸಹ ಸೃಷ್ಟಿಸಿದೆ.
“ಮನುಷ್ಯರು ಅನುಕರಣಾ ಜೀವಿಗಳು" ಎಂದು ಅರಿಸ್ಟಾಟಲ್ ಹೇಳಿದ್ದ. ಮನುಷ್ಯರು ಅನುಕರಿಸಿ ಕಲಿಯುತ್ತಾರೆ ನಿಜ. ಆದರೆ ಮನುಷ್ಯ ಸಂವೇದನೆಯಲ್ಲಿ ಅನುಕರಣೆಯ ಜೊತೆಗೆ ಒಂದಷ್ಟು ಸ್ವೋಪಜ್ಞತೆ, ವ್ಯಕ್ತಿವಿಶಿಷ್ಟತೆ, ಜೀವನಾನುಭವಗಳೂ ಸಹ ಬೆರೆತಿರುತ್ತವೆ. ಆದ್ದರಿಂದಲೇ ಮನುಷ್ಯರನ್ನು ಸಂಪೂರ್ಣವಾಗಿ ಅನುಕರಣಾ ಜೀವಿಗಳೆನ್ನಲು ಬರುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆಗೆ ಅರಿಸ್ಟಾಟಲನ ಮಾತನ್ನು ಯಥಾರ್ಥವಾಗಿ, ಕರಾರುವಾಕ್ಕಾಗಿ, ಅನ್ವಯಿಸಬಹುದಾಗಿದೆ.
ಇದನ್ನೂ ಓದಿ: ಭಾರತೀಯ ಕಾಲೇಜುಗಳಲ್ಲಿ ಉಚಿತ AI ಪ್ರಮಾಣೀಕರಣಗಳನ್ನು ನೀಡಲು AI CERTs® ‘ಮಿಷನ್ AI-ಸಕ್ಷಮ್’ ಎಂಬ ಉಪಕ್ರಮ ಪ್ರಾರಂಭ
ಏಕೆಂದರೆ ಕೃತಕ ಬುದ್ಧಿಮತ್ತೆಯಲ್ಲಿ ಸ್ವೋಪಜ್ಞತೆ, ವ್ಯಕ್ತಿವಿಶಿಷ್ಟತೆ, ಜೀವನಾನುಭವಗಳು ಗೈರುಹಾಜರಾಗಿರುತ್ತದೆ. ಕೃತಕ ಬುದ್ಧಿ ಮತ್ತೆಯು ಜೀವನಾನುಭವ, ಸ್ವೋಪಜ್ಞತೆ ಮುಂತಾದ ಪದಗಳಿಗೆ ಪಾಂಡಿತ್ಯ ಪೂರ್ಣವಾದ ಹಲವು ವಿವರಣೆ, ವ್ಯಾಖ್ಯಾನಗಳನ್ನು ನೀಡ ಬಲ್ಲುದೇ ಪಾಂಡಿತ್ಯವನ್ನು, ಮಾಹಿತಿಯನ್ನು ಪುನರುಚ್ಚರಿಸಿದರೆ ಅದು ಅರಣ್ಯ ರೋದನವಾಗುತ್ತದೆ ಎಂದು ನಮ್ಮ ಪುರಾತನರು ಹೇಳಿದ್ದರು (ಆಮ್ನಾಯಾಭ್ಯ ಸನಾನಿ ಅರಣ್ಯ ರುದಿತಮ್ ವೇದವ್ರತಾನಿ ಅನ್ವಹಮ್). ಕಾವ್ಯರಚನೆ ಮತ್ತು ವ್ಯಕ್ತಿತ್ವ ನಿರಸನಗಳು ಕವಿಯಲ್ಲಿ ಸಮಾನಾಂತರವಾಗಿ ನಡೆಯುವ ಎರಡು ಪ್ರಕ್ರಿಯೆಗಳಾಗಿವೆ.
ಕಾವ್ಯ ವ್ಯಕ್ತಿಗತ ಅನುಭವವನ್ನು ವಿಶ್ವಾತ್ಮಕ ಅನುಭವವನ್ನಾಗಿಸುತ್ತದೆ. ಹೀಗೆ ಕಾವ್ಯ ರಚನೆಯ ಮೂಲಕ ಕವಿ ಋಷಿಯ ಮಟ್ಟಕ್ಕೇರುತ್ತಾನೆ. ಆದರೆ ಎಐ ನಲ್ಲಿ ವ್ಯಕ್ತಿಯೇ ಇರುವುದಿಲ್ಲವಾದ ಕಾರಣ ಅಲ್ಲಿ ವ್ಯಕ್ತಿವಿಶಿಷ್ಟತೆ ಹಾಗು ವ್ಯಕ್ತಿತ್ವ ನಿರಸನಗಳ ಪ್ರಶ್ನೆ ಉದ್ಭವಿಸುವುದಿಲ್ಲ. ಎಐನಲ್ಲಿ ಮಾಹಿತಿ ಅಥವಾ ಪಾಂಡಿತ್ಯವಷ್ಟೇ ಇರುತ್ತದೆ; ವಿಶೇಷ ವೆಂದರೆ, ಬಳಕೆ ಪಾಂಡಿತ್ಯವೂ ಹೆಚ್ಚುತ್ತಾ ಹೋಗುತ್ತದೆ.
ವ್ಯಕ್ತಿ ವಿಶಿಷ್ಟತೆ
ವಿನಾ ಅದರ ಜೀವಂತ ಉಪಸ್ಥಿತಿ ಅದರಲ್ಲಿರುವುದಿಲ್ಲ. ಎಐ ತಂತ್ರಜ್ಞಾನಕ್ಕೆ ಪಂಪನಿಂದ ಹಿಡಿದು 21ನೇ ಶತಮಾನದ ಕವಿಗಳವರೆಗೆ ಎಲ್ಲ ಕವಿ-ಕೃತಿಗಳೂ ಗೊತ್ತಿರುತ್ತದೆ, ಆ ಕವಿಗಳ ಕಾವ್ಯ ಪ್ರಯೋಗಗಳು, ಅವರ ಕಾವ್ಯದ ವೈಖರಿ ವಿನ್ಯಾಸಗಳು, ಅವರು ಕಾವ್ಯದಲ್ಲಿ ಬಳಸುವ ಉಪಮೆ, ಪ್ರತಿಮೆ, ರೂಪಕಗಳು ಗೊತ್ತಿರುತ್ತವೆ.
ಯಾವ ಪ್ರಾಧ್ಯಾಪಕನ ಬಳಿಯೂ ಇರದಷ್ಟು ಮಾಹಿತಿ ಸಾಮಗ್ರಿಯನ್ನು ಅದು ಹೊಂದಿರುತ್ತದೆ. ಮಾತ್ರವಲ್ಲ, ಆ ಸಾಮಗ್ರಿಗಳನ್ನೇ ಬಳಸಿಕೊಂಡು, ತನ್ನ ಶಕ್ತಿಗೆ ತಕ್ಕಂತೆ ಅವನ್ನೆಲ್ಲ ಔಚಿತ್ಯಪೂರ್ಣವಾಗಿ ಸಮನ್ವಯಿಸಿ ಹೊಸ ಪದ್ಯ ವನ್ನೋ, ಪ್ರಾಸವನ್ನೋ ಹೆಣೆಯುವ ಸಾಮರ್ಥ್ಯವೂ ಅದಕ್ಕಿರುತ್ತದೆ. ಆದರೆ ಅವುಗಳೆಲ್ಲವನ್ನೂ ಬಳಸಿ ಅದಕ್ಕೆ ಹೊಸತೇನನ್ನಾದರೂ ಸೇರಿಸಲು ತಂತ್ರಜ್ಞಾನಕ್ಕೆ ಸಾಧ್ಯವೇ ಎಂಬ ಪ್ರಶ್ನೆಗೆ ನಿರಾಶಾ ದಾಯಕವಾದ ಉತ್ತರವೇ ಸಿಗುತ್ತದೆ. ಆ ಹೊಸತನ ಜೀವಂತ ಕವಿಯಿಂದ ಮಾತ್ರ ಬರಲು ಸಾಧ್ಯ. ಆದ್ದರಿಂದಲೇ ನಮ್ಮ ಕಾವ್ಯ ಮೀಮಾಂಸಕರು ಪಾಂಡಿತ್ಯವನ್ನು ಜರಿದದ್ದು ಮತ್ತು ಪ್ರತಿಭಾಶಕ್ತಿ ಯನ್ನು ಹೊಗಳಿದ್ದು (ಪ್ರಜ್ಞಾ ನವನವೋ ನ್ಮೇಷಶಾಲಿನೀ ಪ್ರತಿಭಾಮತಾ (ಪ್ರತಿಭೆ ಎಂಬುದು ಸದಾಕಾಲ ಹೊಸತನ್ನು ಉಂಟು ಮಾಡುವ ಪ್ರಜ್ಞೆಯಾಗಿದೆ) - ಮಮ್ಮಟ, ಕಾವ್ಯಪ್ರಕಾಶ). ಪ್ರತಿ ಕ್ಷಣವೂ ಹೊಸತನ್ನು ಸೃಷ್ಟಿಸುವ ಚೈತನ್ಯ ವನ್ನು ಪ್ರತಿಭೆ ಎಂದೂ, ಇದ್ದುದನ್ನೇ ಮತ್ತೆ ಮತ್ತೆ ಪುನರುಚ್ಚರಿಸುವುದನ್ನು ಪಾಂಡಿತ್ಯವೆಂದೂ ಕರೆಯುತ್ತಾರೆ.
ಸ್ವೋಪಜ್ಞತೆ, ಹೊಸತನ ಇಲ್ಲದೇ ಕೇವಲ ಹೆಚ್ಚಾದಂತೆ ಅದರ ಟಿ ಎಸ್ ಎಲಿಯೆಟ್ “ಪರಂಪರೆ ಮತ್ತು ವ್ಯಕ್ತಿಪ್ರತಿಭೆ" ಎಂಬ ತನ್ನ ಪ್ರಸಿದ್ಧವಾದ ಲೇಖನದಲ್ಲಿ ಪರಂಪರೆ ಕವಿಪ್ರತಿಭೆಯೊಳಗೆ ಪಡೆಮೂಡುವುದನ್ನು ಹಾಗೆ ಪಡೆಮೂಡಿದುದನ್ನು ಕವಿಪ್ರತಿಭೆ ಮುರಿದು ಹೊಸತನ್ನು ಕಟ್ಟುವುದನ್ನು ಕುರಿತು ವಿವರಿಸುತ್ತಾನೆ. ಒಂದು ವ್ಯಕ್ತಿಗತ ಅನುಭವ ವನ್ನು ಸಾರ್ವತ್ರಿಕ ಅನುಭವವನ್ನಾಗಿಸುವ ಕೌಶಲ್ಯವನ್ನು ವ್ಯಕ್ತಿ ವಿಶಿಷ್ಟತೆ ಎಂದು ಆ ಲೇಖನದಲ್ಲಿ ಬರೆಯುತ್ತಾನೆ.
ಈ ಪ್ರಕ್ರಿಯೆ ಒಂದು ಸಾಹಿತ್ಯ ಪರಂಪರೆಗೆ ಕಾಲಕಾಲಕ್ಕೆ ಜೀವದಾನ ಮಾಡುತ್ತಿರುತ್ತದೆ. ಪಂಪನ ಆದಿಪುರಾಣದಲ್ಲಿ ಒಂದು ಕಥೆ ಇದೆ. ರಾಜನೊಬ್ಬ ಒಂದು ಮುಂಜಾನೆ ಎದ್ದು ಕನ್ನಡಿಯಲ್ಲಿ ಮುಖ ನೋಡಿಕೊಂಡ. ಕಿವಿಯ ಹತ್ತಿರ ಬಾಗಿದ ಒಂದು ಬಿಳಿಯ ಕೂದಲು ಕಾಣಿಸಿದಾಗ ಒಡನೆಯೇ ಅವನಲ್ಲಿ ವೈರಾಗ್ಯ ಮೂಡಿ ಅವನು ತಪಸ್ಸಿಗೆ ತೆರಳಿದ. ಆ ಬಿಳಿಯ ಕೂದಲು ಅವನ ಕವಿಯಲ್ಲಿ “ನಿನಗೆ ವಯಸ್ಸಾಗಿದೆ, ಶರೀರದ ನಶ್ವರತೆಯನ್ನು ಇನ್ನಾದರೂ ಧ್ಯಾನಿಸು" ಎಂದು ಉಪದೇಶಿಸಿದಂತೆ ಅವನಿಗೆ ಭಾಸವಾಯಿತಂತೆ. ಈ ಕಲ್ಪನೆ ಕವಿಯ ಸ್ವೋಪಜ್ಞತೆಯಾಗಿದೆ. ಕವಿ ಗೋಪಾಲ ಕೃಷ್ಣ ಅಡಿಗರು “ಅನ್ಯರೊರೆದುದನೆ ಬರೆದುದನೆ ಬರೆಬರೆದು ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ" (ಭಾವಗೀತೆ) ಎಂದು ಬರೆದಿದ್ದಾರೆ.
ಎಐಗಳು ಅನ್ಯರು ಒರೆದುದನ್ನು, ಬರೆದುದನ್ನು ಬೇರೆ ಬೇರೆ ರೀತಿಗಳಲ್ಲಿ ಸಂಯೋಜಿಸಿ ಮತ್ತೆ ಮತ್ತೆ ಬರೆಯಬಲ್ಲವು. ಆದರೆ ಕವಿ ಅಡಿಗರಿಗೆ ಅನಿಸಿದಂತೆ ಅವಕ್ಕೆ “ಬಿನ್ನವಾಗಿದೆ ಮನವು" ಎಂದೆನಿಸದು. ತನ್ನ ಒಳಗನ್ನು ತೆರೆದು ಅದನ್ನು ಬಣ್ಣಿಸುವ ಪನ್ನತಿಕೆ ಬರುವನಕ ತನ್ನ ಬಾಳು ನರಕವೆಂಬ ವಿಷಾದ ಯಾವ ಕಾಲಕ್ಕೂ ಅದಕ್ಕೆ ಮೂಡದು. ಅವೆಲ್ಲ ಕವಿ ಪ್ರತಿಭೆಗೆ ಸಂಬಂಧಿಸಿದ ಭಾವ ವಿಕಲ್ಪಗಳಾಗಿವೆ.
ತಂತ್ರಜ್ಞಾನವು ಹೆಚ್ಚೆಂದರೆ ಇಂಥದೊಂದು ಭಾವವಿಕಲ್ಪದ ಮಾಹಿತಿ ಅದಾಗಲೇ ತನ್ನ ಬಳಿ ಇದ್ದಲ್ಲಿ ಅದನ್ನು ಬಳಸಿಕೊಳ್ಳಬಹುದು. ಆದರೆ ಅಂತಹ ಮಾಹಿತಿ ಎಂದಿಗೂ ದ್ವಿತೀಯ ದರ್ಜೆಯ ಸ್ವೋಪಜ್ಞತೆಯಾಗಿರುತ್ತದೆ. ಎಐಗಳನ್ನು ಕವಿಪ್ರತಿಭೆಯ ಪರೋಪ ಜೀವಿ ಎನ್ನಬಹುದೇ ವಿನಾ ಕವಿಪ್ರತಿಭೆಗೆ ಪರ್ಯಾಯವೆಂದಾಗಲಿ, ಪ್ರತಿಸ್ಪರ್ಧಿ ಎಂದಾಗಲಿ ಕರೆಯಲು ಸಾಧ್ಯವಿಲ್ಲ.
ಒಟಿಟಿಗೆ ಹೋಲಿಕೆ
ಕೃತಕ ಬುದ್ಧಿಮತ್ತೆಯ ಬಗ್ಗೆ ವಿಶೇಷ ಪರಿಣತಿ ಹಾಗು ಭರವಸೆ ಹೊಂದಿರುವ ಕನ್ನಡದ ಕೆಲವು ಸಾಹಿತಿಗಳು “ಎಐ ನೆರವಿನಿಂದ ಸಮಸ್ತ ವಿಶ್ವಸಾಹಿತ್ಯವನ್ನೂ ಕನ್ನಡದಲ್ಲೇ ಓದುವ ಕಾಲ ಇಷ್ಟರಲ್ಲೇ ಬರಬಹುದು. ಇಂದು ಹೇಗೆ ಓಟಿಟಿಯಲ್ಲಿ ಎಲ್ಲ ಭಾಷೆಗಳ ಸಿನಿಮಾ ಗಳನ್ನೂ ಕನ್ನಡದಲ್ಲೇ ನೋಡುವೆವೋ ಹಾಗೆ ಅದೂ ಸಹ ಸಾಧ್ಯವಾಗುತ್ತದೆ" ಎನ್ನುತ್ತಿರು ತ್ತಾರೆ.
ಸಿನಿಮಾಗಳು ಹಾಡು, ಸಂಗೀತ, ದೃಶ್ಯ, ತಂತ್ರಜ್ಞಾನ, ನಟನೆ ಹೀಗೆ ಪ್ರೇಕ್ಷಕರನ್ನು ತಲುಪಲು ಇನ್ನೂ ಹತ್ತು ಹಲವು ಅನಂತ ಸಾಧ್ಯತೆಗಳನ್ನು ಬಳಸಿಕೊಳ್ಳುತ್ತವೆ. ಆದರೆ ಸಾಹಿತ್ಯಕ್ಕೆ ಶಬ್ದಾರ್ಥಗಳಿಂದಾಚೆಗೆ ಅನ್ಯಸಾಧ್ಯತೆ ಇಲ್ಲ, ಇರಲೂ ಬಾರದು. ‘ಕಾಂತಾರ’ದಂತಹ ಸಿನಿಮಾ ಅನ್ಯ ಭಾಷೆಗಳಿಗೆ ಡಬ್ಬಿಂಗ್ ಆದರೂ, ಗಲ್ಲಾಪೆಟ್ಟಿಗೆಯಲ್ಲಿ ಗೆದ್ದರೂ ಅನ್ಯಭಾಷಿಕ ರಿಗೆ ತುಳುನಾಡಿಗೆ ವಿಶಿಷ್ಟವಾದ ಭಾಷಾ ಸೊಗಡನ್ನು ಆಸ್ವಾದಿಸಲು ಸಾಧ್ಯವಾಗುವುದಿಲ್ಲ.
ಕಾಪಿ ಚೀಟಿ?
ಒಂದು ಸರಳವಾದ ಉದಾಹರಣೆಯೊಂದಿಗೆ ವಿವರಿಸುವುದಾದರೆ ಕೃತಕ ಬುದ್ಧಿಮತ್ತೆ ಯನ್ನು ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ ವಿದ್ಯಾರ್ಥಿಗಳು ಕದ್ದು ಮುಚ್ಚಿ ಬಳಸುವ ಚೀಟಿಗಳಿಗೆ ಹೋಲಿಸಬಹುದು. ವಿದ್ಯಾರ್ಥಿಗೆ ವಿಷಯದ ಪ್ರಾಥಮಿಕ ಜ್ಞಾನವಿದ್ದರಷ್ಟೇ ಆ ಸಣ್ಣ ಪುಟ್ಟ ಚೀಟಿಗಳಲ್ಲಿನ ಉತ್ತರವನ್ನು ಪುಟಗಟ್ಟಲೆ ವಿಸ್ತರಿಸಲು ಅವರಿಗೆ ಸಾಧ್ಯವಾಗುತ್ತದೆ. ವಿಷಯ ಜ್ಞಾನವೇ ಇಲ್ಲದ, ಪ್ರಶ್ನೆಗಳೇ ಅರ್ಥವಾಗದ ವಿದ್ಯಾರ್ಥಿಗಳ ಕೈಗೆ ಪಠ್ಯಪುಸ್ತಕವನ್ನೇ ಕೊಟ್ಟರೂ, ಸಿದ್ಧ ಉತ್ತರಗಳನ್ನೇ ನೀಡಿದರೂ ಅವರು ಪಾಸಾಗುವುದಿಲ್ಲ. ಇದು ನೈತಿಕವೋ ಅನೈತಿಕವೋ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಅನೈತಿಕ ಅಭ್ಯಾಸ ವಲ್ಲ ಎನ್ನುವವರುಂಟು.
ಕೆಲವು ಶಿಕ್ಷಣ ತಜ್ಞರು ತೆರೆದ ಪುಸ್ತಕ ಪರೀಕ್ಷೆ (ಓಪನ್ ಬುಕ್ ಎಕ್ಸಾಂ)ಯನ್ನು ಅನುಮೋದಿ ಸುತ್ತಾರೆ. ಭಾರತದಲ್ಲೂ ಸಿಬಿಎಸ್‌ಇಯಂತಹ ಶೈಕ್ಷಣಿಕ ಮಂಡಲಿಗಳು ಇದರ ಅನುಷ್ಠಾನ ದ ಬಗ್ಗೆ ಯೋಚಿಸುತ್ತಿದೆ. ಶಿಕ್ಷಾ, ಛಂದಸ್ಸು, ನಿರುಕ್ತ, ವ್ಯಾಕರಣ ಮುಂತಾದವು ಹೇಗೆ ಕಾವ್ಯರಚನೆಗೆ ಪರಿಕರವಾಗಿ ಒದಗಿ ಬರುತ್ತದೋ ಹಾಗೆ ಎಐ ಕೂಡ ಒಂದು ಪರಿಕರ ದಂತೆ ಒದಗಿಬರಬಹುದು.
ಅಪಾಯ ಇಲ್ಲದಿಲ್ಲ!
ಆದರೆ ಎಐ ತಂತ್ರಜ್ಞಾನದಿಂದ ಸಾಹಿತ್ಯಕ್ಷೇತ್ರಕ್ಕೆ ಅಪಾಯ ಇಲ್ಲದಿಲ್ಲ. ಮೊದಲನೆಯದಾಗಿ ನೋಡುವುದಾದರೆ, ಹಿಂದೆಲ್ಲ ನಮ್ಮ ಕವಿಗಳು ಕಾವ್ಯರಚನೆಗೆ ಮುನ್ನ ನೂರಾರು ಕಾವ್ಯ ಗಳ ಅಧ್ಯಯನ ಮಾಡಿರುತ್ತಿದ್ದರು. ಆದರೆ ಇಂದು ಕೃತಕ ಬುದ್ಧಿಮತ್ತೆ ನಮ್ಮ ಕವಿಗಳಿಗೆ ಈ ಬಗೆಯ ಪರಿಶ್ರಮವನ್ನು ನೀಗಿಸಿ ಅವರನ್ನು ‘ಕುರಿತೋದದೆಯೂ ಕಾವ್ಯಪ್ರಯೋಗ ಮತಿ’ಗಳನ್ನಾಗಿಸಿದೆ.
ಉದಾಹರಣೆಗೆ, ಕಾವ್ಯಪ್ರಯೋಜನದ ಕುರಿತೋ, ವಿದ್ಯಾರ್ಜನೆಯ ಮಹತ್ವದ ಕುರಿತೋ, ಮಹಾಭಾರತದಲ್ಲಿ ಯಾವ ಉಲ್ಲೇಖವಿದೆ ಎಂದು ತಿಳಿಯಲು ಹಿಂದಿನವರು ಇಡೀ ಮಹಾಭಾರತವನ್ನು ಅಧ್ಯಯನ ಮಾಡುತ್ತಿದ್ದರು ಅಥವಾ ಕೊನೆಯ ಪಕ್ಷ ವಿದುರನೀತಿ ಯನ್ನೋ, ಶಾಂತಿಪರ್ವ ವನ್ನೋ, ಭಗವದ್ಗೀತೆಯನ್ನೋ ಪರಿಶೀಲಿಸುತ್ತಿದ್ದರು.
ಇಂದು ಎಐ ಈ ಬಗೆಯ ಜಿಜ್ಞಾಸೆಯನ್ನು ಸುಗಮಗೊಳಿಸಿದೆ. ಸುಮ್ಮನೆ ಅಪ್ಪಣೆ (ಪ್ರಾಂಪ್ಟ್) ನೀಡಿದರೆ ಸಾಕು; ಕ್ಷಣಾರ್ಧದಲ್ಲಿ ಶ್ಲೋಕ, ಅದರರ್ಥ, ಪರ್ವ, ಅಧ್ಯಾಯ, ಶ್ಲೋಕಸಂಖ್ಯೆ ಎಲ್ಲವನ್ನೂ ನೀಡುತ್ತದೆ. ಇಂತಹ ಅನುಕೂಲವಿರುವಾಗ ವರ್ಷಗಟ್ಟಲೆ ಕುಳಿತು ಶಾಸ್ತ್ರಾ ಧ್ಯಯನ ಮಾಡುವ ಗೊಡವೆಗೆ ಯಾರು ಹೋಗುತ್ತಾರೆ? ಮುಂಬರುವ ದಿನಗಳಲ್ಲಿ ಶಾಸ್ತ್ರ ಜ್ಞಾನ ಶೂನ್ಯವಾದ ಪೀಳಿಗೆಗಳುಹುಟ್ಟಿದರೆ ಅದರೊಂದಿಗೆ ಎಐ ತಂತ್ರಜ್ಞಾನವೂ ಅವನತಿ ಯಾಗಲಿದೆ. ತಂತ್ರಜ್ಞಾನವನ್ನು ಬಳಸುವವರು ಕುಶಲರಲ್ಲದಿದ್ದಾಗ ತಂತ್ರಜ್ಞಾನದ ಬಳಕೆ, ಪ್ರಯೋಜನಗಳೂ ಸೀಮಿತವಾಗುತ್ತವೆ.
ಕೀರ್ತಿಶನಿಯ ಅಪಾಯ
ಇನ್ನು ಎರಡನೆಯದಾಗಿ ಎಐನ ಅತಿಯಾದ ಬಳಕೆಯಿಂದ ಕವಿಗಳು ತಮ್ಮ ಸಾಹಿತ್ಯವನ್ನು ಜಗತ್ತಿನ ಎಲ್ಲ ಭಾಷಿಕರೂ ಓದಬೇಕೆಂಬ ಕೀರ್ತಿಶನಿ ಹಿಡಿಸಿಕೊಳ್ಳುವ ಅಪಾಯವಿದೆ. ಆ ಉದ್ದೇಶವನ್ನು ಈಡೇರಿಸಿಕೊಳ್ಳುವ ಸಲುವಾಗಿ ಕವಿಗಳು ತಾವು ಬಳಸುವ ಭಾಷೆಯೊಂದಿಗೆ ರಾಜಿ ಮಾಡಿಕೊಳ್ಳಬಹುದು. ಉದಾಹರಣೆಗೆ, ಕನ್ನಡದ ಪ್ರಮಾಣಿತ ಭಾಷೆಯನ್ನು ಬಿಟ್ಟು, ಶುದ್ಧ ಧಾರವಾಡದ ಭಾಷಾ ಸೊಗಡಿನಲ್ಲಿ ಕಾವ್ಯ ಬರೆದರೆ ಆ ಸೊಗಡು ಸಹಜವಾಗಿಯೇ ಅನುವಾದದಲ್ಲಿ ಪ್ರತೀತವಾಗುವುದಿಲ್ಲ.
ಅಂತಹ ಕವಿಗಳು ತಮ್ಮ ಭಾಷೆಯ ವಿಶಿಷ್ಟ ಸೊಗಡು, ಪ್ರಾದೇಶಿಕ ಅನನ್ಯತೆಗಳನ್ನು ಹಾಗೆಯೇ ತಮ್ಮ ವ್ಯಕ್ತಿ ವಿಶಿಷ್ಟತೆಗಳನ್ನು ಕೀರ್ತಿಲಾಭಕ್ಕಾಗಿ ಬಲಿದಾನ ನೀಡಬಹುದು. ಖ್ಯಾತ ಜರ್ಮನ್ ತತ್ವಜ್ಞಾನಿ ಫ್ರೆಡರಿಕ್ ನೀಷೆ “ಓದುಗರು ಶ್ರೇಷ್ಠವಾದ ಕೃತಿಯನ್ನು ಆಯ್ಕೆ ಮಾಡಿಕೊಳ್ಳುವರೇ ಇಲ್ಲವೇ ಎಂಬುದು ಪ್ರಶ್ನೆಯಲ್ಲ ಬದಲಾಗಿ ಒಂದು ಶ್ರೇಷ್ಠವಾದ ಕೃತಿ ತನ್ನ ಓದುಗರನ್ನು ತಾನೇ ಆಯ್ಕೆ ಮಾಡಿಕೊಳ್ಳುತ್ತದೆ"ಎಂದಿದ್ದಾನೆ.
ಕವಿಗಳು ಭಾಷೆಯೊಂದಿಗೆ ಹೀಗೆ ರಾಜಿ ಮಾಡಿಕೊಂಡಾಗ ಕೃತಿ ತನ್ನ ಓದುಗರನ್ನು ಆಯ್ಕೆ ಮಾಡಿಕೊಳ್ಳುವ ಸತ್ವವನ್ನೇ ಕಳೆದುಕೊಳ್ಳುವ ಅಪಾಯವಿದೆ. ಕುವೆಂಪು “ನೀನೇರಬಲ್ಲೆಯಾ ನಾನೇರುವೆತ್ತರಕೆ? / ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ? / ನೀ ಮುಳುಗಬಲ್ಲೆಯಾ ನಾ ಮುಳುಗುವಾಳಕ್ಕೆ? / ಇಲ್ಲ? ನಡೆ, ದೂರಸರಿ! ಹೌದು? ಬಾ, ಹತ್ತಿರಕೆ!" ಎಂಬ ಸಾಲುಗಳನ್ನು ಬರೆದಿದ್ದರು. ನಮ್ಮಲ್ಲಿ ಬಹುತೇಕರು ಭಾವಿಸುವಂತೆ ಇದು ಕುವೆಂಪು ಗರ್ವದಿಂದ ನುಡಿದ ಮಾತುಗಳಲ್ಲ. ಕೃತ್ತಿಕೆ ಕವನ ಸಂಕಲನದಲ್ಲಿ ಬರುವ “ನನ್ನ ಕವಿತೆ ತನ್ನ ವಿಮರ್ಶಕನಿಗೆ" ಎಂಬ ಪದ್ಯದ ಸಾಲುಗಳಿವು.
ಒಂದು ಕವಿತೆ ತನ್ನ ವಿಮರ್ಶಕನೊಂದಿಗೆ ನಡೆಸುವ ಸಂವಾದವನ್ನು ಕಲ್ಪಿಸಿಕೊಂಡು ಕುವೆಂಪು ಈ ಪದ್ಯವನ್ನು ರಚಿಸಿದ್ದಾರೆ. ಅಂದು ತೀಕ್ಷ್ಣವಾದ ವಿಮರ್ಶೆ ಕೋಮಲವಾದ ಕವಿತ್ವದ ಪಾಲಿಗೆ ಕುಠಾರಪ್ರಾಯವಾಗಿತ್ತು. ಸದ್ಯದ ಸನ್ನಿವೇಶದಲ್ಲಿ ಕೃತಕ ಬುದ್ಧಿಮತ್ತೆ ಕವಿತ್ವಕ್ಕೆ ಮತ್ತು ಒಟ್ಟಾರೆ ಸಾಹಿತ್ಯ ರಚನೆ ಹಾಗು ವಿಕಾಸಕ್ಕೆ ಅಂತಹುದೊಂದು ಗಂಡಾಂತರವಾಗಿ ಪರಿಣಮಿಸಿದೆ. ಆದ್ದರಿಂದ ಕುವೆಂಪುರ ಅಂದಿನ ಆ ಪದ್ಯ ಇಂದಿನ ಕೃತಕ ಬುದ್ಧಿಮತ್ತೆಯೊಂದಿಗೆ ನಡೆಸುತ್ತಿರುವ ಸಂವಾದ ಎಂಬಂತೆಯೂ ನೋಡಬಹುದಾಗಿದೆ. ಸಾರ್ವಕಾಲಿಕ ಮೌಲ್ಯವುಳ್ಳ ಕವಿತೆಗಳು ಪ್ರತಿ ಕಾಲಮಾನದಲ್ಲೂ ಹೊಸ ಹೊಸ ಅರ್ಥ ಸಾಧ್ಯತೆಗಳನ್ನು ಹೊರಹೊಮ್ಮಿಸಬಲ್ಲದು. ಆದರೆ ಕೃತಕ ಬುದ್ಧಿಮತ್ತೆ (ಎಐ) ಯಾವ ಕಾಲಕ್ಕೂ ಕವಿಯ ಮಟ್ಟಕ್ಕೆ ಏರಲಾರದು. ಆದರೆ ಕವಿ ಯಾವ ಕ್ಷಣದಲ್ಲಾದರೂ, ಎಐ ರೀತಿಯಲ್ಲಿ ಯಾಂತ್ರಿಕ ಕವಿತೆಗಳನ್ನು ರಚಿಸುವ ಮಟ್ಟಕ್ಕೆ ಇಳಿಯಬಲ್ಲ. ಎಐ ಎಂಬ ಪರೋಪಜೀವಿಯನ್ನೇ ಅವಲಂಬಿಸುವ ಜೀವಿಯಾಗಬಲ್ಲ. ಈ ಬೆಳವಣಿಗೆಗಳು ಒಂದು ಸಾಹಿತ್ಯ ಪರಂಪರೆಯ ಅವನತಿಯ ಲಕ್ಷಣವಾಗಿದೆ.