ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

ವಿಟಾಮಿನ್ ಸಿ, ಪೋಟ್ಯಾಶಿಯಮ್ ಹೊಂದಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇಂತಹ ಅಪೂರ್ವ ಗುಣಗಳನ್ನು ಹೊಂದಿರುವ ನೀರ್‌ನೇರಳೆ ಹಣ್ಣನ್ನು ಕೃಷಿ ಮಾಡಲು ಸಹ ಸಾಧ್ಯವಿದೆ. ಇದರಲ್ಲಿ ಕೆಂಪು, ಬಿಳಿ, ಹಸಿರು ವರ್ಣ ಬಣ್ಣದ ಹಣ್ಣು ನೀಡುವ ತಳಿಗಳಿವೆ. ಗಿಡನೆಟ್ಟ ಎರಡರಿಂದ ನಾಲ್ಕುವರ್ಷಗಳಲ್ಲಿ ಫಲ ನೀಡಲು ಪ್ರಾರಂಭವಾಗುವದು.

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

-

Profile
Ashok Nayak May 10, 2026 6:53 PM

ಮೋಹನ ಭಟ್ಟ, ಅಗಸೂರು

ನಮ್ಮ ಊರಿನಲ್ಲಿ ನೀರ್ನೇರಳೆ ಹಣ್ಣು ಎಂದು ನಾವೆಲ್ಲಾ ಕರೆಯುವ ಈ ಪುಟ್ಟ, ನೀರು ತುಂಬಿದ ಹಣ್ಣನ್ನು ಇಂಗ್ಲಿಷ್‌ನಲ್ಲಿ ವಾಟರ್ ಆಪಲ್ ಎಂದೂ ಕರೆಯುವುದುಂಟು. ಬೇರೆ ಕೆಲವು ಹಣ್ಣುಗಳಿಗೂ ವಾಟರ್ ಆಪಲ್ ಎಂದು ಕರೆಯುವ ಪದ್ಧತಿ ಇದೆ; ನಾವಿಲ್ಲಿ ಹೇಳಿರುವ ಹಣ್ಣು ಉಷ್ಣವಲಯದಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ; ನಮ್ಮ ರಾಜ್ಯದ ಕೆಲವು ಭಾಗಗಳಲ್ಲೂ ಬೆಳೆಯುತ್ತದೆ. ಈ ವಾಟರ್ ಆಪಲ್‌ಗೆ ವೈಜ್ಞಾನಿಕ ಹೆಸರು ಸಿಜಜೆಯಮ್ ಆಕ್ವೆಮ್.

ಇದನ್ನು ಬೇಸಿಗೆಯ ಹಣ್ಣು ಎಂದು ಹೇಳಬಹುದು. ಶೇ.90ರಷ್ಟು ನೀರು ಹೊಂದಿರುವ ಇದು ತುಸು ಗುಲಾಬಿಯ ಸುವಾಸನೆಯನ್ನು ಹೊಂದಿದೆ ಮತ್ತು ನೀರಿನ ಅಂಶ ಅಧಿಕ ವಾಗಿರುವುದರಿಂದಾಗಿ, ಬೇಸಗೆಯಲ್ಲಿ ತಿನ್ನಲು ಸೂಕ್ತ; ಬೇಡವಾದ ಕೊಲೆಸ್ಟರಾಲ್ ನಿಯಂತ್ರಿಸಲು ಇದು ಸಹಾಯಕಾರಿ.

ಇದನ್ನೂ ಓದಿ: Fruits Price Rise: ಹೆಚ್ಚಿದ ಬಿಸಿಲಿನ ಕಾವು: ಹಣ್ಣುಗಳ ದರ ಭಾರೀ ಏರಿಕೆ

ವಿಟಾಮಿನ್ ಸಿ, ಪೋಟ್ಯಾಶಿಯಮ್ ಹೊಂದಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇಂತಹ ಅಪೂರ್ವ ಗುಣಗಳನ್ನು ಹೊಂದಿರುವ ನೀರ್‌ನೇರಳೆ ಹಣ್ಣನ್ನು ಕೃಷಿ ಮಾಡಲು ಸಹ ಸಾಧ್ಯವಿದೆ. ಇದರಲ್ಲಿ ಕೆಂಪು, ಬಿಳಿ, ಹಸಿರು ವರ್ಣ ಬಣ್ಣದ ಹಣ್ಣು ನೀಡುವ ತಳಿಗಳಿವೆ. ಗಿಡನೆಟ್ಟ ಎರಡರಿಂದ ನಾಲ್ಕುವರ್ಷಗಳಲ್ಲಿ ಫಲ ನೀಡಲು ಪ್ರಾರಂಭವಾಗುವದು.

ಎಪ್ರಿಲ್- ಮೇ, ನವೆಂಬರ್ -ಡಿಸೆಂಬರ್, ಹಾಗೂ ಪರಿಸರ ವಾತಾವರಣ ಸರಿ ಇದ್ದರೆ ಇನ್ನೊಂದು ಬಾರಿ ಹಣ್ಣು ನೀಡುವ ಗಿಡಕ್ಕೆ ಫಲವತ್ತಾದ ಮಣ್ಣಿನೊಂದಿಗೆ ಪೋಷಕಾಂಶ ಸೇರಿಸಬೇಕು. ಬಿಸಿಲು ಇದ್ದರೆ, ಚೆನ್ನಾಗಿ ಬೆಳೆಯುವದು. ಇದರ ತಳಿಗಳು ಎತ್ತರವಾದ ಮರಗಳಾಗಿ ಬೆಳೆಯುವುದುಂಟು.

Screenshot_4

ವರ್ಷಕ್ಕೆ ನೂರಾರು ಹಣ್ಣುಗಳನ್ನು ಏಕಕಾಲಕ್ಕೆ ಬಿಡುವ ಗಿಡ, 40 ಕೆ.ಜಿಯ ವರೆಗೂ ಫಲ ನೀಡುವದು. ಬಿಸಿಲಿನ ಬೇಗೆಗೆ ಬೇಗ ಮುರುಟಿ ಹೋಗುವ ಇದು ಸೂಕ್ಷ್ಮತೆಯನ್ನು ಹೊಂದಿದೆ. ಹೂ ಬಿಡುವ ಮೊದಲು ಗೊಂಚಲಾಗಿರುವದು. ಹೂ ಅರಳಿದಾಗ ಬಹಳ ಅಂದವಾಗಿ ಕಾಣುವದು; ಈ ಗಿಡದ ಹೂವುಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಆದರೆ ಹೆಚ್ಚು ಕಾಲ ಹಾಗೆಯೇ ಇರದು. ಹೂ ಆದ ವಾರದ ಅಂತರದಲ್ಲಿ ಹಣ್ಣು ಕಂಡು ಬರುವದು.

ಇಡೀ ಹಣ್ಣು ಕೆಂಪಾದಾಗ ಗಿಡದಿಂದ ಬೇರ್ಪಡಿಸುವುದು ಸೂಕ್ತ. ಇದಕ್ಕೆ ಕೆಂಪು ಇರುವೆಯ ಕಾಟ ಸಾಮಾನ್ಯ. ಶಾಲಾ ಮಕ್ಕಳಿಗೆ ಇದು ಅಚ್ಚು ಮೆಚ್ಚು; ದೊಡ್ಡವರು ಸಹ ತಿನ್ನಬಹುದು; ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಸಹಜವಾಗಿ ಕಾಣಸಿಗುವ ಈ ಹಣ್ಣಿನ ಮರಗಳನ್ನು ಇತ್ತೀಚೆಗೆ, ತೋಟಗಾರಿಕೆ ಬೆಳೆಯಾಗಿಯೂ ಅಲ್ಲಲ್ಲಿ ಬೆಳೆಯಲಾಗುತ್ತಿದೆ ಮತ್ತು ಅಲ್ಲಲ್ಲಿ ಮಾರಾಟಕ್ಕೂ ಈ ಹಣ್ಣುಗಳು ಸಿಗುತ್ತವೆ.

ಅಂದಹಾಗೆ, ಈ ಬೇಸಗೆಯಲ್ಲಿ ನೀರ್‌ ನೇರಳೆ ಹಣ್ಣನ್ನು ಎಲ್ಲಾದರೂ ಕಂಡರೆ, ತಿಂದು ನೋಡಿ; ಸಾಕಷ್ಟು ರುಚಿಕರ ಮತ್ತು ನಮ್ಮ ನಾಡಿನ ಹಣ್ಣೊಂದರ ರುಚಿಯನ್ನು ಗುರುತಿಸಿ ದಂತಾಗುವುದು.