ಗರ್ಭಿಣಿಯರಲ್ಲಿ ಮಧುಮೇಹ !
ಇದು ಗರ್ಭಕೋಶದಲ್ಲಿರುವ ಮಗುವಿಗೆ ರಕ್ಷಣೆ ಕೊಡುವ ಮಾಯೆ ಮಾಡುವ ಒಂದು ಅದ್ಭುತವಾದ ಆಟ! ಸ್ವಲ್ಪ ಯೋಚನೆ ಮಾಡಿ, ತಾಯಿ ತಿಂದ ಆಹಾರವೆಲ್ಲಾ ಪೂರ್ತಿಯಾಗಿ ಅವಳ ದೇಹವೇ ಬಳಸಿ ಕೊಂಡರೆ, ಒಳಗಿರುವ ಪುಟ್ಟ ಜೀವಕ್ಕೆ ಶಕ್ತಿ ಎಲ್ಲಿಂದ ಬರಬೇಕು? ಅದಕ್ಕೇ ಪ್ರಕೃತಿ ಒಂದು ಚಮತ್ಕಾರ ಮಾಡಿದೆ.
-
ಇಲ್ಲಿ ತಾಯಿಯ ತಪ್ಪೇನೂ ಇರುವುದಿಲ್ಲ. ಇದು ಗರ್ಭಕೋಶದಲ್ಲಿರುವ ಮಗುವಿಗೆ ರಕ್ಷಣೆ ಕೊಡುವ, ಮಾಯೆ ಮಾಡುವ ಒಂದು ಅದ್ಭುತವಾದ ಆಟ!
ನಮ್ಮ ಆಸ್ಪತ್ರೆಯ ಪ್ರಸೂತಿ ವಿಭಾಗಕ್ಕೆ ಗರ್ಭಿಣಿಯರು ಬಹಳ ಖುಷಿ-ಖುಷಿಯಾಗಿ ತಪಾಸಣೆಗೆ ಬರ್ತಾರೆ. ಆದ್ರೆ 5ನೇ ಅಥವಾ 6ನೇ ತಿಂಗಳಲ್ಲಿ ರಕ್ತ ಪರೀಕ್ಷೆಯ ರಿಪೋರ್ಟ್ ನೋಡಿ, ಅಮ್ಮಾ, ನಿಮಗೆ ಮಧುಮೇಹ ಶುರುವಾಗಿದೆ ಅಂತ ಹೇಳಿದ ತಕ್ಷಣ, ಬೇಜಾರು ಮಾಡಿಕೊಳ್ತಾರೆ. ‘ಅಯ್ಯೋ ಡಾಕ್ಟ್ರೇ, ನನಗಿನ್ನೂ 24 ವರ್ಷ. ನಮ್ಮ ಮನೇಲಿ ಯಾರಿಗೂ ಈ ಕಾಯಿಲೆ ಇಲ್ಲ. ಆದ್ರೂ ನನಗ್ಯಾಕೆ ಬಂತು? ನನ್ನ ಹೊಟ್ಟೇಲಿರೋ ಮಗುವಿಗೆ ಏನಾದ್ರೂ ತೊಂದರೆ ಆಗುತ್ತಾ?’ ಅನ್ನೋ ನೂರಾರು ಪ್ರಶ್ನೆಗಳು! ನಿಜ ಹೇಳಬೇಕೆಂದರೆ, ಇಲ್ಲಿ ತಾಯಿಯ ತಪ್ಪೇನೂ ಇರಲ್ಲ.
ಇದು ಗರ್ಭಕೋಶದಲ್ಲಿರುವ ಮಗುವಿಗೆ ರಕ್ಷಣೆ ಕೊಡುವ ಮಾಯೆ ಮಾಡುವ ಒಂದು ಅದ್ಭುತವಾದ ಆಟ! ಸ್ವಲ್ಪ ಯೋಚನೆ ಮಾಡಿ, ತಾಯಿ ತಿಂದ ಆಹಾರವೆಲ್ಲಾ ಪೂರ್ತಿಯಾಗಿ ಅವಳ ದೇಹವೇ ಬಳಸಿಕೊಂಡರೆ, ಒಳಗಿರುವ ಪುಟ್ಟ ಜೀವಕ್ಕೆ ಶಕ್ತಿ ಎಲ್ಲಿಂದ ಬರಬೇಕು? ಅದಕ್ಕೇ ಪ್ರಕೃತಿ ಒಂದು ಚಮತ್ಕಾರ ಮಾಡಿದೆ. ಗರ್ಭಿಣಿಯಾದಾಗ ಈ ಮಾಯೆ ಕೆಲವು ಹಾರ್ಮೋನ್‌ಗಳನ್ನು ಉತ್ಪಾದಿಸು ತ್ತದೆ. ಈ ಹಾರ್ಮೋನ್‌ಗಳ ಕೆಲಸವೇನು ಗೊತ್ತಾ? ತಾಯಿಯ ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಂತೆ ಸ್ವಲ್ಪ ತಡೆಯುವುದು! ಯಾಕೆ ಹೀಗೆ? ತಾಯಿಯ ಜೀವಕೋಶಗಳು ಇನ್ಸುಲಿನ್ ಮಾತನ್ನು ಕೇಳದೆ ಸ್ವಲ್ಪ ಮುನಿಸಿಕೊಂಡಾಗ, ಅವಳು ತಿಂದ ಆಹಾರದ ಗ್ಲೂಕೋಸ್ ಪೂರ್ತಿಯಾಗಿ ಅವಳ ಜೀವಕೋಶಗಳ ಒಳಗೆ ಹೋಗುವುದಿಲ್ಲ. ಬದಲಾಗಿ, ಸ್ವಲ್ಪ ಗ್ಲೂಕೋಸ್ ರಕ್ತದಲ್ಲೇ ಉಳಿದುಕೊಳ್ಳುತ್ತದೆ. ಆ ಉಳಿದುಕೊಂಡ ಗ್ಲೂಕೋಸ್ ನೇರವಾಗಿ ಕರುಳಬಳ್ಳಿಯ ಮೂಲಕ ಹೊಟ್ಟೆಯಲ್ಲಿರುವ ಮಗುವಿಗೆ ಹೋಗಿ ಸೇರುತ್ತದೆ. ಅಂದರೆ, ತನ್ನ ಮಗುವಿಗಾಗಿ ತಾಯಿ ಯ ದೇಹವೇ ಮಾಡುವ ಒಂದು ಸುಂದರವಾದ ತ್ಯಾಗವಿದು!
ಇದನ್ನೂ ಓದಿ: Health Tips: 40 ವರ್ಷ ದಾಟಿದ ನಂತರವೂ ಫಿಟ್ ಆಗಿರಲು ಈ ಆಹಾರ ಸೇವಿಸಿ
ಪ್ರತಿ ಗರ್ಭಿಣಿಯಲ್ಲೂ ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಸಮಸ್ಯೆ ಹೇಗೆ?: ಆದರೆ ಸಮಸ್ಯೆ ಶುರು ವಾಗೋದು ಎಲ್ಲಿ? ಮಗುವಿಗೆ ಆಹಾರ ಕಳಿಸುವ ಈ ಭರದಲ್ಲಿ, ಇನ್ಸುಲಿನ್ ವಿರೋಧ ಮಿತಿಮೀರುತ್ತದೆ. ಆಗ ತಾಯಿಯ ದೇಹವು ಮಗುವಿಗೂ ಸೇರಿ ೨ ರಿಂದ ೩ ಪಟ್ಟು ಹೆಚ್ಚು ಇನ್ಸುಲಿನ್ ಉತ್ಪಾದನೆ ಮಾಡಬೇಕಾಗುತ್ತದೆ. ನಮ್ಮ ದೇಹದ -ಕ್ಟರಿಗೆ ಅಷ್ಟು ಭಾರ ಎಳೆಯೋಕೆ ಆಗದಿದ್ದಾಗ, ರಕ್ತದಲ್ಲಿ ಗ್ಲೂಕೋಸ್ ಮಟ್ಟ ದಿಢೀರನೆ ಏರಿ, ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದರಿಂದ ತಾಯಿಗಿಂತ ಹೊಟ್ಟೆಯಲ್ಲಿರುವ ಮಗುವಿಗೆ ರಿಸ್ಕ್ ಜಾಸ್ತಿ.
ತಾಯಿಯ ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾದರೆ, ಅದು ನೇರವಾಗಿ ಮಗುವಿನ ದೇಹ ಸೇರುತ್ತದೆ. ಮಗುವಿನ ದೇಹಕ್ಕೆ ಇಷ್ಟು ದೊಡ್ಡ ಪ್ರಮಾಣದ ಶಕ್ತಿ ಸಿಕ್ಕಾಗ, ಮಗು ಆರಾಮಾಗಿ ಎಂಜಾಯ್ ಮಾಡ್ತಾ ಸಿಕ್ಕಾಪಟ್ಟೆ ದಪ್ಪ ಆಗೋಕೆ ಶುರುಮಾಡುತ್ತೆ. 4 ಅಥವಾ 5 ಕೆಜಿ ತೂಕದ ಮಗು ಹುಟ್ಟಿದರೆ ನೋಡೋಕೆ ಮುದ್ದಾಗಿರಬಹುದು, ಆದರೆ ನಾರ್ಮಲ್ ಹೆರಿಗೆಯ ಸಮಯದಲ್ಲಿ ತಾಯಿಗೂ ಮಗುವಿಗೂ ಇದು ಬಹಳ ಕಷ್ಟ ಮತ್ತು ಅಪಾಯಕಾರಿ.
ಜೊತೆಗೆ, ಹುಟ್ಟಿದ ತಕ್ಷಣ ಆ ಮಗುವಿನ ದೇಹದಲ್ಲಿ ಗ್ಲೂಕೋಸ್ ಲೆವೆಲ್ ಇದ್ದಕ್ಕಿದ್ದಂತೆ ಕುಸಿದು ಹೋಗುವ ಅಪಾಯವೂ ಇರುತ್ತದೆ. ಇವೆಲ್ಲದರ ಜೊತೆಗೆ, ತಾಯಿಯ ಗರ್ಭಕೋಶದಲ್ಲಿ ನೀರಿನ ಪ್ರಮಾಣ ವಿಪರೀತ ಹೆಚ್ಚಾಗುವುದು, ಬಿಪಿ ಏರುಪೇರು ಆಗುವ ಸಾಧ್ಯತೆಗಳೂ ಇರುತ್ತವೆ. ತಲೆಮಾರು ಗಳ ಸರಪಳಿ ಕತ್ತರಿಸುವ ಅವಕಾಶ ಇಲ್ಲೊಂದು ಗುಟ್ಟಿದೆ.
ಗರ್ಭಾವಸ್ಥೆಯಲ್ಲಿ ತಾಯಿ ತನ್ನ ಮಧುಮೇಹವನ್ನು ಊಟ, ವಾಕಿಂಗ್ ಅಥವಾ ಔಷಧಿಗಳ ಮೂಲಕ ಸರಿಯಾಗಿ ಕಂಟ್ರೋಲ್ ಮಾಡಿಕೊಂಡರೆ, ಹೊಟ್ಟೆಯಲ್ಲಿರುವ ಮಗುವಿಗೆ ಮುಂದೆ ದೊಡ್ಡವ ನಾದಾಗ ಮಧುಮೇಹ ಅಥವಾ ಬೊಜ್ಜು ಬರುವ ಸಾಧ್ಯತೆ ಬಹಳ ಕಡಿಮೆ! ಅಂದರೆ, ನೀವು ಈಗ ತೆಗೆದುಕೊಳ್ಳುವ ಶಿಸ್ತಿನ ಕಾಳಜಿ, ನಿಮ್ಮ ಮುಂದಿನ ತಲೆಮಾರಿಗೆ ಮಧುಮೇಹ ಹರಡದಂತೆ ತಡೆಯುವ ಬಹುದೊಡ್ಡ ಅಸ್ತ್ರ. ಇದೇ ನೋಡಿ, ಒಂದು ಕಾಯಿಲೆಯ ಸರಪಳಿಯನ್ನು ತಾಯಿಯೊಬ್ಬಳು ತನ್ನ ಪ್ರೀತಿ ಮತ್ತು ಶಿಸ್ತಿನಿಂದ ಕತ್ತರಿಸುವ ಅದ್ಭುತ ಅವಕಾಶ.
ಔಷಧಿಗಳು : ಭಯ ಬೇಡ! ಗರ್ಭಿಣಿಯರಿಗೆ ಮಧುಮೇಹ ಬಂದಾಗ, ಕಂಡ-ಕಂಡ ಮಾತ್ರೆ ನುಂಗುವಂತಿಲ್ಲ ನಿಜ. ಆದರೆ, ವೈದ್ಯರು ಕೊಡುವ ಕೆಲವು ಅತ್ಯಂತ ಸುರಕ್ಷಿತವಾದ ಮಾತ್ರೆಗಳನ್ನು ಖಂಡಿತಾ ತೆಗೆದುಕೊಳ್ಳ ಬಹುದು. ಮೊದಲ 3 ತಿಂಗಳಲ್ಲಿ ಮಗುವಿನ ಅಂಗಾಂಗಗಳು ರೂಪುಗೊಳ್ಳು ವಾಗ ಮಾತ್ರ ಇನ್ಸುಲಿನ್ ಚುಚ್ಚುಮದ್ದು ಅನಿವಾರ್ಯವಾಗಬಹುದು. ಆಮೇಲೆ ಮಾತ್ರೆಗಳ ಮೂಲಕವೂ ಇದನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು. ಮಾತ್ರೆ ಅಥವಾ ಇನ್ಸುಲಿನ್ ತಗೊಂಡ್ರೆ ಮಗುವಿಗೆ ಎಫೆಕ್ಟ್ ಆಗುತ್ತೆ ಅನ್ನೋದು ಶುದ್ಧ ಸುಳ್ಳು. ಸರಿಯಾದ ಊಟದ ಶಿಸ್ತು ಮತ್ತು ವಾಕಿಂಗ್ ಜೊತೆಗೆ ವೈದ್ಯರು ಸೂಚಿಸುವ ಈ ಔಷಧಿಗಳು ಮಗುವಿನ ರಕ್ಷಣೆಗೆ ಇರುವ ಅತಿ ದೊಡ್ಡ ಕವಚ! ಬಂದು ಹೋಗುವ ಅತಿಥಿ!
ಈ ಗರ್ಭಾವಸ್ಥೆಯ ಮಧುಮೇಹ ಬಹುತೇಕರಿಗೆ ಕೇವಲ ಹೆರಿಗೆಯ ಸಮಯದವರೆಗೆ ಮಾತ್ರ ಇರುವ ತಾತ್ಕಾಲಿಕ ಅತಿಥಿ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಈ ಅತಿಥಿ ತನ್ನ ಗಂಟು-ಮೂಟೆ ಕಟ್ಟಿ ಹೊರಟುಹೋಗುತ್ತಾನೆ! ಆದರೆ, ಮುಂದೊಂದು ದಿನ ಅಂದರೆ 10 ಅಥವಾ 15 ವರ್ಷಗಳ ನಂತರ ತಾಯಿಗೆ ನಿಜವಾದ ಡಯಾಬಿಟಿಸ್ ಬರುವ ಮುನ್ಸೂಚನೆಯನ್ನು ಇದು ಕೊಟ್ಟಿರುತ್ತದೆ. ಹಾಗಾಗಿ ಹೆರಿಗೆಯ ನಂತರವೂ ಜೀವನಶೈಲಿಯಲ್ಲಿ ಎಚ್ಚರಿಕೆ ಇರಲೇಬೇಕು.
ಜ್ಞಾಪಕ ಇರಲಿ: ಗರ್ಭಿಣಿಯರಿಗೆ ಮಧುಮೇಹ ಬಂದರೆ ಗಾಬರಿ ಬೀಳುವ ಅಗತ್ಯವಿಲ್ಲ. ಇದು ತಾಯ್ತನದ ಸುಂದರ ಪಯಣದಲ್ಲಿ ಎದುರಾಗುವ ಒಂದು ಸಣ್ಣ ಸ್ಪೀಡ್ ಬ್ರೇಕರ್ ಅಷ್ಟೇ. ವೈದ್ಯರು ಹೇಳಿದಂತೆ ಕೇಳಿ, ಊಟದಲ್ಲಿ ಶಿಸ್ತು ಪಾಲಿಸಿ, ಸ್ವಲ್ಪ ಎಚ್ಚರಿಕೆ ವಹಿಸಿದರೆ, ಸಂಪೂರ್ಣ ಆರೋಗ್ಯ ವಂತ, ಮುದ್ದಾದ ಮಗುವನ್ನು ಪಡೆಯಬಹುದು.