ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !

ಇಂದು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸಂಪಾದಕರು ಅಥವಾ ಮಹತ್ವದ ವರದಿಗಾರರು ಉತ್ತರ ಕನ್ನಡ ಜಿಲ್ಲೆಯವರೇ; ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನೂರು ವರ್ಷಗಳ ಮೊದಲೇ ವಿಧವಾ ವಿವಾಹವಾಗಿ ಸಮಾಜ ಸುಧಾರಣೆಗೆ ನಾಂದಿ ಹಾಡಿದ ಸಿರಸಿಯ ಅಕ್ಕದಾಸರು, ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ ಬರೆದ ಕರ್ಕಿಯ ಸೂರಿ ವೆಂಕಟ್ರಮಣ ಶಾಸಿ, ಬಾರ್ಡೋಲಿ ಹೋರಾಟವನ್ನು ನೆನಪಿಸಿದ ಅಂಕೋಲೆಯ ಉಪಿನ ಸತ್ಯಾಗ್ರಹ ಇವೆಲ್ಲವೂ ಈ ಜಿಲ್ಲೆಯಲ್ಲಿಯೇ ಅರಳಿದ್ದು.

Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !

-

Profile
Ashok Nayak Aug 16, 2026 11:17 AM

ನಾರಾಯಣ ಯಾಜಿ

ಸುಮಾರು ನಾಲ್ಕು ವರ್ಷಗಳಿಂದ ರಾಜು ಅಡಕಳ್ಳಿಯವರು ‘ಲೋಕಧ್ವನಿ’ ಪತ್ರಿಕೆಯ ಅಂಕಣ ಬರಹದಲ್ಲಿ ಉತ್ತರ ಕನ್ನಡದ ಅನೇಕ ಪ್ರತಿಭಾನ್ವಿತರನ್ನು ಹೊರಜಗತ್ತಿಗೆ ತೋರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಂತಹ 35 ಸಾಧಕರ ಯಶಸ್ಸಿನ ಸೂತ್ರಗಳನ್ನು ಬಿಂಬಿಸುವ ಕೃತಿ ‘ಸಕ್ಸಸ್ ಸೂತ್ರಗಳು’ ವಿಶ್ವವಾಣಿ ಪುಸ್ತಕ ಪ್ರಕಾಶನದಿಂದ ಪ್ರಕಟವಾಗಿದೆ.

ವೈದ್ಯಕೀಯ, ವಿಜ್ಞಾನ, ತಂತ್ರ ಜ್ಞಾನ, ಶಿಕ್ಷಣ, ಜಾನಪದ, ಇತಿಹಾಸ, ಉದ್ಯಮ, ಸಮಾಜಸೇವೆ, ಕಲೆ, ಸಂಸ್ಕೃತಿ ಮೊದಲಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ವ್ಯಕ್ತಿಗಳ ಬದುಕನ್ನು ಲೇಖಕರು ಪತ್ರಕರ್ತನ ಕಣ್ಣಿನಿಂದ ದಾಖಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ ಎನ್ನುವ ಹಣೆಬರಹ ಹೊಂದಿದೆ. ದಿನನಿತ್ಯ ಎಂಟು ಹತ್ತು ಕಿ.ಮಿ. ನಡೆದು ಶಾಲೆಗೆ ಹೋಗಿ ಓದುವ ಪ್ರಯಾಸ ಬೇರೆ. ಇಷ್ಟೆಲ್ಲಾ ಇದ್ದೂ ಈ ಮಣ್ಣಿನಲ್ಲಿ ಅರಳಿದ ಪ್ರತಿಭಾನ್ವಿತರ ಸಂಖ್ಯೆಮಾತ್ರ ಅಪಾರ. ಈ ಮಣ್ಣಿನ ಗುಣದಲ್ಲಿ ಪ್ರತಿಭಾ ವಂತರ ಖನಿಜವೇ ಇದೆ.

ಇಂದು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸಂಪಾದಕರು ಅಥವಾ ಮಹತ್ವದ ವರದಿಗಾರರು ಉತ್ತರ ಕನ್ನಡ ಜಿಲ್ಲೆಯವರೇ; ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನೂರು ವರ್ಷಗಳ ಮೊದಲೇ ವಿಧವಾ ವಿವಾಹವಾಗಿ ಸಮಾಜ ಸುಧಾರಣೆಗೆ ನಾಂದಿ ಹಾಡಿದ ಸಿರಸಿಯ ಅಕ್ಕದಾಸರು, ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ ಬರೆದ ಕರ್ಕಿಯ ಸೂರಿ ವೆಂಕಟ್ರಮಣ ಶಾಸಿ, ಬಾರ್ಡೋಲಿ ಹೋರಾಟವನ್ನು ನೆನಪಿಸಿದ ಅಂಕೋಲೆಯ ಉಪ್ಪಿನ ಸತ್ಯಾಗ್ರಹ ಇವೆಲ್ಲವೂ ಈ ಜಿಲ್ಲೆಯಲ್ಲಿಯೇ ಅರಳಿದ್ದು.

ಇದನ್ನೂ ಓದಿ: Narayana Yaji Column: ಶಿಷ್ಯನ ಶರಣಾಗತಿಯಲ್ಲಿ ಜ್ಞಾನಾಗ್ನಿಯ ಬೆಳಕು

ಜೊತೆಗೆ ಇದೇ ಮಣ್ಣಿನಿಂದ ಇಷ್ಟೊಂದು ವೈವಿಧ್ಯಮಯ ಪ್ರತಿಭೆಗಳು ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿಯೂ ಹೌದು. ಒಂದು ಮರವನ್ನು ನೋಡಿ ಅದರ ಎತ್ತರವನ್ನು ಅಳೆಯುವುದು ಸುಲಭ. ಆದರೆ ಆ ಮರದ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆ ಎಂಬುದನ್ನು ನೋಡುವುದು ಕಷ್ಟ. ಯಶಸ್ಸೂ ಹಾಗೆಯೇ.

ಪ್ರಶಸ್ತಿಯ ವೇದಿಕೆಯಲ್ಲಿ ನಿಂತ ವ್ಯಕ್ತಿಯನ್ನು ನೋಡುವುದು ಸುಲಭ; ಆದರೆ ಆ ವ್ಯಕ್ತಿಯನ್ನು ಅಲ್ಲಿಗೆ ತಂದು ನಿಲ್ಲಿಸಿದ ವರ್ಷಗಳ ಪರಿಶ್ರಮ, ಸೋಲು, ಸಂಕಟ, ನಿರೀಕ್ಷೆ, ಅವಕಾಶ ಮತ್ತು ಆತ್ಮವಿಶ್ವಾಸದ ಬೇರುಗಳನ್ನು ಹುಡುಕುವುದು ಕಷ್ಟ. ರಾಜು ಅಡಕಳ್ಳಿಯವರ ‘ಸಕ್ಸಸ್ ಸೂತ್ರ ಧಾರರು’ ಆ ಕೆಲಸವನ್ನು ಕೈಗೆತ್ತಿಕೊಂಡಿರುವ ಕೃತಿ.

ಸಕ್ಸಸ್ ಎಂಬ ಪದವನ್ನು ನಾವು ಸಾಮಾನ್ಯವಾಗಿ ಹಣ, ಅಧಿಕಾರ, ಪ್ರಸಿದ್ಧಿ, ಹುದ್ದೆ ಅಥವಾ ಸಾಮಾಜಿಕ ಪ್ರತಿಷ್ಠೆಯೊಂದಿಗೆ ಸಮೀಕರಿಸುತ್ತೇವೆ. ಆದರೆ ಅಡಕಳ್ಳಿಯವರ ಕೃತಿಯಲ್ಲಿರುವ ಸಾಧಕರನ್ನು ಗಮನಿಸಿದಾಗ ಯಶಸ್ಸಿಗೆ ಅಂತಹ ಒಂದೇ ಅಳತೆಗೋಲು ಇಲ್ಲ ಎಂಬುದು ಸ್ಪಷ್ಟ ವಾಗುತ್ತದೆ.

ಕೇವಲ ಏಳು ಡಾಲರ್ ಕೈಯಲ್ಲಿಟ್ಟುಕೊಂಡು ಅಮೇರಿಕಾಕ್ಕೆ ಹೋಗಿ ಕೃಷ್ಣ ಗಾರುಡಿಯ ಸ್ಲೀಪ್ ಮೆಡಿಸಿನ್ ವಿಷಯದಲ್ಲಿ ಪ್ರಸಿದ್ಧ ವೈದ್ಯರಾದ ಡಾ. ಕೃಷ್ಣ ಭಟ್ಟರು, 35ರ ಹರೆಯ ದಲ್ಲಿ ಸೀತಾರ್ ವಾದನಕ್ಕೆ ಮನಸೋತು ಅದರಲ್ಲಿ ಸಾಧನೆಮಾಡಿದ ಚಂದ್ರಕಲಾ ಹೆಗಡೆ, ಗೇರು ಉದ್ದಿಮೆಯ ಜೊತೆಗೆ ಸಮಾಜಸೇವೆ, ವಿದ್ಯಾಕ್ಷೇತ್ರ, ಗೋ ಸಂರಕ್ಷಣೆ ಮೊದಲಾದವುಗಳಲ್ಲಿ ತೊಡಗಿಸಿಕೊಂಡ ಮುರಳೀಧರ ಪ್ರಭು, ಪೋಲಿಸ್ ಅಧಿಕಾರಿ ರಾಮಕೃಷ್ಣ ಮುದ್ದೇಪಾಲ, ಕಡಲ ಮಡಿಲ ಕಾವಲುಗಾರ ಡಾ. ಪ್ರಕಾಶ ಮೇಸ್ತರ ಪರಿಸರ ಕಾರ್ಯ, ದನಗಳ ಗರ್ಭಕ್ಕೆ ಕಾಡುವ ಕಂದು ರೋಗದ ತಡೆಗಟ್ಟುವಿಕೆ ಯಲ್ಲಿ ಅಪೂರ್ವ ಸಾಧನೆ ಮಾಡಿದ ಡಾ. ಶ್ರೀಕೃಷ್ಣ,

ಸೌರ ಗ್ರಹವಿದ್ಯುತ್ ವಲಯದಲ್ಲಿ ಕ್ರಾಂತಿ ಮಾಡಿದ ಸೆಲ್ಕೋದ ಮೋಹನ ಭಾಸ್ಕರ ಹೆಗಡೆ, ಬಹುಮುಖಿ ವ್ಯಕ್ತಿತ್ವದ ಚಿತ್ರಕಲಾವಿದ ಸತೀಶ ಯಲ್ಲಾಪುರ, ಡಾ ಶಾಲಿನಿ ರಘುನಾಥ, ತಮ್ಮಣ್ಣ ಬೀಗಾರ್, ದಾ. ವಿಜಯ ನಳಿನಿ ರಮೇಶ, ವಿನಯ ಹೆಗಡೆಯವರ ವಿಶಿಷ್ಟ ಚಿತ್ರಕಲೆ, ಹೀಗೆ ಪ್ರತಿಯೊಬ್ಬರ ಕುರಿತು ಬರೆಯ ಬಹುದಾದಷ್ಟು ವೈವಿಧ್ಯಮಯ ವ್ಯಕ್ತಿತ್ವವಿದೆ.

ಡಾ.ಸುರೇಂದ್ರ ಕುಲಕರ್ಣಿಯವರ ಜೀವನದಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಸಾಮಾನ್ಯ ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪಿಸುವ ಪ್ರಯತ್ನಗಳು, ಪ್ರಯೋಗಾಲಯಗಳ ನಿರ್ಮಾಣ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಯೋಜನೆಗಳು ಗಮನಾರ್ಹ. ರಮೇಶ್ ಭಟ್ಟರ ಚಿತ್ರಣ ಮತ್ತೊಂದು ಆಯಾಮವನ್ನು ತೆರೆದಿಡುತ್ತದೆ. ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆಯ ಮೂಲಕ ನೂರಾರು ಇಂಜಿನಿಯರ್‌ಗಳಿಗೆ ಪ್ರೇರಣೆಯಾಗಿರುವ ಅವರ ವೃತ್ತಿಜೀವನವನ್ನು ಕೃತಿ ದಾಖಲಿಸುತ್ತದೆ.

ಸಾಧನೆ ಮಾಡಿದ ವ್ಯಕ್ತಿಗಳ ಕುರಿತು ಬರೆಯುವು ದೆಂದರೆ ಬಯೊಡಾಟಾ ಬರೆದಂತಲ್ಲ. ಸಾಧಕನ ಸಮಗ್ರ ಪುರುಷಾರ್ಥಗಳನ್ನು ಮನಸ್ಸಿನಲ್ಲಿ ಆಹ್ವಾನಿಸಿಕೊಂಡು ಓದುಗರ ಹೃದಯದಲ್ಲಿ ಅದನ್ನು ಪಡಿಮೂಡಿಸಬೇಕು. ರಾಜು ಅಡಕಳ್ಳಿಯವರ ಬರಹದ ಶೈಲಿ ಇವರೆಲ್ಲರನ್ನೂ ಇನ್ನಷ್ಟು ಆಪ್ತರನ್ನಾ ಗಿಸುತ್ತದೆ. ಉತ್ತರಕನ್ನಡದ ಗಾಂವಟಿ ಭಾಷೆಗಳಾದ, ಷಟ್ಮುಡಿ, ಪಳದ್ಯ, ಮೊದಲಾದ ಶಬ್ದಗಳನ್ನು ಸಾಹಿತ್ಯಿಕವಾಗಿ ಬಳಸುವ ಶೈಲಿಗೆ ಇವರೇ ಮಾದರಿಯಾಗುತ್ತಾರೆ.

ಮಾಲ್ಕಮ್ ಗ್ಲಾಡ್‌ವೆಲ್ ಅವರ ‘ಔಟ್ ಲೈಯರ್ಸ್: ದ ಸ್ಟೋರಿ ಆಫ್ ಸಕ್ಸಸ್’ ಮತ್ತು ರಾಜು ಅಡಕಳ್ಳಿ ಯವರ ಸಕ್ಸಸ್ ಸೂತ್ರಧಾರರು ಕೃತಿಗಳ ನಡುವೆ ಮೂಲಭೂತವಾದ ಒಂದು ಸಾಮ್ಯವಿದೆ. ಇವೆರಡೂ ಯಶಸ್ಸನ್ನು ಕೇವಲ ವ್ಯಕ್ತಿಯ ಪ್ರತಿಭೆ ಅಥವಾ ಅದೃಷ್ಟದ ಫಲವೆಂದು ನೋಡುವು ದಿಲ್ಲ; ಅದರ ಹಿಂದೆ ಇರುವ ಪರಿಸರ, ಅವಕಾಶ, ಕುಟುಂಬ, ಶಿಕ್ಷಣ, ಪರಿಶ್ರಮ ಮತ್ತು ಜೀವನಾನು ಭವಗಳ ಪಾತ್ರವನ್ನು ಗುರುತಿಸುತ್ತವೆ. ಆದರೆ ಅವುಗಳ ದೃಷ್ಟಿಕೋನ ಮತ್ತು ವಿಧಾನದಲ್ಲಿ ಗಮನಾರ್ಹ ವ್ಯತ್ಯಾಸವಿದೆ.

ಗ್ಲಾಡ್‌ವೆಲ್ ಜಾಗತಿಕ ಮಟ್ಟದ ಪ್ರಸಿದ್ಧ ಸಾಧಕರ ಬದುಕನ್ನು ಸಮಾಜಶಾಸ್ತ್ರೀಯ ಮತ್ತು ವಿಶ್ಲೇಷ ಣಾತ್ಮಕ ದೃಷ್ಟಿಯಿಂದ ಪರಿಶೀಲಿಸಿ, ಯಶಸ್ಸಿನ ಹಿಂದೆ ಇರುವ ಕಾಣದ ಅವಕಾಶಗಳು ಯಾವುವು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾರೆ; ಅಡಕಳ್ಳಿಯವರು ಅಂತಹ ಸೈದ್ಧಾಂತಿಕ ವಿಶ್ಲೇಷಣೆಗೆ ಹೋಗದೆ, ಉತ್ತರ ಕನ್ನಡದ ಮಣ್ಣಿನಿಂದ ಬೆಳೆದ ಸಾಧಕರ ಬದುಕಿನ ಪ್ರಸಂಗಗಳು, ಹೋರಾಟಗಳು, ವ್ಯಕ್ತಿತ್ವ ಮತ್ತು ಸಮಾಜಮುಖಿ ಕೊಡುಗೆಗಳ ಮೂಲಕ ಯಶಸ್ಸಿನ ಅರ್ಥವನ್ನು ಪರಿಚಯಿಸುತ್ತಾರೆ.

ಹೀಗಾಗಿ ಗ್ಲಾಡ್‌ವೆಲ್ ಕೃತಿಯು ಯಶಸ್ಸಿನ ಸಾಮಾಜಿಕ ವಿಜ್ಞಾನವನ್ನು ವಿಶ್ಲೇಷಿಸಿದರೆ, ‘ಸಕ್ಸಸ್ ಸೂತ್ರಧಾರರು’ ಯಶಸ್ಸಿನ ಮಾನವೀಯ ಮುಖವನ್ನು ಪರಿಚಯಿಸುವ ಕೃತಿ. ಗ್ಲಾಡ್‌ವೆಲ್ ಯಶಸ್ಸ ನ್ನು ರೂಪಿಸುವ ಪರಿಸ್ಥಿತಿಗಳನ್ನು ಹುಡುಕಿದರೆ, ಅಡಕಳ್ಳಿಯವರು ಯಶಸ್ಸನ್ನು ಬದುಕಿದ ಮನುಷ್ಯರನ್ನು ಹುಡುಕುತ್ತಾರೆ. ಇಡೀ ಕೃತಿಯನ್ನು ಓದುವ ಮೊದಲು ಮತ್ತು ಆಮೇಲೆ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ಟರ ಬೆನ್ನುಡಿಯನೊಮ್ಮೆ ಓದಬೇಕು. ಕೆಲವೇ ವಾಕ್ಯದಲ್ಲಿ ಲೇಖಕ ರನ್ನು ಮತ್ತು ಸಾಧಕರನ್ನು ಗುರುತಿಸಿದ ಬರಹ ಈ ಕೃತಿಗೆ ಸಿಕ್ಕ ಕಿರೀಟ.