Narayana Yaji Column: ಶಿಷ್ಯನ ಶರಣಾಗತಿಯಲ್ಲಿ ಜ್ಞಾನಾಗ್ನಿಯ ಬೆಳಕು
ಭಾರತೀಯ ಗುರುಶಿಷ್ಯ ಪರಂಪರೆಯಲ್ಲಿ ಪ್ರಶ್ನೋಪನಿಷತ್ತಿನ ಮೊದಲ ಶ್ಲೋಕ ತುಂಬಾ ಮಹತ್ವದ್ದು. ಗುರು ಶಿಷ್ಯ ಪರಂಪರೆಯೆನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ‘ಹೇಳುಗ’ ಮತ್ತು ‘ಕೇಳುಗ’ ಸಂಬಂಧ ಮಾತ್ರವಲ್ಲ. ವೇದಗಳ ಕಾಲದಿಂದ ಇಲ್ಲಿಯತನಕ ಅಪಾರವಾದ ಜ್ಞಾರಾಶಿಯನ್ನು ಕಾಪಿಟ್ಟು ಕಿಂಚಿತ್ತೂ ಊನವಾಗದ ರೀತಿಯಲ್ಲಿ ಯಥಾವತ್ತಾಗಿ ದಾಟಿಸಿಕೊಂಡ ಬಂದ ಹರಿವು. ಸಂವಹನ ಕ್ರಿಯೆ ಯಲ್ಲಿ ವಿಷಯಗಳನ್ನು ವ್ಯಕ್ತಪಡಿಸುವಲ್ಲಿ ಲಿಪಿ ಅನೇಕ ಸಲ ಸೋಲುತ್ತದೆ.
-
ಗುರುಪೂರ್ಣಿಮೆ
ನಾರಾಯಣ ಯಾಜಿ
ಜ್ಞಾನ ಶಬ್ದದ ಅರ್ಥ ಕೇವಲ ತಿಳಿದುಕೊಳ್ಳುವುದು ಅಲ್ಲ; ತತ್ತ್ವವನ್ನು ಅದರ ನಿಜಸ್ವರೂಪ ದಲ್ಲಿ ಕಾಣುವುದು. ಪುಸ್ತಕಗಳು ವಿದ್ಯೆಯನ್ನು ಕೊಡುತ್ತವೆ; ಗುರು ಜ್ಞಾನವನ್ನು ಕೊಡುತ್ತಾನೆ. ಮಾಹಿತಿ ಮೆದುಳಿನಲ್ಲಿ ನೆಲೆಸುತ್ತದೆ; ಜ್ಞಾನ ಅಂತರಂಗದಲ್ಲಿ ಬೆಳಕಾಗುತ್ತದೆ.
ಬ್ರಹ್ಮಾನ್ವೇಷಮಾಣಾ ಏಷ ಹ ವೈ ತತ್ಸರ್ವಂ ವ್ಯಕ್ಷ ತೀತಿ ತೇ ಹ |
ಸಮಿತ್ಪಾಣಯೋ ಭಗವಂತಂ ಪಿಪ್ಪಲಾದಮುಪಸನ್ನಾಃ ||
ಬ್ರಹ್ಮತತ್ತ್ವವನ್ನು ಅರಿಯುವ ತೀವ್ರ ಆಸೆಯುಳ್ಳ ಆ ಶಿಷ್ಯರು, ‘ಈ ಮಹರ್ಷಿ ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವರು’ ಎಂಬ ವಿಶ್ವಾಸದಿಂದ ಕೈಯಲ್ಲಿ ಸಮಿಧೆಯನ್ನು ಹಿಡಿದು ಭಗವಾನ್ ಪಿಪ್ಪಲಾದ ಮಹರ್ಷಿಯ ಬಳಿಗೆ ತೆರಳಿದರು.
ಭಾರತೀಯ ಗುರುಶಿಷ್ಯ ಪರಂಪರೆಯಲ್ಲಿ ಪ್ರಶ್ನೋಪನಿಷತ್ತಿನ ಮೊದಲ ಶ್ಲೋಕ ತುಂಬಾ ಮಹತ್ವದ್ದು. ಗುರು ಶಿಷ್ಯ ಪರಂಪರೆಯೆನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ‘ಹೇಳುಗ’ ಮತ್ತು ‘ಕೇಳುಗ’ ಸಂಬಂಧ ಮಾತ್ರವಲ್ಲ. ವೇದಗಳ ಕಾಲದಿಂದ ಇಲ್ಲಿಯತನಕ ಅಪಾರವಾದ ಜ್ಞಾರಾಶಿಯನ್ನು ಕಾಪಿಟ್ಟು ಕಿಂಚಿತ್ತೂ ಊನವಾಗದ ರೀತಿಯಲ್ಲಿ ಯಥಾವತ್ತಾಗಿ ದಾಟಿಸಿಕೊಂಡ ಬಂದ ಹರಿವು. ಸಂವಹನ ಕ್ರಿಯೆಯಲ್ಲಿ ವಿಷಯಗಳನ್ನು ವ್ಯಕ್ತಪಡಿಸುವಲ್ಲಿ ಲಿಪಿ ಅನೇಕ ಸಲ ಸೋಲುತ್ತದೆ.
ಉದಾಹರಣೆಗೆ College ; ಕನ್ನಡದಲ್ಲಿ ಬರೆಯುವಾಗ ಕಾಲೇಜು ಎಂದು ಬರೆಯುತ್ತೇವೆ. ಆದರೆ ಇದರ ಉಚ್ಛಾರ ಕಾಲೇಜು ಅಥವಾ ಕೋಲೇಜು ಇದರ ಎರಡರ ನಡುವಿನ ಸ್ವರ; ಇದಕ್ಕೆ ಪ್ರತ್ಯೇಕ ಲಿಪಿಗಳು ಯಾವ ಭಾಷೆಯಲ್ಲಿಯೂ ಇಲ್ಲ. ಅದನ್ನು ಶೃತಿ ಕಿವಿಯಿಂದ ಕೇಳಿ ಸ್ಮೃತಿ ನೆನಪಿಟ್ಟು ಕೊಂಡು ತಪ್ಪದಂತೆ ಉಚ್ಛರಿಸುವುದು. ಗುರುಶಿಷ್ಯ ಪರಂಪರೆಯೆಂದರೆ ಪ್ರಾಚೀನ ಜ್ಞಾನವನ್ನು ಯಾವ ವ್ಯತ್ಯಾಸವೂ ಇಲ್ಲದೆ ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ನಿರಂತರ ಪ್ರವಾಹ.
ಇದನ್ನೂ ಓದಿ: Narayana Yaji Column: ನಮ್ಮ ಮೆಟ್ರೋಗೆ ವಿವೇಚನೆರಹಿತ ಡಾಲರ್ ಸಾಲದ ಉರುಳು
ಪ್ರಶ್ನೋಪನಿಷತ್ತು ಸುರುವಾಗುವುದೇ ಸುಕೇಶ, ಸತ್ಯಕಾಮ ಸೌರ್ಯಾಯಣಿ, ಕೌಸಲ್ಯ, ಭಾರ್ಗವ ಮತ್ತು ಕಬಂಧಿ ಎನ್ನುವ ಆರು ತರುಣ ಜಿಜ್ಞಾಸುಗಳಿಗೆ ಪರಬ್ರಹ್ಮವನ್ನು ಅರಿಯುವ ಬಯಕೆ ಉಂಟಾಗುವುದರಿಂದ. ಅದನ್ನು ತಿಳಿಸುವ ಸಾಮರ್ಥ್ಯ ಮಹರ್ಷಿ ಪಿಪ್ಪಲಾದ ಎನ್ನುವ ಋಷಿಗಿದೆ ಎಂದು ಅವರನ್ನು ಹುಡುಕಿಕೊಂಡು ಬರುತ್ತಾರೆ. ಆಶ್ರಮಕ್ಕೆ ಬರುವಾಗ ಅವರು ಚಿನ್ನ, ಬೆಳ್ಳಿ, ಧನ-ಧಾನ್ಯ ಅಥವಾ ಅಮೂಲ್ಯ ವಸ್ತುಗಳನ್ನು ಕಾಣಿಕೆಯಾಗಿ ತಂದಿರಲಿಲ್ಲ. ‘ಸಮಿತ್ತು’- ಯಜ್ಞಕ್ಕೆ ಬಳಸುವ ಒಣಕಟ್ಟಿಗೆಯನ್ನು ತಂದಿದ್ದರು. ಭಾರತೀಯ ಗುರು ಶಿಷ್ಯ ಪರಂಪರೆಯ ವೈಶಿಷ್ಟ್ಯವೇ ಇದು. ಜ್ಞಾನವನ್ನು ಧನದಿಂದ ಖರೀದಿಸಲು ಸಾಧ್ಯವಿಲ್ಲ; ಅದಕ್ಕೆ ಬೇಕಾಗಿರುವುದು ವಿನಯ, ಸೇವಾಭಾವ ಮತ್ತು ಸಮರ್ಪಣೆ. ಕೈಯಲ್ಲಿದ್ದ ಸಮಿತ್ ಗುರುಕುಲದ ಯಜ್ಞಾಗ್ನಿಯನ್ನು ಪೋಷಿಸುವ ಸಾಧನವಷ್ಟೇ ಅಲ್ಲ, ಶಿಷ್ಯನ ಅಹಂಕಾರವನ್ನು ಜ್ಞಾನಾಗ್ನಿಗೆ ಅರ್ಪಿಸುವ ಸಂಕೇತವೂ ಹೌದು.
ಇದಕ್ಕೆ ಇನ್ನೊಂದು ತಾತ್ವಿಕ ಆಯಾಮವೂ ಇದೆ. ‘ಸಮಿತ್’ ಎಂದರೆ ಒಣಕಟ್ಟಿಗೆ. ಒಣಕಟ್ಟಿಗೆ ಮಾತ್ರ ಅಗ್ನಿಯಲ್ಲಿ ಸುಲಭವಾಗಿ ಉರಿಯುತ್ತದೆ. ಅದೇ ರೀತಿ, ರಾಗ ದ್ವೇಷ, ಅಹಂಕಾರ ಮತ್ತು ಅಜ್ಞಾನ ದಿಂದ ಮುಕ್ತನಾದ ಮನಸ್ಸು ಮಾತ್ರ ಗುರು ನೀಡುವ ಜ್ಞಾನಾಗ್ನಿಯಲ್ಲಿ ಪ್ರಕಾಶಮಾನವಾಗುತ್ತದೆ. ಹೀಗಾಗಿ ಸಮಿತ್ಪಾಣಿಃ ಎಂದರೆ ಕೈಯಲ್ಲಿ ಕಟ್ಟಿಗೆಯನ್ನು ಹಿಡಿದವನು ಎಂಬುದಕ್ಕಿಂತ ಹೆಚ್ಚಾಗಿ, ತನ್ನ ಅಹಂಕಾರವನ್ನು ದಹಿಸಿಕೊಳ್ಳಲು ಸಿದ್ಧನಾದ ಶಿಷ್ಯ ಎಂಬ ಸಂಕೇತಾರ್ಥ.
ಉಪನಿಷತ್ತು ‘ಪರಬ್ರಹ್ಮ’ ಎನ್ನುವ ಶಬ್ಧದ ಅರ್ಥದೆಡೆ ನಮ್ಮನ್ನು ಕರೆದೊಯ್ಯುತ್ತದೆ. ಪರಬ್ರಹ್ಮ ಎಂದರೆ ಯಾವುದೋ ದೇವತೆ ಯಲ್ಲ, ಅದು ಸೃಷ್ಟಿಯ ರಹಸ್ಯ. ಪ್ರಪಂಚದಲ್ಲಿರುವ ಎಲ್ಲಾ ಜೀವಿಯ ಹಿಂದೆ ಯಾವುದೋ ಒಂದು ಏಕ ಸೂತ್ರವಿದೆ ಎನ್ನುವುದನ್ನು ನಂಬಿದ ಪ್ರಾಚೀನರು ಅದನ್ನು ತಿಳಿಯಲು ನಿರಂತರ ಪ್ರಯತ್ನವನ್ನು ಮಾಡುತ್ತಿದ್ದರು. ಅದೇ ‘ತಪಸ್ಸು’- ಒಂದು ವಸ್ತು ವಿನ ಕುರಿತು ಚಿಂತಿಸು ವುದು.
ನಾನು ಯಾರು ಎಂದು ತಿಳಿದುಕೊಳ್ಳುವಾಗ ನೀನು ಯಾರು ಎನ್ನುವುದನ್ನು ಮೊದಲು ಅರಿತು ಕೊಳ್ಳಬೇಕು. ಋಷಿ ಉದ್ಧಾಲಕನ ಮಗ ಶ್ವೇತಕೇತುವಿಗೆ ತನಗೆ ಎಲ್ಲಾ ತಿಳಿದಿದೆ ಎನ್ನುವ ಗರ್ವವಿತ್ತು. ಉದ್ಧಾಲಕ ಮಗನೆನ್ನುವ ವ್ಯಾಮೋಹವನ್ನು ಮೀರಿ ಆತನಿಗೆ ಪರಿಸರದಲ್ಲಿನ ಆಲದ ಬೀಜ, ಚಿನ್ನ, ಮಣ್ಣು-ಮಡಿಕೆ, ಮೊದಲಾದ ಒಂಬತ್ತು ದೃಷ್ಟಾಂತಗಳ ಮೂಲಕ ಅವುಗಳಲ್ಲಿ ಏನಿದೆಯೋ ಅದೇ ನಿನ್ನಲ್ಲಿಯೂ ಇದೆ ಎಂದು ಅವನ ಅಹಂಕಾರವನ್ನು ತೊಡೆದುಹಾಕುತ್ತಾನೆ. ಇದನ್ನು ಯಾವಾತ ಅರಿಯುತ್ತಾನೆಯೋ ಅಂತವನಿಗೆ ನಾನು ಎನ್ನುವ ಅಹಂಕಾರ ಇಲ್ಲವಾಗಿ ಸಮಷ್ಠಿಯ ಭಾಗವೇ ನಾನು ಎನ್ನುವ ‘ವಸುದೈವ ಕುಟುಂಬಕಂ’ ಅರಿವಾಗುತ್ತದೆ.
ನಾನು ನೀನು ಎನ್ನುವ ಭೇದದಲ್ಲಿ ತರತಮ ಭಾವವಿದೆ. ನೀನು ಏನಾಗಿದ್ದಿಯೋ ನನ್ನಲ್ಲಿಯೂ ಅದೇ ಇದೆ ಎನ್ನುವಲ್ಲಿ ಉದಾರತೆ ಇದೆ. ಭೇದ ಎಲ್ಲಿದೆಯೋ ಅದುವೆ ‘ಮಾಯೆ ಎಂದು ಶಂಕರರು ತಿಳಿಸಿದರು. ಎಲ್ಲವೂ ಪರಬ್ರಹ್ಮದ ಬೇರೆ ಬೇರೆ ತುಣುಕುಗಳು, ಗಂಗಾ ನದಿ ಸಾಗರವನ್ನು ಸೇರುವ ತನಕ ಅದಕ್ಕೊಂದು ಹೆಸರಿದೆ; ನದಿ ಬೇರೆ, ಸಮುದ್ರ ಬೇರೆ, ಲೀನವಾದ ನಂತರ ಅವೆಲ್ಲವೂ ಜಲಧಿಯೇ.
ಆದಿ ಶಂಕರಾಚಾರ್ಯರ ಅದ್ವೆ ತ ಸಿದ್ಧಾಂತದ ಪ್ರಮುಖ ಸಾರವಾದ ‘ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೆ ವ ನಾಪರಃ’ ಶ್ಲೋಕವು, ಬ್ರಹ್ಮವು ಶಾಶ್ವತ ಸತ್ಯವೆಂದೂ ಮತ್ತು ಜಗತ್ತು ಬದಲಾಗುವ ನಶ್ವರವೆಂದೂ ತಿಳಿಸುತ್ತದೆ. ಈ ಶ್ಲೋಕವು ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂದು ವಿವರಿಸಿ, ಮನುಷ್ಯನಿಗೆ ತನ್ನ ನಿಜ ಸ್ವರೂಪದ ಅರಿವು ನೀಡುತ್ತದೆ.
ಜ್ಞಾನ ಶಬ್ದದ ಅರ್ಥ ಕೇವಲ ತಿಳಿದುಕೊಳ್ಳುವುದು ಅಲ್ಲ; ತತ್ತ್ವವನ್ನು ಅದರ ನಿಜಸ್ವರೂಪದಲ್ಲಿ ಕಾಣುವುದು. ಪುಸ್ತಕಗಳು ವಿದ್ಯೆಯನ್ನು ಕೊಡುತ್ತವೆ; ಗುರು ಜ್ಞಾನವನ್ನು ಕೊಡುತ್ತಾನೆ. ಮಾಹಿತಿ ಮೆದುಳಿನಲ್ಲಿ ನೆಲೆಸುತ್ತದೆ; ಜ್ಞಾನ ಅಂತರಂಗದಲ್ಲಿ ಬೆಳಕಾಗುತ್ತದೆ. ಆದ್ದರಿಂದಲೇ ಭಾರತೀಯರು ‘ಜ್ಞಾನಿ’ ಎಂಬ ಪದವನ್ನು ಬಹಳ ಮಿತವಾಗಿ ಬಳಸಿದರು. ಸಾವಿರ ಗ್ರಂಥಗಳನ್ನು ಓದಿದವನಲ್ಲ, ‘ಸತ್ಯವನ್ನು ಕಂಡವನು’ ಜ್ಞಾನಿ. ಅದನ್ನು ಕಲಿಯಬೇಕಾದರೆ ಶಿಷ್ಯ ಸಮಿತ್ತಾಗಬೇಕು. ತನ್ನನ್ನು ತಾನು ಈ ಯಜ್ಞಾಗ್ನಿಗೆ ಅರ್ಪಿಸಿಕೊಳ್ಳಲು ಸಿದ್ಧನಾಗಬೇಕು.
ಮುಂದಿನ ಹಂತದಲ್ಲಿ ಅದರ ಅರಿವಿನ ಹಾದಿಯನ್ನು ಎರಡು ವಿಧದಲ್ಲಿ ಹೇಳಿದ್ದಾರೆ. ಗು ಎಂದರೆ ಅಂಧಕಾರ, ರ ಎಂದರೆ ಬೆಳಕು, ಯಾರು ನಮ್ಮ ಮನಸ್ಸಿನಲ್ಲಿರುವ ಅಜ್ಞಾನ ಮತ್ತು ತಾಮಸ ಗುಣಗಳನ್ನು ಹೋಗಲಾಡಿಸಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತಾರೋ, ಅವರೇ ನಿಜವಾದ ಗುರು.
ಜ್ಞಾನದ ಮೊದಲ ಮೆಟ್ಟಿಲು ಮಾಹಿತಿ ಅಲ್ಲ; ಜಿಜ್ಞಾಸೆ. ಪ್ರಶ್ನೆ ಹುಟ್ಟದ ಮನಸ್ಸು ಜ್ಞಾನವನ್ನು ಹುಡುಕುವುದಿಲ್ಲ. ಗೀತಾಚಾರ್ಯ ಜ್ಞಾನಿಗಿಂತ ಮೊದಲು ಜಿಜ್ಞಾಸುವಾಗಬೇಕೆನ್ನುತ್ತಾನೆ. ಜಿಜ್ಞಾಸು ವಿನ ದೃಷ್ಟಿ ವಸ್ತುವಿನ ಮೇಲೆ ಇರುವುದಿಲ್ಲ; ವಸ್ತುವಿನ ಹಿಂದಿರುವ ಸತ್ಯದ ಮೇಲೆ ಇರುತ್ತದೆ. ದುಃಖದಿಂದ ದೇವರನ್ನು ನೆನೆಯುವವನಿಗಿಂತಲೂ, ಸಂಪತ್ತಿಗಾಗಿ ದೇವರನ್ನು ಪ್ರಾರ್ಥಿಸುವವನಿ ಗಿಂತಲೂ, ನಾನು ಯಾರು? ಈ ಜಗತ್ತಿನ ಮೂಲವೇನು? ಎಂದು ಪ್ರಶ್ನಿಸುವ ಜಿಜ್ಞಾಸುವೇ ಜ್ಞಾನದ ಬಾಗಿಲಲ್ಲಿ ನಿಂತವನು.
ಆದ್ದರಿಂದಲೇ ಗೀತೆ ಗುರುವನ್ನು ಸಮೀಪಿಸುವ ಮಾರ್ಗವಾಗಿ ಪ್ರಣಿಪಾತ, ಪರಿಪ್ರಶ್ನ ಮತ್ತು ಸೇವೆ ಎಂಬ ತ್ರಿವೇಣಿಯನ್ನು ಹೇಳುತ್ತದೆ. ಪ್ರಶ್ನೆ ಇಲ್ಲದೆ ಜ್ಞಾನ ಹುಟ್ಟುವುದಿಲ್ಲ; ವಿನಯವಿಲ್ಲದೆ ಪ್ರಶ್ನೆಗೆ ಉತ್ತರ ದೊರೆಯುವುದಿಲ್ಲ; ಸೇವೆಯಿಲ್ಲದೆ ಗುರು ತನ್ನ ಅನುಭವವನ್ನು ಶಿಷ್ಯನಿಗೆ ದಾಟಿಸುವುದಿಲ್ಲ. ಹೀಗಾಗಿ ಜಿಜ್ಞಾಸೆಯೇ ಜ್ಞಾನದ ಬೀಜ; ಶ್ರದ್ಧೆ ಅದರ ನೀರು; ಗುರು ಅದರ ಕೃಷಿಕ; ಆತ್ಮಾನುಭವ ಅದರ ಫಲ. ಕೈಯಲ್ಲಿ ಸಮಿಧೆಯನ್ನು ಹಿಡಿದು ಗುರುವನ್ನು ಸಮೀಪಿಸುವುದೆಂದರೆ ವಿನಯ, ಸೇವಾಭಾವ ಮತ್ತು ಕಲಿಯುವ ಸಿದ್ಧತೆಯ ಸಂಕೇತ.
ಗೀತೆಯಲ್ಲಿ ಅರ್ಜುನ ಮೊದಲು ಕೃಷ್ಣ, ಮಧುಸೂದನ, ಜನಾರ್ದನ ಎಂದೆಲ್ಲ ಕರೆಯುತ್ತಾನೆ. ಆತನಿಗೆ, ತನಗೆ ಎಲ್ಲವೂ ತಿಳಿದಿದೆ ಎನ್ನುವ ಅಹಂಕಾರವಿತ್ತು. ನಿನ್ನ ಮನಸ್ಸಿನಲ್ಲಿರುವ ಕಶ್ಮಲವನ್ನು ತೆಗೆದುಹಾಕು ಎಂದು ಕೃಷ್ಣ ಗಂಭೀರ ಧ್ವನಿಯಲ್ಲಿ ಹೇಳಿದ ಮಾತನ್ನು ಕೇಳಿದ ಅರ್ಜುನನಿಗೆ ತನ್ನದು ಕಾರ್ಪಣ್ಯ ದೋಷವೆಂದು ಅರ್ಥವಾಗುತ್ತದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡಲಾರದ ದಯನೀಯ ಸ್ಥಿತಿಯಲ್ಲಿದ್ದೇನೆ.
ಧರ್ಮದ ಬಗ್ಗೆ ನನ್ನ ಚಿಂತನಶಕ್ತಿ ಗೊಂದಲದ ಗೂಡಾಗಿದೆ. ಯುದ್ಧ ಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ಯಾವುದು ನನಗೆ ಹಿತ ಎಂದು ತಿಳಿಯದಾಗಿದೆ. ನಾನು ನಿನ್ನ ಶಿಷ್ಯ ನಾಗಿ ನಿನ್ನಲ್ಲಿ ಶರಣಾಗಿದ್ದೇನೆ. ನನಗೆ ಮಾರ್ಗದರ್ಶನ ಮಾಡು- ‘ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇಖಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್’ ಎಂದು ಕೃಷ್ಣನಲ್ಲಿ ಸಂಪೂರ್ಣ ಶರಣಾಗು ತ್ತಾನೆ. ಇಲ್ಲಿಯ ತನಕ ಭಗವಂತನ ಮುಂದೆ ಪಂಡಿತನಂತೆ ಮಾತನಾಡಿದ ಅರ್ಜುನ, ಈಗ ಭಗವಂತ ನಲ್ಲಿ ಶರಣಾಗತಿಯನ್ನು ಯಾಚಿಸುತ್ತಿzನೆ. ನಾನು ಎನ್ನುವುದು ಅಳಿದಾಗ ತಾನಿದ್ದೇನೆ ಎಂದು ಗೀತಾಚಾರ್ಯ ಉದ್ಧರಿಸುತ್ತಾನೆ.
ವೇದೋಪನಿಷತ್ತುಗಳ ಸಾರವನ್ನು ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಕೊಟ್ಟ ವೇದವ್ಯಾಸರ ಜನ್ಮ ದಿನದ ನೆನಪಿಗೆ ಇದು ವ್ಯಾಸಪೂರ್ಣಿಮೆ. ವ್ಯಾಸರು ಒಬ್ಬ ವ್ಯಕ್ತಿಯಲ್ಲ; ಅವರು ಭಾರತೀಯ ಜ್ಞಾನ ಸಂಸ್ಕೃತಿಯ ಪ್ರತೀಕ. ಗುರುಪೂರ್ಣಿಮೆ ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿ ಅಜ್ಞಾನದಿಂದ ಜ್ಞಾನದ ಕಡೆಗೆ ನಡೆಯುವ ನಿತ್ಯೋತ್ಸವ. ಇಲ್ಲಿ ಗುರುವಿನ ಮೌನವೇ ವ್ಯಾಖ್ಯಾನ ವಾಗುತ್ತದೆ; ಶಿಷ್ಯನ ಜೀವನವೇ ಅದರ ಭಾಷ್ಯವಾಗುತ್ತದೆ.