ಓದುವಾಗ ಆನಂದ ಓದಿದ ನಂತರ ಬೆರಗು !
ಶಶಿಧರ ಹಾಲಾಡಿ ಅವರದು ಪರಿಸರ ಪ್ರತಿಭೆ. ಇದಕೆ ಹಲವು ಅರ್ಥಗಳಿವೆ. ಪರಿಸರದ ಬಗ್ಗೆ, ಹಕ್ಕಿ ಮರ ಗಿಡ ಹೂವು ಹಣ್ಣು ಗುಡ್ಡ ಬೆಟ್ಟಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ ಎಂಬುದೊಂದು. ಪರಿಸರದ ಬಗ್ಗೆ ಅದಮ್ಯ ಕಾಳಜಿಯ ಬರಹಗಾರ ಎಂಬುದು ಇನ್ನೊಂದು. ಟ್ರೆಕ್ಕಿಂಗ್‌ನಲ್ಲಿ ಆಸಕ್ತರು ಎಂಬುದೂ ನಿಜ. ಇನ್ನೂ ಒಂದು ಆಯಾಮವಿದೆ. ತಮ್ಮ ಒಂದು ಅಂಕಣದಲ್ಲಿ ಅವರು, ತಾವು ಟ್ರೆಕ್ಕಿಂಗ್ ಹೋದಾಗ ಕಂಡ ಒಂದು ಬಳ್ಳಿಯ ಬಗ್ಗೆ ಬರೆದಿದ್ದರು
-
ಹರೀಶ್ ಕೇರ
ಓದುವಾಗ ಆನಂದ ಓದಿದ ನಂತರ ಬೆರಗು! ಸಣ್ಣ ಸಣ್ಣ ವಿವರಗಳಿಂದ ಜೀವಂತವಾಗಿರುವ ಈ ಕೃತಿ ಆ ಕ್ಷಣಕ್ಕೆ ಓದಿನ ಆನಂದ, ಓದಿದ ನಂತರ ಒಂದಿಷ್ಟು ಬೆರಗು, ನೆನಪು ಉಳಿಸುತ್ತದೆ. ಇಂದು ಹೊಸ ತಲೆಮಾರಿ ನವರು ಇಂಥವುಗಳನ್ನು ರೀಲ್ಸ್‌ಗಳಲ್ಲಿ ತೋರಿಸುತ್ತಾರೆ. ಈ ಕೃತಿಯಲ್ಲಿ ಅಂಥ ನೂರಾರು ರೀಲ್ಸ್ ಮಾಡಬಹುದಾದ ಸರಕುಗಳಿವೆ.
ಶಶಿಧರ ಹಾಲಾಡಿ ಅವರದು ಪರಿಸರ ಪ್ರತಿಭೆ. ಇದಕೆ ಹಲವು ಅರ್ಥಗಳಿವೆ. ಪರಿಸರದ ಬಗ್ಗೆ, ಹಕ್ಕಿ ಮರ ಗಿಡ ಹೂವು ಹಣ್ಣು ಗುಡ್ಡ ಬೆಟ್ಟಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ ಎಂಬುದೊಂದು. ಪರಿಸರದ ಬಗ್ಗೆ ಅದಮ್ಯ ಕಾಳಜಿಯ ಬರಹಗಾರ ಎಂಬುದು ಇನ್ನೊಂದು. ಟ್ರೆಕ್ಕಿಂಗ್‌ನಲ್ಲಿ ಆಸಕ್ತರು ಎಂಬುದೂ ನಿಜ. ಇನ್ನೂ ಒಂದು ಆಯಾಮವಿದೆ. ತಮ್ಮ ಒಂದು ಅಂಕಣದಲ್ಲಿ ಅವರು, ತಾವು ಟ್ರೆಕ್ಕಿಂಗ್ ಹೋದಾಗ ಕಂಡ ಒಂದು ಬಳ್ಳಿಯ ಬಗ್ಗೆ ಬರೆದಿದ್ದರು. ಗುಡ್ಡ ಹತ್ತಿಳಿದು ದಣಿದು ಬಾಯಾರಿದ ಇವರಿಗೆ, ಸ್ಥಳೀಯರೊಬ್ಬರು ಒಂದು ಕಾಡು ಬಳ್ಳಿಯನ್ನು ಕಡಿದು ತುಂಡು ಮಾಡಿ ಬಾಯಿಗೆ ಹಿಡಿಯುತ್ತಾರೆ. ಆ ಬಳ್ಳಿಯಿಂದ ಧಾರೆಯಾಗಿ ನೀರು ಇಳಿದು ಇವರ ಬಾಯಾರಿಕೆಯನ್ನು ಹಿಂಗಿಸುತ್ತದೆ. ತಾನು ಹನಿಹನಿಯಾಗಿ ನೆಲದಿಂದ ಹೀರಿಕೊಂಡ ನೀರನ್ನು ಧಾರೆಯಾಗಿ ನಮಗೆ ನೀಡುವ ಕಾಡಿನ ಬಳ್ಳಿ- ಎಂಬರ್ಥದಲ್ಲಿ ಹಾಲಾಡಿಯವರನ್ನು ನೋಡಬಹುದು. ಅವರು ತಮ್ಮ ಜೀವನದ ಗಾಢ ಅನುಭವಗಳಿಂದ ಹನಿಹನಿಯಾಗಿ ಹೀರಿಕೊಂಡ ಪರಿಸರ ಸಂಬಂಧ ಸಂಗತಿ ಗಳನ್ನು ನಮಗೆ ನೀಡುತ್ತ ಬಂದಿದ್ದಾರೆ.
ಪರಿಸರ ಎಂದರೆ ಬರೀ ಕಾಡುಮೇಡು ಎಂದರ್ಥವಲ್ಲ ತಾನೆ? ಅವರ ಹನಿ ಹನಿ ಸಂಗ್ರಹ ಅದರಾಚೆಗೂ ಚಾಚಿದೆ. ಈ ಜಗತ್ತಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧಿಸಿದೆ. ಒಟ್ಟಾರೆ ಪರಿಸರದ ಸ್ಥಿತಿಗತಿ ಅದರ ಸಣ್ಣಪುಟ್ಟ ವಿವರಗಳಲ್ಲಿ ಕಂಡುಬರುತ್ತದೆ ಎನ್ನುತ್ತಾಳೆ ‘ದಿ ಸೈಲೆಂಟ್ ಸ್ಪ್ರಿಂಗ್ʼ ಬರೆದ ರಾಶೆಲ್ ಕಾರ್ಸನ್. ಹೀಗೆ ಸಣ್ಣಪುಟ್ಟ ವಿವರಗಳನ್ನು ಕಾಣುವ ಕಣ್ಣು, ಅದರ ಬೃಹತ್ ಆಯಾಮಗಳನ್ನೂ ತಾನಾಗಿಯೇ ಕಂಡರಿಸಬಲ್ಲುದು. ಶಶಿಧರ ಹಾಲಾಡಿ ಅಂಥದೊಂದು ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ.
ಇದನ್ನೂ ಓದಿ: Harish Kera Column: ಮಳೆ ನಿಂತು ಹೋದ ಮೇಲೆ, ಕಣ್ಣ ಹನಿ ಮೂಡಿದೆ
ಅವರ ವಿದೇಶ ಪ್ರವಾಸದ ಸಂದರ್ಭದಲ್ಲಿ ಕಂಡುಬಂದ ಸಣ್ಣಪುಟ್ಟ ಸಂಗತಿಗಳನ್ನು ಪ್ರತ್ಯಪ್ರತ್ಯೇಕ ವಾಗಿ ಕಟ್ಟಿಕೊಡುತ್ತ, ದೊಡ್ಡದೊಂದು ಚಿತ್ರವನ್ನು ನಮ್ಮ ಚಿತ್ತಭಿತ್ತಿಯಲ್ಲಿ ದಾಖಲಿಸಲು ಅವರು ಯತ್ನಿಸುತ್ತಾರೆ. ಈ ಕಾರಣದಿಂದಲೇ ಅಮೆರಿಕದ ಶಿಕಾಗೋದ ಬೀದಿಯಲ್ಲಿ ಕಂಡ ‘ಇಲ್ಲಿ ಜ್ಯೋತಿಷ್ಯ ಹೇಳಲಾಗುವುದು’ ಎಂಬ ಫಲಕ ಅವರನ್ನು ಸೆಳೆಯುತ್ತದೆ.
ಚಳಿ ನಿಂತು ಬಿಸಿಲು ಬಂದರೆ, ಅಲ್ಲಿನ ಹಲವರು ಚಡ್ಡಿ ಮಾತ್ರ ಧರಿಸಿ ಬೀದಿಗೆ ಬಂದು ದುಡುದುಡು ಓಡುತ್ತಾರೆ. ನಮ್ಮಲ್ಲಿ ದೇವಸ್ಥಾನಗಳಿಗೆ ಹರಕೆ ಹೇಳಿಕೊಂಡು ತೀರ್ಥಬಾವಿಗೆ ನಾಣ್ಯ ಬಿಸಾಕುವಂತೆ, ಅಲ್ಲಿ ಬ್ರೂಕ್ಲಿನ್ ಬ್ರಿಜ್‌ಗೆ ಪ್ರೇಮಿಗಳು ತಮ್ಮ ಪ್ರೀತಿ ಭದ್ರವಾಗಿರಲಿ ಎಂದು ಬೀಗ ತಂದು ಹಾಕುತ್ತಾರೆ. ನಮ್ಮ ಕೋಲ್ಕತ್ತಾ ಮುಂಬಯಿಗಳಂತೆ ಶಿಕಾಗೋದಲ್ಲೂ ಸೈಕಲ್ ರಿಕ್ಷಾಗಳು ಕಾಣಿಸುತ್ತವೆ. ಅಮೆರಿಕನ್ನರೂ ನಮ್ಮ ಹಾಗೇ, ಬದುಕುವ ರೀತಿಯಲ್ಲಿ, ತಂಟೆ ಕೊಂಟೆ ಚೇಷ್ಟೆಗಳಲ್ಲಿ ಎಂದು ಬಿಜಿಎಲ್ ಸ್ವಾಮಿಯವರು ತಮ್ಮ ‘ಅಮೆರಿಕದಲ್ಲಿ ನಾನು’ ಪುಸ್ತಕದಲ್ಲಿ ಬರೆಯುತ್ತಾರೆ.
ಇದನ್ನು ಓದುವಾಗ ಅದು ನೆನಪಾಗುತ್ತದೆ. ಲೇಖಕರು ತಾವು ನೋಡಿದ್ದನ್ನು ಭಾರತದ ಜೊತೆಗೆ ಕನೆಕ್ಟ್ ಮಾಡುವುದುಂಟು. ಭಾರತದಲ್ಲಿದ್ದಾಗ ಸೇವಿಸುತ್ತಿದ್ದ ಪಾರ್ಲೆ ಜಿ ಬಿಸ್ಕತ್ ಅನ್ನು ಹುಡುಕಿ ಹುಡುಕಿ ಸವಿಯುವಂತಾಗುತ್ತದೆ. ವಿದೇಶದಲ್ಲಿ ಇರುವವರು ತಂದುಕೊಟ್ಟ ಹಲಸಿನ ಹಣ್ಣು ಊರಿನ ನೆನಪು ಮಾಡಿಸುತ್ತದೆ. ವಿಶ್ವವಿಖ್ಯಾತ ನಯಾಗರ ಜಲಪತದ ಬಳಿ ಅವರನ್ನು ಸೆಳೆಯುವುದು ಭಾರತದ ಖಾದ್ಯ ನೀಡುವ ‘ದೋಸಾ ಹಟ್’ಗಳು.
ನ್ಯೂಯಾರ್ಕ್‌ನ ಆಲ್ಬೇನಿಯದಲ್ಲಿ ತಮ್ಮ ವಿದ್ಯಾರ್ಥಿ ದೆಸೆಯ ಗೆಳೆಯನನ್ನು 40 ವರ್ಷಗಳ ಬಳಿಕ ಭೇಟಿಯಾಗುತ್ತಾರೆ. ಇಲ್ಲೆಲ್ಲಾ ಭಾರತ ಒಂದು ಬೆಂಚ್‌ಮಾರ್ಕ್ ಆಗಿ ಬರದೆ, ಕ್ಷಣದ ಹೋಲಿಕೆಯಾಗಿ ಬಂದು ಮರೆಗೆ ಸರಿಯುತ್ತದೆ. ಹೀಗಾಗಿ ಅಲ್ಲಿ ಹಾಗಿದೆ, ಇಲ್ಲಿ ಹೀಗಿದೆ ಎಂಬ ಹಳಹಳಿಕೆಯಿಂದ ಪಾರಾಗಿದೆ. ಕೃತಿಯಲ್ಲಿ ನಮ್ಮನ್ನು ಸೆಳೆಯುವ ಮತ್ತೊಂದು ವಿಶೇಷ ಎಂದರೆ ಕಲಾಕೃತಿಗಳ ಬಗ್ಗೆ, ಕಲೆಯ ಬಗ್ಗೆ ಅವರಿಗಿರುವ ನಿರಂತರ ಕುತೂಹಲ, ಬೆರಗು, ಅನ್ವೇಷಣೆ. ವಾಷಿಂಗ್ಟನ್‌ನಲ್ಲಿ ಕಂಡ ವ್ಯಕ್ತಿಯ ವಿಚಿತ್ರ ದಿರಿಸು, ಸ್ಕಾಟಿಶ್ ಕಿಲ್ಟ್ ಎಂಬ ಸಾಂಪ್ರದಾಯಿಕ ಬಟ್ಟೆ ಎಂಬುದನ್ನು ಅವರು ಪತ್ತೆ ಹಚ್ಚುತ್ತಾರೆ.
ಅದು ನಮ್ಮ ಸಾಂಪ್ರದಾಯಿಕ ದಿರಿಸಿನ ಕಡೆಗೂ ಅವರು ಟಿಪ್ಪಣಿಸುವಂತೆ ಮಾಡುತ್ತದೆ. ನ್ಯೂಯಾರ್ಕ್ʼನ ಷೇರು ಮಾರುಕಟ್ಟೆಯ ಚಾರ್ಜಿಂಗ್ ಬುಲ್ ಪ್ರತಿಮೆಯ ವೃಷಣ ಮುಟ್ಟಿದರೆ ಅದೃಷ್ಟ ಎಂಬ ನಂಬಿಕೆ, ಶಿಕಾಗೋದಲ್ಲಿರುವ ಸ್ಪಿಯರ್ ಮ್ಯಾನ್, ಬೋ ಮ್ಯಾನ್ ಎಂಬ ನೇಟಿವ್ ಅಮೆರಿಕನ್ನರ ಶಿಲ್ಪಗಳ ಕೈಯಲ್ಲಿ ಈಟಿ, ಬಿಲ್ಲು ಬಾಣ ಇಲ್ಲದಿರುವುದು ಅವರ ಅಸಹಾಯಕತೆಯ ಸಂಕೇತ ಎಂಬ ವಿವರ ನೀಡಲು ಅವರು ಮರೆಯುವುದಿಲ್ಲ.
ಹಾಲಾಡಿ ಅವರು ನೀಡುವ ಸಣ್ಣಪುಟ್ಟ ಸಂಗತಿಗಳು, ಆಯಾ ದೇಶದ ಚರಿತ್ರೆಗಳ ಬಗ್ಗೆ ಘನ ವಿವರಗಳನ್ನು ನೀಡುವ ಬೆಳಕಿಂಡಿಗಳೂ ಆಗಿಬಿಡುತ್ತವೆ. ಉದಾಹರಣೆಗೆ ಒಹಾಯೋದ ಭೂಗತ ರೈಲು ರಸ್ತೆ. ಅದು 17-18ನೇ ಶತಮಾನದಲ್ಲಿ ಇಲ್ಲಿದ್ದ ಗುಲಾಮರು ಧಣಿಗಳಿಂದ ತಪ್ಪಿಸಿಕೊಳ್ಳಲು ಓಡಾಡುತ್ತಿದ್ದ ರಸ್ತೆ ಎಂಬ ವಿವರ. ಹೀಗೆ ತಪ್ಪಿಸಿಕೊಂಡವರ ಸಂಖ್ಯೆ ಸುಮಾರು 5 ಲಕ್ಷ ಎಂಬ ತಖ್ತೆ. ನ್ಯೂಜೆರ್ಸಿಯಲ್ಲಿರುವ ಸ್ವಾಮಿ ನಾರಾಯಣ ದೇಗುಲದಲ್ಲಿರುವ ನೀಲಕಂಠ ವರ್ಣಿಯ 49 ಅಡಿ ಎತ್ತರದ ಪ್ರತಿಮೆ. ಇದು ಆ ಪಂಥದ ಇಡೀ ಇತಿಹಾಸ ಕಟ್ಟಿಕೊಡುವಂಥದು.
ಶಿಕಾಗೋ ಟ್ರಿಬ್ಯೂನ್ ದಿನಪತ್ರಿಕೆಯ ಕಚೇರಿ ಕಟ್ಟಡ- 1942ರಲ್ಲಿ 24 ಲಕ್ಷದಷ್ಟಿದ್ದ ಈ ಪತ್ರಿಕೆಯ ಮುದ್ರಿತ ಪ್ರತಿಗಳ ಪ್ರಸಾರ ಸಂಖ್ಯೆ ಇಂದು 40 ಸಾವಿರಕೆ ಇಳಿದಿದೆ- ಎಂಬ ವಿವರ ಅಮೆರಿಕದ ಪತ್ರಿಕೋದ್ಯಮದ ಬಗ್ಗೆ ಬಹಳಷ್ಟನ್ನು ಹೇಳುವಂಥದು. ವಿದೇಶ ಪ್ರವಾಸದುದ್ದಕ್ಕೂ, ಪರಿಸರ ಹಾಗೂ ಆಧುನಿಕತೆಯನ್ನು ತಳುಕು ಹಾಕಿ ನೋಡುವ ಅವರ ಕಣ್ಣು ಸೂಕ್ಷ್ಮವಾಗಿ ಕೆಲಸ ಮಾಡದೇ ಬಿಡುವುದಿಲ್ಲ. ಶಿಕಾಗೋ ನದಿಯ ಕ್ರೂಸ್ ಪ್ರವಾಸ ಅವರಿಗೆ ಹೆಚ್ಚು ಇಷ್ಟವಾಗುತ್ತದೆ.
ಗಗನಚುಂಬಿ ಕಟ್ಟಡಗಳ ನಡುವೆಯೂ ಅವರು ಸೌಂದರ್ಯ ಕಾಣಬಲ್ಲರು. ಹಾಗೆಯೇ ಮಿಶಿಗನ್ ರಾಜ್ಯದ ಹಾಲೆಂಡ್‌ನಲ್ಲಿ ನಡೆಯುವ ಟುಲಿಪ್ ಹೂಗಳ ಜಾತ್ರೆಯೂ ಅವರ ಗಮನ ಸೆಳೆಯುತ್ತದೆ. ನಮ್ಮಲ್ಲಿ ರಸ್ತೆಯ ದೂಳಿನಂತೆ ನ್ಯೂಜೆರ್ಸಿಯಲ್ಲಿ ಪರಾಗ ರೇಣುಗಳು ಪ್ರವಾಹದಂತೆ ಹಾರಿಬಂದು ಮನೆಯ ಒಳಗೆಲ್ಲ ಆವರಿಸುತ್ತವೆ. ಇಂತಹ ಸಣ್ಣ ವಿವರಗಳಿಂದ ಜೀವಂತವಾಗಿರುವ ಈ ಕೃತಿ ಆ ಕ್ಷಣಕೆ ಓದಿನ ಆನಂದ, ಓದಿದ ನಂತರ ಒಂದಿಷ್ಟು ಬೆರಗು, ನೆನಪು ಉಳಿಸುತ್ತದೆ. ಇಂದು ಹೊಸ ತಲೆಮಾರಿನವರು ಇಂಥವುಗಳನ್ನು ರೀಲ್ಸ್‌ಗಳಲ್ಲಿ ತೋರಿಸುತ್ತಾರೆ. ಈ ಕೃತಿಯಲ್ಲಿ ಅಂಥ ನೂರಾರು ರೀಲ್ಸ್ ಮಾಡಬಹುದಾದ ಸರಕುಗಳಿವೆ. ಆದರೆ ಅಕ್ಷರಗಳಲ್ಲಿ ಅವುಗಳನ್ನು ಕಟ್ಟುವುದು ಹಾಲಾಡಿ ಯಂಥ ಕೆಲವೇ ಕೆಲವರಿಗೆ ಒಲಿಯುವ ಪ್ರತಿಭೆ.