ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಸಿಮೆಂಟ್‌ ಪೈಪ್‌ʼಗೆ ದಾರಿ ಮಾಡಿಕೊಟ್ಟ ಮರ !

ಮೌನವಾಗಿ ಆ ಮರದ ಪಕ್ಕದಲ್ಲೇ ತುಸು ಮುಂದಕ್ಕೆ ಸಾಗಿ, ಪುನಃ ವಾಪಸಾಗಿ, ಅದೇ ತಿರುವು ರಸ್ತೆಯಲ್ಲಿ ಬಂದೆ. ಈಗ ಆ ಎತ್ತರವಾದ ಮರದ ಕಾಂಡವನ್ನು ಕತ್ತರಿಸುವ ಮತ್ತು ಕತ್ತರಿಸಿದ ಕಾಂಡದ ಚೂರು ಗಳನ್ನು ದೂರ ಸರಿಸುವ ಕೆಲಸ ಭರದಿಂದ ಸಾಗುತ್ತಿತ್ತು. ಮರದ ನೆರಳಿನಲ್ಲಿ ಇರುತ್ತಿದ್ದ ಹಣ್ಣಿನ ಅಂಗಡಿ ಗಳ ಗಾಡಿಗಳು, ಅಲ್ಲೇ ಎದುರು ಭಾಗದ, ರಸ್ತೆಯಂಚಿನ ಖಾಲಿ ಜಾಗದಲ್ಲಿದ್ದ ಪ್ಲಾಸ್ಟಿಕ್ ಕಸದ ರಾಶಿಯ ಪಕ್ಕ ನಿಂತಿದ್ದವು.

Shashidhara Halady Column: ಸಿಮೆಂಟ್‌ ಪೈಪ್‌ʼಗೆ ದಾರಿ ಮಾಡಿಕೊಟ್ಟ ಮರ !

-

ಎತ್ತರದ ಮರವನ್ನು ಕಡಿದು ಹಾಕಿದ ನಂತರ, ಯಂತ್ರವೊಂದು ಬುಡ ದಲ್ಲೇ ತರಿದು ಹಾಕಿತ್ತು ಚರಂಡಿ ಯನ್ನು; ಅದರೊಳಗೆ ಹುಗಿಯು ತ್ತಿದ್ದಾರೆ ಸಿಮೆಂಟ್ ಪೈಪುಗಳನ್ನು, ಮರದ ಅಂತ್ಯಕ್ರಿಯೆ ಮಾಡುವ ರೀತಿಯಲ್ಲಿ.

ಅದೊಂದು ಬೃಹದಾಕಾರದ ಮರ; ನೆಲದಿಂದ ನೇರವಾಗಿ ಸುಮಾರು 60 ಅಡಿ ಎತ್ತರಕ್ಕೇರಿರುವ ಕಾಂಡ; ನಂತರ ಟಿಸಿಲೊಡೆದ ರೆಂಬೆಗಳು; ಅದು ಮತ್ತೆ ಕವಲೊಡೆದು, ಆ ಕವಲುಗಳ ತುಂಬಾ ಹಸಿರು ಸೂಸುವ ಎಲೆಗಳು; ವಿಶಾಲವಾದ ಕ್ಯಾನೊಪಿ. ಮೊನ್ನೆ ತಾನೆ ಮುಗಿದ ಬಿರುಸಾದ ಬೇಸಗೆ ಯಲ್ಲೂ, ತಂಪಾದ ನೆರಳೀಯುತ್ತಿದ್ದ ಮರ ಅದು. ಅದರ ಅಡಿ ಒಂದೆರಡು ಪುಟ್ಟ ಅಂಗಡಿ ಗಳಿದ್ದವು: ಮಾವಿನ ಹಣ್ಣು, ಹಲಸು, ಸೀಬೆ, ಸೇಬು, ಕಲ್ಲಂಗಡಿ, ಬನಾಸ್ಪತ್ರೆ, ಬಾಳೆ, ಲಿಚಿ, ಡ್ರಾಗನ್ ಹಣ್ಣುಗಳನ್ನು ಮಾರುತ್ತಿದ್ದ ಗಾಡಿ ಅಂಗಡಿಗಳು ಅವು. ಒಂದು ಮುಂಜಾನೆ, ಎಂದಿನಂತೆ ‘ವಾಟ್ಸಾಪಾಯನಮಃ’ ಎನ್ನುತ್ತಾ, ದೇವರಿಗೆ ನಮಃ ಎನ್ನುವ ಮುಂಚೆಯೇ, ಮೊಬೈಲ್ ಸ್ಕ್ರೀನ್ ಉಜ್ಜಿ, ವಾಟ್ಸಾಪ್ ನೋಡಿದಾಗ, ಗೆಳೆಯರಾದ ಕಮಲಾಕರ್ ಅವರು ಕಳಿಸಿದ ಫೋಟೋ ಕಣ್ಣಿಗೆ ಬಿತ್ತು.

‘ನಿಮ್ಮ ವಸತಿ ಸಂಕೀರ್ಣದ ಎದುರಿನ ತಿರುವು ರಸ್ತೆಯ ಪಕ್ಕದಲ್ಲಿರುವ ಎತ್ತರವಾದ ಮರ ಹೇಗಾಗಿದೆ ನೋಡಿ : ಹೀಗಾಗಿದೆ!’ ಎಂಬ ಸಂದೇಶವೂ ಇತ್ತು. ಆ ಎತ್ತರವಾದ ಮರದ ರೆಂಬೆಕೊಂಬೆಗಳನ್ನು ನಿನ್ನೆ ತಾನೆ ಕಡಿಯಲಾಗಿತ್ತು; ಅರವತ್ತು ಅಡಿ ಎತ್ತರದ ಕಾಂಡ ಮಾತ್ರ, ಬೋಳುಬೋಳಾಗಿ ನೆಟ್ಟಗೆ ನಿಂತಿತ್ತು, ಆ ಫೋಟೋದಲ್ಲಿ! ಆ ಮರದ ನೆರಳಿನಲ್ಲಿದ್ದ ಹಣ್ಣಿನ ಅಂಗಡಿ ಯವರು ಆ ಫೋಟೋದಲ್ಲಿ ಚಿಕ್ಕದಾಗಿ, ಲಿಲಿಪುಟ್‌ಗಳ ರೀತಿ, ಕಾಣಿಸುತ್ತಿದ್ದರು; ಪಕ್ಕದಲ್ಲೇ ಒಂದು ಬೋರ್ಡ್ : ‘ಕಿಲೋ ರು.100/-’. ಅವರು ಹಣ್ಣಿನ ಬೆಲೆಯನ್ನು ಬರೆಸಿಟ್ಟಿದ್ದ ಆ ಫಲಕವು, ಆ ಚಂದದ ಮರದ ಬೋಳು ಕಾಂಡದ ಕೊನೆಯ ದಿನದ ಬೆಲೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಆದರೆ, ಆ ಮರದ ಕಾಂಡದ ಮತ್ತು ರೆಂಬೆಗಳ ಬೆಲೆ ಕೇವಲ ಕಿಲೋ.ಗೆ ರು.100/- ಅಲ್ಲ; ಬದಲಿಗೆ ಸಾವಿರಾರು ರುಪಾಯಿಗಳು ಎನ್ನುತ್ತಾರೆ ವೃಕ್ಷವಿಜ್ಞಾನಿಗಳು! ಕೆರೆಯಂಚಿನ ದಾರಿಯ ಗುಂಟ ನಡೆದು, ತಿರುವು ರಸ್ತೆಯಲ್ಲಿ ನಡೆದು ಹೊರಟೆ. ದೂರ ದಿಂದಲೇ ಬೋಳು ಮರ ಕಾಣಿಸಿತು; ಮೊನ್ನೆಯ ತನಕ ಅದು ಸೂಸುತ್ತಿದ್ದ ಹಸಿರಿನ ತಂಪಿಗೆ ಸಾಟಿ ಇರಲಿಲ್ಲ. ಈಗ, ಹಳೆಯ ಕಾಲದ ‘ಕೈಮರದ’ (ಹ್ಯಾಂಡ್ ಪೋಸ್ಟ್) ರೀತಿ, ಅದರ ಕೊಂಬೆಗಳು ಮೂರು ನಾಲ್ಕು ದಿಕ್ಕಿಗೆ ಕೈ ಮಾಡಿದ್ದವು : ಅವು ಎತ್ತ ಕಡೆ ಕೈ ಮಾಡಿ ತೋರು ತ್ತಿವೆ ಎಂಬುದು ಹುಲುಮಾನವರಾದ ನಮಗೆ ಆ ಕ್ಷಣಕ್ಕೆ ಅರ್ಥ ವಾಗುತ್ತಿರಲಿಲ್ಲ; ಅರ್ಥವಾಗುವ ಸಾಧ್ಯತೆಯೂ ಇಲ್ಲ ಬಿಡಿ: ಈ ದಾರಿಯಲ್ಲಿ ಸಾಗಿದರೆ ನೀರಿಲ್ಲದ ಊರು, ಕಾಡಿಲ್ಲದ ಊರು, ಬದುಕಿಲ್ಲದ ಊರು - ಇಂತಹ ಜಾಗಗಳಿಗೆ ತಲುಪಬಹುದು ಎಂದು ಆ ಮರದ ಕೊಂಬಗಳ ಕೈಮರ ಹೇಳುತ್ತಿದೆಯೇನೋ ಎನಿಸಿತು.

ಇದನ್ನೂ ಓದಿ: Shashidhara Halady Column: ಈ ಅಮೂಲ್ಯ ವಿಟಮಿನ್‌ನ ಮೂಲ ನಮ್ಮ ದೇಶ!

ಮೌನವಾಗಿ ಆ ಮರದ ಪಕ್ಕದಲ್ಲೇ ತುಸು ಮುಂದಕ್ಕೆ ಸಾಗಿ, ಪುನಃ ವಾಪಸಾಗಿ, ಅದೇ ತಿರುವು ರಸ್ತೆಯಲ್ಲಿ ಬಂದೆ. ಈಗ ಆ ಎತ್ತರವಾದ ಮರದ ಕಾಂಡವನ್ನು ಕತ್ತರಿಸುವ ಮತ್ತು ಕತ್ತರಿಸಿದ ಕಾಂಡದ ಚೂರುಗಳನ್ನು ದೂರ ಸರಿಸುವ ಕೆಲಸ ಭರದಿಂದ ಸಾಗುತ್ತಿತ್ತು. ಮರದ ನೆರಳಿನಲ್ಲಿ ಇರುತ್ತಿದ್ದ ಹಣ್ಣಿನ ಅಂಗಡಿಗಳ ಗಾಡಿ ಗಳು, ಅಲ್ಲೇ ಎದುರು ಭಾಗದ, ರಸ್ತೆಯಂಚಿನ ಖಾಲಿ ಜಾಗದಲ್ಲಿದ್ದ ಪ್ಲಾಸ್ಟಿಕ್ ಕಸದ ರಾಶಿಯ ಪಕ್ಕ ನಿಂತಿದ್ದವು. ಇಷ್ಟು ದಿನ ಹಣ್ಣುಗಳ ರಾಶಿಯನ್ನು ಹಾಕಿಕೊಂಡಿರುತ್ತಿದ್ದ ಜಾಗದಲ್ಲಿ ಒಂದು ಜೆಸಿಬಿ ಯಂತ್ರ ನಿಂತಿತ್ತು. ಮರದ ಕಾಂಡವನ್ನು ಬೇರು ಸಹಿತ ಕಿತ್ತು, ಅದೇ ಜಾಗದಲ್ಲಿ ದೊಡ್ಡ ಚರಂಡಿಯನ್ನು ಆ ಯಂತ್ರ ಬಗೆದು ಹಾಕಿತು. ಅನತಿ ದೂರದಲ್ಲಿ ಪೇರಿಸಿಟ್ಟಿದ್ದ ಸಿಮೆಂಟ್ ಪೈಪುಗಳನ್ನು ಆ ಚರಂಡಿಯಲ್ಲಿ ಹೂಳುವ ಸಿದ್ಧತೆ ನಡೆದಿತ್ತು. ಆ ದಾರಿ ಯುದ್ದಕ್ಕೂ, ಆ ಮರದ ರೀತಿಯೇ ಇನ್ನಷ್ಟು ಮರಗಳು ಸತ್ತುಬಿದ್ದಿದ್ದವು; ಅಲ್ಲಿ, ರಸ್ತೆಯ ಪಕ್ಕದುದ್ದಕ್ಕೂ ಆ ಚರಂಡಿ ಕೆಲಸ ಸಾಗಿತ್ತು, ಸಿಮೆಂಟಿನ ಪೈಪುಗಳ ಸಾಲು ಅಲ್ಲಿತ್ತು; ,ಮರಗಳ ಕಾಂಡಗಳು ಅಕರಾಳವಿಕರಾಳ ಸ್ಥಿತಿಯಲ್ಲಿ ಹರಡಿದ್ದವು; ಸತ್ತು ಬಿದ್ದಿದ್ದ ಹೆಚ್ಚಿನ ಮರಗಳು, ಬೇವಿನ ಮರಗಳು. ಪೈಪು ಹೂಣುವ ಕೆಲಸದಲ್ಲಿ ಸಹಾಯಕ ರಾಗಿದ್ದ ಒಬ್ಬನನ್ನು ಕೇಳಿದೆ ‘ಯಾವ ಕಾಮಗಾರಿ ಇದು?’ ‘ಅಷ್ಟೂ ಗೊತ್ತಿಲ್ವಾ ಸಾರ್! ಕಾವೇರಿ ನೀರು ಬರುತ್ತೆ ಸಾರ್!

Tree 2

ನಿಮ್ಮ ಅಪಾರ್ಟ್‌ಮೆಂಟಿಗೆ ಸಿಹಿ ನೀರು ಬತ್ತೈತೆ, ನಿಮ್ಗೇ ಗೊತ್ತಿಲ್ವರಾ?’ ಎಂದನಾತ. ಆ ಬೃಹದಾ ಕಾರದ ಮರವು, ತುಂಡು ತುಂಡಾಗಿ ಬಿದ್ದಿರುವ ದೃಶ್ಯದ ತೀವ್ರತೆಯನ್ನು ಪೂರ್ತಿಯಾಗಿ ಅರಗಿಸಿ ಕೊಳ್ಳದಂತಹ ಮನಸ್ಥಿತಿಯಲ್ಲಿದ್ದ ನನಗೆ, ಆ ಕ್ಷಣದಲ್ಲಿ ಮಾತು ಬೆಳೆಸುವ ಮೂಡ್ ಇರಲಿಲ್ಲ; ಮೌನವಾಗಿ ಯೋಚಿಸುತ್ತಾ, ತಿರುವು ರಸ್ತೆಯಲ್ಲಿ ತಿರುವಿ ಕೊಂಡು, ಮನೆಗೆ ಬಂದೆ. ಅದೇಕೋ ಪ್ರಾಥಮಿಕ ಶಾಲೆಯ ಪಾಠಗಳ ಸಾರ ನೆನಪಾಯಿತು : ‘ಮರಗಳಿಂದಾಗಿ ಮಳೆ ಬರುತ್ತದೆ. ಕಾಡಿದ್ದರೆ ನಾಡು. ಮರಗಳು ಭಾಷ್ಪೀಭವನ ಕ್ರಿಯೆಯ ಮೂಲಕ ನೀರಾವೆಯನ್ನು ಮೇಲಕ್ಕೆ ಸೂಸಿ, ಮೋಡ ಗಳನ್ನು ತಣಿಸಿ ಮಳೆ ತರುತ್ತವೆ.’ ಕಾವೇರಿ ಸಿಹಿನೀರನ್ನು ಪೈಪುಗಳ ಮೂಲಕ ದೂರದ ನಗರದ ಮನೆಗಳಿಗೆ ಸಾಗಿಸಿ ತರುವವರು, ಈ ಪ್ರಾಥಮಿಕ ಪಾಠಗಳನ್ನು ಮರೆತರೆ? ಇನ್ನೂ ಮುಗಿದಿಲ್ಲ, ಕೇಳಿ : ಹಸಿರು ಮರ ನಿಂತಿದ್ದ ಜಾಗದಲ್ಲೇ ಠಿಕಾಣಿ ಹೂಡಿದ್ದ ಬುಲ್ ಡೋಜರುಗಳನ್ನು ನೋಡಿಕೊಂಡು, ವಾಪಸಾಗಿದ್ದ ನನ್ನನ್ನು, ನಮ್ಮ ವಸತಿ ಸಂಕೀರ್ಣದ ಗೇಟ್ ಹತ್ತಿರವೇ, ಕೆಲವು ಉತ್ಸಾಹಿಗಳು ಸ್ವಾಗತಿಸಿದರು : ‘ಬನ್ನಿ ಸಾರ್’ ಎಂದರು. ‘ಎಲ್ಲಿಗೆ?’ ಎಂದೆ.

‘ಅಷ್ಟೂ ಗೊತ್ತಿಲ್ವಾ ಸಾರ್, ಅಭಿಯಾನಕ್ಕೆ ಹೊರಟಿದ್ದೇವೆ, ನೋಡಿ. ನೀವೂ ಬನ್ನಿ. ಟಿ ಶರ್ಟ್ ಫ್ರೀ’ ಎಂದು ನಗುತ್ತಾ, ತಮ್ಮ ಬೆನ್ನನ್ನು ನನಗೆ ತೋರಿಸಿದರು. ಅವರು ಧರಿಸಿದ್ದ ಹೊಸ, ಬಿಳಿಯ ಟಿ ಶರ್ಟ್ ಮೇಲೆ ಹಸಿರು ಅಕ್ಷರಗಳಲ್ಲಿ ದೊಡ್ಡದಾಗಿ ಬರೆಸಿತ್ತು. ‘ಒಂದೇ ದಿನದಲ್ಲಿ 15 ಲಕ್ಷ ಗಿಡಗಳನ್ನು ನೆಡುವ ದಾಖಲೆ ಅಭಿಯಾನಕ್ಕೆ ನಿಮಗೆ ಸ್ವಾಗತ!’

ಚಿತ್ರಗಳು: ಕಮಲಾಕರ್ ಕೆ.ಆರ್.