ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !
ಧುರಂಧರ್ ಬಂದು ಭೇಟಿಯಾದ: ‘ನಮ್ಮ ಪಕ್ಕದ ದೇಶಕ್ಕೆ ಹೋಗೋಣ ಬನ್ನಿ, ಬರೀ ಮೂರೂ ಮುಕ್ಕಾಲು ಗಂಟೆಯೊಳಗೆ ವಾಪಸ್ಸು ಬರೋಣ’ ಅಂದ. ‘ಓ ಗುಡ್ ಡೀಲ್’ ಅಂತ ರಾತ್ರಿ ಒಂಬತ್ತಕ್ಕೆ ಮನೆ ಬಿಟ್ಟೆ. ನಡುರಾತ್ರಿ ಎರಡೂವರೆಗೆ ವಾಪಸ್ಸು ಕರೆದುಕೊಂಡು ಬಂದು ಭಾರತದಲ್ಲಿ ಬಿಟ್ಟು ಹೋದ. ಆಗಿನಿಂದ ಹೊಟ್ಟೇಲಿ, ಎದೇಲಿ, ಮನಸಲ್ಲಿ ಹೇಳಲಾಗದ ಸಂಕಟ.
-
ಕವಿತಾ ಹೆಗಡೆ ಅಭಯಂ
‘ನಾಮ್ ಕ್ಯಾ ಹೈ?’ ‘ಹಂಝಾ ಅಲಿ ಮಸಾರಿ’ ಎಂದು ಶುರುವಾಗುವ ರೀಲ್ಸ್‌ಗಳು ನೂರಾರು ಸಹಸ್ರ ಸಂಖ್ಯೆಯಲ್ಲಿ ಬರುತ್ತಿರುವುದು, ಈ ಚಲನಚಿತ್ರದ ಬಗ್ಗೆ ಯುವ ಜನಾಂಗಕ್ಕಿರುವ ಮೆಚ್ಚುಗೆಯನ್ನು ತೋರುತ್ತಿವೆ.
ಧುರಂಧರ್ ಬಂದು ಭೇಟಿಯಾದ: ‘ನಮ್ಮ ಪಕ್ಕದ ದೇಶಕ್ಕೆ ಹೋಗೋಣ ಬನ್ನಿ, ಬರೀ ಮೂರೂ ಮುಕ್ಕಾಲು ಗಂಟೆಯೊಳಗೆ ವಾಪಸ್ಸು ಬರೋಣ’ ಅಂದ. ‘ಓ ಗುಡ್ ಡೀಲ್’ ಅಂತ ರಾತ್ರಿ ಒಂಬತ್ತಕ್ಕೆ ಮನೆ ಬಿಟ್ಟೆ. ನಡುರಾತ್ರಿ ಎರಡೂವರೆಗೆ ವಾಪಸ್ಸು ಕರೆದುಕೊಂಡು ಬಂದು ಭಾರತದಲ್ಲಿ ಬಿಟ್ಟು ಹೋದ. ಆಗಿನಿಂದ ಹೊಟ್ಟೇಲಿ, ಎದೇಲಿ, ಮನಸಲ್ಲಿ ಹೇಳಲಾಗದ ಸಂಕಟ.
ನಮ್ಮ ಪಕ್ಕದ ದೇಶದ ಬಣ್ಣವಿಲ್ಲದ, ಬಡತನ ತುಂಬಿದ, ಬಂಜರು ಪ್ರದೇಶಗಳು, ‘ಗ್ರಿಮ್’ ಅನಿಸೋ ಲ್ಯಾರಿ ಪ್ರದೇಶಗಳು, ಅಂಥಾ ಜಾಗದಲ್ಲೂ ಎದ್ದು ಮುಖಕ್ಕೆ ಹೊಡೆಯುವ ‘ದೋ- ನಂಬರಿ’ ದಂಧೆಯ ಕರಾಳತೆ, ಮಾಫಿಯಾದವರೇ ತಮ್ಮ ದೇಶದ ರಾಜಕೀಯವನ್ನು ನಿಯಂತ್ರಿಸುವ ಶಕ್ತಿಗಳಾಗಿ ಬೆಳೆಯುವುದು, , ರಾಜಕಾರಣಿಗಳ ಕುತಂತ್ರಗಳು, ಭಾರತದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುವುದನ್ನೇ ಟಾರ್ಗೆಟ್ ಮಾಡಿಕೊಂಡ ಖೋಟಾ ನೋಟು ಜಾಲ, ನಕಲಿ ಆಯುಧಗಳ ಉತ್ಪಾದನೆ, ಭಯೋತ್ಪಾದಕ ಚಟುವಟಿಕೆ, ಇವೆಲ್ಲವನ್ನೂ ಬಳಸಿಕೊಂಡು ಭಾರತದ ಮೇಲೆ ಆ ನೆರೆಯ ದೇಶ ಆಕ್ರಮಣ ಮಾಡುವುದನ್ನು ಒಂದೊಂದಾಗಿ ತೋರಿಸುತ್ತಾ, ‘ಧುರಂಧರ’ ಮನಸ್ಸಿಗೆ ತೀರಾ ಮಂಕು ಬಡಿಸಿಬಿಟ್ಟ. ಅಲ್ಲಲ್ಲಿ ಕಾಣುವ ತುಸು ಹಸಿರು ಕೊಂಚ ಉಸಿರು ಕೊಟ್ಟವು ಅಷ್ಟೇ.
ನಮ್ಮ ದೇಶದ ವಿರುದ್ಧ ಭಯೋತ್ಪಾದನೆ ಮಾಡುವವರನ್ನು ಬುಡಸಮೇತ ಎಕ್ಸ್ಪೋಸ್ ಮಾಡಲು ಹೊರಟ ಬೇಹುಗಾರ ರಣವೀರ್ ಸಿಂಗ್, ಹೆಚ್ಚು ಮಾತನಾಡುವ, ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ಥಿತಿಯಲ್ಲಿಲ್ಲ. ವೈರಿಗಳ ನಡುವೆಯೇ ವರ್ಷಗಳಿಂದ ಬಾಳುತ್ತ, ಅವರಿಗೆ ಅನುಮಾನ ಬರದಂತೆ ವ್ಯವಹರಿಸುತ್ತ, ಆಪ್ತನಂತೆ ನಟಿಸಿ ಅವರ ರಹಸ್ಯ ಕಾರ್ಯಾಚರಣೆಗಳನ್ನು ತಿಳಿದು ಕೊಂಡು ಭಾರತಕ್ಕೆ ತಲುಪಿಸುವ ವೀರನಾಗಿ ರಣವೀರ್ ಸಿಂಗ್, ಅಸಾಮಾನ್ಯ ನಟನೆ ಮಾಡಿದ್ದಾನೆ.
ಉರಿವ ಮೈಮನವನ್ನು, ಉಕ್ಕಿ ಬರುವ ಕೋಪವನ್ನು ನಿಗ್ರಹಿಸಿಕೊಂಡು ಕಣ್ಣಲ್ಲೇ ಸಂಪೂರ್ಣ ಅಭಿನಯ ಮಾಡಿದ್ದು ಅವನ ಕೌಶಲ್ಯಕ್ಕೆ ಹಿಡಿದ ಕನ್ನಡಿ. ತೆರೆ ತುಂಬ ಎದ್ದು ಕಾಣುವ ಅವನ ಸೆಳೆಯುವ ದೃಢಕಾಯ ಎಷ್ಟು ಜನರ ನಿದ್ದೆಗೆಡಿಸುತ್ತದೆಯೋ ಗೊತ್ತಿಲ್ಲ.
ಇದನ್ನೂ ಓದಿ: Dhurandhar: ಅಕ್ಷಯ್ ಖನ್ನಾ ರೀತಿ ಪುನೀತ್ ರಾಜ್‌ಕುಮಾರ್ ಎಂಟ್ರಿ ಕೊಟ್ರೆ ಹೇಗಿರತ್ತೆ? ವೈರಲ್ ಆಯ್ತು ವಿಡಿಯೊ
ಆಹಾ! ‘ಹಂಝಾ ಅಲಿ ಮಸಾರಿ’ಯ ಪಾತ್ರವನ್ನೇ ಜೀವಿಸಿಬಿಟ್ಟಿರುವ ಅವನಿಗೆ ನೂರು ಸಲ ಶಾಭಾಷ್ ಹೇಳಲೇಬೇಕು.
ಅಕ್ಷಯ್ ಖನ್ನಾ ಅವಿಸ್ಮರಣೀಯ
ಆದರೆ, ಶೋ ಸ್ಟೀಲರ್ ಮಾತ್ರ ಆ ರೆಹಮಾನ್ ಡಕಾಯತ್ ಪಾತ್ರ ಮಾಡಿದ ಅಕ್ಷಯ್ ಖನ್ನಾ ಅನ್ನುವುದರಲ್ಲಿ ಸಂಶಯವೇ ಇಲ್ಲ. ತನ್ನ ಮಗನ ಸಾವಿನ ಒಂದು ಸೀನ್ ಸಾಕು, ಅವನ ತಾಕತ್ತು ತೋರಲು. ಏನು ಅಭಿನಯ ಚಾತುರ್ಯ! ಅದೇನು ಅರ್ಥಪೂರ್ಣ ನೋಟ! ಎಂಥಾ ನಗು! ಈ ಅವಿಸ್ಮರಣೀಯ ನಟನೆ ಅಕ್ಷಯ್ ಖನ್ನಾಗೆ ಅವನ ಜೀವಮಾನದ ಅತ್ಯಂತ ಯಶಸ್ವೀ ಪಾತ್ರವನ್ನು ಕೊಟ್ಟಿದೆ ಎನ್ನಬಹುದು.
ಇವರಿಬ್ಬರ ಜತೆ, ಅರ್ಜುನ್ ರಾಮ್ ಪಾಲ್, ಸಂಜಯ್ ದತ್ ಥರದ ಸೀನಿಯರ್ ನಟರ ಪಡೆಯೇ ಸೇರಿಕೊಂಡು ನಿಜಕ್ಕೂ ಥೀಯೇಟರನ್ನು ಚಿಂದಿ ಉಡಾಯಿಸುವುದು ಅಂದರೆ ಏನೆಂದು ತೋರಿಸಿ ಬಿಟ್ಟಿದ್ದಾರೆ. ಅಲ್ಲಿಯ ಗ್ಯಾಂಗ್ಸ್ಟರುಗಳು ಮತ್ತು ಭಯೋತ್ಪಾದಕರು ಸೇರಿ, ಪಕ್ಕದ ದೇಶದ ವಿಕೃತ ಕಾರನಾಮೆಗಳನ್ನ ಪೂರ್ತಿ ಹೊರಗೆಳೆದು ನಗ್ನಮಾಡಿ ಬಿಟ್ಟಿದ್ದಾರೆ.
ಒಂದೆಡೆ ತಾಂಡವವಾಡುವ ಬಡತನ, ಇನ್ನೊಂದೆಡೆ ಮೋಜಿನ, ಆಡಂಬರದ ಜೀವನ ಮಾಡುವ ರಾಜಕೀಯ ಪುಢಾರಿಗಳ ನಡುವಣ ವೈರುಧ್ಯ ಗಮನ ಸೆಳೆಯುತ್ತದೆ. ಇಡೀ ಚಲನಚಿತ್ರವನ್ನು ಪಾಕಿಸ್ತಾನದ ನೆಲದಲ್ಲಿಯೇ ನಡೆದ ಕಥೆಯ ಹಾಗೆ ಚಿತ್ರೀಕರಣ ಮಾಡಿದ್ದರಿಂದ ಚಿತ್ರದುದ್ದಕ್ಕೂ ನಾವೇ ಪಾಕಿಸ್ತಾನದಲ್ಲಿದ್ದ ಹಾಗನಿಸುತ್ತದೆ.
ಅಲ್ಲಿನ ಯಾಲೀನಾ ಎಂಬ ಗುಂಗುರು ಕೂದಲ ಸುಂದರಿಯ ಜೊತೆಗೆ “ಇಷ್ಕ್ ಓರ್ ಐಯ್ಯಾಷಿ?" ಎಂಬ ಪ್ರಶ್ನೆಗೆ ಹಂಝಾ ‘ಇಷ್ಕ್’ ಎಂಬ ಉತ್ತರ ಕೊಟ್ಟು ಎಲ್ಲರ ಹೃದಯ ಗೆದ್ದು ಬಿಡುತ್ತಾನೆ. ರಣಬೀರನ ಈ ಲವ್ ಸೀನುಗಳು ಮಾತ್ರ ಚಿತ್ರ ಕೊಡುವ ನೋವಿನ ದೃಶ್ಯಗಳಿಂದ ಸ್ವಲ್ಪ ಸುಧಾರಿಸಿ ಕೊಳ್ಳಲು ಸಹಾಯ ಮಾಡುತ್ತವೆ. ಅಕ್ಷಯ್ ಖನ್ನಾನ ಎಂಟ್ರಿಯ ಸಂಗೀತ, ಆಂಧಿ ಬನಕೇ ಆಯಾ ಹಾಡುಗಳು ಈಗಾಗಲೇ ಮೀಡಿಯಾದಲ್ಲಿ ಸೂಪರ್ ಹಿಟ್ ಆಗಿವೆ. ಚಿತ್ರದ ಸನ್ನಿವೇಶಕ್ಕೆ ತಕ್ಕ ಹಾಗೆ ಬರುವ ಬಪ್ಪಿ ಲಹರಿಯ ಸೂಪರ್ ಹಿಟ್ ರೆಟ್ರೋ ಹಾಡುಗಳು ಮಾತ್ರ ಅಲ್ಟಿಮೇಟ್ ಎಫೆಕ್ಟ್ ನೀಡುತ್ತವೆ.
ಬಾಲಿವುಡ್ ನಟರ ಅಭಿನಯ ವೈಭವವನ್ನು ನೋಡುವುದೇ ಒಂದು ಅದ್ಭುತ ಅನುಭವ. ಮೇಕಪ್ ಆರ್ಟಿಸ್ಟ್‌ಗಳ ಕೌಶಲ್ಯಕ್ಕೆ, ಸೆಟ್ ತಯಾರಿಸಿದವರ ಜಾಣ್ಮೆಗೆ ಸಾಟಿಯೇ ಇಲ್ಲ. ಇಂಥದ್ದೊಂದು ವಿಶಿಷ್ಟ ಚಿತ್ರ ನೀಡಿದ ಆದಿತ್ಯ ಧರ್ ಅನ್ನೋ ನಿರ್ದೇಶಕ ಎಲ್ಲರ ಹೃದಯ ಗೆದ್ದುಬಿಡುತ್ತಾನೆ.
ಹಿಂಸೆ ಹಿಂಸೆ
ಆದರೆ ಚಿತ್ರದಲ್ಲಿ ವೈಭವೀರಿಸಲಾದ ಹಿಂಸೆ ಮಾತ್ರ ಎಷ್ಟು ಅತಿ ಎಂದರೆ, ಬಹುಕಾಲ ನಮ್ಮನ್ನು ಡಿಸ್ಟರ್ಬ್ ಮಾಡುತ್ತದೆ. ಕ್ಷಣಕ್ಕೊಮ್ಮೆ ಸಿಡಿಯುವ ದೇಹಗಳು, ಹೋಳಾಗುವ ಬುರುಡೆ ಗಳು, ಗುಂಡಿಗೆಯನ್ನೇ ಅದುರಿಸುವ ಗುಂಡಿನ ಸದ್ದು, ಮಿತಿ ಮೀರಿದ ರಕ್ತಪಾತ, ದೇಶದ್ರೋಹಿಗಳಿಗೆ ಅಥವಾ ವೈರಿಗಳಿಗೆ ನೀಡುವ ಚಿತ್ರಹಿಂಸೆ, ಹೊಡೆದಾಟ, ರೌಡಿಸಂ - ಉಫ್ ‘ಸತ್ತೆ’ ಎಂದು ನಾವೇ ಕೂಗಬೇಕು! ‘ದೇವ್ರೇ ನಾನೊಲ್ಲೆ’ ಎಂದು ಎದ್ದು ಓಡಿ ಹೋಗಬೇಕು.
ಬ್ಯಾಕ್ ಟು ಬ್ಯಾಕ್ ಎದೆ ಝಲ್ ಎನಿಸುವ ದೃಶ್ಯಗಳು ಬಂದು ಅಪ್ಪಳಿಸುತ್ತ ಏಳಲಿಕ್ಕೇ ಚೈತನ್ಯ ಇಲ್ಲದ ಹಾಗೆ ಮಾಡುತ್ತವೆ. ಇದು ತುಂಬಾ ಉದ್ದದ ಸಿನಿಮಾ; ಕಂದಹಾರ್ ಘಟನೆ, ಭಾರತದ ಸಂಸತ್ತಿನ ಮೇಲಿನ ದಾಳಿ, ತಾಜ್ ಹೋಟೆಲ್ ಮೇಲಿನ ಆಕ್ರಮಣ ಮುಂತಾದ ಘಟನೆಗಳನ್ನು ತೋರಿಸುವಾಗ ಟೈಮ್ ಲೈನ್ ಸರಿಯಾಗಿ ಫಾಲೋ ಮಾಡಿಲ್ಲ, ಒಂದೆರಡು ಕಡೆ ಡಾಕ್ಯುಮೆಂಟರಿ ಅನಿಸುತ್ತದೆ ಅನ್ನುವ ದೂರುಗಳ ನಡುವೆಯೂ ತನ್ನ ಶಕ್ತಿಯಿಂದಾಗಿ, ಇದು ಇತ್ತೀಚೆಗೆ ಬಂದ ‘ಮೋಸ್ಟ್ ಡಿಸ್ಟರ್ಬಿಂಗ್ ಬಟ್ ಅ ಮಸ್ಟ್ ವಾಚ್ ಮೂವಿ’ ಅಂತ ಅನಿಸದೇ ಇರದು.
ಚಿತ್ರ ಎಷ್ಟು ಎಂಗೇಜಿಂಗ್ ಆಗಿತ್ತು ಅಂದರೆ ತೆಗೆದುಕೊಂಡ ಪಾಪ್ ಕಾರ್ನ್, ನ್ಯಾಚೋಸ್ ಒಂದೇ ಒಂದು ಕೂಡ ಗಂಟಲಲ್ಲಿ ಇಳಿಯಲಿಲ್ಲ. ನೀರು ಕುಡಿಯುವುದು ಕೂಡ ಸಾಧ್ಯವಾಗಲಿಲ್ಲ. ಅಷ್ಟೊಂದು ವಿಷಾದ ಚಿತ್ರದುದ್ದಕ್ಕೂ ಕಾಡುತ್ತಿತ್ತು. ಪಕ್ಕದ ದೇಶವು ನಮ್ಮ ದೇಶದ ನಿಜವಾದ ವೈರಿ ಇರಬಹುದು, ಆದರೆ ಅದಕ್ಕಿಂತ ಮಿಗಿಲಾದ ವೈರಿಗಳು ನಮ್ಮ ದೇಶದಲ್ಲೇ ಇದ್ದಾರೆ.
ಇಲ್ಲೇ ಇದ್ದುಕೊಂಡು ನೆರೆಯ ದೇಶ ‘ಪಾಪ’ ಅನ್ನೋ ಪಾಪಿಗಳು, ದೇಶ ಮಾರಲು ಹೊರಟ ರಾಜಕಾರಣಿಗಳು, ದೇಶ ಪ್ರೇಮ ಬೆಳೆಸುವವರನ್ನು ನಿಂದಿಸುವ ಮಾತೃಭೂಮಿ ಭಂಜಕರು, ತಾಯಿ ಭಾರತಿಗೆ ವಂದೇ ಎನ್ನಲು ನಾಲಿಗೆ ಇಲ್ಲದವರು, ನಿಜವಾದ ಖಳರು ಅನ್ನುವುದು ಮಾತ್ರ ಸತ್ಯ. ಇಂಥವರ ಮುಖವಾಡ ಬಯಲು ಮಾಡುವ ಇಂಥ ಚಿತ್ರಗಳು ಇನ್ನಷ್ಟು ಬರಲೇಬೇಕು, ಜನ ನೋಡಲೇಬೇಕು.
‘ನಾಮ್ ಕ್ಯಾ ಹೈ?’
‘ಹಂಝಾ ಅಲಿ ಮಸಾರಿ’ ಎಂದು ಶುರುವಾಗುವ ರೀಲ್ಸ್‌ಗಳು ನೂರಾರು ಸಹಸ್ರ ಸಂಖ್ಯೆಯಲ್ಲಿ ಬರುತ್ತಿರುವುದು, ಈ ಚಿತ್ರ ಬಗ್ಗೆ ಯುವ ಜನಾಂಗಕ್ಕಿರುವ ಮೆಚ್ಚುಗೆಯನ್ನು ತೋರುತ್ತಿವೆ. ಇನ್ನಷ್ಟು ಧುರಂಧರರು ಹುಟ್ಟಿಬರಲಿ, ನಮ್ಮ ದೇಶವನ್ನು ಕಾಪಾಡಲಿ ಎಂದು ಪ್ರೇಕ್ಷಕ ಹಾರೈಸಿದರೆ, ಅದರಲ್ಲಿ ಅಚ್ಚರಿಯೇನೂ ಇಲ್ಲ !