ಎಲ್ಲಿ ಮರೆಯಾಯಿತು ಅಂದಿನ ಸಂಭ್ರಮ ?
ಹೃದಯದಲ್ಲಿ ಬೆಳಕಿನ ಸೆಲೆಯನ್ನು ಕಾಪಿಟ್ಟುಕೊಂಡು, ಸುತ್ತಲಿನ ಸಮಾಜಕ್ಕೆ ಒಳಿತು ಮಾಡುವ ಕೈಂಕರ್ಯವನ್ನು ಕೈಗೊಳ್ಳಲು ಈ ಹಬ್ಬವೇ ಸ್ಪೂರ್ತಿ. ಕೆಲ ದಶಕಗಳ ಹಿಂದೆ ಹಬ್ಬಗಳನ್ನು ಜನರು ಸಂತೋಷದಿಂದ ಇದಿರು ನೋಡುತ್ತಿದ್ದರು. ಮುಕ್ತ ಮನಸ್ಸಿನಿಂದ, ಖುಷಿಯಿಂದ ಆಚರಿಸುತ್ತಿದ್ದರು.

-

ಮಲ್ಲಪ್ಪ ಫ. ಕರೇಣ್ಣವರ, ಹನುಮಾಪುರ
ನಮ್ಮ ನಾಡಿನ ಬಹುಪಾಲು ಗ್ರಾಮಗಳಲ್ಲಿ, ದೀಪಾವಳಿಯ ಆಚರಣೆಯ ಜತೆಯಲ್ಲೇ ಜಾನುವಾರುಗಳನ್ನು, ಎತ್ತು ಹಸುಗಳನ್ನು ಪೂಜಿಸುವ, ಅವುಗಳಿಗೆ ಸ್ನಾನ ಮಾಡಿಸಿ ಸಂಭ್ರಮಿಸುವ ಪದ್ಧತಿ ಅಡಕವಾಗಿತ್ತು. ಸೆಗಣಿಯಿಂದ ಹಟ್ಟಿಲಕ್ಕವ್ವ (ಲಕ್ಷ್ಮಿ) ನನ್ನು ತಯಾರಿಸಿ ಪೂಜಿಸುವುದೂ ಇದೆ. ಆದರೆ, ಕ್ರಮೇಣ ಹಬ್ಬದಾಚರಣೆ ಬದಲಾಗುತ್ತಿದೆ, ಸೆಗಣಿ ಮುಟ್ಟಲು ಇಂದಿನವರು ಹಿಂಜರಿ ಯುವುದೂ ಉಂಟು! ಪೂಜೆ, ದೀಪ ಬೆಳಗುವುದು, ಜಾನುವಾರುಗಳನ್ನು ಸಾಕುಪ್ರಾಣಿಗಳನ್ನು ಪೂಜಿಸುವುದು ಮರೆಯಾಗಿ, ಸದ್ದು ಮಾಡುವ ಪಟಾಕಿ, ಹೊಗೆ ಉಗುಳುವ ಬತ್ತಿಗಳನ್ನು ಸುಡುವುದೇ ಹಬ್ಬದ ಗದ್ದಲವಾಗಿದೆ! ಇಂತಹ ಬದಲಾವಣೆ ಅನಿವಾರ್ಯವೇ.
ಹಬ್ಬಗಳು ಜನರನ್ನು ಒಂದುಗೂಡಿಸುವ ಸೇತುವೆಗಳಾಗಿವೆ. ಒಡೆದ ಮನಸ್ಸುಗಳನ್ನು ಬೆಸೆಯುವ ಭಾವಸೇತುವೆಗಳಾಗಿವೆ .ಜಿಡ್ಡುಗಟ್ಟಿದ ಮನಸ್ಸುಗಳು ಲವಲವಿಕೆ ಕಡೆ ಹೊರಳಲು ಹಬ್ಬಗಳು ಪಥದರ್ಶಕಗಳಾಗಿವೆ. ಮೈ ಮುರಿದು ದುಡಿದು ದೇಹವನ್ನು ದಂಡಿಸಿ ಕೊಂಡವರಿಗೆ ಸಾಂತ್ವನ ನೀಡಬಲ್ಲವು. ಹೀಗಾಗಿಯೇ ನಮ್ಮ ಹಿರಿಯರು ಹಬ್ಬಗಳನ್ನು ಕಾಲಕಾಲಕ್ಕೆ ಮಾಡಿಕೊಂಡು ಬಂದು ಸಮುದಾಯದ ನಡುವೆ ಅಳವಡಿಸಿದ್ದಾರೆ, ಸಂಪ್ರದಾಯದ ಚೌಕಟ್ಟನ್ನು ಹಾಕಿಕೊಟ್ಟಿದ್ದಾರೆ.
ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬಗಳು ಒಂದೊಂದು ನೀತಿಯನ್ನು ನಮಗರಿ ವಿಲ್ಲದೇ ಕಲಿಸುತ್ತವೆ. ದೀಪಾವಳಿ ಯಂತೂ ಬೆಳಕಿನ ಹಬ್ಬ; ಜಗವನು ಬೆಳಗುವ ಪ್ರಕ್ರಿಯೆ ಒಂದಾ ದರೆ, ಜ್ಞಾನದ ಬೆಳಕನ್ನು ನಮ್ಮಲ್ಲಿ ಬೆಳಗಿಸಿಕೊಳ್ಳುವ ಅವಕಾಶ ನೀಡುವ ಹಬ್ಬ ಇದು.
ಹೃದಯದಲ್ಲಿ ಬೆಳಕಿನ ಸೆಲೆಯನ್ನು ಕಾಪಿಟ್ಟುಕೊಂಡು, ಸುತ್ತಲಿನ ಸಮಾಜಕ್ಕೆ ಒಳಿತು ಮಾಡುವ ಕೈಂಕರ್ಯವನ್ನು ಕೈಗೊಳ್ಳಲು ಈ ಹಬ್ಬವೇ ಸ್ಪೂರ್ತಿ. ಕೆಲ ದಶಕಗಳ ಹಿಂದೆ ಹಬ್ಬಗಳನ್ನು ಜನರು ಸಂತೋಷದಿಂದ ಇದಿರು ನೋಡುತ್ತಿದ್ದರು. ಮುಕ್ತ ಮನಸ್ಸಿನಿಂದ, ಖುಷಿಯಿಂದ ಆಚರಿಸುತ್ತಿದ್ದರು.
ತಮ್ಮ ಹಿರಿಯರ ಆಚರಣೆಗಳನ್ನು ಜತನದಿಂದ ಮುಂದುವರೆಸಿ ಕೊಂಡು ಬರುತ್ತಿದ್ದರು. ಮಕ್ಕಳಂತೂ ಹೊಸ ಬಟ್ಟೆ ಉಟ್ಕೊಂಡು ಊರ ತುಂಬಾ ಗೆಳೆಯರೊಂದಿಗೆ ಓಡಾಡುತ್ತಿದ್ದರು. ಹಿರಿಯರು ಹೊನ್ನರಿಕಿ ಹೂವು, ಜೋಳದ ದಂಟು, ಗುರೆಳ್ಳು ಕಡ್ಡಿ, ಉತ್ರಾಣಿ ಕಡ್ಡಿ, ಎಕ್ಕಿ ಹೂವು ಇವುಗಳನ್ನು ಹುಡುಕಿಕೊಂಡು ಸೂರ್ಯ ಕಣ್ಣು ಬಿಡುವ ಮೊದಲೇ ಹೊಲಗಳಲ್ಲಿ ಇರುತ್ತಿದ್ದರು.
ಇದನ್ನೂ ಓದಿ: Deepavali 2025: ಫ್ಲೋರಿಡಾ ರಾಜಧಾನಿಯಲ್ಲಿ ದೀಪಾವಳಿ ಆಚರಣೆ; ಭಾರತೀಯ ಸಂಸ್ಕೃತಿಗೆ ಗೌರವ
ಬೆಳಗ್ಗೆ ಬಹುಬೇಗನೆ ಹೊಳಗಳ ಸುತ್ತಾ ಓಡಾಡಿ, ಎಲ್ಲಾ ಬಗೆಯ ಹೂವುಗಳನ್ನು ತೆಗೆದುಕೊಂಡು ಬಂದು ಸೂರ್ಯ ಹಲ್ಲುಜ್ಜಿ ಮುಖ ತೊಳೆಯುವ ಮೊದಲೇ ಗೋವಿನ ಸೆಗಣಿಯಿಂದ ಮಾಡಿದ ಗುರ್ಜವ್ವ (ಲಕ್ಷ್ಮೀ), ರಂಟೆ, ಕುಂಟೆ, ಗಳೇವು ಸಾಮಾನು, ತಿಪ್ಪೆಗುಂಡಿ, ಕುಲುಮಿ, ಎತ್ತು ಕಟ್ಟವ ಹಟ್ಟಿ, ಕುರಿ ದೊಡ್ಡಿ, ಭರಮಪ್ಪನ ಗೂಡುಗಳಲ್ಲಿ ಇಡುತ್ತಿದ್ದರು. ಬಗೆಬಗೆಯ ಹೂವುಗಳಿಂದ ಶೃಂಗಾರಗೊಂಡು ಹಟ್ಟಿಲಕ್ಕವ್ವ ವಿರಾಜಮಾನವಾಗಿರುತ್ತಿದ್ದಳು.
ಹಟ್ಟಿ ಲಕ್ಕವ್ವ
ಹಟ್ಟಿ ಲಕ್ಕವ್ವನನ್ನು ನಿರ್ಮಿಸಲು ಆಕಳ ಸಗಣಿಯೇ ಪ್ರಶಸ್ತ, ಶ್ರೇಷ್ಠ; ಆಗ ಗುರ್ಜವ್ವ (ಹಟ್ಟಿ ಲಕ್ಕವ್ವ) ನನ್ನು ತಯಾರಿಸಲು ಆಕಳ ಸಗಣಿಗೆ ಕೊರತೆಯೇನು ಇರಲಿಲ್ಲ. ಊರ ತುಂಬಾ ಈಗ ಬೈಕ್‌ಗಳು ಓಡಾಡುತ್ತಿರುವಂತೆ, ಆಗ ದನಕರುಗಳು ಓಡಾಡುತ್ತಿದ್ದವು. ಬುಟ್ಟಿಗಟ್ಟಲೇ ಸಗಣಿ ತಗೊಂಡ್ ಬಂದು ದೊಡ್ಡ ದೊಡ್ದ ಗುರ್ಜವನನ್ನು ಮಾಡುತ್ತಿದ್ದರು. ಆದರೆ, ಈಗಿನ ತಲೆಮಾರಿನವರಿಗೆ ಸೆಗಣಿ ಮುಟ್ಟಿ ಗುರ್ಜವನನ್ನು ಮಾಡಲು ಜನರಿಗೆ ಮುಜುಗರ. ಸೆಗಣಿಯನ್ನು ಹಣ ಕೊಟ್ಟು ತಗೊಂಡ್ ಬಂದು ಅವನ್ಯಾಕೆ ಮಾಡಬೇಕು ಎಂದು ಆಲೋಚಿಸಿ, ಕಂಪ್ಯೂಟರ್ ಮೌಸ್ ಹಿಡಿದು ರೆಡಿಮೇಡ್ ಗುರ್ಜವ ನನ್ನು ತರಿಸಲು ಆನ್‌ಲೈನ್ ಅಂಗಡಿಗಳಲ್ಲಿ ತಡಕಾಡುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್ ಇಂದು ಹಬ್ಬಕ್ಕೆ ಕಳೆ ನೀಡುವ, ಯುವಜನರ ಮನಸ್ಸಿಗೆ ಮುದ ನೀಡುವ ಚಟುವಟಿಕೆಯಾಗಿದೆ.
ನಾಟಿ ವೈದ್ಯ
ದೀಪಾವಳಿ ಅಮಾವಾಸ್ಯೆಯಂದು ದನಗಳಿಗೆ ಕಂದು ಹರಿಯಲೆಂದು (ರೋಗರುಜಿನಗಳು ದೂರ ವಾಗಲೆಂದು) ಗುಲ್ಲು ಕೊಡುವುದು ಮಾಡುತ್ತಿದ್ದರು. ಇದೊಂದು ರೀತಿಯ ನಾಟಿ ವೈದ್ಯ ಪದ್ಧತಿ. ಎತ್ತುಗಳಿಗೆ ಗುಲ್ಲು ಕೊಡಲು ಖೂರಿಗೆ ತಾಳು ಬಳಸುತ್ತಿದ್ದರು. ಬೆಳಬೆಳಗ್ಗೆಯೆ ಮನೆಯ ಮುಂದೆ ತೊಗರಿಪಿಳ್ಳೆ ರವದಿ ಮತ್ತಿತರ ವಸ್ತುಗಳಿಂದ ಬೆಂಕಿಯನ್ನು ಹೊತ್ತಿಸಿ ಖೂರಿಗೆ ತಾಳನ್ನು ಕಾಯಿಸು ತ್ತಿದ್ದರು.
ಹಾಗೆ ಕಾಯಿಸಿದ ಖೂರಿಗೆ ತಾಳನ್ನು ದನಕರುಗಳಿಗೆ ಗೊತ್ತಾಗದ ಹಾಗೆ ಹೋಗಿ ಅವುಗಳ ಪಕ್ಕೆಯ ಭಾಗದಲ್ಲಿ ಗುಲ್ಲು ಕೊಡುತ್ತಿದ್ದರು. ಹೀಗೆ ಹಟ್ಟಿಯಲ್ಲಿರುವ ಎಲ್ಲಾ ದನಕರುಗಳಿಗೆ ಗುಲ್ಲು ಕೊಡು ವಾಗ ದನಕರುಗಳು ಚಡಪಡಿಸುತ್ತಿದ್ದವು. ಕೆಲವೊಂದು ಬಿಂಗಿ ನಮೂನಿ ದನಕರುಗಳಿಗೆ ಗುಲ್ಲು ಕೊಡುವಾಗ ಕೂಗಾಡಿ ಅನಾಹುತವನ್ನೇ ಸೃಷ್ಟಿಸುತ್ತಿದ್ದವು. ಗುಲ್ಲು ಕೊಡುವುದು ಮುಗಿದ ನಂತರ ದನಕರುಗಳನ್ನು ಊರ ಮುಂದಿನ ಕೆರೆಯಲ್ಲಿಯೋ, ಹೊಂಡದಲ್ಲಿಯೋ ಮೈ ತೊಳೆಯುತ್ತಿದ್ದರು.
ಮೈ ತೊಳೆದುಕೊಂಡು ಬರುವಾಗಿನ ಎತ್ತುಗಳ ಲವಲವಿಕೆ ಎತ್ತುಗಳ ಮಾಲಿಕನ ಉಲ್ಲಾಸ ಗರಿಗೆದರಿತಿತ್ತು. ಇದರ ಜೊತೆಯಲ್ಲಿ ಅತ್ತೆ, ಮಾವಂದಿರಿಗೆ, ಅಳಿಯರಿಗೆ ಬನ್ನಿ ಮರದ ಕಟ್ಟಿಗೆಯಿಂದ ಗುಲ್ಲು ಕೊಡುವುದು ನಡೆಯುತಿತ್ತು. ಊರಾಚೆಯ ತಪ್ಸಿ ಮರಕ್ಕೆ ಹೋಗಿ ಅದರ ನಾರನ್ನು ತೆಗೆದು ಕೊಂಡು ಬಂದು ರಟ್ಟೆಗೆ ಬಿಗಿಯಾಗಿ ಕಟ್ಟುತ್ತಿದ್ದರು.
ರಟ್ಟೆಯಲ್ಲಿ ನಾರಿನ ಗುರುತು ಮೂಡಿದರೆ ಕಂದು ಹರಿತು ಅನ್ನುತ್ತಿದ್ದರು. ಅಂದ್ರೆ ಯಾವುದೇ ಬಗೆಯ ರೋಗರುಜಿನಗಳು ಇದ್ರೆ ಅವುಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಜನರಲ್ಲಿತ್ತು. ಅಂದಿನ ಬೆಳಗಿನ ಸಮಯದಲ್ಲಿ ಓಣಿಯಲ್ಲಿ ಸಂತಸ, ಕುತೂಹಲ ಕಳೆಗಟ್ಟಿರುತಿತ್ತು.
ಗೋಡೆ ಮೇಲೆ ಪಾಂಡವರ ಚಿತ್ರ
ಮೂರ್ನಾಲ್ಕು ದಶಕಗಳ ಹಿಂದೆ ಗೋಡೆಯ ಮೇಲೆ ಪಾಂಡವರ ಚಿತ್ರ ಬಿಡಿಸುತ್ತಿದ್ದರು. ಕುಡು ಗೋಲು, ಹಟ್ಟಿಲಕ್ಕವ್ವರನ್ನು ಗೋಡೆಯ ಮೇಲೆ ಬಣ್ಣದಿಂದ ಬಿಡಿಸುವುದಲ್ಲದೇ, ಸುಣ್ಣದ ಜೋರು ಮತ್ತು ಉರಮುಂಜ ದಿಂದ ಸೆಗಣಿಯಿಂದ ಸಾರಿಸಿದ ನೆಲದಲ್ಲಿ ಎತ್ತಿನ ಹೆಜ್ಜೆಗಳನ್ನು ಮೂಡಿಸು ತ್ತಿದ್ದರು. ಇವೆಲ್ಲ ಆಚರಣೆಗಳು ಈ ನೆಲದ ಮಣ್ಣಿನಲ್ಲಿ ಬೆಳೆದುಬಂದಂತವು. ಇತ್ತೀಚಿನ ದಿನಗಳಲ್ಲಿ ಸೆಗಣಿಯಿಂದ ಸಾರಿಸಿದ ಮನೆಗಳ ಬದಲು ಟೈಲ್ಸ್, ಮಾರ್ಬಲ್ಸ್ ಗಳ ಮಹಿಮೆ ಹೆಚ್ಚಾಗಿ ಸಂಪ್ರದಾಯಗಳು ಮೂಲೆ ಸೇರಿವೆ.
ಶಿವನು ಧರಿಸುವ ಲಿಂಗವನ್ನು ಈ ಸಮಾಜದವರು ಕುರಿ ಹಿಕ್ಕೆಯಲ್ಲಿ ಕಾಣುತ್ತಾರೆ. ಹಾಗಾಗಿ ಕುರಿ ಕಾಯುವವರನ್ನು ಹುಟ್ಟಾ ಲಿಂಗಧಾರಿಗಳೆಂದು ಸಮಾಜದಲ್ಲಿ ಸಹ ಕರೆಯುವುದು ಸಂಪ್ರದಾಯ ವಿದೆ. ಕುರಿಗಾರರು ಹಾಲನ್ನು ಉಕ್ಕಿಸಿ ಹಾಲು ಯಾವ ದಿಕ್ಕಿನ ಕಡೆ ಹರಿಯುತ್ತಿದೆ ಆ ದಿಕ್ಕಿನ ಕಡೆ ಅವರು ಕುರಿ ಹಿಂಡಿನೊಂದಿಗೆ ಸಾಗುತ್ತಾರೆ. ಹೀಗೆ ಕುರಿ ಮೇಸುತ್ತಾ ಸಾಗುವ ಇವರು ಮುಂಗಾರು ಮಳೆ ಪ್ರಾರಂಭವಾಗುವ ಹೊತ್ತಿಗೆ ಊರನ್ನು ಸೇರುತ್ತಾರೆ.
ಗ್ರಾಮೀಣ ಪ್ರದೇಶದ ಜನರು ಆಧುನಿಕತೆಗೆ ಮೈಯೊಡ್ಡಿದಂತೆ ಊರಿನ ಕಿರಾಣಿ ಅಂಗಡಿಗಳು, ಹಿಟ್ಟಿನ ಗಿರಣಿ, ಟ್ರ್ಯಾಕ್ಟರ್ ಪೂಜೆ, ವಾಹನಗಳ ಪೂಜೆಗಳು ಸಹ ಸಂಭ್ರಮದಿಂದ ಮಾಡಲು ಶುರು ಮಾಡಿದ್ದಾರೆ. ಪ್ರತಿ ಕಿರಾಣಿ ಅಂಗಡಿಗಳಲ್ಲಿ ಭಜನಾ ಗೀತೆಗಳನ್ನು ಭಜನಾ ತಂಡದಿಂದ ಹಾಡಿಸಿ ಪೂಜೆಯನ್ನು ಮಾಡಿಸುತ್ತಿದ್ದರು. ಪ್ರತಿ ಅಂಗಡಿಯ ಮುಂದೆ ಒಂದೆರಡು ಭಜನಾ ಗೀತೆಗಳನ್ನು ಹೇಳುತ್ತಾ ಭಕ್ತಿಯ ಭಾವಪರವಶತೆಯಲ್ಲಿ ಮೈ ಮರೆಯುತ್ತಿದ್ದರು. ಹೀಗೆ ಊರಿನಲ್ಲಿರುವ ಎಲ್ಲಾ ಅಂಗಡಿಗಳಲ್ಲಿ ಇವರ ಸೇವೆ ಮುಂದುವರೆದಿರುತ್ತಿತ್ತು.
ಕಾಲ ಉರುಳಿದಂತೆ ಹಬ್ಬಗಳ ಆಚರಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನರು ಒಟ್ಟಾಗಿ, ಸಡಗರ ಸಂಭ್ರಮದಿಂದ ಆಚರಿಸುವುದು ಕಡಿಮೆಯಾಗಿದೆ. ಜನರು ನಮ್ಮ ನಂಬಿಕೆ ಸಂಪ್ರದಾಯ ಗಳಿಗಿಂತ ಹಣದ ಮೇಲಿನ ವ್ಯಾಮೋಹಕ್ಕೊಳಗಾಗಿದ್ದಾರೆ. ನಗರ ಪ್ರದೇಶಗಳಲ್ಲಂತೂ ಹಬ್ಬಗಳು ಸೊರಗುತ್ತಿವೆ, ಸಾಂಪ್ರದಾಯಿಕ ಆಚರಣೆಗಳು ಮರೆಯಾಗುತ್ತಿವೆ ಮತ್ತು ಸದ್ದು ಗದ್ದಲ ಆಡಂಬರ ಗಳೇ ಹಬ್ಬದ ಭಾಗವಾಗುತ್ತಾ ಸಾಗಿವೆ. ದೀಪಾವಳಿಯ ಸಮಯದಲ್ಲಿ ಜಾನುವಾರುಗಳನ್ನು ಪೂಜಿಸುವುದು ವಾಡಿಕೆ; ಆದರೆ, ದನಕರುಗಳ ಜಾಗದಲ್ಲಿ ಇಂದು ವಾಹನಗಳು ಬಂದು ನಿಂತಿರುವು ದರಿಂದ ಪ್ರಾಣಿಗಳೊಂದಿಗಿನ ಒಡನಾಟವೂ ಕಡಿಮೆಯಾಗಿದೆ.
ಮನಸ್ಸುಗಳು ಸಣ್ಣದಾಗಿವೆ. ಕಾಲದೊಂದಿಗೆ ಜಗತ್ತು ಮತ್ತು ನಮ್ಮ ಪರಿಸರವೂ ಬದಲಾಗುತ್ತಾ ಸಾಗಿದೆ ಎಂದು ಕೆಲವರು ವಾದಿಸಿ, ಇಂತಹ ಬದಲಾವಣೆಗಳು ಅನಿವಾರ್ಯ ಎಂಬ ಅಭಿಪ್ರಾಯ ವನ್ನು ಹೇಳುವುದುಂಟು; ಆದರೆ, ಬದಲಾವಣೆಯು ಸಕಾರಾತ್ಮಕವಾಗಿರಬೇಕೇ ಹೊರತು, ನೀರಸ ವಾಗಿರಬಾರದು, ಅಲ್ಲವೆ?