ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

ಸಾಮಾನ್ಯವಾಗಿ ಎಷ್ಟೋ ಸಾಫ್ಟ್‌ʼವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದ ಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳು ತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು.

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

-

Profile
Ashok Nayak Jun 14, 2026 4:51 PM

ಹರಿಪ್ರಸಾದ್ ನಾಡಿಗ್

ಪ್ರಶಾಂತ ವಾತಾವರಣವಿದ್ದ ಆ ಬೆಟ್ಟದ ತುದಿಯಲ್ಲಿದ್ದ ಕಾಡು, ಅಲ್ಲಿನ ದೇವಾಲಯದ ಬಳಿ ಇರುವ ದೈವಿಕ ವಾತಾವರಣವು ನಿಧಾನವಾಗಿ ಕದಡಿ ಹೋಗುತ್ತಿದೆ; ಹೊಸ ರಸ್ತೆಗೆ ಹಲವು ಮರಗಳ ಬಲಿಯಾಗಿದೆ. ಇದು ಕೇವಲ ಒಂದು ಬೆಟ್ಟದ ಕಥೆಯಲ್ಲ, ನಮ್ಮ ನಾಡಿನ ಹಲವು ಬೆಟ್ಟಗಳ ಕಥೆ; ‘ಕಾಡು ಕಡಿದು ಅಭಿವೃದ್ಧಿ ಮಾಡುವ ಕಾಲ ಮುಗಿದುಹೋಗಿದೆ, ಈಗ ಏನಿದ್ದರೂ, ಪರಿಸರ ಉಳಿಸಿಕೊಂಡೇ ಅಭಿವೃದ್ಧಿ ಮಾಡಬೇಕು ಎಂದು ಜನರಿಗೆ ತಿಳಿ ಹೇಳುವವರು ಯಾರು?

ನಾವೆಲ್ಲರೂ ಬಂದು, ಬಿಸಿಲಲ್ಲಿ ನಾಲ್ಕಾರು ಗಂಟೆ ನಿಂತು ಮಕ್ಕಳ ಜೊತೆ ಸೇರಿ, ಇಲ್ಲಿ ಎಷ್ಟೋ ದಿನಗಳ ಕಾಲ ಗಿಡ ಹಾಕಿದ್ದೆವು ಸರ್. ಬೆಳಿಗ್ಗೆ ನಾನು ಇಲ್ಲಿಗೆ ಹೊರಡುವಾಗ ನನ್ನ ಮಗ, ‘ಅಮ್ಮ, ನಾನು ಹಾಕಿದ್ದ ಗಿಡ ಉಳಿದಿದೆಯಾ ನೋಡ್ಕೊಂಡು ಬಾ’ ಎಂದಿದ್ದ. ಆದರೆ ಇಲ್ಲಿಗೆ ಬಂದು ನೋಡಿದ ಮೇಲೆ ನನಗೆ ತುಂಬಾ ಬೇಸರವಾಯಿತು, ಸರ್. ತುಂಬಾ ಕಷ್ಟಪಟ್ಟು ಗಿಡಗಳನ್ನು ನೆಟ್ಟು ಅದನ್ನು ನೋಡಿಕೊಂಡಿದ್ದೆವು’ ಎಂದು ಸಾಫ್ಟ್‌ʼವೇರ್ ಇಂಜಿನಿಯರ್ ವೀಣಾ ಹೇಳುವಾಗ ಅವರ ಕಣ್ಣುಗಳು ತೇವವಾಗಿದ್ದವು. ಅವರು ಗಿಡ ನೆಟ್ಟ ಜಾಗದಲ್ಲಿ, ಹೊಸ ಕಾಮಗಾರಿಗೆ ತಳಪಾಯ ಹಾಕಲಾಗಿದೆ!

ಸಾಮಾನ್ಯವಾಗಿ ಎಷ್ಟೋ ಸಾಫ್ಟ್‌ʼವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದ ಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡ ಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು.

Betta 3

ಭಾನುವಾರ ನಾವೆಲ್ಲರೂ ಇಲ್ಲಿ “ಗಿಡಗಳನ್ನು ಉಳಿಸಲು ಏನು ಮಾಡಬಹುದು? ಎಂಬುದರ ಕುರಿತು ಚರ್ಚೆ ಮಾಡಲು ಸೇರುತ್ತಿದ್ದೇವೆ, ನೀವು ಕೂಡ ಬಂದು ನಮಗೆ ಸಲಹೆ ನೀಡಬೇಕು" ಎಂದು ನನ್ನನ್ನು ಆಮಂತ್ರಿಸಿದ್ದರು. ವೀಣಾ ಅವರ ಮಗ ‘ನಾವು ನೆಟ್ಟಿರುವ ಗಿಡವನ್ನು ಅವರು ಹೀಗೆ ಕಡಿಯುವುದಾದರೆ, ನಾವು ಯಾಕೆ ಗಿಡ ನೆಡಬೇಕು ಅಮ್ಮ?’ ಎಂದು ಈ ದಿನ ಅವರು ಇಲ್ಲಿಗೆ ಹೊರಟಾಗ ಕೇಳಿದನಂತೆ. ಅದನ್ನು ಕೇಳಿ ನನಗೆ ನಿಜಕ್ಕೂ ಬೇಸರವಾಯಿತು. ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುತ್ತಿರುವುದಾದರೂ ಏನು?

ದಿಢೀರನೆ ಹೊಸ ರಸ್ತೆ!

ಅವರ ಮಕ್ಕಳು ತಾವು ನೆಟ್ಟ ಗಿಡಗಳನ್ನು ನೋಡಲೆಂದೇ ಆಗಾಗ ಇಲ್ಲಿಗೆ ಬರುತ್ತಿದ್ದರಂತೆ. ಅಲ್ಲದೆ ಸ್ಥಳೀಯ ಶಾಲೆಯ ಮಕ್ಕಳು ನೂರಾರು ಗಿಡಗಳನ್ನು ಅಲ್ಲಿ ನೆಟ್ಟು ಅದಕ್ಕೆ ನೀರೆರೆದು ನೋಡಿ ಕೊಳ್ಳುತ್ತಿದ್ದರಂತೆ. ಆದರೆ ಈಗ ಆ ಗಿಡಗಳನ್ನು ನೆಟ್ಟಿದ್ದ ಜಾಗದಲ್ಲಿ 80 ಅಡಿಯ ರಸ್ತೆಯೊಂದು ದಿಢೀರನೆ ತಲೆಯೆತ್ತಿದ್ದು, ಇಡೀ ಗುಡ್ಡದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ.

ಸಾವಿರಾರು ವರ್ಷಗಳಿಂದ ಗಟ್ಟಿಯಾಗಿ ನಿಂತಿದ್ದ ಕಲ್ಲುಗುಡ್ಡ ಈಗ ಕಾಂಕ್ರೀಟ್ ಕಾಡಾಗುವತ್ತ ಹೊರಟಂತೆ ಕಾಣುತ್ತಿದೆ. ಕಲ್ಲುಬಂಡೆಗಳನ್ನೆಲ್ಲ ಜೆಸಿಬಿಗಳಿಂದ ಜರುಗಿಸಿಬಿಟ್ಟಿದ್ದಾರೆ. ಇತಿಹಾಸ ಪ್ರಸಿದ್ಧ ಮಹಿಮಾಪುರ ಬೆಟ್ಟ ಜಾಗ - ಮಹಿಮಾಪುರ (ದಾಬಸ್‌ಪೇಟೆ ಸನಿಹ).

ಇದನ್ನೂ ಓದಿ: Ravi Hunj Column: ಗಣಾಚಾರವೊಂದು ಮುಖಾಚಾರ ಮೂರು !

ಮಹಿಮಾಪುರ ಬೆಟ್ಟಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿನ ಮಹಿಮ ರಂಗನಾಥ ದೇಗುಲ ಸಾಕಷ್ಟು ಪ್ರಸಿದ್ಧ. ಅಲ್ಲಿಗೊಂದು ಕಡಿದಾದ ರಸ್ತೆಯೂ ಈಗಾಗಲೇ ಇದೆ. ಅಲ್ಲಿನ ಕೆಲವರು ಸ್ಥಳೀಯ ರಿಗೆ ಇದಾವುದೂ ಮನಸ್ಸಿಗೆ ಬಂದಂತೆ ಕಾಣುತ್ತಿಲ್ಲ. ಈಗಾಗಲೇ ದೇವಸ್ಥಾನಕ್ಕೆ ಇರುವ ರಸ್ತೆ ಇಳಿಜಾರು ಹೆಚ್ಚಾಗಿತ್ತು ಎಂಬ ಕಾರಣಕ್ಕೆ ಹೊಸ ರಸ್ತೆ ಬೇಕು ಎಂಬ ಮಾತು ಶುರುವಾಯಿತಂತೆ.

ಇದು ಪಿಡಬ್ಲ್ಯೂಡಿಯವರು ಶುರು ಮಾಡಿರುವ ಕೆಲಸ ಎಂದು ಒಬ್ಬರು ಹೇಳಿದರೆ, ‘ಸರಕಾರದ ಕಡೆಯಿಂದ ದುಡ್ಡು ಬಂದಿದೆ’ ಎಂದು ಇನ್ನೊಬ್ಬರು ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲೇ ಸರ್ಕಾರಿ ಕೆಲಸ ನಡೆಯಬೇಕಾದರೂ ಯೋಜನೆಯ ಸವಿಸ್ತಾರ ಮಾಹಿತಿಯ ಫಲಕವನ್ನು ಹಾಕಿ ಕೆಲಸ ಪ್ರಾರಂಭಿಸುವ ನಿಯಮವಿದೆ. ಆದರೆ ಇಲ್ಲಿ ಆ ರೀತಿ ಯಾವುದನ್ನೂ ಹಾಕದೆ ಕೆಲಸ ಮಾಡಲಾಗು ತ್ತಿದೆ ಎಂದು ಗ್ರಾಮಸ್ಥರಲ್ಲಿ ಹಿರಿಯರು ಬೇಸರದಿಂದ ತಿಳಿಸಿದರು.

ಕೇವಲ ನಾಲ್ಕೈದು ದಿನಗಳಲ್ಲಿ ನೂರಾರು ಗಿಡಗಳನ್ನು, ಕೆಲವು ದೊಡ್ಡದಾದ ಮರಗಳನ್ನು ಉರುಳಿಸಿರುವುದು ಅಲ್ಲಿ ಎದ್ದುಕಾಣುತ್ತಿತ್ತು. ಬೆಟ್ಟದ ಮಣ್ಣನ್ನು ತೆಗೆದುಕೊಳ್ಳಬೇಡಿ ಎಂದು ಗ್ರಾಮಸ್ಥರು ಕೆಲವರು ಪ್ರತಿಭಟಿಸಿದ ಕಾರಣ, ಕೆರೆಯಿಂದ ಮಣ್ಣನ್ನು ತಂದು ಅಲ್ಲಿ ಒಟ್ಟು ಹಾಕಲಾಗುತ್ತಿದೆ.

ಮಲೆನಾಡಿನಂತಹ ವಾತಾವರಣ

ಹತ್ತು ವರ್ಷಗಳ ಹಿಂದೆ ಇದೇ ಬೆಟ್ಟಕ್ಕೆ ನಾನು ಹೋದಾಗ, ಅಲ್ಲಿ ಮಲೆನಾಡಿನಲ್ಲಿ ಕಾಣ ಸಿಗು ವಂತಹ ದಟ್ಟ ಕಾಡು ಕಂಡಿದ್ದು ನನಗಿನ್ನೂ ನೆನಪಿದೆ. ಅಂದು ಅಲ್ಲಿ ಬೀಸುತ್ತಿದ್ದ ತಣ್ಣನೆಯ ಗಾಳಿಯನ್ನು ಸವಿಯುತ್ತಾ, ಈ ದೇವಸ್ಥಾನದಿಂದ ಕೆಲವೇ ಮೈಲಿ ದೂರದಲ್ಲಿ ನಮ್ಮ ಮನೆ ಇರುವುದು ನನ್ನ ಭಾಗ್ಯ ಎಂದುಕೊಂಡಿದ್ದೆ. ದೇವಸ್ಥಾನದ ಸುತ್ತ ಇದ್ದ ಈ ಕಾಡು ನೂರಾರು ಕೋತಿಗಳಿಗೆ ಆವಾಸಸ್ಥಾನವಾಗಿತ್ತು. ಇಲ್ಲಿ ಬೆಳೆಯುತ್ತಿದ್ದ ನೇರಳೆ, ಬೇಲದ ಹಣ್ಣು, ಕಾರೆ ಹಣ್ಣು ಮುಂತಾದ ಕಾಡುಹಣ್ಣುಗಳನ್ನು ತಿಂದು ಅವು ಬದುಕುತ್ತಿದ್ದವು. ಆದರೆ ದೇವಸ್ಥಾನ ದೊಡ್ಡ ದಾದಂತೆ ಹಲವಾರು ಸಿಮೆಂಟಿನ ಕಟ್ಟಡಗಳು ಬಂದವು; ಜೊತೆಗೆ ಪಕ್ಕದಲ್ಲೇ ಒಂದು ದೊಡ್ಡ ರಸ್ತೆಯೂ ಆಯಿತು. ಇದೆಲ್ಲದರ ನಡುವೆ ಸುತ್ತಲೂ ಇದ್ದ ಮರಗಳು ಕ್ಷೀಣವಾಗುತ್ತಾ ಹೋದವು. ಕೆಲವೆಡೆ ಮಣ್ಣು-ಕಲ್ಲು ಜರುಗಿತು.

Betta 2

ಕಾಡು ನಾಶವಾದಂತೆ ಹಣ್ಣುಗಳು ಕಡಿಮೆಯಾಗಿ, ಕೋತಿಗಳು ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಸ್ಥರ ತೋಟಗಳಿಗೆ ಲಗ್ಗೆ ಇಡಲು ಶುರುಮಾಡಿದವು. ಇದೆಲ್ಲದರ ನಡುವೆ ಇತ್ತೀಚೆಗೆ ನಡೆದ ಒಂದು ಘಟನೆ ಇಡೀ ಗುಡ್ಡದ ನಾಶಕ್ಕೆ ಕೊನೆಯ ಅಧ್ಯಾಯ ಬರೆಯುವಂತೆ ಮಾಡಿದೆ.

ಮಹಿಮ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಈಗಾಗಲೇ ವಿಪರೀತ ಕಡಿದಾದ ರಸ್ತೆಯೊಂದು ಮೆಟ್ಟಲುಗಳ ಪಕ್ಕದಲ್ಲಿಯೇ ಇದೆ. ಹುಡುಗನೊಬ್ಬ ಆ ಇಳಿಜಾರಿನ ರಸ್ತೆಯಲ್ಲಿ ಬೈಕಿನಲ್ಲಿ ಇಳಿಯು ವಾಗ ಜಾರಿ ಬಿದ್ದನಂತೆ. ಅದಾದ ನಂತರ ಗ್ರಾಮಸ್ಥರೆಲ್ಲ ಚರ್ಚೆ ನಡೆಸತೊಡಗಿ, ಆ ಚರ್ಚೆಯು ಕೊನೆಗೆ ಹೊಸ ರಸ್ತೆ ಮಾಡುವಲ್ಲಿಗೆ ಬಂದು ನಿಂತಿತು. ರಸ್ತೆ ಮಾಡುವವರಿಗೆ ಹಣ ಕೂಡ ಸ್ಯಾಂಕ್ಷನ್ ಆಗಿಬಿಟ್ಟಿತು!

ಯಾರು ಸ್ಯಾಂಕ್ಷನ್ ಮಾಡಿದರು? ಈ ವಿಷಯ ಗ್ರಾಮಸ್ಥರಿಗೂ ತಿಳಿದಿರುವಂತೆ ಕಾಣದು. ಆದರೆ ಕೆಲಸ ಮಾತ್ರ ಕ್ಷಿಪ್ರ ಗತಿಯಲ್ಲಿ ಶುರುವಾಗಿ ಬಿಟ್ಟಿದೆ. ನಾಲ್ಕು ನಾಲ್ಕು ದೊಡ್ಡ ಟಿಪ್ಪರ್ ಗಾಡಿಗಳಲ್ಲಿ ಮಣ್ಣು ತಂದು ಹಾಕುತ್ತಿದ್ದಾರೆ.

ಈ ಕಥೆ ಇದೊಂದೇ ದೇವಸ್ಥಾನದ್ದಲ್ಲ; ನಮ್ಮ ಸುತ್ತಮುತ್ತಲಿರುವ ಎಷ್ಟೋ ಪ್ರಾಚೀನ ಕಾಲದ ದೇವಸ್ಥಾನಗಳದ್ದು. ಆ ಹಳೆಯ ದೇವಸ್ಥಾನಗಳ ಸುತ್ತ ಇರುತ್ತಿದ್ದ ದಿವ್ಯ ಮತ್ತು ಪ್ರಶಾಂತ ವಾತಾ ವರಣ ಈಗ ಇಲ್ಲವಾಗುತ್ತಿದೆ.ಪೆಟ್ರೋಲ್-ಡೀಸೆಲ್ ಗಾಡಿಗಳಲ್ಲಿ ‘ಬರ್’ ಎಂದು ದೇವಸ್ಥಾನದ ಬಾಗಿಲ ತನಕ ಹೋಗುವ ಈಗಿನ ಕಾಲದ ಜನರ ಹುಚ್ಚು ಹುಮ್ಮಸ್ಸು ನೋಡಿದರೆ ಬೇಸರವಾಗುತ್ತದೆ. ಪ್ರಾಚೀನ ದೇವಸ್ಥಾನಗಳ ಆ ಪವಿತ್ರವಾದ ‘ವೈಬ್’ ಇವುಗಳ ನಡುವೆ ಕಳೆದೇ ಹೋಗಿದೆ.

ತಬ್ಬಲಿ...

ಗ್ರಾಮಸ್ಥರಲ್ಲಿದ್ದ ಕೆಲವರು ಹಿರಿಯರು ಮತ್ತು ಅರಿತ ಚೇತನಗಳು ಈ ರಸ್ತೆಯಿಂದಾಗುವ ದುಷ್ಪರಿ ಣಾಮಗಳು ಹಾಗೂ ಗುಡ್ಡಕ್ಕೆ ಕಾಯ್ದಿರುವ ಕಂಟಕಗಳ ಬಗ್ಗೆ ತೀವ್ರ ಚಿಂತೆಗೊಳಗಾಗಿ ಇಂದು ಒಟ್ಟುಗೂಡಿದ್ದರು. ಅವರೊಂದಿಗೆ ಗಿಡ ನೆಟ್ಟ ಸಾಫ್ಟ್‌ʼವೇರ್ ಇಂಜಿನಿಯರ್‌ಗಳು ಮತ್ತು ಅವರ ಪರಿವಾರದವರೂ ಜೊತೆಯಾಗಿದ್ದರು.

ಮಹಿಮಾ ರಂಗನಾಥ ಸ್ವಾಮಿ ಬೆಟ್ಟ ಅತ್ಯಂತ ಪ್ರಾಚೀನವಾದದ್ದು. ಸುತ್ತಲೂ ದಟ್ಟ ಕಾಡಿತ್ತು. ಇಲ್ಲಿ ಬಿ.ವಿ.ಕಾರಂತರು ತಮ್ಮ ಪ್ರಸಿದ್ಧ ’ತಬ್ಬಲಿಯು ನೀನಾದೆ ಮಗನೇ’ ಚಿತ್ರವನ್ನು ಶೂಟ್ ಮಾಡಿದ್ದರು. ಆ ಸಿನಿಮಾದಲ್ಲಿನ ದೃಶ್ಯಗಳನ್ನು ನೋಡಿದರೆ, ಇದನ್ನು ಯಾವುದೋ ಸ್ವರ್ಗದಂತಹ ಹಳ್ಳಿಯಲ್ಲೇ ಚಿತ್ರೀಕರಿಸಿರಬೇಕು ಅನಿಸುತ್ತದೆ.

ಏನೂ ತಿಳಿಯದ ಮುಗ್ಧ ಗ್ರಾಮಸ್ಥರ ನಡುವೆ, ಪರಿಸರದ ಬಗ್ಗೆ ಚಿಂತೆಗೊಳಗಾಗಿದ್ದ ಆ ಹಿರಿಯ ಚೇತನಗಳನ್ನು ನೋಡಿ ನನಗೂ ಮನಸ್ಸು ಭಾರವಾಯಿತು.

ಸ್ವಾರ್ಥದ ಮುಂದೆ ಸೋತ ಪರಿಸರ ಕಾಳಜಿ

ಆದರೆ ಅವರೆಲ್ಲರ ಜೊತೆ ಮಾತನಾಡಿ ದೇವಸ್ಥಾನದ ಬುಡಕ್ಕೆ ಹೋದಾಗ ನನಗೆ ಬೇರೆಯದೇ ರೀತಿಯ ಆಘಾತ ಕಾದಿತ್ತು! ಅಲ್ಲಿದ್ದ ಅಂಗಡಿಗಳ ವ್ಯಾಪಾರಿಗಳು ಟಿವಿ ಚಾನೆಲ್‌ನವರ ಮುಂದೆ, ‘ಇವರೆಲ್ಲ ಡೋಂಗಿಗಳು, ಇವರ ಮಾತು ಕೇಳಬೇಡಿ. ಎಲ್ಲಿಂದಲೋ ಬರುತ್ತಾರೆ. ಬರಿ ಉಪಯೋಗಕ್ಕೆ ಬಾರದ ಗಿಡಗಳನ್ನು ಮಾತ್ರ ಕಿತ್ತಿದ್ದಾರೆ, ನಮಗೆ ರಸ್ತೆ ಬೇಕ’ ಎಂದು ಕೂಗಾಡಲು ಶುರು ಮಾಡಿದರು. ಅದನ್ನು ಕೇಳಿ ನನಗೆ ಸಣ್ಣ ಹಳ್ಳಿಗಳಲ್ಲಿರುವ ಜನರ ಸ್ವಾರ್ಥ ಮತ್ತು ಬದಲಾಗಿರುವ ಮನಸ್ಥಿತಿ ಯನ್ನು ನೋಡಿ ಬೆರಗಾಗುವಂತಾಯಿತು.

ಜೀವನವೇ ಎಷ್ಟೋ ರೀತಿಯಲ್ಲಿ ಕಷ್ಟವಿರುವಂತಹ ಸಣ್ಣ ಊರುಗಳಲ್ಲಿ, ತಮ್ಮ ವೈಯಕ್ತಿಕ ಲಾಭಕ್ಕಾಗಿ ಕೆಲವರು ಸತ್ಯವನ್ನು ಹೇಗೆ ಬೇಕಾದರೂ ತಿರುಚಬಲ್ಲರು ಎಂಬುದಕ್ಕೆ ಇದು ಸಾಕ್ಷಿ. ಇಲ್ಲಿರುವ ನೂರಾರು ವೈವಿಧ್ಯಮಯ ಸಸ್ಯಗಳು ಮತ್ತು ಮರಗಳನ್ನು ಉಳಿಸಲು ದೂರದ ಊರು ಗಳಿಂದ ಬಂದಿದ್ದ ನಿಸ್ವಾರ್ಥ ಜನರನ್ನು ಅವರು ಹಾಗೆ ಜನರಲೈಸ್ ಮಾಡಿ ಮಾತನಾಡಿದ್ದು ನೋಡಿದರೆ ಪರಿಸರವನ್ನು ಉಳಿಸುವ ಕೆಲಸ ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ.

ನಿಜ ಹೇಳಬೇಕೆಂದರೆ ಪರಿಸರವನ್ನು ನಾವೇನೂ ಬಲವಂತವಾಗಿ ಉಳಿಸಬೇಕಾಗಿಲ್ಲ, ಪ್ರಕೃತಿ ತನ್ನಷ್ಟಕ್ಕೆ ತಾನು ಉಳಿದುಕೊಳ್ಳುವ ಶಕ್ತಿ ಹೊಂದಿದೆ. ಆದರೆ ನಮಗಾಗಿ ಹಾಗೂ ನಮ್ಮ ಮಕ್ಕಳಿಗಾಗಿ ಈಗಿರುವ ಪರಿಸರವನ್ನು ನಾವು ಉಳಿಸಿಕೊಳ್ಳಬೇಕಾಗಿದೆ, ಅಷ್ಟೇ. ಏಕೆಂದರೆ ಅವರ ಮುಂದಿನ ಜೀವನದಲ್ಲಿ ಒಳ್ಳೆಯ ಗಾಳಿ, ಹಸಿರಾದ ಗಿಡಗಳ ನಡುವೆ ಬೆಳೆಯುವ ಅವಕಾಶ ಹಾಗೂ ವಿಷಮುಕ್ತ ಆಹಾರ ಸಿಗುವುದು ತೀರಾ ಕಷ್ಟವಾಗಲಿದೆ.

ಗುಡ್ಡವನ್ನು ಹೀಗೆಯೇ, ವಿವಿಧ ಕಾರಣಗಳನ್ನು ಮುಂದೊಡ್ಡಿ ಅಗೆಯುತ್ತಾ ಇದ್ದರೆ, ಮುಂದೊಂದು ದಿನ ಇಡೀ ಗುಡ್ಡ ಸಡಿಲಗೊಳ್ಳಬಹುದು; ಜತೆಗೆ, ಕಲ್ಲುಬಂಡೆಗಳೆಲ್ಲ ಪಕ್ಕಕ್ಕೆ ಸರಿದು, ದಾರಿ ಯುದ್ದಕ್ಕೂ ಅಂಗಡಿಗಳ ಮಹಾಪೂರವೇ ಬಂದು, ಸುತ್ತಲೂ ಪ್ಲಾಸ್ಟಿಕ್ ಕಸದ ರಾಶಿ ಸುರಿದ ಮೇಲಾದರೂ ಅವರಿಗೆ ಬುದ್ಧಿ ಬರುತ್ತದೋ ಅಥವಾ ಆಗಲೂ ಅವರಿಗೆ ಇದೆಲ್ಲ ಕಾಣಿಸದೇ ಹೋಗುತ್ತದೋ ಯಾರಿಗೂ ತಿಳಿಯದು.

ಸಮಯ ಒಂದೇ ಇದಕ್ಕೆ ಉತ್ತರ ನೀಡಬೇಕು. ಸದ್ಯಕ್ಕಂತೂ ಸ್ವರ್ಗದಂತಿದ್ದ ಈ ಬೆಟ್ಟಕ್ಕೆ ಹೊಸ ರಸ್ತೆ ಯಾಗುವುದರಲ್ಲಿ ಸಂಶಯವಿಲ್ಲ; ಅದಕ್ಕಾಗಿ ಮರಗಿಡಗಳ ಬಲಿಯೂ ತಪ್ಪಿದ್ದಲ್ಲ. ಇನ್ನು ಮುಂದೆ ಭೂಮಿಯ ಮೇಲಿದ್ದ ಈ ರೀತಿಯ ಪುಟ್ಟ ಸ್ವರ್ಗಗಳು’ ನಮ್ಮ ನೆನಪುಗಳಲ್ಲಿ ಮಾತ್ರ ಉಳಿಯುವುದು ಅಷ್ಟೇ.