ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಪವಾಸದ ಹೋರಾಟ ಮುಟ್ಟೀತೇ ಗುರಿ ? ಅಹಿಂಸಾ ಹೋರಾಟ ಇಂದು ಮೊನಚು ಕಳೆದುಕೊಂಡಿದೆಯೇ ?

ವಾಂಗ್ಚುಕ್ ಯಾಕೆ ಉಪವಾಸ ಕುಳಿತಿದ್ದಾರೆ, ಏನವರ ಬೇಡಿಕೆ, ಹಾಗೆ ಹಕ್ಕೊತ್ತಾಯ ಮಾಡಲಿಕ್ಕೆ ಅವರ್ಯಾರು? ಅದನ್ನು ನೋಡುವುದಕ್ಕೆ ಮೊದಲು, ಉಪವಾಸ ಸತ್ಯಾಗ್ರಹದ ಶಕ್ತಿಯನ್ನು ಕಡೆಗಣಿಸು ವುದು ಬೇಡ. ಅದಕ್ಕೆ ಒಂದು ನೈತಿಕ, ಸಾತ್ವಕ ಬಲ ವನ್ನು ತುಂಬಿಕೊಟ್ಟ ಮಹಾತ್ಮ ಗಾಂಧಿಯ ಬಗ್ಗೆ ಎಲ್ಲರಿಗೆ ಗೊತ್ತಿರುವುದೇ. ಆದರೆ ಇನ್ನೊಬ್ಬರೂ ಇದ್ದಾರೆ- ಅವರೇ ಪೊಟ್ಟಿ ಶ್ರೀರಾಮುಲು. ಅವರ 58 ದಿನಗಳ ಉಪವಾಸ ಭಾರತ ದೇಶದ ಭೂಪಟವನ್ನೇ ಬದಲಿಸಿತು.

ಉಪವಾಸದ ಹೋರಾಟ ಮುಟ್ಟೀತೇ ಗುರಿ ?

-

ಹರೀಶ್‌ ಕೇರ
ಹರೀಶ್‌ ಕೇರ Jul 19, 2026 8:06 AM

ಅಹಿಂಸಾ ಚಳವಳಿ, ಉಪವಾಸ ಸತ್ಯಾಗ್ರಹ ಮೊದಲಾದವುಗಳು ನಮ್ಮ ದೇಶಕ್ಕೆ ಹೊಸ ದಲ್ಲ. ಮಹಾತ್ಮಾ ಗಾಂಧೀಜಿಯವರು ಪ್ರಯೋಗಿಸಿದ ಪ್ರಬಲ ಅಸ್ತ್ರಗಳು ಅವು. ಜಗತ್ತಿಗೇ ಈ ಅಸ್ತ್ರವನ್ನು ಪರಿಚಯಿಸಿದವರು ಗಾಂಧೀಜಿಯವರು. ಆದರೆ, ಅದೇ ಅಸ್ತ್ರವು, ಸ್ವತಂತ್ರ ಭಾರತದಲ್ಲಿ ತನ್ನ ಮೊನಚನ್ನು ಕಳೆದುಕೊಂಡಿದೆಯೇ? ಇದು ನಮ್ಮ ದೇಶದ ಹಲವು ಚಿಂತಕರ, ಪ್ರಾಜ್ಞರ ಪ್ರಶ್ನೆ. ಏಕೆಂದರೆ, ಸೋನಂ ವಾಂಗ್‌ಚುಕ್ ಅವರು ಕಳೆದ ಮೂರು ವಾರಗಳಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ; ಆದರೆ, ಪ್ರಭುತ್ವವು ಅವರ ಸತ್ಯಾಗ್ರಹವನ್ನು, ಅದರ ಉದ್ದೇಶವನ್ನು ಪೂರ್ತಿ ನಿರ್ಲಕ್ಷಿಸಿದೆ; 2025ರಲ್ಲಿ ಅವರು 35 ದಿನಗಳ ಸತ್ಯಾಗ್ರಹ ಮಾಡಿದ್ದಾಗ, ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಅವರನ್ನು ಬಂಧಿಸ ಲಾಗಿತ್ತು. ಅಹಿಂಸಾ ಮಾರ್ಗ ಮತ್ತು ಉಪವಾಸ ಸತ್ಯಾಗ್ರಹಗಳನ್ನು ಜಗತ್ತಿಗೆ ಪಾಠ ಮಾಡಿದ ದೇಶವೊಂದರಲ್ಲಿ, ಇಂದು ಅಂತಹ ಮಾರ್ಗಕ್ಕೆ 21ನೆಯ ಶತಮಾನದಲ್ಲಿ ಬೆಲೆಯೇ ಇಲ್ಲವೆ ?

ಸೋನಂ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ದೇಶದಲ್ಲಿ ಹಲವು ಬಗೆಯ ಪ್ರತಿಕ್ರಿಯೆಯ ಅಲೆಗಳನ್ನು ಸೃಷ್ಟಿಸಿದೆ. ಅದನ್ನು ಆ ಕಡೆಗಿಟ್ಟು ಸೋನಂ ಅವರನ್ನೇ ನೋಡುವುದಾದರೆ, ಬಳಲಿದ ಗುಬ್ಬಿಯಂತ ಇವರ ಶರೀರ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಮಲಗಿರುವುದು ಹಲವು ನೆನಪುಗಳ, ಪ್ರತೀಕಗಳ ಬಾಲಕ್ಕೆ ಕಿಡಿ ಹಚ್ಚುವಂತಿದೆ. ತಮ್ಮ ಮಾತನ್ನು ಆಲಿಸದ ಪ್ರಭುತ್ವಗಳ ವಿರುದ್ಧ ಸಾತ್ವಿಕ ಶಕ್ತಿಗಳು ಕೈಗೊಳ್ಳಬಹುದಾದ ಆತ್ಯಂತ ಪ್ರತಿರೋಧದಂತೆ ಉಪವಾಸ ಸತ್ಯಾಗ್ರಹ ಕಾಣಿಸು ತ್ತದೆ. 20 ದಿನಗಳ ಉಪವಾಸದ ಬಳಿಕ ಸಾವಿನ ಸನಿಹ ಹೋಗಿರುವ ಅವರನ್ನು ಕೋರ್ಟ್‌ನ ನಿರೂಪದ ಮೇರೆಗೆ ಸದ್ಯ ಆಸ್ಪತ್ರೆಗೆ ಒಯ್ಯಲಾಗಿದೆ. ಅವರು ಹಚ್ಚಿದ ಕಿಡಿ ಮುಂದುವರಿಯುವುದೋ ಆರುವುದೋ ತಿಳಿಯದಾಗಿದೆ.

ವಾಂಗ್ಚುಕ್ ಯಾಕೆ ಉಪವಾಸ ಕುಳಿತಿದ್ದಾರೆ, ಏನವರ ಬೇಡಿಕೆ, ಹಾಗೆ ಹಕ್ಕೊತ್ತಾಯ ಮಾಡಲಿಕ್ಕೆ ಅವರ್ಯಾರು? ಅದನ್ನು ನೋಡುವುದಕ್ಕೆ ಮೊದಲು, ಉಪವಾಸ ಸತ್ಯಾಗ್ರಹದ ಶಕ್ತಿಯನ್ನು ಕಡೆಗಣಿಸುವುದು ಬೇಡ. ಅದಕ್ಕೆ ಒಂದು ನೈತಿಕ, ಸಾತ್ವಕ ಬಲ ವನ್ನು ತುಂಬಿಕೊಟ್ಟ ಮಹಾತ್ಮ ಗಾಂಧಿಯ ಬಗ್ಗೆ ಎಲ್ಲರಿಗೆ ಗೊತ್ತಿರುವುದೇ. ಆದರೆ ಇನ್ನೊಬ್ಬರೂ ಇದ್ದಾರೆ- ಅವರೇ ಪೊಟ್ಟಿ ಶ್ರೀರಾಮುಲು. ಅವರ 58 ದಿನಗಳ ಉಪವಾಸ ಭಾರತ ದೇಶದ ಭೂಪಟವನ್ನೇ ಬದಲಿಸಿತು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ 5 ವರ್ಷಗಳಲ್ಲಿ, 1952ರ ಅಕ್ಟೋಬರ್‌ನಲ್ಲಿ ಪೊಟ್ಟಿ ಶ್ರೀರಾಮುಲು ಉಪವಾಸ ಸತ್ಯಾಗ್ರಹ ಆರಂಭಿಸಿ ದಾಗ, ಅವರು ಇಟ್ಟ ಬೇಡಿಕೆ- ತೆಲುಗು ಭಾಷಿಕರಿ ಗಾಗಿ ಪ್ರತ್ಯೇಕ ರಾಜ್ಯ ರಚನೆ. ಅದನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಲವು ಬಾರಿ ನಿರಾಕರಿಸಿದ್ದರು. ಆಗಲೇ ಹಲವು ಸಾಮಾಜಿಕ ಕಾರಣಗಳಿಗಾಗಿ ಉಪವಾಸ ನಡೆಸಿದ್ದ ಶಾಂತ ಸ್ವಭಾವದ ಗಾಂಧಿವಾದಿ ಶ್ರೀರಾಮುಲು, ತಮ್ಮ ಆತ್ಮತ್ಯಾಗದ ಮೂಲಕವೇ ದೆಹಲಿಯ ಗಮನ ಸೆಳೆಯಬಹುದು ಎಂದು ನಂಬಿದ್ದರು. ಅವರ ನಂಬಿಕೆ ನಿಜವಾಯಿತು.

ಇದನ್ನೂ ಓದಿ: Harish Kera Column: ನೆಲ ಕುಸಿಯೆ ಪದವಿಹುದೆ ಮಂಕುತಿಮ್ಮ ?

ಉಪವಾಸದ 58ನೇ ದಿನ ಪೊಟ್ಟಿ ಶ್ರೀರಾಮುಲು ನಿಧನರಾದರು. ಅವರ ಸಾವಿನ ಸುದ್ದಿ ಹರಡು ತ್ತಿದ್ದಂತೆ ತೆಲುಗು ಭಾಷಿಕ ಪ್ರದೇಶಗಳಾದ್ಯಂತ ಜನರು ಬೀದಿಗಿಳಿದರು. ಹಲವು ಕಡೆ ಸರಕಾರಿ ಕಟ್ಟಡ ಗಳ ಮೇಲೆ ದಾಳಿ ನಡೆಯಿತು, ರೈಲು ಮಾರ್ಗಗಳನ್ನು ತಡೆಗಟ್ಟಲಾಯಿತು. ಈ ಹಿಂಸಾಚಾರ ದಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಕೆಲವೇ ದಿನಗಳಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಆಂಧ್ರ ರಾಜ್ಯ ರಚಿಸುವು ದಾಗಿ ಘೋಷಿಸಿದರು. ನಂತರ ರಾಜ್ಯಗಳ ಪುನರ್ ರಚನಾ ಆಯೋಗ ರಚನೆಯಾಗಿ, ಭಾಷಾ ಆಧಾರಿತ ರಾಜ್ಯಗಳ ಮರುರಚನೆ ನಡೆಯಿತು. ವಾಂಗ್ಚುಕ್ ಅವರಿಗೆ ಉಪವಾಸ ಸತ್ಯಾಗ್ರಹ ಹೊಸತಲ್ಲ. ಲಡಾಖ್‌ನ ರಾಜಕೀಯ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಅವರು ಈ ಹಿಂದೆಯೂ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

2023ರ ಜನವರಿಯಲ್ಲಿ ವಾಂಗ್ಚುಕ್ ಮೊದಲ ಪ್ರಮುಖ ಉಪವಾಸ ಆರಂಭಿಸಿದರು. ಲೇಹ್‌ನ ಸೆಕ್ಮೋಲ್ ಕ್ಯಾಂಪಸ್‌ನಲ್ಲಿ, ಶೂನ್ಯಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಐದು ದಿನ ಅವರು ಆಹಾರ ತ್ಯಜಿಸಿದರು. ನಿಯಂತ್ರಣವಿಲ್ಲದ ಗಣಿಗಾರಿಕೆ, ಹೆಚ್ಚು ತ್ತಿರುವ ಕಾರ್ಬನ್ ವಿಸರ್ಜನೆ ಮತ್ತು ಬೃಹತ್ ಮೂಲಸೌಕರ್ಯ ಯೋಜನೆಗಳಿಂದ ಲಡಾಖ್‌ನ ಪರಿಸರಕ್ಕೆ ಎದುರಾಗುತ್ತಿರುವ ಅಪಾಯವನ್ನು ದೇಶದ ಗಮನಕ್ಕೆ ತರುವುದೇ ಈ ಉಪವಾಸದ ಉದ್ದೇಶವಾಗಿತ್ತು. ಈ ಉಪವಾಸದಿಂದ ತಕ್ಷಣದ ನೀತಿ ಬದಲಾವಣೆಗಳಾಗದಿದ್ದರೂ, ಲಡಾಖ್‌ನ ಪರಿಸರ ಸಮಸ್ಯೆಗಳು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದವು. ಸ್ಥಳೀಯ ಬುಡಕಟ್ಟು ಸಮುದಾಯಗಳ ಸಂವಿಧಾನಾತ್ಮಕ ರಕ್ಷಣೆಯ ಕುರಿತು ಕೇಂದ್ರ ಗೃಹ ಸಚಿವಾಲಯ ಮತ್ತೆ ಚರ್ಚೆ ಆರಂಭಿಸಿತು.

ಹವಾಮಾನ ಉಪವಾಸ

2024ರ ಮಾರ್ಚ್‌ನಲ್ಲಿ ವಾಂಗ್ಚುಕ್ ಹೋರಾಟ ಮತ್ತಷ್ಟು ತೀವ್ರವಾಯಿತು. ಲಡಾಖ್ ಪ್ರತಿನಿಧಿಗಳು ಮತ್ತು ಕೇಂದ್ರ ಸರಕಾರದ ನಡುವಿನ ಮಾತುಕತೆ ವಿಫಲವಾದ ಬಳಿಕ, ಅವರು 21 ದಿನಗಳ ‘ಹವಾ ಮಾನ ಉಪವಾಸ’ ಆರಂಭಿಸಿದರು. ಈ ಅವಧಿಯಲ್ಲಿ ಅವರು ಕೇವಲ ಉಪ್ಪು ನೀರನ್ನು ಮಾತ್ರ ಸೇವಿಸಿ ಬದುಕಿದರು. ಲಡಾಖ್‌ಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಸಂವಿಧಾನದ ಆರನೇ ಅನುಸೂಚಿ ಅಡಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. ಇದರಿಂದ ಅಲ್ಲಿನ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಸ್ಥಳೀಯರ ಹಕ್ಕು ಬಲವಾಗಲಿದೆ ಎಂಬುದು ಅವರ ವಾದವಾಗಿತ್ತು.

Screenshot_6 ok

ಕೇಂದ್ರಾಡಳಿತ ಪ್ರದೇಶ

21 ದಿನಗಳ ಬಳಿಕ ಉಪವಾಸ ಅಂತ್ಯಗೊಂಡರೂ ಹೋರಾಟ ನಿಲ್ಲಲಿಲ್ಲ. ವಾಂಗ್ಚುಕ್ ಮಹಿಳಾ ಸಂಘಟನೆ ಗಳಿಗೆ ಹೋರಾಟದ ನೇತೃತ್ವ ಹಸ್ತಾಂತರಿಸಿದರು. ಬಳಿಕ ಲಡಾಖ್‌ನಾದ್ಯಂತ ಸರಣಿ ಉಪವಾಸಗಳು ಮುಂದುವರಿದವು. ಈ ಹೋರಾಟದ ಪರಿಣಾಮವಾಗಿ 2019ರಲ್ಲಿ ಲಡಾಖ್ ಕೇಂದ್ರಾ ಡಳಿತ ಪ್ರದೇಶ ವಾದ ಬಳಿಕ ಮೊದಲ ಬಾರಿಗೆ ಕೇಂದ್ರ ಸರ್ಕಾರ ದೊಂದಿಗೆ ಉನ್ನತ ಮಟ್ಟದ ಮಾತುಕತೆ ಮರು ಪ್ರಾರಂಭವಾಯಿತು. ಆದರೆ, ರಾಜ್ಯದ ಸ್ಥಾನಮಾನ ಅಥವಾ ಆರನೇ ಅನುಸೂಚಿ ಕುರಿತು ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಅದೇ ವರ್ಷ ವಾಂಗ್ಚುಕ್ ಸುಮಾರು 1000 ಕಿಲೋ ಮೀಟರ್ ಉದ್ದದ ‘ದೆಹಲಿ ಚಲೋ’ ಪಾದಯಾತ್ರೆಗೆ ನೇತೃತ್ವ ನೀಡಿದರು. ಪ್ರತಿಭಟನಾಕಾರರನ್ನು ದೆಹಲಿ ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಾಗ, ಬಂಧನ ಕೇಂದ್ರದಲ್ಲಿಯೇ ಅವರು ಮತ್ತೊಮ್ಮೆ ಉಪವಾಸ ಆರಂಭಿಸಿದರು. ಈ ಬೆಳವಣಿಗೆ ದೇಶದಾದ್ಯಂತ ಗಮನ ಸೆಳೆಯಿತು. ಕೊನೆಗೆ ಪ್ರತಿಭಟನಾ ಕಾರರನ್ನು ಬಿಡುಗಡೆ ಮಾಡಲಾಯಿತು.

35 ದಿನ!

2025ರ ಸೆಪ್ಟೆಂಬರ್‌ನಲ್ಲಿ ವಾಂಗ್ಚುಕ್ ತಮ್ಮ ಅತ್ಯಂತ ದೀರ್ಘ, 35 ದಿನಗಳ ಉಪವಾಸ ನಡೆಸಿದರು. ಲೇಹ್ ಏಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಜೊತೆಗೆ ಸೇರಿ ಅವರು ಲಡಾಖ್‌ಗೆ ಸಂಪೂರ್ಣ ರಾಜ್ಯದ ಸ್ಥಾನಮಾನ, ಆರನೇ ಅನುಸೂಚಿಯ ಅಡಿಯಲ್ಲಿ ಸೇರ್ಪಡೆ ಸೇರಿ ನಾಲ್ಕು ಪ್ರಮುಖ ಬೇಡಿಕೆ ಮುಂದಿಟ್ಟರು.

ಈ ಹೋರಾಟಕ್ಕೆ ಕೇಂದ್ರ ಸರಕಾರ ಕಠಿಣವಾಗಿ ಪ್ರತಿಕ್ರಿಯಿಸಿತು. ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಯಿತು. ಲಡಾಖ್‌ನ ಕೆಲವು ಭಾಗಗಳಲ್ಲಿ ಇಂಟರ್‌ನೆಟ್ ಸೇವೆಗೂ ನಿರ್ಬಂಧ ಹೇರಲಾಯಿತು. 170 ದಿನಗಳ ಕಾಲ ಬಂಧನದಲ್ಲಿದ್ದ ವಾಂಗ್ಚುಕ್, 2026ರ ಮಾರ್ಚ್ ನಲ್ಲಿ ನ್ಯಾಯಾಲಯದ ಮೂಲಕ ಮಹತ್ವದ ಗೆಲುವು ಸಾಧಿಸಿದರು. ಅವರ ವಿರುದ್ಧದ ಎನ್‌ಎಸ್‌ಎ ಆದೇಶ ವನ್ನು ರದ್ದುಗೊಳಿಸಲಾಯಿತು. ಆದರೆ ಲಡಾಖ್‌ನ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಬೇಡಿಕೆಗಳು ಈಡೇರಿಲ್ಲ.

sonam W 2 ok

ಸರಕಾರದ ನಿರ್ಲಕ್ಷ್ಯವೇ?

ವಾಂಗ್ಚುಕ್ ಅವರ ಈಗಿನ ಉಪವಾಸ ಲಡಾಖ್‌ಗಾಗಿ ರುವುದಲ್ಲ. ಈ ಬಾರಿ ಅವರು ದೇಶದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಹೊಣೆಗಾರರನ್ನು ಶಿಕ್ಷಿಸಬೇಕು, ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಅವರದು. 20 ದಿನಗಳಾದರೂ ಸರಕಾರ ಮಾತಿಗೆ ಬರಲಿಲ್ಲ. ವಾಂಗ್ಚುಕ್ ಉಪವಾಸ ಸಾಯಲಿ ಎಂದು ಸರಕಾರ ಬಾಯಿಬಿಟ್ಟು ಹೇಳಲಿಲ್ಲ ಅಷ್ಟೆ. ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ, ಪದ್ಮಶ್ರೀ ಪುರಸ್ಕೃತ ಮಹನೀಯ ನೊಬ್ಬ ಅಷ್ಟು ದಿನ ತನ್ನ ಮೂಗಿನಡಿಯಲ್ಲೇ ಸತ್ಯಾಗ್ರಹ ಕುಳಿತರೂ ಕಣ್ಣು ಕಿವಿ ಮುಚ್ಚಿ ಕುಳಿತ ಸರಕಾರ ತನ್ನ ಸಂವೇದನೆಗಳನ್ನೆಲ್ಲ ಕಳೆದು ಕೊಂಡಂತೆ ವರ್ತಿಸಿತು. ಬೇಡಿಕೆ ಈಡೇರಿಸುವುದು ಹಾಗಿರಲಿ, ಕನಿಷ್ಠ ಮಾತುಕತೆ ಬಹಿಷ್ಕಾರ ಗಾದರೂ ಬರಬೇಕಲ್ಲವೇ ಎಂಬುದು ವಾಂಗ್ಚುಕ್ ಸಮರ್ಥಕರ ಅನಿಸಿಕೆ.

ಸದ್ಯ ವಾಂಗ್ಚುಕ್ ಅವರನ್ನು ಸತ್ಯಾಗ್ರಹದ ಶಿಬಿರ ದಿಂದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂಬ ಸುದ್ದಿ ಬಂದಿದೆ. ಬಲವಂತವಾಗಿ ಅವರಿಗೆ ಉಣಿಸುವಂತಿಲ್ಲ ಎಂದು ಸತ್ಯಾಗ್ರಹಿಗಳು ಹೇಳಿದ್ದಾರೆ. ಸರಕಾರ ಏನು ಮಾಡುತ್ತದೋ ಗೊತ್ತಿಲ್ಲ. ಮಣಿಪುರದಲ್ಲಿ ವರ್ಷ ಗಳಿಂದ ದಂಗೆ ನಡೆಯುತ್ತಿದ್ದರೂ ಸುಮ್ಮನಿರುವ ಸರಕಾರ, ವಾಂಗ್ಚುಕ್‌ರಂಥವರ ಸಾತ್ವಿಕ ಮಾತುಗಳನ್ನು ಕೇಳಿಸಿಕೊಳ್ಳಲಿದೆ ಎಂದು ನಿರೀಕ್ಷೆ ಮಾಡುವುದು ಕಷ್ಟವೇ. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ ವನ್ನು ‘ಕಾಂಗ್ರೆಸ್ ಸರಕಾರವನ್ನು ಇಳಿಸಿದ ಸತ್ಯಾಗ್ರಹ’ ಎಂದು ನೋಡಲಾಗುತ್ತದೆ. ಆದರೆ ವಾಂಗ್ಚುಕ್ ಅವರ ಸತ್ಯಾಗ್ರಹವನ್ನು ಮಾತ್ರ ‘ದೇಶದ್ರೋಹಿಗಳ’ ಸತ್ಯಾ ಗ್ರಹ ಎಂದು ಕೆಲವು ಪ್ರಬಲ ವ್ಯಕ್ತಿಗಳು ನೋಡುತ್ತಿರುವುದು ಒಂದು ಚೋದ್ಯ.

ದಣಿವರಿಯದ ಶಿಕ್ಷಣ ತಜ್ಞ, ಹೋರಾಟಗಾರ

ಸೋನಂ ವಾಂಗ್ಚುಕ್ ಲಡಾಖ್ ಮೂಲದ ಇಂಜಿನಿಯರ್, ಶಿಕ್ಷಣತಜ್ಞ, ಸಂಶೋಧಕ ಹಾಗೂ ಪರಿಸರ ಹೋರಾಟ ಗಾರ. ವಿದ್ಯಾರ್ಥಿಗಳಿಗೆ ಪುಸ್ತಕದ ಪಾಠಕ್ಕಿಂತ ಜೀವನ ಕೌಶಲ್ಯ ಮತ್ತು ಅನುಭವಾಧಾರಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಅವರು ಹಲವು ಶಿಕ್ಷಣ ಸುಧಾರಣಾ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. TCAJLI SECMOL (Students' Educational and Cultural Movement of Ladakh ) ಸಂಸ್ಥೆಯ ಸಹ-ಸ್ಥಾಪಕ. ಶಾಲಾ ಶಿಕ್ಷಣದಲ್ಲಿ ಹಿಂದೆ ಉಳಿದ ವಿದ್ಯಾರ್ಥಿಗಳಿಗೆ ಹೊಸ ರೀತಿಯ ಕಲಿಕೆಯ ಅವಕಾಶಗಳನ್ನು ಕಲ್ಪಿಸಿದ್ದಾರೆ. ಈ ಸಂಸ್ಥೆ ಲಡಾಖ್‌ನಲ್ಲಿ ಪರ್ಯಾಯ ಶಿಕ್ಷಣ ಮಾದರಿ ಯಾಗಿ ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ.

ಹಿಂದಿ ಚಲನಚಿತ್ರದಲ್ಲಿ.. ಅವರ ಜೀವನ ಮತ್ತು ಶಿಕ್ಷಣದ ವಿಚಾರಧಾರೆ ಬಾಲಿವುಡ್‌ನ ‘3 ಇಡಿಯಟ್ಸ್’ ಚಿತ್ರದ ‘ಫುನ್‌ಸುಖ್ ವಾಂಗ್ಡು’ ಪಾತ್ರಕ್ಕೆ ಸ್ಪೂರ್ತಿಯಾಗಿತ್ತು. ಇದಕ್ಕೂ ಮೊದಲು ಅಮೀರ್ ಖಾನ್, ವಾಂಗ್ಚುಕ್ ಅವರನ್ನು ಭೇಟಿಯಾಗಿ ಪ್ರೇರಣೆ ಪಡೆದದ್ದು ಉಂಟು. ಆದರೆ ಆ ಚಿತ್ರದ ಕಥೆ ಸಂಪೂರ್ಣವಾಗಿ ಸೋನಂ ಅವರ ಜೀವನಚರಿತ್ರೆಯಲ್ಲ. ಚಿತ್ರಕ್ಕೂ ನನಗೂ ಸಂಬಂಧ ವಿಲ್ಲ ಎಂದು ಸೋನಂ ಅವರೇ ನಂತರ ಹೇಳಿದ್ದಾರೆ.

ಪದ್ಮಶ್ರೀ ಮ್ಯಾಗ್ಸೆ

ಶಿಕ್ಷಣ ಮತ್ತು ಪರಿಸರ ಕ್ಷೇತ್ರದಲ್ಲಿನ ಸಾಧನೆ ಗಾಗಿ ಭಾರತ ಸರಕಾರ 2018ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಂತಾ ರಾಷ್ಟ್ರೀಯ ಮಟ್ಟದ ರೋಲೆಕ್ಸ್ ಅವಾರ್ಡ್, ಮ್ಯಾಗ್ಸೆಸೆ ಪ್ರಶಸ್ತಿಗಳೆಲ್ಲ ಅವರಿಗೆ ಸಂದಿವೆ. ಸ್ವಿಡ್ಜರ್‌ಲ್ಯಾಂಡ್‌ನ ಆಲ್ಪ್ಸ್ ಪರ್ವತಗಳ ತಪ್ಪಲಿನಲ್ಲೂ ತಮ್ಮ ಹಿಮ ಸ್ತೂಪಗಳ ಮಾದರಿಗಳ ತರಬೇತಿ ನೀಡಿದ್ದಾರೆ ಅವರು. 2020ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಗಡಿ ಸಂಘರ್ಷ ನಡೆದ ಬಳಿಕ, ಸೋನಂ ವಾಂಗ್ಚುಕ್ ಭಾರತೀಯರಿಗೆ ‘ವಾಲೆಟ್ ಪವರ್’ ಬಳಸುವಂತೆ ಕರೆ ನೀಡಿ ದರು. ಅಂದರೆ, ಚೀನಾದ ಉತ್ಪನ್ನಗಳನ್ನು ಖರೀದಿಸದೇ ಆರ್ಥಿಕ ಹೇರಬೇಕು ಎಂದು ಅವರು ಮನವಿ ಮಾಡಿದರು. ಹಲವು ಗಣ್ಯರು, ಸಿನಿತಾರೆ ಯರೂ ಅವರ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಗೆ ಹೊಸ ಪರಿಹಾರ!

ನೀರಿನ ಬವಣೆ ಅನುಭವಿಸುವ ಲಡಾಕ್‌ನಲ್ಲಿ ನೀರಿನ ಒದಗಣೆಗೆ ಅವರು ಮಾಡಿದ ನವೀನ ಸಂಶೋ ಧನೆ, ಎಂದಿಗೂ ಮಾದರಿ. ಹಿಮಾಲಯ ಪ್ರದೇಶದ ಹವಾಮಾನ ಬದಲಾವಣೆ ಮತ್ತು ನೀರಿನ ಸಮಸ್ಯೆಗೆ ಪರಿಹಾರವಾಗಿ ‘ಹಿಮ ಸ್ತೂಪ’ ಎಂಬ ಕೃತಕ ಹಿಮಗೋಪುರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಚಳಿಗಾಲದಲ್ಲಿ ನೀರನ್ನು ಹಿಮದ ರೂಪದಲ್ಲಿ ಸಂಗ್ರಹಿಸಿ, ಬೇಸಿಗೆಯಲ್ಲಿ ಅದು ಕರಗುವ ಮೂಲಕ ಕೃಷಿಗೆ ನೀರು ಒದಗಿಸುವ ಈ ಆವಿಷ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ಗ್ಲೇಶಿಯರ್‌ಗಳ ಕೃತಕ ರೂಪವೇ.