Yagati Raghu Naadig Column: ಕದನ ಕುತೂಹಲ ಕಥನ
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ-ಕೃಪಾಪೋಷಿತ ಉಗ್ರರು ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಾಗತಿಕ ಸಮುದಾಯವೇ ಛೀಮಾರಿ ಹಾಕಿದೆ. ವಿವಿಧ ದೇಶಗಳ ಮುಖ್ಯಸ್ಥರು ಪಾಕಿಸ್ತಾನದ ಈ ಕುತ್ಸಿತ ಚಿಂತನೆಯನ್ನು ಖಂಡಿಸಿದ್ದಾರೆ. ಭಾರತದ ಮೇಲೆ ಮುರಕೊಂಡು ಬೀಳುವ ತನ್ನ ಯತ್ನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ನೀಡಿಬಿಡುತ್ತವೆ ಎಂಬ ಪಾಕಿಸ್ತಾನದ ನಿರೀಕ್ಷೆ ಮಣ್ಣು ಪಾಲಾಗಿದೆ. ಪರದೇಶಗಳ ಕಥೆಯಿರಲಿ, ಸ್ವತಃ ಪಾಕಿಸ್ತಾನಿ ಪ್ರಜೆಗಳೇ ತಮ್ಮ ದೇಶದ ಜನ ನಾಯಕರು ಮತ್ತು ಮಿಲಿಟರಿ ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ


ಯಗಟಿ ರಘು ನಾಡಿಗ್
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ-ಕೃಪಾಪೋಷಿತ ಉಗ್ರರು ಎಸಗಿದ ಪೈಶಾಚಿಕ ಕೃತ್ಯಕ್ಕೆ ಒಂದಿಡೀ ಜಾಗತಿಕ ಸಮುದಾಯವೇ ಛೀಮಾರಿ ಹಾಕಿದೆ. ವಿವಿಧ ದೇಶಗಳ ಮುಖ್ಯಸ್ಥರು ಪಾಕಿಸ್ತಾನದ ಈ ಕುತ್ಸಿತ ಚಿಂತನೆಯನ್ನು ಖಂಡಿಸಿದ್ದಾರೆ. ಭಾರತದ ಮೇಲೆ ಮುರಕೊಂಡು ಬೀಳುವ ತನ್ನ ಯತ್ನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ನೀಡಿ ಬಿಡುತ್ತವೆ ಎಂಬ ಪಾಕಿಸ್ತಾನದ ನಿರೀಕ್ಷೆ ಮಣ್ಣು ಪಾಲಾಗಿದೆ. ಪರದೇಶಗಳ ಕಥೆಯಿರಲಿ, ಸ್ವತಃ ಪಾಕಿಸ್ತಾನಿ ಪ್ರಜೆಗಳೇ ತಮ್ಮ ದೇಶದ ಜನ ನಾಯಕರು ಮತ್ತು ಮಿಲಿಟರಿ ಅಧಿಕಾರಿಗಳ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾಗಿಯೂ ಪಾಕಿಸ್ತಾನದ ಪರಮೋಚ್ಚ ನಾಯಕರ ಮತ್ತು ಸೇನಾಧಿಕಾರಿಗಳ ಭಂಡತನ ತಗ್ಗಿಲ್ಲ.
ಭಾರತಕ್ಕೆ ಗೊಡ್ಡು ಬೆದರಿಕೆ
ಪಾಕಿಸ್ತಾನ ಎಸಗಿದ ಕುಕೃತ್ಯಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಸಹಜವಾಗಿಯೇ ಒಂದಿಷ್ಟು ವ್ಯೂಹಾ ತ್ಮಕ ಕಾರ್ಯತಂತ್ರಗಳ ಯೋಜನೆಯಲ್ಲಿ ವ್ಯಸ್ತವಾಗಿದೆ. ಒಂದೊಮ್ಮೆ ತಮ್ಮ ಮೇಲೆ ಭಾರತದ ಸೇನಾಕ್ರಮಣವಾದರೆ ಪರಿಣಾಮವೇನಾಗಬಹುದು ಎಂಬುದನ್ನು ಕೊಂಚ ತಡವಾಗಿ ಗ್ರಹಿಸಿರುವ ಪಾಕಿಸ್ತಾನದ ಪರಮೋಚ್ಚ ನಾಯಕರು ಜ್ವರ ಬರಿಸಿಕೊಂಡು ಆಸ್ಪತ್ರೆ ಪಾಲಾದ ಮತ್ತು ಪಾಕ್ ಸೇನೆಯ ವಿವಿಧ ಸ್ತರದ ಅಧಿಕಾರಿಗಳು ಕೆಲಸಕ್ಕೆ ರಾಜೀನಾಮೆಯಿತ್ತ ವರದಿಗಳು ಬಂದಿವೆ.
ಇಷ್ಟಾಗಿಯೂ, ‘ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಮಾತಿನಂತೆ ಭಾರತವನ್ನು ಉದ್ದೇಶಿಸಿ ಗೊಡ್ಡು ಬೆದರಿಕೆ ಹಾಕುವ ಪಾಕಿಸ್ತಾನದ ಧಾರ್ಷ್ಟ್ಯವಿನ್ನೂ ನಿಂತಿಲ್ಲ!
ಇದನ್ನೂ ಓದಿ: Yagati Raghu Naadig Column: ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !
ಇಲಿಸುಂಡದ ಎಚ್ಚರಿಕೆ!
ಪಹಲ್ಗಾಮ್ ಹೇಯಕೃತ್ಯದ ಬಳಿಕ ಸಂಭಾವ್ಯ ಪ್ರತಿ ದಾಳಿಯ ಭಯದಿಂದಾಗಿ ತಮ್ಮ ಕುಟುಂಬಿಕ ರನ್ನು ಸುರಕ್ಷಿತವಾಗಿ ಲಂಡನ್‌ಗೆ ಕಳಿಸಿ, ಹೆಗ್ಗಣದ ರೀತಿಯಲ್ಲಿ ಬಂಕರ್‌ನಲ್ಲಿ ಅಡಗಿಕುಳಿತಿದ್ದಾರೆ ಎನ್ನಲಾಗಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್, “ಭಾರತ ಯಾವುದೇ ಸೇನಾಕ್ರಮಣದ ದುಸ್ಸಾಹಸಕ್ಕೆ ಕೈಹಾಕಿದರೆ, ಕ್ಷಿಪ್ರ ಮತ್ತು ದೃಢ ಪ್ರತಿಕ್ರಿಯೆ ಯನ್ನು ಎದುರಿಸ ಬೇಕಾದೀತು. ಪಾಕಿಸ್ತಾನವು ಪ್ರಾದೇಶಿಕ ಶಾಂತಿಗೆ ಬದ್ಧವಾಗಿದ್ದರೂ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವಲ್ಲಿನ ನಮ್ಮ ಸನ್ನದ್ಧತೆಯಲ್ಲಿ ಕೊರತೆಯಾಗಿಲ್ಲ. ಈ ವಿಷಯದಲ್ಲಿ ನಾವು ಬದ್ಧರು" ಎಂದು ಹೇಳಿದ್ದಾರಂತೆ. ‘ಟಿಲ್ಲಾ ಫೀಲ್ಡ್ ಫೈರಿಂಗ್ ರೇಂಜಸ್’ (ಟಿಎಫ್‌ಎಫ್ ಆರ್) ಎನ್ನಲಾಗುವ ಸೇನಾನೆಲೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಅಸೀಮ್ ಮುನೀರ್ ಈ ಮಾತನ್ನು ಹೇಳಿದರು ಎಂಬು ದಾಗಿ ಪಾಕಿಸ್ತಾನಿ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ‘ಅಸೋಸಿಯೇಟೆಡ್ ಪ್ರೆಸ್ ಆಫ್ ಪಾಕಿಸ್ತಾನ’ (ಎಪಿಪಿ) ವರದಿ ಮಾಡಿದೆ.
ಹೀಗಿದೆಯಂತೆ ಸೇನಾ ಸಿದ್ಧತೆ
ಎಪಿಪಿ ವರದಿ ಮಾಡಿರುವುದನ್ನೇ ನಂಬುವುದಾದರೆ, ಪಾಕ್ ಸೈನಿಕರ ಸಮರ ಸಿದ್ಧತೆಯ ಪರಿ ಹೀಗಿದೆಯಂತೆ:
ಟಿಎಫ್ ಎಫ್ಆರ್ ಸೇನಾನೆಲೆಯಲ್ಲಿ ‘ಹ್ಯಾಮರ್ ಸ್ಟ್ರೈಕ್’ ಎಂಬ ಸೇನಾ ತರಬೇತಿ ಕಾರ್ಯಾಗಾರ
ನಡೆಯುತ್ತಿದೆ.
ಸಮರ ಸನ್ನದ್ಧತೆ, ಸಮರಾಂಗಣದ ಸಮನ್ವಯತೆ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಏಕೀಕರಣ ಮುಂತಾದ ವಿಷಯಗಳ ಕುರಿತು ಈ ಕಾರ್ಯಾಗಾರದಲ್ಲಿ ತಿಳಿಹೇಳಲಾಗುತ್ತದೆ.
ಬಹು-ಕಾರ್ಯೋನ್ಮುಖಿ ಯುದ್ಧ ವಿಮಾನಗಳು, ಅತ್ಯಾಧುನಿಕ ಶಸಾಸಗಳು, ದೂರವ್ಯಾಪ್ತಿಯ
ಫಿರಂಗಿಗಳು ಮುಂತಾದ ‘ಸಮರ-ಸಲಕರಣೆ’ಗಳ ಪ್ರಾಯೋಗಿಕ ಬಳಕೆಯನ್ನು ಕಲಿಸಲು ಸಾಂಪ್ರದಾ ಯಿಕ ಯುದ್ಧಭೂಮಿಯ ಸನ್ನಿವೇಶವನ್ನು ಅಲ್ಲಿ ಸೃಷ್ಟಿಸಲಾಗಿದೆ.
ಪುಂಗಿದರೂ ಪ್ರಯೋಜನವಿಲ್ಲ !
ತಮ್ಮ ಸೇನಾತಾಕತ್ತನ್ನು ಅದೆಷ್ಟು ಉತ್ಪ್ರೇಕ್ಷಿಸಿ ಪುಂಗಿದರೂ ಪಾಕಿಸ್ತಾನಿ ಸೇನಾಧಿಕಾರಿಗಳಲ್ಲಿನ ‘ಪುಕಪುಕ’ ಕಮ್ಮಿಯಾಗಿಲ್ಲ; ಪಹಲ್ಗಾಮ್ ಪೈಶಾಚಿಕ ಕೃತ್ಯಕ್ಕೆ ಭಾರತದಿಂದ ಏನಾದರೊಂದು ರೀತಿಯಲ್ಲಿ ಮರುಪ್ರಹಾರವಾಗುವುದು ಖಾತ್ರಿಯಾಗುತ್ತಿದ್ದಂತೆ ಪಾಕ್ ಸೇನಾಧಿಕಾರಿಗಳು ಒಂದಷ್ಟು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆ ಭಾರತದ ನಾಗರಿಕ ವಿಮಾನಗಳ ಹಾರಾಟಕ್ಕೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದ್ದ ಪಾಕಿಸ್ತಾನ, ಈಗ ಕರಾಚಿ ಮತ್ತು ಲಾಹೋರ್ ವಾಯು ಪ್ರದೇಶವನ್ನೂ ತಾತ್ಕಾಲಿಕ ವಾಗಿ ಮುಚ್ಚಿದ್ದು, ಈ ನಗರಗಳ ಮೇಲಿನ ಯಾವುದೇ ವೈಮಾನಿಕ ಹಾರಾಟವನ್ನು ಪಾಕ್ ಸರಕಾರ ನಿಷೇಧಿಸಿದೆ. ಮೇ ೧ರಿಂದ 31ರವರೆಗೆ ಮುಂಜಾನೆ ೪ರಿಂದ ೮ ಗಂಟೆಯವರೆಗೆ ಈ ನಿಷೇಧ ಜಾರಿ ಯಲ್ಲಿರುತ್ತದೆ ಎನ್ನಲಾಗಿದೆ.
ರಣವೀಳಕ್ಕೆ ಹೊಸ ಪುರೋಹಿತ!
ಪಹಲ್ಗಾಮ್ ಪೈಶಾಚಿಕ ಪ್ರಹಾರದ ನಂತರ ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗುಪ್ತಚರ ಇಲಾಖೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಅಸಿಮ್ ಮಲಿಕ್‌ರನ್ನು ಪಾಕಿಸ್ತಾನದ ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಷ್ಟೇ ಇವರು ಗುಪ್ತಚರ ಇಲಾಖೆಯ ಮಹಾ ನಿರ್ದೇಶಕರಾಗಿ ನಿಯೋಜಿಸಲ್ಪಟ್ಟಿದ್ದರು.
ಕಿತಾಪತಿ ಕಮ್ಮಿಯಾಗಿಲ್ಲ
ಪಹಲ್ಗಾಮ್ ಪ್ರಕರಣದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರತೀಕಾರದ ಜ್ವಾಲೆ ಭುಗಿಲೆದ್ದಿದ್ದರೂ ಸುಮ್ಮನೆ ಕೂರದ ಪಾಕಿಸ್ತಾನ ಗಡಿಭಾಗದಲ್ಲಿ ತನ್ನ ಕಿತಾಪತಿಯನ್ನು ಮುಂದು ವರಿಸಿದೆ. ರಾಜೌರಿ ಜಿಲ್ಲೆಯ ನೌಶೇರಾ ಮತ್ತು ಸುಂದರ್‌ಬಾನಿ ವಲಯಗಳ ವ್ಯಾಪ್ತಿಯಲ್ಲಿನ ಗಡಿ ನಿಯಂತ್ರಣ ರೇಖೆಗುಂಟ ನೆಲೆಗೊಂಡಿರುವ ಭಾರತದ ಹಲವಾರು ಸೇನಾಠಾಣ್ಯಗಳ ಮೇಲೆ ಪಾಕಿಸ್ತಾನದ ಕಡೆಯಿಂದ ಮೊನ್ನೆ ಮಂಗಳವಾರ ರಾತ್ರಿ ಗುಂಡಿನ ದಾಳಿಯಾಗಿದೆ. ಸತತ ಎಂಟನೇ ರಾತ್ರಿಯೂ ಕದನವಿರಾಮದ ಉಲ್ಲಂಘನೆಯನ್ನು ಪಾಕಿಸ್ತಾನ ಮುಂದುವರಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಅದಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಮಾರುತ್ತರ ನೀಡಿದೆ.
ಎಲ್ಲಿವೆ ಹೆಗ್ಗಣಗಳ ಬಿಲಗಳು?
ಪಹಲ್ಗಾಮ್ ಪ್ರಹಾರಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿದೆ ಭಾರತ. ಉಗ್ರರಿಗೆ ಹೀಗೆ ಬೀಳುವ ತಿರುಗೇಟು ಅದೆಷ್ಟು ತೀಕ್ಷ್ಣ ವಾಗಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ, ‘ಸರ್ಜಿಕಲ್ ಸ್ಟ್ರೈಕ್’ ಒಂದೇ ಇದಕ್ಕೆ ಸಾಕ್ಷಿಯಾಗಬಲ್ಲದು. ಇದನ್ನು ಅರಿತಿರುವ ಉಗ್ರರೆಂಬ ಹೆಗ್ಗಣಗಳು ಈಗ ಬಿಲ ಸೇರಿಕೊಂಡಿದ್ದು, ಅವುಗಳ ಹುಡುಕಾಟದಲ್ಲಿ ಭದ್ರತಾ ಪಡೆಯವರು ಸಂಪೂರ್ಣ ವ್ಯಸ್ತರಾಗಿದ್ದಾರೆ. ದಕ್ಷಿಣ ಕಾಶ್ಮೀರದಲ್ಲೇ ಉಗ್ರರು ಅಡಗಿರುವ ಸಾಧ್ಯತೆ ಹೆಚ್ಚು ಎಂಬ ಗ್ರಹಿಕೆ ಗಟ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಸಂಬಂಧದ ಕಾರ್ಯಾಚರಣೆ ತೀವ್ರವಾಗಿದೆ. ಪಹಲ್ಗಾಮ್ ತಾಣದಲ್ಲಿನ ದಾಳಿಗೂ ಮುನ್ನ, ಇನ್ನೂ ಮೂರು ಜಾಗಗಳಲ್ಲಿ ಇಂಥ ಪೈಶಾಚಿಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿ ದ್ದರೂ ಅದು ವಿಫಲವಾಗಿತ್ತು ಎಂಬ ಸಂಗತಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತನಿಖೆ ಯಿಂದ ಗೊತ್ತಾಗಿದೆ. ‘ಅರು’ ಕಣಿವೆ, ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಬೇತಾಬ್ ಕಣಿವೆ ಉಗ್ರರ ಗುರಿಯಾಗಿದ್ದವು, ಆದರೆ ಇಲ್ಲೆಲ್ಲ ಅತೀವ ಭದ್ರತೆ ಇದ್ದ ಕಾರಣ ಅವರ ಸಂಚು ವಿಫಲ ಗೊಂಡಿತ್ತು ಮತ್ತು ದಾಳಿಯನ್ನು ಕೈಗೊಳ್ಳಬಲ್ಲ ತಾಣಗಳ ಹುಡುಕಾಟಕ್ಕೆ ಉಗ್ರರಿಗೆ ನಾಲ್ವರು ಭೂಗತ ಕಾರ್ಮಿಕರು ನೆರವಾಗಿದ್ದರು ಎಂದು ತಿಳಿದುಬಂದಿದೆ. ತನಿಖೆಯ ಭಾಗವಾಗಿ ಇದುವರೆಗೆ 20 ಭೂಗತ ಕಾರ್ಮಿಕರನ್ನು ಪತ್ತೆಹಚ್ಚಿ ಅವರ ಪೈಕಿ ಕೆಲವರನ್ನು ಬಂಧಿಸಲಾಗಿದೆ ಹಾಗೂ ಕೆಲವರ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಹೀಗಿತ್ತು ಏಟು-ಏದಿರೇಟು
ಪಹಲ್ಗಾಮ್ ಪ್ರಹಾರಕ್ಕೆ ಪ್ರತಿಯಾಗಿ ಭಾರತವು ಸಿಂಧೂನದಿ ಜಲಹಂಚಿಕೆ ಒಪ್ಪಂದವನ್ನು ಅಮಾನತು ಗೊಳಿಸಿದ ಕೆಲವೇ ಗಂಟೆಗಳ ನಂತರ ಗಡಿಭಾಗದಲ್ಲಿ ಕಿತಾಪತಿಗೆ ಶುರುವಿಟ್ಟುಕೊಂಡ ಪಾಕಿಸ್ತಾನ, ಗಡಿ ಭಾಗದ ವಿವಿಧ ಸ್ಥಳಗಳಲ್ಲಿ ಅಪ್ರಚೋದಿತ ದಾಳಿಗೆ ಮುಂದಾಗಿದೆ. ಅದರ ಪುಟ್ಟವಿವರ ಇಲ್ಲಿದೆ:
? ಜಮ್ಮು-ಕಾಶ್ಮೀರ ಕಣಿವೆ ಪ್ರದೇಶದ ಕುಪ್ವಾರಾ, ಅಖ್ನೂರ್, ಉರಿ ಪ್ರದೇಶಗಳ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ಪಾಕಿಸ್ತಾನಿ ಸೇನಾಠಾಣ್ಯಗಳು ಸೋಮವಾರ ರಾತ್ರಿ ಅಪ್ರಚೋದಿತ ಸಣ್ಣ ಶಸಾಸಗಳ ದಾಳಿ ನಡೆಸಿದವು.
? ಇದಕ್ಕೆ ಭಾರತೀಯ ಸೇನಾಪಡೆಗಳು ಕ್ಷಿಪ್ರವಾಗಿ ಬಿಸಿಮುಟ್ಟಿಸಿ, ದಾಳಿಯ ಪ್ರಮಾಣಕ್ಕೆ ತಕ್ಕಂತೆಯೇ ಮರುದಾಳಿ ನಡೆಸಿದವು.
? ಶುರುವಿನಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಹಾಗೂ ಕುಪ್ವಾರಾ ಜಿಲ್ಲೆಗಳ ಗಡಿನಿಯಂತ್ರಣ ರೇಖೆಗುಂಟ ಗುಂಡಿನ ದಾಳಿ ಆರಂಭಿಸಿದ ಪಾಕ್ ಸೈನಿಕರು, ತರುವಾಯ ಪೂಂಛ್ ವಲಯಕ್ಕೆ ಮತ್ತು ಜಮ್ಮು ಪ್ರದೇಶದ ಅಖ್ನೂರ್ ವಲಯಕ್ಕೆ ಅದನ್ನು ವಿಸ್ತರಿಸಿ, ಕದನವಿರಾಮದ ಉಲ್ಲಂಘನೆಯನ್ನು ತೀವ್ರಗೊಳಿಸಿದರು. ಇದಕ್ಕೆ ಭಾರತದ ಸೇನೆಯಿಂದ ತಕ್ಕ ಮಾರುತ್ತರವೇ ದಕ್ಕಿತು.
? ಇಷ್ಟಾಗಿಯೂ ಸುಮ್ಮನಾಗದ ಪಾಕ್ ಯೋಧರು ಮಂಗಳವಾರ ಮಧ್ಯರಾತ್ರಿಯಲ್ಲಿ ನೌಶೇರಾ ಮತ್ತು ಸುಂದರ್‌ಬಾನಿ ವಲಯಗಳಲ್ಲಿ ಗುಂಡಿನ ದಾಳಿಗೆ ಮುಂದಾದರು. ತರುವಾಯದಲ್ಲಿ, ಜಮ್ಮು ಜಿಲ್ಲೆಯ ಗಡಿಗುಂಟ ಪರ್ಗ್ವಾಲ್ ವಲಯದವರೆಗೆ ಈ ದಾಳಿಯನ್ನು ವಿಸ್ತರಿಸಿದರು. ಇದಕ್ಕೂ ಭಾರತೀಯ ಸೇನೆ ತಕ್ಕ ತಪರಾಕಿಯನ್ನೇ ನೀಡಿತು.
ಪಹಲ್ಗಾಮ್ ದಾಳಿಯ ಸಂಬಂಧವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ಷಣಕ್ಷಣಕ್ಕೂ ಹೆಚ್ಚು ತ್ತಿರುವ ಉದ್ವಿಗ್ನತೆಯ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸದ್ಯ ದಲ್ಲೇ ಸಭೆ ಸೇರಲಿದೆ ಎನ್ನಲಾಗಿದೆ. ಪರಮಾಣು ಅಸಗಳನ್ನು ಹೊಂದಿರುವ ಎರಡು ನೆರೆಹೊರೆಯ ರಾಷ್ಟ್ರಗಳ ನಡುವಿನ ಜ್ವಾಲೆ ತಾರಕಕ್ಕೇರಿರುವುದರ ಕುರಿತು ಕಳವಳ ವ್ಯಕ್ತಪಡಿಸಿರುವ ಮಂಡಳಿಯ ಅಧ್ಯಕ್ಷರು, “ಈ ಸಭೆಯು ಸದರಿ ಉದ್ವಿಗ್ನತೆ ಯನ್ನು ತಗ್ಗಿಸುವಲ್ಲಿ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಒಂದು ಅವಕಾಶ ವಾಗಿದೆ" ಎಂದು ತಿಳಿಸಿದ್ದಾರೆ
ಹೀಗಿದೆ ಗಡಿ ಲೆಕ್ಕಾಚಾರ
? ಭಾರತವು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ಗಡಿಯ ಅಂತರ ಒಟ್ಟು 3323 ಕಿಲೋಮೀಟರ್‌ಗಳಷ್ಟಿದೆ.
? ಈ ಗಡಿಯನ್ನು ಅದರ ಭೌಗೋಳಿಕ ವೈಶಿಷ್ಟ್ಯಕ್ಕೆ ಅನುಸಾರವಾಗಿ ೩ ಭಾಗಗಳಾಗಿ
ವರ್ಗೀಕರಿಸಲಾಗಿದೆ.
? ಗುಜರಾತ್‌ನಿಂದ ಶುರುವಾಗಿ ಜಮ್ಮುವಿನ ಅಖ್ನೂರ್‌ನಲ್ಲಿರುವ ಚೆನಾಬ್ ನದಿಯ ಉತ್ತರದ ದಂಡೆಯವರೆಗೆ ಇರುವಂಥದ್ದು ಅಂತಾರಾಷ್ಟ್ರೀಯ ಗಡಿ (ಐಬಿ).
? ಜಮ್ಮುವಿನ ಕೆಲವು ಭಾಗಗಳಿಂದ ಲೇಹ್‌ನ ಕೆಲವು ಭಾಗಗಳವರೆಗೆ ಇರುವಂಥದ್ದು ನಿಯಂತ್ರಣ ಗಡಿರೇಖೆ (ಎಲ್‌ಒಸಿ).
? ಸಿಯಾಚಿನ್ ಪ್ರದೇಶವನ್ನು ‘ಎನ್‌ಜೆ ೯೮೪೨’ ವಿಭಾಗದಿಂದ ಉತ್ತರದಲ್ಲಿ ‘ಇಂದಿರಾ ಕೋಲ್’ವರೆಗೆ ವಿಭಜಿಸುವಂಥದ್ದು ವಾಸ್ತವಿಕ ನೆಲದ ಸ್ಥಾನರೇಖೆ (ಎಜಿಪಿಎಲ್)