ಬಡತನದಿಂದ ಉದ್ಯಮಶೀಲತೆಯತ್ತ ಮಹಿಳಾ ಕೃಷಿಕರು: ಗ್ರಾಮೀಣ ಚಿತ್ರಣ ಬದಲಿಸಿದ 'ಕಾರ್ಟೆವಾ' ಅಭಿಯಾನ
ಮಹಿಳೆಯರು ಅವಕಾಶವನ್ನು ಹೇಗೆ ನಾಯಕತ್ವವನ್ನಾಗಿ ಪರಿವರ್ತಿಸುತ್ತಾರೆ ಎಂಬುದಕ್ಕೆ ಮಧ್ಯ ಪ್ರದೇಶದ ಉಮಾರಿಯಾ ಜಿಲ್ಲೆಯ ಮಹಿಳೆಯರೇ ಸಾಕ್ಷಿ. ಇಲ್ಲಿನ ಮಹಿಳೆಯರು ಕಾಡಿನಲ್ಲಿ ಸಿಗುವ 'ಮಹುವಾ' ಹೂವುಗಳನ್ನು ಹೆಕ್ಕಿ, ಸಾರಾಯಿ ಮಾಡಿ ಅಥವಾ ಅತಿ ಕಡಿಮೆ ಬೆಲೆಗೆ ಮಾರಿ ಬಡತನದ ಸುಳಿಯಲ್ಲಿದ್ದರು.
-
ಭಾರತೀಯ ಕೃಷಿ ಕ್ಷೇತ್ರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶ ದಿಂದ ಪ್ರಸಿದ್ಧ ಕೃಷಿ ವಿಜ್ಞಾನ ಸಂಸ್ಥೆ 'ಕಾರ್ಟೆವಾ' ಆರಂಭಿಸಿದ್ದ ಮಹತ್ವಾಕಾಂಕ್ಷೆಯ '#2MillionWomen' ಅಭಿಯಾನ ಯಶಸ್ವಿ 2 ವರ್ಷ ಪೂರೈಸಿದೆ. ಇದರ ಪರಿಣಾಮ, ಕೇವಲ ಹೊಲದ ಕೆಲಸಕ್ಕೆ ಸೀಮಿತವಾಗಿದ್ದ ಗ್ರಾಮೀಣ ಮಹಿಳೆಯರು, ಇಂದು ಕೃಷಿ ಉದ್ಯಮಿಗಳಾಗಿ ಹಾಗೂ ನಾಯಕಿಯರಾಗಿ ರೂಪುಗೊಳ್ಳುತ್ತಿದ್ದಾರೆ. ಇದು ಈ ಯೋಜನೆಯ ಅತಿದೊಡ್ಡ ಸಾಧನೆಯಾಗಿದೆ.
"ಮಹಿಳೆ ಅಭಿವೃದ್ಧಿ ಹೊಂದಿದರೆ, ಕೃಷಿ ಕ್ಷೇತ್ರವೂ ಅಭಿವೃದ್ಧಿ ಹೊಂದುತ್ತದೆ" ಎಂಬ ಆಶಯ ದೊಂದಿಗೆ 2024ರ ಸೆಪ್ಟೆಂಬರ್‌ನಲ್ಲಿ ಈ ಯೋಜನೆ ಆರಂಭವಾಗಿತ್ತು. 2030ರ ವೇಳೆಗೆ ಕೃಷಿ ಕ್ಷೇತ್ರದಲ್ಲಿ 20 ಲಕ್ಷ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗುರಿಯನ್ನು ಕಾರ್ಟೆವಾ ಹೊಂದಿದೆ.
2 ವರ್ಷದಲ್ಲಿ ಅಗಾಧ ಪರಿಣಾಮ
ಕಳೆದ ಎರಡು ವರ್ಷಗಳಲ್ಲಿ ಈ ಅಭಿಯಾನವು ದೇಶದ 22 ರಾಜ್ಯಗಳಲ್ಲಿ ಗ್ರಾಮೀಣ ಚಿತ್ರಣವನ್ನೇ ಬದಲಿಸಿದೆ. ಇದುವರೆಗೆ 6.37 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 7.95 ಲಕ್ಷ ಜನರನ್ನು ಈ ಯೋಜನೆ ತಲುಪಿದೆ.
49,000 ಮಹಿಳೆಯರು ಇಂದು ನಾಯಕಿಯರಾಗಿ ತಮ್ಮ ಸಮುದಾಯಗಳಲ್ಲಿ ಬದಲಾವಣೆ ತರುತ್ತಿದ್ದಾರೆ. 90,000ಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಲಾಗಿದ್ದು, 1.71 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ICC Women's T20I Rankings: ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟ ಶಫಾಲಿ ವರ್ಮಾ!
ಆದಿವಾಸಿ ಮಹಿಳೆಯರ ಯಶೋಗಾಥೆ
ಮಹಿಳೆಯರು ಅವಕಾಶವನ್ನು ಹೇಗೆ ನಾಯಕತ್ವವನ್ನಾಗಿ ಪರಿವರ್ತಿಸುತ್ತಾರೆ ಎಂಬುದಕ್ಕೆ ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಮಹಿಳೆಯರೇ ಸಾಕ್ಷಿ. ಇಲ್ಲಿನ ಮಹಿಳೆಯರು ಕಾಡಿನಲ್ಲಿ ಸಿಗುವ 'ಮಹುವಾ' ಹೂವುಗಳನ್ನು ಹೆಕ್ಕಿ, ಸಾರಾಯಿ ಮಾಡಿ ಅಥವಾ ಅತಿ ಕಡಿಮೆ ಬೆಲೆಗೆ ಮಾರಿ ಬಡತನದ ಸುಳಿಯಲ್ಲಿದ್ದರು.
ಆದರೆ ಈ ಯೋಜನೆಯಡಿ ಎಫ್‌ಪಿಒ (ರೈತ ಉತ್ಪಾದಕ ಸಂಸ್ಥೆ) ಕಟ್ಟಿಕೊಂಡ ಅವರು, ಈಗ ಅದೇ ಹೂವುಗಳಿಂದ ದುಬಾರಿ ಬೆಲೆಯ ಹಾಗೂ ಪೌಷ್ಟಿಕಾಂಶಯುಕ್ತ ಟ್ರೈಬೋ ಮಹುವಾ ಲಡ್ಡು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಾಡುತ್ಪನ್ನ ಸಂಗ್ರಹಿಸುತ್ತಿದ್ದವರು ಇಂದು ಯಶಸ್ವಿ ಉದ್ಯಮಿಗಳಾಗಿದ್ದಾರೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಮಧ್ಯಪ್ರದೇಶದ ರೈತ ಮಹಿಳೆ ಪೂನಂ ತಿವಾರಿ, "ಈ ಯೋಜನೆಯಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ. ನಾವೇ ನಿರ್ಧಾರಗಳನ್ನು ಕೈಗೊಂಡು ಮಾರುಕಟ್ಟೆ ಜೊತೆ ವ್ಯವಹರಿಸುತ್ತಿದ್ದೇವೆ," ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಟೆವಾ ಏಷ್ಯಾ-ಪೆಸಿಫಿಕ್ ಅಧ್ಯಕ್ಷ ಸುಬ್ರೊತೊ ಗೀದ್ ಪ್ರತಿಕ್ರಿಯಿಸಿ, "ಮಹಿಳೆಯರು ಭಾರತೀಯ ಕೃಷಿಯ ಬೆನ್ನೆಲುಬು. ಅವರಿಗೆ ಕೌಶಲ್ಯ, ಮಾರುಕಟ್ಟೆ ಒದಗಿಸಿದರೆ ಎಂತಹ ಅದ್ಭುತ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಈ ಯಶಸ್ಸೇ ಸಾಕ್ಷಿ," ಎಂದು ವಿವರಿಸಿದರು..
ಕೇಂದ್ರ ಸರ್ಕಾರದ ಎಸ್‌ಎಫ್‌ಎಸಿ ಮಾಜಿ ಎಂಡಿ ಪ್ರವೇಶ್ ಶರ್ಮಾ ಹಾಗೂ ಸಮುನ್ನತಿ ಫೈನಾನ್ಷಿ ಯಲ್‌ನ ಸಹ-ಸಂಸ್ಥಾಪಕ ಶ್ರೀಧರ್ ಈಶ್ವರನ್ ಅವರು ಈ ಕಾರ್ಯಕ್ರಮವನ್ನು ಶ್ಲಾಘಿಸಿದ್ದು, ಗ್ರಾಮೀಣ ಆರ್ಥಿಕತೆ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸುವಲ್ಲಿ ಇಂತಹ ಮಹಿಳಾ ಕೇಂದ್ರಿತ ಯೋಜನೆಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.