ಮತದಾರರ ಪಟ್ಟಿ ಪರಿಷ್ಕರಣೆಗೆ ತಡೆ, ಇವಿಎಂ ಸ್ವತಂತ್ರ ಲೆಕ್ಕಪರಿಶೋಧನೆ: ಸುಪ್ರೀಂ ಕೋರ್ಟ್‌ಗೆ ರಾಹುಲ್ ಗಾಂಧಿ ಮಂಡಿಸಿದ ಪ್ರಮುಖ 10 ಬೇಡಿಕೆಗಳಿವು!
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಇಂಡಿಯಾ ಮೈತ್ರಿಕೂಟದ ನಾಯಕರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡುವುದು ಸೇರಿದಂತೆ 10 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಎಸ್‌ಐಆರ್‌ಗೆ ಸಂಬಂಧಿಸಿದ ದಾಖಲೆಗಳ ಸಲ್ಲಿಕೆ, ಚುನಾವಣಾ ಆಯೋಗದ ನಿರ್ಧಾರಗಳ ಕಾನೂನುಬದ್ಧತೆಯ ಪರಿಶೀಲನೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರ ತನಿಖೆ, ಇವಿಎಂಗಳ ಸ್ವತಂತ್ರ ಆಡಿಟ್ ಹಾಗೂ ಸೂಕ್ತ ವಿಚಾರಣೆ ಇಲ್ಲದೆ ಮತದಾರರ ಹೆಸರುಗಳನ್ನು ತೆಗೆದುಹಾಕದಂತೆ ನಿರ್ದೇಶನ ನೀಡುವುದು ಅರ್ಜಿಯ ಪ್ರಮುಖ ಬೇಡಿಕೆಗಳಾಗಿವೆ.
ರಾಹುಲ್ ಗಾಂಧಿ -
ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಅಕ್ರಮಗಳನ್ನು ಆರೋಪಿಸಿ ಹಾಗೂ ದೇಶವ್ಯಾಪಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (Special Intensive Revision - SIR) ಮಧ್ಯಂತರ ತಡೆ ನೀಡುವಂತೆ ಕೋರಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ 'ಇಂಡಿಯಾ' (INDIA) ಮೈತ್ರಿಕೂಟದ ಪ್ರಮುಖ ನಾಯಕರು ಸುಪ್ರೀಂ ಕೋರ್ಟ್(Supreme Court) ಮೆಟ್ಟಿಲೇರಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿರುವ ವಿಪಕ್ಷಗಳು, ಚುನಾವಣಾ ಆಯೋಗದ ನಿರ್ಧಾರಗಳ ವಿರುದ್ಧ 10 ಪ್ರಮುಖ ಪರಿಹಾರಗಳನ್ನು ಕೋರಿ ಜಂಟಿ ಅರ್ಜಿ ಸಲ್ಲಿಸಿವೆ.
ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಅಕ್ರಮಗಳನ್ನು ಆರೋಪಿಸಿ ಹಾಗೂ ದೇಶವ್ಯಾಪಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (Special Intensive Revision - SIR) ಮಧ್ಯಂತರ ತಡೆ ನೀಡುವಂತೆ ಕೋರಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಹಾಗೂ 'ಇಂಡಿಯಾ' (INDIA) ಮೈತ್ರಿಕೂಟದ ಪ್ರಮುಖ ನಾಯಕರು ಸುಪ್ರೀಂ ಕೋರ್ಟ್(Supreme Court) ಮೆಟ್ಟಿಲೇರಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿರುವ ವಿಪಕ್ಷಗಳು, ಚುನಾವಣಾ ಆಯೋಗದ ನಿರ್ಧಾರಗಳ ವಿರುದ್ಧ 10 ಪ್ರಮುಖ ಪರಿಹಾರಗಳನ್ನು ಕೋರಿ ಜಂಟಿ ಅರ್ಜಿ ಸಲ್ಲಿಸಿವೆ.
ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ‘ರಾಹುಲ್ ಗಾಂಧಿ vs ಭಾರತೀಯ ಚುನಾವಣಾ ಆಯೋಗ’ ಎಂದು ದಾಖಲಾಗಿರುವ ಈ ಅರ್ಜಿಯನ್ನು ವಕೀಲ ಎಸ್. ಪ್ರಸನ್ನ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ನೂರಾರು ಮುಖಂಡರು ಸುಪ್ರೀಂ ಕೋರ್ಟ್‌ಗೆ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅರ್ಜಿಯಲ್ಲಿ ಮಂಡಿಸಲಾದ 10 ಪ್ರಮುಖ ಬೇಡಿಕೆಗಳು:
ಎಸ್‌ಐಆರ್ ದಾಖಲೆಗಳ ಸಲ್ಲಿಕೆ: 2025ರ ಜೂನ್ 24 ರಿಂದ ಆರಂಭಿಸಲಾದ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲಾ ಕಡತಗಳು, ಒಪ್ಪಂದಗಳು, ಸಭೆಯ ನಡಾವಳಿಗಳು, ಆಕ್ಷೇಪಣೆಗಳ ದಾಖಲೆಗಳು ಹಾಗೂ ECINET ಮತ್ತು ERONET ಲಾಗ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆಯೋಗಕ್ಕೆ ನಿರ್ದೇಶಿಸುವುದು.
ನಿರ್ಧಾರಗಳ ಕಾನೂನುಬದ್ಧತೆ ಪರೀಕ್ಷೆ: ಎಸ್‌ಐಆರ್ ನಿರ್ಧಾರಗಳು ಸಂವಿಧಾನದ 324ನೇ ವಿಧಿ ಹಾಗೂ 2023ರ ಕಾಯ್ದೆಗೆ ಅನುಗುಣವಾಗಿವೆಯೇ ಎಂದು ನ್ಯಾಯಾಂಗ ಪರಿಶೀಲನೆ ನಡೆಸಿ, ಶಾಸನಬದ್ಧ ಅಧಿಕಾರವಿಲ್ಲದೆ ತೆಗೆದುಕೊಂಡ ನಿರ್ಧಾರಗಳನ್ನು ರದ್ದುಪಡಿಸುವುದು.
ಅಧಿಕಾರಿಗಳ ವಿರುದ್ಧ ಕ್ರಮ: ಮತದಾರರ ಪಟ್ಟಿ ತಯಾರಿಕೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು.
ದೂರುಗಳ ನಿರ್ಧಾರ ದಾಖಲಿಸುವುದು: ಎಸ್‌ಐಆರ್ ಕುರಿತ ಪ್ರತಿಯೊಂದು ದೂರು ಮತ್ತು ಆಕ್ಷೇಪಣೆಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ಲಿಖಿತವಾಗಿ ದಾಖಲಿಸುವುದು.
ಆನ್‌ಲೈನ್ ಫಾರ್ಮ್ 6 ನಿಯಮ ಪಾಲನೆ: ಆನ್‌ಲೈನ್‌ನಲ್ಲಿ ಮತದಾರರ ನೋಂದಣಿಗೆ ಬಳಸುವ 'ಫಾರ್ಮ್ 6' ನಿಯಮಾವಳಿಗಳಿಗೆ ಬದ್ಧವಾಗಿರಬೇಕು ಮತ್ತು ಅಧಿಕೃತ ತಿದ್ದುಪಡಿ ಇಲ್ಲದೆ ರೂಪಾಂತರ ಮಾಡಬಾರದು.
ಇವಿಎಂ ಮತ್ತು ಮತದಾರರ ಪಟ್ಟಿಯ ಸ್ವತಂತ್ರ ಆಡಿಟ್: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಾಂತ್ರಿಕ ತಜ್ಞರ ಸಮಿತಿ ರಚಿಸಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದು, ದತ್ತಾಂಶ ಪ್ರವೇಶ ಹಾಗೂ ಇವಿಎಂಗಳ ತಾಂತ್ರಿಕ ವಿನ್ಯಾಸ ಮತ್ತು ನಿಯೋಜನೆ ಪ್ರಕ್ರಿಯೆಯ ಸಮಗ್ರ ತನಿಖೆ ನಡೆಸುವುದು.
ಹೆಸರು ಕೈಬಿಟ್ಟ ವಿವರಗಳ ಪ್ರಕಟಣೆ: ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾದ ಮತದಾರರ ಬೂತ್‌ವಾರು ಪಟ್ಟಿ, ಕಾರಣ, ಲಿಂಗ ಮತ್ತು ವಯಸ್ಸಿನ ವರ್ಗೀಕರಣವನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಮತ್ತು ಅರ್ಹರನ್ನು ಮರುಸೇರಿಸುವುದು.
ವಿಚಾರಣೆ ಇಲ್ಲದೆ ಹೆಸರು ತೆಗೆಯುವಂತಿಲ್ಲ: ಕಾನೂನುಬದ್ಧ ನೋಟಿಸ್ ಮತ್ತು ಸೂಕ್ತ ವಿಚಾರಣೆಯ ಅವಕಾಶ ನೀಡದೆ ಯಾವುದೇ ಮತದಾರನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬಾರದು.
ಎಸ್‌ಐಆರ್‌ಗೆ ಮಧ್ಯಂತರ ತಡೆ: ಈ ಎಲ್ಲಾ ವಿವಾದಿತ ಅಂಶಗಳು ಇತ್ಯರ್ಥವಾಗುವವರೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ತಕ್ಷಣದ ಮಧ್ಯಂತರ ತಡೆ ನೀಡುವುದು.
ಸೂಕ್ತ ನಿರ್ದೇಶನಗಳು: ಚುನಾವಣಾ ಪಾವಿತ್ರ್ಯತೆ ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಲು ನ್ಯಾಯಾಲಯವು ಸೂಕ್ತವೆಂದು ಭಾವಿಸುವ ಹೆಚ್ಚುವರಿ ಆದೇಶಗಳನ್ನು ಹೊರಡಿಸುವುದು.