ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ajay Anchepalya Column: ಸವಾಲು ಹಾಕಿ ಎಲ್ಲರ ಮನ ಗೆದ್ದ ಆಶಾ !

ಲತಾ ಮಂಗೇಶ್ಕರ್ ಅವರು ಕ್ಯಾಬರೆಗೆ ಸಂಬಂಧಿಸಿದ ಮತ್ತು ತೀರಾ ಮಾಡರ್ನ್ ಎನಿಸುವ ಹಾಡು ಗಳನ್ನು ಹಾಡಲು ಇಷ್ಟಪಡುತ್ತಿರಲಿಲ್ಲ; ಅಂಥ ಹಾಡುಗಳನ್ನು ಆಶಾ ಭೋಸ್ಲೆ ಅವರು ಹಾಡುತ್ತಾರೆ ಎಂದು ಗೊತ್ತಾದ ನಂತರ, ಕ್ಯಾಬರೆ ಹಾಡುಗಳಿಗೆಲ್ಲಾ ಇವರೇ ಧ್ವನಿ ನೀಡುವಂಥ ಸನ್ನಿವೇಶ ಸೃಷ್ಟಿ ಯಾಯಿತು. ಐಟಂ ಸಾಂಗ್, ಕ್ಯಾಬರೆ ನೃತ್ಯ, ‘ದಮ್’ ಹೊಡೆಯುವಾಗ ಹಾಡುವಂಥ ಮತ್ತೇರಿಸುವ ಹಾಡು- ಇವೆಲ್ಲವೂ ಆಶಾ ಅವರ ಪಾಲಾಯಿತು!

Ajay Anchepalya Column: ಸವಾಲು ಹಾಕಿ ಎಲ್ಲರ ಮನ ಗೆದ್ದ ಆಶಾ !

-

Profile
Ashok Nayak Apr 17, 2026 8:11 AM

ಅಜಯ್ ಅಂಚೆಪಾಳ್ಯ

ತಮ್ಮ ಬದುಕಿನುದ್ದಕ್ಕೂ ಸವಾಲು ಹಾಕಿಕೊಂಡೇ ಮುಂದುವರಿದವರು ಆಶಾ ಭೋಸ್ಲೆ. ಜತೆಗೆ, ತಮ್ಮ ಮನಸ್ಸು ಹೇಳಿದಂತೆ ನಿರ್ಣಯಗಳನ್ನು ಕೈಗೊಂಡು, ಬದುಕಿನ ಸವಾಲನ್ನು ಗೆದ್ದ ಆಶಾ ಭೋಸ್ಲೆ ಅವರು, ಆಧುನಿಕ ಮತ್ತು ಪಾಶ್ಚಾತ್ಯ ಶೈಲಿಯ ಹಾಡುಗಳನ್ನು ಹಾಡುವಲ್ಲಿ ಪ್ರಸಿದ್ಧಿ ಪಡೆದರು.

ಇತ್ತೀಚೆಗೆ ನಮ್ಮನ್ನು ಅಗಲಿದ ಆಶಾ ಭೋಸ್ಲೆ ಅವರದ್ದು ಸವಾಲಿನ ಬದುಕು; ಸಂಕಷ್ಟಗಳನ್ನು ಎದುರಿಸಿ, ಛಲದಿಂದ ಮುನ್ನುಗ್ಗಿ ಅಪಾರ ಜನಪ್ರಿಯತೆ ಗಳಿಸಿದ ಆಶಾ ಭೋಸ್ಲೆ ಅವರು, ಹಿಂದಿ ಚಿತ್ರರಂಗದ ಅಪ್ರತಿಮ ಗಾಯಕಿಯರಲ್ಲಿ ಒಬ್ಬರು.

ವಿಶೇಷವೆಂದರೆ, ಆಶಾ ಭೋಸ್ಲೆ ಅವರು ಎದುರಿಸಬೇಕಾಗಿಬಂದ ಸವಾಲುಗಳಿಗೆ ಕಾರಣರೆಂದರೆ ಅವರ ಕುಟುಂಬದವರೇ! ಮುಖ್ಯವಾಗಿ, ಅವರ ಅಕ್ಕ ಲತಾ ಮಂಗೇಷ್ಕರ್ ಅವರ ಗಾಯನದ ಯಶಸ್ಸು, ಆಶಾ ಅವರ ಪಾಲಿನ ಸವಾಲು ಎನಿಸಿತು! ಅವರಿಬ್ಬರೂ ಆರಂಭದಲ್ಲಿ ತೀರಾ ಅನ್ಯೋನ್ಯ ವಾಗಿದ್ದರೂ, ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಎಂಥ ಮಟ್ಟವನ್ನು ಮುಟ್ಟಿತು ಎಂದರೆ, ಲತಾ ಮಂಗೇಶ್ಕರ್ ಅವರು ಆಶಾ ಅವರ ನಡೆಗಳನ್ನು ಒಪ್ಪದೇ ದೂರ ಮಾಡಿದರು.

ವಿಪರ್ಯಾಸ ಎಂದರೆ, ಕೆಲವು ಗೀತೆಗಳನ್ನು ಸುಸಂಸ್ಕೃತವಲ್ಲ ಎಂದೋ ಅಥವಾ ಬೇರಾವುದೋ ಕಾರಣಕ್ಕೋ ಲತಾ ಅವರು ಹಾಡಲು ಒಪ್ಪದೇ ತಿರಸ್ಕರಿಸಿದಾಗ, ಅದನ್ನೇ ಆಶಾ ಅವರು ಹಾಡು ತ್ತಿದ್ದರು! ಅಂಥ ಅನಿವಾರ್ಯತೆ, ಹಣದ ಅವಶ್ಯಕತೆ ಒಂದು ಕಾಲದಲ್ಲಿ ಅವರಿಗಿತ್ತು.

ಲತಾ ಮಂಗೇಶ್ಕರ್ ಅವರು ಕ್ಯಾಬರೆಗೆ ಸಂಬಂಧಿಸಿದ ಮತ್ತು ತೀರಾ ಮಾಡರ್ನ್ ಎನಿಸುವ ಹಾಡು ಗಳನ್ನು ಹಾಡಲು ಇಷ್ಟಪಡುತ್ತಿರಲಿಲ್ಲ; ಅಂಥ ಹಾಡುಗಳನ್ನು ಆಶಾ ಭೋಸ್ಲೆ ಅವರು ಹಾಡುತ್ತಾರೆ ಎಂದು ಗೊತ್ತಾದ ನಂತರ, ಕ್ಯಾಬರೆ ಹಾಡುಗಳಿಗೆಲ್ಲಾ ಇವರೇ ಧ್ವನಿ ನೀಡುವಂಥ ಸನ್ನಿವೇಶ ಸೃಷ್ಟಿಯಾಯಿತು. ಐಟಂ ಸಾಂಗ್, ಕ್ಯಾಬರೆ ನೃತ್ಯ, ‘ದಮ್’ ಹೊಡೆಯುವಾಗ ಹಾಡುವಂಥ ಮತ್ತೇರಿಸುವ ಹಾಡು- ಇವೆಲ್ಲವೂ ಆಶಾ ಅವರ ಪಾಲಾಯಿತು!

ಇದನ್ನೂ ಓದಿ: Asha Bhosle: ಆಶಾ ಭೋಸ್ಲೆ ನಿಧನದ ಬಳಿಕ ಭಾವುಕ ಪೋಸ್ಟ್‌ ಹಂಚಿಕೊಂಡ ಮೊಮ್ಮಗಳು

ವಿಶೇಷವೆಂದರೆ, ಅಂಥ ಹೊಸ ಟ್ರೆಂಡ್‌ನ ಹಾಡುಗಳನ್ನು ಹಾಡುವಲ್ಲಿ ಆಶಾ ಭೋಸ್ಲೆ ವಿಶೇಷ ಪರಿಣತಿ ಸಾಧಿಸಿದರು! ಆದ್ದರಿಂದಲೇ, ಇಂದು ಅವರು, ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕರ ಸಾಲಿನಲ್ಲಿ ದಂತಕಥೆಯಾಗಿ ಹೋಗಿದ್ದಾರೆ.ಆಶಾ ಭೋಸ್ಲೆ ಅವರು ಬಾಲ್ಯದಿಂದಲೇ ಸಂಗೀತದಲ್ಲಿ ತೊಡಗಿಕೊಂಡವರು. ಅದಕ್ಕೆ ಮುಖ್ಯ ಕಾರಣ, ಅವರ ತಂದೆ ದೀನನಾಥ ಮಂಗೇಶ್ಕರ್ ಅವರು ಅದಾಗಲೇ ಪ್ರಸಿದ್ಧ ಗೀತ ಸಂಯೋಜಕರು, ನಟ ಮತ್ತು ಹಿಂದೂಸ್ತಾನಿ ಸಂಗೀತಗಾರರಾಗಿದ್ದರು.

ತಮ್ಮ ಮಕ್ಕಳಿಗೆ ಅವರು ಸಂಗೀತದ ತರಬೇತಿ ನೀಡಿದರು; ಆದ್ದರಿಂದಲೇ, ಲತಾ ಮಂಗೇಶ್ಕರ್, ಉಷಾ ಮಂಗೇಷ್ಕರ್ ಮತ್ತು ಆಶಾ ಭೋಸ್ಲೆ ಗಾಯಕಿಯರಾದರು; ಆಶಾ ಅವರ ಅಕ್ಕ ಮೀನಾ ಮಂಗೇಷ್ಕರ್ ಮತ್ತು ತಮ್ಮ ಹೃದಯನಾಥ ಮಂಗೇಶ್ಕರ್ ಅವರು ಸಂಗೀತ ಸಂಯೋಜಕರಾದರು.

‘ದಮ್’ ಹೊಡೆಯುವ ಹಾಡು 1960-70ರ ದಶಕದಲ್ಲಿ, ಅತಿ ಆಧುನಿಕ ಎನಿಸುವ ಶೈಲಿಯಲ್ಲಿ ಹಿಂದಿ ಹಾಡುಗಳನ್ನು ಹಾಡುತ್ತಿದ್ದ ಆಶಾ ಭೋಸ್ಲೆ ಅವರ ಬಹು ಪ್ರಸಿದ್ಧ ಹಾಡುಗಳಲ್ಲಿ ‘ದಮ್ ಮಾರೋ ದಮ್’ ಸಹ ಸೇರಿದೆ; ಇಂದಿನ ಪರಿಭಾಷೆಯಲ್ಲಿ ‘ಡ್ರಗ್ಸ್ ಸೇವನೆ’ಯ ದೃಶ್ಯ ಎಂದು ಕರೆಯಬಹುದಾದ ಆ ಒಂದು ದೃಶ್ಯದಲ್ಲಿ, ಜೀನತ್ ಅಮಾನ್ ನಟಿಸಿದ ಆ ಒಂದು ಹಾಡು, ಸಂಗೀತ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಮಾಡಿತು.

‘ನಮ್ಮ ಸುತ್ತಲಿನ ಜಗತ್ತನ್ನು ಮರೆದು, ದಮ್ ಹೊಡೆಯಿರಿ’ ಎಂದು ಕರೆ ಕೊಡುವ ‘ದಮ್ ಮಾರೋ ದಮ್’ ಹಾಡು, ತನ್ನ ನಾವೀನ್ಯ, ಅನನ್ಯತೆಯಿಂದಾಗಿ ಅಚ್ಚರಿ ಹುಟ್ಟಿಸುತ್ತದೆ. ‘ಸೈಕೆಡೆಲಿಕ್ ರಾಕ್’ ಸಂಗೀತ ಶೈಲಿಯನ್ನು ನಮ್ಮ ದೇಶದ ಹಾಡುಗಳೊಂದಿಗೆ ಬೆರೆಸಿರುವ ಆ ಪ್ರಯತ್ನವು, ಚಿತ್ರರಸಿಕ ರನ್ನು ಸೆಳೆದ ರೀತಿ ಅಭೂತಪೂರ್ವ. ಈ ಹಾಡು ಇಂದಿಗೂ ಇಷ್ಟಪಟ್ಟು ಕೇಳುವಂತಿದೆ!

ಇದಕ್ಕೆ ಸಂಗೀತ ಸಂಯೋಜನೆ ಮಾಡಿದ ಆರ್.ಡಿ.ಬರ್ಮನ್ ಅವರು, ಆಶಾ ಅವರ ಎರಡನೆಯ ಪತಿ; ಆದರೆ, ಆಶಾರಿಗಿಂತ ಆರು ವರ್ಷ ಚಿಕ್ಕವರು! ತಮ್ಮ ಮನಸ್ಸು ಇಷ್ಟಪಟ್ಟಂತೆ ಬದುಕುವ ಹಾದಿಯನ್ನು ಹಿಡಿದಿದ್ದ ಆಶಾ ಭೋಸ್ಲೆ ಅವರು ಇಂಥ ಹಲವು ದಿಟ್ಟ ನಿರ್ಧಾರಗಳನ್ನು ತಮ್ಮ ಜೀವನದಲ್ಲಿ ಕೈಗೊಂಡಿದ್ದಾರೆ. ತಮ್ಮ 16ನೆಯ ವಯಸ್ಸಿನಲ್ಲೇ ಗಣಪತ್ ರಾವ್ ಭೋಸ್ಲೆ ಯವರೊಂದಿಗೆ ಹೊರಟು ಹೋಗಿ, ಮದುವೆಯಾದರು!

ಆದರೆ, ಆ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. 1960ರಲ್ಲಿ ಅವರಿಂದ ಬೇರಾದ ನಂತರ, 1980ರ ದಶಕದಲ್ಲಿ ಸಂಗೀತ ನಿರ್ದೇಶಕ ಆರ್.ಡಿ.ಬರ್ಮನ್‌ರನ್ನು ಮದುವೆಯಾದರು. ಬರ್ಮನ್ ಅವರು ಆಶಾರ ದನಿಯಲ್ಲಿ ಹಲವು ಮಧುರ, ಆಧುನಿಕ ಹಿಂದಿ ಹಾಡುಗಳನ್ನು ಸಿದ್ಧಪಡಿಸಿರುವುದು ಒಂದು ದಾಖಲೆಯಾಗಿ ಉಳಿದಿದೆ.

ಕನ್ನಡದಲ್ಲಿ ಆಶಾ

1. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ (1967) ಚಿತ್ರದಲ್ಲಿ ಆಶಾ ಭೋಸ್ಲೆ ಹಾಡಿದ ಹಾಡು- ‘ಯಾಕೋ, ಏನೋ...’. ಆದರೆ ಅದು ಅಷ್ಟೊಂದು ಪ್ರಸಿದ್ಧವಾಗಲಿಲ್ಲ; ಅದೇ ಸಿನಿಮಾದಲ್ಲಿ ಅವರ ಸಹೋದರಿ ಲತಾ ಮಂಗೇಷ್ಕರ್ ಹಾಡಿದ ‘ಬೆಳ್ಳನೆ ಬೆಳಗಾಯಿತು’ ಬಹಳ ಪ್ರಸಿದ್ಧವಾಯಿತು; ಇಲ್ಲೂ ಆ ಸಹೋದರಿಯರ ನಡುವಿನ ಸ್ಪರ್ಧೆಯಲ್ಲಿ, ಅಕ್ಕನೇ ಮೇಲುಗೈ ಸಾಧಿಸಿದರು.

2. ‘ದೂರದ ಬೆಟ್ಟ’ (1971) ಚಿತ್ರದಲ್ಲಿ ‘ಸವಾಲು ಹಾಕಿ ಸೋಲಿಸಿ ಎಲ್ಲರ, ತಲೆಗಳ ಮೆಟ್ಟಲು ಬಂದಿರುವೆ!’ ಹಾಡನ್ನು ಹಾಡಿದವರು ಆಶಾ ಮಂಗೇಶ್ಕರ್ ಮತ್ತು ಪಿ.ಬಿ.ಶ್ರೀನಿವಾಸ್. ಡಾ. ರಾಜ್‌ಕುಮಾರ್ ಅಭಿನಯದಿಂದ ಮತ್ತು ಮರಾಠಿ ಶೈಲಿಯ ನೃತ್ಯಕ್ಕೆ ಸಂಯೋಜಿಸಿದ ಈ ಹಾಡು ಸಾಕಷ್ಟು ಜನಪ್ರಿಯವಾಯಿತು. ಆ ಒಂದು ನೃತ್ಯವು ಕನ್ನಡ ಸಿನಿಮಾ ಚರಿತ್ರೆಯಲ್ಲೇ ಅನನ್ಯ ಎನಿಸುವಷ್ಟು ಚೆನ್ನಾಗಿ ಚಿತ್ರೀಕರಣಗೊಂಡಿದೆ.

3. ‘ಮತ್ತೆ ಮುಂಗಾರು’ (2010) ಚಿತ್ರಕ್ಕಾಗಿ ‘ಹೇಳದೆ ಕಾರಣ’ ಎಂಬ ಹಾಡನ್ನು ಆಶಾ ಭೋಸ್ಲೆ ಹಾಡಿದ್ದರೂ, ಆ ಹಾಡು ಕನ್ನಡದ ಚಿತ್ರಗೀತೆ ಪ್ರಿಯರನ್ನು ತಲುಪುವಲ್ಲಿ ಹೆಚ್ಚಿನ ಯಶಸ್ಸು ಕಂಡಿಲ್ಲ ಎಂದೇ ಹೇಳಬಹುದು.

ಆಶಾ ಭೋಸ್ಲೆ ಅವರು ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 12000 ಹಾಡುಗಳನ್ನು ಹಾಡಿದ್ದಾರೆ. ಅವರು ಪ್ರಾರಂಭದಲ್ಲಿ ಹಲವಾರು ಸಂಕಷ್ಟ ಗಳನ್ನು ಎದುರಿಸಿದರೂ, ತಮ್ಮ ಪರಿಶ್ರಮ ಮತ್ತು ತಾಳ್ಮೆಯಿಂದ ಸಂಗೀತ ಲೋಕದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು.

ವಿಶೇಷವಾಗಿ ಆಧುನಿಕ ಶೈಲಿಯ ಚಿತ್ರಗೀತೆಗಳಲ್ಲಿ ಅವರ ಕೊಡುಗೆ ಅನನ್ಯ. ಭಾವಗೀತೆಗಳು, ನೃತ್ಯಗೀತೆಗಳು, ಗಝಲ್‌ಗಳು ಹಾಗೂ ಭಕ್ತಿಗೀತೆಗಳು ಸೇರಿದಂತೆ ವಿವಿಧ ಶೈಲಿಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ತುಂಬು ಜೀವನ ನಡೆಸಿ, 92ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಆಶಾ ಭೋಸ್ಲೆ ಅವರು, ಚಿತ್ರಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೂಲ್ಯ, ಅಪಾರ.