ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Sadhanashree Column: ಚಳಿಗಾಲದಲ್ಲಿ ಇವುಗಳನ್ನು ಸೇವಿಸಿ, ಅಯುಷ್ಯ ವೃದ್ಧಿಸಿಕೊಳ್ಳಿ !

ಆಯುರ್ವೇದದಲ್ಲಿ ಹೇಮಂತ ಋತುವನ್ನು ಬಲ ವೃದ್ಧಿಗೆ ಅತ್ಯಂತ ಅನುಕೂಲಕರವಾದ ಕಾಲವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಹೊರಗಿನ ವಾತಾ ವರಣ ತಂಪಾಗಿರುವುದರಿಂದ ದೇಹದ ಉಷ್ಣತೆ ಒಳಗಡೆ ಸಂರಕ್ಷಿಸಲ್ಪಟ್ಟು ಜಠರಾಗ್ನಿ, ಅಂದರೆ ಜೀರ್ಣ ಶಕ್ತಿ ಪ್ರಬಲವಾಗುತ್ತದೆ. ಈ ಸಮಯದಲ್ಲಿ ದೇಹಕ್ಕೆ ಸೂಕ್ತ ಪ್ರಮಾಣದ ಪೌಷ್ಟಿಕ ಆಹಾರ ದೊರೆಯದಿದ್ದರೆ, ಪ್ರಬಲವಾದ ಜಠರಾಗ್ನಿಯು ದೇಹದ ಧಾತುಗಳನ್ನೇ ಕ್ಷೀಣಿಸುವ ಸಾಧ್ಯತೆಯಿದೆ ಎಂದು ಆಯುರ್ವೇದ ವಿವರಿಸುತ್ತದೆ.

ಚಳಿಗಾಲದಲ್ಲಿ ಇವುಗಳನ್ನು ಸೇವಿಸಿ, ಅಯುಷ್ಯ ವೃದ್ಧಿಸಿಕೊಳ್ಳಿ !

-

Profile
Ashok Nayak Nov 21, 2026 6:59 PM

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಪ್ರಕೃತಿಯ ಪ್ರತಿಯೊಂದು ಋತುವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರದ ಅಗತ್ಯವಿದ್ದರೆ, ಮಳೆಗಾಲದಲ್ಲಿ ಜೀರ್ಣಶಕ್ತಿಯನ್ನು ಕಾಪಾಡುವ ಆಹಾರ ಬೇಕಾಗುತ್ತದೆ. ಅದೇ ರೀತಿ ಚಳಿಗಾಲದಲ್ಲಿ ದೇಹಕ್ಕೆ ಕೇವಲ ಉಷ್ಣತೆಯಷ್ಟೇ ಅಲ್ಲ, ಹೆಚ್ಚಿನ ಪೋಷಣೆ, ಶಕ್ತಿ ಮತ್ತು ಸ್ನಿಗ್ಧತೆಯೂ ಅಗತ್ಯ. ಋತುಗಳಿಗೆ ಅನುಗುಣವಾಗಿ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದೇ ಆಯುರ್ವೇದದ ಋತುಚರ್ಯೆಯ ಮೂಲತತ್ವ.

ಆಯುರ್ವೇದದಲ್ಲಿ ಹೇಮಂತ ಋತುವನ್ನು ಬಲ ವೃದ್ಧಿಗೆ ಅತ್ಯಂತ ಅನುಕೂಲಕರವಾದ ಕಾಲವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಹೊರಗಿನ ವಾತಾ ವರಣ ತಂಪಾಗಿರುವುದರಿಂದ ದೇಹದ ಉಷ್ಣತೆ ಒಳಗಡೆ ಸಂರಕ್ಷಿಸಲ್ಪಟ್ಟು ಜಠರಾಗ್ನಿ, ಅಂದರೆ ಜೀರ್ಣ ಶಕ್ತಿ ಪ್ರಬಲವಾಗುತ್ತದೆ. ಈ ಸಮಯದಲ್ಲಿ ದೇಹಕ್ಕೆ ಸೂಕ್ತ ಪ್ರಮಾಣದ ಪೌಷ್ಟಿಕ ಆಹಾರ ದೊರೆಯದಿದ್ದರೆ, ಪ್ರಬಲವಾದ ಜಠರಾಗ್ನಿಯು ದೇಹದ ಧಾತುಗಳನ್ನೇ ಕ್ಷೀಣಿಸುವ ಸಾಧ್ಯತೆಯಿದೆ ಎಂದು ಆಯುರ್ವೇದ ವಿವರಿಸುತ್ತದೆ. ಆದ್ದರಿಂದ ಹೇಮಂತ ಋತುವಿನಲ್ಲಿ ಲಘು ಆಹಾರಕ್ಕಿಂತ ಬಲವರ್ಧಕ, ಪೌಷ್ಟಿಕ, ಸ್ನಿಗ್ಧ ಮತ್ತು ಸ್ವಲ್ಪ ಗುರು ಗುಣವುಳ್ಳ ಆಹಾರಗಳಿಗೆ ಆದ್ಯತೆ ನೀಡಬೇಕು.

ಹೇಮಂತ ಋತುವಿನ ಆರು ಆಯುಷ್ಯವರ್ಧಕ ಆಹಾರಗಳು!: ಗೋಕ್ಷೀರ- ಇಕ್ಷುರಸ- ವಸಾ- ತೈಲ- ನವಾನ್ನ- ಉಷ್ಣಜಲ. ಹೇಮಂತ ಋತುವಿನಲ್ಲಿ ಗೋ ಕ್ಷೀರ (ಹಸುವಿನ ಹಾಲು), ಇಕ್ಷುರಸ (ಕಬ್ಬಿನ ರಸ), ವಸಾ (ಪ್ರಾಣಿಗಳ ಸ್ನಾಯುಗಳಲ್ಲಿ ದೊರೆಯುವ ಕೊಬ್ಬಿನ ಅಂಶ), ತೈಲ (ಎಣ್ಣೆ), ನವಾನ್ನ (ಹೊಸದಾಗಿ ಕೊಯ್ಲು ಮಾಡಿದ ಧಾನ್ಯಗಳು) ಮತ್ತು ಉಷ್ಣಜಲ (ಕುದಿಸಿದ ನೀರು) ಇವುಗಳನ್ನು ಅಭ್ಯಾಸವಾಗಿ ಸೇವಿಸು ವುದರಿಂದ ಆಯುಷ್ಯ ಕ್ಷೀಣಿಸುವುದಿಲ್ಲ ಎಂಬ ಅರ್ಥವನ್ನು ಆಯುರ್ವೇದದ ಶಾಸ್ತ್ರೋಕ್ತ ಉಲ್ಲೇ ಖ ಸಾರು ತ್ತದೆ. ಹಾಗಾದರೆ ಈ ಪ್ರತಿಯೊಂದು ಪದಾರ್ಥಗಳ ವೈಶಿಷ್ಟ್ಯವೇನು?

ಇದನ್ನೂ ಓದಿ: Dr Sadhanashree Column: ಚಳಿಗಾಲದಲ್ಲಿ ತುಪ್ಪ ಮರೆಯದಿರಿ: ಆಂತರಿಕ ಸ್ನೇಹನದ ಮಹತ್ವ

1 ಗೋಕ್ಷೀರ- ದೇಹಕ್ಕೆ ಪೋಷಣೆ ನೀಡುವ ಹಾಲು: ಹೇಮಂತ ಋತುವಿನಲ್ಲಿ ಗೋಕ್ಷೀರ ಅಥವಾ ಹಸು ವಿನ ಹಾಲಿನ ಸೇವನೆಗೆ ವಿಶೇಷ ಮಹತ್ವವಿದೆ. ಹಾಲು ಆಯುರ್ವೇದದ ಪ್ರಕಾರ ಬಲ್ಯ ಮತ್ತು ಬೃಂಹಣ ಗುಣಗಳನ್ನು ಹೊಂದಿದ್ದು, ದೇಹಕ್ಕೆ ಪೋಷಣೆ ನೀಡುವ ಆಹಾರವಾಗಿದೆ. ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುವಾಗ ಬೆಚ್ಚಗಿನ ಹಾಲನ್ನು ಸೇವಿಸುವುದು ಉತ್ತಮ ಆಹಾರ ಪದ್ಧತಿಯಾಗಬಹುದು. ಸಾಮಾನ್ಯವಾಗಿ ಹಾಲಿಗೆ ಸ್ವಲ್ಪ ನೀರನ್ನು ಸೇರಿಸಿ ಕಾಯಿಸಿ ನಂತರ ಸೇವಿಸುವುದರಿಂದ ಅದು ಹಗುರವಾಗಿ ಜೀರ್ಣವಾಗಲು ಸಹಕಾರಿಯಾಗುತ್ತದೆ. ಇದರ ಜೊತೆಗೆ ಧನಿಯಾ ಕಾಳು/ ಜೀರಿಗೆ ಕಾಳು/ ಅರಿಶಿನ/ ಬಡೆಸೊಪ್ಪು ಅಥವಾ ಒಣಶುಂಠಿ ಪುಡಿಯಂತಹ ದ್ರವ್ಯಗಳನ್ನು ಸೇರಿಸಿ ಕುದಿಸುವುದರಿಂದ ಹಾಲಿನ ಜೀರ್ಣಸಹನೀಯತೆ ಸುಧಾರಿಸಬಹುದು. ವಿಶೇಷವಾಗಿ ಜೀರ್ಣಕ್ರಿಯೆಯಲ್ಲಿ ಸೂಕ್ಷ್ಮತೆ ಇರುವವರು ತಮ್ಮ ಪ್ರಕೃತಿಗೆ ಅನುಗುಣವಾಗಿ ಇಂತಹ ವಿಧಾನವನ್ನು ಅನುಸರಿಸಬಹುದು.

2 ಇಕ್ಷುರಸ-ಕಬ್ಬಿನ ರಸದ ಸಿಹಿ ಪೋಷಣೆ: ಕಬ್ಬಿನ ರಸ ವನ್ನು ಆಯುರ್ವೇದದಲ್ಲಿ ಇಕ್ಷುರಸ ಎಂದು ಕರೆಯಲಾಗುತ್ತದೆ. ಇದು ಸ್ವಾಭಾವಿಕವಾದ ಮಧುರ ರಸವನ್ನು ಹೊಂದಿದ್ದು, ಶಕ್ತಿಯನ್ನು ಒದಗಿಸುವ ಆಹಾರ ಪದಾರ್ಥವಾಗಿದೆ. ಹೇಮಂತ ಋತುವಿನಲ್ಲಿ ಮಧುರ ರಸ ಪ್ರಧಾನವಾದ ಪೌಷ್ಟಿಕ ಆಹಾರಗಳಿಗೆ ನೀಡಿರುವ ಮಹತ್ವವನ್ನು ಇದು ಪ್ರತಿನಿಧಿಸುತ್ತದೆ. ಕಬ್ಬಿನ ರಸವು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ತೃಪ್ತಿಯನ್ನೂ ಒದಗಿಸುತ್ತದೆ. ಆದರೆ ಕಬ್ಬಿನ ರಸವನ್ನು ಸೇವಿಸುವಾಗ ಅದರ ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಮಧುಮೇಹ ಅಥವಾ ರಕ್ತದಲ್ಲಿನ ಸಕ್ಕರೆಯ ಮಟ್ಟದ ಸಮಸ್ಯೆ ಇರುವವರು ಇದನ್ನು ಮುಕ್ತವಾಗಿ ಸೇವಿಸಬಾರದು.

3 ವಸಾ-ದೇಹಕ್ಕೆ ಬಲ ನೀಡುವ ಸ್ನಿಗ್ಧ ಆಹಾರ: ಆಯುರ್ವೇದದಲ್ಲಿ ವಸಾ ಎಂದರೆ ಪ್ರಾಣಿಗಳ ಸ್ನಾಯು ಗಳಲ್ಲಿ ದೊರೆಯುವ ಕೊಬ್ಬಿನ ಅಂಶ. ಇದನ್ನು ಸ್ನಿಗ್ಧ ಮತ್ತು ಬೃಂಹಣ ಆಹಾರವಾಗಿ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಚಳಿಗಾಲದಲ್ಲಿ ದೇಹಕ್ಕೆ ಸ್ನಿಗ್ಧತೆ ಯುಳ್ಳ, ಬಲವರ್ಧಕ ಆಹಾರಗಳ ಅಗತ್ಯವಿರುವುದನ್ನು ಈ ಉಲ್ಲೇಖ ಸೂಚಿಸುತ್ತದೆ. ಪ್ರಾಣಿಗಳ ಸ್ನಾಯುಗಳಲ್ಲಿ ದೊರೆಯುವ ಕೊಬ್ಬಿನ ಅಂಶವನ್ನು ವಿವಿಧ ರೀತಿಯಲ್ಲಿ ಆಹಾರದಲ್ಲಿ ಬಳಸಿಕೊಳ್ಳಬಹುದು. ಮಾಂಸರಸದ ರೂಪದಲ್ಲಿ, ಸೂಪ್ ರೂಪದಲ್ಲಿ ಅಥವಾ ವಿವಿಧ ಅಡುಗೆ ಪದಾರ್ಥಗಳಲ್ಲಿ ಸೇರಿಸಿ ಸೇವಿಸಬಹುದು. ಆದರೆ ಜೀರ್ಣಶಕ್ತಿ ಕಡಿಮೆ ಇರುವವರು, ರಾತ್ರಿ ಸಮಯದಲ್ಲಿ ಇಂತಹ ಆಹಾರವನ್ನು ಸೇವಿಸು ವವರು ಹಾಗೂ ದೈಹಿಕ ವ್ಯಾಯಾಮ ಅಥವಾ ಶ್ರಮ ಕಡಿಮೆ ಇರುವವರು ಇವುಗಳನ್ನು ಸೇವಿಸುವಾಗ ವಿವೇಚನೆ ವಹಿಸಬೇಕು. ವ್ಯಕ್ತಿಯ ಪ್ರಕೃತಿ, ಜೀರ್ಣಶಕ್ತಿ ಮತ್ತು ದೈಹಿಕ ಚಟುವಟಿಕೆಗೆ ಅನುಗುಣವಾಗಿ ಇದರ ಪ್ರಮಾಣವನ್ನು ನಿರ್ಧರಿಸಬೇಕು.

4 ತೈಲ- ಸ್ನಿಗ್ಧತೆಯ ಮಹತ್ವ ಮತ್ತು ನಿತ್ಯ ಅಭ್ಯಂಗದ ಪ್ರಯೋಜನಗಳು: ಚಳಿಗಾಲದಲ್ಲಿ ದೇಹದಲ್ಲಿ ಶುಷ್ಕತೆ ಹೆಚ್ಚಾಗುವ ಸಾಧ್ಯತೆಯಿದೆ. ಚರ್ಮ ಒಣಗುವುದು, ತುಟಿಗಳು ಒಡೆಯುವುದು, ಸಂಧಿಗಳಲ್ಲಿ ಬಿಗಿತ ಮತ್ತು ದೇಹದಲ್ಲಿ ಒರಟುತನ ಕಾಣಿಸಿಕೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಆಹಾರದಲ್ಲಿ ಸೂಕ್ತ ಪ್ರಮಾಣದ ಸ್ನಿಗ್ಧ ದ್ರವ್ಯಗಳಿರುವುದು ಅಗತ್ಯ. ಎಳ್ಳೆಣ್ಣೆ, ಇತರ ಸಸ್ಯಜನ್ಯ ಎಣ್ಣೆಗಳು ಮತ್ತು ಸೂಕ್ತ ಪ್ರಮಾಣದ ತುಪ್ಪವನ್ನು ಆಹಾರದಲ್ಲಿ ಬಳಸಬಹುದು. ಆಯುರ್ವೇದದಲ್ಲಿ ತೈಲಕ್ಕೆ ನೀಡಿರುವ ಮಹತ್ವ ಕೇವಲ ಆಹಾರಕ್ಕೆ ಸೀಮಿತವಾಗಿಲ್ಲ. ಬಾಹ್ಯವಾಗಿ ತೈಲ ವನ್ನು ಬಳಸುವ ಅಭ್ಯಂಗಕ್ಕೂ ವಿಶೇಷ ಸ್ಥಾನವಿದೆ. ಪ್ರತಿ ದಿನ ಬೆಳಿಗ್ಗೆ ಸ್ನಾನಕ್ಕೆ ಮುನ್ನ, ಖಾಲಿ ಹೊಟ್ಟೆಯಲ್ಲಿ, ಎಳ್ಳೆಣ್ಣೆಯಂತಹ ಸೂಕ್ತ ತೈಲವನ್ನು ಸ್ವಲ್ಪ ಬೆಚ್ಚಗೆ ಮಾಡಿ ಶಿರದಿಂದ ಪಾದದ ವರೆಗೆ ದೇಹಕ್ಕೆ ಹಚ್ಚಿ ನಂತರ ಸ್ನಾನ ಮಾಡುವುದು ಉತ್ತಮ ಅಭ್ಯಾಸ. ನಿತ್ಯದ ಅಭ್ಯಂಗವು ಚಳಿಗಾಲದಲ್ಲಿ ಉಂಟಾಗುವ ಶುಷ್ಕತೆಯನ್ನು ಕಡಿಮೆ ಮಾಡಿ, ದೇಹಕ್ಕೆ ಸ್ನಿಗ್ಧತೆ, ಕಾಂತಿ ಮತ್ತು ಬಲವನ್ನು ಒದಗಿಸಲು ಸಹಕಾರಿಯಾಗಿದೆ.

ಅಭ್ಯಂಗದ ಫಲಶ್ರುತಿಯನ್ನು ವಿವರಿಸುವಾಗ ಆಯುರ್ವೇದ ಶಾಸ್ತ್ರಗಳು ಇದನ್ನು ಆಯುಷ್ಯ ವರ್ಧಕ ವೆಂದೂ ಉಲ್ಲೇಖಿಸುತ್ತವೆ. ನಿತ್ಯ ಅಭ್ಯಂಗವು ವೃದ್ಧಾಪ್ಯದ ಲಕ್ಷಣಗಳನ್ನು ತಡಗೊಳಿಸಲು, ಚರ್ಮದ ಆರೋಗ್ಯವನ್ನು ಕಾಪಾಡಲು ಮತ್ತು ದೇಹದ ಸಹಜ ಬಲವನ್ನು ಸಂರಕ್ಷಿಸಲು ಪೂರಕವಾಗಿದೆ. ಹೀಗಾಗಿ ಅಭ್ಯಂಗವು ಕೇವಲ ಸೌಂದರ್ಯವರ್ಧಕ ಕ್ರಮವಲ್ಲ; ಆರೋಗ್ಯಕರ ವೃದ್ಧಾಪ್ಯ ಮತ್ತು ದೀರ್ಘಾಯುಷ್ಯದ ದೃಷ್ಟಿಯಿಂದಲೂ ಮಹತ್ವದ ದಿನಚರ್ಯೆಯಾಗಿದೆ.

5 ನವಾನ್ನ-ಹೊಸದಾಗಿ ಕೊಯ್ಲು ಮಾಡಿದ ಧಾನ್ಯಗಳು: ಹೇಮಂತ ಋತುವಿನಲ್ಲಿ ನವಾನ್ನ, ಅಂದರೆ ಹೊಸದಾಗಿ ಕೊಯ್ಲು ಮಾಡಿದ ಧಾನ್ಯಗಳ ಸೇವನೆಗೂ ಶಾಸ್ತ್ರಗಳಲ್ಲಿ ಮಹತ್ವ ನೀಡಲಾಗಿದೆ. ಹೊಸದಾಗಿ ಬಂದ ಅಕ್ಕಿ ಮತ್ತು ಇತರ ಧಾನ್ಯಗಳಿಂದ ತಯಾರಿಸಿದ ಆಹಾರಗಳು ಈ ಋತುವಿನ ಆಹಾರ ಪದ್ಧತಿಯ ಭಾಗವಾಗಿವೆ. ಧಾನ್ಯಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವ ಪ್ರಮುಖ ಮೂಲಗಳು. ಚಳಿಗಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ಅನ್ನ, ಗಂಜಿ, ಖಿಚಡಿ ಮತ್ತು ಇತರ ಧಾನ್ಯಾ ಧಾರಿತ ಆಹಾರಗಳನ್ನು ಸೇವಿಸಬಹುದು. ಧಾನ್ಯಗಳನ್ನು ಚೆನ್ನಾಗಿ ಬೇಯಿಸಿ, ಅಗತ್ಯಕ್ಕೆ ತಕ್ಕಂತೆ ತುಪ್ಪ ಅಥವಾ ಇತರ ಸ್ನಿಗ್ಧ ದ್ರವ್ಯಗಳೊಂದಿಗೆ ಒಗ್ಗರಣೆಯನ್ನು ನೀಡಿ ಸೇವಿಸುವುದು ಉತ್ತಮ.

ನೆನಪಿಡಿ: ಹೊಸದಾಗಿ ಕೊಯ್ಲು ಮಾಡಿದ ಧಾನ್ಯಗಳು (ನವಾನ್ನ) ಸಾಮಾನ್ಯವಾಗಿ ಜೀರ್ಣಿಸಲು ಸ್ವಲ್ಪ ಗುರುವಾಗಿರುತ್ತವೆ. ಆದ್ದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವವರು, ಮಧುಮೇಹಿ ಗಳು, ಪ್ರಮೇಹಿ ಗಳು ಹಾಗೂ ಸ್ಥೂಲಕಾಯ ಹೊಂದಿರುವವರು ನವಾನ್ನ ವನ್ನು ಬಹಳ ಮಿತವಾಗಿ ಬಳಸುವುದು ಉತ್ತಮ. ಇಂತಹವರಿಗೆ ಹಳೆಯ ಧಾನ್ಯಗಳ ಸೇವನೆ ಸಾಮಾನ್ಯವಾಗಿ ಹೆಚ್ಚು ಹಿತಕರವಾಗಿರುತ್ತದೆ. ಆಹಾರದ ಆಯ್ಕೆ ಯಲ್ಲಿ ಋತುವಿನ ಜೊತೆಗೆ ವ್ಯಕ್ತಿಯ ಜೀರ್ಣಶಕ್ತಿ ಮತ್ತು ಆರೋಗ್ಯಸ್ಥಿತಿಯನ್ನೂ ಪರಿಗಣಿಸುವುದು ಅತ್ಯಂತ ಮುಖ್ಯ.

6 ಉಷ್ಣಜಲ-ಕುದಿಸಿದ ನೀರಿನ ಮಹತ್ವ: ನೀರಿನ ಸೇವನೆಯಲ್ಲಿಯೂ ಋತುಗಳಿಗೆ ಅನುಗುಣ ವಾದ ಬದಲಾವಣೆ ಅಗತ್ಯ. ಚಳಿಗಾಲದಲ್ಲಿ ತಣ್ಣನೆಯ ನೀರಿನ ಬದಲು ಉಷ್ಣಜಲ ಎಂದರೆ ಕುದಿಸಿದ ನೀರನ್ನು ಸೇವಿಸುವುದು ಆಯುರ್ವೇದವು ಸೂಚಿಸುವ ಸರಳವಾದ ಅಭ್ಯಾಸ. ಸಾಮಾನ್ಯ ವಾಗಿ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ, ಕಾಲುಭಾಗಕ್ಕೆ ಇಳಿಸಿದ ನೀರನ್ನು ಸ್ವಲ್ಪ ತಣ್ಣಗಾದ ನಂತರ ಸೇವಿಸುವುದು ಒಳ್ಳೆಯದು. ವಿಶೇಷವಾಗಿ ಊಟದ ಜೊತೆಯಲ್ಲಿ ಸ್ವಲ್ಪ ಸ್ವಲ್ಪ ಉಷ್ಣಜಲವನ್ನು ಸೇವಿಸುವುದು ಈ ಸಮಯದಲ್ಲಿ ಬಹಳ ಸೂಕ್ತ. ದಿನವಿಡೀ ಅಗತ್ಯಕ್ಕೆ ಅನುಗುಣ ವಾಗಿ ಈ ರೀತಿ ಕುದಿಸಿದ ಉಷ್ಣಜಲವನ್ನೇ ಸೇವಿಸುವುದು ಹೇಮಂತ ಋತುವಿನ ಉತ್ತಮ ಅಭ್ಯಾಸವಾಗಿದೆ.

ಚಳಿಗಾಲದ ಆಹಾರದಲ್ಲಿ ಇವುಗಳಿಗೂ ಇರಲಿ ಸ್ಥಾನ: ಮೇಲೆ ಉಲ್ಲೇಖಿಸಿರುವ ಪದಾರ್ಥಗಳ ಜೊತೆಗೆ ಉದ್ದಿನ ಬೇಳೆ, ಎಳ್ಳು, ಬೆಲ್ಲ ಮತ್ತು ಹುರುಳಿಕಾಳುಗಳೂ ಆಯುರ್ವೇದ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಆಹಾರ ಪದಾರ್ಥಗಳಾಗಿವೆ. ಇವುಗಳನ್ನು ಹೇಮಂತ ಋತುವಿನ ಆಹಾರದಲ್ಲಿ ಸೂಕ್ತವಾಗಿ ಬಳಸಿಕೊಳ್ಳಬಹುದು. ಉದ್ದಿನ ಬೇಳೆಯು ಬಲವರ್ಧಕ, ಪೌಷ್ಟಿಕ ಹಾಗೂ ಸ್ನಿಗ್ಧ ಗುಣಗಳನ್ನು ಹೊಂದಿದೆ.

ಎಳ್ಳು ಉಷ್ಣ ಮತ್ತು ಸ್ನಿಗ್ಧ ಗುಣಗಳಿಂದ ಕೂಡಿದ್ದು, ಚಳಿಗಾಲದಲ್ಲಿ ದೇಹದ ಶುಷ್ಕತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬೆಲ್ಲವು ಶಕ್ತಿಯನ್ನು ಒದಗಿಸುವುದರ ಜೊತೆಗೆ ಚಳಿಗಾಲದ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ. ಎಳ್ಳು-ಬೆಲ್ಲದ ಉಂಡೆ, ಎಳ್ಳಿನ ಚಟ್ನಿ ಮುಂತಾದ ತಿನಿಸುಗಳು ಈ ಋತುವಿಗೆ ಸೂಕ್ತವಾದ ಸಾಂಪ್ರದಾಯಿಕ ಆಹಾರಗಳಾಗಿವೆ. ಹುರುಳಿಕಾಳು ಉಷ್ಣ ಗುಣವನ್ನು ಹೊಂದಿದ್ದು, ಹುರುಳಿಕಾಳಿನ ಸಾರು, ಸೂಪ್ ಮುಂತಾದ ರೂಪಗಳಲ್ಲಿ ಸೇವಿಸಬಹುದು. ಹೀಗೆ ಬಲವರ್ಧಕ, ಉಷ್ಣ ಮತ್ತು ಸ್ನಿಗ್ಧ ಗುಣವುಳ್ಳ ಈ ಆಹಾರ ಪದಾರ್ಥಗಳು ಹೇಮಂತ ಋತುವಿನಲ್ಲಿ ದೇಹದ ಪೋಷಣೆ ಮತ್ತು ಬಲವರ್ಧನೆಗೆ ಪೂರಕವಾಗಿವೆ , ಆದರೆ ಬಳಸುವಾಗ ಪ್ರಮಾಣದ ವಿವೇಚನೆಯಿರಲಿ!

ಆಹಾರವೇ ಋತುಚರ್ಯೆಯ ಮೊದಲ ಹೆಜ್ಜೆ: ಹೇಮಂತ ಋತುವಿನ ಈ ಆಹಾರ ಪದಾರ್ಥಗಳ ಉಖವು ನಮಗೆ ಒಂದು ಮಹತ್ವದ ಜೀವನಸೂತ್ರ ವನ್ನು ತಿಳಿಸುತ್ತದೆ. ಚಳಿಗಾಲದಲ್ಲಿ ದೇಹವನ್ನು ಕೇವಲ ಹೊರಗಿನ ಚಳಿಯಿಂದ ರಕ್ಷಿಸುವುದಷ್ಟೇ ಆರೋಗ್ಯದ ಕಾಳಜಿಯಲ್ಲ; ಒಳಗಿನಿಂದಲೂ ದೇಹವನ್ನು ಪೋಷಿಸಿ, ಬಲವರ್ಧನೆ ಮಾಡುವುದು ಅಷ್ಟೇ ಮುಖ್ಯ. ಪ್ರಕೃತಿಯು ಋತುವಿಗೆ ಅನುಗುಣವಾಗಿ ಬದಲಾಗು ವಂತೆ ನಮ್ಮ ಆಹಾರ ಪದ್ಧತಿಯೂ ಬದಲಾಗಬೇಕು. ಆದರೆ ಈ ಆಹಾರ ಪದಾರ್ಥಗಳನ್ನು ಎಲ್ಲರೂ ಒಂದೇ ಪ್ರಮಾಣದಲ್ಲಿ, ಒಂದೇ ರೀತಿಯಲ್ಲಿ ಸೇವಿಸ ಬೇಕು ಎಂದರ್ಥ ವಲ್ಲ. ವ್ಯಕ್ತಿಯ ವಯಸ್ಸು, ಪ್ರಕೃತಿ, ಜೀರ್ಣಶಕ್ತಿ, ದೈಹಿಕ ಚಟುವಟಿಕೆ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಆಹಾರವನ್ನು ಆಯ್ಕೆ ಮಾಡಿ ಕೊಳ್ಳಬೇಕು.

ಹೇಮಂತ ಋತುವಿನಲ್ಲಿ ಉತ್ತಮ ಆಹಾರದ ಜೊತೆಗೆ ನಿಯಮಿತ ವ್ಯಾಯಾಮ, ಅಭ್ಯಂಗ, ಸಮರ್ಪಕ ನಿದ್ರೆ ಮತ್ತು ಶಿಸ್ತಿನ ದಿನಚರಿಯೂ ಅಗತ್ಯ. ಆಯುರ್ವೇದದ ಋತುಚರ್ಯೆಯ ಉದ್ದೇಶ ಕೇವಲ ರೋಗ ಬಂದಾಗ ಚಿಕಿತ್ಸೆ ನೀಡುವುದಲ್ಲ; ಋತುವಿಗೆ ಅನುಗುಣವಾಗಿ ದೇಹವನ್ನು ಸಿದ್ಧಪಡಿಸಿ, ಆರೋಗ್ಯವನ್ನು ಕಾಪಾಡುವುದು. ನಮ್ಮ ಹಿರಿಯರು ಋತುಗಳಿಗೆ ಅನುಗುಣವಾಗಿ ಆಹಾರ ಪದ್ಧತಿಯನ್ನು ರೂಪಿಸಿಕೊಂಡಿ ದ್ದರ ಹಿಂದಿನ ವೈಜ್ಞಾನಿಕ ಚಿಂತನೆಯನ್ನು ಇಂದಿನ ಜೀವನದಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಚಳಿಗಾಲದಲ್ಲಿ ಆಹಾರವನ್ನು ಕೇವಲ ಹೊಟ್ಟೆ ತುಂಬಿಸುವ ಸಾಧನವಾಗಿ ನೋಡದೆ, ದೇಹಕ್ಕೆ ಬಲ, ಪೋಷಣೆ ಮತ್ತು ಆರೋಗ್ಯಕರ ದೀರ್ಘಾ ಯುಷ್ಯವನ್ನು ಒದಗಿಸುವ ಸಾಧನವಾಗಿ ಪರಿಗಣಿ ಸೋಣ. ಋತುವಿಗೆ ತಕ್ಕ ಆಹಾರವೇ ಆರೋಗ್ಯವಂತ ಬದುಕಿನ ಸುಂದರ ಆರಂಭ!