ಗುರು: ಭಾರತೀಯ ಸಂಸ್ಕೃತಿಯ ಜೀವನಾಡಿ
ಗುರು-ಶಿಷ್ಯ ಪರಂಪರೆಯ ವೈಭವ ವೇದೋಪನಿಷತ್ತುಗಳಂತಹ ಅಮೂಲ್ಯ ಜ್ಞಾನಸಂಪತ್ತು ಸಾವಿರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯ ಮೂಲಕವೇ ಸಂರಕ್ಷಿತವಾಗಿ ಇಂದಿಗೂ ಉಳಿದು ಬಂದಿದೆ. ವಿದ್ಯೆಯನ್ನು ಅರಸುವ ಶಿಷ್ಯನು ಗುರುಕುಲಕ್ಕೆ ತೆರಳಿ ಸೇವೆ, ಶ್ರದ್ಧೆ ಹಾಗೂ ಸಾಧನೆಯ ಮೂಲಕ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹಂಚುತ್ತಿದ್ದ. ಮುಂದೆ ಗುರಿಯಿರ ಬೇಕು, ಹಿಂದೆ ಗುರು ವಿರಬೇಕು ಎಂಬ ನುಡಿ ಜೀವನದ ಮಹತ್ವದ ಸತ್ಯವನ್ನು ತಿಳಿಸುತ್ತದೆ.
-
ಗವಿಸಿದ್ದೇಶ್ ಕೆ. ಕಲ್ಗುಡಿ
ವೇದೋಪನಿಷತ್ತುಗಳಂತಹ ಅಮೂಲ್ಯ ಜ್ಞಾನಸಂಪತ್ತು ಸಾವಿರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯ ಮೂಲಕವೇ ಸಂರಕ್ಷಿತವಾಗಿ ಇಂದಿಗೂ ಉಳಿದು ಬಂದಿದೆ. ಮುಂದೆ ಗುರಿಯಿರಬೇಕು, ಹಿಂದೆ ಗುರುವಿರಬೇಕು. ಗುರುವಿನ ಮಾರ್ಗದರ್ಶನವಿಲ್ಲದೆ ಗುರಿಯನ್ನು ತಲುಪುವುದು ಕಷ್ಟ.
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೆ ಶ್ರೀಗುರವೇ ನಮಃ ಭಾರತೀಯ ಸಂಸ್ಕೃತಿಯಲ್ಲಿ ಗುರು ಕೇವಲ ಶಿಕ್ಷಕನಲ್ಲ; ಅವನು ಜ್ಞಾನದಾತ, ಮಾರ್ಗ ದರ್ಶಕ, ಪ್ರೇರಕ ಹಾಗೂ ಆತ್ಮೋನ್ನತಿಯ ಪಥವನ್ನು ತೋರಿಸುವ ದಿವ್ಯಶಕ್ತಿ. ಗುರುವು ಶಿಷ್ಯನ ಜೀವನದಿಂದ ಅಜ್ಞಾನದ ಕತ್ತಲೆಯನ್ನು ದೂರಮಾಡಿ eನದ ಬೆಳಕನ್ನು ಹರಡುವ ಜ್ಞಾನ ಸೂರ್ಯ. ಆದ್ದರಿಂದಲೇ ನಮ್ಮ ಸಂಸ್ಕೃತಿ ಯಲ್ಲಿ ಗುರುವನ್ನು ಸಾಕ್ಷಾತ್ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಸ್ವರೂಪವೆಂದು ಪೂಜಿಸಲಾ ಗುತ್ತದೆ. ಉಪನಿಷತ್ತುಗಳು ಗುರುಮಹಿಮೆಯನ್ನು ಅತ್ಯುನ್ನತ ಸ್ಥಾನದಲ್ಲಿ ಪ್ರತಿಪಾದಿಸುತ್ತವೆ.
‘ತದ್ವಿಜ್ಞಾ ನಾರ್ಥಂ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಮ್’ -ಮುಂಡಕೋ ಪನಿಷತ್ (1.2.12) ಅಂದರೆ, ಪರಮಸತ್ಯದ ಜ್ಞಾನವನ್ನು ಪಡೆಯಲು ಶ್ರೋತ್ರಿ ಯನೂ ಬ್ರಹ್ಮನಿಷ್ಠನೂ ಆದ ಗುರುವನ್ನು ವಿನಯದಿಂದ ಆಶ್ರಯಿಸಬೇಕು. ಈ ಶ್ರುತಿವಾಕ್ಯವು ಭಾರತೀಯ ಗುರು-ಶಿಷ್ಯ ಪರಂಪರೆಯ ಶ್ರೇಷ್ಠ ಆದರ್ಶವನ್ನು ಸಾರುತ್ತದೆ.
ಇದನ್ನೂ ಓದಿ: Dr Maithri Bhat Column: ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ
ಭಗವಾನ್ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಹೀಗೆ ಹೇಳುತ್ತಾನೆ: ‘ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವ ದರ್ಶಿನಃ’- ಭಗವದ್ಗೀತೆ (4.434) ವಿನಯ, ಸೇವಾ ಭಾವ ಮತ್ತು ಜಿಜ್ಞಾಸೆಯಿಂದ ಗುರುವನ್ನು ಆಶ್ರಯಿಸಿ ದಾಗ ತತ್ತ್ವದರ್ಶಿಗಳಾದ ಜ್ಞಾನಿಗಳು ನಿಜವಾದ ಜ್ಞಾನ ವನ್ನು ಬೋಧಿಸುತ್ತಾರೆ ಎಂಬುದು ಈ ಶ್ಲೋಕದ ಸಂದೇಶ.
ನಿಜವಾದ ಗುರು ಯಾರು? ಕೋ ಗುರುಃ? ಎಂಬ ಪ್ರಶ್ನೆಗೆ ಆದಿ ಶಂಕರಾಚಾರ್ಯರು ಸುಂದರವಾದ ಉತ್ತರವನ್ನು ನೀಡುತ್ತಾರೆ: ‘ಅಧಿಗತ ತತ್ತ್ವಃ ಶಿಷ್ಯಹಿತಾಯ ಉದ್ಯತಃ ಸತತಂ.’ ಅಂದರೆ, ಸ್ವತಃ ತತ್ತ್ವವನ್ನು ಅರಿತು, ಸದಾ ಶಿಷ್ಯನ ಹಿತಕ್ಕಾಗಿ ಶ್ರಮಿಸು ವವನೇ ನಿಜವಾದ ಗುರು. ತೈತ್ತಿರೀಯೋ ಪನಿಷತ್ತಿನ ಆಚಾರ್ಯ ದೇವೋ ಭವ ಎಂಬ ಮಹಾವಾಕ್ಯವು ಗುರುವಿಗೆ ದೇವರ ಸಮಾನ ಸ್ಥಾನ ವನ್ನು ನೀಡುತ್ತದೆ.
ಕೇವಲ ಪಾಠ ಹೇಳುವವನು ಗುರು ಅಲ್ಲ; ಜ್ಞಾನ, ಸಂಸ್ಕಾರ, ಮೌಲ್ಯಗಳು ಹಾಗೂ ಬದುಕಿನ ದಾರಿಯನ್ನು ತೋರಿಸುವವನೇ ನಿಜವಾದ ಗುರು. ದಾಸಶ್ರೇಷ್ಠ ಪುರಂದರದಾಸರು ಗುರುಭಕ್ತಿಯ ಮಹತ್ವವನ್ನು ಹೀಗೆ ಸಾರುತ್ತಾರೆ: ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕುತಿ.
ಗುರು-ಶಿಷ್ಯ ಪರಂಪರೆಯ ವೈಭವ ವೇದೋಪನಿಷತ್ತುಗಳಂತಹ ಅಮೂಲ್ಯ ಜ್ಞಾನಸಂಪತ್ತು ಸಾವಿರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯ ಮೂಲಕವೇ ಸಂರಕ್ಷಿತವಾಗಿ ಇಂದಿಗೂ ಉಳಿದು ಬಂದಿದೆ. ವಿದ್ಯೆಯನ್ನು ಅರಸುವ ಶಿಷ್ಯನು ಗುರುಕುಲಕ್ಕೆ ತೆರಳಿ ಸೇವೆ, ಶ್ರದ್ಧೆ ಹಾಗೂ ಸಾಧನೆಯ ಮೂಲಕ ವಿದ್ಯೆ ಯನ್ನು ಸಂಪಾದಿಸಿ ಸಮಾಜಕ್ಕೆ ಹಂಚುತ್ತಿದ್ದ. ಮುಂದೆ ಗುರಿಯಿರ ಬೇಕು, ಹಿಂದೆ ಗುರುವಿರಬೇಕು ಎಂಬ ನುಡಿ ಜೀವನದ ಮಹತ್ವದ ಸತ್ಯವನ್ನು ತಿಳಿಸುತ್ತದೆ.
ಗುರುವಿನ ಮಾರ್ಗದರ್ಶನವಿಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಛತ್ರಪತಿ ಶಿವಾಜಿ ಮಹಾ ರಾಜರ ವ್ಯಕ್ತಿತ್ವ ನಿರ್ಮಾಣದಲ್ಲಿ ಸಮರ್ಥ ರಾಮದಾಸರು ಮತ್ತು ದಾದಾಜಿ ಕೊಂಡದೇವರ ಮಾರ್ಗದರ್ಶನ ಮಹತ್ತರ ಪಾತ್ರ ವಹಿಸಿತು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ವಿದ್ಯಾರಣ್ಯರ ಮಾರ್ಗದರ್ಶನ ಹಕ್ಕ- ಬುಕ್ಕರಿಗೆ ಶಕ್ತಿ ನೀಡಿತು. ಶ್ರೀರಾಮ, ಶ್ರೀಕೃಷ್ಣ, ಸುದಾಮ ಮುಂತಾದ ಮಹನೀಯರೂ ಗುರುವಿನ ಆಶ್ರಯದಲ್ಲಿಯೇ ವಿದ್ಯೆ ಹಾಗೂ ಸಂಸ್ಕಾರವನ್ನು ಪಡೆದರು.
ಶ್ರೇಷ ಗುರು ವೇದವ್ಯಾಸರು ಆಷಾಢ ಶುಕ್ಲ ಪೂರ್ಣಿಮೆಯಂದು ಮಹರ್ಷಿ ಪರಾಶರ ಮತ್ತು ಸತ್ಯವತಿಯ ಪುತ್ರರಾಗಿ ವೇದವ್ಯಾಸರು ಅವತರಿ ಸಿದರು. ಹಾಗಾಗಿ ಈ ದಿನವನ್ನು ವ್ಯಾಸಪೂರ್ಣಿಮೆ ಅಥವಾ ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಅಪಾರ ಜ್ಞಾನರಾಶಿಯಾದ ವೇದಗಳನ್ನು ಋಗ್, ಯಜುರ್, ಸಾಮ ಹಾಗೂ ಅಥರ್ವ ಎಂಬ ನಾಲ್ಕು ಭಾಗಗಳಾಗಿ ವಿಂಗಡಿಸಿ, ತಮ್ಮ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತರಿಗೆ ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರು.
ಮಹಾಭಾರತ, ಬ್ರಹ್ಮಸೂತ್ರಗಳು ಹಾಗೂ ಅಷ್ಟಾದಶ ಪುರಾಣಗಳ ಮೂಲಕ ಭಾರತೀಯ ಜ್ಞಾನ ಸಂಪತ್ತನ್ನು ಶಾಶ್ವತಗೊಳಿಸಿದ ಮಹಾನ್ ಋಷಿಗಳಲ್ಲಿ ವೇದವ್ಯಾಸರು ಅಗ್ರಗಣ್ಯರು. ಈ ದಿನವನ್ನು ಬೌದ್ಧರು ಗೌತಮ ಬುದ್ಧರನ್ನು ಸ್ಮರಿಸುವ ದಿನವಾಗಿಯೂ ಆಚರಿಸುತ್ತಾರೆ. ಯೋಗ ಸಂಪ್ರದಾಯ ದಲ್ಲಿ ಶಿವನು ಸಪ್ತರ್ಷಿಗಳಿಗೆ ಯೋಗವಿದ್ಯೆ ಯನ್ನು ಉಪದೇಶಿಸಿದ ದಿನವೆಂದು ನಂಬಲಾಗುತ್ತದೆ. ಆದ್ದರಿಂದ ಶಿವನನ್ನು ಆದಿಗುರು ಎಂದು ಆರಾಧಿಸಲಾಗುತ್ತದೆ.
‘ಗುರು’ ಪದದ ಅರ್ಥ ‘ಗುಕಾರೋ ಅಂಧಕಾರಸ್ತು ರುಕಾರಸ್ತನ್ನಿವಾರಕಃ | ಅಂಧಕಾರ ನಿರೋಧತ್ವಾತ್ ಗುರುರಿತ್ಯಭಿಧಿಯತೇ’. ‘ಗು’ ಎಂದರೆ ಅಜ್ಞಾನರೂಪದ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು. ಆದ್ದರಿಂದ ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡು ವವನೇ ಗುರು. ಆದಿ ಶಂಕರಾಚಾರ್ಯರ ಕೃಪೆಯಿಂದ ಗಿರಿ ಎಂಬ ಶಿಷ್ಯನು ತೋಟಕಾಚಾರ್ಯನಾಗಿ ಪ್ರಸಿದ್ಧ ನಾದ ಕಥೆ ಗುರುಕಾರುಣ್ಯದ ಅಪೂರ್ವ ಮಹಿಮೆ ಯನ್ನು ಸಾರುತ್ತದೆ.
ಗುರು ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ತಾಯಿ, ತಂದೆ, ಪ್ರಕೃತಿ, ಸಮಾಜ ಮತ್ತು ಅನುಭವಗಳೂ ನಮ್ಮ ಗುರುಗಳೇ.ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಎಂಬ ನಾಣ್ಣುಡಿ ಇದನ್ನೇ ಪ್ರತಿಪಾದಿಸುತ್ತದೆ. ತಾಯಿ ಮಗುವಿಗೆ ಜನ್ಮ ನೀಡುವುದಷ್ಟೇ ಅಲ್ಲ; ಸಂಸ್ಕಾರ, ಪ್ರೀತಿ, ಮೌಲ್ಯಗಳು ಹಾಗೂ ಜೀವನದ ಮೊದಲ ಪಾಠಗಳನ್ನು ಕಲಿಸುತ್ತಾಳೆ.
‘ಆಚಾರ್ಯಾತ್ ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧಯಾ | ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲ ಕ್ರಮೇಣ ಚ’ ಈ ಶ್ಲೋಕದ ಪ್ರಕಾರ ವಿದ್ಯಾರ್ಥಿ ಯು ವಿದ್ಯೆಯ ಒಂದು ಭಾಗವನ್ನು ಗುರು ಗಳಿಂದ, ಒಂದು ಭಾಗವನ್ನು ತನ್ನ ಸ್ವಂತ ಬುದ್ಧಿಯಿಂದ, ಮತ್ತೊಂದು ಭಾಗವನ್ನು ಸಹಪಾಠಿ ಗಳಿಂದ ಹಾಗೂ ಉಳಿದ ಭಾಗವನ್ನು ಅನುಭವದಿಂದ ಪಡೆಯುತ್ತಾನೆ. ಇಂದು ಗುರುಗಳ ಅಗತ್ಯ ಇಂದು ಮಾಹಿತಿ ಅಪಾರವಾಗಿದೆ.
ಅಂತರ್ಜಾಲ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಕ್ಷಣಾರ್ಧದಲ್ಲಿ ಸಾವಿರಾರು ಮಾಹಿತಿಗಳು ದೊರೆಯುತ್ತವೆ. ಆದರೆ ಮಾಹಿತಿ ಮಾತ್ರ ಜೀವನವನ್ನು ರೂಪಿಸುವುದಿಲ್ಲ. ಯಾವುದು ಸತ್ಯ? ಯಾವುದು ಅಸತ್ಯ? ಯಾವುದು ಧರ್ಮ? ಯಾವುದು ಅಧರ್ಮ? ಯಾವುದು ಒಳಿತು? ಯಾವುದು ಕೆಡುಕು? ಎಂಬ ವಿವೇಕವನ್ನು ಬೆಳೆಸುವ ವರು ಗುರುಗಳು. ಮಾಹಿತಿಯನ್ನು ಜ್ಞಾನವನ್ನಾಗಿ, ಜ್ಞಾನವನ್ನು ಪ್ರಜ್ಞೆಯನ್ನಾಗಿ ಹಾಗೂ ಪ್ರಜ್ಞೆಯನ್ನು ಸದಾಚಾರವನ್ನಾಗಿ ರೂಪಿಸುವ ಶಕ್ತಿ ಗುರುಗಳಲ್ಲಿದೆ.
ಆದ್ದರಿಂದ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗುರುಗಳ ಸ್ಥಾನವನ್ನು ಯಾವುದೂ ತುಂಬ ಲಾರದು. ಯಂತ್ರಗಳು ಮಾಹಿತಿಯನ್ನು ನೀಡಬಹುದು; ಆದರೆ ವ್ಯಕ್ತಿತ್ವ, ಸಂಸ್ಕಾರ, ಮಾನವೀಯತೆ ಮತ್ತು ಜೀವನ ಮೌಲ್ಯಗಳನ್ನು ರೂಪಿಸುವುದು ಗುರು ಮಾತ್ರ. ಗುರುಪೂರ್ಣಿಮೆ ಕೇವಲ ಒಂದು ಹಬ್ಬವಲ್ಲ; ಅದು ನಮ್ಮ ಬದುಕಿಗೆ ಬೆಳಕು ನೀಡಿದ ಎಲ್ಲ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪವಿತ್ರ ದಿನ.
ಮಹರ್ಷಿ ವೇದವ್ಯಾಸರಿಂದ ಹಿಡಿದು ನಮ್ಮ ತಾಯಿ-ತಂದೆ, ಶಾಲೆಯ ಶಿಕ್ಷಕರು, ಆಚಾರ್ಯರು, ಆಧ್ಯಾತ್ಮಿಕ ಗುರು ಗಳು ಹಾಗೂ ಬದುಕಿಗೆ ದಾರಿದೀಪವಾದ ಪ್ರತಿ ಯೊಬ್ಬರನ್ನೂ ಈ ದಿನ ಭಕ್ತಿಯಿಂದ ಸ್ಮರಿಸೋಣ. ಗುರು ಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗಲೇ ಗುರುಪೂರ್ಣಿಮೆಯ ಆಚರಣೆ ಸಾರ್ಥಕವಾಗುತ್ತದೆ.
‘ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ’ ಈ ಮಹಾಮಂತ್ರದ ಭಾವನೆ ಯೊಂದಿಗೆ ಜಗದ್ಗುರು, ವ್ಯಾಸ ಭಗವಾನ್, ಗುರು ಪರಂಪರೆ ಹಾಗೂ ನಮ್ಮ ಜೀವನದ ಎಲ್ಲ ಗುರುಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸೋಣ.