Dr Maithri Bhat Column: ಕರುಳುಬಳ್ಳಿಯ ನಂಟು
ಸಮಾಜ ಮತ್ತು ಭಾಷೆಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಏಕೆಂದರೆ ಭಾಷೆಯು ಇತಿಹಾಸದಲ್ಲಿ ದಾಖಲಾಗಿದ್ದರೂ, ಅದರ ನಿರ್ವಹಣೆ ಸಾಧ್ಯವಾಗುವುದು ಭಾಷೆಯನ್ನು ಬಳಸುವ ಮತ್ತು ಅರ್ಥ ಮಾಡಿಕೊಳ್ಳುವ ಜನರಿಂದ ಮಾತ್ರ. ಕಲಿಯುವಿಕೆ ಮತ್ತು ಕಲಿಸುವಿಕೆ ಯ ಮೂಲಕ ಭಾಷೆಯು ಸಂಸ್ಕೃತಿಯಾಗಿ ಪಸರಿಸುತ್ತದೆ.
-
ಮೈತ್ರಿ ಭಟ್, ವಿಟ್ಲ
ತಾಯ್ತನಕ್ಕೂ ತಾಯ್ನುಡಿಗೂ ನೇರವಾದ ನಂಟಿದೆ. ಮಗುವು ಭಾಷೆಯನ್ನು ಕಲಿಯುವುದೇ ತನ್ನ ತಾಯಿಯ ಒಡನಾಟದ ಮೂಲಕ. ಆದರೆ ಭಾಷಾ ಬಹುತ್ವದ ಆಧುನಿಕ ಕಾಲದಲ್ಲಿ ತಾಯ್ನುಡಿಯೊಂದಿಗಿನ ನಮ್ಮ ನಂಟನ್ನು, ಅದರ ಸ್ವರೂಪವನ್ನು ಸ್ಪಷ್ಟ ಪಡಿಸಿಕೊಳ್ಳ ಬೇಕಾದ ಅನಿವಾರ್ಯತೆಯೂ ನಮ್ಮ ಕಣ್ಣ ಮುಂದಿದೆ.
ಭಾಷೆಗಾಗಿ ಬಾಂಗ್ಲಾದೇಶದ ಹಲವು ವಿದ್ಯಾರ್ಥಿಗಳು ಹೋರಾಟ ನಡೆಸಿ ಪೊಲೀಸರ ಗುಂಡಿಗೆ ಜೀವ ತೆತ್ತ ದಿನ ಫೆಬ್ರುವರಿ 21. 1999ರಲ್ಲಿ ಯುನೆಸ್ಕೋ ಈ ದಿನವನ್ನು ‘ವಿಶ್ವ ತಾಯ್ನುಡಿ ದಿನ’ವೆಂದು ಘೋಷಿಸಿತು. ‘ಜಗತ್ತಿನ ಜನರೆಲ್ಲರೂ ಬಳಸುವ ಎಲ್ಲ ಭಾಷೆ ಗಳನ್ನು ಉಳಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಎನ್ನು ವುದೇ ಈ ದಿನಾಚರಣೆಯ ಉದ್ದೇಶವಾಗಿದೆ.
ತಾಯ್ನುಡಿಯ ಬಗೆ ಒಲವು ಯಾವುದೇ ಭಾಷೆಯು ಜೀವಂತವಾಗಿರಲು ಮಾತು ಮತ್ತು ಬರಹ ಅವಶ್ಯಕ. ಮಣ್ಣು ಮತ್ತು ಭಾಷೆಗೆ ಭಾವುಕತೆ ಬಹು ಬೇಗನೆ ಅಂಟಿಕೊಂಡು ಬಿಡುತ್ತದೆ. ಸಾಮಾನ್ಯವಾಗಿ ನಾವು ನಮ್ಮ ತಾಯ್ನುಡಿಯ ಬಗ್ಗೆ ಅಪಾರವಾದ ಒಲವನ್ನು ಹೊಂದಿರುತ್ತೇವೆ.
ಇದನ್ನೂ ಓದಿ: Janamejaya Umarji Column: ಮರಳುಗಾಡಿನ ಮತಗಳೊಂದಿಗೆ ಸಮೀಕರಿಸುವುದೆಷ್ಟು ಸರಿ ?
ನಮ್ಮ ಪಾರಂಪರಿಕ ಸಂಪತ್ತನ್ನು ಉಳಿಸಿಕೊಳ್ಳಲು ಭಾಷೆಯಷ್ಟು ಪರಿಣಾಮಕಾರಿಯಾದ ಉಪಕರಣ ಮತ್ತೊಂದಿಲ್ಲ. ಹೀಗಿರುವಾಗ ಶಿಕ್ಷಣದಲ್ಲಿ ತಾಯ್ನುಡಿಗೆ ಪ್ರಾಮುಖ್ಯವಿರ ಬೇಕಾದುದು ಅತ್ಯಗತ್ಯ. ಜತೆಗೆ ಮಾತೃಭಾಷಾ ಶಿಕ್ಷಣವು ವಿಷಯವನ್ನು ಮನಸ್ಸಿಗೆ ನಾಟಿಸಲು, ಸೃಜನಶೀಲತೆಯನ್ನು ಅರಳಿಸಲು ಸಹಕಾರಿ.
ಹಿಂದೆ ಬಳಕೆಯಲ್ಲಿದ್ದ ಅದೆಷ್ಟೋ ಭಾಷೆಗಳು ಇಂದು ಜಗತ್ತಿನಿಂದಲೇ ಕಣ್ಮರೆಯಾಗಿ ಹೋಗಿವೆ. ತಜ್ಞರ ಪ್ರಕಾರ, ಪ್ರತಿವಾರವೂ ಸುಮಾರು ಎರಡು ಭಾಷೆಗಳು ಕಣ್ಮರೆಯಾಗುತ್ತಿವೆ. ಪ್ರತಿದಿನವೂ ವಿಶ್ವದ ಎಷ್ಟೋ ಭಾಷೆಗಳು ಅಳಿವಿನಂಚಿಗೆ ಸಾಗುತ್ತಿವೆ.
ಇದು ಜಗತ್ತು ಕಿರಿದಾದುರ ಪರಿಣಾಮವೂ ಹೌದು. ಹೀಗೆ ನುಡಿಯ ಮರಣ ಒಂದು ಸಮುದಾಯದ ಅದುವರೆಗಿನ ಬದುಕು, ಸಾಧನೆಗಳ ಕುರುಹನ್ನೇ ನಿರ್ನಾಮವಾಗಿಸುತ್ತದೆ. ಅನ ಭಾಷಾ ಸಂಸರ್ಗ ಯಾವುದೇ ಭಾಷೆಯಾಗಲೀ ಅಥವಾ ಸಾಹಿತ್ಯವಾಗಲೀ ಬೆಳೆಯಲು ಅನ್ಯಭಾಷಾ ಸಂಸರ್ಗ ಅಗತ್ಯ.
ಜನರ ನುಡಿಗಳಲ್ಲಿ ಅನ್ಯಭಾಷಾ ಪದಗಳು ಅಪ್ರಜ್ಞಾಪೂರ್ವಕವಾಗಿ ನುಸುಳುತ್ತವೆ. ಕೊನೆಗೊಮ್ಮೆ ಅವು ಅನ್ಯಭಾಷಾ ಪದಗಳು ಎಂಬ ಸಂದೇಹಕ್ಕೂ ಎಡೆ ಇಲ್ಲದಂತೆ ನಮ್ಮ ಬದುಕಿನ ಭಾಗವಾಗಿಬಿಡುತ್ತವೆ. ಹೀಗೆ ನಮ್ಮ ಮಾತೃಭಾಷೆಯ ಒಳಗೆ ನಮಗೇ ತಿಳಿಯ ದಂತೆ ನಿತ್ಯವೂ ಪರಿವರ್ತನೆಗಳಾಗಿವೆ ಹಾಗೂ ಆಗುತ್ತಲೇ ಇರುತ್ತವೆ.
ಅನ್ಯಭಾಷೆಯನ್ನು ಆಶ್ರಯಿಸುವುದರ ಮೂಲಕ ಭಾಷೆಯೊಂದು ತನ್ನ ಒಡಲನ್ನು ತುಂಬಿ ಕೊಳ್ಳುತ್ತದೆ. ಹೊಸತನ್ನು ಸೇರಿಸಿಕೊಂಡು ಬೆಳೆಯುವುದು ಯಾವುದೇ ಜೀವಂತ ಭಾಷೆಯ ಲಕ್ಷಣವೂ ಹೌದು. ಈ ಭಾಷೆ ಎನ್ನುವುದು ಕೇವಲ ಆಂತರಿಕ ಆಲೋಚನೆಗಳ ಬಾಹ್ಯ ಅಭಿವ್ಯಕ್ತಿ ಮತ್ತು ಸಂವಹನದ ಮಾಧ್ಯಮ ಮಾತ್ರ ಅಲ್ಲ; ಸ್ಥಳೀಯ ಭಾಷೆಯು ಸ್ಥಳೀಯ ಗುಂಪುಗಳಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಒಳಗೊಂಡ ಸಾಂಸ್ಕೃತಿಕ ಚಹರೆಯೂ ಹೌದು.
ಭಾಷೆಯು ಸಂಸ್ಕೃತಿಯ ಭಾಗವೂ ಹೌದು, ಸಂಸ್ಕೃತಿಯ ವಾಹಕವೂ ಹೌದು. ಕೇವಲ ಆಹಾರ, ವಸ, ಜೀವನಕ್ರಮ, ಸಂಪ್ರದಾಯಗಳು ಮಾತ್ರ ಸಂಸ್ಕೃತಿಯ ಭಾಗವಲ್ಲ; ಇವೆಲ್ಲ ವನ್ನೂ ದಾಖಲುಗೊಳಿಸುವ ಭಾಷೆಯು ಸಂಸ್ಕೃತಿಯ ಅವಿಭಾಜ್ಯ ಅಂಗ. ಹೀಗೆ ಭಾಷೆಯು ಸಂಸ್ಕೃತಿಯ ಭಾಗ ಎಂಬುದು ಎಷ್ಟು ಸತ್ಯವೋ ಸಂಸ್ಕೃತಿಯು ಭಾಷೆಯ ಮೂಲಕ ಹರಡುತ್ತದೆ ಎಂಬುದೂ ಅಷ್ಟೇ ನಿಜ.
ಎಡ್ವರ್ಡ್ ಬರ್ನೆಟ್ ಟೇಲರ್ ಅವರು ಸಂಸ್ಕೃತಿಯನ್ನು ವ್ಯಾಖ್ಯಾನಿಸುತ್ತಾ ‘ಸಂಸ್ಕೃತಿಯು ಮಾನವ ಜೀವನ ಮತ್ತು ಅಭಿಪ್ರಾಯ, ನಡವಳಿಕೆಯ ವಿಶಾಲ ವ್ಯಾಪ್ತಿಯನ್ನು ಹೊಂದಿ ದ್ದು, ಭಾಷೆ ಅದರ ಪ್ರಮುಖ ಹಾಗೂ ಸ್ಪಷ್ಟ ಭಾಗವಾಗಿದೆ’ ಎಂದಿದ್ದಾರೆ.
ಅವಿನಾಭಾವ ಸಂಬಂಧ
ಸಮಾಜ ಮತ್ತು ಭಾಷೆಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಏಕೆಂದರೆ ಭಾಷೆಯು ಇತಿಹಾಸದಲ್ಲಿ ದಾಖಲಾಗಿದ್ದರೂ, ಅದರ ನಿರ್ವಹಣೆ ಸಾಧ್ಯವಾಗುವುದು ಭಾಷೆಯನ್ನು ಬಳಸುವ ಮತ್ತು ಅರ್ಥ ಮಾಡಿಕೊಳ್ಳುವ ಜನರಿಂದ ಮಾತ್ರ. ಕಲಿಯು ವಿಕೆ ಮತ್ತು ಕಲಿಸುವಿಕೆಯ ಮೂಲಕ ಭಾಷೆಯು ಸಂಸ್ಕೃತಿಯಾಗಿ ಪಸರಿಸುತ್ತದೆ.
ಮನೆಯಲ್ಲಿ ಪೋಷಕರ ಮೂಲಕ ತಮ್ಮ ಭಾವನೆ, ಬಯಕೆಗಳು ಮೊದಲಾದ ಮೂಲ ಅವಶ್ಯಕತೆಯ ಹಂಚಿಕೆಯ ಕಾರಣಕ್ಕಾಗಿ ಮಕ್ಕಳು ಭಾಷೆಯನ್ನು ಕಲಿತರೆ, ಶಾಲೆ ಯಲ್ಲಿ ಅದು ಔಪಚಾರಿಕ ಶಿಕ್ಷಣದ ರೂಪದಲ್ಲಿ ತೆರೆದುಕೊಳ್ಳುತ್ತದೆ.
ಭಾಷಾ ಬಳಕೆಯು ಸಮುದಾಯದ ಮಾಹಿತಿ ಪ್ರಸರಣಕ್ಕೆ ಸಹಕಾರಿ. ಬರವಣಿಗೆಯು ಇದಕ್ಕೆ ಪೂರಕ. ಸಾಂಸ್ಕೃತಿಕ ಬದಲಾವಣೆ ಹಾಗೂ ಭಾಷೆಯ ನಡುವೆ ಸಂಬಂಧವಿದೆ. ವಿವಿಧತೆ ಯಲ್ಲಿ ಏಕತೆಯನ್ನು ಹೊಂದಿರುವ ಪ್ರಾಂತೀಯ ಭಾಷೆಗಳನ್ನು ಹೊಂದಿರುವ ನಮ್ಮಲ್ಲಿ ಪ್ರಾಂತೀಯ ಭಾಷೆಗಳು ಕಡೆಗಣನೆಯಾಗುತ್ತಿವೆ.
ಹಳ್ಳಿಗಳಲ್ಲೂ ಇತರ ಭಾಷೆಗಳ ಪ್ರಭಾವ ಹೆಚ್ಚಾಗಿದೆ. ಹಾಗೆಂದು ಭಾಷೆಯ ಉಳಿವಿಗಾಗಿ ಭಾಷಾ ಅಭಿರುಚಿಯನ್ನು ಬೆಳೆಸುವತ್ತ ಗಮನಹರಿಸಬೇಕೇ ಹೊರತು ಕಾನೂನು, ನಿಯಮ, ಬಲವಂತದ ಹೇರಿಕೆಯ ಮೂಲಕ ಅಲ್ಲ.
ಭಾಷಾಭಿಮಾನ ಬೇಕು
ಪ್ರಾಚೀನ ಆಲಂಕಾರಿಕ ದಂಡಿಯು ‘ಭಾಷೆಯೆಂಬ ಬೆಳಕು ಬೆಳಗದಿರುತ್ತಿದ್ದರೆ ಲೋಕವೆಲ್ಲ ಕತ್ತಲೆಯಲ್ಲಿ ಮುಳುಗಿರುತ್ತಿತ್ತು’ ಎಂದು ಭಾಷೆಯ ಪ್ರಾಮುಖ್ಯವನ್ನು ಸಾರಿದ್ದಾನೆ. ಭಾಷೆ ಯಾವುದೇ ಇರಲಿ, ಅದು ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಗಳನ್ನು ಒಳಗೊಂಡ ಜೀವಂತಿಕೆ. ಭಾಷೆಯ ಪ್ರಭಾವಶಾಲಿ ಚಲನೆ ಸಾಧ್ಯ ವಾಗುವುದು ಮಾಧ್ಯಮಗಳು ಹಾಗೂ ಶಿಕ್ಷಣದಲ್ಲಿ. ಆದುದರಿಂದ ಮಕ್ಕಳಲ್ಲಿ ಭಾಷಾ ಅಭಿಮಾನ ಮತ್ತು ಪ್ರೀತಿಯನ್ನು ಕಲಿಸೋಣ.
ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ, ಒಲವು, ಗೌರವವನ್ನು ಮೂಡಿಸೋಣ. ಹಾಗೆಂದು ಕಡ್ಡಾಯಗೊಳಿಸುವ ಮೂಲಕ ಭಾಷೆಯನ್ನು ಕಲಿಸುತ್ತೇವೆ ಅಥವಾ ಉಳಿಸು ತ್ತೇವೆ ಅಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ಅಲ್ಲಿ ಭಾಷೆಯ ಬಗೆಗೆ ಯಾವುದೇ ರೀತಿಯ ಅಭಿಮಾನವಾಗಲೀ ಪ್ರೀತಿಯಾಗಲೀ ಇರಲಾರದು.
ಭಾಷಾ ಕಲಿಕೆಯ ಮನೋಭಾವವನ್ನು ಬೆಳೆಸುವುದೇ ಭಾಷೆಯ ಉಳಿವಿಗೆ ಭದ್ರ ಬುನಾದಿ. ಬಲವಂತದ ಹೇರಿಕೆ ಎಂದಿದ್ದರೂ ಅಪಾಯಕಾರಿಯೇ. ಒಂದು ಪ್ರದೇಶದಲ್ಲಿ ವಿವಿಧ ಭಾಷೆ ಗಳನ್ನಾಡುವ ಜನರು ಜತೆಗಿದ್ದಾಗ ಸೌಹಾರ್ದಯುತ ಜೀವನವನ್ನು ನಡೆಸಲು ಸ್ಥಳೀಯ ಭಾಷೆಯನ್ನು ಕಲಿಯುವುದು ಅನುಕೂಲಕರ. ಆದರೆ ಕಲಿಯ ಬೇಕೇ, ಬೇಡವೇ ಅನ್ನುವುದು ವೈಯಕ್ತಿಕ ವಿಚಾರ.
ಒಟ್ಟಿನಲ್ಲಿ ‘ತಾಯ್ನುಡಿ’ ಅಥವಾ ‘ಮಾತೃಭಾಷೆ’ ಎನ್ನುವುದು, ಭಾಷೆ ಮತ್ತು ಭಾಷಿಕರ ನಡುವಿನ ಸಂಬಂಧವು ತಾಯಿ ಮತ್ತು ಮಗುವಿನ ಸಂಬಂಧದಷ್ಟೇ ಜೀವಂತವಾದುದು ಹಾಗೂ ಸೃಷ್ಟಿಶೀಲ ವಾದುದು ಎಂಬುದನ್ನು ಸೂಚಿಸುತ್ತದೆ. ಆದುದರಿಂದ ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಪರಸ್ಪರ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯುವ ಅರಿವಿನ ವಿಸ್ತಾರವೂ ಹೌದು. ಈ ಭಾಷೆ ಎನ್ನುವುದು ಸಮಾಜ ವಿಜ್ಞಾನಿಗಳು ಭಾವಿಸುವಂತೆ ನಮ್ಮ ಅಸ್ಮಿತೆ ಹೌದಾದರೆ, ನಾವೇ ಭಾಷೆಯನ್ನು ಆಯ್ದುಕೊಂಡರೂ ಅಥವಾ ಭಾಷೆಯೇ ನಮ್ಮನ್ನು ಆಯ್ದುಕೊಂಡರೂ ಒಂದಂತೂ ನಿಜ; ಬದುಕಿನ ಭಾಗವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ!