Maya Balachandra Column: ಆಧ್ಯಾತ್ಮಿಕತೆಯು ಪಲಾಯನ ಮಾರ್ಗವೇ ? ಪ್ರತಿರೋಧವೇ ?
ಇಂದಿನ ಜಗತ್ತು ವಿಚಿತ್ರ ವಿರೋಧಾಭಾಸದ ಮೇಲೆ ನಿಂತಿದೆ. ಹೊರಗೆ ಅತಿವೇಗ, ಒಳಗೆ ಅತಿ ಖಾಲಿತನ. ಮಾಹಿತಿ ಅತಿರೇಕ, ಆದರೆ ಅರ್ಥದ ಕೊರತೆ. ಸಂಪರ್ಕಗಳ ಹೆಚ್ಚಳ, ಆದರೆ ಸಂಬಂಧಗಳ ಕ್ಷೀಣತೆ. ಈ ಸಂದರ್ಭದಲ್ಲಿ ‘ಆಧ್ಯಾತ್ಮಿಕತೆ’ ಎಂಬ ಪದ ಎರಡು ವಿರುದ್ಧ ಅರ್ಥಗಳಲ್ಲಿ ಕೇಳಿಸುತ್ತದೆ, ಒಂದು- ಜೀವನದಿಂದ ಪಲಾಯನ, ಮತ್ತೊಂದು- ಜೀವನದ ಕಠಿಣ ಸತ್ಯವನ್ನು ಎದುರಿಸುವ ಶಕ್ತಿ.
-
ಮಾಯಾ ಬಾಲಚಂದ್ರ, ಶ್ರೀನಿವಾಸಪುರ
ಯೋಗ, ಧ್ಯಾನ, ಶಾಸ್ತ್ರಾಧ್ಯಯನ, ಅಧ್ಯಾಪನ ಎಲ್ಲವೂ ವೈಯಕ್ತಿಕ ಶಾಂತಿಯ ಮಾರ್ಗವೋ? ಸಾಮಾಜಿಕ ಜಾಗೃತಿಯ ಶಕ್ತಿಯೋ? ಅಥವಾ ಎರಡನ್ನೂ ಬಿಟ್ಟು ಕಾಲಹರಣದ ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಾರಿಯೋ? ಎನ್ನುವ ಪ್ರಶ್ನೆ ಯಾವತ್ತೂ ಸಮಾಜದ ಮುಂದಿದೆ. ಅಂದಂದಿನ ಸನ್ನಿವೇಶಗಳಿಗೆ ತಕ್ಕಂತೆ ಉತ್ತರ ಪಡೆಯುವ ಪ್ರಯತ್ನವೂ ನಡೆದೇ ಇದೆ.
ಇಂದಿನ ಜಗತ್ತು ವಿಚಿತ್ರ ವಿರೋಧಾಭಾಸದ ಮೇಲೆ ನಿಂತಿದೆ. ಹೊರಗೆ ಅತಿವೇಗ, ಒಳಗೆ ಅತಿ ಖಾಲಿತನ. ಮಾಹಿತಿ ಅತಿರೇಕ, ಆದರೆ ಅರ್ಥದ ಕೊರತೆ. ಸಂಪರ್ಕಗಳ ಹೆಚ್ಚಳ, ಆದರೆ ಸಂಬಂಧಗಳ ಕ್ಷೀಣತೆ. ಈ ಸಂದರ್ಭದಲ್ಲಿ ‘ಆಧ್ಯಾತ್ಮಿಕತೆ’ ಎಂಬ ಪದ ಎರಡು ವಿರುದ್ಧ ಅರ್ಥಗಳಲ್ಲಿ ಕೇಳಿಸುತ್ತದೆ, ಒಂದು- ಜೀವನದಿಂದ ಪಲಾಯನ, ಮತ್ತೊಂದು- ಜೀವನದ ಕಠಿಣ ಸತ್ಯವನ್ನು ಎದುರಿಸುವ ಶಕ್ತಿ. ಹೀಗಾದರೆ, ಆಧ್ಯಾತ್ಮಿಕತೆ ಪಲಾಯನವೋ? ಪ್ರತಿರೋಧವೋ? ಅದು ವೈಯಕ್ತಿಕ ಶಾಂತಿಗೋ? ಅಥವಾ ಸಾಮಾಜಿಕ ಜಾಗೃತಿಗೋ? ಈ ಪ್ರಶ್ನೆಗೆ ಉತ್ತರ ಹುಡುಕಲು ತತ್ವಶಾಸ್ತ್ರ, ಮನೋವಿಜ್ಞಾನ ಮತ್ತು ಆಧುನಿಕ ವಿಜ್ಞಾನ ಈ ಮೂರರ ನಡುವೆ ಸಂವಾದ ಅಗತ್ಯ.
ಒಳಗಿನ ಶಾಂತಿಯೇ, ಜಾಗೃತಿಯೇ?
ಯೋಗ ಮತ್ತು ಧ್ಯಾನವನ್ನು ಇಂದು ‘ಸ್ಟ್ರೆಸ್ ರಿಲೀಫ್’ ತಂತ್ರವಾಗಿ ಮಾತ್ರ ನೋಡಲಾಗುತ್ತಿದೆ. ಇವನ್ನು, ಕೆಲಸದ ಒತ್ತಡ/ಆತಂಕವನ್ನು ಕಡಿಮೆ ಮಾಡಲು, ನಿದ್ರೆ ಸುಧಾರಿಸಲು ಇರುವ ಸಿದ್ಧ ಸೂತ್ರ ಎನ್ನುವ ನಿಟ್ಟಿನಲ್ಲಿ ಬಿಂಬಿಸಲಾಗುತ್ತಿದೆ.
ಇದು ಯೋಗದ ಒಂದು ಭಾಗ ಮಾತ್ರ. ಯೋಗದ ಮೂಲ ಉದ್ದೇಶ, ಮನಸ್ಸಿನ ಯಾಂತ್ರಿಕತೆಯನ್ನು ಗುರುತಿಸುವುದು. ಮನೋವಿಜ್ಞಾನ ಹೇಳುವ ಪ್ರಕಾರ, ಮಾನವನ ಮನಸ್ಸು ಬಹುತೇಕ ಸ್ವಯಂ ಚಾಲಿತ ಪ್ರತಿಕ್ರಿಯೆಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ. ಕೋಪ, ಭಯ, ಅಸೂಯೆ, ಆಸೆ ಇವು ಯೋಚನೆಯಿಲ್ಲದೆಯೂ ಉಂಟಾಗುತ್ತವೆ. ಧ್ಯಾನವು ಈ ಸ್ವಯಂಚಾಲಿತತೆಯನ್ನು ತಡೆಯುತ್ತದೆ.
ಇದು, ಪ್ರತಿಕ್ರಿಯೆ ಮತ್ತು ಜಾಗೃತಿಯ ನಡುವೆ ಒಂದು ವಿರಾಮವನ್ನು ಸೃಷ್ಟಿಸುತ್ತದೆ. ಈ ವಿರಾಮ ವೇ ಪ್ರತಿರೋಧದ ಆರಂಭ. ಕೋಪ ಬಂದಾಕ್ಷಣ ಪ್ರತಿಕ್ರಿಯಿಸುವುದು ಅಜಾಗೃತಿಯ ಲಕ್ಷಣ. ಕೋಪವನ್ನು ಗಮನಿಸುವುದು ಜಾಗೃತಿಯ ಲಕ್ಷಣ. ಈ ಜಾಗೃತಿ ವೈಯಕ್ತಿಕ ಶಾಂತಿಗೆ ಮಾತ್ರವಲ್ಲ, ಸಾಮಾಜಿಕ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. ಅಜಾಗೃತ ವ್ಯಕ್ತಿಯಿಂದ ಸಂಘರ್ಷ ಹೆಚ್ಚುತ್ತದೆ. ಜಾಗೃತ ವ್ಯಕ್ತಿಯಿಂದ ಸಂಘರ್ಷ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Maya Balachandra Column: ಮರೆವು ಮತ್ತು ಸ್ಮೃತಿ: ಅಂತರಂಗದ ಮೌನ ಸಂವಾದ
ಹೀಗಾಗಿ, ಯೋಗ-ಧ್ಯಾನ ವ್ಯಕ್ತಿಯನ್ನು ಮಾತ್ರವಲ್ಲದೆ ಸಮಾಜದ ಗುಣಮಟ್ಟವನ್ನೂ ಬದಲಿಸುತ್ತವೆ. ಎಷ್ಟೋ ಬಾರಿ ಘಟನೆಗಳು/ವಿಚಾರಗಳು ಸಮಸ್ಯೆ ಎನಿಸುವುದು ನಮ್ಮ ಚಿಂತನಶೈಲಿಯ ಮೂಲಕವೇ. ಯಾವುದೇ ಸಂದರ್ಭ ಸನ್ನಿವೇಶಗಳನ್ನು ಅದಿದ್ದಂತೆಯೇ ಅರ್ಥೈಸಿ ಪರಿಹಾರ ಕಂಡುಕೊಳ್ಳುವ ಪ್ರಜ್ಞೆಯನ್ನು ಇಂದಿನ ಸಮಾಜ ಕಳೆದುಕೊಳ್ಳುತ್ತಿದೆ.
ಸಣ್ಣ ವಿಷಯವನ್ನು ದೊಡ್ಡ ದೊಡ್ಡ ಸಮಸ್ಯೆಗಳೆಂದು ಪರಿಗಣಿಸಿ, ಅವುಗಳನ್ನೇ ಬೃಹತ್ತಾಗಿ ಬೆಳೆಸಿ, ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು, ಬರಹಗಳ ಮೂಲಕ ವ್ಯಕ್ತಪಡಿಸುವುದು ನಡೆದೇ ಇದೆ. ಟಿಆರ್‌ಪಿ ಸಹ ಅಂಥದ್ದಕ್ಕೇ. ಸಮಾಜಕ್ಕೆ ಅಗತ್ಯವಿರುವುದು, ಸಮಸ್ಯೆಯನ್ನು ತಿಳಿಯಾಗಿಸಿ ಹಗುರ ಗೊಳ್ಳುವಿಕೆಯೇ ಹೊರತು, ಅದನ್ನು ಗಾಢವಾಗಿಸಿ, ಹೊರೆಯಾಗಿಸಿಕೊಳ್ಳುವುದಲ್ಲ. ಇಲ್ಲಿಯೂ ವಿರೋಧಾಭಾಸವೇ ಕಾಣುತ್ತದೆ. ಸಮಾಜದ ಅವಶ್ಯಕತೆಗೆ ವಿರುದ್ಧವಾಗಿ, ಸಮೂಹಗಳು ಟಿಆರ್‌ಪಿಗೆ ಕಾರಣವಾಗುತ್ತವೆ. ಸಮೂಹ ಮಾನಸಿಕತೆಯಲ್ಲಿ ಆಧ್ಯಾತ್ಮಿಕ ಪ್ರe ಜಾಗೃತವಾ ದಾಗ, ಸಮಾಜವೂ ನೆಮ್ಮದಿಯ ನಡೆ ಕಾಣಬಹುದು.
ಧ್ಯಾನ ಮತ್ತು ಮಿದುಳಿನ ಪರಿವರ್ತನೆ
ಆಧ್ಯಾತ್ಮಿಕತೆ ಕೇವಲ ನಂಬಿಕೆ ಅಲ್ಲ, ಇತ್ತೀಚಿನ ವಿಜ್ಞಾನ ಅದನ್ನು ಅಧ್ಯಯನ ಮಾಡುತ್ತಿದೆ. ನರವಿeನ (ಘೆಛ್ಠ್ಟಿಟoಜಿಛ್ಞ್ಚಿಛಿ) ಹೇಳುವ ಪ್ರಕಾರ, ಧ್ಯಾನ ಮಿದುಳಿನ ರಚನೆಯನ್ನು ಬದಲಿಸುತ್ತದೆ. ನಿಯತ ಧ್ಯಾನದಿಂದ ಭಯ ಮತ್ತು ಆತಂಕಕ್ಕೆ ಸಂಬಂಽಸಿದ ‘ಅಮಿಗ್ಡಾಲಾ ಚಟುವಟಿಕೆ’ ಕಡಿಮೆ ಯಾಗುತ್ತದೆ.
ಗಮನ ಮತ್ತು ನಿರ್ಣಯಕ್ಕೆ ಸಂಬಂಧಿಸಿದ ‘ಪ್ರಿ-ಫ್ರಂಟಲ್ ಕಾರ್ಟೆಕ್ಸ್’ ಸಕ್ರಿಯವಾಗುತ್ತದೆ. ಇದರಿಂದ ವ್ಯಕ್ತಿ ಹೆಚ್ಚು ಜಾಗೃತನಾಗಿ, ಸಮತೋಲನದ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನೊಂದು ಮಹತ್ವದ ವಿಚಾರ ಎಂದರೆ, ಧ್ಯಾನವು ಸಹಾನುಭೂತಿಯನ್ನು ಹೆಚ್ಚಿಸುತ್ತದೆ. ಕೆಲವು ಅಧ್ಯಯನಗಳು “ಧ್ಯಾನ ಮಾಡುವವರಲ್ಲಿ ‘ಮಿರರ್ ನ್ಯೂರಾನ್’ ಚಟುವಟಿಕೆ ಹೆಚ್ಚಾಗುತ್ತದೆ" ಎಂದು ಸಾಬೀತುಪಡಿಸಿವೆ.
ಅಂದರೆ, ಇಂಥವರಲ್ಲಿ, ಇತರರ ನೋವನ್ನು ಹೆಚ್ಚು ಸ್ಪಷ್ಟವಾಗಿ ಅನುಭವಿಸುವ ಸಾಮರ್ಥ್ಯ ಬೆಳೆಯುತ್ತದೆ. ಇದು ಸಾಮಾಜಿಕ ಜಾಗೃತಿಯ ಮೂಲ. ಹೀಗಾಗಿ, ಧ್ಯಾನವು ವ್ಯಕ್ತಿಯನ್ನು ‘ಸ್ವಾರ್ಥ ಯುತ ಶಾಂತಿ’ಯತ್ತ ಅಲ್ಲ, ‘ಸಹಾನುಭೂತಿಯ ಜಾಗೃತಿ’ಯತ್ತ ಕರೆದೊಯ್ಯುತ್ತದೆ.
ಆಧ್ಯಾತ್ಮಿಕತೆಯಿಂದ ಸಾಮಾಜಿಕ ಜವಾಬ್ದಾರಿಯೆಡೆಗೆ ಆಧ್ಯಾತ್ಮಿಕತೆಯನ್ನು ವೈಯಕ್ತಿಕ ಮೋಕ್ಷದ ಸಾಧನವಾಗಿ ಮಾತ್ರ ನೋಡಿದರೆ ಅದು ಪಲಾಯನವಾಗಬಹುದು. ಆದರೆ ಜಾಗೃತಿಯನ್ನು ಬದುಕಿನ ಕೇಂದ್ರವಾಗಿ ನೋಡಿದರೆ, ಅದು ಸಾಮಾಜಿಕ ಜವಾಬ್ದಾರಿಯತ್ತ ಕರೆದೊಯ್ಯುತ್ತದೆ. ಜಾಗೃತ ವ್ಯಕ್ತಿ ಅನ್ಯಾಯವನ್ನು ಗುರುತಿಸುತ್ತಾನೆ. ಅಜಾಗೃತ ವ್ಯಕ್ತಿ ಅದಕ್ಕೆ ಹೊಂದಿಕೊಳ್ಳುತ್ತಾನೆ. ಧ್ಯಾನ ಮಾಡಿದ ಮನಸ್ಸು ನೋವನ್ನು ತಪ್ಪಿಸಲು ಪ್ರಯತ್ನಿಸುವುದಿಲ್ಲ, ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ.
ಅರ್ಥಮಾಡಿಕೊಳ್ಳುವ ಮನಸ್ಸು ಪ್ರತಿರೋಧಿಸುತ್ತದೆ. ಆ ಪ್ರತಿರೋಧವು ಆಕ್ರೋಶದಿಂದ ಹುಟ್ಟಿ, ಆಕ್ರಮಣಕಾರಿಯಾಗಿ ವರ್ತಿಸಿ, ತಾತ್ಕಾಲಿಕವಾಗಿ ಪ್ರತಿಕ್ರಿಯಿಸಿ, ಪರಿಹಾರ ಕಾಣುವ ಮೊದಲೇ ನಿಷ್ಕ್ರಿಯವಾಗಿಬಿಡುವುದಲ್ಲ. ಬದಲಿಗೆ, ಜಾಗೃತಿಯಿಂದ ಮೂಡಿ, ಪ್ರeಪೂರ್ವಕವಾಗಿ ಸ್ಪಂದಿಸಿ, ಪರಿಹಾರ ಪಡೆದುಕೊಳ್ಳುವವರೆಗೂ ಸಕ್ರಿಯ ವರ್ತನೆ ಇರುತ್ತದೆ. ಇದು ಅಹಿಂಸಾತ್ಮಕ ಪ್ರತಿರೋಧದ ಮೂಲ.
ಇತಿಹಾಸದಲ್ಲಿ ಹಲವಾರು ಸಾಮಾಜಿಕ ಪರಿವರ್ತನೆಗಳು ಒಳಗಿನ ಜಾಗೃತಿಯಿಂದ ಹುಟ್ಟಿವೆ. ಒಳಗಿನ ಶಾಂತಿ ಹೊರಗಿನ ಕ್ರಿಯೆಯನ್ನು ತಡೆಯುವುದಿಲ್ಲ. ಬದಲಿಗೆ, ಅದನ್ನು ಸ್ಪಷ್ಟಗೊಳಿಸುತ್ತದೆ. ಅಶಾಂತ ಮನಸ್ಸಿನ ಮೊದಲ ಕ್ರಿಯೆ ಎಂದರೆ, ಅದು ಪ್ರತಿಕ್ರಿಯೆ. ಜಾಗೃತ ಮನಸ್ಸಿನ ಕ್ರಿಯೆ ಎಂದರೆ, ಅದು ಪ್ರತಿಸ್ಪಂದನೆ. ಪ್ರತಿಕ್ರಿಯೆ ತ್ವರಿತವಾಗಿ, ವಿವೇಚನೆಯಿಂದ ದೂರವಾಗಿ ವ್ಯಕ್ತವಾಗಿಬಿಡುತ್ತದೆ.
ಪ್ರತಿಸ್ಪಂದನೆ ಜಾಗೃತ ಮನಸ್ಸಿನಲ್ಲಿ ಮೂಡಿ, ವಿವೇಚನೆಯಿಂದ ಶೋಧಿಸಲ್ಪಟ್ಟು, ಸಾವಧಾನವಾಗಿ ಹೊರಹೊಮ್ಮುತ್ತದೆ. ಮೊದಲನೆಯದು ಸಂಘರ್ಷವನ್ನು ಹೆಚ್ಚಿಸಿದರೆ, ಎರಡನೆಯದು ಪರಿವರ್ತನೆಯನ್ನು ತರಿಸುತ್ತದೆ.
ಯೋಗ-ಧ್ಯಾನ, ಶಾಸ್ತ್ರಾಧ್ಯಯನ, ಮನನ, ನಿಧಿಧ್ಯಾಸನಗಳು ಈ ಪ್ರತಿಸ್ಪಂದನೆಯ ಸಾಮರ್ಥ್ಯ ವನ್ನು ಬೆಳೆಸುತ್ತವೆ. ಆಧ್ಯಾತ್ಮಿಕತೆಯು ಒಳಗಿನ ಕ್ರಾಂತಿ. ಸಾಮಾಜಿಕ ಬದಲಾವಣೆ ಹೊರಗಿನಿಂದ ಮಾತ್ರ ಸಾಧ್ಯವಿಲ್ಲ. ಒಳಗಿನ ಅಜಾಗೃತಿಯ ಮೇಲೆ ಆಧರಿಸಿದ ಹೊರಗಿನ ಕ್ರಾಂತಿ, ನಾಶಕ್ಕೆ ಕಾರಣ ವಾಗುತ್ತದೆ. ಒಳಗಿನ ಜಾಗೃತಿಯ ಮೇಲೆ ನಿಂತ ಕ್ರಾಂತಿ ಮಾತ್ರ ದೀರ್ಘಕಾಲಿಕ ಪರಿವರ್ತನೆ ತರುತ್ತದೆ. ಆಧ್ಯಾತ್ಮಿಕತೆ ಈ ಒಳಗಿನ ಕ್ರಾಂತಿಯ ಬೀಜ. ಅದು ವ್ಯಕ್ತಿಯನ್ನು ಭಯದಿಂದ ಮುಕ್ತಗೊಳಿಸುತ್ತದೆ.
ಭಯವಿಲ್ಲದ ಮನಸ್ಸು ಮಾತ್ರ ಸತ್ಯವನ್ನು ಹೇಳುತ್ತದೆ. ಸತ್ಯ ಹೇಳುವ ಮನಸ್ಸು ಮಾತ್ರ ಅನ್ಯಾಯ ವನ್ನು ಎದುರಿಸುತ್ತದೆ. ಹೀಗಾಗಿ, ಆಧ್ಯಾತ್ಮಿಕತೆ ಪಲಾಯನವಲ್ಲ, ಅದು ಪ್ರತಿರೋಧದ ಆಂತರಿಕ ಶಕ್ತಿ. ಆಧ್ಯಾತ್ಮಿಕತೆ ಜೀವನದಿಂದ ದೂರ ಓಡುವ ಮಾರ್ಗವಲ್ಲ. ಅದು ಜೀವನವನ್ನು ಸ್ಪಷ್ಟವಾಗಿ ನೋಡುವ ದೃಷ್ಟಿ. ಅದು, ವೈಯಕ್ತಿಕ ಶಾಂತಿಗೆ ಮಾತ್ರ ಸೀಮಿತವಲ್ಲ, ಜತೆಗೆ ಸಾಮಾಜಿಕ ಜಾಗೃತಿಯ ಬೀಜವೂ ಹೌದು. ಒಳಗಿನ ಮೌನ ಹೊರಗಿನ ನಿರ್ಲಿಪ್ತತೆಯಲ್ಲ, ಅದು ಜಾಗೃತ ಕ್ರಿಯೆಯ ಮೂಲ. ಪಲಾಯನದ ಆಧ್ಯಾತ್ಮಿಕತೆ ವ್ಯಕ್ತಿಯನ್ನು ಸಮಾಜದಿಂದ ದೂರ ಮಾಡುತ್ತದೆ.
ಪ್ರತಿರೋಧದ ಆಧ್ಯಾತ್ಮಿಕತೆ ವ್ಯಕ್ತಿಯನ್ನು ಸಮಾಜದ ಮಧ್ಯದ ಜಾಗೃತಗೊಳಿಸುತ್ತದೆ. ಅಜಾಗೃತ ಮನಸ್ಸಿನಲ್ಲಿ ಆಧ್ಯಾತ್ಮಿಕತೆಯು ‘ಪಲಾಯನ’ವಾದರೆ, ಜಾಗೃತ ಮನಸ್ಸಿನಲ್ಲಿ ಆಧ್ಯಾತ್ಮಿಕತೆಯು ‘ಪ್ರತಿರೋಧ’ವಾಗುತ್ತದೆ. ಆಧ್ಯಾತ್ಮಿಕತೆ ನಿದ್ರೆಗಾಗಿ ಅಲ್ಲ, ಎಚ್ಚರದ ಸ್ಥಿತಿಗೆ. ಶಾಂತಿಗೆ ಮಾತ್ರವಲ್ಲ ಸತ್ಯಕ್ಕೂ ಹೌದು. ವೈಯಕ್ತಿಕ ನೆಮ್ಮದಿಗಷ್ಟೇ ಅಲ್ಲ ಸಾಮಾಜಿಕ ಜಾಗೃತಿಗೂ ಹೌದು.
ಆಧ್ಯಾತ್ಮಿಕತೆಯು ಜೀವನ ದಿಂದ ದೂರ ಹೋಗುವುದಲ್ಲ, ಜೀವನವನ್ನು ಸಂಪೂರ್ಣವಾಗಿ ಅದಿದ್ದಂತೆಯೇ ಎದುರಿಸುವ ಧೈರ್ಯ ಹೊಂದುವುದು.
ಮನೋವೈಜ್ಞಾನಿಕ ಆಯಾಮ
ಆಧ್ಯಾತ್ಮಿಕತೆಯನ್ನು ಕೇವಲ ಧಾರ್ಮಿಕ ಆಚರಣೆ ಅಥವಾ ನಂಬಿಕೆಯ ಕ್ಷೇತ್ರಕ್ಕೆ ಸೀಮಿತ ಗೊಳಿಸುವುದು ಇಂದು ಸಾಕಾಗುವುದಿಲ್ಲ. ಆಧುನಿಕ ಮನೋವಿeನವು ಅದನ್ನು ಮಾನವನ ಮನಸ್ಸಿನ ಆಳದ ರಚನೆ, ಅನುಭವ ಮತ್ತು ಪರಿವರ್ತನೆಯ ಪ್ರಕ್ರಿಯೆಯಾಗಿ ನೋಡಲು ಪ್ರಾರಂಭಿಸಿದೆ. ‘ಆಧ್ಯಾತ್ಮಿಕತೆ’ ಎನ್ನುವುದು ಈಗ, ವೈeನಿಕ ನೆಲೆಯಲ್ಲಿ ವಿಶ್ಲೇಷಿಸಬಹುದಾದ ಒಂದು ಮಾನಸಿಕ ಸ್ಥಿತಿ. ಅದನ್ನು, ಚೇತನದ ಜಾಗೃತಿಯ ದಾರಿ ಎಂದು ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಆಧ್ಯಾತ್ಮಿಕತೆಯನ್ನು ಆಧುನಿಕ ಮನೋವಿಜ್ಞಾನದ ನಾಲ್ಕು ಪ್ರಮುಖ ಅಕ್ಷಗಳಲ್ಲಿ ಗುರುತಿಸಬಹುದು: ಅಹಂ ( Ego ) ಮತ್ತು ಆತ್ಮಗುರುತು, ಜಾಗೃತಿ ( Awareness ) ಮತ್ತು ಮನಸ್ಸಿನ ಕಾರ್ಯವಿಧಾನ, ನೋವು ( Suffering) ಮತ್ತು ಅದರ ರೂಪಾಂತರ, ಅರ್ಥ ( Meaning ) ಮತ್ತು ಬದುಕಿನ ಗುರಿ.
ನಾವು ‘ನಾನು’ ಎಂದು ಭಾವಿಸುವುದು ನಿರಂತರ ಬದಲಾಗುವ ಕಥನ ( narrative self ) ಎನ್ನುತ್ತವೆ ಸಂಶೋಧನೆಗಳು. ಧ್ಯಾನ ಈ ಕಥನವನ್ನು ಮುರಿಯುತ್ತದೆ. ಈ ಅರಿವು, ಅಹಂಕಾರ ವನ್ನು ಕಡಿಮೆ ಮಾಡುತ್ತದೆ. ಇದನ್ನು Ego transcendence ಎಂದು ಕರೆಯಲಾಗುತ್ತದೆ. ಧ್ಯಾನ ಮನಸ್ಸನ್ನು ‘ಈ ಕ್ಷಣಕ್ಕೆ’ ತರುತ್ತದೆ. ಇದು Mindfulness ಎಂಬ ಮನೋವೈಜ್ಞಾನಿಕ ತತ್ವದ ಮೂಲ. Mindfulness ಎಂದರೆ, “ನಿಷ್ಪಕ್ಷಪಾತವಾಗಿ, ಈ ಕ್ಷಣದ ಅನುಭವವನ್ನು ಗಮನಿಸುವ ಸಾಮರ್ಥ್ಯ". Mindfulness ಅಭ್ಯಾಸದಿಂದ Default Mode Network (DMN) ಚಟುವಟಿಕೆ ಕಡಿಮೆಯಾಗುತ್ತದೆ.
ಇದು self-referen tial thinking (‘ತನ್ನ’ ಬಗ್ಗೆ ನಿರಂತರ ಯೋಚನೆ) ಅನ್ನು ತಗ್ಗಿಸುತ್ತದೆ. ಇದರಿಂದ ಭಾವನಾತ್ಮಕ ನಿಯಂತ್ರಣ ಸುಧಾರಿಸುತ್ತದೆ. ಇದು ಶಾಂತಿಯೊಂದಿಗೆ, ‘ಜಾಗೃತ ಮನಸ್ಸನ್ನು’ ನಿರ್ಮಿಸುತ್ತದೆ. ಅಹಂ ಅನ್ನು ಪ್ರಶ್ನಿಸಿ, ಜಾಗೃತಿಯನ್ನು ಹೆಚ್ಚಿಸಿ, ನೋವನ್ನು ರೂಪಾಂತರ ಗೊಳಿಸುತ್ತದೆ.
ಬದುಕಿಗೆ ಅರ್ಥ ನೀಡುತ್ತದೆ. ಮುಖ್ಯವಾಗಿ, ಇದು ವ್ಯಕ್ತಿಯನ್ನು reactive mindನಿಂದ responsive mind ಗೆ ಪರಿವರ್ತಿಸುತ್ತದೆ. ಹಾಗಾಗಿ, ಆಧ್ಯಾತ್ಮಿಕತೆ ಮನಸ್ಸಿನ ದುರ್ಬಲತೆಯ ಫಲವಲ್ಲ, ಅದು ಮನಸ್ಸಿನ ಪರಿಪಕ್ವತೆಯ ಲಕ್ಷಣ. ಮನೋವಿಜ್ಞಾನದ ಪ್ರಕಾರ, ಅಜಾಗೃತ ಮನಸ್ಸು ಪಲಾಯನ ಮಾಡಿದರೆ, ಜಾಗೃತ ಮನಸ್ಸು ಎದುರಿಸುತ್ತದೆ.
ಆಧ್ಯಾತ್ಮಿಕತೆ ಈ ಜಾಗೃತಿಯ ಮಾರ್ಗ. ಅದು ಸಮಸ್ಯೆಗಳಿಂದ ದೂರ ಹೋಗುವುದಲ್ಲ, ಸಮಸ್ಯೆಗಳೊಂದಿಗೆ ಹೊಸ ಸಂಬಂಧ ನಿರ್ಮಿಸುವ ಕಲೆ. ಆಧ್ಯಾತ್ಮಿಕತೆಯು, ‘ನಾನು ಯಾರು?’ ಎಂಬ ಪ್ರಶ್ನೆಯಿಂದ ಆರಂಭಗೊಂಡು, ‘ನಾನು ಮಾತ್ರವಲ್ಲ’ ಎಂಬ ಅರಿವಿನಲ್ಲಿ ಮುಗಿಯುತ್ತದೆ....
ಆಧ್ಯಾತ್ಮಿಕತೆಯ ಎರಡು ಧಾರೆಗಳು
ಇತಿಹಾಸದಲ್ಲಿ ಆಧ್ಯಾತ್ಮಿಕತೆಯ ಎರಡು ಧಾರೆಗಳು ಕಾಣುತ್ತವೆ. ಒಂದು, ಜಗತ್ತನ್ನು ಮಾಯೆ ಎಂದು ತಳ್ಳಿ ದೂರ ಹೋಗುವ ಧಾರೆ. ಇನ್ನೊಂದು, ಜಗತ್ತಿನೊಳಗೆ ಉಳಿದು, ಜಾಗೃತಿಯಿಂದ ಬದುಕುವ ಧಾರೆ. ಮೊದಲನೆಯದು ಪಲಾಯನಕ್ಕೆ ದಾರಿ ಮಾಡುತ್ತದೆ. ಎರಡನೆಯದು ಪ್ರತಿರೋಧಕ್ಕೆ. ಜೀವನದ ಕಠಿಣ ಸತ್ಯಗಳಿಂದ ಭಯಗೊಂಡ ಮನಸ್ಸು ಆಧ್ಯಾತ್ಮಿಕತೆಯನ್ನು ಆಶ್ರಯಿಸುತ್ತದೆ. ಇದು ಪಲಾಯನ. ಸತ್ಯವನ್ನು ನೇರವಾಗಿ ನೋಡುವ ಧೈರ್ಯದಿಂದ ಆಧ್ಯಾತ್ಮಿಕತೆಯನ್ನು ಬಳಸುವ ನಿರ್ಭೀತ ಮನಸ್ಸು, ಪ್ರತಿರೋಧದ ಪ್ರತೀಕ. ಎರಡರ ನಡುವಿನ ವ್ಯತ್ಯಾಸ ಸೂಕ್ಷ್ಮ, ಆದರೆ ಪರಿಣಾಮ ದಲ್ಲಿನ ಅಂತರ ಗಣನೀಯವಾಗಿರುತ್ತದೆ. ಪಲಾಯನದ ಆಧ್ಯಾತ್ಮಿಕತೆ ‘ಶಾಂತಿ’ಯನ್ನು ಹುಡುಕು ತ್ತದೆ. ಪ್ರತಿರೋಧದ ಆಧ್ಯಾತ್ಮಿಕತೆ ‘ಸತ್ಯ’ವನ್ನು ಹುಡುಕುತ್ತದೆ. ಶಾಂತಿ ಬೇಕೆನ್ನುವುದು ತಪ್ಪಲ್ಲ. ಆದರೆ ಸತ್ಯವಿಲ್ಲದ ಶಾಂತಿ, ನಿದ್ರೆಯಷ್ಟೇ. ಸತ್ಯದಿಂದ ಹುಟ್ಟುವ ಶಾಂತಿ, ಜಾಗೃತಿಯ ಫಲ.