ಅಂಕಪಟ್ಟಿಯ ಭ್ರಮೆಗೆ ಸುಂಕವಿಲ್ಲವೇ ?!
ಇದು ಸಮಸ್ಯೆಗೆ ಪರಿಹಾರವಲ್ಲ; ಸಮಸ್ಯೆಯನ್ನು ಮರೆಮಾಚುವುದು ಎನಿಸಿಕೊಳ್ಳುತ್ತದೆ, ಅಷ್ಟೇ! ಬಡತನ ರೇಖೆಯನ್ನು ಕೆಳಗೆ ಇಳಿಸುವುದು ವಾಸ್ತವ ಪರಿಷ್ಕಾರವಲ್ಲ, ಕೇವಲ ಗಣಕದಲ್ಲಿ ಅಂಕಿ-ಅಂಶವನ್ನು ಕಡಿಮೆ ತೋರಿಸುವ ತಂತ್ರ. ಅಂದರೆ, ಬಡತನ ರೇಖೆಯನ್ನು ಕೆಳಗಿಳಿಸುವುದು ಸಂಖ್ಯಾತ್ಮಕ ತಂತ್ರ ಮಾತ್ರ; ಇದರಿಂದ ಸಮಸ್ಯೆ ನಿಜವಾಗಿಯೂ ಬದಲಾಗುವುದಿಲ್ಲ.
-
ಡಾ.ಎ.ಜಯಕುಮಾರ ಶೆಟ್ಟಿ
ಉತ್ತೀರ್ಣರಾದವರ ಸಂಖ್ಯೆ ಹೆಚ್ಚಾಗಿ ಬಿಟ್ಟರೆ ವಾಸ್ತವವಾಗಿ ಅದು ಶೈಕ್ಷಣಿಕ ಸಾಮರ್ಥ್ಯ ವನ್ನು ಸೂಚಿಸುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ನಡೆಯುತ್ತಿವೆ. ವಿದ್ಯಾರ್ಥಿ ಗಳ ಮೇಲಿನ ಒತ್ತಡ ಕಡಿಮೆ ಮಾಡಬೇಕು, ಪರೀಕ್ಷಾ ಭೀತಿ ನಿವಾರಿಸಬೇಕು ಎಂಬ ಉದ್ದೇಶದಿಂದ ತೇರ್ಗಡೆಯ ಅಂಕಗಳನ್ನು ಕಡಿಮೆ ಮಾಡುವ ಪ್ರಸ್ತಾಪಗಳು ಕೇಳಿಬರುತ್ತಿವೆ. ಆದರೆ, ಇದು ನಿಜವಾಗಿಯೂ ವಿದ್ಯಾರ್ಥಿಗಳ ಒಳಿತಿಗೆ ದಾರಿಯೇ? ಎಂಬ ಪ್ರಶ್ನೆ ಎದುರಾಗಿದೆ.
ರಾಜ್ಯ ಸರಕಾರವು, ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳ ಮಟ್ಟವನ್ನು ಶೇ.೩೩ಕ್ಕೆ ಇಳಿಸಲು ತೀರ್ಮಾನಿಸಿದೆ. ಇದರಿಂದಾಗಿ, ಮೊದಲು ವಿಫಲರಾಗುತ್ತಿದ್ದ ಕೆಲವು ವಿದ್ಯಾರ್ಥಿಗಳು ಈಗ ಉತ್ತೀರ್ಣರಾದಂತೆ ಲೆಕ್ಕಿಸಲ್ಪಡುತ್ತಾರೆ. ಉದಾ ಹರಣೆಗೆ ೩೫ ಕನಿಷ್ಠ ಅಂಕ ಇದ್ದಾಗ ೧೦೦ ವಿದ್ಯಾರ್ಥಿ ಗಳಲ್ಲಿ ಶೇ.೫೦ರಷ್ಟು ಮಾತ್ರ ಉತ್ತೀರ್ಣರಾದರೆ, ಕನಿಷ್ಠ ಅಂಕವನ್ನು 33ಕ್ಕೆ ಇಳಿಸಿದ ಮೇಲೆ ಶೇ.೬೦ರಷ್ಟು ಮಂದಿ ಉತ್ತೀರ್ಣರಾಗಬಹುದು. ಈ ಮೂಲಕ ಉತ್ತೀರ್ಣ ರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರಕಾರವು ಮುಂದಾಗಿದೆ.
ಸಮಸ್ಯೆಗೆ ಪರಿಹಾರವಲ್ಲ, ಮರೆಮಾಚುವ ಕೆಲಸ: ಉತ್ತೀರ್ಣರಾದವರ ಸಂಖ್ಯೆ ಹೆಚ್ಚಾಗಿಬಿಟ್ಟರೆ ವಾಸ್ತವವಾಗಿ ಅದು ಶೈಕ್ಷಣಿಕ ಸಾಮರ್ಥ್ಯವನ್ನು ಸೂಚಿಸುವುದಿಲ್ಲ. ಈ ತತ್ವವು ಒಂದು ರೀತಿಯಲ್ಲಿ, ಬಡತನದ ಪ್ರಮಾಣವನ್ನು ತಗ್ಗಿಸಲು, ‘ಬಡತನ ರೇಖೆ’ಯನ್ನು ಇಳಿಸಿದಂತೆ. ಹೆಚ್ಚು ಜನರು ಇನ್ನೂ ಕಷ್ಟದಲ್ಲಿದ್ದರೂ, ಅಂಕಿ-ಅಂಶದಲ್ಲಿ ಬಡತನ ಕಡಿಮೆಯಾಗಿರುವಂತೆ ಕಾಣುತ್ತದೆ.
ಇದನ್ನೂ ಓದಿ: Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು
ಇದು ಸಮಸ್ಯೆಗೆ ಪರಿಹಾರವಲ್ಲ; ಸಮಸ್ಯೆ ಯನ್ನು ಮರೆಮಾಚುವುದು ಎನಿಸಿಕೊಳ್ಳುತ್ತದೆ, ಅಷ್ಟೇ! ಬಡತನ ರೇಖೆಯನ್ನು ಕೆಳಗೆ ಇಳಿಸುವುದು ವಾಸ್ತವ ಪರಿಷ್ಕಾರವಲ್ಲ, ಕೇವಲ ಗಣಕದಲ್ಲಿ ಅಂಕಿ-ಅಂಶವನ್ನು ಕಡಿಮೆ ತೋರಿಸುವ ತಂತ್ರ. ಅಂದರೆ, ಬಡತನ ರೇಖೆಯನ್ನು ಕೆಳಗಿಳಿಸುವುದು ಸಂಖ್ಯಾತ್ಮಕ ತಂತ್ರ ಮಾತ್ರ; ಇದರಿಂದ ಸಮಸ್ಯೆ ನಿಜವಾಗಿಯೂ ಬದಲಾಗುವುದಿಲ್ಲ.
ಶೈಕ್ಷಣಿಕವಾಗಿ ತೇರ್ಗಡೆಗೆ ಗಳಿಸಬೇಕಾದ ಕನಿಷ್ಠ ಅಂಕವನ್ನು ೩೩ಕ್ಕೆ ಇಳಿಸಿದರೆ, ಹೆಚ್ಚಿನ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿzರೆ ಎಂದು ಲೆಕ್ಕ, ಆದರೆ ಜ್ಞಾನ ಮತ್ತು ಶಿಕ್ಷಣದ ಮಟ್ಟ ಬದಲಾಗಿಲ್ಲ. ಗಳಿಸಬೇಕಾದ ಕನಿಷ್ಠ ಅಂಕವನ್ನು ಇಳಿಸುವುದು ಅಥವಾ ಬಡತನ ರೇಖೆ ಇಳಿಸುವು ದರಿಂದ, ನಿಜವಾದ ಶೈಕ್ಷಣಿಕ ಮಟ್ಟ ಅಥವಾ ಜೀವನಮಟ್ಟ ಸುಧಾರಿಸುವು ದಲ್ಲ. ಈ ಕ್ರಮಗಳು ಸಮಸ್ಯೆಯನ್ನು ಮರೆಮಾಚುವ ಕೆಲಸವನ್ನಷ್ಟೇ ಮಾಡುತ್ತವೆಯೇ ವಿನಾ, ಅವು ಪರಿಹಾರೋಪಾಯ ಗಳಲ್ಲ.
ತೇರ್ಗಡೆಯಾದ ವಿದ್ಯಾರ್ಥಿಗಳ ಸಂಖ್ಯೆ ಕೃತಕವಾಗಿ ಹೆಚ್ಚಾದರೂ ಅವರ ಉದ್ಯೋಗ ಸಾಧನೆ, ಕೌಶಲಾಭಿವೃದ್ಧಿ ಬಾಽತವಾಗ ಬಹುದು. ಶ್ರಮವೇ ಜೀವನದ ಪಾಠ: ಪರೀಕ್ಷೆ ಎಂದರೆ ಕೇವಲ ಅಂಕಗಳ ಪೈಪೋಟಿ ಅಲ್ಲ; ಅದು ವಿದ್ಯಾರ್ಥಿಯ ಶ್ರಮ, ಜ್ಞಾನ ಮತ್ತು ಮನೋಬಲದ ಪರೀಕ್ಷೆ. ಅಂಕಗಳನ್ನು ಕಡಿಮೆ ಮಾಡಿದರೆ ವಿದ್ಯಾರ್ಥಿ ಉತ್ತೀರ್ಣನಾಗಬಹುದು, ಆದರೆ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ಶ್ರಮದ ಮೌಲ್ಯ, ಪ್ರಯತ್ನದ ಅರ್ಥ ನಶಿಸುತ್ತದೆ. ಸುಲಭ ಯಶಸ್ಸು ತಾತ್ಕಾಲಿಕ ಸಂತೋಷವನ್ನು ನೀಡಬಹುದು, ಆದರೆ ಅದು ವ್ಯಕ್ತಿತ್ವ ನಿರ್ಮಾಣಕ್ಕೆ ನೆರವಾಗುವುದಿಲ್ಲ.
ತೇರ್ಗಡೆಯ ಅಂಕಗಳನ್ನು ಕಡಿಮೆ ಮಾಡುವ ಬದಲು ಬೋಧನೆಯ ಗುಣಮಟ್ಟವನ್ನು ಹೆಚ್ಚಿಸು ವುದು ಉತ್ತಮ ಮಾರ್ಗ. ಶಿಕ್ಷಕರಿಗೆ ನವೀನ ತರಬೇತಿ, ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಪಾಠಗಳು, ಆಲೋಚನೆಗೆ ಉತ್ತೇಜನ ನೀಡುವ ವಿಧಾನಗಳು ಇವುಗಳ ಮೂಲಕ ಶಿಕ್ಷಣದ ನೈಜ ಸುಧಾರಣೆ ಸಾಧ್ಯ.
ಜೀವನದ ನೈಜ ಪರೀಕ್ಷೆಗಳಲ್ಲಿ ‘ಅರ್ಹತೆಯ ಅಂಕ’ವನ್ನು ಯಾರೂ ಕಡಿಮೆ ಮಾಡುವುದಿಲ್ಲ. ಅಲ್ಲಿ ಶ್ರಮ, ಶಿಸ್ತು, ನಿಷ್ಠೆ ಮತ್ತು ಸಾಮರ್ಥ್ಯ ಗಳೇ ಯಶಸ್ಸಿನ ಅಳತೆಗೋಲು ಗಳಾಗುತ್ತವೆ. ಹೀಗಾಗಿ ವಿದ್ಯಾರ್ಥಿಯನ್ನು ಅಲ್ಪ ಪ್ರಯತ್ನದ ಮಾರ್ಗಕ್ಕೆ ಕೊಂಡೊಯ್ಯುವ ಬದಲು, ಕಠಿಣ ಶ್ರಮದ ಮೌಲ್ಯವನ್ನು ಬೋಧಿಸಬೇಕು.
ತೇರ್ಗಡೆಯ ಅಂಕವನ್ನು ತಗ್ಗಿಸುವ ಮಾಡುವ ಬದಲು, ವಿದ್ಯಾರ್ಥಿಯ ‘ಅಂಕಗಳಿಕೆಯ ಶಕ್ತಿ’ ಯನ್ನು ಹೆಚ್ಚಿಸೋಣ. ಶಿಕ್ಷಣದ ನಿಜವಾದ ಗುರಿ, ವಿದ್ಯಾರ್ಥಿಯು ಉತ್ತೀರ್ಣನಾಗುವುದಲ್ಲ, ಅವನು ಜೀವನದಲ್ಲಿ ಯಶಸ್ವಿಯಾಗುವುದಾಗಿದೆ. ಹೀಗಾಗಿ, ಪರೀಕ್ಷೆಯಲ್ಲಿ ತೇರ್ಗಡೆಯ ಅಂಕಗಳ ಕಡಿತವು ಸರಿಯಾದ ಮಾರ್ಗವಲ್ಲ, ಅದು ದೀರ್ಘಾವಽಯಲ್ಲಿ ಸಮಾಜದ ಬುದ್ಧಿವಂತಿಕೆಯ ಮಟ್ಟವನ್ನು ಕುಗ್ಗಿಸುತ್ತದೆ.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆಯಿರಲಿ: ಒಂದರಿಂದ ಒಂಬತ್ತರವರೆಗಿನ ತರಗತಿಗಳ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸುವ ‘ನೈತಿಕ ನೀತಿ’ಈಗಾಗಲೇ ಜಾರಿಗೊಂಡಿದೆ. ಇದೇ ಶೈಕ್ಷಣಿಕ ವರ್ಷದ ಆರಂಭದಿಂದಲೇ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿನ ತೇರ್ಗಡೆಗಾಗಿ ನಿಗದಿಪಡಿಸ ಲಾದ ಕನಿಷ್ಠ ಅಂಕಗಳ ಮಟ್ಟವನ್ನು ಶೇ.೩೩ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಈ ಕ್ರಮದ ಪ್ರಮುಖ ಉದ್ದೇಶ, ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವನ್ನು ಹೆಚ್ಚಿಸುವುದು, ತನ್ಮೂಲಕ ಶಾಲಾ ಕಲಿಕೆ ಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುವುದು.
ಶಿಕ್ಷಣ ಹಕ್ಕು ಕಾಯಿದೆ (೨೦೧೦) ಪ್ರಕಾರ, ಮಕ್ಕಳ ಕಲಿಕೆಯ ಗುಣಮಟ್ಟ ಹೇಗಿದ್ದರೂ ೮ನೇ ತರಗತಿ ವರೆಗೆ ಯಾರನ್ನೂ ಅನುತ್ತೀರ್ಣಗೊಳಿಸಬಾರದು. ಪರೀಕ್ಷೆಯಲ್ಲಿ ಅಲ್ಪ ಅಂಕಗಳನ್ನು ಪಡೆದರೂ ಮಕ್ಕಳು ತಮ್ಮ ಶಿಕ್ಷಣವನ್ನು ಮಧ್ಯದಲ್ಲಿ ತೊರೆಯಬಾರದು ಎಂಬುದೇ ಈ ನಿಯಮದ ಹಿಂದಿರುವ ಮಹತ್ವದ ಆಶಯ ವಾಗಿದೆ.
ಇದರಿಂದಾಗಿ ಯಾವುದೇ ಹಿಂಜರಿಕೆಯಿಲ್ಲದೆ ಮಕ್ಕಳ ಶೈಕ್ಷಣಿಕ ಸಾಧನೆಗಳು ಮುಂದುವರಿಯುವು ದಕ್ಕೆ ಮತ್ತು ಶಾಲಾ ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶ ದಕ್ಕುವುದಕ್ಕೆ ಅನುವಾಗುತ್ತದೆ.
ಶಿಕ್ಷಣವೆಂದರೆ ಕೇವಲ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಲ್ಲ; ಇದು ವ್ಯಕ್ತಿಯ ಸತತ ವಿಕಾಸ ಮತ್ತು ಸಮಾಜದ ಪ್ರಗತಿಗೆ ತಳಹದಿ ಯಾಗಿದೆ. ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣವನ್ನು ಹೆಚ್ಚಿಸುವುದರ ಮೇಲೆಯೇ ಗಮನ ಹರಿಸಲಾಗಿದೆ.
ಆದರೆ, ಮಕ್ಕಳ ಕಲಿಕಾಸಾಮರ್ಥ್ಯ, ವಿಜ್ಞಾನ-ಗಣಿತ-ಭಾಷಾ ಕೌಶಲ, ಸೂಕ್ಷ್ಮ ಚಿಂತನೆ ಮತ್ತು ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಯ ಕುರಿತೂ ಒತ್ತು ನೀಡಬೇಕು. ಗುಣಮಟ್ಟದ ಶಿಕ್ಷಣವಿಲ್ಲದೆ, ಹೆಚ್ಚು ತೇರ್ಗಡೆ ಪ್ರಮಾಣಕ್ಕೆ ಮಾತ್ರವೇ ಒತ್ತುನೀಡಿದರೆ ಅದು ಅಸ್ಥಿರ ಫಲಿತಾಂಶಗಳನ್ನು ನೀಡಬಹುದು.
ವಿಜಯದ ಹೊಸಹಾದಿ: ಭಾರತದ ಶಿಕ್ಷಣ ವ್ಯವಸ್ಥೆಯು ದಶಕಗಳಿಂದಲೂ ‘ಪಾಸ್’ ಮತ್ತು ‘ಫೇಲ್’ ಎಂಬ ಎರಡು ಶಬ್ದಗಳ ಸುತ್ತಲೇ ಸುತ್ತುತ್ತಿದೆ. ಈ ಎರಡು ಪದಗಳು ವಿದ್ಯಾರ್ಥಿಯ ಭವಿಷ್ಯವನ್ನು ತೀರ್ಮಾನಿಸುವ ಮಟ್ಟಕ್ಕೆ ಬಂದಿರುವುದು ವಿಷಾದನೀಯ. ವಿದ್ಯಾರ್ಥಿಯು ಒಂದು ಪರೀಕ್ಷೆಯಲ್ಲಿ ವಿಫಲನಾದರೆ, ಅವನ ಜೀವನವೇ ವಿಫಲವೆಂದು ಸಮಾಜವು ನಿರ್ಧರಿಸುವುದು ನಿಜಕ್ಕೂ ಅನ್ಯಾಯ.
ಪ್ರಸ್ತುತ ಉದ್ಯೋಗ ಕ್ಷೇತ್ರವು, ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಯ ಪ್ರಮಾಣಪತ್ರವನ್ನಷ್ಟೇ ನೋಡುವುದಿಲ್ಲ; ಬದಲಿಗೆ ಆತನ ವಿಷಯ ಕೌಶಲ, ಸಂವಹನ ಸಾಮರ್ಥ್ಯ ಮತ್ತು ಪ್ರಾಯೋಗಿಕ ಸಾಮರ್ಥ್ಯವನ್ನೂ ಪರಿಗಣಿಸು ತ್ತದೆ. ಇದನ್ನು ನಾವು ಮರೆಯಬಾರದು.
ಹೀಗಿರಲಿ ಮೌಲ್ಯಮಾಪನ: ಪರೀಕ್ಷೆಯಲ್ಲಿ ‘ಪಾಸ್-ಫೇಲ್’ ಎಂಬ ನಿರ್ಣಯಕ್ಕಿಂತಲೂ, ಯಾರು ಯಾವ ಕೌಶಲದಲ್ಲಿ ಶ್ರೇಷ್ಠರು ಎಂಬ ಅರಿವು ಮೂಡಿಸುವ ಕಾರ್ಯವಿಧಾನವು ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಬೇಕು. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಹೊಸ ಕಲಿಕೆ ಮತ್ತು ನೈಪುಣ್ಯದ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಅಂಕಗಳು ವಿದ್ಯಾರ್ಥಿಯನ್ನು ಅಳೆಯಬಹುದು, ಆದರೆ ಕೌಶಲ ಗಳು ಅವನ ಬದುಕನ್ನು ರೂಪಿಸುತ್ತವೆ. ಆದ್ದರಿಂದ, ವಿದ್ಯಾರ್ಥಿಯು ಪಡೆದ ಅಂಕಗಳ ಜತೆಜತೆಗೆ, ಆತನಲ್ಲಿ ಕೆನೆಗಟ್ಟಿರುವ ಕೌಶಲಗಳ ಆಧಾರ ದಿಂದ ಮೌಲ್ಯಮಾಪನ ಮಾಡು ವುದೇ ಶ್ರೇಯಸ್ಕರ. ಆತನಿಗೆ ಉದ್ಯೋಗಾವಕಾಶ ನೀಡುವುದಕ್ಕೂ ಈ ತತ್ವವೇ ಮಾನದಂಡ ವಾಗಬೇಕು.