ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ
ಯುಗಾದಿ ಹಬ್ಬವು ದಕ್ಷಿಣ ಭಾರತದ ಜನರಿಗೆ ಅತ್ಯಂತ ಶ್ರೇಷ್ಠ ಹಬ್ಬವಾಗಿದ್ದು, ಜೀವನದ ಹೊಸ ಆರಂಭದ ಸಂಕೇತವಾಗಿದೆ, ಚೈತ್ರ ಮಾಸದ ಮಾಸದ ಮೊದಲ ದಿನದಂದು, ಬರುವ ಈ ಹಬ್ಬ ವಸಂತ ಋತುವಿನ, ಆಗಮನವನ್ನು ಸೂಚಿಸುತ್ತದೆ. ಯುಗಾದಿ ಎಂಬುದು ‘ಯುಗ ಮತ್ತು ಆದಿ’ ಎಂಬ ಸಂಸ್ಕೃತ ಶಬ್ದಗಳಿಂದ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷದ ಆರಂಭ ಎಂದೇ ಇದರ ಅರ್ಥ.
-
ಅಂಜಿನಪ್ಪ ಡಿ. ಉಪನ್ಯಾಸಕರು, ಕೊಟ್ಟೂರು
ಭಾರತದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಗಳಿಗೂ, ಸಾಂಸ್ಕೃತಿಕ ಹಿನ್ನೆಲೆ ಇದೆ. ಹಬ್ಬಗಳು ಜನರ ಭಾವನೆಗಳ ಬಂಧನದ ಬೆಸಿಗೆಯಾಗಿದ್ದು, ಕುಟುಂಬಗಳಲ್ಲಿ ಸಾಮರಸ್ಯ ವನ್ನು ಉಂಟು ಮಾಡಿ, ಸಾಂಸ್ಕೃತಿಕವಾಗಿ ಪಾಲ್ಗೊಳ್ಳುವಂತೆ ಮಾಡುತ್ತವೆ. ಆ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಂಸ್ಕೃತಿಯನ್ನು ವರ್ಗಾವಣೆ ಮಾಡುತ್ತವೆ. ಅಲ್ಲದೇ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನಲ್ಲಿನ ಕಷ್ಟಗಳನ್ನು ಮರೆತು ಸಂತೋಷ, ಸಂಭ್ರಮ, ಸಡಗರದೊಂದಿಗೆ ಪಾಲ್ಗೊಳ್ಳುವಂತೆ ಮಾಡಿ ಮನುಷ್ಯನಿಗೆ ಹೊಸ ಚೈತನ್ಯವನ್ನು ನೀಡುತ್ತವೆ.
ಯುಗಾದಿ ಹಬ್ಬವು ದಕ್ಷಿಣ ಭಾರತದ ಜನರಿಗೆ ಅತ್ಯಂತ ಶ್ರೇಷ್ಠ ಹಬ್ಬವಾಗಿದ್ದು, ಜೀವನದ ಹೊಸ ಆರಂಭದ ಸಂಕೇತವಾಗಿದೆ, ಚೈತ್ರ ಮಾಸದ ಮಾಸದ ಮೊದಲ ದಿನದಂದು, ಬರುವ ಈ ಹಬ್ಬ ವಸಂತ ಋತುವಿನ, ಆಗಮನವನ್ನು ಸೂಚಿಸುತ್ತದೆ. ಯುಗಾದಿ ಎಂಬುದು ‘ಯುಗ ಮತ್ತು ಆದಿ’ ಎಂಬ ಸಂಸ್ಕೃತ ಶಬ್ದಗಳಿಂದ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷದ ಆರಂಭ ಎಂದೇ ಇದರ ಅರ್ಥ.
‘ಚೈತ್ರ ಮಾಸೇ ಜಗದ್ಬ್ರಹ್ಮಾ ಸಸರ್ಜ ಪ್ರಥಮೇಹಿನಿ
ಶುಕ್ಲ ಪಕ್ಷೇ ಸಮಗ್ರಂತು ತದಾ ಸೂರ್ಯೋದಯ ಸತಿ’
ಬ್ರಹ್ಮ ಪುರಾಣದಲ್ಲಿ ಬರುವ ಈ ಶ್ಲೋಕದಂತೆ ಇಂದು ಪ್ರಪಂಚ ಸೃಷ್ಟಿಯಾದ ದಿನ. ಬ್ರಹ್ಮನು ಈ ಜಗತ್ತನ್ನು, ಚೈತ್ರ ಶುದ್ಧ ಪ್ರತಿಪದೇ ದಿನ ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿ ದನು.
ಆ ದಿನವೇ, ಗ್ರಹ, ನಕ್ಷತ್ರ, ಮಾಸ ಋತು, ಮಾಸಾಧಿಪತಿಗಳನ್ನು ಸೃಷ್ಟಿಸಿ, ಕಾಲಗಣನೆ ಆರಂಭಿಸಿದೆನೆಂದು ಪುರಾಣಗಳು ತಿಳಿಸುತ್ತವೆ. ಹಾಗೂ ರಾಮನು ರಾವಣನನ್ನು ಸಂಹರಿಸಿ, ವಿಜಯಿಯಾಗಿ ಹಿಂದಿರುಗಿ ಅಯೋಧ್ಯೆಯಲ್ಲಿ ರಾಮನು ಪಟ್ಟಾಭಿಷೇಕವಾದ ದಿನವೆಂದು ಹೇಳಲಾಗುತ್ತಿದೆ. ಸೂರ್ಯನ ಮೊದಲ ಕಿರಣ ಭುವಿಯನ್ನು ಸ್ಪರ್ಶಿಸಿದ ಕ್ಷಣವೆಂತಲೂ , ಮಹಾವಿಷ್ಣು ಮತ್ಸ್ಯಾವತಾರ ತಾಳಿದ ದಿನವೆಂತಲೂ, ಶ್ರೀರಾಮನು ವಾಲಿಯನ್ನು ವಽಸಿದ ದಿನವೆಂದೂ, ಶಾಲಿವಾಹನ ಶಕೆ ಆರಂಭಗೊಂಡ ದಿನವೆಂತಲೂ ಇತಿಹಾಸ ಮತ್ತು ಪುರಾಣಗಳಲ್ಲಿ ಉಲ್ಲೇಖಗಳಿವೆ.
ಇದನ್ನೂ ಓದಿ: Ugadi Festival: ಬೆಲೆ ಏರಿಕೆಯ ನಡುವೆಯೂ ಯುಗಾದಿ ಸಂಭ್ರಮಕ್ಕೆ ಖರೀದಿ ಜೋರು
ಹನ್ನೆರಡನೇ ಶತಮಾನದ ಭಾಸ್ಕರಾಚಾರ್ಯರು, ಖಗೋಳ ಶಾಸದ ಲೆಕ್ಕಾಚಾರಗಳನ್ನು ಯುಗಾದಿಯ ದಿನದಿಂದೇ ಆರಂಭಿಸಿದನಂತೆ, ಹೀಗೆ ಹತ್ತು, ಹಲವು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡು ಯುಗಾದಿ ಹಬ್ಬವನ್ನು ಸಂಭ್ರಮ ಸಡಗರ ದೊಂದಿಗೆ ಚಂದ್ರಮಾನ ಯುಗಾದಿಯೆಂದು ಆಚರಿಸಲಾಗುತ್ತಿದೆ.
ಸಂಭ್ರಮದ ತಳಿರು ತೋರಣ: ಯುಗಾದಿ ಹಬ್ಬವು ಮನುಷ್ಯನಿಗೆ ಅಷ್ಟೇ ಹೊಸ ವರ್ಷ ಅಲ್ಲ, ಪ್ರಕೃತಿಗೂ ಕೂಡ, ಪ್ರಕೃತಿ ಹಳೆಯ ಪೊರೆಗಳನ್ನು ಕಳಚಿ ಹೊಸತನದ ಚಿಗುರಿ ನೊಂದಿಗೆ ಕಂಗೊಳಿಸುತ್ತದೆ. ಈ ಸಂದರ್ಭದಲ್ಲಿ ಗಿಡ ಮರ ಲತೆಗಳೆಲ್ಲ, ಚಿಗುರೊಡೆದು, ಇಡೀ ಭೂಮಿಗೆ ಹಸಿರು ತೋರಣ ಕಟ್ಟಿದಂತೆ ಕಾಣುತ್ತದೆ. ಅದೇ ರೀತಿ ಮನೆಗಳಿಗೆ, ಮಾವು ಮತ್ತು ಬೇವಿನ ತೋರಣಗಳನ್ನು ಕಟ್ಟಿ, ಚಿತ್ತ ಚಿತ್ತಾರದ ರಂಗೋಲಿಗಳನ್ನು ಹಾಕಿ ಸಂಭ್ರಮಪಡುತ್ತಾ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತೇವೆ.
ಬೇವು ಬೆಲ್ಲದ ಮಹತ್ವ: ಯುಗಾದಿ ಹಬ್ಬದಲ್ಲಿ ವಿಶೇಷವಾಗಿ ಬೇವು ಬೆಲ್ಲವನ್ನು ಹಂಚಿ ಹಿರಿಯರಿಂದ, ಆಶೀರ್ವಾದ ಪಡೆದುಕೊಳ್ಳುತ್ತಾರೆ. ಬೇವು ಬೆಲ್ಲ, ಮನುಷ್ಯನ ಜೀವನದ ಸುಖ-ದುಃಖ, ನೋವು ನಲಿವುಗಳ, ಸಂಕೇತವಾಗಿದೆ. ಶ್ರೀಕೃಷ್ಣ ಪರಮಾತ್ಮನೇ ಹೇಳುವಂತೆ ಸುಖ-ದುಃಖಗಳ ಸಮರಸವೇ ಜೀವನ, ದ್ವೇಷವನ್ನು ಮೆಟ್ಟಿ ಪ್ರೀತಿಯನ್ನು ಬೆಳೆಸಬೇಕು.
ಭೂತಕಾಲದ ಕಹಿ ಅನುಭವವನ್ನು ಮರೆತು, ಭವಿಷ್ಯದ ಸಿಹಿ ಅನುಭವಕ್ಕೆ ನಾಂದಿಯಾಗ ಬೇಕು ಎಂದು ಹೇಳಿದ್ದಾನೆ. ಬೇವು ಅದರಕ್ಕೆ ಕಹಿ, ಉದರಕ್ಕೆ ಸಿಹಿ ಬೇವಿನ ಕಹಿ ಅನುಭವಿಸಿ ದವರಿಗೆ, ಸಿಹಿಯ ಮಹತ್ವ ತಿಳಿದಿರುತ್ತದೆ, ಜೀವನದಲ್ಲಿ ಎಂದಿಗೂ ಬರೀ ಸುಖವಾಗಲಿ, ಇಲ್ಲವೇ ದುಃಖವಾಗಲಿ ಬರುವುದಿಲ್ಲ. ಸುಖ ದುಃಖಗಳು ಒಂದು ನಾಣ್ಯದ ಎರಡು ಮುಖ ಗಳಂತೆ, ಜೀವನ ಇವೆರಡುಗಳ ಸಮ್ಮಿಶ್ರಣದಿಂದ ಕೂಡಿರುತ್ತದೆ.
ಕೆ.ಎಸ್.ನರಸಿಂಹಸ್ವಾಮಿ ಅವರ ಕವನದಂತೆ,
ಮಾವು ನಾವು ಬೇವು ನಾವು
ನೋವು ನಲಿವು ನಮ್ಮವು
ಹೂವು ನಾವು ಹಸಿರು ನಾವು
ಬೇವು ಬೆಲ್ಲ ನಮ್ಮವು
ಹೊಸತು ವರುಷ ಹೊಸತು ಹರುಷ
ಹೊಸತು ಬಯಕೆ ನಮ್ಮವು
ಹೆಜ್ಜೆಗೊಂದು ಹೊಸ ಯುಗಾದಿ
ಚೆಲುವು ನಮ್ಮ ಜೀವನ
ಎನ್ನುವಂತೆ ಬೇವು ಬೆಲ್ಲ ನೋವು ನಲಿವಿನ, ಸಂಕೇತವೆಂದು ತಿಳಿಸುತ್ತ ಎಲ್ಲವನ್ನೂ ನಗುನಗುತ ಸ್ವೀಕರಿಸಿ ಬಾಳಬೇಕೆಂದು ತಿಳಿಸಿದ್ದಾರೆ.
ಅಭ್ಯಂಜನ ಸ್ನಾನ: ಯುಗಾದಿಯು ಹೊಸ ವರ್ಷದ ಹಬ್ಬವಾಗಿದ್ದು, ಪ್ರತಿಯೊಬ್ಬರೂ ಕೂಡ, ಆ ದಿನದಂದು ಮೈಯೆಲ್ಲ ಎಣ್ಣೆಯನ್ನು ಹಚ್ಚಿಕೊಂಡು, ಬಿಸಿ ನೀರಿಗೆ ಬೇವಿನ ಎಲೆಗಳ ಮಿಶ್ರಣವನ್ನು ಮಾಡಿ ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ಕೊಳ್ಳುತ್ತಾರೆ. ಇದರ ಹಿಂದೆ ವೈಜ್ಞಾನಿಕ ಮಹತ್ವ ಅಡಗಿದೆ. ಏಕೆಂದರೆ ಬೇಸಿಗೆಕಾಲ ಆರಂಭ ವಾಗುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಆದ್ದರಿಂದ ದೇಹಕ್ಕೆ ತಂಪು ನೀಡಲು ಮತ್ತು ಅಂಗಾಂಗಗಳು ಚಲನಶೀಲಗೊಳ್ಳಲು ಎಣ್ಣೆ ಸ್ನಾನ ಸಹಾಯ ಮಾಡುತ್ತದೆ.
ಸಾಂಸ್ಕೃತಿಕ ಮಹತ್ವ: ಯುಗಾದಿ ಕೇವಲ ಹಬ್ಬವಲ್ಲ ಅದೊಂದು ಸಾಂಸ್ಕೃತಿಕ ವೈಭವ. ಭಕ್ತಿಯಿಂದ ಮನೆಯಲ್ಲಿ ಪೂಜೆಯನ್ನು ಮಾಡಿ ದೇವರ ದರ್ಶನವನ್ನು ನಡೆದು ಪುನೀತ ರಾಗುತ್ತಾರೆ. ಹೋಳಿಗೆ ಮತ್ತು ಇನ್ನಿತರ ಸಿಹಿ ಖಾಧ್ಯಗಳನ್ನು ತಿಂದು ಸಂಭ್ರಮಿಸುತ್ತಾರೆ. ನಮ್ಮ ಎಲ್ಲಾ ಆಚರಣೆಗಳು ಕೇವಲ ಆಚರಣೆಗಳಾಗದೆ, ನಮ್ಮ ಸಂಸ್ಕೃತಿಯನ್ನು ಮತ್ತು ಸನಾತನ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಹಬ್ಬಗಳು ಸಹಾಯ ಮಾಡುತ್ತವೆ. ಯುಗಾದಿ ಹಬ್ಬದಂದು ಚಂದ್ರನನ್ನು ನೋಡುವುದರ ಮೂಲಕ ಹೊಸ ದಿನ, ಹೊಸ ಸಂಕಲ್ಪದೊಂದಿಗೆ ಹೊಸ ವರ್ಷದ ಆರಂಭಕ್ಕೆ ಮುನ್ನುಡಿ ಸಿಗುತ್ತದೆ, ಇದು ಭಾರತೀಯ ಸಂಸ್ಕೃತಿಯ ಅನಾವರಣವೂ ಹೌದು.
ಪ್ರಾದೇಶಿಕ ವೈವಿಧ್ಯತೆ: ಯುಗಾದಿ ಹಬ್ಬವನ್ನು ಭಾರತ ದೇಶದಲ್ಲಿ ವಿವಿಧ ಹೆಸರು ಗಳೊಂದಿಗೆ ಆಚರಿಸಲಾಗುತ್ತದೆ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಗುಡಿಪಾಡ್ವ ಎಂತಲೂ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಯುಗಾದಿಯಂತಲೂ, ತಮಿಳು ನಾಡಿನಲ್ಲಿ ಪುತುಂಡು, ಪಂಜಾಬಿನಲ್ಲಿ ವೈಶಾಕಿ ಎಂದು, ಒರಿಸ್ಸಾದಲ್ಲಿ ಪಣ ಸಂಕ್ರಾಂತಿ ಯೆಂದು ಆಚರಿಸಲಾಗುತ್ತಿದೆ. ಈ ಹಬ್ಬಗಳು ಹೊಸ ಸಂವತ್ಸರದ ಆರಂಭವನ್ನು ಸೂಚಿಸಿ ಜನರಿಗೆ ನೆಮ್ಮದಿ ಮತ್ತು ಸಮೃದ್ಧಿಯನ್ನು ನೀಡುವ ಸಂಕೇತವಾಗಿ ಆಚರಿಸಲ್ಪಡು ತ್ತವೆ.
ಆಯಾ ಪ್ರಾದೇಶಿಕ ಅನುಸಾರವಾಗಿ ಸಿಹಿ ಖಾದ್ಯಗಳನ್ನು ಮಾಡಿ,ಸಂಭ್ರಮ ಸಡಗರೊಂದಿಗೆ ಆಚರಿಸಲಾಗುತ್ತದೆ. ಕುವೆಂಪುರವರ ವಾಣಿಯಂತೆ ಜೀವನವೆಲ್ಲ ಬೇವು ಬೆಲ್ಲ, ಬಲ್ಲವರೆಲ್ಲ ಬಲ್ಲಿದರಲ್ಲ, ಕಷ್ಟ, ಸುಖ, ಸಿಹಿ ಕಹಿ ಸಮವೆಲ್ಲ ಎಂಬಂತೆ... ಯುಗಾದಿ ಹಬ್ಬವು ಹೊಸ ಚೈತನ್ಯದೊಂದಿಗೆ ಕಷ್ಟಸುಖಗಳನ್ನು ಸಮನಾಗಿ ಸ್ವೀಕರಿಸಿ ಉತ್ತಮ ಬದುಕಿನ ಮಾರ್ಗ ವನ್ನು ನೀಡುತ್ತದೆ.
ಬೇಂದ್ರೆಯವರ ಕವನದಂತೆ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರ್ಷಕ್ಕೆ ಹೊಸ ಹರುಷವನ್ನು ತರುತಿದೆ, ವರುಷಕ್ಕೊಂದು ಹೊಸತು ಜನ್ಮ, ಹರುಷ ಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ, ಒಂದೇ ಒಂದು ಜನ್ಮದಲ್ಲಿ, ಒಂದೇ ಬಾಲ್ಯ, ಒಂದೇ ಹರೆಯು, ನಮಗದಷ್ಟೇ ಎತಕೊ ಎನ್ನುವಂತೆ ಯುಗಾದಿಯ ಹೊಸ ವರುಷ, ಭೂತಕಾಲದ ಕಹಿ ಘಟನೆಗಳನ್ನೆಲ್ಲ ಮರೆಸಿ ಹೊಸ ಹರುಷದೊಂದಿಗೆ ಜೀವನ ಆರಂಭವಾಗಲಿ.
ಎಲ್ಲರ ಬದುಕಿನಲ್ಲಿ ಹೊಸ ಬಾಳಿನ ಮನ್ವಂತರ ಉದಯವಾಗಲಿ, ನಮ್ಮ ಜೀವನದ ಪಯಣದ ಪ್ರತಿ ಹೆಜ್ಜೆಗೂ ಹೊಸ ಅಧ್ಯಾಯ ತೆರೆದುಕೊಳ್ಳಲಿ ಎಂಬುದೇ ನಮ್ಮ ಆಶಯ ವಾಗಿದೆ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.