Dr N Someshwara Column: ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...
ಐನ್'ಸ್ಟೀನರ ಮಿದುಳನ್ನು ಒಡಲಿನಿಂದ ಪ್ರತ್ಯೇಕಿಸಿದರು. ಅದನ್ನು 240 ಚೂರುಗಳನ್ನಾಗಿ ಕತ್ತರಿಸಿದರು. ಗಾಜಿನ ಸೀಸೆಗಳಲ್ಲಿ ಸಂರಕ್ಷಕ ದ್ರಾವಣವನ್ನು ತುಂಬಿ ಅದರಲ್ಲಿ ಈ ಚೂರು ಗಳನ್ನು ಇರಿಸಿದರು. ನಂತರ ಆ ಗಾಜಿನ ಸೀಸೆಗಳನ್ನು ತಮ್ಮ ಮನೆಗೆ ಕೊಂಡೊಯ್ದು ಬಹಳ ಜತನದಿಂದ ಕಾಪಾಡಲಾರಂಭಿಸಿದರು.
-
ಹಿಂದಿರುಗಿ ನೋಡಿದಾಗ
1955ರ ಏಪ್ರಿಲ್ 18. ಬೆಳಗಿನ ಜಾವ 1.15. ನ್ಯೂಜರ್ಸಿಯ ಪ್ರಿನ್ಸ್‌ಟನ್ ಆಸ್ಪತ್ರೆ. ಮನುಕುಲ ಕಂಡ ಅತ್ಯಂತ ಪ್ರತಿಭಾವಂತರಲ್ಲಿ ಒಬ್ಬರಾಗಿದ್ದ ಆಲ್ಬರ್ಟ್ ಐನ್‌ಸ್ಟೀನ್ ಅವರು ಮರಣಿಸಿ ದರು. ಆಗ ಅವರಿಗೆ 76 ವರ್ಷಗಳಾಗಿದ್ದವು. ಪ್ರಿನ್ಸ್‌ಟನ್ ಆಸ್ಪತ್ರೆಯ ರೋಗಶಾಸ್ತ್ರಜ್ಞರಾಗಿದ್ದ ಡಾ.ಥಾಮಸ್ ಹಾರ್ವೆ ಅವರು ಕೂಡಲೇ ಐನ್'ಸ್ಟೀನರ ಶವ ವಿಚ್ಛೇದನವನ್ನು ಮಾಡಿದರು.
ಐನ್'ಸ್ಟೀನರ ಮಿದುಳನ್ನು ಒಡಲಿನಿಂದ ಪ್ರತ್ಯೇಕಿಸಿದರು. ಅದನ್ನು 240 ಚೂರುಗಳನ್ನಾಗಿ ಕತ್ತರಿಸಿದರು. ಗಾಜಿನ ಸೀಸೆಗಳಲ್ಲಿ ಸಂರಕ್ಷಕ ದ್ರಾವಣ ವನ್ನು ತುಂಬಿ ಅದರಲ್ಲಿ ಈ ಚೂರು ಗಳನ್ನು ಇರಿಸಿದರು. ನಂತರ ಆ ಗಾಜಿನ ಸೀಸೆಗಳನ್ನು ತಮ್ಮ ಮನೆಗೆ ಕೊಂಡೊಯ್ದು ಬಹಳ ಜತನದಿಂದ ಕಾಪಾಡಲಾರಂಭಿಸಿದರು. ತಮ್ಮ ಮರಣದ ನಂತರ, ತಮ್ಮ ಮಿದುಳ ನ್ನು ಅಧ್ಯಯನಕ್ಕಾಗಿ ಪ್ರತ್ಯೇಕಿಸಿ, ನಂತರ ಶವಸಂಸ್ಕಾರವನ್ನು ಮಾಡಬೇಕೆಂದು ಐನ್ ಸ್ಟೀನ್ ಅವರು ಮೊದಲೇ ಹೇಳಿದ್ದರು. ಅವರ ಆಸೆ ನೆರವೇರಿತ್ತು.
ಆಲ್ಬರ್ಟ್ ಐನ್‌ಸ್ಟೀನ್ ಅವರು 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಭೌತವಿಜ್ಞಾನಿ ಎನ್ನುವುದರಲ್ಲಿ ಅನುಮಾನವಿಲ್ಲ. ಅವರ ಸಂಶೋಧನೆಗಳು ಬಾಹ್ಯಾಕಾಶ, ಸಮಯ, ಗುರುತ್ವಾಕರ್ಷಣೆ ಮತ್ತು ದ್ರವ್ಯದ ಬಗೆಗಿನ ನಮ್ಮ ತಿಳಿವಳಿಕೆಯನ್ನು ಸಂಪೂರ್ಣವಾಗಿ ಬದಲಿಸಿದವು. ವಿಜ್ಞಾನಕ್ಕೆ ಅವರ ಪ್ರಮುಖ ಕೊಡುಗೆಗಳನ್ನು ಈ ಕೆಳಗಿನಂತೆ ವರ್ಗೀಕರಿಸ ಬಹುದು: ವಿಶೇಷ ಸಾಪೇಕ್ಷತಾ ಸಿದ್ಧಾಂತ (ಥಿಯರಿ ಆಫ್ ಸ್ಪೆಷಲ್ ರಿಲೆಟಿವಿಟಿ-1905): ಐನ್‌ಸ್ಟೀನ್ʼಗಿಂತ ಮೊದಲು, ‘ಸ್ಥಳ’ ಮತ್ತು ‘ಸಮಯ’ವು ಸಂಪೂರ್ಣವೆಂದು ಭಾವಿಸ ಲಾಗಿತ್ತು.
ಇದನ್ನೂ ಓದಿ: Dr N Someshwara Column: ವೈದ್ಯಕೀಯ ಜಗತ್ತಿನ ಮಹಾನ್ ದುರಂತ: ಈಥರ್ ವಾರ್ !
ವೇಗವರ್ಧನೆಯಲ್ಲಿ ತೊಡಗದ ಎಲ್ಲಾ ವೀಕ್ಷಕರಿಗೆ ಭೌತಶಾಸ್ತ್ರದ ನಿಯಮಗಳು ಒಂದೇ ಆಗಿರುತ್ತವೆ ಮತ್ತು ವೀಕ್ಷಕನು ಪ್ರಯಾಣಿಸುವ ವೇಗವನ್ನು ಲೆಕ್ಕಿಸದೆ ನಿರ್ವಾತದಲ್ಲಿ ಬೆಳಕಿನ ವೇಗವು ಸ್ಥಿರವಾಗಿರುತ್ತದೆ ಎಂದು ಐನ್‌ಸ್ಟೀನ್ ಪ್ರಸ್ತಾಪಿಸಿದರು.
ಸಮಯ ಹಿಗ್ಗುವಿಕೆ (ಟೈಮ್ ಡಯಲೇಶನ್): ಸ್ಥಿರ ವೀಕ್ಷಕನಿಗೆ ಹೋಲಿಸಿದರೆ ಚಲನೆ ಯಲ್ಲಿರುವ ವಸ್ತುವಿಗೆ ಸಮಯ ನಿಧಾನವಾಗಿ ಚಲಿಸುತ್ತದೆ ಎಂದು ಅವರು ಸಾಬೀತು ಪಡಿಸಿದರು. ದ್ರವ್ಯರಾಶಿ-ಶಕ್ತಿ ಸಮಾನತೆ (ಮಾಸ್ ಎನರ್ಜಿ ಈಕ್ವಿಲೆನ್ಸ್): ಇದು ಉ = ಞ್ಚ೨ ಎಂಬ ವಿಶ್ವದ ಅತ್ಯಂತ ಪ್ರಸಿದ್ಧ ಸಮೀಕರಣಕ್ಕೆ ಕಾರಣವಾಯಿತು.
ಶಕ್ತಿ (ಇ) ಮತ್ತು ದ್ರವ್ಯರಾಶಿಯನ್ನು (ಎಂ) ಪರಸ್ಪರ ಬದಲಾಯಿಸಬಹುದು ಎಂದು ಇದು ವಿವರಿಸುತ್ತದೆ. ಇದು ಪರಮಾಣು ಶಕ್ತಿಯ ಮೂಲಾಧಾರವಾಗಿದೆ.
ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ಥಿಯರಿ ಆಫ್ ರಿಲೆಟಿವಿಟಿ- 1915): ಐನ್ʼಸ್ಟೀನ್ ಅವರು ಗುರುತ್ವಾಕರ್ಷಣೆಯ ಬಗ್ಗೆ ಹೊಸ ವ್ಯಾಖ್ಯಾನ ನೀಡಿದರು. ಗುರುತ್ವಾಕರ್ಷಣೆಯು ಕೇವಲ ಒಂದು ‘ಸೆಳೆತ’ ಅಥವಾ ‘ಬಲ’ ವಲ್ಲ, ಅದು ದ್ರವ್ಯರಾಶಿ ಯಿಂದಾಗಿ ಬಾಹ್ಯಾಕಾಶ-ಸಮಯದ ವಕ್ರತೆಯಾಗಿದೆ (ಸ್ಪೇಸ್-ಟೈಮ್ ಕರ್ವೇಚರ್) ಎಂದು ಹೇಳಿದರು.
ಉದಾಹರಣೆ: ಒಂದು ಟ್ರ್ಯಾಂಪೊಲಿನ್ ಮೇಲೆ ಭಾರವಾದ ಚೆಂಡನ್ನು ಇಟ್ಟಾಗ ಅದು ಹೇಗೆ ತಗ್ಗುತ್ತದೋ, ಹಾಗೆಯೇ ಗ್ರಹಗಳು ಮತ್ತು ನಕ್ಷತ್ರಗಳು ತಮ್ಮ ಸುತ್ತಲಿನ ಬಾಹ್ಯಾಕಾಶವನ್ನು ಬಾಗಿಸುತ್ತವೆ.
ಮುನ್ಸೂಚನೆಗಳು: ಈ ಸಿದ್ಧಾಂತವು ಕಪ್ಪು ಕುಳಿಗಳು (ಬ್ಲಾಕ್ ಹೋಲ್ಸ್) ಮತ್ತು ವಿಶ್ವದ ವಿಸ್ತರಣೆಯ ಬಗ್ಗೆ ಮೊದಲೇ ಸುಳಿವು ನೀಡಿತ್ತು.
ದ್ಯುತಿವಿದ್ಯುತ್ ಪರಿಣಾಮ (ಫೋಟೋ ಇಲೆಕ್ಟ್ರಿಕ್ ಇಫೆಕ್ಟ್): ಸಾಪೇಕ್ಷತಾ ಸಿದ್ಧಾಂತ ದಿಂದ ಐನ್‌ಸ್ಟೀನ್ ಪ್ರಸಿದ್ಧರಾಗಿದ್ದರೂ, ಅವರಿಗೆ 1921ರಲ್ಲಿ ನೋಬೆಲ್ ಪ್ರಶಸ್ತಿ ಬಂದಿದ್ದು ಈ ದ್ಯುತಿವಿದ್ಯುತ್ ಪರಿಣಾಮದ ವಿವರಣೆಗಾಗಿ.
ಕ್ವಾಂಟಮ್ ಸಿದ್ಧಾಂತ: ಬೆಳಕು ಕೇವಲ ಅಲೆಯಲ್ಲ, ಅದು ‘ಫೋಟಾನ್’ ಎಂಬ ಸಣ್ಣ ಶಕ್ತಿಯ ಪೊಟ್ಟಣಗಳ ರೂಪದಲ್ಲಿದೆ ಎಂದು ಅವರು ವಿವರಿಸಿದರು.
ಪರಿಣಾಮ: ಇಂದಿನ ಸೋಲಾರ್ ಪ್ಯಾನಲ್ʼಗಳು, ಡಿಜಿಟಲ್ ಕ್ಯಾಮೆರಾಗಳು ಮತ್ತು ಫೈಬರ್ ಆಪ್ಟಿಕ್ಸ್ ತಂತ್ರಜ್ಞಾನಕ್ಕೆ ಈ ಆವಿಷ್ಕಾರವೇ ಮೂಲ.
ಬ್ರೌನಿಯನ್ ಚಲನೆ (ಬ್ರೌನಿಯನ್ ಮೋಶನ್): 1905ರಲ್ಲಿ ಐನ್‌ಸ್ಟೀನ್ ಅವರು ದ್ರವ ದಲ್ಲಿ ತೇಲುವ ಕಣಗಳ ಯಾದೃಚ್ಛಿಕ ಚಲನೆಯನ್ನು ಗಣಿತದ ಮೂಲಕ ವಿವರಿಸಿದರು.
ಮಹತ್ವ: ಅಣುಗಳು ಮತ್ತು ಪರಮಾಣುಗಳು (ಆಟಮ್ಸ್ ಆಂಡ್ ಮಾಲೆಕ್ಯೂಲ್ಸ್) ನಿಜವಾಗಿಯೂ ಅಸ್ತಿತ್ವದಲ್ಲಿವೆ ಎಂಬುದಕ್ಕೆ ಇದು ಮೊದಲ ಭೌತಿಕ ಪುರಾವೆಯನ್ನು ನೀಡಿತು.
ಬೋಸ್-ಐನ್‌ಸ್ಟೀನ್ ಕಂಡನ್ಸೇಟ್: 1920ರ ದಶಕದಲ್ಲಿ ಭಾರತೀಯ ವಿಜ್ಞಾನಿ ಸತ್ಯೇಂದ್ರ ನಾಥ್ ಬೋಸ್ ಅವರೊಂದಿಗೆ ಸೇರಿ ಐನ್ʼಸ್ಟೀನ್ ಅವರು ದ್ರವ್ಯದ ಹೊಸ ಸ್ಥಿತಿಯನ್ನು ಮುನ್ಸೂಚಿಸಿದರು. ಪರಮಶೂನ್ಯ ತಾಪಮಾನದ ಹತ್ತಿರ ಪರಮಾಣುಗಳು ಒಂದೇ ‘ಸೂಪರ್-ಆಟಮ್’ ರೀತಿ ವರ್ತಿಸುತ್ತವೆ ಎಂದು ಇದು ಹೇಳುತ್ತದೆ. ಇದನ್ನು 1995ರಲ್ಲಿ ಪ್ರಾಯೋಗಿಕವಾಗಿ ಸಾಬೀತುಪಡಿಸಲಾಯಿತು.
ಪ್ರಭಾವದ ಸಾರಾಂಶ: ಐನ್‌ಸ್ಟೀನ್ ಅವರ ಕೆಲಸವು ಭೌತಶಾಸ್ತ್ರವನ್ನು ಐಸಾಕ್ ನ್ಯೂಟನ್ ಅವರ ‘ಸಾಂಪ್ರದಾಯಿಕ’ ಯುಗದಿಂದ ‘ಆಧುನಿಕ’ ಯುಗಕ್ಕೆ ಕೊಂಡೊಯ್ದಿತು. ಇಂದು ನಾವು ಬಳಸುವ ಜಿಪಿಎಸ್ ತಂತ್ರಜ್ಞಾನ, ಲೇಸರ್ ಮತ್ತು ವಿಶ್ವದ ಉಗಮದ ಬಗ್ಗೆ ನಮಗಿರುವ ತಿಳಿವಳಿಕೆ- ಇವೆಲ್ಲಕ್ಕೂ ಐನ್‌ಸ್ಟೀನ್ ಅವರ ಸಿದ್ಧಾಂತಗಳೇ ಕಾರಣ.
ವಿತರಣೆ: ಡಾ.ಥಾಮಸ್ ಹಾರ್ವೆ ಅವರು ತಮ್ಮಲ್ಲಿದ್ದ ಐನ್‌ಸ್ಟೀನರ ಮಿದುಳನ್ನು ಹಲವು ತಜ್ಞರಿಗೆ ಹಂಚಿದರು. ಅಂಥವರಲ್ಲಿ ಡಾ.ಮರಿಯನ್ ಡೈಮಂಡ್, ಡಾ.ಬ್ರಿಟ್ ಆಂಡರ್ಸನ್, ಡಾ.ಸಾಂಡ್ರ ವಿಟೆಲ್‌ಸನ್ ಮುಖ್ಯರಾಗಿದ್ದರು. ಡಾ.ಥಾಮಸ್ ಹಾರ್ವೆ ತಮ್ಮ ವೃತ್ತಿಯ ಭಾಗವಾಗಿ ನಾಡಿನಾದ್ಯಂತ ಸಂಚರಿಸಿದರು. ಅವರು ಹೋದ ಕಡೆಯಲ್ಲೆಲ್ಲ ಐನ್‌ಸ್ಟೀನರ ಮಿದುಳು ಚೂರುಗಳನ್ನು ತಮ್ಮೊಡನೆ ಕೊಂಡೊಯ್ದರು. ಕೊನೆಗೆ 1996ರಲ್ಲಿ ತಮ್ಮಲ್ಲಿದ್ದ ಎಲ್ಲಾ ಚೂರುಗಳನ್ನು ಪ್ರಿನ್ಸ್‌ಟನ್ ಆಸ್ಪತ್ರೆಯ ಮುಖ್ಯ ರೋಗಶಾಸ್ತ್ರಜ್ಞರಾಗಿದ್ದ ಡಾ. ಇಲಿಯಟ್ ಕ್ರಾಸ್ ಅವರಿಗೆ ಒಪ್ಪಿಸಿದರು.
ಆಲ್ಬರ್ಟ್ ಐನ್‌ಸ್ಟೀನ್ ಅಂತಿಂಥ ವ್ಯಕ್ತಿಯಲ್ಲ. ಆತ ಈ ಸಹಸ್ರಮಾನದ ಅತ್ಯಂತ ಪ್ರತಿಭಾ ವಂತ ಮಾನವ. ಭೌತಶಾಸ್ತ್ರಕ್ಕೆ ಅವರು ನೀಡಿದ ತಿರುವು, ಮನುಕುಲದ ವಿಚಾರ ಧಾರೆಯ ದಿಕ್ಕನ್ನೇ ಬದಲಿಸಿದೆ. ಇಂಥ ಪ್ರತಿಭಾವಂತರ ಮಿದುಳು ಹೇಗಿದ್ದಿರಬಹುದು? ಜನಸಾಮಾನ್ಯ ರ ಮಿದುಳಿನಲ್ಲಿ ಇರದ ಯಾವ ವಿಶೇಷ ಗುಣ ಐನ್‌ಸ್ಟೀನ್ ಮಿದುಳಿನಲ್ಲಿ ಇತ್ತು? ಈ ಕುತೂಹಲ ಜನಸಾಮಾನ್ಯರಿಗೆ ಮಾತ್ರವಲ್ಲ ವಿಜ್ಞಾನಿಗಳಿಗೂ ಇರುತ್ತದೆ. ಬಹುಶಃ ಸ್ವಯಂ ಐನ್‌ಸ್ಟೀನ್ ಅವರಿಗೂ ಇದ್ದಿರಬೇಕು. ಹಾಗಾಗಿಯೇ ತಮ್ಮ ಮರಣಾ ನಂತರ ತಮ್ಮ ಮಿದುಳಿನ ವಿಶೇಷತೆಯ ಬಗ್ಗೆ ಜಗತ್ತು ತಿಳಿಯಲಿ ಎಂಬ ಆಸೆಯಿಂದ ತಮ್ಮ ಮಿದುಳಿನ ಅಧ್ಯಯನಕ್ಕೆ ಅನುಮತಿಯನ್ನು ನೀಡಿದ್ದರು.
ಮಿದುಳು-ಪ್ರಾಥಮಿಕ ಪರಿಚಯ: ನಮ್ಮ ಮಿದುಳು ಸುಮಾರು 1300-1400 ಗ್ರಾಂ ತೂಗು ತ್ತದೆ. 140 ಮಿ.ಮೀ. ಅಗಲ, 167 ಮಿ.ಮೀ. ಉದ್ದ ಹಾಗೂ 93 ಮಿ.ಮೀ ಎತ್ತರ ವಿರುತ್ತದೆ. ನಮ್ಮ ಮಿದುಳಿನ ರಚನೆಯಲ್ಲಿ ಎರಡು ರೀತಿಯ ಜೀವಕೋಶಗಳು ಪಾಲ್ಗೊಳ್ಳು ತ್ತವೆ.
‘ನರಕೋಶ’ಗಳು (ನರ್ವ್ ಸೆಲ್ಸ್) ಹಾಗೂ ಎರಡನೆಯದು ‘ನರಪೋಷಕ’ ಕೋಶಗಳು (ಗ್ಲಿಯಲ್ ಸೆಲ್ಸ್). ನರಕೋಶಗಳು ಮಿದುಳಿನ ಮೂಲಕೋಶಗಳು. ಮಾಹಿತಿ ಜನನ, ರವಾನೆ, ಸ್ವೀಕರಣ ಎಲ್ಲವೂ ಇಲ್ಲಿ ನಡೆಯುತ್ತದೆ. ನರಪೋಷಕ ಕೋಶಗಳು, ಹೆಸರೇ ಸೂಚಿಸುವ ಹಾಗೆ ನರಕೋಶಗಳ ಬದುಕು, ಚಟುವಟಿಕೆ ಹಾಗೂ ಬೆಳವಣಿಗೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಹಾಗೂ ರಕ್ಷಣೆಯನ್ನು ಒದಗಿಸುತ್ತವೆ.
ಮನುಷ್ಯ ನಡೆಸುವ ಎಲ್ಲ ಕೆಲಸಕಾರ್ಯಗಳಿಗೆ, ಆಚಾರ-ವಿಚಾರಗಳಿಗೆ, ಭಾವನೆಗಳಿಗೆ ಹಾಗೂ ಅವನ ವ್ಯಕ್ತಿತ್ವಕ್ಕೆ ಈ ಎರಡು ಕೋಶಗಳೇ ಕಾರಣ. ಈ ಎರಡು ಕೋಶಗಳೇ ರಾಮ- ರಾವಣರನ್ನು ರೂಪಿಸುತ್ತವೆ.
ಒಂದು ನರಕೋಶವು ಸುಮಾರು 1000- 10000 ನರಕೋಶಗಳ ಜತೆಯಲ್ಲಿ ಸಂಪರ್ಕವನ್ನು ಸ್ಥಾಪಿಸಬಲ್ಲವು. ಅಂದರೆ ನಮ್ಮ ಮಿದುಳಿನಲ್ಲಿರುವ 86 ಬಿಲಿಯನ್ ನರಕೋಶಗಳು ಎಷ್ಟು ನರಸಂಪರ್ಕಗಳನ್ನು ರೂಪಿಸಬಲ್ಲವು ಎನ್ನುವುದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ. ಮಿದುಳಿನ ಪ್ರತಿಯೊಂದು ಭಾಗವೂ ಈ ಸಂಪರ್ಕ ಜಾಲದಲ್ಲಿ ಒಳಗೊಳ್ಳುತ್ತವೆ.
ಹಾಗಾಗಿ ನಮ್ಮ ಆಲೋಚನೆ, ಸ್ಮರಣೆ, ಮರೆವು ಎಲ್ಲವೂ ಈ ಸಂಪರ್ಕ ಜಾಲದಲ್ಲಿಯೇ ಇರುತ್ತವೆ. ನಮ್ಮ ಮಿದುಳಿನ ಪ್ರಧಾನ ಭಾಗವನ್ನು ‘ಮಹಾ ಮಿದುಳು’ ಅಥವಾ ‘ಸೆರೆಬ್ರಮ್’ ಎಂದು ಕರೆಯುತ್ತೇವೆ. ನಮ್ಮ ಅಧ್ಯಯನಾನುಕೂಲಕ್ಕಾಗಿ, ಇದರಲ್ಲಿ ನಾಲ್ಕು ರೀತಿಯ ಕಾರ್ಯವಲಯಗಳಿರುವುದನ್ನು ಗುರುತಿಸಿದ್ದೇವೆ. ಅವುಗಳಿಗೆ ಲಲಾಟ ಹಾಲೆ (ಫ್ರಾಂಟಲ್ ಲೋಬ್), ಪ್ರಾಕಾರ ಹಾಲೆ (ಪೆರೈಟಲ್ ಲೋಬ್), ಕಪೋಲ ಹಾಲೆ (ಟೆಂಪೊರಲ್ ಲೋಬ್) ಮತ್ತು ಶಿರಪೃಷ್ಠ ಹಾಲೆ (ಆಕ್ಸಿಪಿಟಲ್ ಲೋಬ್) ಎಂದು ನಾಮಕರಣವನ್ನು ಮಾಡಿದ್ದೇವೆ.
ಮಿದುಳಿನಲ್ಲಿ ಎರಡು ಅರೆಗೋಳಗಳಿವೆ. ಎಡ ಮತ್ತು ಬಲ. ಈ ಎರಡೂ ಅರೆಗೋಳಗಳಿಗೆ ‘ಕಾರ್ಪಸ್ ಕೆಲೋಸಮ್’ ಎಂಬ ನರಗಳ ದಿಂಡು ಪರಸ್ಪರ ಸಂಪರ್ಕವನ್ನು ಕಲ್ಪಿಸುತ್ತದೆ. ಬುದ್ಧಿವಂತಿಕೆ ಮತ್ತು ಮೇಧಾವಿತನ (ಜೀನಿಯಸ್‌ನೆಸ್): ದೃಷ್ಟಿಕೋನದಿಂದ ಮಿದುಳಿನ ನಾಲ್ಕು ಹಾಲೆಗಳ ಕಾರ್ಯಗಳನ್ನು ವಿಶ್ಲೇಷಿಸಿದರೆ, ಪ್ರತಿಯೊಂದು ಹಾಲೆಯೂ ಮಾನವನ ಉನ್ನತ ಮಟ್ಟದ ಅರಿವಿನ ಸಾಮರ್ಥ್ಯಕ್ಕೆ ಹೇಗೆ ಕೊಡುಗೆ ನೀಡುತ್ತದೆ ಎಂಬುದು ಸ್ಪಷ್ಟ ವಾಗುತ್ತದೆ. ಬುದ್ಧಿವಂತಿಕೆಯು ಕೇವಲ ಮಿದುಳಿನ ಒಂದು ಭಾಗಕ್ಕೆ ಸೀಮಿತವಾಗಿಲ್ಲ; ಇದು ಈ ನಾಲ್ಕು ಭಾಗಗಳ ನಡುವಿನ ಸಮನ್ವಯದ ಫಲಿತಾಂಶವಾಗಿದೆ.
೧ ಲಲಾಟ ಹಾಲೆ: ಕಾರ್ಯಕಾರಿ ನಿಯಂತ್ರಕ. ಇದನ್ನು ಮಿದುಳಿನ ‘ಸಿಇಒ’ ಎಂದು ಕರೆಯ ಬಹುದು. ಮೇಧಾ ವಿತನದ ಬಹುಪಾಲು ಲಕ್ಷಣಗಳು ಇಲ್ಲಿಂದಲೇ ಉದ್ಭವಿಸುತ್ತವೆ.
ಕಾರ್ಯನಿರ್ವಾಹಕ ಕಾರ್ಯಗಳು: ಯೋಜನೆ ರೂಪಿಸುವುದು, ಸಂಕೀರ್ಣ ಸಮಸ್ಯೆ ಗಳನ್ನು ಬಿಡಿಸುವುದು ಮತ್ತು ಭವಿಷ್ಯದ ಬಗ್ಗೆ ಯೋಚಿಸುವುದು.
ವರ್ಕಿಂಗ್ ಮೆಮೊರಿ: ಒಂದು ಕೆಲಸವನ್ನು ಮಾಡುವಾಗ ಅಗತ್ಯವಿರುವ ಮಾಹಿತಿಯನ್ನು ತಾತ್ಕಾಲಿಕವಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ. ಇದು ಕಲಿಕೆಗೆ ಅತಿ ಮುಖ್ಯ.
ಸೃಜನಶೀಲತೆ: ಭಿನ್ನವಾಗಿ ಯೋಚಿಸುವ ಮತ್ತು ನವೀನ ಆಲೋಚನೆಗಳನ್ನು ಹುಟ್ಟು ಹಾಕುವ ಸಾಮರ್ಥ್ಯ ಇಲ್ಲಿರುತ್ತದೆ.
ಗಮನ: ಬಾಹ್ಯ ಅಡೆತಡೆಗಳ ನಡುವೆಯೂ ಒಂದು ವಿಷಯದ ಮೇಲೆ ತೀವ್ರವಾಗಿ ಏಕಾಗ್ರತೆ ವಹಿಸುವ ಸಾಮರ್ಥ್ಯವು ಪ್ರತಿಭಾವಂತರಲ್ಲಿ ಹೆಚ್ಚಾಗಿರುತ್ತದೆ.
2 ಪ್ರಾಕಾರ ಹಾಲೆ: ಇದು ದೃಶ್ಯ- ಅವಕಾಶದ ವಾಸ್ತುಶಿಲ್ಪಿ. ಐನ್‌ಸ್ಟೀನ್ ಅವರ ಮಿದುಳಿನ ಅಧ್ಯಯನದಲ್ಲಿ ಈ ಭಾಗವು ಸಾಮಾನ್ಯರಿಗಿಂತ ದೊಡ್ಡದಾಗಿತ್ತು ಎಂಬುದು ಗಮನಾರ್ಹ.
ದೃಶ್ಯ-ಅವಕಾಶದ ಸಂಶ್ಲೇಷಣೆ: ವಸ್ತುಗಳು ಮತ್ತು ಅಂಕಿ-ಅಂಶಗಳನ್ನು ಮನಸ್ಸಿನಲ್ಲೇ ತ್ರಯಾಕೃತಿಯಲ್ಲಿ (3ಡಿ) ಕಲ್ಪಿಸಿಕೊಳ್ಳುವ ಸಾಮರ್ಥ್ಯ.
ಗಣಿತದ ತರ್ಕ: ಗಣಿತದ ಸೂತ್ರಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡಲು ಇದು ಬೇಕು.
ಸಂವೇದನಾ ಏಕೀಕರಣ: ಶಬ್ದ, ಸ್ಪರ್ಶ ಮತ್ತು ದೃಷ್ಟಿಯ ಮೂಲಕ ಬರುವ ಮಾಹಿತಿ ಯನ್ನು ಒಟ್ಟುಗೂಡಿಸಿ ಒಂದು ಅರ್ಥಪೂರ್ಣ ಚಿತ್ರಣವನ್ನು ನೀಡುತ್ತದೆ.
3 ಕಪೋಲ ಹಾಲೆ: ಜ್ಞಾನದ ಭಂಡಾರ. ಇದು ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ನೆನಪಿಟ್ಟುಕೊಳ್ಳುವ ಕೇಂದ್ರವಾಗಿದೆ.
ಭಾಷಾ ಸಾಮರ್ಥ್ಯ: ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಪದಗಳನ್ನು ಅರ್ಥವತ್ತಾಗಿ ಜೋಡಿಸುವುದು. ಉತ್ತಮ ಬರಹಗಾರರು ಮತ್ತು ವಾಗ್ಮಿಗಳಲ್ಲಿ ಈ ಭಾಗ ಸಕ್ರಿಯವಾಗಿರುತ್ತದೆ.
ದೀರ್ಘಕಾಲದ ಸ್ಮರಣೆ: ವಿಷಯಗಳನ್ನು ದೀರ್ಘಕಾಲ ನೆನಪಿಟ್ಟುಕೊಳ್ಳುವ ಹಿಪ್ಪೋ ಕ್ಯಾಂಪಸ್ (ಹಿಪ್ಪೋಕ್ಯಾಂಪಸ್) ಈ ಹಾಲೆಯ ಹತ್ತಿರವೇ ಇದೆ.
ಅರ್ಥಗರ್ಭಿತ ಜ್ಞಾನ (ಸೆಮಾಂಟಿಕ್ ನಾಲೆಡ್ಜ್): ಪ್ರಪಂಚದ ಬಗ್ಗೆ ನಮಗಿರುವ ಸಾಮಾನ್ಯ ಜ್ಞಾನ ಮತ್ತು ಸತ್ಯಗಳನ್ನು ಇದು ಸಂಗ್ರಹಿಸುತ್ತದೆ.
4 ಆಕ್ಸಿಪಿಟಲ್ ಲೋಬ್: ದೃಶ್ಯ ಪ್ರಕ್ರಿಯೆ. ಇದು ಕಣ್ಣಿನಿಂದ ನೋಡುವುದಕ್ಕೆ ಮಾತ್ರ ಸೀಮಿತವಲ್ಲ; ಬುದ್ಧಿವಂತಿಕೆಯಲ್ಲಿ ಇದರ ಪಾತ್ರವೂ ಇದೆ.
ದೃಶ್ಯ ವಿಶ್ಲೇಷಣೆ: ಸಂಕೀರ್ಣವಾದ ನಕ್ಷೆಗಳು, ರೇಖಾಚಿತ್ರಗಳು ಮತ್ತು ಕಲಾಕೃತಿಗಳನ್ನು ವಿಶ್ಲೇಷಿಸುವ ಸಾಮರ್ಥ್ಯ.
ದೃಶ್ಯ ಸ್ಮರಣೆ: ನೋಡಿದ ವಿಷಯಗಳನ್ನು ಚಿತ್ರದ ರೂಪದಲ್ಲಿ ನೆನಪಿಟ್ಟುಕೊಳ್ಳುವುದು. ಕಲಾವಿದರು ಮತ್ತು ವಿಜ್ಞಾನಿಗಳು ತಾವು ನೋಡಿದ ವಿಷಯಗಳನ್ನು ವಿಶ್ಲೇಷಿಸಲು ಈ ಹಾಲೆಯನ್ನು ಬಳಸುತ್ತಾರೆ.
ಮೇಧಾವಿತನದ ಮೂಲ: ನರ ಸಂಪರ್ಕಗಳ ಜಾಲ (ಕನೆಕ್ಟಿವಿಟಿ). ಕೇವಲ ಒಂದು ಹಾಲೆಯು ದೊಡ್ಡದಾಗಿದ್ದ ಮಾತ್ರಕ್ಕೆ ವ್ಯಕ್ತಿಯು ಮೇಧಾವಿಯಾಗುವುದಿಲ್ಲ. ಬದಲಾಗಿ, ಈ ಎಲ್ಲ ಹಾಲೆಗಳ ನಡುವೆ ಇರುವ ‘ಶ್ವೇತ ದ್ರವ್ಯ’ (ವೈಟ್ ಮ್ಯಾಟರ್) ಅಥವಾ ನರತಂತುಗಳ ಸಂಪರ್ಕ ಎಷ್ಟು ವೇಗವಾಗಿದೆ ಎಂಬುದು ಮುಖ್ಯ. ಮೇಧಾವಿಗಳಲ್ಲಿ ಒಂದು ಹಾಲೆಯಿಂದ ಇನ್ನೊಂದು ಹಾಲೆಗೆ ಮಾಹಿತಿ ಹರಿಯುವ ವೇಗವು ಅತ್ಯಂತ ಹೆಚ್ಚಾಗಿರುತ್ತದೆ.
*ಐನ್‌ಸ್ಟೀನ್ ಮಿದುಳಿನ ವಿಶೇಷಗಳು: ಮಿದುಳಿನ ತೂಕ: ಸಾಮಾನ್ಯವಾಗಿ ಅತಿ ಬುದ್ಧಿವಂತರ ಮಿದುಳು ದೊಡ್ಡದಾಗಿರುತ್ತದೆ ಎಂಬ ನಂಬಿಕೆಯಿದೆ. ಆದರೆ ಐನ್‌ಸ್ಟೀನ್ ಅವರ ಮಿದುಳಿನ ತೂಕ ಸುಮಾರು 1230 ಗ್ರಾಂ ಇತ್ತು. ಇದು ಸಾಮಾನ್ಯ ವಯಸ್ಕ ಪುರುಷನ ಸರಾಸರಿ ಮಿದುಳಿನ ತೂಕಕ್ಕಿಂತ (1400 ಗ್ರಾಂ) ಸ್ವಲ್ಪ ಕಡಿಮೆ. ಅಂದರೆ, ಬುದ್ಧಿವಂತಿಕೆಗೆ ಮಿದುಳಿನ ಗಾತ್ರಕ್ಕಿಂತ ಅದರ ಆಂತರಿಕ ರಚನೆ ಮತ್ತು ಸಂಪರ್ಕಗಳೇ ಮುಖ್ಯ ಎಂಬುದು ಇದರಿಂದ ಸಾಬೀತಾಯಿತು.
ಪ್ರಾಕಾರ ಹಾಲೆ (ಪೆರೈಟಲ್ ಲೋಬ್): ಐನ್‌ಸ್ಟೀನ್ ಅವರ ಮಿದುಳಿನಲ್ಲಿ ‘ಇನೀ ರಿಯರ್ ಪೆರೈಟಲ್ ಲೋಬ್’ ಎಂಬ ಪ್ರದೇಶವು ಸಾಮಾನ್ಯರಿಗಿಂತ ಶೇ.15ರಷ್ಟು ಹೆಚ್ಚು ಅಗಲ ವಾಗಿತ್ತು. ಮಿದುಳಿನ ಈ ಭಾಗವು ಗಣಿತದ ತರ್ಕ ಮತ್ತು ದೃಶ್ಯ-ಅವಕಾಶದ (ವಿಶುವಲ್-ಸ್ಪೇಶಿಯಲ್) ಗ್ರಹಿಕೆಗೆ ಸಂಬಂಧಿಸಿದೆ. ಐನ್‌ಸ್ಟೀನ್ ಅವರ ವಿಶಿಷ್ಟ ಆಲೋಚನಾ ಕ್ರಮಕ್ಕೆ ಈ ರಚನೆಯೇ ಕಾರಣವಿರಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ.
ಗ್ಲಿಯಲ್ ಕೋಶಗಳ ಸಾಂದ್ರತೆ: 1985ರಲ್ಲಿ ನಡೆದ ಅಧ್ಯಯನದ ಪ್ರಕಾರ, ಅವರ ಮಿದುಳಿನಲ್ಲಿ ನರಕೋಶಗಳಿಗಿಂತ, ನರಪೋಷಕ ಕೋಶಗಳ ಸಂಖ್ಯೆ ಹೆಚ್ಚಿತ್ತು. ಗ್ಲಿಯಲ್ ಕೋಶಗಳು ನ್ಯೂರಾನ್‌ಗಳಿಗೆ ಶಕ್ತಿ ಮತ್ತು ಪೋಷಣೆಯನ್ನು ನೀಡುತ್ತವೆ. ಇದು ಅವರ ಮಿದುಳಿನ ಕೋಶಗಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವು ಎಂಬುದನ್ನು ಸೂಚಿಸುತ್ತದೆ.
ಕಾರ್ಪಸ್ ಕಲೋಸಮ್: ಐನ್‌ಸ್ಟೀನ್ ಅವರ ಮಿದುಳಿನ ಎಡ ಮತ್ತು ಬಲ ಭಾಗಗಳನ್ನು ಸಂಪರ್ಕಿಸುವ ನರಗಳ ಕಟ್ಟು (ಕಾರ್ಪಸ್ ಕಲೋಸಮ್) ಸಾಮಾನ್ಯರಿಗಿಂತ ಹೆಚ್ಚು ದಪ್ಪ ವಾಗಿತ್ತು. ಇದು ಮಿದುಳಿನ ಎರಡು ಅರ್ಧ ಗೋಳಗಳ ನಡುವೆ ಅತ್ಯುತ್ತಮ ಸಂವಹನ ವಿತ್ತೆಂದು ತೋರಿಸುತ್ತದೆ. ಇದು ಅವರ ಸೃಜಶೀಲತೆ ಮತ್ತು ತಾರ್ಕಿಕ ಸಾಮರ್ಥ್ಯದ ಅದ್ಭುತ ಸಮನ್ವಯಕ್ಕೆ ದಾರಿಯಿರಬಹುದು.
ಪ್ರಮುಖ ಅಂಶಗಳು
1 ಸೈಲ್ವಿಯನ್ ಫಿಶರ್: ಐನ್‌ಸ್ಟೀನ್ ಅವರ ಮಿದುಳಿನಲ್ಲಿ ಈ ಸೀಳು ಪೂರ್ಣವಾಗಿರಲಿಲ್ಲ. ಇದರಿಂದಾಗಿ ಪ್ರಾಕಾರ ಹಾಲೆಯಲ್ಲಿ (ಪೆರೈಟಲ್ ಲೋಬ್) ನರಕೋಶಗಳ ಸಂವಹನಕ್ಕೆ ಹೆಚ್ಚಿನ ಅವಕಾಶ ಸಿಕ್ಕಿತ್ತು.
2 ಪ್ರೀಫ್ರಾಂಟಲ್ ಕಾರ್ಟೆಕ್ಸ್: ಯೋಜನಾ ಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಈ ಭಾಗವು ಹೆಚ್ಚು ಸಂಕೀರ್ಣವಾದ ಸುಕ್ಕುಗಳನ್ನು (ಫೋಲ್ಡ್ಸ್) ಹೊಂದಿತ್ತು.
ಒಟ್ಟಾರೆ ತೀರ್ಮಾನ: ಐನ್‌ಸ್ಟೀನ್ ಅವರ ಮಿದುಳು ಗಾತ್ರದಲ್ಲಿ ಸಾಮಾನ್ಯವಾಗಿದ್ದರೂ, ಅದರ ರಚನೆ ಮತ್ತು ನರಗಳ ಸಂಪರ್ಕ ಅತ್ಯಂತ ವಿಶಿಷ್ಟವಾಗಿತ್ತು. ವಿಶೇಷವಾಗಿ ಗಣಿತ ಮತ್ತು ಕಲ್ಪನಾಶಕ್ತಿಗೆ ಸಂಬಂಧಿಸಿದ ಭಾಗಗಳು ಹೆಚ್ಚು ವಿಕಸನಗೊಂಡಿದ್ದವು. ಆದರೆ, ಈ ಬದಲಾವಣೆಗಳು ಹುಟ್ಟಿನಿಂದಲೇ ಬಂದಿದ್ದವೇ ಅಥವಾ ಅವರು ನಿರಂತರವಾಗಿ ನಡೆಸಿದ ಆಳವಾದ ಚಿಂತನೆಯಿಂದ ರೂಪುಗೊಂಡಿದ್ದವೇ ಎಂಬುದು ಇಂದಿಗೂ ಚರ್ಚೆಯ ವಿಷಯ ವಾಗಿದೆ. ಮಿದುಳು ಇಂದಿಗೂ ಒಂದು ಕಗ್ಗತ್ತಲ ಖಂಡ. ಹಾಗೆಂದು ಮನುಷ್ಯ ಎದೆಗುಂದಿಲ್ಲ. ಮಿದುಳಿನ ರಹಸ್ಯವನ್ನು ತಿಳಿಯಲು ನಿರಂತರ ಅನ್ವೇಷಣೆಯಲ್ಲಿ ತೊಡಗಿದ್ದಾನೆ. ಇವನ ಈ ಪ್ರಯತ್ನವನ್ನು ಶ್ಲಾಘಿಸಬೇಕಾಗುತ್ತದೆ.