Vidyashankar Sharma Column: ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು ?
‘ಯಾವುದರ ನಿರ್ಗಮನದಿಂದ ಜೀವಿಯ ದೇಹವು ಜಡವಾಗುವುದೋ ಅದೇ ಎಲ್ಲಕ್ಕಿಂತ ಶ್ರೇಷ್ಠ’ ಎಂದರಂತೆ ಬ್ರಹ್ಮ ದೇವರು. ಇದನ್ನು ಕೇಳಿದ ನಂತರ ಇಂದ್ರಿಯಗಳು ತಮ್ಮ ಸ್ಫರ್ಧೆಯನ್ನು ಆರಂಭಿಸಿದವು. ಮೊದಲು ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು? ‘ಮಾತು’ ದೇಹದಿಂದ ಹೊರಗೆ ಹೋಗಿ ಒಂದು ವರ್ಷದ ನಂತರ ತಿರುಗಿ ಬಂದಿತಂತೆ.
-
ವಿದ್ಯಾಶಂಕರ ಶರ್ಮ, ಸಿದ್ದಾಪುರ
ಇಂದಿನ ಜೀವನದಲ್ಲಿ ಪೈಪೋಟಿಯದೇ ಕಾರುಬಾರು. ಒಬ್ಬರನ್ನೊಬ್ಬರು ಮೀರಿಸುವ ತವಕದಲ್ಲಿ ಬದುಕಿನ ಬಹುಪಾಲು ಸಮಯವನ್ನು ಕಳೆಯುತ್ತಾರೆ. ಹೋಲಿಕೆಯ ಸುಳಿ ಯಲ್ಲಿ ಸಿಲುಕಿ ಒಂದರ ನಂತರ ಒಂದು ಬಯಕೆಯನ್ನು ತಮ್ಮ ಗುರಿಯನ್ನಾಗಿ ಮಾಡಿ ಕೊಂಡು ಅದರ ಸಾಧನೆಗಾಗಿ ಪ್ರಯತ್ನದಲ್ಲಿ ತೊಡಗುವುದಕ್ಕೆ ‘ಜೀವನ’ ಎಂಬ ಹೆಸರನ್ನಿಟ್ಟಿ ದ್ದಾರೆ.
ಮಾನವರ ಕತೆ ಹೀಗಾದರೆ, ಇಂದ್ರಿಯಗಳು ಕೂಡ ಒಮ್ಮೆ ಇದೇ ರೀತಿ ಸ್ಪರ್ಧೆಗೆ ಬಿದ್ದ ಕತೆಯೂ ಇದೆ. ಬಾಯಿ, ಕಣ್ಣು, ಕಿವಿ, ಮೂಗು, ಮನಸ್ಸು ಮತ್ತು ಜನನೇಂದ್ರಿಯಗಳು ತಮ್ಮ ಶ್ರೇಷ್ಠತೆಯನ್ನು ನಿರೂಪಿಸಲು ಹೊರಟವಂತೆ. ಅವೆಲ್ಲವೂ ಬ್ರಹ್ಮ ದೇವರ ಬಳಿ ಹೋದವು. ‘ತಮ್ಮಲ್ಲಿ ಯಾರು ಶ್ರೇಷ್ಠರೆಂದು ಹೇಗೆ ನಿರ್ಧರಿಸುವುದು?’ ಎಂಬ ಅವುಗಳ ಪ್ರಶ್ನೆಗೆ, ಬ್ರಹ್ಮ ದೇವರು ಪರಿಹಾರವೊಂದನ್ನು ಹೇಳಿದರು.
ಇದನ್ನೂ ಓದಿ: Vidyashankar Sharma Column: ಜನಮತದ ಬೆಂಬಲ ಪಡೆದ ಶ್ರೀರಾಮನ ಪಟ್ಟಾಭಿಷೇಕ
‘ಯಾವುದರ ನಿರ್ಗಮನದಿಂದ ಜೀವಿಯ ದೇಹವು ಜಡವಾಗುವುದೋ ಅದೇ ಎಲ್ಲಕ್ಕಿಂತ ಶ್ರೇಷ್ಠ’ ಎಂದರಂತೆ ಬ್ರಹ್ಮ ದೇವರು. ಇದನ್ನು ಕೇಳಿದ ನಂತರ ಇಂದ್ರಿಯಗಳು ತಮ್ಮ ಸ್ಫರ್ಧೆಯನ್ನು ಆರಂಭಿಸಿದವು. ಮೊದಲು ಇಂದ್ರಿಯಗಳ ಪೈಪೋಟಿಯಲ್ಲಿ ಗೆದ್ದವರಾರು? ‘ಮಾತು’ ದೇಹದಿಂದ ಹೊರಗೆ ಹೋಗಿ ಒಂದು ವರ್ಷದ ನಂತರ ತಿರುಗಿ ಬಂದಿತಂತೆ.
ಒಂದು ವರ್ಷಕಾಲ ಜೀವಿಯು ಮೂಕನಂತೆ ವ್ಯವಹರಿಸುತ್ತ ಇತರ ಇಂದ್ರಿಯಗಳ ಸಹಾಯ ದಿಂದ ಬದುಕನ್ನು ನಡೆಸಿದ್ದನು. ನಂತರ ಕಣ್ಣುಗಳು ಒಂದು ವರ್ಷ ಹೊರಗೆ ಹೋಗಿ ತಿರುಗಿ ಬಂದವು. ಆ ಅವಧಿಯಲ್ಲಿ ಜೀವಿಯು ಕುರುಡನಾಗಿ ತನ್ನ ಜೀವನವನ್ನು ಕಳೆಯುತ್ತಿದ್ದನು. ತದನಂತರ ಕಿವಿಯು ಹೊರಗೆ ಹೋಗಿ, ಒಂದು ವರ್ಷದ ನಂತರ ದೇಹಕ್ಕೆ ಹಿಂತಿರುಗಿತು. ಆ ಸಮಯದಲ್ಲಿ ಕಿವುಡತನ ಕೂಡಿದ ಜೀವನ ನಡೆಸುತ್ತಿದ್ದ ಜೀವಿ.
ನಂತರದ ಬಾರಿ ಮನಸ್ಸಿನದು. ಅದು ಕೂಡ ಹೊರಗೆ ಹೋಗಿ ಒಂದು ವರ್ಷದ ನಂತರ ಬಂದಿತು. ಜೀವಿಯು ಮುಗ್ಧನಂತೆ, ಏನೂ ತಿಳಿಯದನವಂತೆ ಇತರ ಇಂದ್ರಿಯಗಳ ಸಹಾಯದಿಂದ ಬದುಕಿದ್ದನು. ಇದೇ ರೀತಿ ಜನನೇಂದ್ರಿಯವು ಕೂಡ ಹೊರಗಿ ಹೋಗಿ ಒಂದು ವರ್ಷದ ನಂತರ ತಿರುಗಿ ಬಂದಿತು. ಆಗ ಜೀವಿಯು ಸಂತಾನೋತ್ಪತ್ತಿ ಇಲ್ಲದೆ ಇತರ ಇಂದ್ರಿಯಗಳ ಸಹಾಯದಿಂದ ಬದುಕಿದ್ದನು.
ಹೀಗೆ ಎಲ್ಲ ಇಂದ್ರಿಯಗಳು ತಮ್ಮ ಸರದಿಯನ್ನು ಮುಗಿಸಿದ ನಂತರ, ಪ್ರಾಣವು ಹೊರಗೆ ಹೋಗಲು ಅಣಿಯಾಯಿತು. ಆಗ, ಹೇಗೆ ಮನೆಯ ಆಧಾರವನ್ನು ಕೆಡವಿದಾಗ ಮೇಲ್ಬಾಗವು ಉರುಳಿ ಬೀಳುತ್ತದೆಯೋ, ಎಲ್ಲ ಇಂದ್ರಿಯಗಳೂ ತಮ್ಮ ಇರುವಿಕೆಯನ್ನು ಕಳೆದು ಕೊಂಡವು. ಇದರಿಂದ ಪ್ರಾಣವೇ ಮಹತ್ತರವಾದುದು ಎಂಬುದನ್ನು ಇಂದ್ರಿಯಗಳು ಅರಿತವು. ಪ್ರಾಣ ಎಂದರೆ ದೇಹವನ್ನು ವ್ಯಾಪಿಸಿ, ಇಡೀ ಜಗದಲ್ಲಿ ತುಂಬಿರುವ ಆತ್ಮ ಚೈತನ್ಯವೇ ಆಗಿದೆ.
ದೇಹ, ಇಂದ್ರಿಯಗಳು ಜಡ, ಅವು ಸ್ವತಂತ್ರವಾಗಿ ಕಾರ್ಯಗಳನ್ನು ಮಾಡಲಾರವು. ಆತ್ಮ ಚೈತನ್ಯದ ಬೆಳಕು ಅವುಗಳಿಗೆ ಚೇತನವನ್ನು ನೀಡಿ ಅವುಗಳನ್ನು ಕಾರ್ಯಸಮರ್ಥರನ್ನಾಗಿ ಮಾಡುತ್ತದೆ. ನಾವು ನಮ್ಮನ್ನು ದೇಹ ಎಂದು ಗುರುತಿಸಿಕೊಂಡಿದ್ದೇವೆ, ಆದರೆ ಇದು ಆದ್ಯಂತಿಕವಾದ ಸತ್ಯವಲ್ಲ ಎಂದು ವೇದಶಾಸ್ತ್ರಗಳು ಹೇಳುತ್ತವೆ.
ಪ್ರತ್ಯಕ್ಷ ದೇವತೆಯಾದ ಸೂರ್ಯನು ಹೇಗೆ ಸ್ವಯಂಪ್ರಕಾಶಮಾನನಾಗಿ ಇಡೀ ಜಗತ್ತನ್ನು ಬೆಳಗುವನೋ, ಅದೇ ರೀತಿಯಲ್ಲಿ ಆತ್ಮನು ಸ್ವಯಂ ಪ್ರಕಾಶನು. ತಾನು ಪ್ರಕಾಶಿಸುತ್ತ ಸಕಲ ಚರಾಚರಗಳನ್ನು ಬೆಳಗುತ್ತಿರುವ ಶುದ್ಧ ಚೈತನ್ಯ ವಸ್ತುವೇ ಆತ್ಮನು.
ಪ್ರಾಣವು ದೇಹದಲ್ಲಿ ಇದೆಯೆಂದರೆ ಅದು ಆತ್ಮದ ಬೆಳಕಿನಿಂದ ಚೇತನಮಯವಾಗಿದೆ ಎಂದರ್ಥ. ಇದೇ ಕಾರಣಕ್ಕಾಗಿಯೇ ಉಳಿದ ಎಲ್ಲ ಇಂದ್ರಿಯಗಳು ಚ್ಯುತಿಯಾದರೂ, ಜೀವಿ ಯ ಇರುವಿಕೆಯು ಅಬಾಧಿತವಾಗಿತ್ತು. ಯಾವಾಗ ಪ್ರಾಣನು ಹೊರಟನೋ ಆಗ ಉಳಿದ ಎಲ್ಲ ಇಂದ್ರಿಯಗಳು ತಮ್ಮ ಶಕ್ತಿಯನ್ನು ಕಳೆದುಕೊಂಡವು. ಬ್ರಹ್ಮ ದೇವರ ಸಂದೇಶದ ಗೂಢಾರ್ಥ ಇದೇ ಆಗಿತ್ತು.
ಇಂದ್ರಿಯಗಳು ತಾವೇ ಶ್ರೇಷ್ಠರು ಎಂದು ಅಹಂನಿಂದ ಬೀಗುತ್ತಿದ್ದವು. ಇದು ಮನುಜನ ಅಹಂಕಾರದ ಪ್ರತಿರೂಪವೂ ಹೌದು. ಪ್ರಪಂಚದ ವ್ಯವಸ್ಥೆಯನ್ನು ಅಗೋಚರ ಶಕ್ತಿ ಯೊಂದು ನಿಯಂತ್ರಿಸುತ್ತಿದೆ ಎಂಬುದನ್ನು ಒಪ್ಪಲು ಮನುಷ್ಯನಿಗೆ ಅವನ ಗರ್ವವು ಅಡ್ಡಗಾಲಾಗಿದೆ. ಇಂದ್ರಿಯಗಳ ಪೈಪೋಟಿಯ ಕತೆಯಿಂದ ಪಾಠ ಕಲಿಯುವ ಅವಶ್ಯಕತೆ ಇದೆ.
ತನ್ನದೇ ಸತ್ಕರ್ಮ ಮತ್ತು ದುಷ್ಕರ್ಮಗಳ ಕಾರಣದಿಂದ ಸುಖ, ಯಶಸ್ಸು, ದುಃಖ, ಸೋಲು ಗಳು ತನಗೆ ಫಲಗಳಾಗಿ ಬರುತ್ತಿವೆ ಎಂಬುದನ್ನು ಮನುಷ್ಯ ಅರಿತರೆ ಅಹಂಕಾರದ ಪೊರೆಯು ಕಳಚಿ ಬೀಳುವುದು.