Dr N Someshwara Column: ಶಸ್ತ್ರವೈದ್ಯನಾದ ಕ್ಷೌರಿಕ: ರಕ್ತ, ಬ್ಯಾಂಡೇಜು ಮತ್ತು ಕ್ಷೌರಕತ್ತಿಯಿಂದ ಸ್ಕ್ಯಾಲ್ಪೆಲ್ʼವರೆಗಿನ ದೀರ್ಘ ಪಯಣ
ಯೂರೋಪಿನ ಕ್ಷೌರದಂಗಡಿಯ ಕುರ್ಚಿಯು ಹೆಚ್ಚೂ ಕಡಿಮೆ ಇಂದಿನ ಆಪರೇಶನ್ ಥಿಯೇಟರಿ ನಲ್ಲಿರುವ ಮೇಜಿಗೆ ಸರಿ ಸಮನಾಗಿತ್ತು ಎಂದರೆ ಅದು ಅತಿಶಯೋಕ್ತಿಯೇನಾಗಿರಲಿಲ್ಲ. ಮುಖ ಕ್ಷೌರದ ರೇಜ಼ರನ್ನು ಹಿಡಿದ ಕೈ, ಸ್ಕ್ಯಾಲ್ಪೆಲ್ ಹಿಡಿದು ಕೀವು ರಕ್ತವನ್ನೂ ಹರಿಸುತ್ತಿತ್ತು ಎಂದರೆ, ಈ ಎರಡೂ ಕಲೆಗಳಲ್ಲಿ ಅಂದಿನ ಕ್ಷೌರಿಕ ಪರಿಣಿತನಾಗಿದ್ದ.
-
ಹಿಂದಿರುಗಿ ನೋಡಿದಾಗ
ಇಂದು, ನಾವು ಕ್ಷೌರದಂಗಡಿಗೆ ಹೋದರೆ, ಅವರು ನಮ್ಮ ಮುಖಕ್ಷೌರವನ್ನು ಮಾಡುತ್ತಾರೆ, ಕೂದಲನ್ನು ಕ್ರಾಪ್ ಮಾಡುತ್ತಾರೆ ಇಲ್ಲವೇ ಗಡ್ಡದ ಕೂದಲನ್ನು ಸೊಗಸಾಗಿ ಟ್ರಿಮ್ ಮಾಡುತ್ತಾರೆ. ಕೆಲವು ಸಲ ಕೂದಲಿಗೆ ಬಣ್ಣ ಹಚ್ಚುವುದುಂಟು ಇಲ್ಲವೇ ಎಣ್ಣೆ ಹಚ್ಚಿ ಮಸಾಜನ್ನು ಮಾಡುವು ದುಂಟು. ಅಂದು, ಕ್ಷೌರಿಕನ ಅಂಗಡಿಯಲ್ಲಿ ಜನರು ಕೂದಲನ್ನು ಕತ್ತರಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಹುಳುಕು ಹಲ್ಲನ್ನು ಕೀಳಿಸಿಕೊಳ್ಳಲು, ಕೀವು ತುಂಬಿದ ಬಾವನ್ನು ಛೇದಿಸಿ ಕೀವನ್ನು ಹೊರಹರಿಸಲು, ಮುರಿದ ಮೂಳೆಯನ್ನು ಸ್ವಸ್ಥಾನದಲ್ಲಿ ಕೂರಿಸಿ ಕಟ್ಟು ಹಾಕಲು, ತಪ್ಪಿದ ಭುಜಕೀಲನ್ನು ಸೇರಿಸಲು ಅಥವಾ ಕೊಳೆಯುತ್ತಿರುವ ಬೆರಳನ್ನೋ ಇಲ್ಲ ಕಾಲನ್ನು ತುಂಡರಿಸಲು ಕ್ಷೌರದಂಗಡಿಗೆ ಹೋಗುತ್ತಿದ್ದರು.
ಯೂರೋಪಿನ ಕ್ಷೌರದಂಗಡಿಯ ಕುರ್ಚಿಯು ಹೆಚ್ಚೂ ಕಡಿಮೆ ಇಂದಿನ ಆಪರೇಶನ್ ಥಿಯೇಟರಿನಲ್ಲಿರುವ ಮೇಜಿಗೆ ಸರಿ ಸಮನಾಗಿತ್ತು ಎಂದರೆ ಅದು ಅತಿಶಯೋಕ್ತಿ ಯೇನಾಗಿರಲಿಲ್ಲ. ಮುಖಕ್ಷೌರದ ರೇಜ಼ರನ್ನು ಹಿಡಿದ ಕೈ, ಸ್ಕ್ಯಾಲ್ಪೆಲ್ ಹಿಡಿದು ಕೀವು ರಕ್ತವನ್ನೂ ಹರಿಸುತ್ತಿತ್ತು ಎಂದರೆ, ಈ ಎರಡೂ ಕಲೆಗಳಲ್ಲಿ ಅಂದಿನ ಕ್ಷೌರಿಕ ಪರಿಣಿತ ನಾಗಿದ್ದ.
ಮಧ್ಯಯುಗದ ಯೂರೋಪಿನಲ್ಲಿ ಕ್ಷೌರಿಕ-ಶಸ್ತ್ರವೈದ್ಯರು (ಬಾರ್ಬರ್ ಸರ್ಜನ್) ಸರ್ವ ಸಾಮಾನ್ಯ ವಾಗಿ ಎಲ್ಲೆಡೇ ವೃತ್ತಿನಿರತರಾಗಿದ್ದರು. ಕ್ಷೌರಿಕ-ಶಸ್ತ್ರವೈದ್ಯ ಎಂಬ ಶಬ್ದವು ಇಂದು ಅದು ವಿಚಿತ್ರ ವಾಗಿ, ನಂಬಲು ಕಷ್ಟವಾಗುವಂತೆ ಕೇಳಿಸುತ್ತದೆ. ಆದರೆ, ಮಧ್ಯಯುಗ ಮತ್ತು ಆಧುನಿಕ ಯುಗದ ಆರಂಭಿಕ ಕಾಲದಲ್ಲಿ, ಸಾಮಾನ್ಯ ಜನರಿಗೆ ಸುಲಭವಾಗಿ ಸಿಗುತ್ತಿದ್ದ ಅತ್ಯಂತ ಪ್ರಾಯೋಗಿಕ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದವರಲ್ಲಿ ಕ್ಷೌರಿಕರೂ ಒಬ್ಬರಾಗಿದ್ದರು.
ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದ ವೈದ್ಯರು ಸಾಮಾನ್ಯವಾಗಿ ಸಿದ್ಧಾಂತ, ರೋಗ ನಿರ್ಣಯ, ಜ್ಯೋತಿಷ್ಯ, ದೇಹದ ರಸಗಳ ಸಮತೋಲನ ಮತ್ತು ಹೊಟ್ಟೆಗೆ ಸೇವಿಸುವ ಔಷಧಿಗಳ ಬಗ್ಗೆ ಹೆಚ್ಚು ವ್ಯವಹರಿಸುತ್ತಿದ್ದರು. ಆದರೆ, ಶಸ್ತ್ರಚಿಕಿತ್ಸೆಯನ್ನು ಮಾಡುವವರು ಸದಾ ರಕ್ತ, ಕೀವು, ಗಾಯ, ನೋವು, ಚೀತ್ಕಾರಗಳ ನಡುವೆ ದಿನವನ್ನು ಕಳೆಯಬೇಕಾಗಿತ್ತು. ಶಸ್ತ್ರಚಿಕಿತ್ಸೆಯನ್ನು ಮಾಡಲು ಅಪಾರ ಕುಶಲತೆಯು ಇರಬೇಕಾಗಿತ್ತು. ಅಂಜದೆ, ಅಳುಕದೆ ಛೇದನವನ್ನು ನಡೆಸಬೇಕಾಗಿತ್ತು. ಹಾಗಾಗಿ ಶಸ್ತ್ರವೈದ್ಯಕೀಯವನ್ನು ಕೆಳಮಟ್ಟದ ಜನರು ಮಾತ್ರ ಮಾಡಬಹುದಾದ ಕೀಳು ಕೌಶಲ್ಯ ವೆಂದು ಪರಿಗಣಿಸಿದ್ದರು. ಹಾಗಾಗಿ ಅಂದಿನ ದಿನಗಳಲ್ಲಿ ಪಂಡಿತ ವೈದ್ಯನು ಕೇವಲ ಔಷಧಿಯನ್ನು ಸೂಚಿಸುತ್ತಿದ್ದ, ಕ್ಷೌರಿಕ-ಶಸ್ತ್ರವೈದ್ಯನು ಅಂಗವನ್ನು ಛೇದಿಸುತ್ತಿದ್ದ!
ಇದನ್ನೂ ಓದಿ: Dr N Someshwara Column: ಜೀವವನ್ನು ಬಲಿಕೊಟ್ಟ ಲಾಜರನಿಗೆ ಕೀರ್ತಿಯು ಸಲ್ಲಲೇ ಇಲ್ಲ !
ಇತಿಹಾಸದ ಹಿನ್ನೆಲೆ
ಮಧ್ಯಯುಗದ ಯುರೋಪ್‌ನಲ್ಲಿ (ಅಂದರೆ ಸುಮಾರು 5ನೇ ಶತಮಾನದಿಂದ 15ನೇ ಶತಮಾನ ದವರೆಗೆ) ಪರಿಸ್ಥಿತಿ ಇಂದಿನಂತಿರಲಿಲ್ಲ. ಅಂದಿನ ಕಾಲದಲ್ಲಿ ವೈದ್ಯರು (ಫಿಸಿಶಿಯನ್ಸ್) ಎಂದರೆ ಕೇವಲ ವಿಶ್ವವಿದ್ಯಾಲಯಗಳಲ್ಲಿ ಕುಳಿತು ತತ್ವಶಾಸ್ತ್ರ, ಜ್ಯೋತಿಷ್ಯ ಮತ್ತು ಗ್ರೀಕ್ ವೈದ್ಯಕೀಯ ಗ್ರಂಥಗಳನ್ನು ಓದುತ್ತಿದ್ದ ಗಣ್ಯರಾಗಿದ್ದರು. ಅವರು ರೋಗಿಗಳ ದೇಹ ವನ್ನು ಮುಟ್ಟುವುದನ್ನು ಕೀಳಾಗಿ ಕಾಣುತ್ತಿದ್ದರು. ದೇಹವನ್ನು ಮುಟ್ಟುವುದು, ಪರೀಕ್ಷಿಸು ವುದು, ರೋಗಿಯ ರಕ್ತ, ಕೀವು ಇತ್ಯಾದಿಗಳನ್ನು ಮುಟ್ಟುವುದು ತಮಗೆ ಗೌರವ ತರುವ ಕೆಲಸವಲ್ಲ ಎಂದು ಅವರು ನಂಬಿದ್ದರು.
ಇದೇ ಸಮಯದಲ್ಲಿ, ಕ್ರಿಶ್ಚಿಯನ್ ಮಠಗಳಲ್ಲಿದ್ದ ಸನ್ಯಾಸಿಗಳು (ಮಾಂಕ್ಸ್) ಜನರಿಗೆ ವೈದ್ಯಕೀಯ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಕ್ರಿ.ಶ.1163 ರಲ್ಲಿ ನಡೆದ ಟೂರ್ಸ್ ಮಹಾ ಧಾರ್ಮಿಕ ಸಭೆಯಲ್ಲಿ (ಕೌನ್ಸಿಲ್ ಆಫ್ ಟೂರ್ಸ್; ಟೂರ್ಸ್ ಎನ್ನುವುದು ಫ್ರಾನ್ಸ್ ದೇಶದ ನಗರವೊಂದರ ಹೆಸರು) ಪೋಪ್ ಅವರು, ರಕ್ತ ಚೆಲ್ಲುವ ಯಾವುದೇ ಕೆಲಸವನ್ನು ಚರ್ಚ್‌ನ ಪಾದ್ರಿಗಳು ಅಥವಾ ಸನ್ಯಾಸಿಗಳು ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾದ ಆದೇಶ ಹೊರಡಿಸಿದರು.
ಆಗ ಸನ್ಯಾಸಿಗಳಿಗೆ ಒಂದು ದೊಡ್ಡ ಸಮಸ್ಯೆ ಎದುರಾಯಿತು. ತಮ್ಮ ಬದಲು ಯಾರು ಶಸ್ತ್ರ ವೈದ್ಯಕೀಯವನ್ನು ನಡೆಸಲು ಅರ್ಹರು ಎಂದು ಹುಡುಕಲಾರಂಭಿಸಿದರು. ಮಠದಲ್ಲಿದ್ದ ಸನ್ಯಾಸಿ ಗಳ ತಲೆ ಬೋಳಿಸಲು ಮತ್ತು ಗಡ್ಡ ಕತ್ತರಿಸಲು ನಿಯಮಿತವಾಗಿ ಮಠಕ್ಕೆ ಬರುತ್ತಿದ್ದ ಕ್ಷೌರಿಕರು ಅವರ ಕಣ್ಣಿಗೆ ಬಿದ್ದರು. ಕ್ಷೌರಿಕರ ಬಳಿ ಚೂಪಾದ ಕತ್ತರಿಗಳು, ರೇಜರ್‌ಗಳು (ಕ್ಷೌರದ ಕತ್ತಿ) ಮತ್ತು ಚಾಕುಗಳಿದ್ದವು.
ಅಷ್ಟೇ ಅಲ್ಲದೆ, ಚೂಪಾದ ಆಯುಧಗಳನ್ನು ಅತ್ಯಂತ ನಿಖರವಾಗಿ ಬಳಸುವ ಅದ್ಭುತ ಹಸ್ತ ಕೌಶಲ್ಯ (ಮ್ಯಾನ್ಯುವಲ್ ಡೆಕ್ಸ್‌ಟಿರಿಟಿ) ಅವರಲ್ಲಿತ್ತು. ಹೀಗಾಗಿ, ಮಠದ ಸನ್ಯಾಸಿಗಳು ವೈದ್ಯಕೀಯ ಕೆಲಸಗಳ ಜವಾಬ್ದಾರಿಯನ್ನು ಈ ಕ್ಷೌರಿಕರಿಗೆ ಹಸ್ತಾಂತರಿಸಿದರು. ಆ ಕ್ಷಣದಿಂದ ಕ್ಷೌರಿಕ-ಶಸ್ತ್ರಚಿಕಿತ್ಸಕ ಎಂಬ ಹೊಸ ವೃತ್ತಿಯು ಜನ್ಮತಾಳಿತು.
ಭಯಾನಕ ಚಿಕಿತ್ಸೆಗಳು
ಕ್ಷೌರಿಕನ ಅಂಗಡಿಯು ಕೇವಲ ಕೂದಲು ಕತ್ತರಿಸುವ ಜಾಗವಾಗಿರಲಿಲ್ಲ. ಅದು ಅಂದಿನ ಕಾಲದ ‘ಮಿನಿ ಆಪರೇಷನ್ ಥಿಯೇಟರ್’ ಆಗಿತ್ತು. ಅರಿವಳಿಕೆ (ಅನೆಸ್ಥೀಸಿಯ) ಅಥವಾ ಆಂಟಿಸೆಪ್ಟಿಕ್‌ಗಳ (ಸೋಂಕುರೋಧಕ) ಬಗ್ಗೆ ಯಾವುದೇ ಜ್ಞಾನವಿಲ್ಲದ ಆ ಕಾಲದ ಕ್ಷೌರಿಕರು ಈ ಕೆಳಗಿನ ಶಸ್ತ್ರ ಚಿಕಿತ್ಸೆಗಳನ್ನು ನೀಡುತ್ತಿದ್ದರು.
ರಕ್ತಮೋಕ್ಷಣ (ಬ್ಲಡ್ ಲೆಟ್ಟಿಂಗ್)
ಅಂದಿನ ಕಾಲದ ವೈದ್ಯಕೀಯ ಪರಿಕಲ್ಪನೆಯಲ್ಲಿ ಮನುಷ್ಯನ ದೇಹದಲ್ಲಿ ರಕ್ತ, ಕ-, ಕಪ್ಪು ಪಿತ್ತ ಮತ್ತು ಹಳದಿ ಪಿತ್ತ ಎಂಬ ನಾಲ್ಕು ದ್ರವಗಳಿದ್ದವು. ಇವನ್ನು ನಾಲ್ಕು ರಸಗಳು ಅಥವ ಫಾರ್ ಹ್ಯೂಮರ್ಸ್ ಎಂದು ಕರೆಯುತ್ತಿದ್ದರು. ದೇಹದಲ್ಲಿ ರಕ್ತ ಹೆಚ್ಚಾದಾಗ ರೋಗ ಬರುತ್ತದೆ ಎಂಬ ತಪ್ಪು ಕಲ್ಪನೆಯು ಇತ್ತು. ಹಾಗಾಗಿ, ಕ್ಷೌರಿಕರು ರೋಗಿಯ ಕೈ ರಕ್ತನಾಳವನ್ನು ಕತ್ತರಿಸಿ, ರಕ್ತವನ್ನು ಹೊರಗೆ ಹರಿಸುತ್ತಿದ್ದರು ಜ್ವರ, ತಲೆನೋವಿನಿಂದ ಹಿಡಿದು ಪ್ಲೇಗ್ ರೋಗದವರೆಗೂ ಎಲ್ಲದಕ್ಕೂ ಶರೀರದ ರಕ್ತವನ್ನು ಹರಿಯ ಬಿಡುವುದೇ ಪ್ರಮಾಣ ಬದ್ಧ ರಣವೈದ್ಯವಾಗಿತ್ತು!
ಹಲ್ಲನ್ನು ಕೀಳುವುದು
ಆಗ ಹಲ್ಲಿನ ವೈದ್ಯರು (ಡೆಂಟಿಸ್ಟ್ಸ್) ಇರಲಿಲ್ಲ. ಹಲ್ಲು ನೋವೆಂದು ಬಂದವರ ಹುಳುಕು ಹಲ್ಲನ್ನು ಇಕ್ಕಳದಲ್ಲಿ ಹಿಡಿದು ಒಮ್ಮೆಲೆ ದಯಾ ದಾಕ್ಷಿಣ್ಯವಿಲ್ಲದೆ ಎಳೆದು ಕಿತ್ತೆಸೆಯು ತ್ತಿದ್ದರು. ಯಾವುದೇ ರೀತಿಯಾದ ಅರಿವಳಿಕೆಯನ್ನು ಬಳಸುತ್ತಿರಲಿಲ್ಲ.
ಅಂಗಚ್ಛೇದನ (ಆಂಫ್ಯುಟೇಶನ್)
ಯುದ್ಧದಲ್ಲಿ ಗಾಯಗೊಂಡ ಅಥವಾ ಗ್ಯಾಂಗ್ರಿನ್ (ಕೊಳೆತ) ಆದ ಕೈಕಾಲುಗಳನ್ನು ಕತ್ತರಿಸಿ ತೆಗೆಯಲು ಇವರೇ ಬೇಕಾಗುತ್ತಿದ್ದರು. ರೋಗಿಗೆ ಮದ್ಯವನ್ನು ಕುಡಿಸಿ ಅಥವಾ ಪ್ರಜ್ಞೆ ತಪ್ಪಿಸಿ, ಕೇವಲ ಕೆಲವೇ ನಿಮಿಷಗಳಲ್ಲಿ ಚೂಪಾದ ಕತ್ತಿಯಿಂದ ಕೈ ಅಥವಾ ಕಾಲನ್ನು ಕತ್ತರಿಸು ತ್ತಿದ್ದರು. ರಕ್ತಸ್ರಾವ ವಾಗುತ್ತಿರುವ ಸ್ಥಳವನ್ನು ಕಾದ ಕಬ್ಬಿಣದಿಂದ ಸುಟ್ಟು ರಕ್ತವನ್ನು ನಿಲ್ಲಿಸುತ್ತಿದ್ದರು.
ಬಾರ್ಬರ್ ಪೋಲ್
ಇಂದಿಗೂ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಸಲೂನ್‌ಗಳ ಮುಂದೆ ಕೆಂಪು, ಬಿಳಿ ಮತ್ತು ಕೆಲವು ಕಡೆ ನೀಲಿ ಬಣ್ಣದ ಗೆರೆಗಳುಳ್ಳ ತಿರುಗುವ ಕಂಬಗಳನ್ನು ನಾವು ಕಾಣಬಹುದು. ಇವು ಕೇವಲ ಅಲಂಕಾರಿಕ ವಸ್ತುಗಳಲ್ಲ, ಬದಲಿಗೆ ಮಧ್ಯಯುಗದ ಭೀಕರ ವೈದ್ಯಕೀಯ ಇತಿಹಾಸಕ್ಕೆ ಸಾಂಕೇತಿಕ ಸಾಕ್ಷ್ಯಗಳಾಗಿವೆ. ಅಂದಿನ ಕಾಲದ ಜನಸಾಮಾನ್ಯ ರಲ್ಲಿ ಸಾಕ್ಷರತೆಯ ಕೊರತೆಯಿತ್ತು. ಜನರಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ಹಾಗಾಗಿ ಪ್ರತಿಯೊಂದು ಅಂಗಡಿಯವರೂ, ತಮ್ಮ ವೃತ್ತಿ ಯನ್ನು ಪ್ರಚುರಪಡಿಸಲು ಬೋರ್ಡ್‌ಗಳ ಬದಲಿಗೆ ಕೆಲವ ಸಂಕೇತಗಳನ್ನು ಬಳಸುತ್ತಿದ್ದರು. ಹಾಗಾಗಿ ಕ್ಷೌರಿಕರು ತಮ್ಮ ವೃತ್ತಿಯ ಗುರುತಾಗಿ ಈ ‘ಬಾರ್ಬರ್ ಪೋಲ್’ ಅನ್ನು ಬಳಸಿದರು. ಈ ಬಾರ್ಬರ್ ಪೋಲ್ ಅಥವಾ ಕ್ಷೌರಿಕರ ಲಾಂಛನದ ಹಿಂದಿನ ಕಥೆಯು ಸೋಜಿಗವಾ ಗಿದೆ ಹಾಗೂ ಜುಗುಪ್ಸೆಯನ್ನು ತರುವಂತೆ ಇದೆ.
ಕಣ್ಣಿನ ಪೊರೆ ತೆಗೆಯುವುದು (ಕೌಚಿಂಗ್-ಕ್ಯಾಟರಾಕ್ಟ್)
ಕಣ್ಣಿನ ಪೊರೆಯನ್ನು ನಿವಾರಿಸುವ ಅವರ ಶಸ್ತ್ರಚಿಕಿತ್ಸಾ ವಿಧಾನವು ಭಯವನ್ನು ಹುಟ್ಟಿಸು ವಂತಿತ್ತು. ಒಂದು ಚೂಪಾದ ಸೂಜಿಯಿಂದ ಕಣ್ಣಿನ ಮಸೂರವನ್ನು ಹಿಂದಕ್ಕೆ ತಳ್ಳುತ್ತಿದ್ದರು. ಇದು ಅತ್ಯಂತ ಅಪಾಯಕಾರಿ ಶಸ್ತ್ರಚಿಕಿತ್ಸೆಯಾಗಿತ್ತು.
ಬಾವು ಛೇದನ
ಕೀವು ತುಂಬಿದ ಬಾವನ್ನು ಕ್ಷಣಮಾತ್ರದಲ್ಲಿ ಸೀಳಿ ಕೀವನ್ನು ಹೊರಗೆ ಹರಿಸುತ್ತಿದ್ದರು.
ಗರ್ಭಾಶಯ ಛೇದನ
ಇವರು ಸಿಸೇರಿಯನ್ ಆಪರೇಶನ್ ಮಾಡುತ್ತಿರಲಿಲ್ಲ. ಏಕೆಂದರೆ ಇವರಿಗೆ ರಕ್ತಸ್ರಾವವನ್ನು ತಡೆಯುವುದನ್ನಾಗಲಿ, ಛೇದಿಸಿದ ಗರ್ಭಾಶಯವನ್ನು ಹೊಲಿಯುವುದಾಗಲಿ ಹಾಗೂ ಸೋಂಕನ್ನು ತಡೆಗಟ್ಟುವುದಾಗಲಿ ತಿಳಿದಿರಲಿಲ್ಲ. ಇವರು ಮೃತ ಗರ್ಭವತಿಯ ಒಡಲನ್ನು ಛೇದಿಸಿ ಮೃತ ಶಿಶುವನ್ನು ಹೊರ ತೆಗೆಯುತ್ತಿದ್ದರು. ಕೆಲವು ಸಲ ಜೀವಂತ ಮಗವು ಗರ್ಭಾಶಯದಲ್ಲಿ ಅಡ್ಡಡ್ಡಕ್ಕೆ ಸಿಲುಕಿ ತಾಯಿ ಜೀವಕ್ಕೆ ಅಪಾಯವಾಗಬಹುದಾದ ಸಂದರ್ಭದಲ್ಲಿ, ಈ ಕ್ಷೌರಿಕ-ಶಸ್ತ್ರವೈದ್ಯರು ಬಹಳ ನಾಜೂಕಿನಿಂದ ಗರ್ಭಾಶಯದಲ್ಲಿರುವ ಶಿಶುವನ್ನು ತುಂಡು ತುಂಡಾಗ ಕತ್ತರಿಸಿ, ಹೊರ ತೆಗೆಯುತ್ತಿದ್ದರು ಹಾಗೂ ತಾಯಿಯ ಜೀವವನ್ನು ಉಳಿಸುತ್ತಿದ್ದರು.
ಪೋಲ್
ಇದೊಂದು ಮರದ ಕೋಲು ಆಗಿತ್ತು. ಯಾರು ರಕ್ತಮೋಕ್ಷಣಕ್ಕೆ ಒಳಗಾಗುತ್ತಾರೋ, ಅವರು ಈ ಕೋಲನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕಾಗಿತ್ತು. ಆಗ ಅವರ ತೋಳಿನಲ್ಲಿದ್ದ ರಕ್ತನಾಳಗಳು ಎದ್ದು ನಿಲ್ಲುತ್ತಿದ್ದವು. ಆಗ ಸೂಕ್ತ ರಕ್ತನಾಳವನ್ನು ಆಯ್ಕೆ ಮಾಡಿ, ಛೇದಿಸಿ, ನಿಗದಿತ ಪ್ರಮಾಣದ ರಕ್ತವನ್ನು ಒಂದು ಬಟ್ಟಲಿನಲ್ಲಿ ಸಂಗ್ರಹಿಸುತ್ತಿದ್ದರು. ನಂತರದ ದಿನಗಳಲ್ಲಿ ತಮ್ಮ ಸಲೂನಿನ ಎದುರಿನಲ್ಲಿ ಒಂದು ಲೋಹದ ಕಂಬವನ್ನು ನೆಡುತ್ತಿದ್ದರು.
ಬಿಳಿಯ ಬಣ್ಣ
ಮರದ ಕೋಲು ಅಥವ ಕಂಬದಲ್ಲಿ ಬಿಳಿ ಬಣ್ಣವಿರುತ್ತಿತ್ತು. ಇದು ರಕ್ತಸ್ರಾವವನ್ನು ತಡೆಗಟ್ಟಲು ಅಥವಾ ಗಾಯಕ್ಕೆ ಪಟ್ಟಿ ಕಟ್ಟಲು ಬಳಸುತ್ತಿದ್ದ ಸ್ವಚ್ಛವಾದ ಬ್ಯಾಂಡೇಜ್ (ಬಟ್ಟೆ) ಅನ್ನು ಸೂಚಿಸುತ್ತಿತ್ತು.
ಕೆಂಪು ಬಣ್ಣ
ಕಂಬದಲ್ಲಿದ್ದ ಕೆಂಪುಬಣ್ಣವು ರಕ್ತಮೋಕ್ಷಣವನ್ನು ಮಾಡುವಾಗ ಹರಿಯುವ ರಕ್ತದ ಸಂಕೇತ ವಾಗಿತ್ತು.
ತಿರುಗುವ ವಿನ್ಯಾಸ (ಸ್ಪೈರಲಿಂಗ್)
ರಕ್ತಮೋಕ್ಷಣದ ನಂತರ ತೊಳೆದ ಬ್ಯಾಂಡೇಜ್ ಬಟ್ಟೆಗಳನ್ನು ಒಣಗಿಸಲು ಈ ಲೋಹದ ಕಂಬಕ್ಕೆ ಸುತ್ತುತ್ತಿದ್ದರು. ಗಾಳಿಗೆ ಆ ಬಟ್ಟೆಗಳು ಕಂಬದ ಸುತ್ತ ತಿರುಗುತ್ತಿದ್ದಂತೆ ಕಾಣುತ್ತಿದ್ದವು. ಅದೇ ಇಂದಿನ ತಿರುಗುವ ಬಾರ್ಬರ್ ಪೋಲ್ ವಿನ್ಯಾಸಕ್ಕೆ ಕಾರಣವಾಯಿತು.
ನೀಲಿ ಬಣ್ಣ
ಕೆಲವು ಇತಿಹಾಸಕಾರರ ಪ್ರಕಾರ, ನೀಲಿ ಬಣ್ಣವು ರಕ್ತನಾಳಲ್ಲಿ ಹರಿಯುವ ರಕ್ತವನ್ನು ಸೂಚಿಸು ತ್ತದೆಯಂತೆ. ಈ ಕಂಬ ಮೇಲುಗಡೆ ಒಂದು ಹಿತ್ತಾಳೆ ಪಾತ್ರೆ ಹಾಗೂ ಕೆಳಗಡೆ ಒಂದು ಹಿತ್ತಾಳೆ ಪಾತ್ರೆ ಇರುತ್ತಿದ್ದವು. ಮೇಲಿನ ಪಾತ್ರೆಯಲ್ಲಿ ಜಿಗಣೆಗಳನ್ನು ಇಟ್ಟಿರುತ್ತಿದ್ದರು. ಕೆಲವು ವಿಶೇಷ ಸಂದರ್ಭ ಗಳಲ್ಲಿ ಜಿಗಣೆಗಳನ್ನು ಅಂಗಕ್ಕೆ ಕಚ್ಚಿಸಿ ರಕ್ತಮೋಕ್ಷಣವನ್ನು ಮಾಡುತ್ತಿದ್ದರು. ರಕ್ತಮೋಕ್ಷಣದಲ್ಲಿ ಹೊರಹರಿಯುವ ರಕ್ತವನ್ನು ಕೆಳಗಿನ ಪಾತ್ರೆಯಲ್ಲಿ ಸಂಗಹಿಸುತ್ತಿದ್ದರು. ಇವು ಸಾಂಕೇತಿಕವಾಗಿದ್ದವು.
ಅಂಬ್ರೋಸ್ ಪ್ಯಾರೆ
ಇವರು ಆಧುನಿಕ ಶಸಚಿಕಿತ್ಸಾ ವಿಜ್ಞಾನದ ಪಿತಾಮಹರಲ್ಲಿ ಒಬ್ಬರು. ಕ್ಷೌರಿಕ-ಶಸಚಿಕಿತ್ಸಕರ ಇತಿಹಾಸವನ್ನು ಬದಲಾಯಿಸಿದ ಅತ್ಯಂತ ಪ್ರಮುಖ ವ್ಯಕ್ತಿ ಫ್ರಾನ್ಸ್ ದೇಶದ ಅಂಬ್ರೋಸ್ ಪ್ಯಾರೆ (1510-1590). ಇವರು ಒಬ್ಬ ಸಾಮಾನ್ಯ ಕ್ಷೌರಿಕನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ಕೇವಲ ತಮ್ಮ ಪ್ರತಿಭೆಯ ಆಧಾರದ ಮೇಲೆ ಫ್ರೆಂಚ್ ಸೈನ್ಯವನ್ನು ಸೇರಿ ಅಲ್ಲಿ ಶಸ್ತ್ರಚಿಕಿತ್ಸಕ ರಾದರು.
ಅಂದಿನ ದಿನದ ಯುದ್ಧಗಳಲ್ಲಿ ಬಂದೂಕನ್ನು ಹಾಗೂ ಫಿರಂಗಿಗಳನ್ನು ಬಳಸುತ್ತಿದ್ದರು. ಸೈನಿಕರಿಗೆ ಗುಂಡು ತಗುಲಿ ರಕ್ತಸ್ರಾವವಾಗುತ್ತಿತ್ತು. ಈ ರಕ್ತಸ್ರಾವವನ್ನು ತಡೆಯದಿದ್ದರೆ, ಆ ಸೈನಿಕನು ಅಲ್ಲೇ ಸಾಯುವ ಸಾಧ್ಯತೆಯಿತ್ತು. ಹಾಗಾಗಿ ಕಾದು ಮರಳುವ ಎಣ್ಣೆಯನ್ನು ಗಾಯದ ಮೇಲೆ ಹೊಯ್ಯು ತ್ತಿದ್ದರು.
ಹೊಯ್ಯುವಾಗ ಯಾವುದೇ ರೀತಿಯ ಅರಿವಳಿಕೆಯನ್ನು ಬಳಸುತ್ತಿರಲಿಲ್ಲ. ಮರಳುವ ಎಣ್ಣೆಯು ಗಾಯವಿರುವ ಪ್ರದೇಶವನ್ನು ಸುಡುವಾಗ, ರಕ್ತಸ್ರಾವವಾಗುತ್ತಿದ್ದ ರಕ್ತನಾಳವನ್ನೂ ಸುಡುತ್ತಿತ್ತು. ಆಗ ರಕ್ತಸ್ರಾವವು ನಿಲ್ಲುತ್ತಿತ್ತು. ಒಂದು ದಿನ ಯುದ್ಧಭೂಮಿಯಲ್ಲಿ ಕಾದ ಎಣ್ಣೆ ಖಾಲಿಯಾದಾಗ, ಪ್ಯಾರೆ ಅವರು ಗುಲಾಬಿ ಎಣ್ಣೆ, ಮೊಟ್ಟೆಯ ಹಳದಿ ಲೋಳೆ ಮತ್ತು ಟರ್ಪಂಟೈನ್ ಮಿಶ್ರಣವನ್ನು ಗಾಯಕ್ಕೆ ಹಚ್ಚಿದರು. ಮರುದಿನ, ಕಾದ ಎಣ್ಣೆ ಹೊಯ್ಯಿಸಿಕೊಂಡಿದ್ದ ಸೈನಿಕರು ತೀವ್ರ ಜ್ವರ ಮತ್ತು ನೋವಿ ನಿಂದ ನರಳುತ್ತಿದ್ದರೆ, ಟರ್ಪೆಂಟೈನ್ ಮಿಶ್ರಣವನ್ನು ಹಚ್ಚಿಸಿಕೊಂಡಿದ್ದ ಸೈನಿಕರು ನಿರಾಳವಾಗಿ ನಿದ್ದೆಯನ್ನು ಮಾಡಿ, ಬೇಗ ಗುಣಮುಖರಾದರು.
ಅಂದಿನಿಂದ ಯುದ್ಧರಂಗದ ಚಿಕಿತ್ಸಾ ವೈದ್ಯಕೀಯದ ಚಿತ್ರವೇ ಬದಲಾಯಿತು. ಅಂಬ್ರೋಸ್ ಪ್ಯಾರೆ ಅವರು ಕತ್ತರಿಸಿದ ಅಂಗಾಗಗಳ ರಕ್ತನಾಳಗಳನ್ನು ಕಾದ ಕಬ್ಬಿಣದಿಂದ ಸುಡುವ ಬದಲಿಗೆ, ‘ಲಿಗೇಚರ್’ (ರಕ್ತಸ್ರಾವವಾಗುತ್ತಿರುವ ನಾಳಗಳನ್ನು ದಾರದಿಂದ ಕಟ್ಟುವುದು) ವಿಧಾನವನ್ನು ಮರು ಪರಿಚಯಿಸಿದರು. ಇವರು ಕ್ಷೌರಿಕ ಸಮುದಾಯದಿಂದ ಬಂದವರಾಗಿದ್ದರೂ, ತಮ್ಮ ಅದ್ಭುತ ಸಂಶೋಧನೆಗಳಿಂದಾಗಿ ಇಂದು ಆಧುನಿಕ ಶಸಚಿಕಿತ್ಸಾ ವಿಜ್ಞಾನದ ಪಿತಾಮಹರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ವೃತ್ತಿಗಳ ಪ್ರತ್ಯೇಕತೆ
ಕಾಲಕ್ರಮೇಣ ವೈದ್ಯಕೀಯ ವಿದ್ಯಾಲಯಗಳಲ್ಲಿ ಶಸ್ತ್ರಚಿಕಿತ್ಸಾ ವಿಜ್ಞಾನವನ್ನು ಬೋಧಿಸಲಾ ರಂಭಿಸಿದರು. ವಿಶ್ವವಿದ್ಯಾನಿಲಯದಲ್ಲಿ ತರಬೇತಿ ಪಡೆದ ಶಸ್ತ್ರವೈದ್ಯರು ಸಹಜವಾಗಿ ಕ್ಷೌರಿಕ-ಶಸ್ತ್ರವೈದ್ಯರ ಬಗ್ಗೆ ಅಸಹನೆಯನ್ನು ತೋರಿದರು. ಕ್ಷೌರಿಕರು ಕೇವಲ ಹಸ್ತ ಕೌಶಲ್ಯದ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದನ್ನು ಅಪಾಯಕಾರಿ ಎನ್ನುವುದನ್ನು ಬಿತ್ತಿ ಬೆಳೆದರು.
ಇಂಗ್ಲೆಂಡ್‌ನ ರಾಜ 8ನೇ ಹೆನ್ರಿಯು 1540ರಲ್ಲಿ ‘ಫೆಲೋಶಿಪ್ ಆಫ್ ಸರ್ಜನ್ಸ್’ ಮತ್ತು ‘ಬಾರ್ಬರ್ಸ್ ಕಂಪನಿ’ಯನ್ನು ಒಟ್ಟುಗೂಡಿಸಿ ಯುನೈಟೆಡ್ ಬಾರ್ಬರ್-ಸರ್ಜನ್ಸ್ ಕಂಪನಿಯನ್ನು ಸ್ಥಾಪಿಸಿದ. ಜತೆಗೆ ಒಂದು ಕಠಿಣ ನಿಯಮವನ್ನೂ ತಂದ, ಕೂದಲು ಕತ್ತರಿಸುವ ಕ್ಷೌರಿಕರು ಶಸ್ತ್ರ ಚಿಕಿತ್ಸೆಯನ್ನು ಮಾಡುವಂತಿಲ್ಲ ಮತ್ತು ಶಸ್ತ್ರಚಿಕಿತ್ಸೆಯನ್ನು ಮಾಡುವವರು ಕೂದಲು ಕತ್ತರಿಸುವಂತಿಲ್ಲ! ಆದರೆ, ಇಬ್ಬರೂ ಹಲ್ಲುಗಳನ್ನು ಕೀಳಬಹುದಾಗಿತ್ತು.
ಅಂತಿಮವಾಗಿ 1745ರಲ್ಲಿ, ಬ್ರಿಟನ್‌ನಲ್ಲಿ ಕಿಂಗ್ ಇಮ್ಮಡಿ ಜಾರ್ಜ್‌ರ ಆಳ್ವಿಕೆಯಲ್ಲಿ, ಶಸ್ತ್ರಚಿಕಿತ್ಸಕರು ಕ್ಷೌರಿಕರಿಂದ ಸಂಪೂರ್ಣವಾಗಿ ಬೇರ್ಪಟ್ಟರು. ಶಸ್ತ್ರಚಿಕಿತ್ಸಕರು ಲಂಡನ್ ಸರ್ಜನ್ಸ್ ಕಂಪನಿಯನ್ನು ಸ್ಥಾಪಿಸಿದರು. ಇದುವೇ ಇಂದಿನ ಪ್ರಸಿದ್ಧ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಗಿ ರೂಪಾಂತರ ಗೊಂಡಿದೆ. ಇಲ್ಲಿಗೆ ಕ್ಷೌರಿಕ ಮತ್ತು ಶಸಚಿಕಿತ್ಸಕರ ಐತಿಹಾಸಿಕ ಸಂಬಂಧ ಶಾಶ್ವತವಾಗಿ ಕೊನೆಗೊಂಡಿತು.
ಪ್ರಸ್ತುತತೆ
ಇಂದು ಕ್ಷೌರಿಕರು ಮತ್ತು ಶಸಚಿಕಿತ್ಸಕರು ಸಂಪೂರ್ಣ ಭಿನ್ನ ವೃತ್ತಿಯಲ್ಲಿ ತೊಡಗಿರುವುದು ಸತ್ಯ. ಕ್ಷೌರಿಕ-ಶಸ್ತ್ರವೈದ್ಯರ ಇತಿಹಾಸವು ನಮಗೆ ಹಲವು ಪ್ರಮುಖ ಪಾಠಗಳನ್ನು ಮತ್ತು ಪ್ರಸ್ತುತತೆ ಯನ್ನು ನೆನಪಿಸುತ್ತದೆ. ಇಂದಿಗೂ ಇಂಗ್ಲೆಂಡ್ ಮತ್ತು ಕೆಲವು ಕಾಮನ್‌ವೆಲ್ತ್ ದೇಶಗಳಲ್ಲಿ, ಒಬ್ಬ ಸಾಮಾನ್ಯ ವೈದ್ಯನನ್ನು ಡಾಕ್ಟರ್ ಎಂದು ಕರೆದರೆ, ಒಬ್ಬ ಉನ್ನತ ಶಸ್ತ್ರಚಿಕಿತ್ಸಕನನ್ನು ಅತ್ಯಂತ ಗೌರವದಿಂದ ಮಿಸ್ಟರ್ ಎಂದು ಕರೆಯುವ ಪದ್ಧತಿಯಿದೆ. ತಾವು ಸಾಮಾನ್ಯ ಕ್ಷೌರಿಕ-ಶಸ್ತ್ರ ಚಿಕಿತ್ಸಕರಿಗಿಂತ ಭಿನ್ನ ಮತ್ತು ಉನ್ನತ ಎಂದು ತೋರಿಸಿಕೊಳ್ಳಲು ಅಂದಿನ ವೈದ್ಯರು ಆರಂಭಿಸಿದ ಈ ಸಂಪ್ರದಾಯವು ಇಂದಿಗೂ ಗೌರವದ ಸಂಕೇತವಾಗಿ ಮುಂದುವರಿದಿದೆ.
ಹಸ್ತ ಕೌಶಲ್ಯ ಮತ್ತು ತಂತ್ರಜ್ಞಾನದ ಸಮ್ಮಿಲನ
ಇಂದಿನ ರೋಬೋಟಿಕ್ ಶಸಚಿಕಿತ್ಸೆ ಅಥವಾ ಲ್ಯಾಪರೊಸ್ಕೋಪಿಯ ಯುಗದಲ್ಲೂ, ಒಬ್ಬ ಶಸ್ತ್ರ ಚಿಕಿತ್ಸಕನಿಗೆ ಇರಬೇಕಾದ ಅತ್ಯಂತ ಮುಖ್ಯ ಗುಣವೆಂದರೆ ಕೈಗಳ ನೈಪುಣ್ಯತೆ (ಮ್ಯಾನ್ಯುವಲ್ ಡೆಕ್ಸ್ ಟಿರಿಟಿ). ಅಂದು ಕ್ಷೌರಿಕರು ಕೇವಲ ತಮ್ಮ ಕೈಚಳಕದಿಂದಲೇ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದರು. ಇಂದಿನ ವೈದ್ಯಕೀಯ ಶಿಕ್ಷಣದಲ್ಲೂ ಕೇವಲ ಜ್ಞಾನವಿದ್ದರೆ ಸಾಲದು; ಪ್ರಾಯೋಗಿಕ ಕೌಶಲ್ಯವೂ ಅಷ್ಟೇ ಮುಖ್ಯ ಎನ್ನುವುದಕ್ಕೆ-ಕ್ಷೌರಿಕ ಶಸ್ತ್ರವೈದ್ಯರ ಈ ಇತಿಹಾಸವೇ ಸಾಕ್ಷಿಯಾಗಿದೆ.
ವೃತ್ತಿ ಗೌರವದ ಪಾಠ (ಎಂಪಥಿ ಅಂಡ್ ಡಿಗ್ನಿಟಿ ಆಫ್ ಲೇಬರ್)
ಅಂದಿನ ಕಾಲದ ಸುಶಿಕ್ಷಿತ ವೈದ್ಯರು ರೋಗಿಯ ದೇಹವನ್ನು ಮುಟ್ಟಲು ಅಸಹ್ಯ ಪಡುತ್ತಿದ್ದಾಗ, ಸಮಾಜದಲ್ಲಿ ಕೆಳಮಟ್ಟದಲ್ಲಿದ್ದ ಕ್ಷೌರಿಕರು ರೋಗಿಗಳ ಕೀವು, ರಕ್ತವನ್ನು ಒರೆಸಿ ಜೀವವನ್ನು ಉಳಿಸಿದರು ಎನ್ನುವುದನ್ನು ನಾವು ಮರೆಯಬಾರದು. ಇದು ವೈದ್ಯಕೀಯ ರಂಗದಲ್ಲಿ, ಕ್ಷೌರಿಕರ ಬಗ್ಗೆ ಇರಬೇಕಾದ ಮಾನವೀಯತೆ ಮತ್ತು ಯಾವುದೇ ಕೆಲಸ ಕೀಳಲ್ಲ ಎಂಬ ವಿಚಾರವು ಗೌರವದ ಸಂಕೇತವಾಗಿ ಉಳಿಯಬೇಕಿದೆ.