ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr N Someshwara Column: ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದರು!

ವೈದ್ಯರಿಗೆ ಮಧುಮೇಹದಲ್ಲಿ ಎರಡು ವಿಧಗಳು ಇರುವ ಬಗ್ಗೆ ಗುಮಾನಿಯು 1936ರಲ್ಲಿ ಬಂದಿತು. ಈ ಎರಡು ನಮೂನೆಗಳಿಗೆ ನಮೂನೆ-1 ಮತ್ತು ನಮೂನೆ-2 ಎಂಬ ಹೆಸರನ್ನು ವಿಶ್ವ ಆರೋಗ್ಯ ಸಂಸ್ಥೆಯು 1999ರಲ್ಲಿ ನೀಡಿತು. ಲಿಯೋನಾರ್ಡ್ ಬದುಕಿದ್ದ ಕಾಲದಲ್ಲಿ ಮಧುಮೇಹದಲ್ಲಿ ಎರಡು ನಮೂನೆಗಳು ಇರುವ ವಿಚಾರವು ತಿಳಿದಿರಲಿಲ್ಲ

ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದರು!

-

ಹಿಂದಿರುಗಿ ನೋಡಿದಾಗ

1922ರ ಜನವರಿಯ ಒಂದು ತಣ್ಣನೆಯ ಬೆಳಗ್ಗೆ. ಟೊರೊಂಟೊ ಜನರಲ್ ಆಸ್ಪತ್ರೆಯ ಮಂಚವೊಂದರಲ್ಲಿ ಹದಿನಾಲ್ಕು ವರ್ಷದ ಬಾಲಕನೊಬ್ಬ ಅಸ್ಥಿಪಂಜರದಂತೆ ಮಲಗಿದ್ದ. ಅವನ ಹೆಸರು ಲಿಯೊನಾರ್ಡ್ ಥಾಂಪ್ಸನ್ (1908-1935). ಕಣ್ಣುಗಳಲ್ಲಿ ಬದುಕಬೇಕೆಂಬ ಆಸೆ ಇತ್ತು; ಆದರೆ ಆ ಆಸೆಯನ್ನು ನೆರವೇರಿಸುವ ಶಕ್ತಿ ದೇಹದಲ್ಲಿರಲಿಲ್ಲ. ಅವನ ಇಷ್ಟದ ಆಹಾರವು ಎದುರಿಗಿತ್ತು. ಅವನು ಆಹಾರವನ್ನು ತಿನ್ನಲೂ ಸಿದ್ಧವಾಗಿದ್ದ. ಆದರೆ ದುರದೃಷ್ಟವಶಾತ್, ಅವನ ದೇಹ ಅದನ್ನು ಬಳಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅವನ ರಕ್ತದಲ್ಲಿ ಸಕ್ಕರೆಯು ತುಂಬಿ ಹರಿಯುತ್ತಿತ್ತು! ಆದರೂ ಅವನ ಜೀವಕೋಶಗಳು ಹಸಿವಿನಿಂದ ನರಳುತ್ತಿದ್ದವು. ಸಕ್ಕರೆಯನ್ನು ಬಳಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿದ್ದವು. ಲಿಯೊನಾರ್ಡ್ ಯಾವುದೇ ಆಸ್ಪತ್ರೆಯ ಕೈದಿಯಾಗಿರಲಿಲ್ಲ. ಆದರೆ ಅವನು ತನ್ನದೇ ದೇಹದೊಳಗೆ ಬಂಧಿಯಾಗಿದ್ದ. ಅವನಿದ್ದ ಸೆರೆಮನೆಯ ಹೆಸರು ನಮೂನೆ-1 ಮಧುಮೇಹ ಅಥವ ಟೈಪ್-1 ಡಯಾಬಿಟಿಸ್!

ಸಿಹಿ ಮೂತ್ರ-ಮರಣ: ಮಧುಮೇಹದ ವೈಜ್ಞಾನಿಕ ನಾಮಧೇಯ ಡಯಾಬಿಟಿಸ್ ಮೆಲಿಟಸ್. ಗ್ರೀಕ್ ಭಾಷೆಯಲ್ಲಿ ಡಯಾಬಿಟೆಸ್ ಎಂದರೆ ಹರಿದು ಹೋಗುವುದು. ಮೆಲಿಟಸ್ ಎಂದರೆ ಜೇನಿನ ಹಾಗೆ ಸಿಹಿ ಎಂದರ್ಥ. ಪ್ರಾಚೀನ ವೈದ್ಯರು ಕೆಲವು ರೋಗಿಗಳ ಮೂತ್ರಕ್ಕೆ ಇರುವ ಅಸಾಮಾನ್ಯ ಸಿಹಿತನ ವನ್ನು ಗಮನಿಸಿದ್ದರು. ಭಾರತದಲ್ಲಿಯೂ ಡಯಾಬಿಟಿಸ್ ಕಾಯಿಲೆಯನ್ನು ‘ಮಧುಮೇಹ’ ಅಥವಾ ‘ಮಧುಮೂತ್ರ’ ಎಂದು ವರ್ಣಿಸಿ, ರೋಗಿಯ ಮೂತ್ರದ ಸುತ್ತ ಇರುವೆಗಳು ಸೇರುವುದನ್ನು ವೈದ್ಯರು ದಾಖಲಿಸಿದ್ದರು.

ಇದನ್ನೂ ಓದಿ: Dr N Someshwara Column: ಕೋಮಾದಲ್ಲಿದ್ದವನು ಅಮ್ಮಾ...ಎಂದು ಕರೆದ !

ವೈದ್ಯರಿಗೆ ಮಧುಮೇಹದಲ್ಲಿ ಎರಡು ವಿಧಗಳು ಇರುವ ಬಗ್ಗೆ ಗುಮಾನಿಯು 1936ರಲ್ಲಿ ಬಂದಿತು. ಈ ಎರಡು ನಮೂನೆಗಳಿಗೆ ನಮೂನೆ-1 ಮತ್ತು ನಮೂನೆ-2 ಎಂಬ ಹೆಸರನ್ನು ವಿಶ್ವ ಆರೋಗ್ಯ ಸಂಸ್ಥೆಯು 1999ರಲ್ಲಿ ನೀಡಿತು. ಲಿಯೋನಾರ್ಡ್ ಬದುಕಿದ್ದ ಕಾಲದಲ್ಲಿ ಮಧುಮೇಹದಲ್ಲಿ ಎರಡು ನಮೂನೆಗಳು ಇರುವ ವಿಚಾರವು ತಿಳಿದಿರಲಿಲ್ಲ. ಆದರೆ ಲಿಯೋನಾರ್ಡನಿಗೆ ಇದ್ದದ್ದು ನಮೂನೆ-1 ಮಧುಮೇಹವು ಎಂದು ಈಗ ತಿಳಿದುಬಂದಿದೆ. ಅಂದಿನ ದಿನಗಳಲ್ಲಿ ಮಧುಮೇಹ-ನಮೂನೆ 1 ಬಂದರೆ, ಮಕ್ಕಳು ಅಕಾಲದಲ್ಲಿ ಸಾಯುವುದು ಖಚಿತವಾಗಿತ್ತು.

ಕೀಲಿಕೈ: ನಾವು ತಿನ್ನುವ ಆಹಾರವು ಜೀರ್ಣವಾದ ಮೇಲೆ ಪ್ರಧಾನವಾಗಿ ಗ್ಲೂಕೋಸ್ ಎಂಬ ಸಕ್ಕರೆ ಯಾಗಿ ಪರಿವರ್ತನೆಯಾಗುತ್ತದೆ. ರಕ್ತಪ್ರವಾಹದಲ್ಲಿ ಹರಿದುಬರುವ ಗ್ಲೂಕೋಸ್ ಜೀವಕೋಶ ಗಳೆಂಬ ಮನೆ ಯೊಳಗೆ ಹೋಗಬೇಕಾಗಿದೆ. ಇನ್ಸುಲಿನ್ ಆ ಮನೆಯ ಬಾಗಿಲಿಗೆ ಹಾಕಿರುವ ಬೀಗವನ್ನು ತೆರೆಯಬಲ್ಲ ಕೀಲಿಕೈ. ತಾನು ಜೀವಕೋಶದ ಬಾಗಿಲನ್ನು ತೆರೆದು ಗ್ಲೂಕೋಸನ್ನು ಒಳಗೆ ಹೋಗಲು ಅವಕಾಶವನ್ನು ಮಾಡಿಕೊಡುತ್ತದೆ. ಜೀವಕೋಶವೆಂಬ ಮನೆಯಲ್ಲಿ ಗ್ಲೂಕೋಸ್ ಎಂಬ ಇಂಧನಕ್ಕೆ ಆಕ್ಸಿಜನ್ ಎಂಬ ಕಿಡಿಯು ಬೆಂಕಿಯನ್ನು ಹೊತ್ತಿಸಿ, ಇಂಧನವನ್ನು ಉರಿಸುತ್ತದೆ. ಆಗ ನಮಗೆ ಶಕ್ತಿಯು ಬಿಡುಗಡೆಯಾಗುತ್ತದೆ.

ಮಧುಮೇಹ ಪೀಡಿತರಲ್ಲಿ ಮಾಂಸಲಿ ಅಥವ ಪ್ಯಾನ್‌ಕ್ರಿಯಾಸ್ ಗ್ರಂಥಿಯು ಇನ್ಸುಲಿನ್ ಉತ್ಪಾದನೆ ಯನ್ನು ನಿಲ್ಲಿಸುತ್ತದೆ. ಆಗ ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಬಾಗಿಲ ಮುಂದೆ ಮೂಟೆ ಮೂಟೆ ಗ್ಲೂಕೋಸ್ ಸಿದ್ಧವಾಗಿರುತ್ತದೆ. ಆದರೆ ಬಾಗಿಲನ್ನು ತೆರೆಯಲು ಇನ್ಸುಲಿನ್ ಇಲ್ಲ. ಮನೆಯ ಒಳಗೆ ಇರುವವರು ಹಸಿದಿzರೆ. ಮನೆಯ ಹೊರಗೆ ಗ್ಲೂಕೋಸ್ ಮೂಟೆಗಳಿವೆ. ಬಾಗಿಲನ್ನು ತೆರೆಯುವ ಇನ್ಸುಲಿನ್ ಇಲ್ಲದೇ ಮನೆಯವರೆಲ್ಲ ಉಪವಾಸ ಇರಬೇಕಾಗುತ್ತದೆ.

Screenshot_11 ಒಕ

ಕೀಲಿ ಇಲ್ಲದಾಗ ದೇಹವು ತನ್ನಲ್ಲಿ ದಾಸ್ತಾನಿರುವ ಕೊಬ್ಬು ಮತ್ತು ಸ್ನಾಯುಗಳನ್ನು ಸುಡಲು ಆರಂಭಿಸುತ್ತದೆ. ಮಗು ಅಪಾರವಾಗಿ ತಿನ್ನಬಹುದು, ಆದರೂ ಸೊರಗುತ್ತಲೇ ಹೋಗುತ್ತದೆ. ಅತಿ ಯಾದ ಬಾಯಾರಿಕೆ, ಪದೇ ಪದೆ ಮೂತ್ರವಿಸರ್ಜನೆ, ಅಪಾರ ನಿಃಶ್ಯಕ್ತಿ, ಉಸಿರಿನಲ್ಲಿ ಹಣ್ಣಿನಂತಹ ವಾಸನೆಯು ಬರುತ್ತದೆ. ಕೊನೆಗೆ ಕೀಟೋ ಆಮ್ಲೀಯತೆ (ಕೀಟೋಆಸಿಡೋಸಿಸ್) ಎಂಬ ಮಾರಕ ಸ್ಥಿತಿಯು ತಲೆದೋರಿ, ಮಗುವು ಕೋಮಾಕ್ಕೆ ಹೋಗುತ್ತದೆ ಹಾಗೂ ಕೋಮಾದಲ್ಲಿಯೇ ಮರಣ ವನ್ನಪ್ಪುತ್ತದೆ.

ಉಪವಾಸವೇ ಔಷಧಿ: ವೈದ್ಯರು ಮಧುಮೇಹವನ್ನು ನಿಯಂತ್ರಿಸಲು ಆಹಾರ ಸೇವನೆಯನ್ನು ನಿರ್ಬಂಧಿಸುತ್ತಿದ್ದರು. ಅಮೆರಿಕದ ವೈದ್ಯ ಫ್ರೆಡರಿಕ್ ಮ್ಯಾಡಿಸನ್ ಅಲೆನ್ (1879-1964) ರೂಪಿಸಿದ ಕಠಿಣ ‘ಉಪವಾಸ ಚಿಕಿತ್ಸೆ’ಯಲ್ಲಿ ರೋಗಿಗಳಿಗೆ ಕೆಲವೊಮ್ಮೆ ದಿನಕ್ಕೆ ಕೇವಲ 400 ರಿಂದ 600 ಕ್ಯಾಲರಿ ಗಳಷ್ಟೇ ಆಹಾರವನ್ನು ನೀಡುತ್ತಿದ್ದರು. ಸ್ವಲ್ಪ ತರಕಾರಿ, ತೆಳುವಾದ ಸೂಪ್ ಮತ್ತು ತೊಳೆದ ಗೋಧಿ ಹೊಟ್ಟು ಅಷ್ಟೆ! ಈ ಪಥ್ಯಾಹಾರವು ಮಧುಮೇಹವನ್ನು ಗುಣಪಡಿಸುತ್ತಿರಲಿಲ್ಲ. ಆದರೆ ರಕ್ತದಲ್ಲಿನ ಸಕ್ಕರೆಯ ಹಠಾತ್ ಏರಿಕೆಯನ್ನು ನಿಧಾನಗೊಳಿಸುತ್ತಿತ್ತು. ಮರಣವನ್ನು ಕೆಲವು ತಿಂಗಳು ಅಥವಾ ವರ್ಷಗಳವರೆಗೆ ಮುಂದೂಡುತ್ತಿತ್ತು. ಮಕ್ಕಳು ಮಧುಮೇಹದಿಂದ ಸಾಯುವುದಕ್ಕಿಂತ ಮೊದಲು ಹಸಿವಿನಿಂದ ಅಸ್ಥಿಪಂಜರಗಳಾಗುತ್ತಿದ್ದರು. ಒಂದು ಕುಟುಂಬವೆಂದರೆ ಮನೆಮಂದಿ ಯೆಲ್ಲ ಮೇಜಿನ ಮುಂದೆ ಕುಳಿತು ಊಟವನ್ನು ಮಾಡುತ್ತಾರಲ್ಲವೆ!

ಇಲ್ಲಿ ಹೆತ್ತವರು ಮಕ್ಕಳ ಮುಂದೆ ಊಟವನ್ನೇ ಮಾಡುತ್ತಿರಲಿಲ್ಲ. ಅಮ್ಮ ಮಾಡುವ ರುಚಿರುಚಿ ಯಾದ ಅಡುಗೆಯ ಸುವಾಸನೆಯ ಸುಳಿವು ಮಕ್ಕಳ ಗಮನಕ್ಕೆ ಬಾರದಂತೆ ಎಚ್ಚರ ವಹಿಸುತ್ತಿದ್ದರು. ಮಕ್ಕಳು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರಲಿಲ್ಲ ಹಾಗೆಯೇ ಬೇರೆಯವರ ಜನ್ಮದಿನಗಳ ಆಚರಣೆಗೂ ಹೋಗುತ್ತಿರಲಿಲ್ಲ. ಏಕೆಂದರೆ ಜನ್ಮದಿನದ ಕೇಕ್, ಹಬ್ಬದ ಸಿಹಿ, ಐಸ್‌ಕ್ರೀಮ್- ಎಲ್ಲವೂ ನಿಷಿದ್ಧವಾಗಿತ್ತು. ಮಧುಮೇಹವು ಉಗ್ರವಾದಾಗ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆ ಕಾಲದ ಮಧುಮೇಹ ವಾರ್ಡ್‌ಗಳು ಆಸ್ಪತ್ರೆಯ ಒಂದು ಭಾಗದಂತೆ ಕಾಣುತ್ತಿರಲಿಲ್ಲ. ಬದಲಿಗೆ ನಿಧಾನವಾಗಿ ಮೃತ್ಯುಮುಖದತ್ತ ಪಯಣ ಮಾಡುತ್ತಿದ್ದ ಮಕ್ಕಳ ಸಾವಿನ ನಿರೀಕ್ಷಣಾಲಯಗಳಂತೆ ಕಾಣುತ್ತಿದ್ದವು.

Screenshot_10 ಒಕ 1

ನಿದ್ರೆರಹಿತ ರಾತ್ರಿ: 1920ರ ಅಕ್ಟೋಬರ್ 31ರ ರಾತ್ರಿ. ಕೆನಡಾದ ಯುವ ಶಸ್ತ್ರಚಿಕಿತ್ಸಕ ಫೆಡರಿಕ್ ಗ್ರಾಂಟ್ ಬ್ಯಾಂಟಿಂಗ್ (1891-1941) ಅವರಿಗೆ ನಿದ್ರೆ ಬರಲಿಲ್ಲ. ಪ್ಯಾನ್‌ಕ್ರಿಯಾಸ್ ಗ್ರಂಥಿಯ ಕುರಿತು ಓದುತ್ತಿದ್ದಾಗ ಅವರಿಗೆ ಒಂದು ಯೋಚನೆಯು ಹೊಳೆಯಿತು. ಮಾಂಸಲಿ ಅಥವ ಪ್ಯಾನ್ಕ್ರಿಯಾಸ್ ಗ್ರಂಥಿಯಲ್ಲಿ ಎರಡು ಮುಖ್ಯ ಕಾರ್ಯವ್ಯವಸ್ಥೆಗಳಿವೆ. ಒಂದು ಜೀರ್ಣರಸಗಳನ್ನು ಉತ್ಪಾದಿಸುವ ಭಾಗ; ಇನ್ನೊಂದು ಲ್ಯಾಂಗರ್‌ಹಾನ್ಸ್ ದ್ವೀಪಿಕೆಗಳು. ಇವು ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ರಹಸ್ಯ ಪದಾರ್ಥವನ್ನು ಉತ್ಪಾದಿಸುತ್ತವೆ ಎಂದು ವಿಜ್ಞಾನಿಗಳು ಅನುಮಾನಿಸಿದ್ದರು. ಆ ಪದಾರ್ಥ ಕ್ಕೆ ಈಗಾಗಲೇ ‘ಇನ್ಸುಲಿನ್’ ಎಂಬ ಹೆಸರನ್ನು ಸೂಚಿಸಿದ್ದರು. ಆದರೆ ಇನ್ಸುಲಿನ್‌ನನ್ನು ಪ್ರತ್ಯೇಕಿಸಲು ವಿಜ್ಞಾನಿಗಳು ಅಸಮರ್ಥರಾಗಿದ್ದರು. ಜೀರ್ಣರಸ ಉತ್ಪಾದಿಸುವ ನಾಳಗಳನ್ನು ಕಟ್ಟಿದರೆ, ಜೀರ್ಣ ಕೋಶಗಳು ಕ್ಷೀಣಿಸಬಹುದು; ಆದರೆ ದ್ವೀಪಿಕೆಗಳು ಉಳಿಯ ಬಹುದು. ಆಗ ಅವುಗಳಿಂದ ರಕ್ತದ ಸಕ್ಕರೆಯನ್ನು ಕಡಿಮೆ ಮಾಡುವ ಪದಾರ್ಥವನ್ನು ಪಡೆಯಬಹುದೇ ಎಂದು ತಮ್ಮ ತರ್ಕವನ್ನು ಒಂದು ಕಾಗದದಲ್ಲಿ ಬರೆದರು. ನಂತರ ಸ್ವಲ್ಪ ದಿನಗಳಾದ ಮೇಲೆ ಒಂದು ಕಾರ್ಯ ಯೋಜನೆ ಯನ್ನು ರೂಪಿಸಿದರು.

ಟೊರೊಂಟೊ ವಿಶ್ವವಿದ್ಯಾಲಯದ ಶರೀರ ವಿಜ್ಞಾನ ಪ್ರಾಧ್ಯಾಪಕ ಜಾನ್ ಜೇಮ್ಸ್ ರಿಕರ್ಡ್ ಮ್ಯಾಕ್ಲಿ ಯಾಡ್ (1876-1935) ಅವರಿಗೆ ತಮ್ಮ ಕಾರ್ಯಯೋಜನೆಯ ವಿವರಗಳನ್ನು ನೀಡಿದರು. ಮ್ಯಾಕ್ಲಿಯಾಡ್ ಅವರು ಬ್ಯಾಂಟಿಂಗ್ ಕಾರ್ಯತಂತ್ರವನ್ನು ನಿರಾಕರಿಸಿದರು. ಕೊನೆಗೆ ಬ್ಯಾಂಟಿಂಗ್ ಅವರ ನಂಬಿಕೆಯನ್ನು ಏಕೆ ಪರೀಕ್ಷಿಸಬಾರದು ಎಂದು, ಒಂದು ಸಣ್ಣ ಪ್ರಯೋಗಾಲಯ, ಕೆಲವು ನಾಯಿಗಳು ಮತ್ತು ಸಹಾಯಕನನ್ನು ಒದಗಿಸಿದರು. ವೈದ್ಯಕೀಯ ವಿದ್ಯಾರ್ಥಿ ಚಾರ್ಲ್ಸ್ ಬೆಸ್ಟ್ (1899-1978) ಬ್ಯಾಂಟಿಂಗ್‌ರ ಜೊತೆಯಾದರು.

Screenshot_9 ಒಕ

ಮಾರ್ಜರಿ: ಬ್ಯಾಂಟಿಂಗ್ ಮತ್ತು ಬೆಸ್ಟ್ ನಾಯಿಗಳ ಮೇಲೆ ಪ್ರಯೋಗವನ್ನು ಮಾಡಲು ಸಿದ್ಧರಾದರು. ಮೊದಲು ನಾಯಿಗಳ ಪ್ಯಾನ್‌ಕ್ರಿಯಾಸ್ ಗ್ರಂಥಿಯನ್ನು ಶಸ್ತ್ರಕ್ರಿಯೆಯ ಮೂಲಕ ಛೇದಿಸಿ ತೆಗೆದರು. ಆಗ ನಾಯಿಯ ಒಡಲಿನಲ್ಲಿ ಮಧುಮೇಹವು ಕೃತಕವಾಗಿ ಆರಂಭವಾಯಿತು. ನಂತರ ಬೇರೆ ಬೇರೆ ನಾಯಿಗಳ ಪ್ಯಾನ್‌ಕ್ರಿಯಾಸ್ ಗ್ರಂಥಿಗಳಿಂದ ಒಂದು ಸಾರವನ್ನು ಸಿದ್ಧಪಡಿಸಿ ದರು. ಪ್ರಯೋಗಾಲಯದಲ್ಲಿದ್ದ ನಾಯಿಗಳಲ್ಲಿ ಒಂದು ನಾಯಿಗೆ ‘ಮಾರ್ಜರಿ’ ಎಂದು ನಾಮಕರಣ ವನ್ನು ಮಾಡಿದ್ದರು. ಅದಕ್ಕೂ ಶಸ್ತ್ರಕ್ರಿಯೆಯ ಮೂಲಕ ಕೃತಕವಾಗಿ ಮಧುಮೇಹವನ್ನು ಬರಿಸಿದ್ದ ರು. ಆ ನಾಯಿಗೆ ತಾವು ಪ್ರತ್ಯೇಕಿಸಿದ್ದ ಸಾರವನ್ನು ಇಂಜಕ್ಷನ್ ಮೂಲಕ ನೀಡಿದರು. ಮಾರ್ಜರಿಗೆ ಮಧುಮೇಹವಿದ್ದು, ರಕ್ತದಲ್ಲಿ ಅದರ ಸಕ್ಕರೆ ಅಂಶವು ತೀವ್ರ ಮಟ್ಟದಲ್ಲಿತ್ತು. ಆದರೆ ಇಂಜಕ್ಷನ್ ತೆಗೆದುಕೊಂಡ ಮೇಲೆ ಅದರ ರಕ್ತದಲ್ಲಿನ ಸಕ್ಕರೆ ಇಳಿಯುವುದನ್ನು ಬ್ಯಾಂಟಿಂಗ್ ಮತ್ತು ಬೆಸ್ಟ್ ಗಮನಿಸಿದರು! ಅದು ಅವರ ಪಾಲಿನ ಯುರೇಕಾ ಕ್ಷಣವಾಗಿತ್ತು. ಆಧುನಿಕ ವೈದ್ಯಕೀಯ ಇತಿಹಾಸ ದಲ್ಲಿ ಒಂದು ಹೊಸ ಮೈಲಿಗಲ್ಲು ಸ್ಥಾಪಿತವಾಯಿತು. ಪ್ಯಾನ್‌ಕ್ರಿಯಾಸ್ ಗ್ರಂಥಿಯ ಸಾರವು ನಿಜವಾಗಿಯೂ, ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಇಳಿಸ ಬಲ್ಲುದು, ಮಧುಮೇಹವನ್ನು ನಿಯಂತ್ರಿಸಬಲ್ಲುದು ಎಂಬುವುದಕ್ಕೆ ಪುರಾವೆಯು ದೊರೆಯಿತು.

ಮಾರ್ಜರಿಯ ರಕ್ತಸಕ್ಕರೆಯನ್ನು ಇಳಿಸಿದ ಪ್ಯಾನ್‌ಕ್ರಿಯಾಸ್ ಸಾರವನ್ನು ಮನುಷ್ಯರಿಗೆ ನೀಡುವ ಹಾಗಿರ ಲಿಲ್ಲ. ಏಕೆಂದರೆ ಅದು ಅತ್ಯಂತ ಕಲಬೆರಕೆಯ ದ್ರವವಾಗಿತ್ತು. ಅದು ಕಂದುಬಣ್ಣದ, ಅಶುದ್ಧ, ದುರ್ವಾಸನೆಯ ಮಿಶ್ರಣವಾಗಿತ್ತು. ಅದರೊಳಗೆ ಅನೇಕ ಪ್ರೋಟೀನುಗಳು ಮತ್ತು ಕಲ್ಮಶ ಗಳಿದ್ದವು. ಹಾಗಾಗಿ ಅಂತಹ ದ್ರವವನ್ನು ಮನುಷ್ಯರಿಗೆ ಇಂಜಕ್ಷನ್ ಮೂಲಕ ನೀಡಿದರೆ ಆ ಕ್ಷಣವೇ ಅಪರಕ್ಷಣೆಯಾಗಿ (ಅನಾಫೈಲಾಕ್ಸಿಸ್) ಸ್ಥಳದಲ್ಲಿಯೇ ಸಾಯುವ ಸಾಧ್ಯತೆಯು ಅಧಿಕ ವಾಗಿತ್ತು.

ಬ್ಯಾಂಟಿಂಗ್ ಮತ್ತು ಬೆಸ್ಟ್ ತಂಡಕ್ಕೆ ಜೇಮ್ಸ್ ಕಾಲಿಪ್ (1892-1965) ಎಂಬ ಜೀವ ರಸಾಯನ ಶಾಸ್ತ್ರಜ್ಞರು ಸೇರಿದರು. ಅವರು ಮದ್ಯಸಾರವನ್ನು ಬಳಸಿ, ಪ್ಯಾನ್‌ಕ್ರಿಯಾಸ್ ಸಾರವನ್ನು ನಾನಾ ರೀತಿಯಲ್ಲಿ ಶುದ್ಧೀ ಕರಿಸಿದರು. ಇನ್ಸುಲಿನ್ ಸಾರವನ್ನು ಹೆಚ್ಚು ಸುರಕ್ಷಿತಗೊಳಿಸಲು ಪ್ರಯತ್ನಿಸಿ ದರು.

ಮೊದಲ ಚುಚ್ಚುಮದ್ದು: 1922ರ ಜನವರಿ 11ರಂದು ಲಿಯೊನಾರ್ಡ್ ಥಾಂಪ್ಸನ್‌ಗೆ ಮೊದಲ ಪ್ಯಾನ್‌ಕ್ರಿಯಾಸ್ ಸಾರವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಯಿತು. ಆ ವೇಳೆಗೆ ಅವನ ತೂಕ ಬರೀ 29 ಕಿಲೋಗ್ರಾಂಗಳಿಗೆ ಇಳಿದಿತ್ತು. ಅವನು ಮರಣದ ಅಂಚಿನಲ್ಲಿದ್ದ. ಮೊದಲ ಪ್ರಯತ್ನ ನಿರೀಕ್ಷಿತ ಅದ್ಭುತ ಫಲಿತಾಂಶವನ್ನು ನೀಡಲಿಲ್ಲ. ರಕ್ತದ ಸಕ್ಕರೆಯಲ್ಲಿ ಸ್ವಲ್ಪ ಬದಲಾವಣೆ ಕಂಡರೂ, ಸಾರವು ನೂರಕ್ಕೆ ನೂರರಷ್ಟು ಶುದ್ಧವಾಗಿರಲಿಲ್ಲ. ಇನ್ನೂ ಅಶುದ್ಧತೆಯು ಅದರಲ್ಲಿತ್ತು. ಹಾಗಾಗಿ ಇಂಜಕ್ಷನ್ ಚುಚ್ಚಿದ ಜಾಗದಲ್ಲಿ ತೀವ್ರ ಉರಿಯೂತ ಮತ್ತು ಅಲರ್ಜಿಯಂತಹ ಪ್ರತಿಕ್ರಿಯೆ ಉಂಟಾಯಿತು. ಹಾಗಾಗಿ ಮತ್ತಷ್ಟು ಇನ್ಸುಲಿನ್ ಚುಚ್ಚುಮದ್ದುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸ ಲಾಯಿತು. ವೈದ್ಯವಿಜ್ಞಾನಿಗಳ ಈ ಪ್ರಯೋಗವು ವಿಫಲವಾದಂತೆ ಎಲ್ಲರಿಗೂ ಅನಿಸಲಾರಂಭಿಸಿತು.

ಕಾಲಿಪ್ ಹಗಲಿರುಳು ಶ್ರಮಿಸಿ ಸಾರವನ್ನು ಮತ್ತಷ್ಟು ಶುದ್ಧಗೊಳಿಸಿದರು. ಹನ್ನೆರಡು ದಿನಗಳ ನಂತರ, ಜನವರಿ 23ರಂದು ಲಿಯೊನಾರ್ಡ್‌ಗೆ ಸುಧಾರಿತ ಸಾರವನ್ನು ನೀಡಿದರು. ಲಿಯೋನಾರ್ಡ ನಿಗೆ ಅಂತಹ ತೊಂದರೆಯೇನೂ ಆಗಲಿಲ್ಲ. ಆದರೆ...ಈ ಬಾರಿ ಫಲಿತಾಂಶ ಸ್ಪಷ್ಟವಾಗಿತ್ತು!

ಲಿಯೋನಾರ್ಡನ ರಕ್ತಸಕ್ಕರೆಯು ಗಣನೀಯವಾಗಿ ಇಳಿಯಿತು. ಮೂತ್ರದಲ್ಲಿನ ಸಕ್ಕರೆ ಮತ್ತು ಕೀಟೋನ್‌ಗಳು ಕಡಿಮೆಯಾದವು. ಯಾವುದೇ ಗಂಭೀರ ಸ್ವರೂಪದ ಅಪರಕ್ಷಣೆಯ ಪ್ರತಿಕ್ರಿಯೆಗಳು ಕಾಣಿಸಲಿಲ್ಲ. ಮರಣದತ್ತ ಸಾಗುತ್ತಿದ್ದ ಬಾಲಕನು, ಈಗ ಸ್ವಲ್ಪ ಹೆಚ್ಚಿನ ಊಟವನ್ನು ಮಾಡಲಾ ರಂಭಿಸಿದ. ಲಿಯೋನಾರ್ಡನ ದೇಹದಲ್ಲಿದ್ದ ಜೀವಕೋಶಗಳ ಬಾಗಿಲನ್ನು ಇನ್ಸುಲಿನ್ ತೆರೆದದ್ದ ರಿಂದ, ಗ್ಲೂಕೋಸ್ ಜೀವಕೋಶದಲ್ಲಿ ದಹನವಾಗಿ ಶಕ್ತಿಯು ಉತ್ಪಾದನೆಯಾಗಲಾರಂಭಿಸಿತು. ಲಿಯೋನಾರ್ಡ್ ಸುಧಾರಿಸಿ ಕೊಳ್ಳಲು ಆರಂಭಿಸಿದ.

ಲಿಯೊನಾರ್ಡ್ ಇನ್ನೂ ಹದಿಮೂರು ವರ್ಷಗಳ ಕಾಲ ಬದುಕಿದ. ಕೊನೆಗೆ 1935ರಲ್ಲಿ, ತನ್ನ 27ನೆಯ ವಯಸ್ಸಿನಲ್ಲಿ ನ್ಯುಮೋನಿಯಾದಿಂದ ಮೃತಪಟ್ಟ. ಲಿಯೋನಾರ್ಡ್ ತನ್ನ ಬಾಲ್ಯದ ಅವನು ಮಧು ಮೇಹದ ಮರಣದಂಡನೆಗೆ ಗುರಿಯಾಗಬೇಕಿತ್ತು. ಆದರೆ ವೈದ್ಯರು ಇನ್ಸುಲಿನ್ ಮೂಲಕ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದರು. ಹಾಗಾಗಿ ಲಿಯೋನಾರ್ಡನ್ ಅಮೂಲ್ಯವಾದ 13 ವರ್ಷಗಳ ಕಾಲ ಜೀವಿಸುವಂತಾಯಿತು.

ಖ್ಯಾತಿಯ ಬೆಳಕು ಮತ್ತು ನೆರಳು: 1923ರ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಬ್ಯಾಂಟಿಂಗ್ ಮತ್ತು ಮ್ಯಾಕ್ಲಿಯಾಡ್ ಅವರಿಗೆ ನೀಡಲಾಯಿತು. ಬೆಸ್ಟ್‌ಗೆ ಪ್ರಶಸ್ತಿ ಸಿಗದಿದ್ದುದರಿಂದ ಬ್ಯಾಂಟಿಂಗ್ ಅಸಮಾಧಾನ ಗೊಂಡರು. ತಮ್ಮ ಬಹುಮಾನದ ಅರ್ಧ ಹಣವನ್ನು ಬೆಸ್ಟ್ ಜೊತೆ ಹಂಚಿಕೊಂಡರು. ಮ್ಯಾಕ್ಲಿಯಾಡ್ ತಮ್ಮ ಪಾಲಿನ ಅರ್ಧವನ್ನು ಕಾಲಿಪ್ ಜೊತೆ ಹಂಚಿಕೊಂಡರು. ಇನ್ಸುಲಿನ್ ಒಬ್ಬನೇ ಒಬ್ಬ ವಿಜ್ಞಾನಿಯ ಆವಿಷ್ಕಾರವಲ್ಲ ಎಂಬುದನ್ನು ಈ ಘಟನೆಯು ನೆನಪಿಸುತ್ತದೆ. ಬ್ಯಾಂಟಿಂಗ್‌ರ ಕಲ್ಪನೆ, ಬೆಸ್ಟ್‌ರ ಪ್ರಯೋಗ ಗಳು, ಮ್ಯಾಕ್ಲಿಯಾಡ್‌ರ ಪ್ರಯೋಗಾಲಯ ಮತ್ತು ವೈeನಿಕ ಮಾರ್ಗದರ್ಶನ, ಕಾಲಿಪ್‌ರ ಶುದ್ಧೀಕರಣ ಕೌಶಲ- ಎಲ್ಲವೂ ಅಗತ್ಯವಾಗಿದ್ದವು.

ಜಾನುವಾರು-ಜೀವತಂತ್ರಜ್ಞಾನ: ಆರಂಭದಲ್ಲಿ ಇನ್ಸುಲಿನ್‌ನನ್ನು ಹಸು ಮತ್ತು ಹಂದಿಗಳ ಪ್ಯಾನ್‌ಕ್ರಿಯಾಸ್ ಗ್ರಂಥಿಗಳಿಂದ ತಯಾರಿಸುತ್ತಿದ್ದರು. ಲಕ್ಷಾಂತರ ಪ್ರಾಣಿಗಳ ಗ್ರಂಥಿಗಳನ್ನು ಮಾಂಸ ಸಂಸ್ಕರಣಾ ಕೇಂದ್ರಗಳಿಂದ ಸಂಗ್ರಹಿಸಿ, ಶುದ್ದೀಕರಿಸಿ, ಇನ್ಸುಲಿನ್ ಚುಚ್ಚುಮದ್ದನ್ನು ಸಿದ್ಧಪಡಿಸು ತ್ತಿದ್ದರು. ಕಾಲಕ್ರಮೇಣ ವಿಜ್ಞಾನಿಗಳಿಗೆ ಇನ್ಸುಲಿನ್ನಿನ ರಚನೆಯು ತಿಳಿಯಿತು; ಅದರ ಅಮಿನೋ ಆಮ್ಲಗಳ ಕ್ರಮಗತಿಯನ್ನು ಖಚಿತಪಡಿಸಿಕೊಂಡರು. ಹಾಗಾಗಿ 1970ರ ದಶಕದ ಕೊನೆಯಲ್ಲಿ ಪುನರ್‌ಸಂಯೋಜಿತ ಡಿಎನ್‌ಎ ತಂತ್ರಜ್ಞಾನದ (ಜೆನೆಟಿಕ್ ರಿ-ಕಾಂಬಿನೇಶನ್) ಮೂಲಕ ಮಾನವ ಇನ್ಸುಲಿನ್‌ನನ್ನು ಉತ್ಪಾದಿಸುವ ವಿಧಾನವು ಅಭಿವೃದ್ಧಿಯಾಯಿತು. ಮಾನವನ ಇನ್ಸುಲಿನ್ ಜೀನನ್ನು ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಜೀವಕೋಶಗಳಿಗೆ ಸೇರಿಸಿ, ಅವುಗಳಿಂದ ದೊಡ್ಡ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸಲು ಸಾಧ್ಯ ವಾಯಿತು.

ಮಾನವ ಇನ್ಸುಲಿನ್ ಮಾರುಕಟ್ಟೆಗೆ ಬರುತ್ತಿರುವಂತೆಯೇ, ನಾನಾ ಇನ್ಸುಲಿನ್ ಭೇದಗಳು ರೂಪು ಗೊಂಡವು. ವೇಗವಾಗಿ ಕೆಲಸ ಮಾಡುವ, ನಿಧಾನವಾಗಿ ಕೆಲಸ ಮಾಡುವ ಮತ್ತು ದೀರ್ಘಕಾಲ ಕಾರ್ಯ ನಿರ್ವಹಿಸುವ ಇನ್ಸುಲಿನ್ ಅನಾಲಾಗ್‌ಗಳು ಬಂದವು. ಇನ್ಸುಲಿನ್ ಪೆನ್‌ಗಳು, ಪಂಪ್‌ಗಳು, ನಿರಂತರ ಗ್ಲೂಕೋಸ್ ಸಂವೇದಕಗಳು ಮತ್ತು ‘ಕೃತಕ ಮೇದೋಜೀರಕ ಗ್ರಂಥಿ’ಯೆಂದು ಕರೆಯುವ ಸ್ವಯಂಚಾಲಿತ ಇನ್ಸುಲಿನ್ ವಿತರಣಾ ವ್ಯವಸ್ಥೆಗಳು ಬೆಳೆಯುತ್ತಿವೆ.

ಮಧುಮೇಹ ಪೀಡಿತರು ಇಂದಿಗೂ ಜೀವಾವಧಿ ಶಿಕ್ಷೆಯಲ್ಲಿಯೇ ಇದ್ದಾರೆ. ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸುವ ದಿನಗಳಿಗಾಗಿ ಕಾಯುತ್ತಲೇ ಇದ್ದಾರೆ!