ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

ಒಂದು ಬಾರಿ ಆಡಿದ ಮಾತನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ನಾವು ಕೋಪದಲ್ಲಿ ಒಂದು ಕ್ಷಣ ಮಾತನಾಡಿದ ಮಾತು, ಆ ವ್ಯಕ್ತಿಯ ಮನಸ್ಸಿನಲ್ಲಿ ವರ್ಷಗಳ ವರೆಗೆ ಉಳಿದುಕೊಳ್ಳ ಬಹುದು. ಕಟುವಾಗಿ ಮಾತನಾಡುವುದು ಕೂಡ ಒಂದು ರೀತಿಯ ಹಿಂಸೆಯೇ. ಏಕೆಂದರೆ ಹಿಂಸೆ ಎಂದರೆ ಕೇವಲ ದೇಹಕ್ಕೆ ನೋವು ಕೊಡುವುದಲ್ಲ; ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡುವುದೂ ಹಿಂಸೆಯೇ.

Vijay Kumar Column: ನಾಲಗೆಯಿಂದ ಆದ ಗಾಯಕ್ಕೆ ಔಷಧವಿಲ್ಲ

-

Profile
Ashok Nayak Aug 13, 2026 10:45 AM

ವಿಜಯಕುಮಾರ್ ಕಟ್ಟೆ

ಸಿಹಿಮಾತು ಹೃದಯ ಗೆಲ್ಲುತ್ತದೆ; ಕಟುಮಾತು ಹೃದಯ ಕಳೆದುಕೊಳ್ಳುತ್ತದೆ. ಮನುಷ್ಯನಿಗೆ ದೇವರು ಕೊಟ್ಟಿರುವ ಅತ್ಯಂತ ಅದ್ಭುತವಾದ ಶಕ್ತಿಗಳಲ್ಲಿ ಮಾತು ಕೂಡ ಒಂದು. ಕೈ ಯಿಂದ ಮಾಡಿದ ಗಾಯಕ್ಕೆ ಔಷಧ ಹಚ್ಚಬಹುದು. ಕಾಲಕ್ರಮೇಣ ಚಿಕಿತ್ಸೆಯಿಂದ ಗುಣ ವಾಗಬಹುದು. ಆದರೆ ಮಾತಿನಿಂದ ಮನಸ್ಸಿಗೆ ಮಾಡಿದ ಗಾಯಕ್ಕೆ ಯಾವ ಔಷಧ ಹಚ್ಚಬೇಕು? ಕಣ್ಣಿಗೆ ಕಾಣದ ಆ ಗಾಯವನ್ನು ಯಾವ ವೈದ್ಯ ಗುಣಪಡಿಸಬೇಕು? ಅದಕ್ಕಾಗಿ ಯೇ ಹಿರಿಯರು, ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂದು ಹೇಳಿದ್ದಾರೆ.

ಒಂದು ಬಾರಿ ಆಡಿದ ಮಾತನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ನಾವು ಕೋಪ ದಲ್ಲಿ ಒಂದು ಕ್ಷಣ ಮಾತನಾಡಿದ ಮಾತು, ಆ ವ್ಯಕ್ತಿಯ ಮನಸ್ಸಿನಲ್ಲಿ ವರ್ಷಗಳ ವರೆಗೆ ಉಳಿದುಕೊಳ್ಳಬಹುದು.ಕಟುವಾಗಿ ಮಾತನಾಡುವುದು ಕೂಡ ಒಂದು ರೀತಿಯ ಹಿಂಸೆಯೇ. ಏಕೆಂದರೆ ಹಿಂಸೆ ಎಂದರೆ ಕೇವಲ ದೇಹಕ್ಕೆ ನೋವು ಕೊಡುವುದಲ್ಲ; ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡುವುದೂ ಹಿಂಸೆಯೇ. ಕೈಯಿಂದ ಹೊಡೆದರೆ ದೇಹಕ್ಕೆ ಗಾಯವಾಗ ಬಹುದು. ಆದರೆ ಕಟುಮಾತಿನಿಂದ ಹೊಡೆದರೆ ಮನಸ್ಸಿಗೆ, ಆತ್ಮವಿಶ್ವಾಸಕ್ಕೆ, ಸ್ವಾಭಿಮಾನ ಕ್ಕೆ, ಸಂಬಂಧಕ್ಕೆ ಗಾಯವಾಗಬಹುದು.

ನಮ್ಮ ನಾಲಿಗೆಯ ಶಕ್ತಿ ಅಪಾರ. ಒಂದು ಮಾತು ಸಂಬಂಧವನ್ನು ಗಟ್ಟಿ ಮಾಡಬಹುದು. ಇನ್ನೊಂದು ಮಾತು ವರ್ಷಗಳ ಸಂಬಂಧವನ್ನೇ ಮುರಿಯಬಹುದು. ‘ನೀನು ಒಳ್ಳೆಯ ಕೆಲಸ ಮಾಡಿದ್ದೀಯ’ ಎಂಬ ನಾಲ್ಕು ಪದಗಳು ಒಬ್ಬ ನಿರಾಶನಾದ ವ್ಯಕ್ತಿಗೆ ಮತ್ತೆ ಪ್ರಯತ್ನಿ ಸುವ ಧೈರ್ಯ ನೀಡಬಹುದು. ‘ನಿನ್ನಿಂದ ಏನೂ ಆಗುವುದಿಲ್ಲ’ ಎಂಬ ನಾಲ್ಕು ಪದಗಳು ಅದೇ ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.

ಇದನ್ನೂ ಓದಿ: Suresh Hakkimani Column: ಬೆಳಕು ಚೆಲ್ಲಿ ಮರೆಯಾದ ಶ್ರೇಷ್ಠ ಚೇತನ

ನಾವು ಮಾತನಾಡುವ ಮೊದಲು ಒಂದು ಕ್ಷಣ ಯೋಚಿಸಿದರೆ ಅನೇಕ ಸಂಬಂಧಗಳು ಉಳಿಯಬಹುದು. ಆದರೆ ಕೋಪ ಬಂದಾಗ ಯೋಚಿಸುವ ಶಕ್ತಿ ಕಡಿಮೆಯಾಗುತ್ತದೆ. ಮನಸ್ಸಿನಲ್ಲಿ ಬಂದದ್ದನ್ನೆಲ್ಲ ನಾಲಿಗೆಗೆ ಒಪ್ಪಿಸುತ್ತೇವೆ. ನಂತರ ಕೋಪ ಕಡಿಮೆಯಾದಾಗ, ‘ನಾನು ಹಾಗೆ ಹೇಳಬಾರದಿತ್ತು’ ಎಂದು ಪಶ್ಚಾತ್ತಾಪ ಪಡುತ್ತೇವೆ. ಆದರೆ ಹಾಗೆ ನಾಲಿಗೆ ಯಿಂದ ಹೊರಟ ಮಾತು ತನ್ನ ಕೆಟ್ಟ ಕೆಲಸ ಮಾಡಿ ಆಗಿರುತ್ತದೆ.

ಒಂದು ಕಟುಮಾತು ಸಂಬಂಧವನ್ನು ಮುರಿಯಬಹುದು. ಒಂದು ಸಿಹಿಮಾತು ಸಂಬಂಧ ವನ್ನು ಉಳಿಸಬಹುದು. ಒಂದು ಅವಮಾನ ಧೈರ್ಯವನ್ನು ಕುಗ್ಗಿಸಬಹುದು. ಒಂದು ಪ್ರೋತ್ಸಾಹ ಜೀವನಕ್ಕೆ ಹೊಸ ದಿಕ್ಕು ನೀಡಬಹುದು. ಮಾತನಾಡುವ ಮೊದಲು ನಮ್ಮ ನಾಲಿಗೆಯಿಂದ ಹೊರಡುವ ಮಾತು ಮತ್ತೊಬ್ಬರ ಹೃದಯಕ್ಕೆ ನೋವಾಗುತ್ತದೆಯೇ, ಅಥವಾ ನೆಮ್ಮದಿಯಾಗುತ್ತದೆಯೇ ಎಂಬ ಅರಿವು ಮೂಡಿಸಿಕೊಂಡರೆ ಸ್ನೇಹ ಸಂಬಂಧಗಳು ಸದಾ ಹಸಿರಾಗಿರುತ್ತವೆ.

ಆದ್ದರಿಂದ ನಾವು ದೊಡ್ಡ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಒಳ್ಳೆಯ ಮಾತು ಆಡೋಣ. ಪ್ರೀತಿಯಿಂದ ಮಾತನಾಡೋಣ. ಕರುಣೆಯಿಂದ ಮಾತ ನಾಡೋಣ. ಮತ್ತೊಬ್ಬರ ಸಂತೋಷ ವನ್ನು ಕಸಿದುಕೊಳ್ಳದ ನಾಲಿಗೆಯನ್ನು ಬೆಳೆಸೋಣ. ಏಕೆಂದರೆ ದೇಹದ ಗಾಯಕ್ಕೆ ಔಷಧವಿದೆ. ಮನಸ್ಸಿನ ಗಾಯಕ್ಕೆ ಕಾಲ ಬೇಕು. ಆದರೆ ಪ್ರೀತಿಯ ಮಾತು ಆ ಗಾಯಕ್ಕೆ ಮದ್ದಾಗಬಹುದು.

ನಮ್ಮ ನಾಲಿಗೆ ಯಾರದೋ ಕಣ್ಣೀರಿನ ಕಾರಣವಾಗದಿರಲಿ. ಯಾರದಾದರೂ ಮುಖದಲ್ಲಿ ನಗು ಮೂಡಿಸುವ ಕಾರಣವಾಗಲಿ. ಅದೇ ನಿಜವಾದ ಮಾನವೀಯತೆ. ಅದೇ ಮಾತಿನ ಸಂಸ್ಕಾರ. ಅದೇ ಬದುಕಿನ ಸೌಂದರ್ಯ.