Roopa Gururaj Column: 250 ವರ್ಷಗಳ ಅವಿರತ ಭಕ್ತಿ ಪರಂಪರೆ: ಮಹೇಶ್ವರದ ಪಾರ್ಥಿವ ಲಿಂಗಾರ್ಚನೆ
1767ರಲ್ಲಿ ಅಹಲ್ಯಾ ಬಾಯಿಯವರು ತಮ್ಮ ರಾಜಧಾನಿಯನ್ನು ಇಂದೋರ್‌ನಿಂದ ಮಹೇಶ್ವರಕ್ಕೆ ಸ್ಥಳಾಂತರಿಸಿ, ನರ್ಮದಾ ನದಿಯ ಸುಂದರ ಘಾಟ್‌ಗಳ ಮೇಲೆ ಭವ್ಯವಾದ ಅಹಲ್ಯಾ ಕೋಟೆ (ರಾಜವಾಡ) ನಿರ್ಮಿಸಿ ದರು. ಕೋಟೆಯ ಆವರಣದಲ್ಲಿರುವ ರಾಣಿಯ ಖಾಸಗಿ ಪೂಜಾ ಮಂದಿರದ ಪಕ್ಕದಲ್ಲಿ ಆರಂಭವಾದ ಒಂದು ಆಧ್ಯಾತ್ಮಿಕ ವ್ರತ, ಕಳೆದ 250ಕ್ಕೂ ಹೆಚ್ಚು ವರ್ಷಗಳಿಂದ ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಅದೇ ಪವಿತ್ರ ಪಾರ್ಥಿವ ಲಿಂಗಾರ್ಚನೆ
-
ಒಂದೊಳ್ಳೆ ಮಾತು
ಮಧ್ಯಪ್ರದೇಶದ ಖರಗೋಣ್ ಜಿಲ್ಲೆಯಲ್ಲಿ, ಪಾವನ ನರ್ಮದಾ ನದಿಯ ತೀರದಲ್ಲಿ ನೆಲೆಸಿರುವ ಐತಿಹಾಸಿಕ ಪಟ್ಟಣ ಮಹೇಶ್ವರ. ಪ್ರಾಚೀನ ಕಾಲದಲ್ಲಿ ‘ಮಾಹಿಷ್ಮತಿ’ ಎಂದು ಪ್ರಸಿದ್ಧವಾಗಿದ್ದ ಈ ಕ್ಷೇತ್ರ, 18ನೇ ಶತಮಾನದಲ್ಲಿ ಮಾಳ್ವ ಸಾಮ್ರಾಜ್ಯದ ಪುಣ್ಯಶ್ಲೋಕ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಆಡಳಿತಾ ವಧಿಯಲ್ಲಿ ತನ್ನ ವೈಭ ವದ ಉತ್ತುಂಗವನ್ನು ಕಂಡಿತು.
1767ರಲ್ಲಿ ಅಹಲ್ಯಾ ಬಾಯಿಯವರು ತಮ್ಮ ರಾಜಧಾನಿಯನ್ನು ಇಂದೋರ್‌ನಿಂದ ಮಹೇಶ್ವರಕ್ಕೆ ಸ್ಥಳಾಂತರಿಸಿ, ನರ್ಮದಾ ನದಿಯ ಸುಂದರ ಘಾಟ್‌ಗಳ ಮೇಲೆ ಭವ್ಯವಾದ ಅಹಲ್ಯಾ ಕೋಟೆ (ರಾಜವಾಡ) ನಿರ್ಮಿಸಿ ದರು. ಕೋಟೆಯ ಆವರಣದಲ್ಲಿರುವ ರಾಣಿಯ ಖಾಸಗಿ ಪೂಜಾ ಮಂದಿರದ ಪಕ್ಕದಲ್ಲಿ ಆರಂಭವಾದ ಒಂದು ಆಧ್ಯಾತ್ಮಿಕ ವ್ರತ, ಕಳೆದ 250ಕ್ಕೂ ಹೆಚ್ಚು ವರ್ಷಗಳಿಂದ ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಅದೇ ಪವಿತ್ರ ಪಾರ್ಥಿವ ಲಿಂಗಾರ್ಚನೆ.
ಸಾಮಾನ್ಯವಾಗಿ ರಾಜಮನೆತನಗಳು ತಮ್ಮ ಯುದ್ಧ ವಿಜಯಕ್ಕಾಗಿ ಅಥವಾ ವೈಯಕ್ತಿಕ ಸಮೃದ್ಧಿ ಗಾಗಿ ಯಾಗ-ಪೂಜೆಗಳನ್ನು ಮಾಡುತ್ತಿದ್ದವು. ಆದರೆ ಅಹಲ್ಯಾಬಾಯಿಯವರು ಈ ದೈನಂದಿನ ಶಿವ ಪೂಜೆಯನ್ನು ಆರಂಭಿಸಿದ್ದು ಸ್ವಂತ ಲೋಕಕಲ್ಯಾ ಣಕ್ಕಾಗಿ-ಸಮಸ್ತ ಜೀವರಾಶಿಗಳ ಶಾಂತಿ, ಕ್ಷೇಮ ಮತ್ತು ರಕ್ಷಣೆಗಾಗಿ. ರಾಣಿಯ ಕಾಲದಲ್ಲಿ ಪ್ರತಿದಿನ 11000 ಮಣ್ಣಿನ ಶಿವಲಿಂಗಗಳನ್ನು ತಯಾರಿಸಿ ಪೂಜಿಸಲಾಗುತ್ತಿತ್ತು.
ಇದನ್ನೂ ಓದಿ: Roopa Gururaj Column: ಯಕ್ಷ ಪ್ರಶ್ನೆಗಳಿಗೆ ಉತ್ತರಿಸಿ ಸಹೋದರರನ್ನು ಬದುಕಿಸಿಕೊಂಡ ಧರ್ಮರಾಯ
ಇಂದು ಕಾಲ ಬದಲಾದರೂ ಆ ಭಕ್ತಿ ಸಂಪ್ರದಾಯ ನಿಂತಿಲ್ಲ. ಇಂದಿಗೂ ಐದರಿಂದ ಆರು ಜನ ನಿಷ್ಠಾವಂತ ಬ್ರಾಹ್ಮಣರು ಪ್ರತಿದಿನ ಮುಂಜಾನೆ 7500 ಪಾರ್ಥಿವ ಲಿಂಗಗಳನ್ನು ಮಣ್ಣಿನಿ ಂದ ರೂಪಿಸಿ, ವೈದಿಕ ವಿಧಿವತ್ತಾಗಿ ಪೂಜಿಸುತ್ತಾರೆ. ಈ ಪೂಜಾ ಕೈಂಕರ್ಯವು ಶಿಸ್ತು ಮತ್ತು ಏಕಾಗ್ರತೆಯ ಒಂದು ಸುಂದರ ಸಮಾಗಮವೆಂದರೆ ತಪ್ಪಾಗಲಾರದು. ಶುದ್ಧವಾದ ಜೇಡಿಮಣ್ಣನ್ನು ತಂದು, ಜರಡಿ ಹಿಡಿದು, ನಯವಾದ ಮುದ್ದೆಯನ್ನಾಗಿ ಹದಗೊಳಿಸಲಾಗುತ್ತದೆ.
ಮರದ ಹಲಗೆಗಳ ಮೇಲೆ ಕುಳಿತುಕೊಳ್ಳುವ ಅರ್ಚಕರು ಮೌನವಾಗಿ, ತಮ್ಮ ಕೈಬೆರಳುಗಳ ನೈಪುಣ್ಯ ದಿಂದ ಕೆಲವೇ ಗಂಟೆಗಳಲ್ಲಿ ಸಾವಿರಾರು ಪುಟ್ಟ ಶಿವಲಿಂಗಗಳನ್ನು ರೂಪಿಸುತ್ತಾರೆ. ಈ ಲಿಂಗಗಳನ್ನು ಪವಿತ್ರ ಮಂಡಲಾಕಾರದಲ್ಲಿ ಜೋಡಿಸಲಾಗುತ್ತದೆ. ಪ್ರತಿಯೊಂದು ಲಿಂಗದ ಮೇಲೂ ಅತ್ಯಂತ ಭಕ್ತಿಯಿಂದ ಒಂದೊಂದು ಅಖಂಡ ಅಕ್ಷತೆಯನ್ನು (ಅಕ್ಕಿಕಾಳು) ಇಡಲಾಗುತ್ತದೆ. ಮಂಡಲದ ಕೇಂದ್ರದಲ್ಲಿ ಗಣೇಶ ಮತ್ತು ಪ್ರಧಾನ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತದೆ.
ಪೂಜೆಯು ಗಣೇಶ ವಂದನೆಯೊಂದಿಗೆ ಆರಂಭವಾಗಿ, ರುದ್ರಾಭಿಷೇಕ, ಬಿಲ್ವಪತ್ರೆ ಸಮರ್ಪಣೆ ಮತ್ತು ವೇದಘೋಷಗಳೊಂದಿಗೆ ಮುಂದುವರಿಯುತ್ತದೆ. ಧೂಪ-ದೀಪಗಳ ಸುವಾಸನೆ ಇಡೀ ಗರ್ಭಗುಡಿ ಯನ್ನು ಆವರಿಸುತ್ತದೆ. ಮಹಾಮಂಗಳಾರತಿಯ ನಂತರ, ಈ ಲಿಂಗಗಳ ಹಲಗೆಗಳನ್ನು ಅಹಲ್ಯಾ ಘಾಟ್‌ಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಯಾವುದೇ ಅಬ್ಬರವಿಲ್ಲದೆ, ಶಾಸ್ತ್ರೋಕ್ತವಾಗಿ ವಿಸರ್ಜನಾ ವಿಧಿ ನೆರವೇರುತ್ತದೆ.
7500 ಮಣ್ಣಿನ ಲಿಂಗಗಳು ನರ್ಮದಾ ನದಿಯ ಮಡಿಲನ್ನು ಸೇರಿ, ಕ್ಷಣಮಾತ್ರದಲ್ಲಿ ನೀರಿನಲ್ಲಿ ಕರಗಿಹೋಗುತ್ತವೆ. ರಾಜ್ಯಗಳು ಅಳಿದಿರಬಹುದು, ಕಾಲ ಬದಲಾಗಿರಬಹುದು , ಆದರೆ ಮಹೇಶ್ವರದ ಈ ಮಣ್ಣು ಮತ್ತು ನರ್ಮದಾ ನದಿ ಪ್ರತಿದಿನ ಮುಂಜಾನೆ ಒಂದು ನಿಸ್ವಾರ್ಥ ರಾಣಿಯ ಪವಿತ್ರ ಸಂಕಲ್ಪವನ್ನು ಇಂದಿಗೂ ಜೀವಂತವಾಗಿ ಹೊತ್ತು ಸಾಗುತ್ತಿವೆ. ಇಂದಿಗೂ ಇಂತಹ ಅನೇಕ ಅದ್ಭುತ ಪರಂಪರೆಗಳು ನಮ್ಮ ಭಾರತದ ಹಲವಾರು ಕ್ಷೇತ್ರಗಳಲ್ಲಿವೆ.
ನಮ್ಮ ಭಾರತದ ಭವ್ಯ ಇತಿಹಾಸ ಇದನ್ನು ಆಳಿದ ಮಹೋನ್ನತ ರಾಜ, ರಾಣಿಯರ ಬಗ್ಗೆ ತಿಳಿದು ಕೊಂಡು ಅವರು ಮುಂದಿನ ಜನಾಂಗಕ್ಕಾಗಿ ಕೈಗೊಂಡಿರುವ ಇಂತಹ ಅದ್ಭುತ ಕೆಲಸ ಕಾರ್ಯ ಗಳನ್ನು ತಿಳಿದುಕೊಳ್ಳುವುದಾದರೂ ನಮ್ಮಿಂದಾಗಬೇಕು. ಇಂತಹ ಸಂಕಲ್ಪಗಳನ್ನ ಅಷ್ಟೇ ಶಿಸ್ತಿ ನಿಂದ ಇಂದಿಗೂ ನೆರವೇರಿಸುತ್ತಿರುವ ಜನರ ಬಗ್ಗೆ ಗೌರವ ಮೂಡುತ್ತದೆ. ಕೇವಲ ತಮ್ಮ ವಂಶೋ ದ್ಧಾರಕ್ಕಾಗಿ ಅಲ್ಲದೆ ಎಲ್ಲರ ಕಲ್ಯಾಣಕ್ಕಾಗಿ ಅಂದಿನ ರಾಜ ಪರಂಪರೆಯವರು ಅನೇಕ ಕೆರೆಗಳನ್ನು ಕಟ್ಟಿದ್ದಾರೆ, ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ.
ನೂರಾರು ವರ್ಷಗಳಾದರೂ ನಾವು ಇಂದಿಗೂ ಅದರ ಪ್ರಯೋಜನವನ್ನು ಪಡೆಯುತ್ತಿದ್ದೇವೆ. ಮನುಷ್ಯರಾಗಿ ಹುಟ್ಟಿದ ಮೇಲೆ ದೊಡ್ಡದಾಗಿ ಅಲ್ಲದಿದ್ದರೂ ನಮ್ಮ ಕೈಲಾದಷ್ಟು ಮಟ್ಟಿಗೆ ಮತ್ತೊಬ್ಬರಿಗೆ ಸಹಾಯವಾಗುವಂತೆ ಮತ್ತೊಬ್ಬರ ಬದುಕು ಸಹನೀಯ ವಾಗುವಂತೆ ಏನಾದರೂ ಮಾಡುವ ಪ್ರಯತ್ನ ನಮ್ಮಿಂದ ಆಗಬೇಕು. ನಾವಿzಗಲೂ ಇಲ್ಲದಿದ್ದಾಗಲೂ ನಾವು ಮಾಡಿದ ಕೆಲಸ ಕಾರ್ಯಗಳು ನಮ್ಮ ಗುರುತಾಗಬೇಕು.