ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Narayana Yaji Column: ಸರಕಾರ ಬದಲಾವಣೆಯೋ, ಅರಾಜಕ ವ್ಯಾಕರಣವೋ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ಬದಲಾವಣೆ ಸಹಜ ಕ್ರಿಯೆ. ಸರ್ಕಾರದ ಬದಲಾವಣೆಯು ಯಾವುದೇ ಹಿಂಸಾಚಾರ, ಮಿಲಿಟರಿ ದಂಗೆ ಅಥವಾ ಕ್ರಾಂತಿಯ ಮೂಲಕ ಆಗುವುದಿಲ್ಲ; ಬದಲಾಗಿ ಸಂವಿಧಾನಾತ್ಮಕ ಮತ್ತು ಶಾಂತಿಯುತ ಮತದಾನದ ಪ್ರಕ್ರಿಯೆಯ ಮೂಲಕ ನಡೆಯುತ್ತದೆ. ಇದನ್ನು ’ Change of Government’ (ಸರ್ಕಾರದ ಬದಲಾವಣೆ) ಎನ್ನುತ್ತಾರೆ.

ಸರಕಾರ ಬದಲಾವಣೆಯೋ, ಅರಾಜಕ ವ್ಯಾಕರಣವೋ ?

-

Profile
Ashok Nayak Oct 19, 2026 9:35 PM

ಪ್ರಜಾತಂತ್ರ

ನಾರಾಯಣ ಯಾಜಿ

ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸುವ ಹಕ್ಕನ್ನು ನೀಡಿದೆ. ಈ ನೆವದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಆಡಿದರೆನ್ನಲಾದ ಉದ್ರೇಕಕಾರಿ ಮಾತುಗಳು ಕೇವಲ ಪ್ರಜಾಪ್ರಭುತ್ವದ ಸಾಮಾನ್ಯ ಟೀಕೆಯಾಗಿ ಉಳಿದಿಲ್ಲ. ಚುನಾವಣಾ ಆಯೋಗದ ನಿಯಮಗಳ ವಿರುದ್ಧದ ಪ್ರತಿಭಟನೆಯ ನೆಪದಲ್ಲಿ ಅವರು ಬಳಸಿದ ‘ರೆಜಿಮ್ ಚೇಂಜ್‘ (Regime Change) ಮತ್ತು ರಕ್ತಪಾತ/ ರಕ್ತ ಕ್ರಾಂತಿ (Bloodshed) ಎಂಬ ಶಬ್ದಗಳು ರಾಜಕೀಯ ಸಿದ್ಧಾಂತದ ಪ್ರಕಾರ ಒಂದು ‘ದಂಗೆ’ (Coup d'État) ಮಾದರಿಯ ಪ್ರಚೋದನೆಯಾಗಿದ್ದು, ಭಾರತೀಯ ಸಂವಿಧಾನದ ಮೂಲ ಆಶಯಗಳಿಗೆ ಮತ್ತು ಕಾನೂನಿನ ಆಡಳಿತಕ್ಕೆ (ರೂಲ್ ಆಫ್ ಲಾ) ಸಂಪೂರ್ಣವಾಗಿ ವಿರುದ್ಧವಾಗಿದೆ. ‌

ಅದರಲ್ಲಿಯೂ, ವಿಡಿಯೋ ಒಂದರಲ್ಲಿ, ಒಂದು ವೇಳೆ ಇಂತಹ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿ ರಕ್ತಪಾತ (ಖೂನ್ ಖರಾಬಾ) ಸಂಭವಿಸಬಹುದು ಮತ್ತು ನಮ್ಮ ಮುಂದೆ ಕ್ರಾಂತಿಯನ್ನು ಉಂಟು ಮಾಡುವುದೊಂದೇ ದಾರಿ ಎಂದು ಉದ್ರೇಕಕಾರಿ ಎಚ್ಚರಿಕೆ ನೀಡಿದ್ದಾರೆ. ಅದರಲ್ಲಿಯೂ ವಕೀಲಿ ವೃತ್ತಿಯನ್ನು ಆರಂಭಿಸುವಾಗ ಭಾರತದ ಸಂವಿಧಾನಕ್ಕೆ ನಿಷ್ಠೆ, ಭಾರತದ ಕಾನೂನಿನ ನಿಯಮಗಳಿಗೆ ಬದ್ಧತೆ ಹಾಗೂ ಅವುಗಳನ್ನು ಗೌರವಿಸುವುದಾಗಿ ಪ್ರಮಾಣವಚನ ಮಾಡಿದವರು ಈ ಮಾತುಗಳನ್ನು ಹೇಳಿದರೆ ಅದನ್ನು ಪ್ರಶ್ನಿಸಲೇ ಬೇಕಾಗುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ಬದಲಾವಣೆ ಸಹಜ ಕ್ರಿಯೆ. ಸರ್ಕಾರದ ಬದಲಾವಣೆಯು ಯಾವುದೇ ಹಿಂಸಾಚಾರ, ಮಿಲಿಟರಿ ದಂಗೆ ಅಥವಾ ಕ್ರಾಂತಿಯ ಮೂಲಕ ಆಗುವುದಿಲ್ಲ; ಬದಲಾಗಿ ಸಂವಿಧಾನಾತ್ಮಕ ಮತ್ತು ಶಾಂತಿಯುತ ಮತದಾನದ ಪ್ರಕ್ರಿಯೆಯ ಮೂಲಕ ನಡೆಯುತ್ತದೆ. ಇದನ್ನು ’ Change of Government’ (ಸರ್ಕಾರದ ಬದಲಾವಣೆ) ಎನ್ನುತ್ತಾರೆ.

ಇದನ್ನೂ ಓದಿ: Narayan Yaji Column: ಪರತತ್ತ್ವದ ಸಾಕಾರ ಮೂರ್ತಿ ಮೃಣ್ಮಯಿ ಗಣೇಶ

ರೆಜಿಮ್ ಚೇಂಜ್ ಎನ್ನುವುದು ಸಾಮಾನ್ಯವಾಗಿ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ, ಒಂದು ದೇಶದ ಪ್ರಚಲಿತ ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯನ್ನು ಬಾಹ್ಯ ಶಕ್ತಿಗಳು, ಮಿಲಿಟರಿ ಹಸ್ತಕ್ಷೇಪ ಅಥವಾ ಆಂತರಿಕ ಕ್ರಾಂತಿಯ ಮೂಲಕ ಸಂಪೂರ್ಣವಾಗಿ ಬದಲಾಯಿಸುವುದಾಗಿರುತ್ತದೆ. ಒಂದು ಸರ್ಕಾರದ ಬದಲಾವಣೆಗೂ ಮತ್ತು ಇಡೀ ಆಡಳಿತ ವ್ಯವಸ್ಥೆಯ ಬದಲಾವಣೆಗೂ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ.

ಸರ್ಕಾರ ಬದಲಾವಣೆಯು ಕೇವಲ ಅಧಿಕಾರದಲ್ಲಿರುವ ವ್ಯಕ್ತಿಗಳು ಅಥವಾ ರಾಜಕೀಯ ಪಕ್ಷಗಳ ಬದಲಾವಣೆಯನ್ನು ಸೂಚಿಸಿದರೆ, ಆಡಳಿತ ವ್ಯವಸ್ಥೆಯ ಬದಲಾವಣೆಯು (ರೆಜಿಮ್ ಚೇಂಜ್) ಒಂದು ದೇಶದ ಮೂಲಭೂತ ರಾಜಕೀಯ ಚೌಕಟ್ಟು, ಕಾನೂನು ವ್ಯವಸ್ಥೆಗಳು ಮತ್ತು ಸಾಂಸ್ಥಿಕ ನಿಯಮಗಳ ಸಂಪೂರ್ಣ ರೂಪಾಂತರವನ್ನು ಸೂಚಿಸುತ್ತದೆ. ಇದು ಮಿಲಿಟರಿ ಹಸ್ತಕ್ಷೇಪ, ಬಾಹ್ಯ ಆಕ್ರಮಣ ಮೊದಲಾದ ಮೂಲಕವೂ ಆಗಬಹುದಾಗಿದೆ.

ರಾಜ್ಯಶಾಸ್ತ್ರಜ್ಞ ಡೇವಿಡ್ ಈಸ್ಟನ್ (David Easton), ಇವೆರಡರ ನಡುವಿನ ವ್ಯತ್ಯಾಸವನ್ನು ಸಿಸ್ಟಮ್ಸ್ ಸಿದ್ಧಾಂತ (Systems Theory) ಎಂದು ತಮ್ಮ ಕೃತಿ ‘ದಿ ಪೊಲಿಟಿಕಲ್ ಸಿಸ್ಟಮ್’ (The Political System) ನಲ್ಲಿ ವಿವರಿಸಿದ್ದಾರೆ. ರಾಬರ್ಟ್ ಡಾಲ್ (Robert Dahl) ಅವರು ತಮ್ಮ ‘ಪಾಲ್ಯಾರ್ಕಿ’ (Polyarchy) ಎನ್ನುವ ಕೃತಿಯಲ್ಲಿ ಇದನ್ನು ಇನ್ನಷ್ಟು ವಿಶದವಾಗಿ ವಿವರಿಸಿದ್ದಾರೆ. ವರ್ತಮಾನದ ಪರಿಸ್ಥಿತಿಯನ್ನು ಅವಲೋಕಿಸುವಾಗ, ಈಗ ಕೇಳಿ ಬರುತ್ತಿರುವ ರೆಜಿಮ್ ಚೇಂಜ್ ಎನ್ನುವುದು ಇದ್ಯಾವುದಕ್ಕೂ ಹೊಂದಿಕೆಯಾಗದೇ ಎಡ್ವರ್ಡ್ ಲುಟ್ವಾಕ್ (Edward Luttwak) ಮತ್ತು ಜೊನಾಥನ್ ಪೊವೆಲ್ ಅವರ ಅತ್ಯಂತ ಅಪಾಯಕಾರಿಯಾದ ಸಿದ್ಧಾಂತ Coup d'État (ದಂಗೆ) ಎನ್ನುವುದಕ್ಕೆ ಹೋಲಿಕೆಯಾಗುತ್ತದೆ. ‘ಕೂ ಡಿಟಾ’ (ದಂಗೆ) ಎನ್ನುವುದು A Coup d'État is the sudden and unlawful seizure or overthrow of a government by a small group, usually military officers or influential insiders, through methods that bypass the constitutionally established process of transferring power (ಸಂವಿಧಾನಬದ್ಧವಾಗಿ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಬದಿಗೊತ್ತಿ, ಸಾಮಾನ್ಯವಾಗಿ ಸೇನಾಧಿಕಾರಿಗಳು ಅಥವಾ ಅಧಿಕಾರ ವ್ಯವಸ್ಥೆಯೊಳಗಿನ ಪ್ರಭಾವಶಾಲಿ ವ್ಯಕ್ತಿಗಳನ್ನು ಒಳಗೊಂಡ ಸಣ್ಣ ಗುಂಪೊಂದು, ಸರ್ಕಾರವನ್ನು ಹಠಾತ್ತಾಗಿ ಮತ್ತು ಕಾನೂನುಬಾಹಿರವಾಗಿ ಉರುಳಿಸುವುದು ಅಥವಾ ಅಧಿಕಾರವನ್ನು ಬಲವಂತವಾಗಿ ವಶಪಡಿಸಿ ಕೊಳ್ಳುವುದು). ಈ ಹೇಳಿಕೆ ಈಗ ಏತಕ್ಕೆ ಪ್ರಸ್ತುತ ಎನ್ನುವುದನ್ನು ನೋಡೋಣ.

72 ok

ಸಾಂವಿಧಾನಿಕ ಮಾರ್ಗಗಳ ತಿರಸ್ಕಾರ: ಪ್ರಜಾಪ್ರಭುತ್ವದಲ್ಲಿ ಆಡಳಿತ ಬದಲಾವಣೆಗೆ ಇರುವ ಏಕೈಕ ಮಾನ್ಯ ಮಾರ್ಗವೆಂದರೆ ನಿಯತಕಾಲಿಕ ಚುನಾವಣೆಗಳು ಮತ್ತು ಮತದಾನ. ಇದರಲ್ಲಿ ಏನಾದರೂ ಅನ್ಯಾಯ ವಾದರೆ ನ್ಯಾಯಾಂಗದ ಮೂಲಕ ಅದನ್ನು ವ್ಯಾಖ್ಯಾನಿಸಲು, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪುನಸ್ಥಾಪಿಸಲು ಅವಕಾಶವಿದೆ. ಇಲ್ಲಿ ಚುನಾವಣೆಗಳ ಜನಾದೇಶಕ್ಕಾಗಿ ಕಾಯದೆ, ರಸ್ತೆಯ ಹೋರಾಟ ಮತ್ತು ರಕ್ತಪಾತದ ಮೂಲಕ ವ್ಯವಸ್ಥೆಯನ್ನು ಬದಲಾಯಿಸುವ ಮಾತು ಕೇಳಿ ಬರುತ್ತಿದೆ.

ಇದು ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವ ‘ದಂಗೆ’ಯ ಮಾನಸಿಕತೆಯಾಗಿದೆ. ನೇಪಾಲ, ಬಾಂಗ್ಲಾದೇಶ ಮಾದರಿ ಎನ್ನುವ ಘೋಷಣೆಯಿಂದ, ಅಲ್ಲಿನ ಹಿಂಸಾತ್ಮಕ ದಂಗೆಯ ಮಾದರಿಯನ್ನು ಭಾರತದಲ್ಲೂ ಮರುಸೃಷ್ಟಿಸಲು ಇಂತಹ ಉದ್ರೇಕಕಾರಿ ಭಾಷಣಗಳು ಪ್ರೇರಣೆ ನೀಡುತ್ತವೆ. ಜನಸಾಮಾನ್ಯರನ್ನು ಸಾಂಸ್ಥಿಕವಾಗಿ ಎತ್ತಿಕಟ್ಟಿ, ರಕ್ತಪಾತದ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸಲು ಯತ್ನಿಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ, ಬದಲಿಗೆ ಅದು ‘ಕೂ ಡಿಟಾ’ ಮಾದರಿಯ ಸಂಚಾಗಿದೆ.

ಕಾನೂನಿನ ಪರಿಭಾಷೆಯಲ್ಲಿ ‘ಮೋಟಿವ್’ ಮತ್ತು ‘ಇಂಟೆನ್ಷನ್’ ಎನ್ನುವ ಎರಡು ಪದಗಳ ಹಿನ್ನೆಲೆ ಯಲ್ಲಿ ಇದನ್ನು ವಿವೇಚಿಸಬೇಕಾಗುತ್ತದೆ. ಮೋಟಿವ್ ಎಂದರೆ ಒಂದು ವ್ಯಕ್ತಿ ನಿರ್ದಿಷ್ಟ ಕಾರ್ಯವನ್ನು ಕೈಗೊಳ್ಳಲು ಪ್ರೇರೇಪಿಸಿದ ಹಿನ್ನೆಲೆಯ ಕಾರಣ ಅಥವಾ ಆಂತರಿಕ ಆಶಯ; ಇಂಟೆನ್ಷನ್ ಎಂದರೆ ಆ ಕಾರ್ಯದ ಮೂಲಕ ಸಾಧಿಸಲು ವ್ಯಕ್ತಿ ಉದ್ದೇಶಪೂರ್ವಕವಾಗಿ ಬಯಸಿದ ಫಲಿತಾಂಶ.

ಉದಾಹರಣೆಗೆ, ಒಬ್ಬ ವ್ಯಕ್ತಿ ಸರ್ಕಾರವನ್ನು ವಿರೋಧಿಸುವುದಕ್ಕೆ ರಾಜಕೀಯ ಭಿನ್ನಾಭಿಪ್ರಾಯ ಕಾರಣವಾಗಿರಬಹುದು; ಆದರೆ ಆ ವಿರೋಧವನ್ನು ವ್ಯಕ್ತಪಡಿಸುವ ಉದ್ದೇಶವು ಚುನಾವಣೆಯಲ್ಲಿ ಸರ್ಕಾರವನ್ನು ಸೋಲಿಸುವುದೇ, ಜನರನ್ನು ಶಾಂತಿಯುತವಾಗಿ ಪ್ರತಿಭಟನೆಗೆ ಸಂಘಟಿಸುವುದೇ ಅಥವಾ ಕಾನೂನುಬಾಹಿರವಾಗಿ ಅಧಿಕಾರ ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದೇ ಎಂಬುದನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ವ್ಯವಸ್ಥೆಯ ಬದಲಾವಣೆ ಎನ್ನುವುದು ಭಾರತದ ಸಂವಿಧಾನದ ಮೂಲ ರಚನೆ ಮತ್ತು ವಿಧಿಗಳಿಗೆ ಹೇಗೆ ಧಕ್ಕೆ ತರುತ್ತವೆ ಎಂಬುದಕ್ಕೆ ಕೆಳಗಿನ ನಿಯಮಗಳೇ ಸಾಕ್ಷಿ: 1. ಆರ್ಟಿಕಲ್ 19(2) ರ ಮಿತಿಗಳ ಉಲ್ಲಂಘನೆ: ಸಂವಿಧಾನದ ಆರ್ಟಿಕಲ್ 19(1)(ಎ) ವಾಕ್ ಸ್ವಾತಂತ್ರ್ಯವನ್ನು ನೀಡಿದ್ದರೂ, ಆರ್ಟಿಕಲ್ 19(2) ರ ಅಡಿಯಲ್ಲಿ ‘ದೇಶದ ಭದ್ರತೆ’, ‘ಸಾರ್ವಜನಿಕ ಸುವ್ಯವಸ್ಥೆ’ (ಪಬ್ಲಿಕ್ ಆರ್ಡರ್) ಮತ್ತು ‘ಹಿಂಸಾಚಾರಕ್ಕೆ ಪ್ರಚೋದನೆ’ಯ ಆಧಾರದ ಮೇಲೆ ಅದಕ್ಕೆ ಸ್ಪಷ್ಟ ಮಿತಿಗಳನ್ನು ಹೇರಲಾಗಿದೆ. ಭೂಷಣ್ ಅವರ ರಕ್ತಪಾತದ ಮಾತುಗಳು ಸಾರ್ವಜನಿಕ ಶಾಂತಿಯನ್ನು ಕೆಡಿಸುವ ಮತ್ತು ಹಿಂಸೆಯನ್ನು ಪ್ರಚೋದಿಸುವ ಮೂಲಕ ಈ ಸಾಂವಿಧಾನಿಕ ಮಿತಿಯನ್ನು ನೇರವಾಗಿ ಉಲ್ಲಂಘಿಸುತ್ತವೆ.

  1. ಆರ್ಟಿಕಲ್ 51ಎ (ಮೂಲಭೂತ ಕರ್ತವ್ಯಗಳು) ಕ್ಕೆ ದ್ರೋಹ: ಸಂವಿಧಾನದ ಆರ್ಟಿಕಲ್ 51ಎ(1) ಪ್ರತಿಯೊಬ್ಬ ನಾಗರಿಕನೂ ಹಿಂಸಾಚಾರವನ್ನು ತ್ಯಜಿಸಬೇಕು (Abjure Violence) ಎಂದು ಕಡ್ಡಾಯ ಗೊಳಿಸುತ್ತದೆ. ಆದರೆ ಒಬ್ಬ ಹಿರಿಯ ನ್ಯಾಯವಾದಿಯಾಗಿ ಸಂವಿಧಾನವನ್ನು ರಕ್ಷಿಸಬೇಕಾದ ಭೂಷಣ್ ಅವರೇ ರಕ್ತ ಕ್ರಾಂತಿಯ ಮಾತುಗಳನ್ನಾಡುವುದು ಸಂವಿಧಾನ ಒಪ್ಪದ ನಡವಳಿಕೆಯಾಗಿದೆ.
  2. ಮೂಲ ರಚನಾ ಸಿದ್ಧಾಂತದ (ಬೇಸಿಕ್ ಸ್ಟ್ರಕ್ಚರ್) ಉಲ್ಲಂಘನೆ: ‘ಕೇಶವಾನಂದ ಭಾರತಿ (1973)’ ತೀರ್ಪಿನ ಪ್ರಕಾರ, ಸಂಸದೀಯ ಪ್ರಜಾಪ್ರಭುತ್ವ ಮತ್ತು ಮುಕ್ತ ಚುನಾವಣೆಗಳು ಸಂವಿಧಾನದ ಮೂಲ ರಚನೆ ಯಾಗಿದೆ. ಸಂವಿಧಾನದ ಭಾಗ ಗ್ಖಿರ ಅಡಿಯಲ್ಲಿ ಚುನಾವಣೆಗಳ ಮೂಲಕ ಮಾತ್ರ ಆಡಳಿತ ಬದಲಾವಣೆಗೆ ಅವಕಾಶವಿದೆ. ಅದನ್ನು ಬಿಟ್ಟು ಹಿಂಸಾತ್ಮಕ ದಂಗೆಯ ಮಾದರಿಯಲ್ಲಿ ವ್ಯವಸ್ಥೆಯನ್ನು ಉರುಳಿಸಲು ಪ್ರಚೋದಿಸುವುದು ಸಂವಿಧಾನದ ಮೂಲ ರಚನೆಗೇ ಬಗೆಯುವ ದ್ರೋಹವಾಗಿದೆ.
  3. ಕಾನೂನಾತ್ಮಕ ದೃಷ್ಟಿಕೋನ: ಕೇದಾರ್‌ನಾಥ್ ಸಿಂಗ್ ತೀರ್ಪು (1962): ಸುಪ್ರೀಂ ಕೋರ್ಟ್‌ನ ‘ಕೇದಾರ್‌ನಾಥ್ ಸಿಂಗ್’ ತೀರ್ಪಿನ ಪ್ರಕಾರ, ಸರ್ಕಾರದ ವಿರುದ್ಧ ಸಾಮಾನ್ಯ ಟೀಕೆ ಮಾಡುವುದು ಅಪರಾಧವಲ್ಲ. ಆದರೆ, ಅಪರಾಧ ಎನಿಸಬೇಕಾದರೆ ಆ ಮಾತುಗಳು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತೆ ಇರಬೇಕು ಅಥವಾ ನೇರವಾಗಿ ಹಿಂಸಾಚಾರಕ್ಕೆ ಪ್ರಚೋದನೆ (Incitement to violence) ನೀಡುವಂತಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಗ್ರಾಮರ್ ಆಫ್ ಅನಾರ್ಕಿ’ ಎಚ್ಚರಿಕೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು 25 ನವೆಂಬರ್ 1949ರಂದು ನೀಡಿದ ಭಾಷಣದಲ್ಲಿ, ಸಾಂವಿಧಾನಿಕ ಮಾರ್ಗಗಳು ಲಭ್ಯವಿರುವಾಗ ಅಸಾಂವಿಧಾನಿಕ ಅಥವಾ ಕ್ರಾಂತಿಕಾರಿ ಮಾರ್ಗಗಳನ್ನು ಬಳಸುವುದು ಕೇವಲ ‘ಅರಾಜಕತೆಯ ವ್ಯಾಕರಣ’ (Grammar of Anarchy) ಆಗುತ್ತದೆ ಮತ್ತು ಅದು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ ಎಂದು ಎಚ್ಚರಿಸಿದ್ದರು. ಜಿರಳೆಗಳ ಹೋರಾಟದಲ್ಲಿ ಆಡಿದರು ಎನ್ನಲಾದ ಘೋಷಣೆ ಗಳು ಅಂಬೇಡ್ಕರ್ ಅವರು ನೀಡಿದ ಎಚ್ಚರಿಕೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಮತ್ತು ಟೀಕೆಗೆ ಗೌರವವಿದೆ. ಆದರೆ ಆ ವಿರೋಧವು ಸಂವಿಧಾನದ ಚೌಕಟ್ಟಿ‌ ನೊಳಗೆ ಇರಬೇಕೇ ಹೊರತು, ಸಂವಿಧಾನವನ್ನೇ ಬುಡಮೇಲು ಮಾಡುವ ‘ಕೂ ಡಿಟಾ’ (ದಂಗೆ) ರೂಪದಲ್ಲಿ ಇರಬಾರದು.

ರಕ್ತಪಾತ ಮತ್ತು ಕ್ರಾಂತಿಯ ಉದ್ರೇಕಕಾರಿ ಶಬ್ದಗಳು ಸಂವಿಧಾನದ ಆಶಯಗಳಿಗೆ ಕಿಂಚಿತ್ತೂ ಹೊಂದು ವುದಿಲ್ಲ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಶಾಂತಿಯನ್ನು ಅಸ್ಥಿರಗೊಳಿಸುವ ಅಪಾಯಕಾರಿ ರಾಜಕೀಯ ಅಜೆಂಡಾವಾಗಿದ್ದು, ಸಂವಿಧಾನದ ಪಾವಿತ್ರ್ಯತೆ ಯನ್ನು ಎತ್ತಿ ಹಿಡಿಯಲು ಇಂತಹ ಅಸಾಂವಿಧಾನಿಕ ಪ್ರಚೋದನೆಗಳನ್ನು ತಕ್ಷಣವೇ ತಿರಸ್ಕರಿಸಬೇಕಾದುದು ಇಂದಿನ ಅಗತ್ಯವಾಗಿದೆ.