ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮೂರನೇ ಮನವಿ ಪತ್ರ ಸಲ್ಲಿಸಲು ಸಿದ್ಧತೆ: ಡಾ.ಜಿ. ಪರಮೇಶ್ವರ್
Dr G Parameshwara: ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ಬೆಳೆ ಹಾಗೂ ಇತರ ನಷ್ಟಗಳ ಅಂದಾಜು ಸಿದ್ಧಪಡಿಸಲಾಗುತ್ತದೆ. ಅದರ ಆಧಾರದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿಗಳ ಅನ್ವಯ ಕೇಂದ್ರ ಸರ್ಕಾರದಿಂದ ಪರಿಹಾರದ ಅನುದಾನ ಕೋರಲಾಗುತ್ತದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
-
ಬೆಂಗಳೂರು, ಅ.19: ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ಪರಿಣಾಮ ಅತ್ಯಂತ ಗಂಭೀರವಾಗಿದ್ದು, ಆಹಾರ ಉತ್ಪಾದನೆ ಕುಂಠಿತಗೊಂಡಿರುವುದರ ಜತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಸಂಕಷ್ಟವನ್ನು ನಿಭಾಯಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರದಿಂದ (Central Government) ಬರ ಪರಿಹಾರದ ಅನುದಾನ ಪಡೆಯಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ (Dr G Parameshwara) ತಿಳಿಸಿದರು.
ಬರ ನಿರ್ವಹಣೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ರೈತರೊಂದಿಗೂ ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ತೀವ್ರತೆ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಬರದ ಪರಿಣಾಮ ಆಹಾರ ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿದ್ದು, ಶೇ.82ರಷ್ಟು ನಷ್ಟ ಸಂಭವಿಸಿದೆ. ಇದರ ಪರಿಣಾಮವಾಗಿ ಜನರಿಗೆ ಆಹಾರ ಧಾನ್ಯಗಳ ಕೊರತೆ ಎದುರಾಗುವ ಆತಂಕವಿದ್ದು, ಜಾನುವಾರುಗಳಿಗೆ ಅಗತ್ಯವಾದ ಮೇವಿನ ಲಭ್ಯತೆಯೂ ಕಡಿಮೆಯಾಗಿದೆ. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದರು.
ಈಗಾಗಲೇ ಹಲವೆಡೆ ಟ್ಯಾಂಕರ್‌ಗಳು ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ನೀರಿನ ಮೂಲಗಳೇ ಬತ್ತಿಹೋದರೆ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಪೂರೈಸುವುದೂ ಕಷ್ಟವಾಗಲಿದೆ. ಪರಿಸ್ಥಿತಿ ಆ ಹಂತಕ್ಕೆ ತಲುಪುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.
ಕೇಂದ್ರಕ್ಕೆ ಮೂರನೇ ಮನವಿ ಪತ್ರ ಸಲ್ಲಿಸಲು ಸಿದ್ಧತೆ
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ಬೆಳೆ ಹಾಗೂ ಇತರ ನಷ್ಟಗಳ ಅಂದಾಜು ಸಿದ್ಧಪಡಿಸಲಾಗುತ್ತದೆ. ಅದರ ಆಧಾರದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಮಾರ್ಗಸೂಚಿಗಳ ಅನ್ವಯ ಕೇಂದ್ರ ಸರ್ಕಾರದಿಂದ ಪರಿಹಾರದ ಅನುದಾನ ಕೋರಲಾಗುತ್ತದೆ. ಈಗಾಗಲೇ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದ್ದು, ಮೂರನೇ ಮನವಿ ಪತ್ರವನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದು ಎರಡು ದಿನಗಳಲ್ಲಿ ಅದು ಸಿದ್ಧವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಮನವಿ ಪತ್ರ ಸಲ್ಲಿಸಲು ಮುಖ್ಯಮಂತ್ರಿಗಳು, ನಾನು ಅಥವಾ ನಿಯೋಗ ತೆರಳುವ ಬಗ್ಗೆ ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿಂದೆ ಸರ್ವಪಕ್ಷ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕರೆದೊಯ್ಯುವ ಪ್ರಸ್ತಾಪವನ್ನು ಮುಖ್ಯಮಂತ್ರಿಗಳು ಮಾಡಿದ್ದರು. ಆದರೆ ವಿರೋಧ ಪಕ್ಷದವರು ನಿಯೋಗದಲ್ಲಿ ಭಾಗವಹಿಸುವ ಕುರಿತು ಭಿನ್ನ ನಿಲುವು ವ್ಯಕ್ತಪಡಿಸಿರುವುದರಿಂದ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾದರೆ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಸಂತ್ರಸ್ತರಿಗೆ ನೆರವು ಒದಗಿಸಲು ಅನುಕೂಲವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ಬರ ಪರಿಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಈಗಾಗಲೇ ಅನುದಾನ ಒದಗಿಸಲಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ. ಅಗತ್ಯವಿರುವ ಕಡೆ ಟ್ಯಾಂಕರ್‌ಗಳು ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.
ವಾರದ ಬಳಿಕ ಕಬ್ಬು ಬೆಳೆಗಾರರ ಹೋರಾಟ ಅಂತ್ಯ; ಅ.26ರ ದೆಹಲಿ ಸಭೆಯ ನಿರ್ಧಾರದತ್ತ ರೈತರ ಚಿತ್ತ
ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಇದುವರೆಗೆ ಒಂದು ಪೈಸೆಯೂ ಅನುದಾನ ಬಂದಿಲ್ಲ. ಆದರೂ ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲಗಳಿಂದ ಹಣ ಒದಗಿಸಿ ಕಾಮಗಾರಿಗಳನ್ನು ಮುಂದುವರಿಸುತ್ತಿದೆ. ರೈತರಿಗೆ ತಲಾ ₹2,500 ನೀಡುವುದಕ್ಕಾಗಿಯೇ ರಾಜ್ಯ ಸರ್ಕಾರಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗುತ್ತಿದ್ದು, ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇಷ್ಟೊಂದು ಆರ್ಥಿಕ ಹೊರೆಯ ನಡುವೆಯೂ ಜನರು ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ ತಿಳಿಸಿದರು.