Dr N Someshwara Column: ವೈದ್ಯವಿಜ್ಞಾನದ ಮಹಾನ್ ಉಪಕರಣ: ಇಂಜಕ್ಷನ್ ಸಿರಿಂಜ್
‘ಸಿರಿಂಜ್’ ಎಂಬ ಶಬ್ದದ ಮೂಲ ಗ್ರೀಕ್ ಭಾಷೆಯ ‘ಸಿರಿಂಕ್ಸ್’ ಎಂಬ ಶಬ್ದ. ಇದನ್ನು ಕೊಳಲಿನಂಥ ಗಾಳಿವಾದ್ಯ ಎನ್ನಬಹುದು. ಇದು ಲ್ಯಾಟಿನ್ ಭಾಷೆಗೆ ಬಂದು ‘ಸಿರಿಂಗ’ ಎಂದಾಯಿತು. ಆನಂತರ ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ‘ಸಿರಿಂಜ್’ ಎಂದು ಜನಪ್ರಿಯವಾಯಿತು. ಕನ್ನಡದಲ್ಲೂ ಇದನ್ನು ಸಿರಿಂಜ್ ಎನ್ನುತ್ತೇವೆ.


ಹಿಂದಿರುಗಿ ನೋಡಿದಾಗ
naasomeswara@gmail.com
ರಕ್ತನಾಳಗಳ ಬೂರು (ಅನ್ಯೂರಿಸಂ) ಅತ್ಯಂತ ಅಪಾಯಕಾರಿಯಾದ ಸ್ಥಿತಿ. ನಾನಾ ಕಾರಣಗಳಿಂದ ಒಂದು ರಕ್ತನಾಳದ ಭಿತ್ತಿಯು ಅತ್ಯಂತ ತೆಳುವಾಗುತ್ತದೆ. ಎಷ್ಟೆಂದರೆ ಬಲೂನಿನಷ್ಟು ತೆಳುವಾಗು ತ್ತದೆ. ಅದರಲ್ಲಿ ರಕ್ತವು ತುಂಬಿದಾಗ, ಅದು ಗಾಳಿ ತುಂಬಿದ ಬಲೂನಿನಂತೆ ಉಬ್ಬಿಕೊಳ್ಳುತ್ತದೆ. ಹೀಗೆ ಉಬ್ಬಿದ ರಕ್ತನಾಳವು ಯಾವ ಕ್ಷಣದಲ್ಲಾದರೂ ಸರಿ ಛಿದ್ರವಾಗಬಹುದು. ಛಿದ್ರವಾದರೆ ಅನಾಹುತ ಖಚಿತ. ಮಿದುಳಿನ ರಕ್ತನಾಳದ ಬೂರು ಛಿದ್ರವಾದರೆ ಲಕ್ವ ಹೊಡೆಯುತ್ತದೆ.
ಮಹಾಧಮನಿಯ ರಕ್ತನಾಳವು ಛಿದ್ರವಾದರೆ ಜೀವವೇ ಹೋಗುತ್ತದೆ. 18-19ನೆಯ ಶತಮಾನ ಗಳಲ್ಲಿ ಕೆಲವು ಶಸ್ತ್ರವೈದ್ಯರು ಈ ಬೂರನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲು ಪ್ರಯತ್ನಿಸಿದರು. ಆದರೆ ಬೂರನ್ನು ಛೇದಿಸುವಾಗ ಸಂಭವಿಸುವ ವಿಪರೀತ ರಕ್ತಸ್ರಾವದ ಕಾರಣ, ಕ್ಷಣದಲ್ಲಿ ಸಾವು ಸಂಭವಿಸುತ್ತಿತ್ತು.
ಹಾಗಾಗಿ ಯಾವ ವೈದ್ಯನೂ ಬೂರನ್ನು ಗುಣಪಡಿಸುವ ಪ್ರಯತ್ನವನ್ನೇ ಮಾಡುತ್ತಿರಲಿಲ್ಲ. ಇಂಥ ದಿನಗಳಲ್ಲಿ ಫ್ರಾನ್ಸ್ ದೇಶದ ಚಾರ್ಲ್ಸ್ ಗೇಬ್ರಿಯಲ್ ಪ್ರವಾಜ಼್ (1791-1853) ಎಂಬ ಶಸ್ತ್ರವೈದ್ಯನು ಒಂದು ದಿಟ್ಟ ಪ್ರಯೋಗವನ್ನು ಕೈಗೊಂಡ. ಅವನು ಬೂರನ್ನು ಛೇದಿಸುವ ಸಾಹಸಕ್ಕೆ ಹೋಗಲಿಲ್ಲ. ಬದಲಿಗೆ ಅದು ಇರುವಲ್ಲೇ ಅದು ತನ್ನ ಬೃಹತ್ ಗಾತ್ರವನ್ನು ಕಳೆದುಕೊಂಡು ಸಹಜ ರೂಪಕ್ಕೆ ಬರುವ ಹಾಗೆ ಒಂದು ಪ್ರಯತ್ನವನ್ನು ಮಾಡಿದ.
ಸಿರಿಂಜ್: 1853. ಒಂದು ಲೋಹದ ಕೊಳವೆಯನ್ನು ತೆಗೆದುಕೊಂಡ. ಅದರ ಹಿಂಭಾಗದಲ್ಲಿ ಒಂದು ಬೆಣೆಯನ್ನು (ಪಿಸ್ಟನ್) ಅಳವಡಿಸಿದ. ಈ ಬೆಣೆಯು ಸ್ಕ್ರೂ ರೂಪದಲ್ಲಿತ್ತು. ಸ್ಕ್ರೂವನ್ನು ತಿರುಗಿಸು ತ್ತಿದ್ದ ಹಾಗೆ, ಬೆಣೆಯು ಲೆಕ್ಕಾಚಾರದ ಅನ್ವಯ ಕೊಳವೆಯ ಒಳಗೆ ಚಲಿಸುತ್ತಿತ್ತು. ಲೋಹದ ಕೊಳವೆಯ ಮುಂಭಾಗದಲ್ಲಿ ಒಂದು ಸೂಜಿಯನ್ನು ಅಳವಡಿಸಿದ. ಲೋಹದ ಕೊಳವೆಯ ಒಳಗೆ ಐರನ್ ಪೆರ್ ಕ್ಲೋರೈಡ್ (ಫ್ಲೋರಿಕ್ ಕ್ಲೋರೈಡ್) ದ್ರಾವಣವನ್ನು ತುಂಬಿದ.
ಇದನ್ನೂ ಓದಿ: Dr N Someshwara Column: ಮಿಲಿಟರಿಯಿಂದ ತಾಯಂದಿರ ಆರೋಗ್ಯದವರೆಗೆ...
ಅದನ್ನು ಒಂದು ಕುರಿಯ ರಕ್ತನಾಳದ ಒಳಗೆ ಚುಚ್ಚಿದ. ಕುರಿಯ ರಕ್ತನಾಳವು ಕಿರಿದಾಯಿತು. ಒಬ್ಬ ವ್ಯಕ್ತಿಯು ಬಂದ. ಅವನ ಹಿಮ್ಮಂಡಿಯ (ಪಾಪ್ಲೀಟಿಯಲ್) ರಕ್ತನಾಳದಲ್ಲಿ ಬೂರು ಕಂಡುಬಂದಿತ್ತು. ಪ್ರವಾಜ಼್ ತನ್ನ ಸಾಧನದ ಒಳಗೆ ಐರನ್ ಪೆರ್‌ಕ್ಲೋರೈಡನ್ನು ತುಂಬಿದ. ಅದನ್ನು ನಿಖರವಾಗಿ ಬೂರಿನ ಒಳಗೆ ಚುಚ್ಚಿದ. ಬೆಣೆಯ ಸ್ಕ್ರೂವನ್ನು ತಿರುಗಿಸಲಾರಂಭಿಸಿದ. ಸ್ಕ್ರೂ ನಿಧಾನವಾಗಿ ತಿರುಗು ತ್ತಿರುವಂತೆಯೇ, ರಾಸಾಯನಿಕವು ನಿಗದಿತ ಪ್ರಮಾಣದಲ್ಲಿ ಮಾತ್ರ ಬೂರಿನ ಒಳಗೆ ಹೋಗಲಾ ರಂಭಿಸಿತು. ಆಗ ರಕ್ತನಾಳದ ಭಿತ್ತಿಯು ಪೆಡಸಾಗಲಾರಂಭಿಸಿತು.
ಬೂರು ಕಡಿಮೆಯಾಯಿತು. ಎಷ್ಟು ಬೇಕೋ ಅಷ್ಟು ಐರನ್ ಪೆರ್‌ಕ್ಲೋರೈಡನ್ನು ಮಾತ್ರ ಚುಚ್ಚಿದ. ಬೂರು ಪೆಡಸಾಗಿ ಸಹಜ ಪ್ರಮಾಣಕ್ಕೆ ಇಳಿಯಿತು. ರಕ್ತನಾಳಕ್ಕೆ ಅಪಾಯವಾಗಬಹುದಾದಷ್ಟು ಫ್ಲೋರಿಕ್ ಕ್ಲೋರೈಡ್ ಒಳಹೋಗದಿರಲು, ಅಗತ್ಯವಿದ್ದಷ್ಟೇ ದ್ರವವನ್ನು ಒಳಸೇರಿಸಲು, ಹೀಗೆ ಸ್ಕ್ರ್ರೂ ಇದ್ದ ಸಾಧನವನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಬಳಸಿದ. ಈ ಸಾಧನವು ‘ಸಿರಿಂಗ ದ ಪ್ರವಾಜ಼್’ ಎಂದು ಹೆಸರಾಯಿತು. ಈ ಸಾಧನವು ಗಟ್ಟಿಮುಟ್ಟಾಗಿತ್ತು. ಬಳಸುವುದು ಸುಲಭವಾಗಿತ್ತು. ಒಂದು ಸಾಧನವನ್ನು ಮತ್ತೆ ಮತ್ತೆ ಬಳಸಬಹುದಾಗಿತ್ತು. ಈ ಸೂಜಿ ಯಿಂದ, ಸೂಜಿಯಲ್ಲಿರುವ ದ್ರವವನ್ನು ಚರ್ಮದಡಿಯಲ್ಲಿ ಮಾತ್ರವಲ್ಲ, ಸ್ನಾಯುವಿನ ಒಳಗೂ, ರಕ್ತನಾಳದ ಒಳಗೂ ತುಂಬಬಹುದೆಂದು ಗೊತ್ತಾಯಿತು.

‘ಸಿರಿಂಜ್’ ಎಂಬ ಶಬ್ದದ ಮೂಲ ಗ್ರೀಕ್ ಭಾಷೆಯ ‘ಸಿರಿಂಕ್ಸ್’ ಎಂಬ ಶಬ್ದ. ಇದನ್ನು ಕೊಳಲಿನಂಥ ಗಾಳಿವಾದ್ಯ ಎನ್ನಬಹುದು. ಇದು ಲ್ಯಾಟಿನ್ ಭಾಷೆಗೆ ಬಂದು ‘ಸಿರಿಂಗ’ ಎಂದಾಯಿತು. ಆನಂತರ ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ‘ಸಿರಿಂಜ್’ ಎಂದು ಜನಪ್ರಿಯವಾಯಿತು. ಕನ್ನಡದಲ್ಲೂ ಇದನ್ನು ಸಿರಿಂಜ್ ಎನ್ನುತ್ತೇವೆ.
ಪ್ರವಾಜ಼್ ರೂಪಿಸಿದ ಸಿರಿಂಜ್ ಅವನ ಹೆಸರಿನಲ್ಲಿ ಜನಪ್ರಿಯವಾಯಿತು. ಎಷ್ಟು ಜನಪ್ರಿಯವಾಯಿತು ಎಂದರೆ ‘ಒಂದು ಎಂ.ಎಲ್’ ದ್ರವ ಎನ್ನುವ ಬದಲು ‘ಒಂದು ಪ್ರವಾಜ಼್’ ದ್ರವ ಎನ್ನಲಾರಂಭಿಸಿದರು. ಪ್ರವಾಜ಼್, ತಾನು ಸಿರಿಂಜನ್ನು ರೂಪಿಸಿದ ವರ್ಷವೇ ಮರಣಿಸಿದ. ಆದರೆ ಅವನ ಸಿರಿಂಜ್ ಇಂದಿನ ವರೆಗೂ ಚಿರಕಾಲ ಬಾಳುತ್ತಿದೆ.
ನೋವು: ನೋವು ಎನ್ನುವುದು ಮನುಷ್ಯನಿಗೆ ಒಂದು ಶಾಪವೂ ಆಗಿರುವ ಹಾಗೆ ವರವೂ ಆಗಿದೆ. ಹೃದಯಕ್ಕೆ ತೊಂದರೆಯಾಗಿದೆ ಎನ್ನುವುದು ನಮಗೆ ಗೊತ್ತಾಗಬೇಕಾದರೆ, ಹೃದಯವು ಅದನ್ನು ನೋವಿನ ರೂಪದಲ್ಲಿ ಪ್ರಕಟಪಡಿಸುತ್ತದೆ. ಆಗ ಮಾತ್ರ ನಾವು ತುರ್ತು ಚಿಕಿತ್ಸೆಗೆ ದೌಡಾಯಿಸುತ್ತೇವೆ. ಆದರೆ ಈ ನೋವನ್ನು ಅನೇಕ ಸಲ ತಡೆಯುವುದು ಕಷ್ಟವಾಗುತ್ತದೆ. ಉದಾಹರಣೆಗೆ ಹಲ್ಲುನೋವು, ಅರೆತಲೆ ನೋವು, ಸರ್ಪಸುತ್ತಿನ ನೋವು ಇತ್ಯಾದಿ.
‘ನ್ಯೂರಾಲ್ಜಿಯ’ ಎನ್ನುವುದು ನರಬೇನೆ. ಅತ್ಯಂತ ಉಗ್ರವಾದ ನೋವಿಗೆ ಕಾರಣವಾಗುತ್ತದೆ. ಅಂದು ಇಂಥ ನೋವನ್ನು ನಿವಾರಿಸಲು ಯಾವುದೇ ಪರಿಣಾಮಕಾರಿಯಾದ ವಿಧಾನಗಳಿರಲಿಲ್ಲ. ಹೆಚ್ಚೆಂ ದರೆ ತಿನ್ನಲು ಅಫೀಮನ್ನು ಕೊಡುತ್ತಿದ್ದರು. ಅಫೀಮು ಹೊಟ್ಟೆಗೆ ಹೋಗಿ ಜೀರ್ಣವಾಗಿ, ರಕ್ತದಲ್ಲಿ ಬೆರೆತು, ನರಬೇನೆ ಇರುವ ಸ್ಥಳವನ್ನು ತಲುಪಿ ನೋವನ್ನು ಕಡಿಮೆ ಮಾಡಲು ಸಾಕಷ್ಟು ಸಮಯವು ಬೇಕಾಗುತ್ತಿತ್ತು. ಅಲ್ಲಿಯವರೆಗೆ ನೋವನ್ನು ತಡೆದುಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು.
ಸ್ಕಾಟ್ಲೆಂಡಿನ ಎಡಿನ್‌ಬರೋದಲ್ಲಿ ಅಲೆಗ್ಸಾಂಡರ್ ವುಡ್ (1817-1884) ಎಂಬ ವೈದ್ಯನಿದ್ದ. ಇವನ ಬಳಿ, ನರಬೇನೆಯಿಂದ ನರಳುವ ರೋಗಿಗಳಿದ್ದರು. ಇವರ ನರಬೇನೆಯನ್ನು ಹೇಗೆ ಕಡಿಮೆ ಮಾಡುವುದು ಎನ್ನುವುದು ವುಡ್ ಪಾಲಿಗೆ ಒಂದು ಸವಾಲಿನ ಕೆಲಸವಾಗಿತ್ತು. 1853. ಫ್ರಾನ್ಸಿನಲ್ಲಿ ಪ್ರವಾಜ಼್ ಸಿರಿಂಜನ್ನು ರೂಪಿಸಿದ ವರ್ಷ. ಅದೇ ವರ್ಷ ವುಡ್ ಒಂದು ಗಾಜಿನ ಕೊಳವೆಯನ್ನು ತೆಗೆದುಕೊಂಡು ಅದಕ್ಕೆ ಹಿಂಭಾಗದಲ್ಲಿ ಸರಳವಾದ ಬೆಣೆಯನ್ನು ಅಳವಡಿಸಿದ.
ಮುಂದೆ ಸ್ಟೀಲಿನ ಸೂಜಿಯನ್ನು ಸೇರಿಸಿದ. ಗಾಜಿನ ಕೊಳವೆಯಲ್ಲಿ ಮಾರ್ಫಿನ್ ದ್ರಾವಣವನ್ನು ತುಂಬಿಕೊಂಡ. ನರವು ಎಲ್ಲಿ ತೀವ್ರಸ್ವರೂಪದಲ್ಲಿ ನೋಯುತ್ತಿತ್ತೋ, ಅದೇ ಸ್ಥಳಕ್ಕೆ ಬಹಳ ಎಚ್ಚರಿಕೆ ಯಿಂದ ಔಷಧಿಯನ್ನು ಚುಚ್ಚಿದ. ನೋಡನೋಡುತ್ತಿರುವಂತೆಯೇ ನರಬೇನೆಯು ಕಡಿಮೆ ಯಾಯಿತು. ರೋಗಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ಪ್ರವಾಜ಼್ ಮತ್ತು ವುಡ್ ರೂಪಿಸಿದ ಸಿರಿಂಜಿನಲ್ಲಿ ಒಂದು ಮುಖ್ಯ ವ್ಯತ್ಯಾಸವಿತ್ತು. ಪ್ರವಾಜ಼್ ತನ್ನ ಸಿರಿಂಜಿನ ಬೆಣೆಯಲ್ಲಿ ಸ್ಕ್ರೂ ತತ್ತ್ವವನ್ನು ಅಳವಡಿಸಿದ್ದ. ಹಾಗಾಗಿ ಬೆಣೆಯನ್ನು ನಿಧಾನವಾಗಿ ತಿರುಗಿಸಿ, ಔಷಧವನ್ನು ಒಳಹೋಗುವಂತೆ ಮಾಡಬೇಕಾಗಿತ್ತು. ವುಡ್, ಸ್ಕ್ರೂ ತತ್ತ್ವವನ್ನು ಬಳಸ ಲಿಲ್ಲ. ನೇರವಾಗಿ ಬೆಣೆ ಪೂರ್ಣ ಪ್ರಮಾಣದಲ್ಲಿ ಚಲಿಸುವಂತೆ ಮಾಡಿದ್ದ. ಹಾಗಾಗಿ ಸಿರಿಂಜಿನ ಒಳಗಿದ್ದ ಔಷಧವು ತಡೆಯಿಲ್ಲದೇ ಸರಾಗವಾಗಿ ನರದ ತುದಿಗೇ ಹೋಗಿ ತಲುಪುತ್ತಿತ್ತು. ಅದು ತಕ್ಷಣವೇ ತನ್ನ ಕೆಲಸವನ್ನು ಆರಂಭಿಸಿ ನೋವನ್ನು ಕಡಿಮೆ ಮಾಡುತ್ತಿತ್ತು.
ವುಡ್ ರೂಪಿಸಿದ ಇಂಜಕ್ಷನ್ ವಿಧಾನವು ಅತ್ಯಲ್ಪ ಕಾಲದಲ್ಲಿಯೇ ಸ್ಕಾಟ್ಲೆಂಡಿನಲ್ಲಿ ಜನಪ್ರಿಯ ವಾಯಿತು. ಅನೇಕ ವೈದ್ಯರು ಆತನ ಬಳಿಗೆ ಬಂದರು. ಎಲ್ಲರಿಗೂ ಹೇಗೆ ಸಿರಿಂಜನ್ನು ಬಳಸುವುದು ಎನ್ನುವುದನ್ನು ವುಡ್ ಕಲಿಸಿಕೊಟ್ಟ. ತೆಗೆದುಕೊಳ್ಳಬೇಕಾದ ಎಲ್ಲ ಎಚ್ಚರಿಕೆಗಳ ಬಗ್ಗೆ ವಿವರಿಸಿದ. ವುಡ್ ರೂಪಿಸಿದ ಈ ಇಂಜಕ್ಷನ್ ವಿಧಾನವು ಅವನ ವೈಯುಕ್ತಿಕ ಬದುಕಿನಲ್ಲಿ ದುರಂತವನ್ನೇ ತಂದಿತು.
ವುಡ್‌ನ ಹೆಂಡತಿ ರೆಬೆಕ್ಕ. ಆಕೆಗೆ ನ್ಯೂರಾಲ್ಜಿಯ ಸಮಸ್ಯೆ ಇತ್ತು. ಹಾಗಾಗಿ ಆಕೆಯ ನೋವನ್ನು ಶಮನ ಮಾಡಲು ಮಾರ್ಫಿನ್ ಚುಚ್ಚಲಾರಂಭಿಸಿದ. ಮಾರ್ಫಿನ್, ನ್ಯೂರಾಲ್ಜಿಯ ನೋವನ್ನು 5-6 ಗಂಟೆಗಳ ಕಾಲ ನಿಗ್ರಹಿಸುತ್ತಿತ್ತು. ನಂತರ ನೋಯಲು ಆರಂಭವಾಗುತ್ತಿತ್ತು. ಆಗ ಮತ್ತೆ ಇಂಜಕ್ಷನ್ ಚುಚ್ಚಿದ. ಹೀಗೆ ಮಾರ್ಫಿನ್ ಇಂಜಕ್ಷನ್ನನ್ನು ಪದೇ ಪದೆ ತೆಗೆದುಕೊಳ್ಳುತ್ತಿದ್ದುದರಿಂದ ಆಕೆಯು ಮಾರ್ಫಿನ್ನಿಗೆ ದಾಸ್ಯತನವನ್ನು ಬೆಳೆಸಿಕೊಂಡಳು.
ಮಾರ್ಫಿನ್ ಇಲ್ಲದೆ ಆಕೆ ಬದುಕನ್ನು ನಡೆಸುವುದೇ ಕಷ್ಟವಾಯಿತು. ಆಕೆ ತನ್ನ ಜೀವಮಾನ ಪೂರ್ತಿ ಮಾರ್ಫಿನ್ ಇಂಜಕ್ಷನ್‌ನ್ನನ್ನು ತೆಗೆದುಕೊಳ್ಳಲೇಬೇಕಾಯಿತು. ಅದರ ದುಷ್ಪ್ರಭಾವದ ಕಾರಣ, ಆಕೆ ತನ್ನ ಜೀವವನ್ನೂ ಕಳೆದುಕೊಳ್ಳಬೇಕಾಯಿತು. ಹಾಗೆ, ವುಡ್ ರೂಪಿಸಿದ ಇಂಜಕ್ಷನ್ ವಿಧಾನವು ಮನುಕುಲಕ್ಕೆ ಬಹು ದೊಡ್ಡ ಉಪಕಾರವನ್ನು ಮಾಡುವುದರ ಜತೆಯಲ್ಲಿ, ಶಕ್ತಿಶಾಲಿಯಾದ ಔಷಧಗಳನ್ನು ನೇರವಾಗಿ ದೇಹದೊಳಗೆ ಚುಚ್ಚಿದರೆ ಅದು ದಾಸ್ಯತನಕ್ಕೆ ಎಡೆಮಾಡಿಕೊಡುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಿತು.
ಪ್ರವಾಜ಼್ ಹಾಗೂ ವುಡ್ ರೂಪಿಸಿದ ಸಿರಿಂಜುಗಳಲ್ಲಿ ಕಾಲಕ್ರಮೇಣ ಅನೇಕ ಸುಧಾರಣೆಗಳಾದವು. ಮೊದಲು ಬೆಳ್ಳಿಯ ಸಿರಿಂಜನ್ನು ಮಾಡುತ್ತಿದ್ದರು. ನಂತರ ಬೆಳ್ಳಿಯ ಬದಲು ಉಕ್ಕನ್ನು ಬಳಸಿದರು. ಉಕ್ಕಿನ ಬದಲು ಗಾಜನ್ನು ಉಪಯೋಗಿಸಿದರು. ಆಮೇಲೆ ಗಾಜಿನ ಬದಲು ಪ್ಲಾಸ್ಟಿಕ್ ಅನ್ನು ಬಳಸಲಾರಂಭಿಸಿದರು. ಪ್ಲಾಸ್ಟಿಕ್‌ನ ಸಿರಿಂಜುಗಳು ಇಂದು ಬಳಕೆಯಲ್ಲಿವೆ.
ಹಾಲ್‌ಸ್ಟೆಡ್: ಇಂದು ನಾವು ಬಳಸುತ್ತಿರುವ ಪ್ರಮಾಣಬದ್ಧ ಸಿರಿಂಜುಗಳು ಜಾರಿಗೆ ಬರಲು ವಿಲಿಯಂ ಸ್ಟೀವರ್ಟ್ ಹಾಲ್‌ಸ್ಟೆಡ್ (1852-1922) ಕಾರಣನಾದ. ಹಾಲ್‌ಸ್ಟೆಡ್ ಅತ್ಯಂತ ಪ್ರತಿ ಭಾವಂತನಾದ ಅಮೆರಿಕನ್ ಶಸ್ತ್ರವೈದ್ಯನಾಗಿದ್ದ. ಈತನು ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದ. ಅವುಗಳಲ್ಲಿ ಎಲ್ಲಿಯೂ ನಂಜು ನುಸುಳದಂತೆ ಎಚ್ಚರವಹಿಸುತ್ತಿದ್ದ. ಇವನ್ನು ಎಲ್ಲ ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು ಕ್ರಿಮಿಶುದ್ಧೀಕರಿಸಿ ಬಳಸುತ್ತಿದ್ದ.
ಹಾಗೆಯೇ ಅವನು ಸಿರಿಂಜು ಹಾಗೂ ಸೂಜಿಗಳನ್ನು ಕ್ರಿಮಿ ಶುದ್ಧೀಕರಿಸಬೇಕೆಂದು ತಾಕೀತು ಮಾಡಿದ. ಜತೆಗೆ ಶಸ್ತ್ರಕ್ರಿಯೆಯಲ್ಲಿ ಬಳಸುವ ಸಿರಿಂಜನ್ನು ಒಳಗೊಂಡಂತೆ, ಯಾವೊಂದು ವಸ್ತುವನ್ನು ಬರಿಗೈಯಲ್ಲಿ ಮುಟ್ಟದಂತೆ ಆಜ್ಞೆಯನ್ನು ಮಾಡಿದ. ಪ್ರತಿಯೊಬ್ಬರೂ ಕೈಗವಸು ಗಳನ್ನು ಬಳಸುವುದನ್ನು ಕಡ್ಡಾಯ ಮಾಡಿದ (ನರ್ಸ್ ಹಾಗೂ ಮಡದಿಯಾಗಿದ್ದ ಕೆರೋಲಿನ್ ಹ್ಯಾಂಪ್ಟನ್ನಳ ಅಲರ್ಜಿ ಸಮಸ್ಯೆಯನ್ನು ನಿವಾರಿಸಲು, ಗುಡ್ ಇಯರ್ ಕಂಪನಿಗೆ ಹೇಳಿ ತೆಳುವಾದ ರಬ್ಬರ್ ಗವಸನ್ನು ರೂಪಿಸಿದ್ದ.
ನಂತರ ಎಲ್ಲರೂ ಅವನ್ನು ಕಡ್ಡಾಯವಾಗಿ ಬಳಸಲಾರಂಭಿಸಿದರು. ನೋಡಿ: ಜೀವಗಳನ್ನು ಉಳಿಸುತ್ತಿರುವ ಪ್ರೇಮ ಪ್ರಸಂಗದ ಫಲ: ವಿಶ್ವವಾಣಿ: 30.07.2025). ಮೊದಲು ಆಗ ಒಬ್ಬರಿಗೆ ಬಳಸಿದ ಸಿರಿಂಜನ್ನು ಮತ್ತೊಬ್ಬರಿಗೆ ಬಳಸುವಾಗ, ಸೋಂಕು ಹರಡುವ ಸಾಧ್ಯತೆಯು ಸಂಪೂರ್ಣ ವಾಗಿ ನಿಂತಿತು.
ಹಾಲ್‌ಸ್ಟೆಡ್ ಕಾಲದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಅರಿವಳಿಕೆಯನ್ನು (ಅನೆಸ್ತೀಸಿಯ) ಬಳಸುತ್ತಿದ್ದರು. ಆದರೆ ಈತ ನಿರ್ದಿಷ್ಟ ನರಗಳನ್ನು ನಿಶ್ಚೇತಗೊಳಿಸಲೂ (ನರ್ವ್ ಬ್ಲಾಕ್) ಸಮಗ್ರ ಅರಿವಳಿಕೆಯನ್ನು ನೀಡುವ ಪದ್ಧತಿಯು ಸೂಕ್ತವಲ್ಲವೆಂದ. ಅದರ ಬದಲು ಕೋಕೈನ್ ಔಷಧವನ್ನು ಸಿರಿಂಜಿನ ಮೂಲಕ ನರಕ್ಕೆ ಚುಚ್ಚಿದ. ನೋವು ಸಂಪೂರ್ಣವಾಗಿ ಕಡಿಮೆಯಾಯಿತು. ಈ ಪದ್ಧತಿ ಯನ್ನು ಪ್ರಮಾಣ ಗೊಳಿಸಿದ ಹಾಗೂ ಎಲ್ಲ ವೈದ್ಯರಿಗೂ ಕಲಿಸಿದ.
ನಂತರದ ದಿನಗಳಲ್ಲಿ ಕೊಕೇನ್ ಬದಲು ನೋವೋಕೇನ್, ಪ್ರೋಕೇನನ್ನು ಪರಿಣಾಮಕಾರಿಯಾಗಿ ಬಳಸಿದ. ಇಂದಿಗೂ ಈ ಪದ್ಧತಿಯು ಬಳಕೆಯಲ್ಲಿದೆ. ಹಾಲ್‌ಸ್ಟೆಡ್ ಇಂಜಕ್ಷನ್ ಸಿರಿಂಜನ್ನು ರೂಪಿಸ ಲಿಲ್ಲ, ನಿಜ. ಆದರೆ ಇಂಜಕ್ಷನ್ ಸಿರಿಂಜನ್ನು ಸುರಕ್ಷಿತವಾಗಿ ಬಳಸಲು ಅಗತ್ಯವಾದ ಮಾನದಂಡ ವನ್ನು ರೂಪಿಸಿದ. ಹಾಗಾಗಿ ಹಾಲ್ ಸ್ಟೆಡ್ ಸಹ ಅಭಿನಂದನೀಯ.
ಮಹಾತಿರುವು: ಆಧುನಿಕ ವೈದ್ಯಕೀಯ ವಿಜ್ಞಾನಕ್ಕೆ ಮಹಾ ತಿರುವುಗಳನ್ನು ಕೊಟ್ಟದ್ದು ಕೆಲವು ಸರಳ, ಆದರೆ ಪರಿಣಾಮಕಾರಿಯಾದ ಉಪಕರಣಗಳು. ಇಂಥ ಉಪಕರಣಗಳು ಇಲ್ಲದ ಆಧುನಿಕ ವೈದ್ಯವಿಜ್ಞಾನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಂಥ ಉಪಕರಣಗಳಲ್ಲಿ ತಾಪಮಾಪಕ, ಸ್ಟೆಥೋಸ್ಕೋಪ್ ಮತ್ತು ರಕ್ತದೊತ್ತಡ ಮಾಪಕಗಳು ಮುಖ್ಯವಾದವು. ಇವುಗಳ ಪಟ್ಟಿಗೆ ಈಗ ಇಂಜಕ್ಷನ್ ಸಿರಿಂಜ್ ಸೇರಿದೆ. ಇಂಜಕ್ಷನ್ ಸಿರಿಂಜ್ ಏನೆಲ್ಲ ಸಾಧನೆಗಳಿಗೆ ನೆರವಾಗಿದೆ ಎನ್ನುವುದನ್ನು ಸ್ಥೂಲವಾಗಿ ಗಮನಿಸೋಣ.
ಅರಿವಳಿಕೆಗಾಗಿ ಮಾರ್ಫಿನ್, ಕೊಕೇನ್, ಪ್ರೊಕೇನ್, ನೋವೋಕೇನ್ ಮುಂತಾದ ಅರಿವಳಿಕೆಯನ್ನು ನೀಡಿ ನೋವನ್ನು ನಿವಾರಿಸಲು ಸಾಧ್ಯವಾಗಿದೆ. ಲಸಿಕೆಗಳನ್ನು ನೀಡಲು ಇಂಜಕ್ಷನ್ ತಂತ್ರಜ್ಞಾನ ನೆರವಾಗಿದೆ. ಇತ್ತೀಚೆಗೆ ನಡೆದ ಕೋವಿಡ್-19ರ ಪಿಡುಗನ್ನು ನಿವಾರಿಸಲು, ಕೋವಿಡ್ ಲಸಿಕೆಯನ್ನು ಇಂಜಕ್ಷನ್ ರೂಪದಲ್ಲಿ ತೆಗೆದುಕೊಂಡದ್ದು ನಮ್ಮ ನೆನಪಿನಲ್ಲಿದೆ. ಕೋಟ್ಯಂತರ ಜನರು ಸಿರಿಂಜಿನ ಮೂಲಕವೇ ಇನ್ಸಿಲಿನ್ ಇಂಜಕ್ಷನ್ನನ್ನು ಸ್ವಯಂ ಚುಚ್ಚಿಕೊಳ್ಳುತ್ತಿದ್ದಾರೆ.
ಆಂಟಿಬಯೋಟಿಕ್ ಔಷಧಗಳನ್ನು ಇಂಜಕ್ಷನ್ ಮೂಲಕ ನೀಡಿದಾಗ, ಅವು ಪರಿಣಾಮಕಾರಿಯಾಗಿ ಕೆಲಸವನ್ನು ಮಾಡುತ್ತವೆ. ಅಪರಕ್ಷಣೆಯಾದಾಗ (ಅನಾಫೈಲಾಕ್ಸಿಸ್) ಇಂಜಕ್ಷನ್ ಮೂಲಕವೇ ಅಡ್ರಿನಲಿನ್ ನೀಡಬೇಕಾಗುತ್ತದೆ.
ಪ್ರಸವೋತ್ತರ ರಕ್ತಸ್ರಾವವನ್ನು ತಡೆಗಟ್ಟಲು ಆಕ್ಸಿಟೋಸಿನ್ ಇಂಜಕ್ಷನ್ ಸಹಕಾರಿಯಾಗಿದೆ. ಕುಟುಂಬ ಯೋಜನೆಗಾಗಿಯೂ ಡಿಪೋ ಇಂಜಕ್ಷನ್ನುಗಳು ಬಳಕೆಯಲ್ಲಿವೆ. ಅಪಸ್ಮಾರ ಬಂದಾಗ, ಬೆಂಜ಼ೋಡಯಾಜ಼ಿಪೈನ್ ಔಷಧಗಳನ್ನು ಇಂಜಕ್ಷನ್ ಮೂಲಕವೇ ನೀಡಬೇಕಾಗುತ್ತದೆ. ಇಂಜಕ್ಷನ್ ತಂತ್ರವನ್ನೇ ಸುಧಾರಿಸಿ ಡ್ರಿಪ್ ನೀಡುವ ಹಾಗೂ ರಕ್ತಪೂರಣ ಮಾಡುವ ತಂತ್ರಜ್ಞಾನವನ್ನೂ ನಾವು ರೂಪಿಸಿದ್ದೇವೆ.
ಸುರಕ್ಷತೆ: ಈಗ ಎಲ್ಲೆಡೆ ಪ್ಲಾಸ್ಟಿಕ್ ಸಿರಿಂಜುಗಳು ಬಂದಿವೆ. ಒಂದು ಸಲ ಬಳಸಿ ಎಸೆವ ಸಿರಿಂಜುಗಳು ಬಳಕೆಗೆ ಬಂದ ಮೇಲೆ, ಇಂಜಕ್ಷನ್ ಮೂಲಕ ಹರಡುವ ಸೋಂಕುರೋಗಗಳು ಪರಿಣಾಮಕಾರಿ ಯಾಗಿ ಕಡಿಮೆಯಾಗಿವೆ. ಇಂಜಕ್ಷನ್ನಿನ ಆದಿರೂಪದ ಆವಿಷ್ಕಾರವು ರೋಮನ್ ವೈದ್ಯ ಗ್ಯಾಲನ್ನಿನ ಕಾಲದಲ್ಲಿಯೇ ಆಗಿದ್ದರೂ, ನಿಜವಾದ ಅರ್ಥದಲ್ಲಿ ಇಂಜಕ್ಷನ್ನನ್ನು ನಮಗೆ ನೀಡಿದ ಪ್ರವಾಜ಼್, ವುಡ್ ಮತ್ತು ಹಾಲ್‌ಸ್ಟೆಡ್ ಅವರಿಗೆ ಮನುಕುಲವು ಸದಾಕಾಲಕ್ಕೂ ಋಣಿಯಾಗಿರುತ್ತದೆ.