Surendra Pai Column: ಅಕ್ಷರ ಕಲಿಸುವ ಕೈಯಲ್ಲಿ ಸ್ವಿಗ್ಗಿ ಡೆಲಿವರಿ ಬ್ಯಾಗ್ !
ದೇಶದ ಭವಿಷ್ಯವು ತರಗತಿಯ ಕೋಣೆಗಳಲ್ಲಿ ರೂಪುಗೊಳ್ಳುತ್ತದೆ ಎನ್ನುತ್ತೇವೆ. ಆದರೆ, ಆ ಭವಿಷ್ಯವನ್ನು ತಿದ್ದಿ-ತೀಡುವ ಖಾಸಗಿ ಶಾಲೆಯ ಶಿಕ್ಷಕರ ಇಂದಿನ ಪರಿಸ್ಥಿತಿ ಮಾತ್ರ ಅತ್ಯಂತ ಕಳವಳಕಾರಿಯಾಗಿದೆ. ಒಂದೆಡೆ ಮೂಲಭೂತ ಸೌಕರ್ಯ ಅಥವಾ ಆಡಳಿತಾತ್ಮಕ ವೈಫಲ್ಯದಿಂದಾಗಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಮುಚ್ಚುವ ಹಂತ ತಲುಪುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಶಾಲೆಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿವೆ.
-
ಕಲಿಕಾಲ
ಸುರೇಂದ್ರ ಪೈ, ಭಟ್ಕಳ
ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಎಂಟು ವರ್ಷಗಳಿಂದ ಇಂಗ್ಲಿಷ್ ವಿಷಯ ಬೋಧಿಸು ತ್ತಿದ್ದ ಶಿಕ್ಷಕ ಗೆಳೆಯನೊಬ್ಬ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು, ತನ್ನ ವಯಸ್ಸಾದ ತಂದೆಯ ಆರೈಕೆ ಮಾಡಿ, ಮಗಳಿಗೆ ಶಾಲೆಗೆ ಹೋಗಲು ರೆಡಿ ಮಾಡಿ, ತಿಂಡಿ, ಲಂಚ್ ಬಾಕ್ಸ್ ಕಟ್ಟಿಟ್ಟು, ತಾನು ಖಡಕ್ ಆಗಿ ಇಸ್ತ್ರಿ ಮಾಡಿದ ಬ್ಲೇಜರ್ ಧರಿಸಿ ಶಾಲೆಗೆ ಹೋಗುತ್ತಿದ್ದ. ಆದರೆ, ಸಂಜೆ 5 ಗಂಟೆಗೆ ಶಾಲೆಯ ಗೇಟಿನಿಂದ ಹೊರಬಿದ್ದ ತಕ್ಷಣ ಅವನ ವೇಷ ಬದಲಾಗುತ್ತಿತ್ತು.
ಬೆನ್ನಿಗೊಂದು ಡೆಲಿವರಿ ಬ್ಯಾಗ್ ಏರಿಸಿ, ತಡರಾತ್ರಿಯವರೆಗೆ ಸ್ವಿಗ್ಗಿ-ಝೊಮಾಟೋ ಆಪ್ ಮೂಲಕ ನಗರದ ಮನೆಮನೆಗೆ ಆಹಾರ ತಲುಪಿಸುವ ಕೆಲಸಕ್ಕೆ ಇಳಿಯುತ್ತಿದ್ದ. ಶಾಲೆಯಲ್ಲಿ ನೀಡುತ್ತಿದ್ದ 18000 ಸಾವಿರ ಅತ್ಯಲ್ಪ ವೇತನದಲ್ಲಿ ಹೆಚ್ಚುತ್ತಿರುವ ಮನೆ ಬಾಡಿಗೆ, ದುಪ್ಪಟ್ಟಾದ ದಿನಸಿ ವೆಚ್ಚ ಹಾಗೂ ತಂದೆಯ ವೈದ್ಯಕೀಯ ಖರ್ಚುಗಳನ್ನು ಸರಿದೂಗಿಸಲು ಅವನಿಗೆ ಬೇರೆ ದಾರಿಯೇ ಇರಲಿಲ್ಲ.
ತರಗತಿಯಲ್ಲಿ ‘ಆಧುನಿಕ ಶಿಕ್ಷಣ’ ನೀಡಬೇಕೆಂಬ ಆಡಳಿತ ಮಂಡಳಿಯ ಕಟ್ಟುನಿಟ್ಟಿನ ಆಜ್ಞೆ, ನಿರಂತರ ಆನ್ಲೈನ್ ದಾಖಲೀಕರಣದ ಬೌದ್ಧಿಕ ಒತ್ತಡ ಒಂದೆಡೆಯಾದರೆ, ರಾತ್ರಿ ನಗರದ ರಸ್ತೆಗಳಲ್ಲಿ ಡೆಲಿವರಿ ಮಾಡುವಾಗ ಅನುಭವಿಸುವ ದೈಹಿಕ ಆಯಾಸ ಇನ್ನೊಂದೆಡೆ. ಕಡೆಗೆ ಒಂದೇ ದಿನದಲ್ಲಿ ಎರಡೆರಡು ಬದುಕುಗಳನ್ನು ಸಾಗಿಸುವ ಈ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡ ತಾಳಲಾರದೆ, ತನ್ನ ಶಿಕ್ಷಕ ವೃತ್ತಿಗೇ ರಾಜೀನಾಮೆ ನೀಡಿ ಇಂದು ಪೂರ್ಣಾವಧಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ನಿರ್ಧರಿಸಿದ. ಇದರೊಟ್ಟಿಗೆ ದಿನದ ಎರಡು ಗಂಟೆ ಟ್ಯೂಷನ್ ಕ್ಲಾಸ್ ಮಾಡಿ ಶಾಲೆಯ ವೇತನಕ್ಕಿಂತ ಹೆಚ್ಚಿನ ಸಂಪಾದನೆಗೆ ದಾರಿ ಕಂಡುಕೊಂಡ.
ಇದನ್ನೂ ಓದಿ: Surendra Pai Column: ನಮ್ಮ ಬದುಕು ಪ್ರದರ್ಶನಕ್ಕೋ, ಅನುಭವಕ್ಕೋ ?
ತರಗತಿಯಲ್ಲಿ ಮಕ್ಕಳ ಬೌದ್ಧಿಕ ಮಟ್ಟವನ್ನು ಎತ್ತರಿಸುವ ಶಿಕ್ಷಕನೊಬ್ಬ ಇಂದು ಬೆಲೆ ಏರಿಕೆಯ ಸುಳಿಗೆ ಸಿಲುಕಿ ತನ್ನ ಕನಿಷ್ಠ ಜೀವನಾಧಾರಕ್ಕಾಗಿ ರಾತ್ರಿ ವೇಳೆ ಬೀದಿಗಿಳಿಯಬೇಕಾದ ಈ ವಾಸ್ತವಿಕ ಚಿತ್ರಣ, ಇಂದಿನ ಖಾಸಗಿ ಶಿಕ್ಷಣ ವ್ಯವಸ್ಥೆಯ ಬೂಟಾಟಿಕೆ ಮತ್ತು ಶಿಕ್ಷಕರ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ದೇಶದ ಭವಿಷ್ಯವು ತರಗತಿಯ ಕೋಣೆಗಳಲ್ಲಿ ರೂಪುಗೊಳ್ಳುತ್ತದೆ ಎನ್ನುತ್ತೇವೆ. ಆದರೆ, ಆ ಭವಿಷ್ಯವನ್ನು ತಿದ್ದಿ-ತೀಡುವ ಖಾಸಗಿ ಶಾಲೆಯ ಶಿಕ್ಷಕರ ಇಂದಿನ ಪರಿಸ್ಥಿತಿ ಮಾತ್ರ ಅತ್ಯಂತ ಕಳವಳಕಾರಿಯಾಗಿದೆ. ಒಂದೆಡೆ ಮೂಲಭೂತ ಸೌಕರ್ಯ ಅಥವಾ ಆಡಳಿತಾತ್ಮಕ ವೈಫಲ್ಯ ದಿಂದಾಗಿ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಮುಚ್ಚುವ ಹಂತ ತಲುಪುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಶಾಲೆಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿವೆ.
ಸರಕಾರಿ ಶಾಲೆಗಳಲ್ಲಿ ಹತ್ತು-ಇಪ್ಪತ್ತು ವಿದ್ಯಾರ್ಥಿಗಳಿಗೆ ಮೂರ್ನಾಲ್ಕು ಶಿಕ್ಷಕರಿದ್ದರೆ, ಖಾಸಗಿ ಶಾಲೆಯ ಒಂದೇ ತರಗತಿಯಲ್ಲಿ 35ರಿಂದ 40 ಮಕ್ಕಳನ್ನು ನಿಯಂತ್ರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆದರೆ, ಈ ವಿರೋಧಾಭಾಸದ ನಡುವೆ ನಲುಗುತ್ತಿರುವುದು ಖಾಸಗಿ ಶಾಲಾ ಶಿಕ್ಷಕರ ಬದುಕು. ಸರಕಾರಿ ಶಿಕ್ಷಕರ ವೇತನದ ಅರ್ಧದಷ್ಟನ್ನೂ ಪಡೆಯದ ಖಾಸಗಿ ಶಿಕ್ಷಕರು ವಿಪರೀತ ಸಾಮಾಜಿಕ ಹಾಗೂ ಆರ್ಥಿಕ ಒತ್ತಡಗಳ ನಡುವೆ ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದಾರೆ.
ಇಂದಿನ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಯಲ್ಲಿ ದಿನದಿಂದ ದಿನಕ್ಕೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಹಾಲಿನ ದರ, ಬಸ್ ಪ್ರಯಾಣ ದರ, ತರಕಾರಿ, ದಿನಸಿ ಸಾಮಗ್ರಿಗಳ ಬೆಲೆ, ವಿದ್ಯುತ್ ಶುಲ್ಕ, ಮಕ್ಕಳ ಶಿಕ್ಷಣ ಮತ್ತು ಅನಿವಾರ್ಯ ಆರೋಗ್ಯ ವೆಚ್ಚಗಳು ಹೀಗೆ ದಿನನಿತ್ಯದ ಬದುಕಿನ ಪ್ರತಿಯೊಂದು ವಸ್ತುವಿನ ಬೆಲೆ ದುಪ್ಪಟ್ಟಾಗಿದೆ. ಇವೆಲ್ಲದರ ಬಿಸಿ ಸಮಾಜದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತಟ್ಟಿದೆ.
ಖಾಸಗಿ ಶಾಲಾ ಶಿಕ್ಷಕರು ಸಹ ಇವರ ಒಬ್ಬ. ಆದರೆ ಇವರ ವೇತನ ಮಾತ್ರ ವರ್ಷದಿಂದ ವರ್ಷಕ್ಕೆ ಏರುವುದೇ ಇಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಪರಿಷ್ಕರಣೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕನಸಿನ ಮಾತಾಗಿದೆ. ಹಾಗಂತ ಶಾಲಾ ಶುಲ್ಕದಲ್ಲಿ ಮಾತ್ರ ಏರಿಕೆ ಕಾಣುತ್ತಲೇ ಇರುತ್ತದೆ. ಹೀಗಾಗಿ ಖಾಸಗಿ ಶಾಲೆ ಶಿಕ್ಷಕರ ಪಾಡು ನಾಯಿಪಾಡಾಗಿಬಿಟ್ಟಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಉನ್ನತ ದರ್ಜೆಯ ಶಿಕ್ಷಣ ಮತ್ತು ಆಧುನಿಕ ಕೌಶಲಗಳ ಭರವಸೆಯಿಂದ. ಆದರೆ, ಈ ಎಲ್ಲ ನಿರೀಕ್ಷೆಗಳ ಭಾರ ಬೀಳುವುದು ಶಿಕ್ಷಕರ ಮೇಲೆ. ಆಡಳಿತ ಮಂಡಳಿಯು ಶೇಕಡಾ ನೂರರಷ್ಟು ಫಲಿತಾಂಶ, ಶಿಸ್ತು ಮತ್ತು ಆಧುನಿಕ ಬೋಧನಾ ಪದ್ಧತಿಗಳನ್ನು ಅಪೇಕ್ಷಿಸಿದರೆ, ಪೋಷಕರು ತಮ್ಮ ಪ್ರತಿಯೊಂದು ವೈಯಕ್ತಿಕ ಕುಂದುಕೊರತೆಗಳಿಗೂ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ಈ ಎಲ್ಲ ನಿರೀಕ್ಷೆಗಳನ್ನು ಈಡೇರಿಸಲು ಶ್ರಮಿಸುವ ಖಾಸಗಿ ಶಾಲಾ ಶಿಕ್ಷಕರ ಆರ್ಥಿಕ ಸ್ಥಿತಿ ಮಾತ್ರ ಮುನ್ನಲೆಗೆ ಬರುವುದೇ ಇಲ್ಲ.
ಸರಕಾರಿ ಶಾಲಾ ಶಿಕ್ಷಕರಿಗೆ ಸಿಗುವ ನಿಯಮಿತ ವೇತನ, ಭತ್ಯೆ ಮತ್ತು ಭವಿಷ್ಯದ ಭದ್ರತೆಗೆ ಹೋಲಿಸಿ ದರೆ ಶೇ. 85ರಷ್ಟು ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ವೇತನ ಕಾಯ್ದೆಯ ನಿಯಮಗಳೂ ಪಾಲನೆ ಯಾಗುವುದಿಲ್ಲ. ತರಗತಿಯಲ್ಲಿ ಪಾಠ ಮಾಡುವುದಷ್ಟೇ ಶಿಕ್ಷಕರ ಕೆಲಸವಾಗಿ ಉಳಿದಿಲ್ಲ. ಶೈಕ್ಷಣಿಕ ಯೋಜನಾ ವರದಿಗಳು, ನಿರಂತರ ಮೌಲ್ಯಮಾಪನ, ಡಿಜಿಟಲ್ ದಾಖಲೆಗಳ ನಿರ್ವಹಣೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನೆ ಹಾಗೂ ಆಡಳಿತಾತ್ಮಕ ಕೆಲಸಗಳ ಹೆಚ್ಚುವರಿ ಹೊರೆ ಶಿಕ್ಷಕರ ಬೌದ್ಧಿಕ ಸಾಮರ್ಥ್ಯವನ್ನು ಕುಂದಿಸುತ್ತಿದೆ.
ತರಗತಿಯ ಸಮಯ ಮುಗಿದ ನಂತರವೂ ಮನೆಗೆ ಕೆಲಸವನ್ನು ತೆಗೆದುಕೊಂಡು ಹೋಗುವ ಅನಿವಾರ್ಯತೆ ಅವರ ಕುಟುಂಬ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಖಾಸಗಿ ಶಾಲಾ ಶಿಕ್ಷಕರಲ್ಲಿ ತೀವ್ರ ಮಾನಸಿಕ ಒತ್ತಡ, ಖಿನ್ನತೆ, ಆತಂಕ ಮತ್ತು ದೈಹಿಕ ಆಯಾಸದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಸುದೀರ್ಘ ಅವಧಿಯ ನಿಲ್ಲುವಿಕೆಯಿಂದ ಉಂಟಾಗುವ ಬೆನ್ನುನೋವು, ಕುತ್ತಿಗೆ ನೋವು ಮತ್ತು ಧ್ವನಿಪೆಟ್ಟಿಗೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿದೆ.
ಆರ್ಥಿಕ ಅಸ್ಥಿರತೆ ಮತ್ತು ಕೆಲಸದ ಭದ್ರತೆಯ ಅಭಾವವು ಅವರಲ್ಲಿ ನಿರಂತರ ಭಯ ಮತ್ತು ಅಭದ್ರತೆಯ ವಾತಾವರಣವನ್ನು ನಿರ್ಮಿಸಿದೆ. ಸಾಕಷ್ಟು ಬದ್ಧತೆ ಮತ್ತು ಪ್ರತಿಭೆ ಇದ್ದರೂ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದು ಮತ್ತು ಕನಿಷ್ಠ ಗೌರವವೂ ದೊರೆಯದಿರುವುದು ಪ್ರತಿಭಾವಂತ ಶಿಕ್ಷಕರನ್ನು ಈ ವೃತ್ತಿಯಿಂದ ದೂರ ಸರಿಯುವಂತೆ ಮಾಡುತ್ತಿದೆ. ಅನೇಕ ಅರ್ಹ ಮತ್ತು ಅನುಭವಿ ಶಿಕ್ಷಕರು ಈ ಒತ್ತಡವನ್ನು ತಾಳಲಾರದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.
ಪರಿಣಾಮವಾಗಿ, ಶಿಕ್ಷಣ ಕ್ಷೇತ್ರದಿಂದ ಅರ್ಹ ಬೋಧಕ ಶಕ್ತಿ ಬೇರೆ ರಂಗಗಳಿಗೆ ವಲಸೆ ಹೋಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ನಿರಂತರ ಬದಲಾವಣೆಯು ನೇರವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಭಾವಂತ ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳು ಅನಿವಾರ್ಯವಾಗಿ ಕೌಶಲರಹಿತ ವ್ಯಕ್ತಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿಯೇ ಇಂದು ಬಹುತೇಕ ಖಾಸಗಿ ಶಾಲೆಗಳು ಕೇರಳ, ತಮಿಳುನಾಡು, ಆಂಧ್ರಪ್ರದೇಶದಂತಹ ಹೊರ ರಾಜ್ಯದ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದೆ. ಇದು ಆಧುನಿಕತೆಯ ಹೆಸರಿನಲ್ಲಿ ಪೋಷಕರಿಂದ ಭಾರಿ ಶುಲ್ಕ ವಸೂಲಿ ಮಾಡುವ ಸಂಸ್ಥೆಗಳ ಬೂಟಾಟಿಕೆಯ ಚಿತ್ರಣ. ಖಾಸಗಿ ಶಾಲಾ ಶಿಕ್ಷಕರ ಹಕ್ಕುಗಳ ರಕ್ಷಣೆಗಾಗಿ ಮತ್ತು ಅವರ ಧ್ವನಿಯಾಗಲು ಕೆಲ ಸಂಘಟನೆಗಳು ಅಥವಾ ಒಕ್ಕೂಟಗಳು ಅಸ್ತಿತ್ವದಲ್ಲಿದ್ದರೂ, ಅವುಗಳ ಕಾರ್ಯವೈಖರಿ ನಿರಾಶಾದಾಯಕವಾಗಿದೆ.
ಹೆಚ್ಚಿನ ಸಂಘಟನೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದು, ಶಾಲಾ ಆಡಳಿತ ಮಂಡಳಿಗಳ ಅಥವಾ ಪ್ರಭಾವಿ ವ್ಯಕ್ತಿಗಳ ಹಿತಾಸಕ್ತಿ ಕಾಯುವುದಕ್ಕಷ್ಟೇ ಸೀಮಿತವಾಗಿವೆ. ಶಿಕ್ಷಕರ ಶೋಷಣೆ, ವೇತನ ಹೆಚ್ಚಳ, ಕೆಲಸದ ಭದ್ರತೆ ಅಥವಾ ಆರೋಗ್ಯ ವಿಮೆಯಂತಹ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ಬದ್ಧತೆ ಈ ಸಂಸ್ಥೆಗಳಲ್ಲಿ ಕಾಣಿಸುತ್ತಿಲ್ಲ.
ಸಂಘಟನೆಗಳ ಈ ನಿಷ್ಕ್ರಿಯತೆಯು ಶಿಕ್ಷಕರನ್ನು ಇನ್ನಷ್ಟು ಅಸಹಾಯಕರನ್ನಾಗಿ ಮಾಡಿದೆ.
ಖಾಸಗಿ ಶಾಲಾ ಶಿಕ್ಷಕರಲ್ಲಿ ತೀವ್ರ ಮಾನಸಿಕ ಒತ್ತಡದ ಕುರಿತಂತೆ NCBI ಮತ್ತು IJRMS ವೈದ್ಯಕೀಯ ಅಧ್ಯಯನಗಳ ಮಾಹಿತಿಯಂತೆ ಖಾಸಗಿ ಶಾಲಾ ಶಿಕ್ಷಕರಲ್ಲಿ ಶೇ.74.3ಕ್ಕೂ ಹೆಚ್ಚು ಶಿಕ್ಷಕರು ತೀವ್ರ ಮಟ್ಟದ ವೃತ್ತಿಪರ ಒತ್ತಡಕ್ಕೆ (High Perceived Stress) ಒಳಗಾಗಿದ್ದಾರೆ. ಶೇ. 84.3ರಷ್ಟು ಶಿಕ್ಷಕರು ಪ್ರತಿದಿನ ಶಾಲೆಯ ಸಮಯ ಮುಗಿದ ಮೇಲೆಯೂ ಮನೆಗೆ ಶಾಲೆಯ ಕೆಲಸಗಳನ್ನು ತೆಗೆದುಕೊಂಡು ಹೋಗಿ 45 ನಿಮಿಷಗಳಿಗೂ ಹೆಚ್ಚು ಕಾಲ ಶ್ರಮಿಸುತ್ತಿದ್ದಾರೆ.
ಒತ್ತಡ ಮತ್ತು ಆರ್ಥಿಕ ಅಭದ್ರತೆಯ ಕಾರಣದಿಂದ ಶೇ.40.7ರಷ್ಟು ಶಿಕ್ಷಕರು ನಿದ್ರಾಹೀನತೆಯಿಂದ (Disturbed Sleep) ಬಳಲುತ್ತಿದ್ದರೆ, ಶೇ. 79.7ರಷ್ಟು ಶಿಕ್ಷಕರಲ್ಲಿ ದೈಹಿಕ ಆರೋಗ್ಯ ಸಮಸ್ಯೆಗಳು (Comorbidities) ಕಂಡುಬಂದಿವೆ.
ಖಾಸಗಿ ಶಾಲೆಗಳಲ್ಲಿ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಇಲ್ಲದಿರುವುದರಿಂದ ಶೇ. 75ಕ್ಕೂ ಹೆಚ್ಚು ಶಿಕ್ಷಕರಲ್ಲಿ ಆತಂಕ ಮತ್ತು ಖಿನ್ನತೆಯ ಲಕ್ಷಣಗಳು ಕಂಡುಬಂದಿವೆ. ಕೇವಲ ಶೇ. 32.8 ರಷ್ಟು ಶಿಕ್ಷಕರು ಮಾತ್ರ ಉತ್ತಮ ಮಾನಸಿಕ ಯೋಗಕ್ಷೇಮವನ್ನು ಹೊಂದಿದ್ದಾರೆಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ರಿಸರ್ಚ್ ಇನ್ ಮೆಡಿಕಲ್ ಸೈನ್ಸಸ್ ವರದಿ ಮಾಡಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983 ಖಾಸಗಿ ಶಾಲಾ ಶಿಕ್ಷಕರ ವೇತನ ಮತ್ತು ಸೇವಾ ನಿಯಮಗಳ ಬಗ್ಗೆ ಸ್ಪಷ್ಟ ವಾಗಿ ತಿಳಿಸುತ್ತದೆ. ಈ ಕಾಯ್ದೆಯ ಅಧ್ಯಾಯ XIV ಮತ್ತು ಅದರೊಳಗಿನ ಸೆಕ್ಷನ್ಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ಸೇವಾ ನಿಯಮಗಳು ಹಾಗೂ ವೇತನಕ್ಕೆ ಸಂಬಂಧಿಸಿವೆ. ಈ ಕಾಯ್ದೆಯಡಿ ರೂಪಿಸಲಾದ ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಖಾಸಗಿ ಅನುದಾನರಹಿತ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ನಿಯಮಗಳು) ನಿಯಮಾವಳಿಗಳು, 2005ರ ಪ್ರಕಾರ, ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರ ಕನಿಷ್ಠ ಮೂಲ ವೇತನವು (Basic Pay) ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುವ ಕನಿಷ್ಠ ಮೂಲ ವೇತನಕ್ಕಿಂತ ಕಡಿಮೆ ಇರಬಾರದು ಮತ್ತು ವೇತನವನ್ನು ಬ್ಯಾಂಕ್ ಖಾತೆಯ ಮೂಲಕವೇ ಪಾವತಿಸಬೇಕು ಎಂದು ನಿಯಮ ರೂಪಿಸಲಾಗಿದೆ.
ಇನ್ನುಳಿದಂತೆ ಪ್ರಮುಖವಾಗಿ ಖಾಸಗಿ ಶಾಲಾ ಶಿಕ್ಷಕರಿಗೆ ಭವಿಷ್ಯ ನಿಧಿ ಕಾಯ್ದೆ 1952 ರಂತೆ 20 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿ ಇರುವ ಪ್ರತಿಯೊಂದು ಖಾಸಗಿ ಶಾಲೆಯೂ ಶಿಕ್ಷಕರಿಗೆ ಪಿಎಫ್ ಸೌಲಭ್ಯವನ್ನು ಕಡ್ಡಾಯವಾಗಿ ನೀಡಬೇಕು. ಗ್ರ್ಯಾಚುಟಿ ಪಾವತಿ ಕಾಯ್ದೆ 1972 (ಗ್ರಾಚ್ಯುಟಿ ಪಾವತಿ ತಿದ್ದುಪಡಿ ಕಾಯ್ದೆ, 2009) ಪ್ರಕಾರ ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೂ ಗ್ರ್ಯಾಚುಟಿ ಪಡೆಯುವ ಅರ್ಹತೆ ಇದೆ ಎಂದು ಸ್ಪಷ್ಟಪಡಿಸಿದೆ.
5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಶಾಲೆ ತೊರೆಯುವಾಗ ಗ್ರ್ಯಾಚುಟಿ ನೀಡುವುದು ಕಡ್ಡಾಯ. ಇಎಸ್ಐ ಕಾಯ್ದೆ ಪ್ರಕಾರ ನಿಗದಿತ ವೇತನ ಮಿತಿಯೊಳಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ವೈದ್ಯಕೀಯ ಮತ್ತು ಆರೋಗ್ಯ ವಿಮೆ ಸೌಲಭ್ಯ (ESI) ಅನ್ವಯಿಸುತ್ತದೆ. ಪ್ರಸೂತಿ ಸೌಲಭ್ಯ ಕಾಯ್ದೆ 1961ರನ್ವಯ ಖಾಸಗಿ ಶಾಲೆಯ ಮಹಿಳಾ ಶಿಕ್ಷಕಿಯರಿಗೆ 26 ವಾರಗಳ ವೇತನ ಸಹಿತ ಹೆರಿಗೆ ರಜೆ ಪಡೆಯುವ ಕಾನೂನಾತ್ಮಕ ಹಕ್ಕು ನೀಡಿದೆ. ಆದರೆ ಇದರ ಕುರಿತು ಬಹಳಷ್ಟು ಖಾಸಗಿ ಶಾಲಾ ಶಿಕ್ಷಕರಿಗೆ ಗೊತ್ತಿಲ್ಲ.
ಒಂದೊಮ್ಮೆ ಗೇತ್ತಿದ್ದರೂ ಬದುಕಿನ ಬಂಡಿಯನ್ನು ಸಾಗಿಸಬೇಕಾದ ಅನಿವಾರ್ಯತೆಯ ನಡುವೆ ಯಾರೂ ಪ್ರಶ್ನಿಸುವುದಿಲ್ಲ. ಮುಂದೊಂದು ದಿನ ತಮ್ಮ ಈ ಸವಲತ್ತುಗಳನ್ನು ಪಡೆಯಲು ಶಿಕ್ಷಕರು ಕೋರ್ಟ್ ಮೆಟ್ಟಿಲೇರಬಹುದೆಂದು ಅನೇಕ ಶಾಲಾ ಆಡಳಿತ ಮಂಡಳಿಯವರು ಶಿಕ್ಷಕರಿಗೆ ಈ ಕಾಯಿದೆ ಅನ್ವಯಿಸ ದಂತೆ ಅಧಿಕೃತ ನೇಮಕಾತಿ ಆದೇಶ ನೀಡದೆ, ಪ್ರತಿ ವರ್ಷ ಹೊಸ ಒಪ್ಪಂದ ಮಾಡಿಕೊಳ್ಳುತ್ತವೆ ಅಥವಾ ಮೌಖಿಕವಾಗಿ ನೇಮಿಸಿಕೊಳ್ಳುತ್ತವೆ.
ಇನ್ನು ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳ ಶುಲ್ಕ ಮತ್ತು ಮೂಲಭೂತ ಸೌಕರ್ಯಗಳ ಪರಿಶೀ ಲನೆ ನಡೆಸುತ್ತದೆಯಾದರೂ, ಶಿಕ್ಷಕರಿಗೆ ನೀಡಲಾಗುವ ವೇತನದ ದಾಖಲೆಗಳನ್ನು ಕಟ್ಟುನಿಟ್ಟಾಗಿ ತನಿಖೆ ಮಾಡುವುದಿಲ್ಲ. ಶಿಕ್ಷಣ ವ್ಯವಸ್ಥೆಯ ಈ ದುಃಸ್ಥಿತಿಯನ್ನು ಸರಿಪಡಿಸಲು ಸರಕಾರ, ಶಿಕ್ಷಣ ಇಲಾಖೆ ಮತ್ತು ಸಮಾಜ ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ.
ಎಲ್ಲರಿಗೂ ಖಾಸಗಿ ಶಾಲಾ ಶಿಕ್ಷಕರಿಂದ ಹೇಗೆ ಅಗಾಧ ಅಪೇಕ್ಷೆ, ನಿರೀಕ್ಷೆಗಳು ಇವೆಯೋ, ಅದಕ್ಕೆ ತಕ್ಕ ಗೌರವ, ವೇತನ ನೀಡಲು ಕಲಿಯಬೇಕು. ಇಂದು ಪಾಲಕರು ಶಿಕ್ಷಕರನ್ನು ಕೂಲಿ ಕಾರ್ಮಿಕರಿಗಿಂತ ಕಡೆಯಾಗಿ ನೋಡುತ್ತಿದ್ದಾರೆ. ತಮ್ಮ ಕರ್ತವ್ಯವನ್ನು ಮರೆತು ಎಲ್ಲದಕ್ಕೂ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸುವ ಮನಸ್ಥಿತಿ ಹೆಚ್ಚಾಗಿದೆ. ನಮ್ಮ ದೇಶದ ಬೌದ್ಧಿಕ ಮೌಲ್ಯವನ್ನು ಹೆಚ್ಚಿಸುವ ಮತ್ತು ಮುಂಬರುವ ಪೀಳಿಗೆ ಯನ್ನು ರೂಪಿಸುವ ಖಾಸಗಿ ಶಾಲಾ ಶಿಕ್ಷಕರ ಸ್ಥಿತಿ ನಾಯಿಪಾಡಾಗು ವುದು ಯಾವುದೇ ಪ್ರಜಾಸತ್ತಾತ್ಮಕ ಸಮಾಜಕ್ಕೆ ಶೋಭೆಯಲ್ಲ.
ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣವನ್ನು ಕೇವಲ ವ್ಯಾಪಾರವನ್ನಾಗಿ ನೋಡದೆ, ಅದರ ಅಡಿಪಾಯ ವಾಗಿರುವ ಶಿಕ್ಷಕರ ಕಲ್ಯಾಣಕ್ಕೂ ಆದ್ಯತೆ ನೀಡಬೇಕಿದೆ. ಶಿಕ್ಷಕನಿಗೆ ಆರ್ಥಿಕ ಭದ್ರತೆ, ಮಾನಸಿಕ ನೆಮ್ಮದಿ ಮತ್ತು ಸಮಾಜದಲ್ಲಿ ಅರ್ಹ ಗೌರವ ಸಿಕ್ಕಾಗ ಮಾತ್ರ ದೇಶದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸಶಕ್ತ ಸಮಾಜದ ನಿರ್ಮಾಣ ಸಾಧ್ಯ. ಪುಸ್ತಕ, ಚಾಕ್ಪೀಸ್ ಹಿಡಿದು ಅಕ್ಷರ ಕಲಿಸುವ ಕೈಯಲ್ಲಿ ಸ್ವಿಗ್ಗಿ ಡೆಲಿವರಿ ಬ್ಯಾಗ್ ಹಿಡಿಸುವಂತಹ ಪರಿಸ್ಥಿತಿ ಬಾರದಿರಲಿ.