ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಅಡುಗೆಮನೆಯಿಂದ ಅಡಿಯಿಟ್ಟ ಅಡೀಡಸ್

‘ADIDAS’ ಹೆಸರು ಕೇಳದವರು ಬಹಳ ಕಡಿಮೆ. ಅದರಲ್ಲೂ ಕ್ರೀಡಾ ವಲಯದಲ್ಲಿ ಇದು ಜನಪ್ರಿಯ ಹೆಸರು. ಮೂಲತಃ ಪಾದರಕ್ಷೆಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಪಟುಗಳಿಗೆ ಬೇಕಾಗುವ ಉಡುಪುಗಳನ್ನೂ, ಕ್ರೀಡಾ ಸಾಮಗ್ರಿಗಳನ್ನೂ ತಯಾರಿಸುವುದಷ್ಟೇ ಅಲ್ಲ, ಅವು ಜನಪ್ರಿಯವೂ ಆಗಿವೆ.

ಅಡುಗೆಮನೆಯಿಂದ ಅಡಿಯಿಟ್ಟ ಅಡೀಡಸ್

ವಿದೇಶವಾಸಿ

dhyapaa@gmail.com

ನಿಮಗೆ ಖುಷಿ ಖರೀದಿಸಲು ಸಾಧ್ಯವಿಲ್ಲದಿದ್ದರೆ ಏನಂತೆ? ಖುಷಿ ಕೊಡುವ ಪಾದರಕ್ಷೆ ಖರೀದಿಸ ಬಹುದಲ್ಲ?’ ಎಂಬ ಮಾತಿದೆ. ನಿಮ್ಮ ಪಾದರಕ್ಷೆಯ ಆಯ್ಕೆ ನಿಮಗೇ ಬಿಟ್ಟಿದ್ದು. ನನ್ನ ಕಳಕಳಿಯ ವಿನಂತಿ ಒಂದೇ, ನೀವು ಧರಿಸುವ ಉಡುಗೆಗೆ ತಕ್ಕಂತೆ ಪಾದರಕ್ಷೆ ಧರಿಸಿ. ಕೋಟು, ಪ್ಯಾಂಟಿನ ಮೇಲೆ ಹವಾಯಿ ಚಪ್ಪಲ್ ತೊಡುವುದಾಗಲಿ, ಶೇರವಾನಿ, ಕುರ್ತಾ ಪೈಜಾಮಾ ಮೇಲೆ ಕ್ಯಾನ್‌ವಾಶ್ ಶೂ ತೊಡುವುದಾಗಲಿ ಮಾಡಬೇಡಿ. ಯಾವುದಕ್ಕೂ ನಿಮ್ಮ ಪಾದರಕ್ಷೆ ನಿಮ್ಮ ಕಾಲನ್ನು ರಕ್ಷಿಸು ವಂತಿರಲಿ, ಮುದ ನೀಡುವಂತಿರಲಿ, ಹಿತವಾಗಿರಲಿ.

‘ADIDAS’ ಹೆಸರು ಕೇಳದವರು ಬಹಳ ಕಡಿಮೆ. ಅದರಲ್ಲೂ ಕ್ರೀಡಾ ವಲಯ ದಲ್ಲಿ ಇದು ಜನಪ್ರಿಯ ಹೆಸರು. ಮೂಲತಃ ಪಾದರಕ್ಷೆಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಪಟುಗಳಿಗೆ ಬೇಕಾಗುವ ಉಡುಪುಗಳನ್ನೂ, ಕ್ರೀಡಾ ಸಾಮಗ್ರಿಗಳನ್ನೂ ತಯಾರಿಸುವುದಷ್ಟೇ ಅಲ್ಲ, ಅವು ಜನಪ್ರಿಯವೂ ಆಗಿವೆ.

ರಷ್ಯಾ, ಉತ್ತರ ಕೊರಿಯಾ, ಅಫ್ಘಾನಿಸ್ತಾನ, ದಕ್ಷಿಣ ಸುಡಾನ್, ಪ್ಯಾಲೆಸ್ತೀನ್, ಟರ್ಕ್‌ಮನಿಸ್ತಾನ್ ಮತ್ತು ಚಾಡ್ ದೇಶಗಳನ್ನು ಹೊರತುಪಡಿಸಿದರೆ, ಇಂದು ವಿಶ್ವದ ಎಲ್ಲ ದೇಶಗಳಲ್ಲೂ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿರುವ ಸಂಸ್ಥೆ ಇದು. ಸುಮಾರು 60000 ಜನರಿಗೆ ಉದ್ಯೋಗಾವಕಾಶವನ್ನೂ ಒದಗಿಸಿದೆ.

ಸುಮಾರು ಒಂದು ವರ್ಷದ ಹಿಂದೆ ಸ್ನೇಹಿತರೊಬ್ಬರ ಜತೆ ಪಾದರಕ್ಷೆಯ ಕುರಿತು ಮಾತಾಡುತ್ತಿರು ವಾಗ ‘ಅದಿದಾಸ್’ ಯಾನೆ ‘ಅಡೀಡಸ್’ ವಿಷಯ ಚರ್ಚೆಗೆ ಬಂತು. ನಿಜವಾಗಿ ಆ ಸಂಸ್ಥೆಯ ಹುಟ್ಟು, ಸಂಘರ್ಷ, ಬೆಳವಣಿಗೆ ಇತ್ಯಾದಿಗಳ ಕುರಿತು ಹೆಚ್ಚಿನ ಚರ್ಚೆಯಾಗಬೇಕಿತ್ತು. ಆದರೆ ಅಡೀಡಸ್ ಎಂಬ ಹೆಸರು ಹೇಗೆ ಬಂತು? ಅದರ ಸರಿಯಾದ ಉಚ್ಚಾರ ಹೇಗೆ? ಅದರ ಸರಿಯಾದ ಲೋಗೋ ಯಾವುದು? ಎನ್ನುವುದರ ಕುರಿತಾಗಿಯೇ ಹೆಚ್ಚು ಚರ್ಚೆಯಾಯಿತು.

ಇದನ್ನೂ ಓದಿ: Kiran Upadhyay Column: ಸುಭಾಷಿತ, ನಮ್ಮಲ್ಲಾಗಲಿ ಅಂತರ್ಗತ

ನನ್ನ ಸ್ನೇಹಿತನ ಪ್ರಕಾರ, ‘ADIDAS’ ಎನ್ನುವುದು ‘All Day I Dream About Sports’ ಎನ್ನುವ ಸಾಲಿನಲ್ಲಿ ಬರುವ ಎಲ್ಲ ಮೊದಲ ಅಕ್ಷರಗಳನ್ನು ಸೇರಿಸಿ ಮಾಡಿದ ಪದ. ಬಹಳ ವರ್ಷಗಳವರೆಗೆ ನಾನೂ ಅದೇ ಸರಿ ಎಂದು ನಂಬಿದ್ದೆ. ಆ ರೀತಿಯ ಒಂದು ಟ್ರೆಂಡ್ ಇದ್ದದ್ದು ಸುಳ್ಳಲ್ಲ. ಆದರೆ ಎಲ್ಲ ವಿಷಯದಲ್ಲೂ ಅದು ಸತ್ಯವೂ ಅಲ್ಲ.

ಇತ್ತೀಚೆಗೆ ‘ NEWS ’ ಎನ್ನುವುದು ‘North-East-West-South’ ನಿಂದ ಬಂದದ್ದು, ನ್ಯೂಸ್ ಅಥವಾ ಸುದ್ದಿ, ಭೂಮಿಯ ನಾಲ್ಕೂ ದಿಕ್ಕಿನ ವಿಷಯವನ್ನು ತಿಳಿಸುತ್ತದೆ, ಅದಕ್ಕಾಗಿ ಈ ಹೆಸರು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದು ಎಷ್ಟು ಹುಸಿಯೋ, ಅಡೀಡಸ್ ಹೆಸರಿನ ಹಿಂದಿನ ತರ್ಕವೂ ಅಷ್ಟೇ ಮಿಥ್ಯ. ಇನ್ನು ಲೋಗೋ ವಿಷಯ. ಅಡೀಡಸ್ ಸಂಸ್ಥೆಯ ಮೂರು ವಿಧದ ಲೋಗೋ ಅಥವಾ ಲಾಂಛನವನ್ನು ನೀವು ನೋಡಿರುತ್ತೀರಿ.

ಮೂರು ದಳದ ಹೂವಿನ ಆಕಾರದ ನಡುವೆ ಮೂರು ಗೆರೆಗಳು, ತ್ರಿಕೋನಾಕಾರದಲ್ಲಿ ಮೂರು ಗೆರೆಗಳು ಮತ್ತು ವೃತ್ತಾಕಾರದ ಮಧ್ಯದಲ್ಲಿ ಮೂರು ಗೆರೆಗಳು. ಈ ಮೂರೂ ಸಂಸ್ಥೆಯ ಅಧಿಕೃತ ಲಾಂಛನಗಳೇ. ಕಾಲಕ್ಕೆ ತಕ್ಕಂತೆ ಅವು ಬದಲಾದವು ಅಷ್ಟೇ. ಹಾಗೆಯೇ ಅದರ ಉಚ್ಚಾರ.

ಮೂಲತಃ ಇದು ಜರ್ಮನ್ ಪದ. ಯಾರು ಮಾಡಿದರೋ, ಹೇಗಾಯಿತೋ ಗೊತ್ತಿಲ್ಲ, ಜರ್ಮನ್ ಭಾಷೆಯ ‘ಅದಿದಾಸ್’ ಕನ್ನಡಕ್ಕೆ ಬರುವಾಗ ‘ಅಡೀಡಸ್’ ಆಗಿತ್ತು. ‘ಅದೋಲ್ ಹಿಟ್ಲ’ (ಹಿಟ್ಲರ್‌ನ ‘ರ್’ ಇಲ್ಲಿ ಗೌಣ) ಕನ್ನಡಕ್ಕೆ ಬರುವಾಗ ‘ಅಡಾಲ್ ಹಿಟ್ಲರ್’ ಆದಂತೆ. ಅದು ಬಿಡಿ, ಅಡೀಡಸ್ ಹೆಸರು ಬಂದದ್ದು ಹೇಗೆ? ಅದನ್ನು ತಿಳಿಯಬೇಕು, ಅದಕ್ಕೂ ಮೊದಲು ಅಡೀಡಸ್‌ನ ಸಂಘರ್ಷಗಾಥೆ ಯನ್ನು ತಿಳಿಯಬೇಕು.

1900ರ ಸೆಪ್ಟೆಂಬರ್‌ನಲ್ಲಿ ಜರ್ಮನಿಯ ಬವೇರಿಯನ್ ಪ್ರಾಂತ್ಯದಲ್ಲಿ ಹುಟ್ಟಿದ ಅದಾಲ್ ದಾಸ್ಲರ್‌ ನನ್ನು ಜನ ‘ಅದಿ’ ಎಂದೂ ಕರೆಯುತ್ತಿದ್ದರು. ತಂದೆ ಪಾದರಕ್ಷೆ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಮನೆ ಕೆಲಸದೊಂದಿಗೆ ಹೊಲಿಗೆ ಕೆಲಸ ಮಾಡಿಕೊಂಡಿದ್ದಳು. ಅದಾಲ್‌ನಿಗೆ ರುದಾಲ್ ಹೆಸರಿನ ಒಬ್ಬ ಸಹೋದರನೂ ಇದ್ದ. ಈತನೇ ಮುಂದೊಂದು ದಿನ ‘ಪೂಮಾ’ ಪಾದರಕ್ಷೆ ತಯಾರಿಸುವ ಸಂಸ್ಥೆಯನ್ನು ಹುಟ್ಟುಹಾಕಿದ.

Screenshot_6 R

ಇದು ಸಹೋದರರೇ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಾದ ಮೊದಲ ಕ್ರೂರಕಥೆ ಎಂದರೂ ತಪ್ಪಲ್ಲ. ಇಬ್ಬರೂ ಪಾದರಕ್ಷೆಯ ಕ್ಷೇತ್ರದಲ್ಲಿ ಹೆಸರು ಮಾಡಿ ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿದರು ಎನ್ನುವುದೊಂದೇ ಸಮಾಧಾನ. ಸಹೋದರರಲ್ಲಿ ಕಿರಿಯವನಾದ ಅದಾಲ್ ಸಣ್ಣ ವಯಸ್ಸಿನಲ್ಲೇ ಜರ್ಮನಿಯ ಸೇನೆಗೆ ಸೇರಿಕೊಂಡಿದ್ದ. ಆಗಷ್ಟೇ ಮೊದಲ ವಿಶ್ವಯುದ್ಧ ಮುಗಿದಿತ್ತು. ಆಗ ಅವನಿನ್ನೂ ಇಪ್ಪತ್ತು ವರ್ಷದ ಯುವಕ.

ಯುದ್ಧದಿಂದ ಹಿಂತಿರುಗಿ ಬಂದ ನಂತರ ಮನೆಯ ಮುಂದೆ ಒಂದು ಸಣ್ಣ ಬೇಕರಿ ಆರಂಭಿಸಬೇಕು ಎಂದು ಯೋಚಿಸಿದ. ಹಣದ ಅಭಾವ ಮತ್ತು ಇತರ ಸಾಮಗ್ರಿಗಳ ಕೊರತೆಯಿಂದ ಅದು ಈಡೇರ ಲಿಲ್ಲ. ಆಗ ಮನೆಯಲ್ಲಿಯೇ ಪಾದರಕ್ಷೆ ತಯಾರಿಸಲು ನಿರ್ಧರಿಸಿದ. ಹೇಗಿದ್ದರೂ ಅಪ್ಪ, ಚಿಕ್ಕಪ್ಪ ಅದೇ ವೃತ್ತಿಯಲ್ಲಿದ್ದರಲ್ಲ, ತಂದೆಯ ಸಹಕಾರ, ಮಾರ್ಗದರ್ಶನವೂ ಅವನಿಗೆ ದೊರಕಿತು. ಆದರೆ ಸಣ್ಣ ಮನೆಯಾದದ್ದರಿಂದ ಪಾದರಕ್ಷೆ ತಯಾರಿಸಲು ಸ್ಥಳವಿರಲಿಲ್ಲ.

ಮೊದಲು ಒಂದಷ್ಟು ದಿನ ಅಮ್ಮನ ಜತೆ ಅಡುಗೆಮನೆಯಲ್ಲಿ ಕುಳಿತು ಅಲ್ಲಿಯೇ ಪಾದರಕ್ಷೆ ತಯಾರಿಸಲು ಆರಂಭಿಸಿದ. ಕೆಲವು ದಿನಗಳ ನಂತರ ಅಮ್ಮ ಅವನಿಗೆ ಬಟ್ಟೆ ತೊಳೆಯುವ ಜಾಗದಲ್ಲಿಯೇ ಒಂದು ಸ್ಥಳ ಮಾಡಿಕೊಟ್ಟಳು. ನಾಲ್ಕು ವರ್ಷವಾಗುವಷ್ಟರಲ್ಲಿ ಅಣ್ಣನೂ ಅವನೊಂದಿಗೆ ಸೇರಿಕೊಂಡ. 1924ರ ವೇಳೆಗೆ ಸಣ್ಣ ಕಟ್ಟಡವೊಂದರಲ್ಲಿ ದಾಸ್ಲರ್ ಬ್ರದರ್ಸ್ ಶೂ ಫ್ಯಾಕ್ಟರಿ ಹೆಸರಿನಲ್ಲಿ, ಕ್ರೀಡಾಪಟುಗಳಿಗೆ ಬೇಕಾಗುವ ಪಾದರಕ್ಷೆ ತಯಾರಿಸಲು ಆರಂಭಿಸಿದರು.

ಸಣ್ಣ ಪುಟ್ಟ ಯಂತ್ರಗಳನ್ನು ತಂದು ಬೂಟು ತಯಾರಿಸಲು ಆರಂಭಿಸಿದ್ದು ಹೌದಾದರೂ ಸಾಕಷ್ಟು ಸಂಘರ್ಷ ಎದುರಿಸಬೇಕಾಯಿತು. ಹೇಳಿ ಕೇಳಿ ಇಪ್ಪತ್ತು ಸಾವಿರದಷ್ಟು ಜನಸಂಖ್ಯೆ ಹೊಂದಿದ್ದ ಊರಿನಲ್ಲಿ ಆಗಾಗ ವಿದ್ಯುತ್ ವ್ಯತ್ಯಯ ಉಂಟಾಗುತ್ತಿತ್ತು. ಆಗ ಸೈಕಲ್‌ನ ಗಾಲಿ ತಿರುಗಿಸಿ, ವಿದ್ಯುತ್ ಉತ್ಪಾದಿಸಿ ಸಹೋದರರು ಕೆಲಸ ಪೂರೈಸುತ್ತಿದ್ದರು.

ಕ್ರೀಡಾಪಟುಗಳಿಗೆ ಅನುಕೂಲವಾಗಲು ಪಾದರಕ್ಷೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಸಹೋದ ರರು ಮಾಡಿದರು. ಮೊದಲೆಲ್ಲ ಬರುತ್ತಿದ್ದ ಬೂಟುಗಳಿಗಿಂತ ಹಗುರವಾಗಿಸಲು ಶ್ರಮಿಸಿದರು. ಓಡುವಾಗ ಜಾರಿ ಬೀಳದೆ ಸಮತೋಲನ ಕಾಯ್ದುಕೊಳ್ಳಲು, ಹಿಡಿತ ಸಾಧಿಸಲು ಅನುಕೂಲವಾಗು ವಂತೆ ಬೂಟಿನ ಕೆಳಭಾಗದಲ್ಲಿ ಲೋಹದ ಮುಳ್ಳಿನ ಬದಲು ರಬ್ಬರ್ ಮುಳ್ಳುಗಳನ್ನು ಜೋಡಿಸಿದರು.

ಏನೇ ಪ್ರಯೋಗ ಮಾಡಿದರೂ, ಸಂಸ್ಥೆ ಆರಂಭವಾಗಿ ಹನ್ನೆರಡು ವರ್ಷವಾದರೂ ಹೇಳಿಕೊಳ್ಳು ವಂಥ ಏಳ್ಗೆ ಕಂಡಿರಲಿಲ್ಲ. 1936ರಲ್ಲಿ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಒಲಿಂಪಿಕ್ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. ಆ ವರ್ಷ ಅದಿದಾಸ್‌ನ ದಿಕ್ಕು ಬದಲಾಯಿತು. ಆ ವರ್ಷ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅಮೆರಿಕದಿಂದ ಬಂದಿದ್ದ ಓಟಗಾರ ಜೆಸ್ಸಿ ಓವೆನ್ಸ್ ನನ್ನು ಭೇಟಿಯಾಗಿ ತಾವು ತಯಾರಿಸಿದ ಬೂಟನ್ನು ಕೊಟ್ಟರು.

ಅದಿದಾಸ್ ಬೂಟು ಧರಿಸಿ ಓಡಿದ ಓವೆನ್ಸ್ ಆ ವರ್ಷ ನಾಲ್ಕು ಚಿನ್ನದ ಪದಕ ಗೆದ್ದಿದ್ದ. ಇದು ಜರ್ಮನಿ ಮತ್ತು ಅಮೆರಿಕದಲ್ಲಿ ದೊಡ್ಡ ಸುದ್ದಿಯಾಯಿತು. ಅಂದಿನಿಂದ ಸಂಸ್ಥೆ ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ಬೂಟುಗಳನ್ನು ಮಾರಾಟ ಮಾಡುವಂತಾಯಿತು. ಅಷ್ಟೇ ಅಲ್ಲ, ಆ ಕಾಲದಲ್ಲಿ ಜರ್ಮನಿಯಲ್ಲಿ ಕ್ರೀಡಾಪಟುಗಳಿಗೆಂದೇ ಪಾದರಕ್ಷೆ ತಯಾರಿಸುವ ಏಕಮಾತ್ರ ಸಂಸ್ಥೆ ಅದಾಗಿತ್ತು.

ಅದಾಗಲೇ ಸಹೋದರರಿಬ್ಬರೂ ಜರ್ಮನಿಯ ನಾಜಿ ಪಕ್ಷವನ್ನು ಸೇರಿಕೊಂಡು, ನಾಜಿ ಯುವಪಡೆ ಯೊಂದಿಗೆ ಕೆಲಸವನ್ನೂ ಮಾಡುತ್ತಿದ್ದರು. ಎರಡನೆಯ ಮಹಾಯುದ್ಧ ಆರಂಭವಾದಾಗ ನಾಜಿ ಪಡೆ ಇವರ ಕಾರ್ಖಾನೆಯಲ್ಲಿ ಬೂಟು ತಯಾರಿಸುವುದನ್ನು ನಿಲ್ಲಿಸಿ ಯುದ್ಧದ ಟ್ಯಾಂಕರ್ ಧ್ವಂಸ ಗೊಳಿಸಲು ಬಳಸುವ ರಾಕೆಟ್ ಲಾಂಚರ್ ತಯಾರಿಸಲು ಆರಂಭಿಸಿತು.

ರುಡಿ ಸೇನೆಗೆ ಬೇಕಾಗುವ ಬೂಟು ತಯಾರಿಸಿಕೊಡುವುದಾಗಿ ಕೇಳಿಕೊಂಡರೂ ನಾಜಿ ಪಡೆ ಒಪ್ಪಲಿಲ್ಲ. ಯುದ್ಧ ಮುಗಿದು ಅಮೆರಿಕದ ಸೇನಾಪಡೆ ಈ ಕ್ಷೇತ್ರವನ್ನು ತನ್ನ ಹದ್ದುಬಸ್ತಿನಲ್ಲಿ ತೆಗೆದುಕೊಂಡ ನಂತರ ಇದು ನಿಂತಿತು. ಆ ಸಂದರ್ಭದಲ್ಲಿ ಕೆಲವು ದಿನ ಇಬ್ಬರೂ ಸಹೋದರರನ್ನು ಅಮೆರಿಕ ವಿಚಾರಣೆಗೆಂದು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡು, ನಂತರ ಬಿಟ್ಟು ಕಳುಹಿಸಿತ್ತು.

ಈ ನಡುವೆ ಸಹೋದರರ ನಡುವೆ ಯಾವುದೋ ಕಾರಣಕ್ಕೆ ಘೋರ ಮನಸ್ತಾಪ ಉಂಟಾಯಿತು. ಪರಿಣಾಮವಾಗಿ 1947ರಲ್ಲಿ ಅದಿ, ತನ್ನ ಹೆಸರಿನ ‘ಅದಿ’ಯ ಜತೆಗೆ ಪರಿವಾರದ ಹೆಸರು ‘ದಾಸ್ಲರ್’ನ ‘ದಾಸ್’ ಸೇರಿಸಿ ‘ಅದಿದಾಸ್’ ಎಂಬ ಹೆಸರಿನ ಸಂಸ್ಥೆ ಆರಂಭಿಸಿದ.

‘ಅದಿದಾಸ್’ ಹೆಸರು ಬಂದದ್ದು ಹಾಗೆ, ಹೊರತು ‘ಆಲ್ ಡೇ ಐ ಡ್ರೀಮ್ ಅಬೌಟ್ ಸ್ಪೋರ್ಟ್ಸ್’ ಎಂದಲ್ಲ. ಇನ್ನೊಬ್ಬ ಸಹೋದರ ರುಡಿ ಕೂಡ ‘ರುದಾ’ ಹೆಸರಿನ ಸಂಸ್ಥೆ ಸ್ಥಾಪಿಸಿದ. ಮುಂದೆ ಇದಕ್ಕೆ ‘ಪ್ಯೂಮಾ’ ಎಂದು ಮರುನಾಮಕರಣ ಮಾಡಿದ.

ಸಹೋದರರ ನಡುವಿನ ಭಿನ್ನಾಭಿಪ್ರಾಯಕ್ಕೆ ನಿಜಕಾರಣ ಏನು ಎಂಬುದು ಇಂದಿಗೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಅವರ ನಡುವೆ ವೈರತ್ವ ಎಷ್ಟರ ಮಟ್ಟಿಗೆ ಇತ್ತು ಎಂದರೆ, ಊರಿನಲ್ಲಿ ಎರಡು ಪಂಗಡಗಳೇ ಆದವು. ಒಂದು ಅದಿದಾಸ್ ಅಭಿಮಾನಿಯಾದರೆ ಇನ್ನೊಂದು ಪಂಗಡ ಪ್ಯೂಮಾವನ್ನು ಬೆಂಬಲಿಸುತ್ತಿತ್ತು. ಊರಿನಲ್ಲಿದ್ದ ಎರಡು ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದು ಅದಿದಾಸ್ ಬಳಸಿದರೆ ಇನ್ನೊಂದು ಪ್ಯೂಮಾ ಬಳಸುತ್ತಿತ್ತು.

ತಮ್ಮ ಬಳಿ ಬಂದವರು ಅದಿದಾಸ್ ಬೂಟು ತೊಟ್ಟಿದ್ದು ಕಂಡರೆ ರುದಾಲ್, ಪ್ಯೂಮಾ ಬೂಟನ್ನು ಪುಕ್ಕಟೆಯಾಗಿ ಅವರಿಗೆ ಕೊಟ್ಟು ಕಳಿಸುತ್ತಿದ್ದ. ಕೆಲವು ಆಟಗಾರರು ಪ್ಯೂಮಾ ಅಂಗಡಿಗೆ ಹೋಗು ವಾಗ ಅಥವಾ ರುದಿಯನ್ನು ಭೇಟಿಯಾಗಲು ಹೋಗುವಾಗ ಬೇಕೆಂದೇ ಅದಿದಾಸ್ ಬೂಟು ಧರಿಸಿ ಹೋಗುತ್ತಿದ್ದರಂತೆ! ಸಾಲದು ಎಂಬಂತೆ ಕೊನೆಯಲ್ಲಿ ಮರಣದ ನಂತರವೂ ಅವರ ಸಮಾಧಿ ಯನ್ನು ಒಂದೇ ಸ್ಮಶಾನದಲ್ಲಿ ಮಾಡಿದರೂ ಸಾಕಷ್ಟು ದೂರ ದೂರದಲ್ಲಿ ಮಾಡಿದರಂತೆ.

ಅವರ ಮರಣಾನಂತರ ಸಂಸ್ಥೆಯಲ್ಲಿ ನಡೆದದ್ದೆಲ್ಲ ಪಕ್ಕಾ ವ್ಯವಹಾರದ ವಿಷಯ. ಇಂದು ಅದಿದಾಸ್ ನೊಂದಿಗೆ ಪ್ಯೂಮಾ ಕೂಡ ವಿಶ್ವದಾದ್ಯಂತ ಸಾಕಷ್ಟು ಹೆಸರು ಮಾಡಿದ ಸಂಸ್ಥೆ. ಆದರೆ ಈ ಎರಡೂ ದಿಗ್ಗಜ ಸಂಸ್ಥೆಗಳು ಒಂದೇ ಕುಟುಂಬದಿಂದ ಬಂದಂಥವು. ಒಂದೇ ಮನೆಯಲ್ಲಿ ಹುಟ್ಟಿಕೊಂಡ ಸಂಸ್ಥೆಗಳು. ಆದರೂ ಒಂದಕ್ಕೊಂದು ಟಕ್ಕರ್ ಕೊಟ್ಟಿಕೊಂಡೇ ಬೆಳೆದು ನಿಂತವು.

ನಂತರದ ದಿನಗಳಲ್ಲಿ ಅದಿದಾಸ್‌ಗೆ ಪ್ಯೂಮಾ ಒಂದೇ ಅಲ್ಲ, ರೀಬಾಕ್ ಸಂಸ್ಥೆಯೊಂದಿಗೂ ಸಾಕಷ್ಟು ಪೈಪೋಟಿ ನಡೆಸಬೇಕಾಯಿತು. ಬೇರೆ ಬೇರೆ ಸಂಸ್ಥೆಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದರಿಂದ ಅದಿದಾಸ್ ಸಾಕಷ್ಟು ನಷ್ಟವನ್ನೂ ಅನುಭವಿಸಬೇಕಾಯಿತು. ಆದರೂ ಇಂದು ಅದಿದಾಸ್ ಯಾನೆ ಅಡೀಡಸ್ ಸಂಸ್ಥೆ 21 ಬಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚಿನ ಆದಾಯ ಹೊಂದಿದ್ದು, 16 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದೆ.

ಪ್ರತಿವರ್ಷ ಹೆಚ್ಚು ಕಮ್ಮಿ ಎರಡು ಬಿಲಿಯನ್ ಡಾಲರ್ ನಿವ್ವಳ ಲಾಭ ಮಾಡುತ್ತಿದೆ. ಅಮ್ಮನ ಅಡುಗೆಮನೆಯಲ್ಲಿ ಆರಂಭವಾದ ಅದಿದಾಸ್ ಸಂಸ್ಥೆ ಇಂದು ಈ ಮಟ್ಟಿಗೆ ಬೆಳೆದು ನಿಂತಿದೆ ಎಂದರೆ ಸಾಮಾನ್ಯ ಸಂಗತಿಯಲ್ಲದಿದ್ದರೂ ಸತ್ಯವಂತೂ ಹೌದು.