ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಎಐ ಅಕ್ಷಹೃದಯ, ಕಾದಂಬರಿ ಅಶ್ವಹೃದಯ !

ಇಂಗ್ಲೆಂಡ್‌ನಲ್ಲಿ ಅದಾಗಲೇ ಕೃತಿ ಪ್ರಕಟವಾಗಿ ಸಾವಿರಾರು ಪ್ರತಿಗಳು ಮಾರಾಟವಾಗಿದ್ದವು. ಮಾರುಕಟ್ಟೆಯಲ್ಲಿದ್ದ ಎಲ್ಲ ಪ್ರತಿಗಳನ್ನು ಹ್ಯಾಚೆಟ್ ವಾಪಸ್ ತೆಗೆದುಕೊಂಡಿತು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಾದಂಬರಿಗಾರ್ತಿಯನ್ನು ಕೇಳಿದಾಗ, ‘ನಾನು ಎಐ ಬಳಸಿಲ್ಲ. ವೃಥಾ ರೋಪದಿಂದ ನೊಂದಿದ್ದೇನೆ. ನನ್ನ ಮಾನ ಮೂರಾಬಟ್ಟೆಯಾಗಿದೆ.

Harish Kera Column: ಎಐ ಅಕ್ಷಹೃದಯ, ಕಾದಂಬರಿ ಅಶ್ವಹೃದಯ !

-

ಹರೀಶ್‌ ಕೇರ
ಹರೀಶ್‌ ಕೇರ Apr 2, 2026 8:46 AM

ಕಾಡುದಾರಿ

ಇಂಗ್ಲಿಷ್ ಪುಸ್ತಕ ಪ್ರಕಾಶನ ಕ್ಷೇತ್ರ ತತ್ತರಿಸಿ ಹೋಗುವಂತೆ ಮಾಡಿದ ಹಗರಣವೊಂದು ಈ ವಾರ ಘಟಿಸಿದೆ. ಮಿಯಾ ಬಲಾರ್ಡ್ ಎಂಬ ಲೇಖಕಿ ಬರೆದ ‘ಶೈ ಗರ್ಲ್’ ಎಂಬ ಹೆಸರಿನ ಫೆಮಿನಿಸ್ಟ್ ಹಾರರ್ ಕಾದಂಬರಿ ಬಹುತೇಕ ಎಐ ಬಳಸಿ ರಚಿಸಿದ್ದು ಎಂದು ರುಜುವಾತಾ ಗಿದೆ. ಈ ಬಗ್ಗೆ ಒಂದು ತಿಂಗಳಿನಿಂದ ಗುಡ್ ರೀಡ್ಸ್ ಮೊದಲಾದ ಪುಸ್ತಕ ತಾಣಗಳಲ್ಲಿ ವಾದ ವಿವಾದ ನಡೆದಿದ್ದವು.

ಕಾದಂಬರಿಯನ್ನು ಕೆಲವರು ಪತ್ತೇದಾರಿಕೆಗೆ ಒಳಪಡಿಸಿ, ಇದರ ಶೇ.78 ಭಾಗದಲ್ಲಿ ಎಐ ಕೈವಾಡ ಇದೆ ಎಂದು ಕಂಡುಕೊಂಡರು. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಈ ಬಗ್ಗೆ ವಿವರವಾದ ಲೇಖನ ಪ್ರಕಟವಾಯಿತು. ಇದಾದ ಕೂಡಲೇ ಗಾಬರಿ ಬಿದ್ದ ಪ್ರಕಾಶಕರು (ಹ್ಯಾಚೆಟ್ ಬುಕ್ ಗ್ರೂಪ್) ಅಮೆರಿಕದಲ್ಲಿ ಪ್ರಕಟವಾಗಬೇಕಿದ್ದ ಎಡಿಷನ್ ರದ್ದುಪಡಿಸಿದರು.

ಇಂಗ್ಲೆಂಡ್‌ನಲ್ಲಿ ಅದಾಗಲೇ ಕೃತಿ ಪ್ರಕಟವಾಗಿ ಸಾವಿರಾರು ಪ್ರತಿಗಳು ಮಾರಾಟವಾಗಿದ್ದವು. ಮಾರುಕಟ್ಟೆಯಲ್ಲಿದ್ದ ಎಲ್ಲ ಪ್ರತಿಗಳನ್ನು ಹ್ಯಾಚೆಟ್ ವಾಪಸ್ ತೆಗೆದುಕೊಂಡಿತು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಾದಂಬರಿಗಾರ್ತಿಯನ್ನು ಕೇಳಿದಾಗ, ‘ನಾನು ಎಐ ಬಳಸಿಲ್ಲ. ವೃಥಾರೋಪದಿಂದ ನೊಂದಿದ್ದೇನೆ. ನನ್ನ ಮಾನ ಮೂರಾಬಟ್ಟೆಯಾಗಿದೆ. ಖಿನ್ನತೆ ಉಂಟಾಗಿದೆ. ಕೇಸ್ ಹಾಕುತ್ತೇನೆ’ ಎಂದಿದ್ದಾಳೆ. ಆದರೆ ‘ನಾನು ಈ ಕೃತಿಯನ್ನು ಎಡಿಟ್ ಮಾಡಲು ಎಡಿಟರ್‌ಗೆ ಕೊಟ್ಟಿದ್ದೆ. ಅವರು ಎಐ ಬಳಸಿದ್ದಾರೋ ಗೊತ್ತಿಲ್ಲ’ ಎಂದಿದ್ದಾಳೆ.

ಒಂದು ವೇಳೆ ಆಕೆ ನಿಜಕ್ಕೂ ಅಮಾಯಕಿ ಆಗಿದ್ದರೆ, ಆರೋಪದಿಂದ ಆಕೆಗಾಗುತ್ತಿರುವ ನಷ್ಟ ಅನ್ಯಾಯದ್ದು. ನಿಜಕ್ಕೂ ಆಕೆ ಎಐ ಬಳಸಿದ್ದಾಳೋ ಇಲ್ಲವೋ ಎಂಬುದನ್ನು ನಿಖರ ವಾಗಿ ಹೇಳುವ ಯಾವ ಸಾಧ್ಯತೆಯೂ ಇದುವರೆಗೆ ಇಲ್ಲ. ಎಐ ಡಿಟೆಕ್ಷನ್ ಟೂಲ್‌ಗಳಿವೆ, ಅವು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಆಮೇಲೆ ನೋಡೋಣ.

ಇದನ್ನೂ ಓದಿ: Harish Kera Column: ನಮ್ಮ ವಿರುದ್ಧ ನಾವೇ ಸಾರಿದ ಯುದ್ಧ !

ಅನುವಾದಕ್ಕೆ ಎಐ ಬಳಸುವುದು ಇಂದು ಸಾಮಾನ್ಯ. ಈಗಾಗಲೇ ಕನ್ನಡದಲ್ಲಿ ಎಐ ಬಳಸಿ ಇಂಗ್ಲಿಷ್‌ನಿಂದ ಅನುವಾದಿಸಿದ ‘ನಾನು ಗೌಹರ್ ’ಎಂಬ ಕೃತಿ ಬಂದಿದೆ. ವಿಕ್ರಮ್ ಸಂಪತ್ ಅವರ ಇಂಗ್ಲಿಷ್ ಕೃತಿಯನ್ನು ಅವರದೇ ಎಐ ಟೂಲ್ ಬಳಿ ಕನ್ನಡಕ್ಕಿಳಿಸಿದ್ದಾರೆ.

ಹಾಗಿರುವಾಗ ಕೃತಿ ರಚನೆಗೆ ಬಳಸಿದರೆ ಏನು ತಪ್ಪು ಎಂದು ಕೆಲವರು ಕೇಳಬಹುದು. ಇದು ಹಲವು ನೈತಿಕ ಇಕ್ಕಟ್ಟು ಬಿಕ್ಕಟ್ಟುಗಳಿಗೆ ಕಾರಣವಾಗುವ ಸಂಗತಿ. ಲೇಖಕ- ಓದುಗನ ಸಂಬಂಧ ಒಂದು ಬಗೆಯಲ್ಲಿ ದಿವ್ಯವಾದ್ದು, ಇನ್ನೊಂದು ನೆಲೆಯಲ್ಲಿ ಒಂದು ಒಪ್ಪಂದ ಕೂಡ. ಇಲ್ಲಿ ಲೇಖಕನಿಗೆ ತಾನು ಕೊಡುವ ಸಮಯದ ಬದಲಿಗೆ ಓದಿನ ಸುಖದ ಒಪ್ಪಂದ ಮಾಡಿಕೊಂಡಿರುತ್ತಾನೆ ಓದುಗ. ಅಲ್ಲಿ ವಂಚನೆ ಶಿಕ್ಷೆಗೆ ಅರ್ಹ.

ನಾವು ಸಾಹಿತ್ಯವನ್ನು, ಅದರಲ್ಲೂ ಫಿಕ್ಷನ್ ಅನ್ನು ಓದುವುದು ಯಾಕೆ ಎಂಬ ಮೂಲ ಭೂತ ಪ್ರಶ್ನೆಯ ಆ ಪ್ರಶ್ನೆಗೂ ಉತ್ತರವಿದೆ. ಮನುಷ್ಯನ ಸೃಜನಶೀಲತೆ ಹೊಂದಬಹುದಾದ ಆಯಾಮಗಳನ್ನು ಯಾರೂ ಊಹಿಸಲಾರರು. ಸಾಹಿತ್ಯಕ್ಕೆ ಒಬ್ಬನೇ ದಾಸ್ತೋವಸ್ಕಿ, ಒಬ್ಬರೇ ಕುವೆಂಪು, ಅಕ್ಕಮಹಾದೇವಿ, ಮತ್ತೊಬ್ಬನೇ ಶೇಕ್ಸ್‌ಪಿಯರ್.

ಎಐಗೆ ಇವರ ಕೃತಿಗಳನ್ನು ಫೀಡ್ ಮಾಡಬಹುದು; ಅವರದೇ ಥರದ ಗದ್ಯ ಶೈಲಿಯನ್ನು ಹೊಂದಿರುವ ಕೃತಿಯನ್ನು ಹೇಗೋ ರೂಪಿಸಬಹುದು. ಆದರೆ ಇವರು ಹೊಂದಿದ್ದ ಆಳವಾದ ದರ್ಶನ, ಮನುಷ್ಯನಿಗೆ ಎದುರಾಗಬಹುದಾದ ಕ್ಲಿಷ್ಟ ನೈತಿಕ ಸಂದರ್ಭಗಳನ್ನು ಕಾಣಬಲ್ಲ ಕಾಣ್ಕೆ, ಸುಖ ಹಾಗೂ ಯಾತನೆಯಲ್ಲಿ ಮನುಷ್ಯರು ಒಂದಾಗಬಹುದಾದ ಅಥವಾ ಒಂಟಿಯಾಗಬಹುದಾದ ಸಾಧ್ಯತೆ- ಇವೆ ಸದ್ಯಕ್ಕಂತೂ ಮನುಷ್ಯನಿಗೇ ಮೀಸಲು.

ಟಾಲ್ʼಸ್ಟಾಯ್ ಮತ್ತೆ ಬರಲಾರ, ಆದರೆ ಅಷ್ಟೇ ಪ್ರತಿಭೆಯ ಇನ್ನೊಬ್ಬ ಲೇಖಕ ಮತ್ತೆ ಮೂಡಲಾರ ಎಂದೇನಿಲ್ಲ. ನಾವು ಓದುವುದು ಇಂಥ ಲೇಖಕರು ನಮಗೆ ಕೊಡುವ ಜೀವಂತ ಅನುಭವಕ್ಕಾಗಿ. ಅವರೂ ನಮ್ಮಂತೆಯೇ ಇzರೆ, ನಮ್ಮ ಹಾಗೇ ಬದುಕಿ ಒದ್ದಾಡಿದ್ದಾರೆ, ನಮ್ಮ ಹಾಗೇ ಓದಲು ಬರೆಯಲು ಕಷ್ಟಪಟ್ಟಿದ್ದಾರೆ.

Screenshot_3 ok

ಅವೆಲ್ಲವೂ ಅವರ ಕೃತಿಗಳಲ್ಲಿ ಮೂಡಿ ಬಂದು ನಾವು ಓದುವಾಗ ನಮ್ಮೊಳಗೆ ಬೆಳೆಯು ತ್ತದೆ. ಜೀವನದ ಕಾತರ ವ್ಯಾಮೋಹ ನೋವು ಒಳನೋಟಗಳನ್ನು ನನ್ನ ಸಹಜೀವಿಯೊಬ್ಬ/ಳು ದಾಖಲಿಸಿದಾಗ ಅದು ಮನುಷ್ಯಲೋಕದ ಜಂಜಾಟ ಆಗಿರುತ್ತದೆ. ಅದನ್ನು ಓದುತ್ತ ಆಕೆಯ ಮಿಡಿತಗಳು ನನ್ನದಾಗುತ್ತವೆ ಅಥವಾ ನನ್ನೊಳಗೆ ಮಳೆಗಾಗಿ ಕಾದ ಬೀಜದಂತೆ ಕೂತಿದ್ದ ಭಾವಗಳು ಮೇಲೇಳುತ್ತವೆ.

ಲೇಖಕಿಯ ಈ ವೈಯಕ್ತಿಕ ಪ್ರತಿಭೆ, ಸೃಷ್ಟಿಶೀಲತೆಯೇ ಓದುಗನ ಸುಖದ ಸೆಲೆ. ಕತೆಗಾರ ಜೀನಿಯಸ್ ಆದಷ್ಟೂ ಓದುಗನ ಸುಖ ಅಷ್ಟು ಪಟ್ಟು ಹಿಗ್ಗುತ್ತದೆ. ಕೃತಿಯನ್ನು ಓದು, ಕೃತಿಕಾರನನ್ನಲ್ಲ ಎಂಬುದು ಒಂದು ಆದರ್ಶವಾದರೂ ಈ ಆದರ್ಶ ಬಹಳ ಸಲ ಕೆಲಸಕ್ಕೆ ಬರುವುದಿಲ್ಲ. ಪೂರ್ಣಚಂದ್ರ ತೇಜಸ್ವಿ ಅವರ ವಿಶಿಷ್ಟ ವ್ಯಕ್ತಿತ್ವದ ಪ್ರಭಾವಳಿ ಇಲ್ಲದೆ ಅವರ ಕೃತಿಗಳನ್ನು ಓದುವುದಾದರೂ ಹೇಗೆ? ಸಿದ್ದಲಿಂಗಯ್ಯ ಅವರ ಕವನಗಳು ಅವರ ಭೂತಕಾಲದ ನೋವಿನ ದಿನಗಳ ಹಿನ್ನೆಲೆಯಿಲ್ಲದೆ ಅರ್ಥ ಆಗುವುದು ಕಷ್ಟ.

ಕಮಲಾ ಸುರಯ್ಯಾ ಅವರ ಕತೆಗಳ ಆಳದಲ್ಲಿ ಅವರ ಸುಡುಬದುಕಿನ ಮುಕ್ತಛಂದದ ಹಿನ್ನೆಲೆ ಜೀವಧಾತುವಾಗಿದೆ. ಹೀಗಾಗಿ ಒಂದು ಕೃತಿಯನ್ನು ಓದುವುದೆಂದರೆ ಆ ಕೃತಿಕಾರ ನನ್ನೂ ಸೇರಿಸಿಕೊಂಡೇ ಓದು ಬೆಳೆಯುತ್ತದೆ. ಮನುಷ್ಯ ನೀಡುವ ಜೀವಂತ ಓದು ಎಐ ರಚಿತ ಕೃತಿಗಳಲ್ಲಿ ಇದುವರೆಗೆ ಕಂಡಿಲ್ಲ.

ಮನುಷ್ಯ ಬರೆದ ಕೃತಿಯಿಂದ ಎಐ ರಚಿತ ಪುಸ್ತಕವನ್ನು ಪ್ರತ್ಯೇಕಿಸಬಹುದಾದ ಪ್ರಮುಖ ವ್ಯತ್ಯಾಸ ಇದೇ. ಸದ್ಯ ಕೆಲವು ಎಐ ಡಿಟೆಕ್ಷನ್ ಟೂಲ್‌ಗಳು ಒಂದು ಮಟ್ಟಿಗೆ ಈ ಕೆಲಸ ಮಾಡುತ್ತವೆ. ಮನುಷ್ಯ ಅನೂಹ್ಯವಾಗಿರಬಲ್ಲ. ಅವಳ ಬರಹಗಳು ಎಲ್ಲಿಂದ ಎಲ್ಲಿಗೋ ಕೊಂಡಿ ಹಾಕಬಲ್ಲವು. ಸ್ಥಳೀಯ ಸಂಸ್ಕೃತಿಗಳಿಂದ ಹುಟ್ಟಿದ ಜೀವನಶೈಲಿ, ಭಾಷಾಶೈಲಿ ಯನ್ನು ಎಐ ಅನುಕರಿಸಲಾರದು.

‘ಅಮಾಸ ಎಂಬುದು ಅಮಾಸನ ಹೆಸರು’ (ಅಮಾಸ- ದೇವನೂರು) ಎಂಬಂಥ ವಾಕ್ಯ ಗಳನ್ನು ಅದು ಬರೆಯಲಾರದು. ‘ಮಲೆಘಟ್ಟ ಪಾತಾಳ ಕೆಳಪಟ್ಟಿಯಲಿ ಉರುಳು ಮೂರೇ ಉರುಳು ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ’ ಎಂಬಂಥ ಸಾಲು (ಗೋಪಾಲಕೃಷ್ಣ ಅಡಿಗ) ಎಐ ಜಪ್ಪಯ್ಯ ಎಂದರೂ ಕಟ್ಟಲಾರದು. ಪ್ರೆಡಿಕ್ಟಬಿಲಿಟಿ ಅಥವಾ ನಿರೀಕ್ಷಿತ ಶೈಲಿ ಎಂಬುದು ಎಐಯ ಶಕ್ತಿ ಮತ್ತು ಮಿತಿ.

ಎಐ ಬರೆದ ಸಾಲುಗಳಲ್ಲಿ ಭಾವನೆಗಳು ಚಪ್ಪಟೆಯಾಗಿರುತ್ತವೆ. ಮೂರುಸಂಜೆಯಲ್ಲಿ ಮಬ್ಬುಗತ್ತಲೆ ಕವಿಯುತ್ತಿರುವಾಗ ಅಮ್ಮನ ನೆನಪಿನಿಂದ ತುಂಬಿ ಬರುತ್ತಿದ್ದ ಕಣ್ಣುಗಳಿಂದ ಕಂಡದ್ದು: ಪ್ರತಿ ಕ್ಷಣ ಇಟ್ಟ ಹೆಜ್ಜೆಯನ್ನು ಹಿಂತೆಗೆದುಕೊಳ್ಳುವುದು ಶಕ್ಯವಿಲ್ಲದ ರೀತಿಯ ಬಾಳಿನ ಹಾದಿಯನ್ನು ಸವಿಯುತ್ತೇವೆ (ಶಿಕಾರಿ- ಯಶವಂತ ಚಿತ್ತಾಲ) ಎಂಬಂತ ಹಲವು ಅರ್ಥಗಳು, ನೆನಪುಗಳು, ಜೀವಂತಿಕೆ- ತಲ್ಲಣ ತುಂಬಿದ ಸಾಲುಗಳನ್ನು ಬರೆಯುವುದು ಇದುವರೆಗೆ ಎಐಗೆ ಸಾಧ್ಯವಾಗಿಲ್ಲ.

ಕೆಲವೊಮ್ಮೆ ಇಂಥ ಶೈಲಿಯನ್ನು ಫೀಡ್ ಮಾಡಿದರೆ, ಈ ಸಾಲಿನಂಥ ಜಟಿಲ ಸಾಲನ್ನು ಬರೆದು ತೋರಿಸಬಹುದಾದರೂ, ಅದು ಮನುಷ್ಯರ ಅನುಭವ ಹೊಂದಿದ ಅಳವಾದ ಅರ್ಥವಂತಿಕೆ ಹೊಮ್ಮಿಸುವ ಸಾಧ್ಯತೆ ಶೂನ್ಯ.

ನಾವೇಕೆ ಬರೆಯುತ್ತೇವೆ? ನಾವೇಕೆ ಓದುತ್ತೇವೆ? ಯಾಕೆ ನಾವು ನರ್ತಿಸುತ್ತೇವೋ, ಯಾಕೆ ಹಾಡುತ್ತೇವೋ, ಅದೇ ಕಾರಣದಿಂದ. ಬರೆಯುವುದರ ಮೂಲಕ ನಾವು ಹಗುರಾಗಲು, ಖುಷಿಯಾಗಲು, ಇನ್ನೊಬ್ಬನೊಂದಿಗೆ ಕನೆಕ್ಟ್ ಆಗಲು ಬಯಸುತ್ತೇವೆ. ಅದು ಬರಹದ ಆಳವಾದ ಅರ್ಥವಂತಿಕೆ. ಹೀಗೆ ಕನೆಕ್ಟ್ ಆಗದ ಸಾಲುಗಳು ಎಷ್ಟು ಬಂದರೂ ಪರಿಣಾಮ ರಹಿತ. ಮನುಷ್ಯ ಬರೆದ ಕಾವ್ಯ ಅಥವಾ ಕತೆ ದೋಷಪೂರಿತ ಇರಲೂ ಸಾಧ್ಯವಿದೆ.

ಅಲ್ಲಿರುವ ಶೈಲಿ, ವಾಸ್ತವಿಕ ವಿವರಗಳಲ್ಲೂ ದೋಷ ಇರಬಹುದು. ಎಐ ಬರೆದ ಗದ್ಯದಲ್ಲಿ ಒಂದು ದೋಷವೂ ಇರಲಿಕ್ಕಿಲ್ಲ. ಇದೇ ಅದರ ಮಿತಿಯೂ ಹೌದು. ಎಐ ಸಾಲುಗಳು ಸ್ಪಷ್ಟ ವಾಗಿದ್ದರೂ ಪುನರಾವರ್ತನೆ ಮತ್ತು ಕ್ಲೀಷೆಗಳಿಂದ ಕೂಡಿರುತ್ತವೆ. ವಾಕ್ಯಗಳು ವ್ಯಾಕರಣ ಬದ್ಧವಾಗಿದ್ದರೂ ಅಲ್ಲಿರುವ ಎಮೋಷನ್ ಚಪ್ಪಟೆ. ಒಂದು ಪದದ ನಂತರ ಯಾವ ಇನ್ನೊಂದು ಪದ ಬರಲಿದೆ ಎಂಬುದನ್ನು ಊಹಿಸಬಹುದು.

ಲಂಕೇಶರ ಟೀಕೆ ಟಿಪ್ಪಣಿಯಲ್ಲಿ, ಕಂಬಾರರ ಕಾವ್ಯದಲ್ಲಿ ಹೀಗೆ ಪದಗಳನ್ನು ಊಹಿಸಲು ಸಾಧ್ಯವೆ? ಒಂದಂತೂ ನಿಜ. ಇಂಗ್ಲಿಷ್‌ನಂತೆಯೇ ಕನ್ನಡದಲ್ಲೂ ಎಐ ರಚಿತ ಕೃತಿಗಳು ಇನ್ನು ಮುಂದೆ ದಂಡಿಯಾಗಿ ಕಾಣಿಸಿಕೊಳ್ಳಲಿವೆ. ಅಂಥ ಪುಷ್ಕಳತೆಯೇ ಅವುಗಳಿಗೆ ಶಾಪವೂ ಹೌದು. ಅವು ಪ್ಲಾಸ್ಟಿಕ್ ಹೂಗಳಂತೆ ಒಂದರ ಥರವೇ ಇನ್ನೊಂದು ಇರುವ ಸಾಧ್ಯತೆ ಹೆಚ್ಚು. ಆದರೆ ಇವುಗಳನ್ನು ಪತ್ತೆಹಚ್ಚುವ ರೀತಿಯನ್ನಂತೂ ಕನ್ನಡ ಪ್ರಕಾಶಕರು ಕಂಡುಕೊಳ್ಳುವುದು ಅನಿವಾರ್ಯ.

ಈ ಪತ್ತೇದಾರಿ ಮಾದರಿಗಳನ್ನೂ ದಾಟಿ ವಂಚಿಸುವ ಗದ್ಯಗಳನ್ನೂ ತಯಾರಿಸಬಹುದು. ಎಐಗೆ ಕೆಲವು ಮೂಲ ಮಾದರಿ ನೀಡಿ, ಪ್ಲಾಟ್ ಟ್ವಿಸ್ಟ್‌ಗಳನ್ನು ನೀಡುವ ಹೊಣೆ ವಹಿಸಿ, ಐಡಿಯಾಗಳನ್ನು ಅದರಿಂದ ಸೃಜಿಸಿ, ಹೀಗೆ ಮಾಡಿ ಕಾದಂಬರಿ ಬರೆಯುವ ಸಾಧ್ಯತೆಗಳು ಎಷ್ಟೂ ಇವೆ. ಇದನ್ನು ಮಾತ್ರ ಪಳಗಿದ, ಸಾಕಷ್ಟು ಕನ್ನಡ- ಇಂಗ್ಲಿಷ್ ಸಾಹಿತ್ಯ ಓದಿದ ಕಣ್ಣುಗಳು ಮಾತ್ರ ಗ್ರಹಿಸಬಲ್ಲವು.

ನಾನ್- ಫಿಕ್ಷನ್, ಮಾಹಿತಿಪೂರ್ಣ ಪುಸ್ತಕಗಳು ಇಂದು ಎಐ ನೆರವಿಲ್ಲದೇ ಹೊರಬರುತ್ತಿಲ್ಲ. ಇವುಗಳ ಬಗ್ಗೆ ಅಷ್ಟು ಗಾಬರಿಪಡಬೇಕಿಲ್ಲ. ಅನುವಾದದಲ್ಲೂ ಗೂಗಲ್ ಕೃಪೆ ಇರುತ್ತಿತ್ತು. ಎಐ ಮತ್ತು ಗೂಗಲ್ ಟ್ರಾನ್ಸ್‌ಲೇಟ್‌ಗಿಂತಲೂ ಕೆಟ್ಟದಾಗಿ ಬರೆಯುವವರೂ ನಮ್ಮ ನಡುವೆ ಇದ್ದಾರೆ.

ಕಳಪೆ ಲೇಖಕರು ಎಐ ಸಹಾಯ ಪಡೆದರೆ ಗಾಬರಿಪಡಬೇಕಿಲ್ಲ, ಚಿಟಿಕೆ ಹೊಡೆಯುವು ದರಲ್ಲಿ ಪತ್ತೆ ಹಚ್ಚಬಹುದು. ಬ್ರಿಲಿಯಂಟ್ ಲೇಖಕರು ಎಐ ಸಹಾಯ ಪಡೆದರೆ ಅಷ್ಟು ಸುಲಭದಲ್ಲಿ ಕಂಡುಹಿಡಿಯಲಾಗದು. ಕನ್ನಡದ ಸೃಜನಶೀಲ ಸಾಹಿತ್ಯ ಇದುವರೆಗೂ ಕೆಟ್ಟ ಗದ್ಯ ಮತ್ತು ಸ್ಕ್ರೀನ್ ಬೆದರಿಕೆ ಎದುರಿಸುತ್ತಿತ್ತು.

ಇನ್ನೀಗ ಎಐ ಬೆದರಿಕೆಯನ್ನೂ ಎದುರಿಸಬೇಕಾಗಿದೆ. ಆದರೆ ಮನುಷ್ಯ ಚೈತನ್ಯದ ಸಾಧ್ಯತೆ ಅಪಾರ. ಅದು ಬಂಡೆಯನ್ನು ಒಡೆದು ಮೊಳಕೆಯೊಡೆಯುವ ಬೀಜದಂತೆ ಮರುಹುಟ್ಟು ಪಡೆಯಬಲ್ಲುದು. ಮನುಷ್ಯ ಬರಹ ಕಂಡುಹಿಡಿಯುವ ಮೊದಲೂ ಮೌಖಿಕವಾಗಿ ಕಾವ್ಯ ಇತ್ತು. ಬರಹ, ಮೌಖಿಕ ಕಾವ್ಯದ ಶೈಲಿಯನ್ನು ಮೀರಿ ಬೆಳೆದು, ಮುದ್ರಣದಲ್ಲಿ ಕಾಣಿಸಿ ಕೊಳ್ಳಬೇಕಾಯಿತು. ಈಗ ಮುದ್ರಣವನ್ನು ಎಐ ಬರಹ ಆವರಿಸಿಕೊಳ್ಳತೊಡಗಿದರೆ, ಬರಹಗಾರ ಅದಕ್ಕಿಂತ ಮುಂದೆ ಹೋಗಬೇಕಲ್ಲವೇ? ಅಂದರೆ ಇದು ಸಾಹಿತಿಗೆ ಇರುವ ದೊಡ್ಡ ಚಾಲೆಂಜು. ಈ ಸವಾಲೇ ಹೊಸ ಬಗೆಯ ಸಾಹಿತ್ಯಕ್ಕೆ ನಾಂದಿ ಆಗಬಹುದು.

ಒಂದು ಪುರಾಣಕತೆಯ ಮೂಲಕ ಇದನ್ನು ಕೊನೆಗೊಳಿಸಬಹುದು. ದಮಯಂತಿಗೆ ಪುನಃ ಸ್ವಯಂವರ ಎಂದು ತಿಳಿದು, ಅದನ್ನು ತಡೆಯಲು ಹೊರಟ ಅಯೋಧ್ಯೆಯ ರಾಜ ಋತು ಪರ್ಣನಿಗೆ ಸಾರಥಿಯಾಗಿ ಬಾಹುಕನ ರೂಪದಲ್ಲಿ ಕುಳಿತ ನಳ ಮಹಾರಾಜ, ಒಂದು ಹಂತದಲ್ಲಿ ತನ್ನಲ್ಲಿದ್ದ ಅಶ್ವಹೃದಯ ವಿದ್ಯೆಗೆ ಋತುಪರ್ಣನಲ್ಲಿದ್ದ ಅಕ್ಷಹೃದಯ ವಿದ್ಯೆಯನ್ನು ವಿನಿಮಯ ಮಾಡಿಕೊಳ್ಳುತ್ತಾನೆ.

ಅಕ್ಷಹೃದಯದಿಂದ ಪಗಡೆಯಾಟದಲ್ಲಿನ ಲೆಕ್ಕಾಚಾರಗಳನ್ನು, ಗೆಲುವಿನ ತಂತ್ರಗಳನ್ನು ಕೈವಶ ಮಾಡಿಕೊಳ್ಳಬಹುದು. ಅಶ್ವಹೃದಯ, ಕುದುರೆಗಳನ್ನು ಆರೈಕೆ ಮಾಡಿ ಒಲಿಸಿ ಅರ್ಥ ಮಾಡಿಕೊಂಡು ಅವುಗಳಿಂದ ವೇಗದ ರಥಚಾಲನೆ ಪಡೆಯುವ ವಿದ್ಯೆ. ಎಐ ಆಲ್ಗಾರಿದಂ ಅಕ್ಷಹೃದಯ. ಕಾದಂಬರಿ ಮಾನವೀಯ ಅಶ್ವಹೃದಯ!