ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janamejaya Umarji Column: ಗೋಕರ್ಣದ ಗುಹೆಯೊಳಗಿದ್ದದ್ದು ನೀನಾ ?

‘ವಿಹಾಯ ಕಾಮಾನ್ ಯಃ ಸರ್ವಾಂ ಪುಮಾಂಶ್ಚರತಿ ನಿಃಸ್ಪ್ರಹಃ, ನಿರ್ಮಮೋ ನಿರಹಂಕಾರಃ ಸ ಶಾಂತೀಮಾದಧಿಗಚ್ಛತಿ (2.71)’, ‘ತ್ಯಕ್ತ್ವಾ ಕರ್ಮ-ಫಲಾಸಂಗಂ ನಿತ್ಯ-ತೃಪ್ತೋ ನಿರಾಶ್ರಯಃ’ (4.20) ಎಂಬ ಭಗವದ್ಗೀತೆಯ ಶ್ಲೋಕಗಳು ಇದನ್ನೇ ಹೇಳುತ್ತವೆ. ಎರಡನೆಯದು, “ನನಗೆ ಜಗತ್ತಿನಿಂದ ಇನ್ನು ಏನೂ ಬೇಕಾಗಿಲ್ಲ, ನನಗೆ ಸತ್ಯ ಮಾತ್ರ ಬೇಕು" ಎಂಬುದು. ಇದು ಆಳವಾದ ಆಧ್ಯಾತ್ಮಿಕ ಪ್ರಬುದ್ಧತೆಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಗೋಕರ್ಣದ ಗುಹೆಯೊಳಗಿದ್ದದ್ದು ನೀನಾ ?

Ashok Nayak Ashok Nayak Jul 30, 2025 10:32 AM

ಜ್ಞಾನಜಿಜ್ಞಾಸೆ

ಜನಮೇಜಯ ಉಮರ್ಜಿ

ರಷ್ಯಾದ ಮಹಿಳೆ ‘ನೀನಾ ಕುಟ್ನಿಯಾ’ ಬಾಹ್ಯ ಪ್ರಪಂಚದ ಕೊಂಡಿ ಕಳಚಿಗೊಂಡು, ಪ್ರಶಾಂತವಾಗಿದ್ದ ಗೋಕರ್ಣದ ಗುಹೆಯಲ್ಲಿ ತಮ್ಮ ಎರಡು ಮಕ್ಕಳೊಂದಿಗೆ ಇದ್ದದ್ದು ಇತ್ತೀಚೆಗೆ ಜಗಜ್ಜಾಹೀರಾಯಿತು. ಪತ್ರಿಕೆ, ಟಿ.ವಿ.ಗಳಲ್ಲಿ ಇದು ಸುದ್ದಿಯಾಗಿ ನಾಡಿನವರ ಕುತೂಹಲವನ್ನು ಕೆರಳಿಸಿತು. ಆಕೆ ಅಲ್ಲಿಗೆ ಹೇಗೆ ಹೋದರು? ವೀಸಾ ಅವಧಿ ಮುಗಿದ ಮೇಲೂ ಆಕೆ ಏಕೆ ಇದ್ದರು? ಇವೆಲ್ಲ ಕಾನೂನಿನ ವಿಷಯಗಳು. ಈ ದೇಶದ ಸಾರ್ವಭೌಮ ಕಾನೂನು ತನ್ನ ಕೆಲಸವನ್ನು ಮಾಡಲಿದೆ ಮತ್ತು ಮಾಡಬೇಕು.

ಆಕೆಯ ಕೌಟುಂಬಿಕ ಮತ್ತು ವೈಯಕ್ತಿಕ ಹಿನ್ನೆಲೆ ಏನು? ಈ ವಿಷಯಕ್ಕೆ ಸಂಬಂಧಿಸಿದ ಆಕೆಯ ಹೇಳಿಕೆಗಳು ಎಷ್ಟು ಪ್ರಾಮಾಣಿಕ? ಎಂಬುದೆಲ್ಲ ತನಿಖೆಯಿಂದ ಹೊರಬರಬೇಕು. ಕಾನೂನಿನ ಪ್ರಕಾರ ಅದು ನಡೆಯುತ್ತದೆ. ವಿಷಯ ಅದಲ್ಲ. ಪತ್ರಿಕೆಗಳಲ್ಲಿ ವರದಿಯಾದ ಆಕೆಯ ಕೆಲ ಹೇಳಿಕೆಗಳು ಗಮನ ಸೆಳೆದವು. ಅವುಗಳಲ್ಲಿ ಒಂದಿಷ್ಟು ಅಧ್ಯಾತ್ಮವಿದೆ ಎನಿಸಿತು. ಆಕೆಯ ನುಡಿ ಮತ್ತು ನಡೆ ಎರಡೂ ಒಂದೆಯಾ? ಅದೂ ಗೊತ್ತಿಲ್ಲ.

ಹೀಗಾಗಿ, ವ್ಯಕ್ತಿಯನ್ನು ಬದಿಗೊತ್ತಿ ಆಕೆಯ ಹೇಳಿಕೆಗಳ ಕುರಿತು ಮಾಡಲಾದ ಒಂದಿಷ್ಟು ವಿಶ್ಲೇಷಣೆ ಇಲ್ಲಿದೆ: ಮೊದನೆಯದು, “ನಾನು ಮೌನ ಮತ್ತು ಸಮರ್ಪಣೆಯಲ್ಲಿ ಜೀವನದ ಅರ್ಥವನ್ನು ಕಂಡುಕೊಂಡೆ" ಎಂಬ ಹೇಳಿಕೆ. ಇದು ನಿರಾಶೆಯ ಮಾತಲ್ಲ, ಒಡೆದು ನೋಡಿದರೆ ಇದರಲ್ಲಿ ಆಳವಾದ ಆಧ್ಯಾತ್ಮಿಕ ಅರಿವಿದೆ. ಮೌನವು ಕೇವಲ ಶಬ್ದದ ಅನುಪಸ್ಥಿತಿಯಲ್ಲ. ಸಾಧಕರಲ್ಲಿ ಅದು ಅರಿವಿನ ಉಪಸ್ಥಿತಿ ಕೂಡ. ಮೌನದ ನಿಶ್ಚಲತೆಯಲ್ಲಿ, ಮನಸ್ಸಿನ ಚಡಪಡಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Ganesh Bhat Column: ಜಾಗತಿಕವಾಗಿ ವಿಫಲವಾಗಿರುವ ಸೋಷಿಯಲಿಸಂ ಭಾರತಕ್ಕೆ ಬೇಕೇ ?

ಆಳವಾದ ವಿಚಾರಗಳು ಹೊರಹೊಮ್ಮಲು ಅದು ಅನುವು ಮಾಡಿಕೊಡುತ್ತದೆ. ಮತ್ತೊಂದೆಡೆ, ಸಮರ್ಪಣೆಯು ದೌರ್ಬಲ್ಯವಲ್ಲ. ಇದು ಅಹಮ್ಮಿನ ದಮನ, ಸ್ವಯಂ ನಿಯಂತ್ರಣ ಮತ್ತು ಆಸೆಗಳ ನಿರಸನ ಮಾಡುವ ಧೈರ್ಯಶಾಲಿ ಸಾಧನ. ಒಟ್ಟಿನಲ್ಲಿ ಧ್ಯಾನ ಮತ್ತು ಸಮರ್ಪಣೆ ಎಂಬುದು ಆತ್ಮ ತೃಪ್ತಿಯ ಹೆಬ್ಬಾಗಿಲು.

‘ವಿಹಾಯ ಕಾಮಾನ್ ಯಃ ಸರ್ವಾಂ ಪುಮಾಂಶ್ಚರತಿ ನಿಃಸ್ಪ್ರಹಃ, ನಿರ್ಮಮೋ ನಿರಹಂಕಾರಃ ಸ ಶಾಂತೀಮಾದಧಿಗಚ್ಛತಿ (2.71)’, ‘ತ್ಯಕ್ತ್ವಾ ಕರ್ಮ-ಫಲಾಸಂಗಂ ನಿತ್ಯ-ತೃಪ್ತೋ ನಿರಾಶ್ರಯಃ’ (4.20) ಎಂಬ ಭಗವದ್ಗೀತೆಯ ಶ್ಲೋಕಗಳು ಇದನ್ನೇ ಹೇಳುತ್ತವೆ. ಎರಡನೆಯದು, “ನನಗೆ ಜಗತ್ತಿನಿಂದ ಇನ್ನು ಏನೂ ಬೇಕಾಗಿಲ್ಲ, ನನಗೆ ಸತ್ಯ ಮಾತ್ರ ಬೇಕು" ಎಂಬುದು. ಇದು ಆಳವಾದ ಆಧ್ಯಾತ್ಮಿಕ ಪ್ರಬುದ್ಧತೆಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ತಿರಸ್ಕಾರದಿಂದಲ್ಲ, ಆದರೆ ಆಳವಾದ ಒಳನೋಟದಿಂದ ಪ್ರಾಪಂಚಿಕ ಸುಖಗಳು, ಸಾಧನೆಗಳು ಮತ್ತು ಗುರುತುಗಳು ತಮ್ಮ ಹೊಳಪನ್ನು ಕಳೆದುಕೊಳ್ಳುವ ಸ್ಥಿತಿ ಇದು. ಜಿನ, ಬುದ್ಧ, ಅಲ್ಲಮ, ಬಸವಣ್ಣ, ಕನಕ- ಪುರಂದರದಾಸ ಎಲ್ಲರೂ ಈ ಬೆಳಕು ಹಿಡಿದು ಹೊರಟವರೇ!

62

ಎಲ್ಲಾ ಬಾಹ್ಯ ಅನ್ವೇಷಣೆಗಳು ಕ್ಷಣಿಕವಾದವುಗಳು ಮತ್ತು ಶಾಶ್ವತ ಸತ್ಯ ಮಾತ್ರ ಹಾತೊರೆಯಲು ಯೋಗ್ಯವಾದದ್ದು ಎಂದು ಆತ್ಮವು ಇಲ್ಲಿ ಗುರುತಿಸುತ್ತದೆ. ಇದು “ಸತ್ಯಂ ಜ್ಞಾನಂ ಅನಂತಂ ಬ್ರಹ್ಮ"- ಅಂದರೆ ಸತ್ಯ, ಜ್ಞಾನ ಮತ್ತು ಅನಂತತೆಯು ಬ್ರಹ್ಮನ ಸ್ವರೂಪ ಎಂಬ ಉಪನಿಷತ್ತಿನ ಆದರ್ಶವನ್ನು ಪ್ರತಿಧ್ವನಿಸುತ್ತದೆ.

ಹೃದಯವು ಸತ್ಯದ ಕಡೆಗೆ ಒಳಮುಖವಾಗಿ ತಿರುಗಿದಾಗ, ನಿಜವಾದ ಬಿಡುಗಡೆ ಪ್ರಾರಂಭವಾಗುತ್ತದೆ. ಮೂರನೆಯದು “ಈ ಗುಹೆಯು ನನ್ನ ಗರ್ಭ, ನಾನು ಇಲ್ಲಿ ಪುನರ್ಜನ್ಮ ಪಡೆಯುತ್ತಿದ್ದೇನೆ" ಎಂಬುದು. ಈ ಹೇಳಿಕೆ ಒಂದು ಪ್ರಬಲ ಯೋಗ ಸಾಕ್ಷಾತ್ಕಾರವನ್ನು ಪ್ರತಿಫಲಿಸುತ್ತದೆ. ಯೋಗ ತತ್ವಶಾಸ್ತ್ರದಲ್ಲಿ, ಏಕಾಂತ ಮತ್ತು ಮೌನವನ್ನು ಅಂತರ್ಮುಖಿ ಪ್ರಜ್ಞೆಯ ಪ್ರೇರಕಗಳಾಗಿ ನೋಡ ಲಾಗುತ್ತದೆ. ಗುಹೆಯು ಹೃದಯದ ಸಂಕೇತವಾಗಿ, ಅಹಂ ಕರಗುವ ಮತ್ತು ಆತ್ಮ ಜಾಗೃತವಾಗುವ ಪವಿತ್ರ ಸ್ಥಳವಾಗುತ್ತದೆ.

ಇಲ್ಲಿನ ಮರುಹುಟ್ಟು ಭೌತಿಕವಲ್ಲ, ಅದು ಮಿಥ್ಯಾ ಗುರುತಿನ ಪೊರೆಯ ಕಳಚಿ ‘ಸ್ವತ್ವ’ದ ಮರು ಶೋಧನೆಯಾಗುವ ಪ್ರಕ್ರಿಯೆ. ಮುಂಡಕ ಉಪನಿಷತ್ತಿನ (2.2.7) ಒಂದು ಪದ್ಯವು ಇದನ್ನೇ ಹೇಳುತ್ತದೆ- “ಯಸ್ಮಿನ್ ವಿಜ್ಞಾತೇ ಸರ್ವಂ ಏವಂ ವಿeತಂ ಭವತಿ"- ಅಂದರೆ, ಏನಿದೆಯೋ ಅದನ್ನು ತಿಳಿದಾಗ, ಎಲ್ಲವೂ ತಿಳಿದಂತಾಗುತ್ತದೆ.

ಇದು ಆಳವಾದ ಆಂತರಿಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಇದು ಕತ್ತಲೆಯಿಂದ ಹೊರ ಬಂದು ಸತ್ಯದ ಬೆಳಕಿನೆಡೆಗಿನ ಸಂಕ್ರಮಣ. ಇನ್ನು ನಾಲ್ಕನೆಯದು, “ನನಗೆ ಯಾರ ಸಹಾಯವೂ ಬೇಡ. ನನ್ನೊಳಗೆ ಎಲ್ಲವೂ ಇದೆ" ಎಂಬುದು. ಇದು ಅಹಂಕಾರವಲ್ಲ, ಬದಲಿಗೆ ಇದು ವೇದಾಂತ ಮತ್ತು ಯೋಗ ಜ್ಞಾನದಲ್ಲಿ ಬೇರೂರಿರುವ ಅರಿವು. ಇದು ಗೀತೆಯ ಬೋಧನೆಯನ್ನು ಪ್ರತಿಧ್ವನಿಸು ತ್ತದೆ- “ಉದ್ಧರೇತ್ ಆತ್ಮನಾತ್ಮಾನಾಂ ನಾತ್ಮಾನಾಂ ಅವಸಾದಯೇತ್"(ಗೀತಾ 6.5)- ಅಂದರೆ, ಆತ್ಮವು ಸ್ವತಂತ್ರ ಮತ್ತು ಸ್ವಾವಲಂಬಿ.

ಆತ್ಮವೇ ತನ್ನನ್ನು ಉದ್ಧಾರ ಮಾಡಿಕೊಳ್ಳಬೇಕು, ಇಲ್ಲವೇ ಆತ್ಮವೇ ತನ್ನನ್ನು ಹಳ್ಳಕ್ಕೆ ತಳ್ಳಿಕೊಳ್ಳ ಬೇಕು. ಈ ವಾಕ್ಯವು ನಮ್ಮ ಆತ್ಮವೇ ನಮಗೆ ಮಾರ್ಗದರ್ಶಕ ಮತ್ತು ಆಶ್ರಯ ಎರಡೂ ಆಗಿದೆ ಎಂದು ಹೇಳುತ್ತದೆ. ಅಂತೆಯೇ, ಛಾಂದೋಗ್ಯ ಉಪನಿಷತ್ತು “ತತ್ ತ್ವಂ ಅಸಿ"- ಅಂದರೆ, ಅದು ನೀನೆ ಆಗಿರುವೆ ಎಂದು ಘೋಷಿಸುತ್ತದೆ. ಒಬ್ಬನು ಬಯಸುವ ಎಲ್ಲವೂ ಅವನ ಒಳಗೇ ನೆಲೆಗೊಂಡಿ ದೆ. ಒಮ್ಮೆ ಇದು ಅರಿವಿಗೆ ಬಂದರೆ, ಅವಲಂಬನೆ ಇಲ್ಲವಾಗುತ್ತದೆ ಮತ್ತು ಒಳಗಣ್ಣು ತೆರೆದುಕೊಳ್ಳು ತ್ತದೆ.

ಇದು “ನಾನೇಕೆ ಹೊರಗೆ ಹುಡುಕಬೇಕು? ನನ್ನೊಳಗಿರುವನಯ್ಯಾ ಚೆನ್ನಮಲ್ಲಿಕಾರ್ಜುನ", “ಒಳಗಡೆ ನೋಡದವರಿಗಿಂತೆನು ಬಲ?" ಎಂಬ ದಾಸ-ಶರಣರ ಮಾತುಗಳನ್ನು ನೆನಪಿಸುತ್ತದೆ. ಇದು ಅನನ್ಯ ಅನ್ವಯ. ‘ನನಗೆ ಬೇಕಾದ ಸತ್ಯ ನನ್ನ ಒಳಗೇ ಇದೆ’ ಎಂಬುದಿಲ್ಲಿ ಧ್ವನಿತ.

ಐದನೆಯದು ನಿಸರ್ಗದೊಂದಿಗಿನ ಬದುಕು. ಇಲೆಕ್ಟ್ರಾನಿಕ್ ವಸ್ತುಗಳು, ಭೋಗ ಜೀವನ, ನಿರಂತರ ಗದ್ದಲ, ಕ್ಷಣಕ್ಷಣಕ್ಕೆ ಬದಲಾಗುವ ಆಸೆ, ಮಹತ್ವಾಕಾಂಕ್ಷೆಗಳ ವ್ಯಸನವನ್ನು ಆಕೆ ಪ್ರಶ್ನಿಸುವಂತಿದೆ. ಪ್ರಕೃತಿಯ ವಿರುದ್ಧ ಬದುಕುವುದನ್ನೇ ಈಗ ಪ್ರಗತಿ ಎಂದುಕೊಂಡಿರುವವರನ್ನು ತಳ್ಳಿ ಹಾಕು ವಂತಿದೆ. ಪೂರ್ವವ ಮರೆತ ಭಾರತೀಯರು ಮೌಲ್ಯಮಾಪನಕ್ಕಾಗಿ ಪಶ್ಚಿಮಕ್ಕೆ ಓಡುತ್ತಿರುವ ಈ ಯುಗದಲ್ಲಿ, ಗರ್ವ ಪೂರ್ವಕವಾಗಿ ಪಾಶ್ಚಾತ್ಯ ಮಹಿಳೆಯೊಬ್ಬಳು ಭಾರತೀಯ ಧ್ಯಾನ ಸಂಸ್ಕೃತಿಗೆ ತಲೆಬಾಗಿದ್ದಾಳೆ.

ಗೋಕರ್ಣ ಗುಹೆಯಲ್ಲಿ ನೀನಾ ಕುಟ್ನಿಯಾರ ಕೆಲ ದಿನಗಳ ಇರವನ್ನು ಕೇವಲ ಮಾಧ್ಯಮದ ಕುತೂಹಲವಾಗಿ ನೋಡಬಾರದು. ನಮ್ಮನ್ನು ನಾವೇ ಒಂದು ಸಲ ಪ್ರತಿಬಿಂಬಿಸಿಕೊಂಡು ನೋಡ ಬೇಕು. ಭಾರತವು ಕೇವಲ ಒಂದು ಭೂಮಿಯ ತುಂಡು ಅಲ್ಲ. ಅದು ಮೋಕ್ಷಕ್ಕಾಗಿ ಹಾತೊರೆ ಯುವವರ, ‘ಸ್ವತ್ವ’ವನ್ನು ಕಂಡುಕೊಳ್ಳದರ ಹೊರತು ಏನನ್ನೂ ಬಯಸದವರ ಚೈತನ್ಯ ಸ್ಥಳವಾಗಿದೆ.

ಕಾನೂನು ತನ್ನ ಕೆಲಸ ಮಾಡುವುದು ನಿಸ್ಸಂದೇಹ, ಆದರೆ ಆಕೆಯ ಹೇಳಿಕೆಗಳಲ್ಲಿನ ತತ್ವಮೂಲ್ಯ, ಧ್ಯಾನಪರ ವ್ಯಕ್ತಿತ್ವವನ್ನು ಮಾನವೀಯ ಮತ್ತು ಸಂಸ್ಕೃತಿ ದೃಷ್ಟಿಯಿಂದ ನೋಡುವ ಸಂವೇದನೆ ಯು ನಮ್ಮಲ್ಲಿ ಇರಬೇಕು. ಸಮಾಜವು ಆಂತರಿಕ ಅನ್ವೇಷಣೆಯ ಅಪರೂಪದ ಮಾರ್ಗವನ್ನು ಗೇಲಿ ಮಾಡಬಾರದು ಅಥವಾ ತಿರಸ್ಕರಿಸಬಾರದು. ಆ ಮಾರ್ಗದಲ್ಲಿ ನಡೆಯುವ ಅಪರೂಪದ ವ್ಯಕ್ತಿಗಳನ್ನು ಗೌರವಿಸಬೇಕು.

ಗುಹೆಯಲ್ಲಿ ಹೋಗಿ ಕುಳಿತು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗ ಭಾರತಕ್ಕೆ ಅಪರಿಚಿತವೇನಲ್ಲ. ಈ ತರಹದ ವ್ಯಕ್ತಿತ್ವ ನಮ್ಮ ಪ್ರಾಚೀನ ಉಪನಿಷತ್ ಧ್ಯಾತೃಗಳ ಛಾಯೆ ಹೊಂದುತ್ತದೆ. ಅವರು ಕೂಡ “ಕಿಂ ಬ್ರಹ್ಮ? ಕಿಂ ಶ್ರೇಯಃ?" ಎಂಬ ಪ್ರಶ್ನೆಗಳನ್ನೇ ಚಿಂತಿಸಿದ್ದಾರೆ. ಸಾರ್ವಕಾಲಿಕ ಜ್ಞಾನವನ್ನು ಹುಡುಕುತ್ತಾ ಸಾಮಾಜಿಕ ರೂಢಿಗಳಿಂದ ದೂರ ಸರಿಯುತ್ತಾ ನಡೆಯುವ ಹಲವು ಮಹಾತ್ಮರು ನಮ್ಮಲ್ಲಿದ್ದಾರೆ.

ರಮಣ ಮಹರ್ಷಿ, ಸಿದ್ಧಾರೂಢರು, ಶ್ರೀಧರ ಸ್ವಾಮಿಗಳಂಥಾ ಅನೇಕ ಆರೂಢ-ಅವಧೂತರು, ಅಕ್ಕ-ಅಲ್ಲಮನಂಥ ಶಿವಶರಣರು ಹೀಗೆಯೇ ಕಾಡು, ಗುಹೆಗಳೆಡೆಗೆ ಅಲೆದಿದ್ದಾರೆ, ಸಾಧನೆ ಮಾಡಿದ್ದಾರೆ. ನೀನಾ ಕುಟ್ನಿಯಾ ಎಂಬ ಈಕೆ ಶಂಕರ -ರಾಮಾನುಜ-ಮಧ್ವ-ಬಸವಣ್ಣನವರನ್ನು ಓದಿದ್ದಾರಾ? ಅಥವಾ ಇಂಥ ಮಹಾಪುರುಷರ ಬಗ್ಗೆ ತಿಳಿದಿದ್ದಾರಾ? ಅವರೇ ಹೇಳಿಕೊಂಡಂತೆ ಅಧ್ಯಾತ್ಮ ಸಾಧನೆಯೇ ಆಕೆಯ ಗುರಿಯಾ ಗೊತ್ತಿಲ್ಲ? ಆದರೆ ಅವರ ಹೇಳಿಕೆಗಳನ್ನು ಅಧ್ಯಾತ್ಮ ದೃಷ್ಟಿಕೋನ ದಿಂದ ನೋಡಿದರೆ ಹಲವು ಸತ್ಯಗಳು ತೆರೆದುಕೊಳ್ಳುವುದಂತೂ ಸುಳ್ಳಲ್ಲ.

(ಲೇಖಕರು ಚಿಂತಕರು)