ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Bhat Column: ಜಾಗತಿಕವಾಗಿ ವಿಫಲವಾಗಿರುವ ಸೋಷಿಯಲಿಸಂ ಭಾರತಕ್ಕೆ ಬೇಕೇ ?

ಸಂವಿಧಾನವನ್ನು ರಚಿಸುವ ಸಂದರ್ಭದಲ್ಲೇ ‘ಸಮಾಜವಾದಿ’ ಎಂಬ ಪದದ ಸೇರ್ಪಡೆಗೆ ಪ್ರಸ್ತಾಪ ವನ್ನು ಮಾಡಲಾಗಿತ್ತು. ಆದರೆ ಇದನ್ನು ವಿರೋಧಿಸಿದ್ದ ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು, “ಸಮಾಜವಾದಿ ತತ್ವಗಳನ್ನು ಈಗಾಗಲೇ ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ಸೇರಿಸಲಾಗಿದ್ದು, ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’ ಎನ್ನುವ ಉಲ್ಲೇಖವನ್ನು ಸೇರಿಸಿದರೆ, ಜನರು ಬಯಸಿದ ಆರ್ಥಿಕ ವ್ಯವಸ್ಥೆಯ ಆಯ್ಕೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗುತ್ತದೆ" ಎಂದು ಹೇಳಿದ್ದರು.

ಜಾಗತಿಕವಾಗಿ ವಿಫಲವಾಗಿರುವ ಸೋಷಿಯಲಿಸಂ ಭಾರತಕ್ಕೆ ಬೇಕೇ ?

Ashok Nayak Ashok Nayak Jul 29, 2025 8:36 AM

ಯಕ್ಷ ಪ್ರಶ್ನೆ

ಗಣೇಶ ಭಟ್‌, ವಾರಾಣಸಿ

ಭಾರತದ ಸಂವಿಧಾನದ ಪೀಠಿಕೆಯಲ್ಲಿ, ‘ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ’ ಎಂದು ವಿವರಿಸಲ್ಪಟ್ಟಿದೆ. ಆದರೆ ಮೂಲ ಸಂವಿಧಾನದಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎನ್ನುವ ಪದಗಳು ಪೀಠಿಕೆಯಲ್ಲಿರಲಿಲ್ಲ. ಈ ಎರಡೂ ಪದ ಗಳನ್ನು ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರವು 1976ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ಪೀಠಿಕೆಗೆ ಸೇರಿಸಿತು.

ಇದುವರೆಗೆ ಸಂವಿಧಾನವು ಸಾಕಷ್ಟು ಬಾರಿ ತಿದ್ದುಪಡಿಗೆ ಒಳಗಾಗಿದ್ದರೂ, ಪೀಠಿಕೆಗೆ ತಿದ್ದುಪಡಿ ಯನ್ನು ಮಾಡಿರುವುದು ಅದೇ ಮೊದಲು ಮತ್ತು ಅದೇ ಕೊನೆಯದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಬಹುತೇಕ ನಾಯಕರನ್ನು ಜೈಲಿಗೆ ಹಾಕಲಾಗಿತ್ತು.

ಇವರ ಅನುಪಸ್ಥಿತಿಯಲ್ಲಿ ಸಂಸತ್ತಿನಲ್ಲಿ ಸಮರ್ಪಕ ಚರ್ಚೆಗಳಿಲ್ಲದೆಯೇ ಈ ಶಬ್ದಗಳನ್ನು ಸೇರಿಸಿರುವುದರ ಬಗ್ಗೆ ಬಹಳ ಟೀಕೆಗಳಿವೆ. ತುರ್ತು ಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಜನತಾಪಕ್ಷದ ಸರಕಾರವು ಸಂವಿಧಾನದ ತಿದ್ದುಪಡಿಗೆ ಮುಂದಾಗಿ, 42ನೇ ತಿದ್ದುಪಡಿಯ ಕೆಲವು ಅಂಶಗಳನ್ನು ತೆಗೆದು ಹಾಕಿತಾದರೂ, ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎನ್ನುವ ಪದಗಳನ್ನು ಉಳಿಸಿಕೊಂಡಿತು ಎಂಬುದು ಗಮನಾರ್ಹ.

ಇದನ್ನೂ ಓದಿ: Ganesh Bhat Column: ಭಾರತವು ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿರುವುದು ಹೇಗೆ ?

ಸಂವಿಧಾನವನ್ನು ರಚಿಸುವ ಸಂದರ್ಭದಲ್ಲೇ ‘ಸಮಾಜವಾದಿ’ ಎಂಬ ಪದದ ಸೇರ್ಪಡೆಗೆ ಪ್ರಸ್ತಾಪ ವನ್ನು ಮಾಡಲಾಗಿತ್ತು. ಆದರೆ ಇದನ್ನು ವಿರೋಧಿಸಿದ್ದ ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥ ರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು, “ಸಮಾಜವಾದಿ ತತ್ವಗಳನ್ನು ಈಗಾಗಲೇ ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ಸೇರಿಸಲಾಗಿದ್ದು, ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’ ಎನ್ನುವ ಉಲ್ಲೇಖವನ್ನು ಸೇರಿಸಿದರೆ, ಜನರು ಬಯಸಿದ ಆರ್ಥಿಕ ವ್ಯವಸ್ಥೆಯ ಆಯ್ಕೆಯ ಸ್ವಾತಂತ್ರ್ಯ ವನ್ನು ಹತ್ತಿಕ್ಕಿದಂತಾಗುತ್ತದೆ" ಎಂದು ಹೇಳಿದ್ದರು.

ಆದರೆ ಇಂದಿರಾರ ಸರಕಾರವು ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ಸಾಗಿ ದೇಶವನ್ನು ಸಾಂವಿಧಾನಿಕವಾಗಿಯೇ ‘ಸಮಾಜವಾದಿ’ ರಾಷ್ಟ್ರವನ್ನಾಗಿಸಿದರು. ಇಂದಿರಾರು ಕೂಡ ತಮ್ಮ ತಂದೆ ಜವಾಹರಲಾಲ್ ನೆಹರು ಅವರಂತೆಯೇ ಸೋವಿಯತ್ ಒಕ್ಕೂಟದ ಶೈಲಿಯ ಆಡಳಿತದಿಂದ ಹೆಚ್ಚು ಪ್ರಭಾವಿತರಾಗಿದ್ದರು.

ಅಂದಿನ ಕಾಲದ ಸಮಾಜವಾದಿ ದೇಶಗಳ ಮುಖ್ಯಸ್ಥರೆಲ್ಲಾ ಸರ್ವಾಧಿಕಾರಿ ನಾಯಕರಾಗಿದ್ದುದು ಇಂದಿರಾ ಅವರಿಗೆ ಸಮಾಜವಾದದ ಮೇಲೆ ಒಲವು ಮೂಡಿಸಿರಲಿಕ್ಕೂ ಸಾಕು. ದೇಶದ ಮೇಲೆ ಸಮಾಜವಾದಿ ಆರ್ಥಿಕತೆಯನ್ನು ಹೇರಿ, ದೇಶದ ಖಾಸಗಿ ವಲಯಗಳನ್ನು ‘ಸರಕಾರೀಕರಣ’ಗೊಳಿಸಿ ದೇಶದ ಆರ್ಥಿಕ ವ್ಯವಸ್ಥೆಯನ್ನೇ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಇಂದಿರಾ ಯೋಚಿಸಿದ್ದರು. ರಾಜಕೀಯವಾಗಿ ತಮ್ಮ ಜನಪ್ರಿಯತೆ ಕುಂದುತ್ತಿದ್ದುದನ್ನು ಗಮನಿಸಿದ ಇಂದಿರಾ, ರಾಷ್ಟ್ರೀಕರಣದ ಮೂಲಕ ದೇಶದ ಮೇಲಿನ ತಮ್ಮ ಹಿಡಿತವನ್ನು ಬಿಗಿಗೊಳಿಸಲು ಬಯಸಿದ್ದರು.

ದೇಶವನ್ನು ಸಮಾಜವಾದಿಯನ್ನಾಗಿಸಿದ ಮೇಲೆ 20 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಸರಕಾರದ ನಿಯಂತ್ರಣಕ್ಕೆ ತಂದ ಇಂದಿರಾ, 107 ವಿಮಾ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸಿ ಒಗ್ಗೂಡಿಸಿ ‘ಜನರಲ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್‌ ಇಂಡಿಯಾ’ವನ್ನು ರೂಪಿಸಿದರು. ಕಲ್ಲಿದ್ದಲು ಗಣಿಗಳು, ಆಯಿಲ್ ಆಂಡ್ ಗ್ಯಾಸ್ ವಲಯಗಳು ಕೂಡ ರಾಷ್ಟ್ರೀಕರಣಗೊಂಡವು.

ಆದರೆ, ನೆಹರು ಮತ್ತು ಇಂದಿರಾರು ‘ಆದರ್ಶವಾಗಿ’ ಪರಿಗಣಿಸಿದ್ದ ಪ್ರಮುಖ ಸೋಷಿಯಲಿಸ್ಟ್ (ಸಮಾಜವಾದಿ) ದೇಶಗಳು ಕಾಲಾಂತರದಲ್ಲಿ ಸಂಪೂರ್ಣ ವಿಫಲಗೊಂಡು ಪತನವಾದವು. ಜಗತ್ತಿನ ಮೊದಲ ಸಮಾಜವಾದಿ ನೆಲೆ ಎನಿಸಿಕೊಂಡಿದ್ದು ಸೋವಿಯತ್ ಒಕ್ಕೂಟ (ಯುಎಸ್‌ಎಸ್ ಆರ್). 1917ರಲ್ಲಿ ವ್ಲಾದಿಮಿರ್ ಲೆನಿನ್ ನೇತೃತ್ವದಲ್ಲಿ ನಡೆದ ಹಿಂಸಾತ್ಮಕ ಕ್ರಾಂತಿಯ ಮೂಲಕ, ಅದುವರೆಗೂ ಯುಎಸ್‌ಎಸ್ ಆರ್ ಅನ್ನು ಆಳುತ್ತಿದ್ದ ಎರಡನೆಯ ಝಾರ್ ನಿಕೋಲಸ್ ಹಾಗೂ ಆತನ ವಂಶದ ಎಲ್ಲಾ ಸದಸ್ಯರನ್ನು ಕೊಂದು ಹಾಕಿ ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸ ಲಾಯಿತು.

ಕಾರ್ಲ್‌ಮಾರ್ಕ್ಸ್‌ನ ಕಮ್ಯುನಿಸ್ಟ್ ಚಿಂತನೆಯನ್ನು ಸಾಕಾರಗೊಳಿಸುವ ರೀತಿಯಲ್ಲಿ ಸರಕಾರವನ್ನು ರೂಪಿಸಲಾಯಿತು. ಅದು ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಕೈಗಾರಿಕೆಗಳನ್ನು, ಶ್ರೀಮಂತರ ವಶದಲ್ಲಿದ್ದ ಆಹಾರಧಾನ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ರಾಜಕೀಯ ವಿರೋಧಿಗಳನ್ನು ಶಿಕ್ಷಿಸಲು ಮತ್ತು ಕಮ್ಯುನಿಸ್ಟ್, ಸೋಷಿಯಲಿಸ್ಟ್ ಚಿಂತನೆಗಳನ್ನು ಅವರು ಒಪ್ಪಿಕೊಳ್ಳುವಂತೆ ಮಾಡಲು ‘ಗುಲಗ್ ’ಗಳೆಂಬ ಲೇಬರ್ ಕ್ಯಾಂಪ್‌ಗಳನ್ನು ರೂಪಿಸಿತು.

ಇಲ್ಲಿ ಲಕ್ಷಾಂತರ ಮಂದಿಯನ್ನು ಲೆನಿನ್ ದುಡಿಸಿದ. ಅವನ ನಂತರ ಅಧಿಕಾರಕ್ಕೆ ಬಂದ ಸ್ಟಾಲಿನ್ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ, ‘ಕಲೆಕ್ಟಿವೈಸೇಷನ್’ (ಸರಕಾರವು ರೈತರ ಕೃಷಿಭೂಮಿಯನ್ನು ವಶಪಡಿಸಿಕೊಂಡು ಒಟ್ಟಾಗಿ ಕೃಷಿ ನಡೆಸುವುದು) ಹೆಸರಿನಲ್ಲಿ ಎರಡೂವರೆ ಕೋಟಿ ರೈತರ ಜಮೀನನ್ನು ವಶಪಡಿಸಿಕೊಂಡು ಅವರನ್ನು ಬಲವಂತವಾಗಿ ಕೂಲಿಯಾಳುಗಳಾಗಿಸಿ ‘ಗುಲಗ್ ’ಗಳಲ್ಲಿ ದುಡಿಸಿಕೊಳ್ಳತೊಡಗಿದ.

ಈ ಗುಲಗ್‌ಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಕೋಟಿಯನ್ನೂ ದಾಟಿತ್ತು. ಕ್ಷಿಪ್ರ ಕೈಗಾರಿಕೀ ಕರಣದಿಂದಾಗಿ ಆರಂಭಿಕ ಹಂತದಲ್ಲಿ ಸೋವಿಯತ್ ಒಕ್ಕೂಟದ ಆರ್ಥಿಕತೆಯು ಪ್ರಬಲವಾಗಿ, ಜಾಗತಿಕವಾಗಿ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಿತು. ಆದರೆ ಕೈಗಾರಿಕೋತ್ಪನ್ನ ಗಳು ಮತ್ತು ಮಿಲಿಟರಿ ಸಾಮಗ್ರಿಗಳ ಉತ್ಪಾದನೆಗೆ ಒಕ್ಕೂಟವು ಹೆಚ್ಚು ಒತ್ತು ಕೊಟ್ಟ ಕಾರಣ, ಜನರ ದಿನಬಳಕೆಯ ವಸ್ತುಗಳ ಉತ್ಪಾದನೆ ಕುಸಿಯಿತು.

ಕಾಳಸಂತೆಕೋರರು ಗ್ರಾಹಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳ ಬೆಲೆಯು ಕೃತಕವಾಗಿ ಹೆಚ್ಚಾಗುವಂತೆ ಮಾಡಿದರು. 80ರ ದಶಕದ ಮಧ್ಯಭಾಗದಲ್ಲಿ ಅಧಿಕಾರಕ್ಕೆ ಬಂದ ಮಿಖಾಯಿಲ್ ಗೊರ್ಬಚೇವ್ ತಂದ ಆರ್ಥಿಕ ಸುಧಾರಣಾ ಕ್ರಮಗಳು ವಿಫಲವಾಗಿ ಸೋವಿಯತ್ ಒಕ್ಕೂಟದ ಆರ್ಥಿಕತೆ ಸಂಪೂರ್ಣ ಹಾಳಾಯಿತು. ಜನರು ಬ್ರೆಡ್‌ಗಾಗಿ ಮೈಲುಗಟ್ಟಲೆ ಸರದಿಯಲ್ಲಿ ನಿಲ್ಲು ವಂತಾಯಿತು (ಆಗ ಈ ಜೋಕ್ ಚಾಲ್ತಿಯಲ್ಲಿತ್ತು: ರೇಷನ್ ಬ್ರೆಡ್‌ಗಾಗಿ ಸರದಿಯಲ್ಲಿ ಗಂಟೆಗಟ್ಟಲೆ ಕಾದು ಸಹನೆ ಕಳೆದುಕೊಂಡ ವ್ಯಕ್ತಿಯೊಬ್ಬ ಕುಪಿತನಾಗಿ, ‘ಗೊರ್ಬಚೇವ್‌ನನ್ನು ಗುಂಡಿಟ್ಟು ಸಾಯಿಸುವೆ’ ಎಂದು ಪ್ರತಿಜ್ಞೆ ಮಾಡಿ ಹೊರನಡೆದ.

ಕೆಲ ಹೊತ್ತಿನ ನಂತರ ಆತ ಮ್ಲಾನವದನನಾಗಿ ರೇಷನ್ ಬ್ರೆಡ್‌ನ ಸರತಿ ಸಾಲಿಗೆ ಮರಳಿದಾಗ, ‘ಗೊರ್ಬಚೇವ್‌ನನ್ನು ಗುಂಡಿಟ್ಟು ಕೊಂದು ಆಯಿತೇ?’ ಎಂದು ಯಾರೋ ಕೆಣಕಿದರು. ಅದಕ್ಕೆ ಆತ, ‘ಇಲ್ಲ, ಗೊರ್ಬಚೇವ್‌ನನ್ನು ಕೊಲ್ಲಲು ನಿಂತಿರುವ ಜನರ ಸರತಿಸಾಲು, ಬ್ರೆಡ್ಡಿಗಾಗಿ ಸರದಿಯಲ್ಲಿ ನಿಂತವರ ಸಾಲಿಗಿಂತಲೂ ಉದ್ದವಾಗಿದೆ’ ಎಂದ! 80-90ರ ದಶಕದ ಸೋವಿಯತ್ ಒಕ್ಕೂಟದ ಪರಿಸ್ಥಿತಿಯನ್ನು ಈ ಜೋಕ್ ಸೂಚಿಸುತ್ತದೆ).

ಸೋವಿಯತ್ ಒಕ್ಕೂಟದ ಪಂಚವಾರ್ಷಿಕ ಯೋಜನೆಗಳು ನೌಕರಶಾಹಿಯ ಅಸಡ್ಡೆಯಿಂದಾಗಿ ನಿರೀಕ್ಷಿತ ಫಲ ಕೊಡದೆ ಹಳಿತಪ್ಪಿ ಒಕ್ಕೂಟವನ್ನು ಅಧಃಪತನದತ್ತ ದೂಡಿದವು. ಇಡೀ ಒಕ್ಕೂಟವು ನೌಕರಶಾಹಿ ವ್ಯವಸ್ಥೆಯಡಿ ನಲುಗಿತು. ಕೇಂದ್ರೀಕೃತ ಆಡಳಿತ ವ್ಯವಸ್ಥೆಯು ಪ್ರಾದೇಶಿಕ ಅಸಮಾನತೆಗೆ ಕಾರಣವಾಯಿತು. ಈ ನಡುವೆ ಒಕ್ಕೂಟದ ಪ್ರಮುಖ ಆರ್ಥಿಕ ಮೂಲವಾಗಿದ್ದ ಕಚ್ಚಾತೈಲದ ಬೆಲೆಯೂ ತೀವ್ರಕುಸಿತವನ್ನು ಕಂಡಿತು.

1990ರಲ್ಲಿ ಸೋವಿಯತ್ ಒಕ್ಕೂಟದ ಸೆಂಟ್ರಲ್ ಬ್ಯಾಂಕ್ ಹಣದ ಮುದ್ರಣವನ್ನು ಹೆಚ್ಚಿಸಿದ್ದ ರಿಂದಾಗಿ ಹಣದುಬ್ಬರ ತೀವ್ರವಾಯಿತು. ಬೆಲೆ ನಿಯಂತ್ರಣವನ್ನು ತೆಗೆದು ಹಾಕಿದ್ದರಿಂದಾಗಿ ಬೆಲೆಯೇರಿಕೆಯ ಸಮಸ್ಯೆಯೂ ತಾರಕಕ್ಕೇರಿತು. ನಿರುದ್ಯೋಗ ಸಮಸ್ಯೆ ಹೆಚ್ಚಾಯಿತು, ಆರ್ಥಿಕ ಅಭಿವೃದ್ಧಿ ದರ ಕುಸಿಯಿತು. ಪ್ರಜೆಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವಲ್ಲಿ ಸರಕಾರ ವಿಫಲ ವಾಯಿತು.

ಜಗತ್ತಿನಲ್ಲಿ ಪ್ರಬಲವಾಗತೊಡಗಿದ ಬಂಡವಾಳಶಾಹಿ ವ್ಯವಸ್ಥೆಯೆದುರು ಒಕ್ಕೂಟದ ಸೋಷಿಯಲಿಸಂ ಸಂಪೂರ್ಣ ನೆಲ ಕಚ್ಚಿತು. ಒಕ್ಕೂಟದಾದ್ಯಂತ ಪ್ರತ್ಯೇಕತೆಯ ಹೋರಾಟವೂ, ಜನಾಂಗೀಯ ಕಲಹವೂ ಶುರುವಾಯಿತು. ಗತ್ಯಂತರವಿಲ್ಲದೆ 1991ರ ಡಿಸೆಂಬರ್ 25ರಂದು ಸೋವಿಯತ್ ಒಕ್ಕೂಟದ ನಾಯಕ ಗೊರ್ಬಚೇವ್ ರಾಜೀನಾಮೆ ನೀಡುವುದರೊಂದಿಗೆ ಒಕ್ಕೂಟದ 15 ಸಂಸ್ಥಾನಗಳು ವಿಘಟನೆಗೊಂಡು ಪ್ರತ್ಯೇಕ ರಾಷ್ಟ್ರಗಳೆಂದು ಘೋಷಿಸಲ್ಪಟ್ಟವು. ಒಕ್ಕೂಟದ ಪತನದೊಂದಿಗೆ ಸೋಷಿಯಲಿಸಂನ ಮೊದಲ ಪ್ರಯೋಗಶಾಲೆಯು ವಿಫಲವಾದಂತಾಯಿತು.

ಸೋವಿಯತ್ ಒಕ್ಕೂಟ ಪತನವಾದ ಸಂದರ್ಭದಲ್ಲಿ ಯುಗೋಸ್ಲಾವಿಯಾ, ಝೆಕೋಸ್ಲೋವಾಕಿಯಾ, ಪೂರ್ವ ಜರ್ಮನಿ, ಪೋಲೆಂಡ್, ಹಂಗರಿ, ಬಲ್ಗೇರಿಯಾ ಮೊದಲಾದ ದೇಶಗಳು ಸಮಾಜವಾದ ಮತ್ತು ಕಮ್ಯುನಿಸಂ ಅನ್ನು ತೊರೆದು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ರೂಪಾಂತರಗೊಂಡವು. ಈ ಪೈಕಿ ಪೂರ್ವ ಜರ್ಮನಿಯು ಪಶ್ಚಿಮ ಜರ್ಮನಿಯೊಂದಿಗೆ ವಿಲೀನವಾದ ಘಟನೆ ಪ್ರಮುಖ ವಾದುದು.

ಎರಡನೇ ಮಹಾಯುದ್ಧದ ವೇಳೆ ಸೋವಿಯತ್ ಒಕ್ಕೂಟದ ವಶದಲ್ಲಿದ್ದ ಜರ್ಮನಿಯ ಪೂರ್ವ ಭಾಗವು 1949ರಲ್ಲಿ ‘ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್’ ದೇಶವಾಗಿ ಹೊರಹೊಮ್ಮಿತು. ಕಮ್ಯುನಿಸ್ಟ್ ಹಾಗೂ ಸಷಿಯಲಿಸ್ಟ್ ತತ್ವಗಳ ಆಧಾರದಲ್ಲಿ ರೂಪುಗೊಂಡ ಈ ದೇಶವು ಕೇಂದ್ರೀಯ ಆಡಳಿತ ವ್ಯವಸ್ಥೆಯನ್ನು ಹೊಂದಿತ್ತು. ‘ಸಷಿಯಲಿಸ್ಟ್ ಯುನಿಟಿ ಪಾರ್ಟಿ ಆಫ್ ಜರ್ಮನಿ’ ಹೆಸರಿನ ಕಮ್ಯುನಿಸ್ಟ್ ಪಕ್ಷವು ಪೂರ್ವ ಜರ್ಮನಿಯನ್ನು ಆಳಿತು. ‌

ಪಶ್ಚಿಮ ಜರ್ಮನಿಗೆ ಹೋಲಿಸಿದರೆ, ಪೂರ್ವ ಜರ್ಮನಿಯ ಆರ್ಥಿಕ ಪ್ರಗತಿ ಬಹಳ ಹಿಂದುಳಿದಿತ್ತು. 1950ರಿಂದ 1986ರವರೆಗಿನ ಅವಧಿಯಲ್ಲಿ ಪಶ್ಚಿಮ ಜರ್ಮನಿಯ ಸರಾಸರಿ ಆರ್ಥಿಕ ಅಭಿವೃದ್ಧಿಯ ದರವು ಶೇ.4.3ರಷ್ಟಿದ್ದರೆ, ಪೂರ್ವ ಜರ್ಮನಿಯದ್ದು ಶೇ.3.1ರಷ್ಟಿತ್ತು.

ಪೂರ್ವ ಜರ್ಮನಿಯ ಕಮ್ಯುನಿಸ್ಟ್/ಸರ್ವಾಧಿಕಾರಿ ಆಡಳಿತ, ಅಂತರ್ಯುದ್ಧ, ಆರ್ಥಿಕ ಹಿನ್ನಡೆ ಮುಂತಾದ ಕಾರಣಗಳಿಂದಾಗಿ ಜನರು ಪಶ್ಚಿಮ ಜರ್ಮನಿಯತ್ತ ವಲಸೆ ಹೋಗಲು ಆರಂಭಿಸಿದರು. ಇದು ಪ್ರತಿಭಾ ಪಲಾಯನಕ್ಕೆ ಎಡೆಮಾಡಿಕೊಟ್ಟಿತು. ಈ ವಲಸೆಯ ತಡೆಗೆ ಪೂರ್ವ ಜರ್ಮನಿಯು 1961ರಲ್ಲಿ ಗಡಿಭಾಗದಲ್ಲಿ ಬರ್ಲಿನ್ ಗೋಡೆಯನ್ನು ಕಟ್ಟಿತು.

ಇದನ್ನು ದಾಟಲೆತ್ನಿಸಿದ ನೂರಾರು ಮಂದಿ ಪೂರ್ವ ಜರ್ಮನ್ನರು ಸೈನಿಕರ ಗುಂಡಿಗೆ ಬಲಿಯಾದರು. ಸೋಷಿಯಲಿಸ್ಟ್ ಆರ್ಥಿಕತೆಯ ಪರಿಣಾಮವಾಗಿ ಪೂರ್ವ ಜರ್ಮನಿಯ ಆರ್ಥಿಕತೆ ಕುಸಿಯತೊಡಗಿತು. ಕೊನೆಗೆ 1989ರಲ್ಲಿ ಪೂರ್ವ ಜರ್ಮನ್ನರು ಕಮ್ಯುನಿಸ್ಟ್ ಆಡಳಿತದ ವಿರುದ್ಧ ದಂಗೆಯೆದ್ದು ಬರ್ಲಿನ್ ಗೋಡೆಯನ್ನು ಕೆಡವಿ ಹಾಕಿದರು.

ಪೂರ್ವ-ಪಶ್ಚಿಮ ಜರ್ಮನಿಗಳು ಒಂದಾದವು. ನಂತರದ ದಿನಗಳಲ್ಲಿ ಅಲ್ಲಿನ ಜನರು ಪ್ರಜಾ ಪ್ರಭುತ್ವವನ್ನು ಒಪ್ಪಿಕೊಂಡು ಚುನಾವಣೆಗಳನ್ನು ನಡೆಸಿ, ಸರಕಾರಗಳನ್ನು ರಚಿಸಿದರು. ಪ್ರಸ್ತುತ 4.75 ಟ್ರಿಲಿಯನ್ ಡಾಲರ್‌ನಷ್ಟು ಸಂಪತ್ತನ್ನು ಹೊಂದಿರುವ ‘ಸಂಯುಕ್ತ ಜರ್ಮನಿ’ಯು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ ಎನಿಸಿಕೊಂಡಿದೆ.

ಕಮ್ಯುನಿಸ್ಟ್ ಯುಗೋಸ್ಲಾವಿಯಾವು ವಿಘಟನೆಗೊಂಡು ಸರ್ಬಿಯಾ, ಬೋಸ್ನಿಯಾ, ಕ್ರೊವೇಶಿಯಾ, ಉತ್ತರ ಮೆಸಿಡೋನಿಯಾ ಮತ್ತು ಸ್ಲೊವೇನಿಯಾ ಎಂಬ ಸ್ವತಂತ್ರ ಪ್ರಜಾಪ್ರಭುತ್ವ ದೇಶಗಳು ರೂಪು ಗೊಂಡವು. ಕಮ್ಯುನಿಸ್ಟ್ ಝೆಕೋಸ್ಲೋವಾಕಿಯಾ ಕೂಡ ವಿಘಟನೆಗೊಂಡು ‘ಝೆಕ್ ರಿಪಬ್ಲಿಕ್’ ಮತ್ತು ‘ಸ್ಲೋವಾಕಿಯಾ’ ಎಂಬ 2 ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರಗಳಾದವು.

ಒಟ್ಟಾರೆ ಹೇಳುವುದಾದರೆ, ಈ ಎಲ್ಲಾ ದೇಶಗಳ ವೈಫಲ್ಯಕ್ಕೆ ಅಲ್ಲಿನ ಸೋಷಿಯಲಿಸ್ಟ್ ಆರ್ಥಿಕತೆಯೇ ಕಾರಣ. ಏಕೆಂದರೆ, ಸೋಷಿಯಲಿಸಂ ಹೆಸರಿನಲ್ಲಿ ನಡೆದಿದ್ದು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ನಿರಂಕುಶ ಆಡಳಿತ. ಹೀಗಾಗಿ 80ರ ದಶಕದ ಉತ್ತರಾರ್ಧ ಮತ್ತು 90ರ ದಶಕದ ಪೂರ್ವಾರ್ಧದಲ್ಲಿ ಈ ದೇಶಗಳ ಜನರು ಕಮ್ಯುನಿಸಂ ಮತ್ತು ಸೋಷಿಯಲಿಸಂಗಳ ವಿರುದ್ಧ ದಂಗೆಯೆದ್ದು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡರು.

ಇಂದು ಸೋಷಿಯಲಿಸಂ ಅಥವಾ ಸಮಾಜವಾದದ ಮಾದರಿ ಇಡೀ ಜಗತ್ತಿನಲ್ಲಿ ವಿಫಲವಾಗಿದೆ, ಕ್ಯಾಪಿಟಲಿಸಂ ಸಫಲವಾಗಿದೆ. ಕಮ್ಯುನಿಸಂ ಸೋತಿದೆ, ಪ್ರಜಾಪ್ರಭುತ್ವವಾದ ಗೆದ್ದಿದೆ. ಚೀನಾವು ಆಡಳಿತಾತ್ಮಕವಾಗಿ ಕಮ್ಯುನಿಸ್ಟ್ ದೇಶವಾಗಿ ಉಳಿದರೂ ಕ್ಯಾಪಿಟಲಿಸಂ ಅನ್ನು ಅಪ್ಪಿಕೊಂಡಿದೆ. ಇನ್ನು ಉತ್ತರ ಕೊರಿಯಾದ ಸೋಷಿಯಲಿಸಂ ಕಥೆ ಅಂದರೆ, ಅಲ್ಲಿನ ಜನರ ವ್ಯಥೆ, ಅಷ್ಟೇ!

ಕ್ಯೂಬಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗೆ ‘ಸಮಾಜವಾದ’ವು ತನ್ನ ಪ್ರಸ್ತುತತೆಯನ್ನೇ ಕಳೆದು ಕೊಂಡಿರುವಾಗ, ಭಾರತವು ‘ಸಮಾಜವಾದಿ’ ದೇಶವಾಗಿ ಮುಂದುವರಿಯುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗಾಗಿ ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಪದವನ್ನು ತೆಗೆದು ಹಾಕುವುದೇ ಹೆಚ್ಚು ಸೂಕ್ತವೆನಿಸುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)