G Prathap Kodancha Column: ಮುಕ್ತ ವ್ಯಾಪಾರ ಒಪ್ಪಂದದ ಸುತ್ತಮುತ್ತ
ಆಂಟೋನಿಯೋ ಕೋಸ್ಟಾ ಅವರಂತೂ, ಮಾತಿನ ನಡುವೆ ಕೋಟಿನ ಒಳಜೇಬಿನಿಂದ ತಮ್ಮ OCI (ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ತೋರಿಸಿ, ‘ನಾನು ನಿಮ್ಮವನು, ನಿಮ್ಮ ಮನೆ ಮಗನು!’ ಎಂದಿದ್ದು ಮನಮುಟ್ಟುವಂತಿತ್ತು. ಭಾರತ ಮತ್ತು ಐರೋಪ್ಯ ಒಕ್ಕೂಟ ಮಾಡಿ ಕೊಂಡ ವಾಣಿಜ್ಯ-ವ್ಯವಹಾರಗಳ ಒಪ್ಪಂದಕ್ಕೆ ಉರ್ಸುಲಾ ಲೆಯೆನ್ ಅವರು ‘ಮದರ್ ಆಫ್ ಆಲ್ ಡೀಲ್ಸ್’ ಎಂಬ ಹಣೆಪಟ್ಟಿ ಲಗತ್ತಿಸಿದ್ದು ಭಾರತೀಯರನ್ನು ಹಿರಿಹಿರಿ ಹಿಗ್ಗಿಸಿದೆ.
-
ಭೂರಾಜಕೀಯ
ಜಿ.ಪ್ರತಾಪ್ ಕೊಡಂಚ
ಭಾರತದ 77ನೇ ಗಣರಾಜ್ಯೋತ್ಸವವು ಇತ್ತೀಚೆಗಷ್ಟೇ ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿಯೇ ನಡೆಯಿತು. ಈ ವರ್ಷದ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳಾಗಿದ್ದವರು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ಲೆಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋ ನಿಯೋ ಕೋಸ್ಟಾ.
27 ಐರೋಪ್ಯ ರಾಷ್ಟ್ರಗಳ ಒಕ್ಕೂಟದ ಚುಕ್ಕಾಣಿ ಹಿಡಿದಿರುವ ಈ ದಿಗ್ಗಜರಿಬ್ಬರೂ ದೆಹಲಿಯ ಕರ್ತವ್ಯ ಪಥದಲ್ಲಿನ ಪಥಸಂಚಲನೆಗೆ ಸಾಕ್ಷಿಯಾಗಿದ್ದು, ವಿಶ್ವದೆಲ್ಲೆಡೆಯ ನಾಯಕರುಗಳ ಕಣ್ಣು ಭಾರತದತ್ತ ಹೊರಳುವಂತೆ ಮಾಡಿತ್ತು. ಈ ಪೈಕಿ ಉರ್ಸುಲಾ ಲೆಯೆನ್ ಅವರು ಈ ಸಂಭ್ರಮಾ ಚರಣೆಗೆ ಸಾಕ್ಷಿಯಾಗುವುದಕ್ಕೆ ಕೆಲ ದಿನಗಳ ಮುಂಚೆಯಷ್ಟೇ, “ಭಾರತದೊಂದಿಗೆ ಮಹತ್ತರವಾದ ವಾಣಿಜ್ಯ ಒಪ್ಪಂದಕ್ಕೆ ಅಣಿಯಾಗುತ್ತಿದ್ದೇವೆ" ಎಂಬ ಉದ್ಘೋಷವನ್ನು ಮಾಡಿದ್ದರು.
ಅದರಲ್ಲೂ, ‘ನೀ ನನಗಿದ್ದರೆ ನಾ ನಿನಗೆ, ಇಲ್ಲದೆಹೋದರೆ ಹೊರು ತೆರಿಗೆ!’ ಎಂಬ ಧೋರಣೆಯಲ್ಲಿ ಕಾಲ್ಕೆರೆದು ಮುನ್ನುಗ್ಗುತ್ತಿರುವ ಅಮೆರಿಕ ಅಧ್ಯಕ್ಷರ ‘ಟ್ರಂಪಾಯಣ’ವು ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಹೊತ್ತಿನಲ್ಲಿ, ಐರೋಪ್ಯ ಒಕ್ಕೂಟ ಮತ್ತು ಭಾರತ ಪರಸ್ಪರ ಕೈಕುಲುಕಿ ಕುದುರಿಸಿ ಕೊಳ್ಳುವ ಒಪ್ಪಂದ ಮತ್ತು ಸಂಬಂಧದ ಹುರುಳನ್ನು ಅರಿಯುವ ಕುತೂಹಲವು ಜಗದಗಲ ವಿದ್ದುದು ಸಹಜವೇ!
ರಾಜಾತಿಥ್ಯಕ್ಕೆ ಹೆಸರುವಾಸಿಯಾದ ಭಾರತದಲ್ಲಿ ಗಣ್ಯಾತಿಗಣ್ಯರು ಸರಕಾರದ ಅತಿಥಿಗಳಾಗಿ, ಅದರಲ್ಲೂ ಇಂಥ ಮಹತ್ತರ ಸಮಯದಲ್ಲಿ ಬಂದರೆ ಕೇಳಬೇಕೇ? ಅತಿಥಿಗಳು ಮತ್ತು ಅವರೊಂದಿಗೆ ಬಂದಿಳಿದ ಮಿಕ್ಕ ನಾಯಕರುಗಳು ಭಾರತೀಯರ ಹೃತ್ಪೂರ್ವಕ ಆತಿಥ್ಯಕ್ಕೆ ಮನ ಸೋತು ತಮ್ಮ ಅನುಭವಕ್ಕೆ ಸಂಭ್ರಮಿಸಿ ಭಾರತವನ್ನು ಕೊಂಡಾಡಿದರು.
ಇದನ್ನೂ ಓದಿ: G Prathap Kodancha Column: ಮೈಕಾಸುರರು ಮತ್ತವರ ಪಡೆಗಳ ವಿಶ್ಲೇಷಕ ದಾಳಿಯನ್ನು ತಪ್ಪಿಸಿಕೊಳ್ಳುವುದೆಂತು ?
ಆಂಟೋನಿಯೋ ಕೋಸ್ಟಾ ಅವರಂತೂ, ಮಾತಿನ ನಡುವೆ ಕೋಟಿನ ಒಳಜೇಬಿನಿಂದ ತಮ್ಮ OCI (ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ತೋರಿಸಿ, ‘ನಾನು ನಿಮ್ಮವನು, ನಿಮ್ಮ ಮನೆ ಮಗನು!’ ಎಂದಿದ್ದು ಮನಮುಟ್ಟುವಂತಿತ್ತು. ಭಾರತ ಮತ್ತು ಐರೋಪ್ಯ ಒಕ್ಕೂಟ ಮಾಡಿ ಕೊಂಡ ವಾಣಿಜ್ಯ-ವ್ಯವಹಾರಗಳ ಒಪ್ಪಂದಕ್ಕೆ ಉರ್ಸುಲಾ ಲೆಯೆನ್ ಅವರು ‘ಮದರ್ ಆಫ್ ಆಲ್ ಡೀಲ್ಸ್’ ಎಂಬ ಹಣೆಪಟ್ಟಿ ಲಗತ್ತಿಸಿದ್ದು ಭಾರತೀಯರನ್ನು ಹಿರಿಹಿರಿ ಹಿಗ್ಗಿಸಿದೆ. ಜತೆಗೆ ಈ ಬೆಳವಣಿಗೆ ಯು ಭಾರತದಲ್ಲಿರುವ ‘ಒಂದಿಷ್ಟು ಮಂದಿ’ ಸೇರಿದಂತೆ ವಿಶ್ವದೆಲ್ಲೆಡೆಗೆ ಹಲವರಿಗೆ ಸಾಕಷ್ಟು ‘ಉರಿಸಿದೆ’ ಎಂಬುದನ್ನು ಅಲ್ಲಗಳೆಯುವಂತಿಲ್ಲ!
ಏನಿದು ಉರ್ಸುಲಾ ಅವರು ಕುದುರಿಸಿದ ‘ಮದರ್ ಆಫ್ ಆಲ್ ಡೀಲ್ಸ್’? ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೇಳಿದಂತೆ, ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ವಾಣಿಜ್ಯ ಒಪ್ಪಂದವಿದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ವ್ಯವಹಾರಕ್ಕಷ್ಟೇ ಸೀಮಿತವಲ್ಲದ, ಭಾರತ ಮತ್ತು ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ನಡುವಿನ, ವಿಜ್ಞಾನ ಮತ್ತು ತಂತ್ರಜ್ಞಾನ ಸಹಿತ ಹಲವು ವಲಯ ಗಳಲ್ಲಿನ ಉತ್ಪಾದನೆ ಮತ್ತು ವಿತರಣೆಯ ಸಹಭಾಗಿತ್ವವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯ ಲಿರುವ ಚಾರಿತ್ರಿಕ ಒಪ್ಪಂದವಿದು.
ಉರ್ಸುಲಾ ಲೆಯೆನ್ ಅವರ ಮಾತಿನಂತೆ, ಜಗತ್ತಿನ 2ನೇ ಮತ್ತು 4ನೇ ಆರ್ಥಿಕತೆಗಳು ಜತೆಯಾಗಿ ಸೃಷ್ಟಿಸಿದ ಚರಿತ್ರೆಯಿದು. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಸುಂಕ ಸಮರದ ಮೂಲಕ ಜಾಗತೀ ಕರಣದ ಸಂಕವನ್ನು ಮುರಿಯುತ್ತಿರುವ ಈ ಹೊತ್ತಿನಲ್ಲೂ, ಜತೆಯಾಗಿ ನಾವೇನು ಸಾಧಿಸಬಲ್ಲೆವು ಎಂಬುದನ್ನು ಭಾರತ ಮತ್ತು ಐರೋಪ್ಯ ಒಕ್ಕೂಟವು ‘ಮುಕ್ತ ವ್ಯಾಪಾರ ಒಪ್ಪಂದ’ದ (ಎಫ್ʼಟಿಎ) ಮೂಲಕ ಜಗತ್ತಿಗೇ ತೋರಿಸಿದ ಹೆಮ್ಮೆಯು ಅವರ ಮಾತಿನಲ್ಲಿ ಕಾಣಿಸುತ್ತಿತ್ತು. ಇದನ್ನು ಅವರು, ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಕಣ್ಣು-ಕಿವಿಗಳಿಗೆ ಕುಕ್ಕುವಂತೆ ಹೇಳಿದ್ದಾರೆ, ಯಾರ‍್ಯಾರಿಗೆ ತಲುಪಿಸಬೇಕೋ ಅವರಿಗೆಲ್ಲಾ ನಿಶ್ಚಿತ ಸಂದೇಶವನ್ನು ತಲುಪಿಸಿದ್ದಾರೆ!
ಒಟ್ಟಾರೆಯಾಗಿ 200 ಕೋಟಿ ಜನರ ಮಾರುಕಟ್ಟೆಯನ್ನು ಸೃಷ್ಟಿಸುವುದರ ಜತೆಗೆ, ಭಾರತದಿಂದ ರಫ್ತಾ ಗುತ್ತಿರುವ ಶೇ.99ರಷ್ಟು ಉತ್ಪನ್ನಗಳಿಗೆ ಐರೋಪ್ಯ ರಾಷ್ಟ್ರಗಳಲ್ಲಿ ಆದ್ಯತೆಯ ಮಾರುಕಟ್ಟೆಯ ಅವಕಾಶವನ್ನು ಕಲ್ಪಿಸುವ ಗುರಿಯನ್ನು ಈ ಒಪ್ಪಂದವು ಹೊಂದಿದೆ ಎನ್ನಬೇಕು.
ಒಪ್ಪಂದದ ಆಶಯಗಳು ಮುಂದಿನ ಹಲವು ವರ್ಷಗಳಲ್ಲಿ ಸಂಪೂರ್ಣ ಕೈಗೂಡಿದರೆ, ಜಾಗತಿಕ ವ್ಯವಹಾರದ ಸುಮಾರು ಮೂರನೇ ಒಂದರಷ್ಟು ಭಾಗವು ಈ ಮೂಲಕವೇ ನೆರವೇರಲಿದೆ ಎಂಬುದು ಈ ಒಪ್ಪಂದದ ಅಗಾಧತೆಯನ್ನು ತೋರಿಸುತ್ತದೆ. ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರಗಳನ್ನು ಹೊರತು ಪಡಿಸಿ ಹಲವು ಔದ್ಯಮಿಕ ರಂಗಗಳಲ್ಲಿ ಇದು ವಿಪುಲ ಅವಕಾಶಗಳನ್ನು ಒದಗಿಸಲಿದೆ.
ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರಗಳಲ್ಲಿ ಮುಕ್ತ ಮಾರುಕಟ್ಟೆಗೆ ಅವಕಾಶ ತೆರೆಯಲು ಬಯಸದ ಭಾರತದ ನಿಲುವೇ, ಅಮೆರಿಕದ ಜತೆಗಿನ ಒಪ್ಪಂದಕ್ಕೆ ತೊಡಕಾಗಿರುವುದು ಎಂಬ ಗುಸುಗುಸು ಜಾಗತಿಕ ಮಾರುಕಟ್ಟೆಯಲ್ಲಿ ಗುನುಗುನಿಸುತ್ತಿರುವಾಗಲೇ, ಐರೋಪ್ಯ ಒಕ್ಕೂಟದ ಜತೆಗೂ ಭಾರತ ಇಂಥದೇ ನಿಲುವಿಗೆ ಬದ್ಧವಾಗಿ ನಿಂತಿದೆ. ಭಾರತದ ಈ ಬಿಗಿನಿಲುವೇನಿದೆ ಇದು ಜಗತ್ತಿಗೆ ಈಗ ಭಾರತದ ಅಗತ್ಯತೆಯನ್ನು ಮನದಟ್ಟು ಮಾಡಿಕೊಟ್ಟಿರುವುದಂತೂ ನಿಸ್ಸಂಶಯ. ಈ ಒಪ್ಪಂದ ದಿಂದ ಯಾರಿಗೆಷ್ಟು ಲಾಭ ಎಂಬ ಹಲವು ವಿಶ್ಲೇಷ ಣೆಗಳು ಆರ್ಥಿಕ ತಜ್ಞರುಗಳಿಂದ ಈಗಾಗಲೇ ಬಂದಿವೆ. ಈ ಒಪ್ಪಂದ ಕಾರ್ಯಗತವಾದರೆ ಯುರೋಪ್‌ಗಿಂತ ಭಾರತಕ್ಕೇ ಹೆಚ್ಚು ಲಾಭವೆಂಬುದು ನಿಸ್ಸಂಶಯ.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಒಪ್ಪಂದದ ಮಾತುಕತೆ ಆರಂಭವಾಗಿದ್ದು ಸರಿ ಸುಮಾರು 2007ರಲ್ಲಿ. ಹೆಜ್ಜೆಗೊಂದು ನೀತಿ-ನಿಯಮ ಮತ್ತು ಅದರ ಕಟ್ಟುನಿಟ್ಟಿನ ಪಾಲಿಗೆ ಹೆಸರಾಗಿರುವಂಥದ್ದು ಐರೋಪ್ಯ ಒಕ್ಕೂಟ. ಇದು ಭಾರತದ ಜತೆಗಿನ ಮಾತುಕತೆಯಿಂದ ಹಿಂದೆ ಸರಿದದ್ದು ‘ನೀತಿ-ನಿಯಮದ ನೆರಳಿನಲ್ಲೇ ಹೆಜ್ಜೆಹಾಕಬೇಕು’ ಎಂಬ ಬದ್ಧತೆಯ ನೆಲೆಯಲ್ಲಿ. ಮಾತು ಕತೆ ಹಳಿ ತಪ್ಪುವುದಕ್ಕೆ ಅಂದು ಜಾಗತೀಕರಣದ ಬಲುದೊಡ್ಡ ಪ್ರವರ್ತಕರಾಗಿದ್ದ ಅಮೆರಿಕ ಮತ್ತು ಚೀನಾದ ಪ್ರಭಾವವೇ ಕಾರಣ ಎಂಬ ಗ್ರಹಿಕೆಯನ್ನು ಅಲ್ಲಗಳೆಯುವುದು ಕಷ್ಟ. ಅದಕ್ಕೆಂದೇ, 2007 ರಲ್ಲೇ ಬೀಜಾಂಕುರಗೊಂಡಿದ್ದ ಈ ಒಪ್ಪಂದವು ಬರೋಬ್ಬರಿ 18 ವರ್ಷದ ನಂತರ ಫಲ ನೀಡಿದ್ದು!
ಅದೂ ಕೂಡ ನೆರವೇರಿದ್ದು ಟ್ರಂಪಣ್ಣನ ರಂಪಾಟದ ಒತ್ತಡದಿಂದಾಗಿಯೇ! 18 ವರ್ಷ ತುಂಬಿರುವ ಇದು ತೆವಳುವ ಮಗುವಲ್ಲ, ತಾರುಣ್ಯ ತುಳುಕುತ್ತಿರುವುದರಿಂದ ಇದು ದೌಡಾಯಿಸುವುದೇ ಅಂದರೆ ಅದೂ ಇಲ್ಲ. ಏಕೆಂದರೆ, ಸದರಿ ಒಪ್ಪಂದಕ್ಕೀಗ ಉಭಯ ಪಕ್ಷಸ್ಥರೂ ಒಪ್ಪಿಕೊಂಡಿದ್ದಾರೆ, ಅಷ್ಟೇ. ಇದಕ್ಕೆ ಭಾರತದ ಸಂಸತ್ತಿನಲ್ಲಿ ‘ಸಹಮತ’ ವ್ಯಕ್ತವಾಗಬೇಕಿದ್ದರೂ ಪ್ರಸ್ತುತ ಅದಕ್ಕೇನೂ ತೊಂದರೆ ಯಾಗಲಿಕ್ಕಿಲ್ಲ.
ಆದರೆ ಇದು ಐರೋಪ್ಯ ಒಕ್ಕೂಟದ ಸಂಸತ್ತಿನಲ್ಲಿ ವಿಮರ್ಶೆಗೊಂಡು ಕಾನೂನಾಗಿ ಹೊರ ಹೊಮ್ಮ ಬೇಕು. ತದನಂತರ, ಒಕ್ಕೂಟದ 27 ಸದಸ್ಯ ರಾಷ್ಟ್ರಗಳೂ ತಂತಮ್ಮ ಸಂಸತ್ತಿನಲ್ಲಿ ಸಮ್ಮತಿಸಿ, ಅಂಗೀ ಕರಿಸಬೇಕು. ಹಾಗಾಗಿ, ಉರ್ಸುಲಾ ಲೆಯೆನ್ ಅವರ ಉದ್ಘೋಷ ಕಾರ್ಯಗತಗೊಳ್ಳುವುದು ಸುಲಭ ಸಾಧ್ಯವಲ್ಲ.
ಇವೆಲ್ಲವೂ ಸರಾಗವಾಗಿ ನಡೆದರೆ, ಕನಿಷ್ಠ ಆರೆಂಟು ತಿಂಗಳಾದರೂ ಬೇಕು. ಹಾಗಾಗಿಯೇ ಇಲ್ಲಿ ಮೂಡುವ ಪ್ರಶ್ನೆ ಉರ್ಸುಲಾ ಲೆಯೆನ್ ಅವರು ಜಗತ್ತಿನ ‘ಕೆಲ’ ರಾಷ್ಟ್ರಗಳಿಗೆ ‘ಉರಿಸಿದರಾ’?! ಐರೋಪ್ಯ ಒಕ್ಕೂಟದ ಬಹುಪಾಲು ರಾಷ್ಟ್ರಗಳು ಕಳೆದೊಂದು ದಶಕದಿಂದಲೂ ಕ್ಷೀಣಿಸುತ್ತಿರುವ ಮಾನವ ಸಂಪನ್ಮೂಲದ ಸಮಸ್ಯೆಯನ್ನು ಎದುರಿಸುತ್ತಿವೆ. ಅದಕ್ಕಾಗಿಯೇ ವಲಸೆ ನೀತಿಯ ಮೊರೆ ಹೋದ ಯುರೋಪಿನ ಕೆಲವು ದೇಶಗಳು, ಸಾಂಸ್ಕೃತಿಕ ಸಂಘರ್ಷಗಳ ಸಹಿತ ಭಯೋತ್ಪಾದನೆಯ ಅಟ್ಟಹಾಸವನ್ನು ಎದುರಿಸುತ್ತಿವೆ.
ಜಗತ್ತಿನ 2ನೇ ದೊಡ್ಡ ಆರ್ಥಿಕತೆಯಾಗಿರುವ 27 ದೇಶಗಳ ಒಕ್ಕೂಟದಲ್ಲಿ ಪ್ರಸ್ತುತ ಪ್ರಬಲ ಮತ್ತು ಶಕ್ತ ಎನಿಸಿಕೊಂಡಿರುವ ರಾಷ್ಟ್ರಗಳೆಂದರೆ ಜರ್ಮನಿ, ಫ್ರಾನ್ಸ್ ಮತ್ತು ಇಟಲಿ. ಆಟೋಮೊಬೈಲ್ ಸೇರಿದಂತೆ ಕೈಗಾರಿಕಾ ಕ್ಷೇತ್ರದಲ್ಲಿ ಹಿರಿಯಣ್ಣನಂತೆ ಬೀಗುತ್ತಿದ್ದ ಜರ್ಮನಿಯ ಪ್ರಾಬಲ್ಯವು ಚೀನಾದ ತೊಡಗಿಸಿಕೊಳ್ಳುವಿಕೆಯಿಂದಾಗಿ ನಲುಗಿದೆ.
ಫ್ರಾನ್ಸ್ ಸರಕಾರವು ಸಾಲದ ಸುಳಿಯಲ್ಲಿ ನಲುಗಿ, ರಾಜಕೀಯ ಸ್ಥಿರತೆಯನ್ನು ಕಂಡುಕೊಳ್ಳಲು ಹೆಣಗುತ್ತಿದೆ. ಇವೆಲ್ಲವನ್ನೂ ಮೀರಿ, ಇನ್ನೇನು 4ನೇ ವರ್ಷವನ್ನು ಪೂರ್ಣಗೊಳಿಸುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಉಕ್ರೇನ್‌ನ ಬೆನ್ನಿಗೆ ನಿಂತು ಐರೋಪ್ಯ ಒಕ್ಕೂಟವು ಬಳಲಿ ಬೆಂಡಾಗಿದೆ.
ಒಕ್ಕೂಟಕ್ಕೆ ಬೆನ್ನೆಲುಬಾಗಿದ್ದ ಜಾಗತಿಕ ಸಂಸ್ಥೆಗಳ ಪ್ರಧಾನಪೋಷಕ ಅಮೆರಿಕವು ತನ್ನ ಪೋಷಾಕು ಬದಲಿಸಿ, ಇಷ್ಟು ವರ್ಷಗಳ ಪೋಷಣೆಗೆ ಪ್ರತಿಫಲದ ಬೆನ್ನುಹತ್ತಿದೆ. ಈ ಎಲ್ಲ ಸನ್ನಿವೇಶಗಳ ಹಿಂದೆ ನೋಡಿದರೆ, ಒಪ್ಪಂದದ ತುರ್ತು ಅವಶ್ಯಕತೆ ಇದ್ದದ್ದು ಐರೋಪ್ಯ ಒಕ್ಕೂಟಕ್ಕೆ ಎನಿಸುತ್ತದೆ.
ಲಾಭ-ನಷ್ಟಕ್ಕೂ ಮೀರಿ ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕವು ದೊಣ್ಣೆ ಹಿಡಿದು ಒಮ್ಮೊಮ್ಮೆ ಒಂದೊಂದು ಕಡೆ ಬೀಸುತ್ತಿರುವಾಗ, ಭಾರತದತ್ತ ಮುಖಮಾಡುತ್ತಿರುವ ಹಲವು ರಾಷ್ಟ್ರಗಳ ನಡೆಯು ಭಾರತದ ಮೇಲಿನ ಜಗತ್ತಿನ ವಿಶ್ವಾಸಾರ್ಹತೆಯ ದ್ಯೋತಕ ಎನ್ನಲಡ್ಡಿಯಿಲ್ಲ.
ಇದು ಹೆಮ್ಮೆಯ ಸಂಗತಿಯೂ ಹೌದು. ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ, ಓಮಾನ್ ಸೇರಿದಂತೆ ಹಲವು ರಾಷ್ಟ್ರಗಳು ಇತ್ತೀಚೆಗೆ ಭಾರತದೊಂದಿಗೆ ಮಾಡಿಕೊಂಡ ವಾಣಿಜ್ಯ ಒಪ್ಪಂದಗಳು ಕ್ಷಿಪ್ರಗತಿಯಲ್ಲಿ ತಾರ್ಕಿಕ ಅಂತ್ಯ ಕಾಣಲು, ದೊಡ್ಡಣ್ಣನ ಬೀಸುವ ದೊಣ್ಣೆಯ ರಭಸವೇ ಒಂದು ಕಾರಣ ಎಂಬುದು ಅತಿಶಯೋಕ್ತಿಯೇನಲ್ಲ.
ಈ ನಿಟ್ಟಿನಲ್ಲಿ ಭಾರತ ಸರಕಾರದ ನಾಯಕತ್ವ, ವಿದೇಶಾಂಗ ಇಲಾಖೆ, ವಾಣಿಜ್ಯ-ವ್ಯವಹಾರ ಸಚಿವರು ಮತ್ತು ಅಧಿಕಾರಿಗಳ ಶ್ರಮ ಹಾಗೂ ಚಾಕಚಕ್ಯತೆ ಅಭಿನಂದನೀಯ. ಒಂದು ಪ್ರಬಲ ಶಕ್ತಿಯಾಗಿ ತಲೆಯೆತ್ತಿ ನಿಲ್ಲಲು ಭಾರತಕ್ಕೂ ಇದೊಂದು ಅವಕಾಶವಾಗಿದೆ ಹಾಗೂ ಭಾರತವು ಅದನ್ನು ಈ ತನಕ ಸಮರ್ಥವಾಗಿ ನಿರ್ವಹಿಸಿದೆ ಕೂಡ. ಹಾಗಂತ ಮೈಮರೆಯದೆ, ಒಪ್ಪಂದಗಳು ಸುಸೂತ್ರವಾಗಿ ಕಾರ್ಯಗತಗೊಳ್ಳಬಲ್ಲ ವಾತಾವರಣವನ್ನು ನಿರ್ಮಿಸಿ ಬೆಳೆಸುವ ಮಹತ್ತರ ಜವಾ ಬ್ದಾರಿಯನ್ನೂ ನಮ್ಮ ಸರಕಾರ ಹೊರಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ಅವರವರ ಒತ್ತಡಕ್ಕೆ ಬಿದ್ದು ನಮ್ಮಲ್ಲಿಗೆ ಬಂದವರಿಗೆ ಆಸರೆಯಾಗಲು ಹೋಗಿ, ‘ಅಮೆರಿಕ, ಚೀನಾ ಎರಡಕ್ಕೂ ಸೆಡ್ಡು ಹೊಡೆಯಬಲ್ಲ ನಾಯಕ ಭಾರತವೇ’ ಎಂಬ ಸಮಯ ಸಾಧಕರ ಹೊಗಳಿಕೆಗೆ ಎದೆಯುಬ್ಬಿಸಿ ನಮ್ಮ ಸರಕಾರ ಮೈಮರೆಯಬಾರದು. ಸಂಚಿನ ಒಳಸುಳಿಗೆ ಸಿಲುಕದೇ, ಉರಿಸಲು ಹೊರಟವರ ಪಾಲಿನ ಉರುವಲಾಗದೇ, ಜಾಗತಿಕ ನಾಯಕತ್ವದ ಹೊಸ ಸ್ಪರ್ಧೆಯಲ್ಲಿ ಭಾರತವು ವಿಜಯಿಯಾಗಬೇಕಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)