ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

G N Bhat Column: ಕಲಾವಿದರಿಗೆ ಪ್ರೇಕ್ಷಕರ ಅಭಿರುಚಿಯನ್ನು ನಿರ್ಮಿಸುವ ಹೊಣೆಗಾರಿಕೆ ಇದೆ

ಸದಭಿರುಚಿಯಂತೂ ಕೇಳುವುದೇ ಬೇಡ, ಹೇಳಹೆಸರಿಲ್ಲದೆ ಹೋಗಿದ್ದವು. ಇದೊಂದು ಬಗೆಯ ಅಂತರಂಗವ್ಯಾಧಿ, ಬೌದ್ಧಿಕ ದಾರಿದ್ರ್ಯ. ಏತಕ್ಕೆ ಇಷ್ಟು ಹೇಳಬೇಕಾಯಿತೆಂದರೆ ಯಕ್ಷಗಾನ ರಂಗ ಭೂಮಿಗೂ, ಕೆಲವು ಕಲಾವಿದರಿಗೂ, ಹಲವು ಮಂದಿ ಪ್ರೇಕ್ಷಕರಿಗೂ ಅಂದಿನ ಸೋಫಿಸ್ಟ್‌ ಗಳಂತೆಯೇ ಸರಿಯಾದ ತರ್ಕವನ್ನು, ವಾದವನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೇ ಇಲ್ಲ ವಾಗಿದೆ ಎಂದು ತಿಳಿಸುವುದಕ್ಕಾಗಿ. ಈ ಅಂತರಂಗವ್ಯಾಧಿ, ಬೌದ್ಧಿಕ ದಾರಿದ್ರ್ಯ, ಸಂಸ್ಕಾರಹೀನತೆ ಇವರಿಗೂ ಅಡರಿದೆ ಎಂದು ಅತ್ಯಂತ ಬೇಸರ ದರದಿಂದ ನಿವೇದಿಸುವುದಕ್ಕಾಗಿ.

ಕಲಾವಿದರಿಗೆ ಪ್ರೇಕ್ಷಕರ ಅಭಿರುಚಿಯನ್ನು ನಿರ್ಮಿಸುವ ಹೊಣೆಗಾರಿಕೆ ಇದೆ

-

Profile
Ashok Nayak Apr 4, 2026 11:34 AM

ಯಕ್ಷಮಂಟಪ

ಗ.ನಾ.ಭಟ್ಟ

ಖ್ಯಾತ ಅರ್ಥಧಾರಿ ಮತ್ತು ವೇಷಧಾರಿ ಉಜಿರೆ ಅಶೋಕ ಭಟ್ಟರು ಪ್ರೇಕ್ಷಕರ ಅಸಭ್ಯ ವರ್ತನೆ ಯನ್ನು ಖಂಡಿಸಿ ಮುಖ್ಯವಾಗಿ ಶಿಳ್ಳೆ ಹೊಡೆದಿದ್ದು ಮತ್ತು ಚಪ್ಪಾಳೆ ತಟ್ಟಿದ್ದನ್ನು ವಿರೋಧಿಸಿ ಕಲಾಧರ್ಮಕ್ಕೆ ಅಪಚಾರವೆಸಗಬಾರದೆಂದು ತಿಳಿ ಹೇಳಿದ್ದನ್ನೇ ಲಕ್ಷದಲ್ಲಿಟ್ಟು ಕೊಂಡು ಹೀನಾತಿಹೀನ ಸಂಸ್ಕಾರದ ಕೆಲವರು ಅತ್ಯಂತ ದುರಾಗ್ರಹದಿಂದ ಕಲೆಗೆ ಸಂಬಂಧ ಪಡದ ಅವರ ವೈಯಕ್ತಿಕ ವಿಚಾರವನ್ನು ಎತ್ತಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಿಂದಿಸುತ್ತಿರುವುದು ಯಾವ ಸಭ್ಯ ಸಮಾಜವೂ ಜೀರ್ಣಿಸಿಕೊಳ್ಳಲಾಗದೆ, ತಲೆ ತಗ್ಗಿಸುವ ಸಂಗತಿಯಾಗಿದೆ.

ಇಂತಹವರಿಗೆ ಏನನ್ನಬೇಕು ಅಂತಲೇ ತಿಳಿಯುವುದಿಲ್ಲ. ಆದರೆ ಒಂದಂತೂ ಸತ್ಯ, ಯಕ್ಷ ಗಾನ ಹಾಗೂ ತಾಳಮದ್ದಳೆಯ ಪ್ರೇಕ್ಷಕ ಇಂದು ಸಂಪೂರ್ಣ ಹದಗೆಟ್ಟು ಹೋಗಿದ್ದಾನೆ. ಅದಕ್ಕೊಂದು ಉದಾಹರಣೆ ಕೊಟ್ಟು ತಿಳಿಸಿದರೆ ಸ್ವಲ್ಪವಾದರೂ ಅರ್ಥವಾದೀತು!

ಸುಮಾರು 2500 ವರ್ಷಗಳ ಹಿಂದೆ ಗ್ರೀಸಿನ ಅಥೆನ್ಸಲ್ಲಿ ಸಾಕ್ರೇಟಿಸ್ ಎಂಬ ತತ್ತ್ವ ವಿಚಾರಿ ಯೊಬ್ಬ ಬದುಕಿದ್ದ. ಆತ ಸೋಫಿಸ್ಟ್ ಎಂದು ಕರೆಯಲ್ಪಡುವ ಜ್ಞಾನಾಭಾಸ ಕೃತಕ ವಿದ್ವಾಂಸರಿಗೆ ಸಿಂಹಸ್ವಪ್ನವಾಗಿದ್ದ. ಸೋಫಿಸ್ಟುಗಳ ವಾಗಾಡಂಬರದ ನೀರ್ಗುಳ್ಳೆಗಳನ್ನು ಆತ ತನ್ನ ಹರಿತವಾದ, ವಿಮರ್ಶನೆಯ ಕೋಲಿನ ಮೊನೆಯಿಂದ ಚುಚ್ಚಿ ಒಡೆದು, ಅವರ ಅಜ್ಞಾನವನ್ನು ಬಯಲಿಗೆಳೆಯುತ್ತಿದ್ದ. ಇದನ್ನು ಸಹಿಸದ ಅವರು ಸಾಕ್ರೇಟಿಸ್ ಒಬ್ಬ ದೈವ ದೂಷಕನೆಂದು ನ್ಯಾಯಸ್ಥಾನದಲ್ಲಿ ದೂರು ನೀಡಿ, ಅವನಿಗೆ ಮರಣದಂಡನೆ ವಿಧಿಸುವಂತೆ ಮಾಡಿದರು.

ಆ ವಿಚಾರಣೆಯಲ್ಲಿ ಸಾಕ್ರೇಟಿಸ್ ನೀಡಿದ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಅಂದಿನ ಆ ನ್ಯಾಯಲಯಕ್ಕೂ, ಪೂರ್ವಾಗ್ರಹಪೀಡಿತರಾಗಿದ್ದ ಅಜ್ಞಾನ ಧುರಂಧರರಿಗೂ ಇರಲಿಲ್ಲ, ಇದರ ಫಲವಾಗಿ ಜ್ಞಾನಿಯೊಬ್ಬನ ಕೊಲೆಯಾಗಿ ಹೋಯಿತು.

ಇದನ್ನೂ ಓದಿ: G N Bhat Column: ಬನ್ನಂಜೆ: ಶ್ರವಣ, ಮನನ ಮತ್ತು ಧ್ಯಾನದ ಮೂರ್ತರೂಪ

ಇದಕ್ಕೆ ಕಾರಣ ಅಂದಿನ ಸೋಫಿಸ್ಟರ ಪ್ರಾಬಲ್ಯದಿಂದ ಅಥೆನ್ಸಿನ ಜನರ ಬುದ್ಧಿಯೇ ವಕ್ರ ವಾಗಿ ಹೋಗಿತ್ತು. ಕುತರ್ಕ, ವಿತರ್ಕಗಳಿಂದ, ವಿತ್ತಂಡವಾದಗಳಿಂದ, ಅರ್ಥಹೀನವಾದ ಶಬ್ದಜಾಲಗಳಿಂದ ಅಥೆನ್ಸಿನ ಜನಕ್ಕೆ ಸರಿಯಾದ ತರ್ಕವನ್ನು, ವಾದವನ್ನು, ಅರ್ಥ ಮಾಡಿ ಕೊಳ್ಳುವ ಶಕ್ತಿಯೇ ಇರಲಿಲ್ಲವಾಗಿತ್ತು. ಅರ್ಥವತ್ತಾದ, ಭಾವೋನ್ನತಿಕಾರಕವಾದ ವಾಕ್ಯ ಗಳನ್ನು ಗ್ರಹಿಸುವ ಅಭ್ಯಾಸವೇ ತಪ್ಪಿ ಹೋಗಿತ್ತು.

ಸದಭಿರುಚಿಯಂತೂ ಕೇಳುವುದೇ ಬೇಡ, ಹೇಳ ಹೆಸರಿಲ್ಲದೆ ಹೋಗಿದ್ದವು. ಇದೊಂದು ಬಗೆಯ ಅಂತರಂಗವ್ಯಾಧಿ, ಬೌದ್ಧಿಕ ದಾರಿದ್ರ್ಯ. ಏತಕ್ಕೆ ಇಷ್ಟು ಹೇಳಬೇಕಾಯಿತೆಂದರೆ ಯಕ್ಷಗಾನ ರಂಗಭೂಮಿಗೂ, ಕೆಲವು ಕಲಾವಿದರಿಗೂ, ಹಲವು ಮಂದಿ ಪ್ರೇಕ್ಷಕರಿಗೂ ಅಂದಿನ ಸೋಫಿಸ್ಟ್‌ಗಳಂತೆಯೇ ಸರಿಯಾದ ತರ್ಕವನ್ನು, ವಾದವನ್ನು ಅರ್ಥ ಮಾಡಿ ಕೊಳ್ಳುವ ಶಕ್ತಿಯೇ ಇಲ್ಲವಾಗಿದೆ ಎಂದು ತಿಳಿಸುವುದಕ್ಕಾಗಿ. ಈ ಅಂತರಂಗವ್ಯಾಧಿ, ಬೌದ್ಧಿಕ ದಾರಿದ್ರ್ಯ, ಸಂಸ್ಕಾರಹೀನತೆ ಇವರಿಗೂ ಅಡರಿದೆ ಎಂದು ಅತ್ಯಂತ ಬೇಸರ ದರದಿಂದ ನಿವೇದಿಸುವುದಕ್ಕಾಗಿ. ಇಲ್ಲದೇ ಇದ್ದರೆ ಒಬ್ಬ ಕಲಾವಿದ ರಂಗಭೂಮಿಗೆ ಸಂಬಂಧಪಟ್ಟಂತೆ ಸ್ವಲ್ಪ ಒರಟಾಗಿದ್ದರೂ ಸತ್ಯವನ್ನೇ ಹೇಳಿದರೆ ಇಷ್ಟು ಬಲವದ್ವಿರೋಧ ಬರಬೇಕೆ? ಮತ್ತು ತಮ್ಮ ಅಜ್ಞಾನವನ್ನೇ ಸಮರ್ಥಿಸಿಕೊಳ್ಳುವ ತಿಳಿಗೇಡಿತನವನ್ನು ಮೆರೆಯಬೇಕೆ? ವಾಸ್ತವ ವಾಗಿ ಕಲೆಯೊಂದು ಕಲಾವಿದ, ಮೇಳದ ಯಜಮಾನ, ನಿರ್ದೇಶಕ, ಸಂಘಟಕ ಮತ್ತು ಪ್ರೇಕ್ಷಕ ಎಂಬ ಐದು ನೆಲೆಯಲ್ಲಿ ಸಮಾವೇಶಗೊಂಡು ಪ್ರದರ್ಶನಗೊಳ್ಳಬೇಕಿದೆ.

ಪ್ರಕೃತ ಪ್ರೇಕ್ಷಕನ ನೆಲೆಯಲ್ಲಿ ಯೋಚಿಸುವುದಾದರೆ ಕಲೆಯ ತಿರುಳನ್ನು ಸರಿಯಾಗಿ ಹಿಡಿದು ಸವಿಯುವುದಕ್ಕೂ ಕೂಡಾ ಅವನಿಗೆ ಒಂದಿಷ್ಟು ಯೋಗ್ಯತೆ ಅಂತ ಬೇಕಾಗುತ್ತದೆ. ಕಲೆಯನ್ನು ನೋಡುವ ಅವನ ಹೃದಯ ಸಂಸ್ಕಾರಗೊಂಡಿರಬೇಕಾಗುತ್ತದೆ, ತನ್ನ ಅಂತಃ ಕರಣವನ್ನು ಪಳಗಿಸಿಕೊಂಡಿರಬೇಕಾಗುತ್ತದೆ.

ಅವನ ನೇತ್ರಪಾಟವ, ಶ್ರೋತ್ರಪಾಟವಗಳಲ್ಲದೆ ಅವನ ಮನೋಬುದ್ಧಿಗಳೂ ಚುರುಕಾಗಿರ ಬೇಕಾಗುತ್ತವೆ. ಅವನಿಗೆ ಏನೇನು ಅರ್ಹತೆಯಿರಬೇಕು ಎಂದು ನಾಟ್ಯಾಚಾರ್ಯ ಭರತ ಮುನಿ ಒಂದು ಪಟ್ಟಿಯನ್ನೇ ಮಾಡಿದ್ದಾನೆ.

  1. ಇಂದ್ರಿಯ ಜಾಗೃತಿ. 2. ತೀಕ್ಷ್ಣಗ್ರಹಣಶಕ್ತಿ. 3. ಊಹೆ. 4. ಅಪೋಹದಲ್ಲಿ ನೈಪುಣ್ಯ. (ಅಪೋಹ ಅಂದರೆ- ನ್ಯೂನತೆ) 5.ದೋಷರಾಹಿತ್ಯ (ಅಂದರೆ ಯಾವುದೇ ಪೂರ್ವಾಗ್ರಹ, ಸಂದೇಹ, ಅತ್ಯಭಿಮಾನಕ್ಕೆ ಒಳಗಾಗದಿರುವುದು) 6.ಆಸಕ್ತಿ. (ನಿರಾಸಕ್ತಿ ಅಥವಾ ಉಡಾ- ಮನಸ್ಸಿನಿಂದ ಬರದಿರುವುದು. ಕಲೆಯ ಮೇಲೆ ತೀವ್ರತರವಾದ ಆಸಕ್ತಿ ಮತ್ತು ಗೌರವ ತಳೆದೇ ಬರಬೇಕು) ಪಾತ್ರದ 7. ಸುಖ. 8. ದುಃಖ. 9. ದೈನ್ಯಗಳಲ್ಲಿ ಪಾಲ್ಗೊಳ್ಳುವುದು. ಇದನ್ನೇ ತಾದಾತ್ಮ್ಯ ಅಥವಾ ತನ್ಮಯತೆ ಎಂದು ಕರೆಯುವುದು-‘ನವೈವೇತೇ ಗುಣಾಃ ಸರ್ವೇ ಏಕಸ್ಮಿನ್ ಪ್ರೇಕ್ಷಕೇ ಸ್ಮತಾಃ’ ಎಂದು ಹೇಳಲ್ಪಟ್ಟಿದೆ.

ಕಲಾವಿದ ತನ್ನ ಪ್ರತಿಭೆ, ನೃತ್ಯ, ಅಭಿನಯ ಮತ್ತು ವಾಕ್ಚಾತುರ್ಯದ ಬಲದಿಂದ ಒಂದು ಹೊಸಪ್ರಪಂಚವನ್ನೇ ನಿರ್ಮಿಸಬಲ್ಲ. ಹಾಗೆಯೇ ಅರ್ಥಧಾರಿಯೂ ಕೂಡಾ ಮಾತಿನ ಬಲದಿಂದ ಒಂದು ಪುರಾಣದ ಒಳಬಗೆಯನ್ನು ಹೊರಗೆಡಹಬಲ್ಲ. ಅಲ್ಲಿಯ ಸೂಕ್ಷ್ಮ ಸಂಗತಿಯನ್ನು ಅನಾವರಣಗೊಳಿಸಬಲ್ಲ. ಇವನ್ನೆಲ್ಲ ಅನುಭವಿಸಿ ಭಾವಿಸಬಲ್ಲ ಪ್ರೇಕ್ಷಕರು ಇಂದು ಎಷ್ಟು ಜನ ದೊರೆತಾರು? ನೂರಕ್ಕೆ ಹತ್ತು ಮಂದಿಯೂ ದೊರಕಲಾರರು.

ಆದರೆ ಹಾಗೆಂದು ನಾವು ನಿರಾಶಾರಾಗಬಾರದು. ಮುಳುಗುತ್ತಿರುವ ಸೂರ್ಯ ಒಮ್ಮೆ ಕೇಳಿದ ನಂತೆ. ‘ಇನ್ನು ನನ್ನ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ?’ ಎಂದು. ಲೋಕ ಚಿತ್ರದಂತೆ ಮೂಕವಿಸ್ಮಿತವಾಗಿ ಕುಳಿತುಕೊಂಡಿತು. ಆಗ ಅಲ್ಲಿಯೇ ಮಿನುಗುತ್ತಿದ್ದ ಮಣ್ಣಿನ ಹಣತೆ ಯೊಂದು-‘ನನ್ನ ಕೈಲಾದುದನ್ನು ನಾನು ಮಾಡುತ್ತೇನೆ’ ಎಂದು ಉಸುರಿತಂತೆ. ಆ ಮಣ್ಣಿನ ಹಣತೆಯಂತೆ ನಾವು ಕಲಾವಿದರೂ ಕೂಡಾ ರಂಗಭೂಮಿಯ ಒಳಿತಿಗಾಗಿ, ಅದರ ಸೌಂದರ್ಯಕ್ಕಾಗಿ, ಅದರ ಹೊಸ ಹೊಸ ಸಾಧ್ಯತೆಗಾಗಿ, ನವೋನವೀನ ಆವಿಷ್ಕಾರಕ್ಕಾಗಿ ನಿರಂತರ ಶ್ರಮಿಸಬೇಕಿದೆ.

ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳುವ ಪ್ರೇಕ್ಷಕ ಇಂದು ಬೇಕಿದೆ. ಆದರೆ ನಮ್ಮ ದುರ್ದೈವಕ್ಕೆ ನಾವು ಅಂತಹ ಪ್ರೇಕ್ಷಕರನ್ನು ಸಿದ್ಧಪಡಿಸಿಲ್ಲ. ಯಕ್ಷಗಾನ ಮತ್ತು ತಾಳಮದ್ದಳೆಗೆ ಬರುವ ಪ್ರೇಕ್ಷಕರು ಮಹಾ ಪೂರ್ವಾಗ್ರಹಪೀಡಿತರು. ಯಕ್ಷಗಾನ ಪ್ರದರ್ಶನಕ್ಕೆ ಬರುವಾಗಲೇ ಆತ ಒಬ್ಬ ಕಲಾವಿದನನ್ನು ತನ್ನ ತಲೆಯೊಳಗೆ ತುಂಬಿಕೊಂಡೇ ಬರುತ್ತಾನೆ. ಅವನಂತೆ ಇವನೂ ಹೇಳಬೇಕು ಅಥವಾ ಅಭಿಯಿಸಬೇಕು; ಕುಣಿಯಬೇಕು ಎಂದು ಭಾವಿಸುತ್ತಾನೆ.

ಅವನ ತಲೆಯೊಳಗೆ ನೂರಾರು Model ಗಳು ಇರುತ್ತವೆ. ಶೇಣಿ, ಸಾಮಗ, ತೆಕ್ಕಟ್ಟೆ, ಗೋವಿಂದ ಭಟ್ಟರು, ಸುಂದರರಾಯರು, ಜೋಶಿ, ಶಂಭು ಹೆಗಡೆ, ಮಹಾಬಲ ಹೆಗಡೆ, ಪಿ.ವಿ.ಹಾಸ್ಯಗಾರ, ಚಿಟ್ಟಾಣಿ-ಹೀಗೆ ಅವರ ತಲೆಯೊಳಗೆ ಇವರೆಲ್ಲ ಕುಣಿಯುತ್ತಲೇ ಇರುತ್ತಾರೆ.

ತಾಳಮದ್ದಳೆಯಂತೂ ಅದೊಂದು ಕಲಾಪ್ರಕಾರವಾಗಿರದೆ ದಿಕ್ಕುಗೆಟ್ಟು ಹೋಗಿದೆ. ವ್ಯಕ್ತಿ ಪ್ರತಿಷ್ಠೆಯ ನೆಲೆಯಲ್ಲಿ ಅದೊಂದು Team-Work ಎಂಬುದನ್ನು ಹಲವರು ಮರೆತಿದ್ದಾರೆ. ಒಬ್ಬನು ಪುರಾಣವನ್ನು ಆಧರಿಸಿ ಹೇಳಿದರೆ ಇನ್ನೊಬ್ಬನು ದೈನಂದಿನ ವಿಚಾರಗಳನ್ನೇ ಆಡುತ್ತಿರುತ್ತಾನೆ.

ಒಬ್ಬನು ಸಂಕ್ಷಿಪ್ತವಾಗಿ ಅರ್ಥ ಹೇಳಿದರೆ, ಇನ್ನೊಬ್ಬನು ವಿಸ್ತರವಾಗಿ ಹೇಳುತ್ತಾನೆ. ಒಬ್ಬನು ಭಾವನೆಗೆ ಒತ್ತು ಕೊಟ್ಟರೆ, ಇನ್ನೊಬ್ಬನು ವಿಚಾರಕ್ಕೆ, ಕುತರ್ಕಕ್ಕೆ, ದುರ್ವಾದಕ್ಕೆ ಆದ್ಯತೆ ಕೊಡುತ್ತಾನೆ. ಕೆಲವರಿಗಂತೂ ಸಮಕಾಲೀನ ವಿಚಾರಗಳನ್ನೂ, ರಾಜಕೀಯ ವಿಷಯ ಗಳನ್ನೂ ತುರುಕುವುದರಲ್ಲಿ ಎಲ್ಲಿಲ್ಲದ ಉತ್ಸಾಹ.

ಪಕ್ಷ, ಪಕ್ಷಾಂತರ ಎಂಬ ಶಬ್ದಗಳು ಬಾರದೆ ಅವರ ಬಾಯಿಂದ ಅರ್ಥ ಹೊರಡುವುದೇ ಇಲ್ಲ. ಮತ್ತೆ ಕೆಲವರಿಗೆ ತರಕಾರಿ ವೈವಿಧ್ಯತೆಗಳನ್ನು ಹೇಳದೇ ಇದ್ದರೆ, ಸಮಕಾಲೀನ ಭಕ್ಷ ಭೋಜ್ಯಗಳ ಹೆಸರು ಹೇಳದೇ ಇದ್ದರೆ ಅವರು ಆ ದಿನ ನಿದ್ದೆ ಮಾಡುವುದಿಲ್ಲ.

ಇನ್ನು ಕೆಲವರಿದ್ದಾರೆ- ಶಬ್ದಗಳ ಮೆರವಣಿಗೆ ಮಾಡುವವರು. ಪರ್ಯಾಯ ಶಬ್ದಗಳನ್ನೇ ಹೇಳುತ್ತಾ ಅದೇ ಅರ್ಥಗಾರಿಕೆ ಎಂದು ಬಿಂಬಿಸುವವರು. ಕೊನೆಗೆ ಅವರು ಏನು ಹೇಳಿದರು ಅಂತ ಲೆಕ್ಕ ಹಾಕಿದರೆ, ‘ಒಂದು ಕೊಳಗದಷ್ಟು ಅರಳು ಹಿಟ್ಟಿನಲ್ಲಿ ಜೀವಪೋಷಕ ಸಾಮಗ್ರಿ ಒಂದು ಸಾಸಿವೆ ಕಾಳಿನಷ್ಟು ಅಡಗಿಕೊಂಡಿರುತ್ತದೆ’ ಅನ್ನುವಂತೆ ಅವರ ಅರ್ಥಗಾರಿಕೆ ಯಲ್ಲಿ ತಿರುಳು ಅನ್ನುವುದು ಅಷ್ಟೇ ಇರುತ್ತದೆ.

ಒಟ್ಟಿನಲ್ಲಿ ಪಾತ್ರವೊಂದರ ಭಾವ, ವಿಚಾರ, ರಸ, ಧ್ವನಿ, ಔಚಿತ್ಯ, ಪಾತ್ರಶಿಲ್ಪ, ಪೌರಾಣಿಕ ಹಿನ್ನೆಲೆ, ಧ್ವನಿಭಾರ, ಶ್ರುತಿ ಯಾವುದೂ ಇಣುಕುವುದಿಲ್ಲ. ಇಂಥಹಾದ್ದು ತಾಮದ್ದಳೆಯ ಕಥೆಯಾದರೆ ಯಕ್ಷಗಾನ ಬಯಲಾಟದ ಕಥೆಯೇ ಬೇರೆ. ಬಯಲಾಟಗಳಲ್ಲಿ ಕೊಂಡದಕುಳಿ, ಯಾಜಿ, ಜಲವಳ್ಳಿ, ಶಶಿಕಾಂತ ಶೆಟ್ಟಿ, ಯಲಗುಪ್ಪ, ನೀಲ್ಕೋಡು, ಸುಣ್ಣಂಬಳ, ರಂಗ ಭಟ್ಟ, ಪೆರ್ಮುದೆ, ಉಬರಡ್ಕ, ತೀರ್ಥಹಳ್ಳಿಯಂತಹ ಕೆಲವೇ ಕೆಲವು ಬೆರಳೆಣಿಕೆಯ ಕಲಾವಿದ ರನ್ನು ಬಿಟ್ಟರೆ ಇಂದಿನ ಅನೇಕ ಕಲಾವಿದರಿಗೆ ಪಾತ್ರಸ್ವರೂಪ, ಪಾತ್ರಸ್ವಭಾವ, ಪಾತ್ರದ ನಿರ್ವಹಣೆ, ಪುರಾಣಪ್ರe ಸುತರಾಂ ಇಲ್ಲ.

ಇದ್ದ ಶಕ್ತಿಯನ್ನೆಲ್ಲ ಉಪಯೋಗಿಸಿ ಕುಣಿಯುವ ಇವರಲ್ಲಿ ವೈವಿಧ್ಯತೆ ಅನ್ನುವುದು ಇಲ್ಲವೇ ಇಲ್ಲ. ಗಂಟೆಗಟ್ಲೆ ಕುಣಿಯುವುದು, ಸರ್ಕಸ್ ಮಾಡುವುದೇ ಯಕ್ಷಗಾನ ಎಂದು ಅವರು ಭಾವಿಸಿದಂತಿದೆ. ಹಾಸ್ಯಪಾತ್ರಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು, ಅದು ಅಪಹಾಸ್ಯ. ವಿಕೃತಿಗಳಿಗೆ ತಿರುಗಿ ಬಹಳ ವರ್ಷಗಳೇ ಆಗಿವೆ.

ಇಂತಹವರಿಂದ ಏನು ತಾನೇ ನಿರೀಕ್ಷಿಸಲು ಸಾಧ್ಯ?ಮತ್ತೆ ಪ್ರೇಕ್ಷಕರ ವಿಚಾರಕ್ಕೇ ಬರುವು ದಾದರೆ, ಕಳೆದ 2ರಂದು ವಿಶ್ವೇಶ್ವರ ಭಟ್ಟರು ತಮ್ಮ ಅಂಕಣ ಬರಹ ನೂರೆಂಟು ವಿಶ್ವದಲ್ಲಿ, ಕೊನೆಯಲ್ಲಿ- ‘ಪ್ರೇಕ್ಷಕರನ್ನು ಪ್ರೀತಿಯಿಂದಲೇ ಸುಸಂಸ್ಕೃತ ಕೇಳುಗ-ನೋಡುಗರನ್ನಾಗಿ ಪರಿವರ್ತಿಸುವ ಜವಾಬ್ದಾರಿ ಕೂಡಾ ಕಲಾವಿದರ ಮೇಲಿದೆ.

ವೇದಿಕೆಯ ಮೇಲೆ ನಡೆಯುತ್ತಿರುವುದು ಕೇವಲ ಪ್ರದರ್ಶನವಲ್ಲ, ಅದು ಕಲಾವಿದನ ವರ್ಷಗಳ ತಪಸ್ಸು. ಆ ತಪಸ್ಸಿಗೆ ಭಂಗ ತರದಂತೆ ನಮ್ಮ ಮೆಚ್ಚುಗೆ ಇರಬೇಕು ಎಂದು ಪ್ರೇಕ್ಷಕನೂ ಅರಿತುಕೊಳ್ಳಬೇಕು. ಪ್ರೇಕ್ಷಕರು ಕಲಾವಿದನನ್ನು ಆರ್ಥಿಕವಾಗಿ ಮತ್ತು ಪ್ರೋತ್ಸಾಹದ ಮೂಲಕ ಬೆಳೆಸಿದರೆ ಕಲಾವಿದನು ತನ್ನ ಕಲೆಯ ಮೂಲಕ ಪ್ರೇಕ್ಷಕರನ್ನು ವೈಚಾರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆಸಬೇಕು.

ಕಲೆ ಮತ್ತು ಪ್ರೇಕ್ಷಕರ ನಡುವಿನ ಈ ಪರ‍್ಪರ ಗೌರವವೇ ಕಲಾಸಂಸ್ಕೃತಿಯನ್ನು ಜೀವಂತ ವಾಗಿರಿಸುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ’ ಎಂದು ಹೇಳಿದಂತೆ ಜತೆಗೆ ಕಲಾವಿದರು ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಯ ದೃಷ್ಟಿಯಿಂದಲೂ ಅರಿತು ನಡೆದುಕೊಳ್ಳಬೇಕಿದೆ.

ಕಾವ್ಯತತ್ತ ವನ್ನು ಅರಿತುಕೊಳ್ಳುವುದಕ್ಕೆ ಎಂತಹ ಓದುಗ ಬೇಕು ಅನ್ನುವುದಕ್ಕೆ ವಿಜ್ಜಿಕಾ ಎಂಬ ಕವಯಿತ್ರಿ ಒಂದು ಮಾತನ್ನು ಹೇಳುತ್ತಾಳೆ. ಅದೇ ಮಾತನ್ನು ನಾವು ಕಲಾತತ್ತ ಕ್ಕೂ ಅನ್ವಯಿಸಿಕೊಳ್ಳಬಹುದು. ರಸಭಾವಗಳನ್ನು ಗ್ರಹಿಸುವದರಲ್ಲಿ ಕಾವ್ಯವಾಚಕನಿಗೂ, ಯಕ್ಷಗಾನ, ಭರತನಾಟ್ಯ, ನಾಟಕದಂತಹ ಕಲಾಪ್ರಕಾರವನ್ನು ನೋಡುವವನಿಗೂ ಯಾವ ಭೇದವೂ ಇಲ್ಲದಿರುವುದರಿಂದ ಅವಳ ಮಾತನ್ನು ಇಲ್ಲಿ ಉಲ್ಲೇಖಿಸಿದ್ದೇನೆ.

ಕವೇರಭಿಪ್ರಾಯಮಶಬ್ದಗೋಚರಂ ಸುರಂತಮಾರ್ದ್ರೇಷು ಪದೇಷು ಕೇವಲಂ |

ವದದ್ಭಿರಂಗೈಃ ಕೃತರೋಮವಿಕ್ರಯೈಃ ಜನಸ್ಯ ತೂಷ್ಣೀಂ ಭವತೋಯಮಂಜಲಿಃ ||

ಪ್ರೇಕ್ಷಕ ಅಥವಾ ವಾಚಕ ತನ್ನ ಸಂತುಷ್ಟಿಯನ್ನು ವ್ಯಕ್ತಪಡಿಸಲು ಹಲವು ವಿಧಗಳನ್ನು ಅನುಸರಿಸಬಹುದು.

ಒಬ್ಬನು ‘ಭಲಾ, ಭೇಷ್, ಆಹಾ!’ ಎಂದು ಉದ್ಗರಿಸಬಹುದು, ಕೆಲವರು ಕುಣಿದು ಕುಪ್ಪಳಿಸ ಬಹುದು, ಮತ್ತೆ ಕೆಲವರು ತಮ್ಮ ಹೃದಯದಲ್ಲೇ ಮೆಚ್ಚಿಕೆಯನ್ನು ಅಡಗಿಸಿಕೊಳ್ಳ ಬಹುದು, ಮತ್ತೆ ಒಬ್ಬಿಬ್ಬರು ತಮ್ಮ ಸಂತೋಷವನ್ನು ಅಪ್ರಯತ್ನವಾಗಿ, ಮೈಯಲ್ಲಿ ಹುರಿಗೊಂಡ ಪುಳಕದಿಂದ, ಅರಳಿದ ಕಣ್ಣುಗಳಿಂದ ಅದನ್ನು ಮೌನವಾಗಿ ವ್ಯಕ್ತಪಡಿಸ ಬಹುದು. ಆದರೆ ಕವಿ ಅಥವಾ ಕಲಾವಿದ ಬಯಸುವುದು ಈ ಕೊನೆಯ ವರ್ಗದ ಪ್ರೇಕ್ಷಕನನ್ನು ಅಥವಾ ವಾಚಕನನ್ನು’.

ಇಂತಹ ಒಬ್ಬ ಪ್ರೇಕ್ಷಕನನ್ನು ನಮ್ಮ ಯಕ್ಷಗಾನ ಕ್ಷೇತ್ರ ಹೊಂದಲು ಸಾಧ್ಯವೇ ಎಂದು ಕೇಳಿದರೆ ಸರ್ವಥಾ ಸಾಧ್ಯವಿಲ್ಲ ಎಂದು ಹೇಳಬಹುದು. ಅದಕ್ಕೆ ಮುಖ್ಯ ಕಾರಣ-ಯಕ್ಷಗಾ ನಕ್ಕೆ ತನ್ನದೇ ಆದ ಸಭಾಂಗಣವಿಲ್ಲ. ಅದು ನಡೆಯುವುದು ಬಯಲಲ್ಲಿ. ಅದಕ್ಕಾಗಿಯೇ ಅದು ಬಯಲಾಟ.

ತಾಳಮದ್ದಳೆ ಮತ್ತು ಯಕ್ಷಗಾನ ಬಯಲಾಟಕ್ಕೆ ಮೈಸೂರು, ಮುಂಬಯಿ, ಬೆಂಗಳೂರು, ನ್ಯೂದೆಹಲಿಯಲ್ಲಿರುವಂತೆಯೇ ಸುಸಜ್ಜಿತ ರಂಗಮಂದಿರಗಳಿಲ್ಲ. ಭರತನಾಟ್ಯ, ಸಂಗೀತ, ನಾಟಕದಂತಹ ಕಲಾಪ್ರಕಾರ ಪ್ರದರ್ಶನಗೊಳ್ಳುವಂತಹ ರಂಗಮಂದಿರವನ್ನು ನೋಡಿ ದವರಿಗೆ ಇದರ ಸಾಧಕ-ಬಾಧಕದ ಅರಿವಿರುತ್ತದೆ.

ರಂಗಮಂದಿರಲ್ಲಿ ಪ್ರದರ್ಶನಗೊಳುವುದಕ್ಕೂ ಬಯಲಲ್ಲಿ ಪ್ರದರ್ಶನಗೊಳುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಬಯಲಲ್ಲಿ ಸ್ವಾಚ್ಛಂದ್ಯವಿದ್ದರೆ ರಂಗಂದಿರಗಳಲ್ಲಿ ನಿಯಂತ್ರಣವಿರುತ್ತದೆ. ಪ್ರೇಕಕ್ಷಕನ ಶಿಳ್ಳೆ, ದೀರ್ಘವಾದ ಕರತಾಡನ, ಗಲಭೆಗಳಿಗೆ ಇದೇ ಕಾರಣ.

ಕೇವಲ ಅರ್ಧ ವರ್ಷಕ್ಕೇ ಸಾವಿರಾರು ಪ್ರದರ್ಶನಗೊಳ್ಳುವ ಯಕ್ಷಗಾನಕ್ಕೆ ಇದೂತನಕ ಅಂತಹ ಒಂದು ರಂಗಮಂದಿರ ಇಲ್ಲದಿರುವುದು ರಂಗಚಿಂತಕನಿಗೆ, ಯಕ್ಷಗಾನಪ್ರೇಮಿಗೆ, ಅಭಿಮಾನಿಗೆ ಸಹಿಸಲಸಾಧ್ಯವಾದ ವ್ಯಥೆಯಾಗಿದೆ.

ಕೇವಲ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಈ ಎರಡು ಜಿಲ್ಲೆಗಳಲ್ಲಿ ಮಾತ್ರ ಪ್ರದರ್ಶನ ಗೊಳ್ಳುವ ಈ ಕಲೆಗೆ ಆಯಾ ಜಿಲ್ಲೆಯ ಪ್ರಮುಖ ತಾಲ್ಲೂಕುಗಳಲ್ಲಿ ಒಂದೊಂದು ರಂಗ ಮಂದಿರ ಸ್ಥಾಪಿಸಿವುದರ ಬಗ್ಗೆ ಯಾರಾದರೂ ಗಮನ ಹರಿಸಿದ್ದಾರೆಯೇ? ಯಕ್ಷಗಾನದ ಕಾಮಧೇನು, ಕಲ್ಪವೃಕ್ಷ ಎಂದು ಹೇಳಿಸಿಕೊಳ್ಳುವ ಶ್ರೀಮಂತರಾಗಲೀ, ಯಕ್ಷಗಾನ ಕಲಾವಿದ ರಾಗಲೀ, ಯಕ್ಷಗಾನ ಪತ್ರಿಕೆ ನಡೆಸುವವರಾಗಲೀ, ರಂಗಚಿಂತಕರಾಗಲೀ, ಯಕ್ಷಗಾನ ಅಕಾಡೆಮಿಯವರಾಗಲೀ ಇದರ ಬಗ್ಗೆ ಯೋಚಿಸಿದ್ದಾರೆಯೇ? ನಾಟಕಕ್ಕಾಗಿ ಹೆಗ್ಗೋಡಿನ ನೀನಾಸಂ, ಬೆಂಗಳೂರಿನ ರಂಗಶಂಕರ, ಮೈಸೂರಿನ ನಟನ, ರಂಗಾಯಣ, ಸುರುಚಿ ರಂಗಮನೆ, ವೀಣೆಶೇಷಣ್ಣ ಭವನ, ನಾದಬ್ರಹ್ಮಸಂಗೀತ ಸಭೆ, ಇತ್ತೀಚೆಗೆ ನಿರ್ಮಾಣಗೊಂಡ ಜೆಸಿಎಸಿ ಮೊದಲಾದವು ಸುಸಂಸ್ಕೃತ, ಸದಭಿರುಚಿಯ ಪ್ರೇಕ್ಷಕರನ್ನು ಸಿದ್ಧಪಡಿಸುವು ದಾದರೆ ಯಕ್ಷಗಾನ ರಂಗಭೂಮಿಗೆ ಏಕೆ ಸಾಧ್ಯವಾಗಿಲ್ಲ? ಇದಕ್ಕೆ ಉತ್ತರ ಕೊಡುವವರು ಯಾರು? ನಾವು ಹೀಗೆಯೇ ಅನೈಕಮತ್ಯದಿಂದ, ವ್ಯಕ್ತಿಪ್ರತಿಷ್ಠೆಯಿಂದ, ಅಹಂಕಾರದಿಂದ, ಸ್ವಾರ್ಥೈಕಪರರಾಗಿ ಕಾಲ ಕಳೆಯಬೇಕೆ? ಒಬ್ಬ ಕಲಾವಿದನಿಗೆ ಆದ ತೇಜೋಧೆಗೆ ಇತರ ಯಕ್ಷಗಾನ ಕಲಾವಿದರು ಸುಮ್ಮನೆ ಕೂತುಕೊಳ್ಳಬೇಕೆ? ಯಾವುಯಾ ವುದಕ್ಕೋ ಒಗ್ಗಟ್ಟಾಗಿ ಪ್ರೆಸ್ ಕಾನರೆನ್ಸ್ ಮಾಡುವ ನಾವು ಇಲ್ಲಿ ಏಕೆ ಮೌನ ವಹಿಸಿದ್ದೇವೆ? ಉತ್ತರ ಕೊಡುವಿರಾ?